ಬೆಂಗಳೂರಿನ ಜಯಮಹಲ್ ಬಳಿ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸದ ಎದುರು ಪ್ರತಿಭಟನಾ ಧರಣಿ ನಡೆಸಿದ ಎಬಿವಿಪಿ ಕಾರ್ಯಕರ್ತರು, ರಾಜ್ಯದಲ್ಲಿ ಸಾಲು ಸಾಲು ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಯುವ ಜನತೆಗೆ, ಸಾರ್ವಜನಿಕ ರಿಗೆ ರಕ್ಷಣೆ ಇಲ್ಲದಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಗೃಹ ಸಚಿವರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊಲೆಗೆಡುಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಎಬಿವಿಪಿ ಕಾರ್ಯಕರ್ತರು, ಗೃಹ ಸಚಿವರ ಮನೆಗೆ ನುಗ್ಗಿ ಬಾಗಿಲು ತೆರೆಯಲು ಯತ್ನಿಸಿದ್ದಾರೆ.
ಪೊಲೀಸರು ಹಾಗೂ ವಿದ್ಯಾರ್ಥಿ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ, ವಾಗ್ವಾದ ನಡೆದಿದೆ. ಗೃಹ ಸಚಿವ ನಿವಾಸದ ಬಳಿ ಇದ್ದ ಹೂ ಕುಂಡಗಳನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನೂರಾರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.