Sunday, 27th October 2024

7,700 ಔಷಧ ಕಳಪೆ ಗುಣಮಟ್ಟ, 670 ಮಾದರಿ ಕಲಬೆರಕೆ

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪರೀಕ್ಷೆಗೊಳಪಡಿಸಿದ ಒಟ್ಟು 84,874 ಔಷಧಗಳ ಮಾದರಿಗಳ ಪೈಕಿ 7,700 ಮಾದರಿಗಳನ್ನು ಕಳಪೆ ಗುಣಮಟ್ಟದವು ಮತ್ತು 670 ಮಾದರಿಗಳನ್ನು ಕಲಬೆರಕೆ ಎಂದು ಘೋಷಿಸಲಾಗಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2020-21ರಲ್ಲಿ 2,652 ಔಷಧ ಮಾದರಿಗಳು ಕಳಪೆ ಗುಣಮಟ್ಟ ದವು ಹಾಗೂ 263 ಮಾದರಿಗಳು ಕಲಬೆರಕೆ ಎಂದು ಘೋಷಿಸಲಾಗಿತ್ತು. ನಕಲಿ ಮತ್ತು ಕಲಬೆರಕೆ ಎಂದು ಗುರುತಿಸಲಾದ ಔಷಧ ಮಾದರಿಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆ 2020-21ರಲ್ಲಿ 164 ಮಂದಿಯನ್ನು ಬಂಧಿಸಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ 500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ದೇಶದಲ್ಲಿ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ‘ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1940’ ಮತ್ತು ‘ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮ 1945’ರ ನಿಬಂಧನೆ ಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಕೇಂದ್ರ ‌ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

ದೇಶದಲ್ಲಿ ಔಷಧ ತಯಾರಿಕೆ, ಮಾರಾಟ ಮತ್ತು ವಿತರಣೆಯು ವಿವಿಧ ರಾಜ್ಯ ಸರ್ಕಾರಗಳು ನೇಮಿಸಿರುವ ರಾಜ್ಯ ಪರವಾನಗಿ ಪ್ರಾಧಿಕಾರಗಳ (ಎಸ್‌ಎಲ್‌ಎ) ಪರವಾನಗಿ ಮತ್ತು ತಪಾಸಣೆ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ.