ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ವಿಕ್ರಾಂತ್ ರೋಣ ಸಿನಿಮಾ ರಂಗಿತರಂಗ ಥರನೇ ಇದೆ ಅಂದ್ರೆ, ಕೆಲವರು, ಅರೆ, ಅದು ನಿರ್ದೇಶಕರ ಜಾನರ್. ಅವರಿಗೆ ಈ ರೀತಿಯ ಸಿನಿಮಾ ಇಷ್ಟ ಅದಕ್ಕೇ ಮಾಡ್ತಾರೆ ಅಂತ ಸಮರ್ಥನೆ ಕೊಡ್ತಾ ಇದ್ದಾರೆ. ಆದರೆ, ಇಲ್ಲಿ ರಿಪೀಟ್ ಆಗಿರೋದು ಜಾನರ್
ಮಾತ್ರ ಅಲ್ಲ, ಇಡೀ ಕಥೆ. ಕಥೆಯ ಎಳೆ ಕೂಡಾ ಅಲ್ಲ, ಹೆಚ್ಚು ಕಮ್ಮಿ ಪೂರ್ತಿ ಬೆಳೆಯೇ ರಂಗಿತರಂಗದ್ದು.
ಇದೊಂಥರಾ, ಕಷ್ಟದಲ್ಲಿದ್ದಾಗ ಯಾರೂ ಸಪೋರ್ಟ್ ಮಾಡಲಿಲ್ಲ ಅಂದಾಗ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಿ, ಆಮೇಲೆ ಎಲ್ಲ ಸರಿ ಹೋದಾಗ, ಕೈಯಲ್ಲಿ ದುಡ್ಡಿದ್ದಾಗ, ಮತ್ತೊಮ್ಮೆ ಗ್ರ್ಯಾಂಡ್ ಆಗಿ ಮದುವೆ ಆಗ್ತಾರಲ್ಲ ಕೆಲವರು, ಹಂಗೆ.
ಆದ್ರೆ, ವಿಕ್ರಾಂತ್ ರೋಣ ಸಿನಿಮಾ ನೋಡುವಾಗ ಅದೇ ಭೂಮಿ, ಅದೇ ಬಾನು ಹಾಡು ನೆನಪಾದರೂ, 3ಡಿ ಕನ್ನಡಕ ಇರೋದ್ರಿಂದನೋ ಏನೋ ಈ ನಯನ ನೂತನ ಅಂತ ಮಾತ್ರ ಅನ್ನಿಸುತ್ತೆ.
ಅಂದಹಾಗೆ, ಕೆಲ ಸುದೀಪ್ ಅಭಿಮಾನಿಗಳು ಇದು ಸುದೀಪ್‌ಗೆ ಸರಿಯಾದ ಪಾತ್ರ ಅಲ್ಲ ಅಂತ ನಿರ್ದೇಶಕರ ಮೇಲೆ ಆರೋಪ ಮಾಡ್ತಾ ಇದ್ದಾರೆ. ಇಲ್ಲಿನ ನಾಯಕ ವಿಕ್ರಾಂತ್ ರೋಣ, ರೋಣದಿಂದ ಬಂದ ಕೆಂಪೇಗೌಡನ ಖದರ್ ಇರೋ ಪೊಲೀಸ್ ಅಲ್ಲ. ಆದರೆ, ಸುದೀಪ್ ಪಾತ್ರದಲ್ಲಿ ಎಲ್ಲ ರೀತಿಯ ಹೀರೋಯಿಸಂ ಇದೆ. ಕೇವಲ ಬೇರೆ ಹೀರೋಗಳಿಗೆ ಟಾಂಗ್ ಕೊಡೋದು, ನಾನ್ ಕೈ ಇಟ್ರೆ ಹಂಗೆ, ಕಾಲಿಟ್ರೆ ಹಿಂಗೆ ಅಂತ ಡೈಲಾಗ್ ಹೊಡೆಯೋದಷ್ಟೇ ಹೀರೋಯಿಸಂ ಅಲ್ಲ ಅನ್ನೋದನ್ನ ಅವರ ಅಭಿಮಾನಿಗಳು ಅರ್ಥ ಮಾಡ್ಕೊಬೇಕು.
ಸುದೀಪ್ ತಮ್ಮ ಅಭಿನಯ ಚೆನ್ನಾಗಿದೆ. ಆದರೆ, ಪಾತ್ರಗಳ ಜತೆ ಮಾತಾಡುವಾಗ, ಆಯಾ ಪಾತ್ರಗಳ ಹೆಸರು ಹೇಳಿ,
ಕೊನೆಯಲ್ಲಿ ಅವರೇ ಅಂತ ಸೇರಿಸುವ ಸುದೀಪ್ ಅವರ ಸಂಭಾಷಣೆ ಹೇಳೋ ಶೈಲಿ ಮಾತ್ರ, ಅವರ ಬಿಗ್ ಬಾಸ್ ನಿರೂಪಣೆಯನ್ನ ನೆನಪಿಸುತ್ತೆ.
ಲೂಸ್ ಟಾಕ್
ಮಂಗಳೂರು ಮಂಜುನಾಥ (ಕಾಲ್ಪನಿಕ ಸಂದರ್ಶನ)
ಏನ್ ಮಂಜುನಾಥ ಅವ್ರೇ, ದಿನ ಬೆಳಗಾದ್ರೆ ನಿಮ್ಮ ಮಂಗಳೂರಲ್ಲಿ ಹೇಳ್ದೆ, ಕೇಳ್ದೆ ಕೊಲೆ ಮಾಡ್ತಿದಾರಲ್ರೀ?
-ಏನ್ರೀ, ನಿಮ್ಮ ಮಾತಿನ ಅರ್ಥ? ಅಲ್ರೀ, ಕೊಲೆ ಮಾಡೋನು, ಕೊಲೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು, ಕೊಲೆ ಮಾಡಲಪ್ಪಣೆಯೇ ದೊರೆಯೇ ಅಂತ ಪರ್ಮಿಷನ್ ಕೇಳ್ಕಂಡ್ ಬರ್ತಾನಾ?
ಹಂಗಲ್ಲ, ಮಂಗಳೂರು ಇತ್ತೀಚೆಗೆ ತುಂಬಾ ಡೇಂಜರಸ್ ಆಗ್ತಾ ಇದೆ ಅಂತ
-ಹಂಗೆಲ್ಲ ಏನಿಲ್ಲ, ಎಲ್ಲಾ ಕಡೆ ಕ್ರೈಮ್ ಆಗ್ತಾ ಇದೆ. ನೀವು ಸುಮ್ನೆ ಮಂಗಳೂರು ಸರಿ ಇಲ್ಲ ಅಂತ ಎಲ್ಲರನ್ನೂ ಮಂಗ ಮಾಡ್ತಾ ಇದ್ದೀರಾ ಅಷ್ಟೇ.
ನಿಮ್ಮೂರಲ್ಲಿ ಯಾಕೆ ಇತ್ತೀಚೆಗೆ ಕಿರಿಕ್ ಆಗುವಂಥ ಘಟನೆಗಳೇ ನೀತಾ ಇವೆಯಲ್ಲ.
-ಹಂಗೇನಿಲ್ಲ, ನಾವು ಚೆನ್ನಾಗೇ ಇರ್ತೀವಿ, ನಮ್ಮೂರಲ್ಲಿ ಸಮುದ್ರ ಉಂಟಲ್ಲ, ಹಂಗಾಗಿ ಬೀಚ್ ಬೀಚ್ ಮೆ ಹಿಂಗಾಗುತ್ತೆ ಅಷ್ಟೇ..
ಸರಿ, ನಿಮ್ಮ ಪ್ರಕಾರ, ಮಂಗಳೂರಲ್ಲಿ ಯಾಕೆ ಕೋಮುವಾದ, ರಾಜಕೀಯ ದ್ವೇಷ
ಜಾಸ್ತಿ ಆಗ್ತಾ ಇದೆ ?
-ಏನೂ ಜಾಸ್ತಿ ಆಗಿಲ್ಲ, ನೀವು ನೋಡೋ ದೃಷ್ಠಿ ಕೋನ ಸರಿ ಇಲ್ಲ ಅಷ್ಟೇ, ನೀವು ಸೀ’ಲೆವೆಲ್ ನಿಂದ ಕೆಳಗೆ ನಿಂತು ನೋಡ್ತಾ ಇದ್ದೀರ, ಅದಕ್ಕೆ ನಿಮಗೆ ಎಲ್ಲಾ ಕೀಳಾಗಿ ಕಾಣ್ತಾ ಇದೆ ಅಷ್ಟೇ..
ಸರಿ, ಕೊಲೆ ಮಾಡೋದಕ್ಕೆ ಬಿಟ್ಟು, ನಿಮ್ಮ ಮಂಗಳೂರು ಬೇರೆ ಇನ್ಯಾವುದಕ್ಕೆ ಫೇಮಸ್ಸು?
-ಹಲೋ ಹಿಂಗೆ ಕೇಳಿದ್ರೆ, ನೆಕ್ಸ್ಟ್ ಮರ್ಡರ್ ನಿಂದೇ…
ನೆಟ್ ಪಿಕ್ಸ್
ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಖೇಮು ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನ ನೋಡಿ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಖೇಮುನ ಕೇಳಿದ್ರು. ಯಾರ್ದು ಕಾರು? ನಂದೇ, ಇವತ್ತು ಕೊಂಡುಕೊಂಡೆ? ಅಷ್ಟು ದುಡ್ಡು ಎಲ್ಲಿತ್ತು
೨೦೦೦ ರುಪಾಯಿ ಕೊಟ್ಟೆ ಅಷ್ಟೆ. 2000 ರುಪಾಯಿಗೆ ನಿಂಗೆ ಬೆಂಜ್ ಕಾರ್ ಯಾರ್ ಕೊಡ್ತಾರೆ. ಏನ್ ತಮಾಷೆ ಮಾಡ್ತೀಯಾ?
ಇಲ್ಲ, ಎದುರುಮನೆ ಆಂಟಿ ನಂಗೆ ಮಾರಿದ್ರು. ಖೇಮು ಅಪ್ಪ ಅಮ್ಮ ಈ ಆಂಟಿ ಕಾಲೇಜು ಹುಡುಗ ಸಿಕ್ಕ ಅಂತ ಬುಟ್ಟಿಗೆ ಹಾಕ್ಕೊ ಳ್ಳೋಕೆ ಟ್ರೈ ಮಾಡ್ತಾ ಇದ್ದಾಳೆ ಅನ್ಸುತ್ತ ಅಂತ ಗುಸುಗುಸು ಮಾತಾಡಿಕೊಳ್ಳೋಕೆ ಶುರು ಮಾಡಿದ್ರು. ನಂತರ ನಡಿ ಅಂತ ಅವನನ್ನು ಕರ್ಕೊಂಡು ಆಂಟಿ ಮನೆಗೆ ಹೋದ್ರು.
ಮೂವರೂ ಎದುರು ಮನೆ ಆಂಟಿ ಮನೆಗೆ ಹೋದಾಗ, ಆಂಟಿ ಆರಾಮಾಗಿ ಹೂವಿನ ಗಿಡಗಳಿಗೆ ನೀರು ಹಾಕ್ತಾ ಇದ್ರು. ಖೇಮು ಅಪ್ಪ ಕೇಳಿದ ನನ್ನ ಮಗನಿಗೆ ನೀವು ೨೦೦೦ ರುಪಾಯಿಗೆ ಬೆಂಜ್ ಕಾರ್ ಮಾರಿದ್ರಂತೆ. ಯಾಕಂತ ಕೇಳಬಹುದಾ?.
ಆಂಟಿ ಹೇಳಿದ್ಳು ನನ್ನ ಗಂಡ ಒಂದು ವಾರದಿಂದ ಮನೆಯಲ್ಲಿ ಇಲ್ಲ. ಇವತ್ತು ಬೆಳಿಗ್ಗೆ ಕಾಲ್ ಮಾಡಿ, ನಾನು ನನ್ನ ಸೆಕ್ರೆಟರಿ ಜತೆ ಹೋಗ್ತಾ ಇದ್ದೀನಿ. ಇನ್ಮೇಲೆ ಮನೆಗೆ ಬರಲ್ಲ.
ನಾನು ಅವಳ ಜೊತೆನೇ ಇರ್ತೀನಿ. ನಿನ್ನ ಹೆಸರಿಗೆ ಈಗಾಗಲೇ ಬೇಕಾದಷ್ಟು ದುಡ್ಡು ಇಟ್ಟಿದ್ದೇನೆ. ಮನೆಯಲ್ಲಿ ಇರೋ ಬೆಂಜ್ ಕಾರು ನನ್ನ ಹೆಸರಲ್ಲಿದೆ. ಅದನ್ನ ಮಾರಿ ಆ ದುಡ್ಡನ್ನ ನನ್ನ ಅಕೌಂಟಿಗೆ ಹಾಕು ಅಂದ. ಅದಕ್ಕೇ ಮಾರಿದೆ.
ಲೈನ್ ಮ್ಯಾನ್
ಬಿಜೆಪಿಯವರು ಜನೋತ್ಸವ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದ್ದು ಯಾಕೆ ?
-ಕೊಲೆಗಳು ಆಗ್ತಾ ಇರೋ ಸಮಯದಲ್ಲಿ, ಜನೋತ್ಸವಕ್ಕೆ ಅಂತ ತಮ್ಮ ನಾಯಕರ ಫ್ಲೆಕ್ಸ್ ಹಾಕಿದ್ರೆ ಜನ ಅದನ್ನ ಶ್ರದ್ಧಾಂಜಲಿ ಫ್ಲೆಕ್ಸ್ ಅಂತ ತಪ್ಪು ತಿಳ್ಕೊತಾರೆ ಅನ್ನೋ ಭಯಕ್ಕೆ
ಇನ್ನೊಬ್ಬರ ಸಾವಿನಿಂದ ಲಾಭ ಪಡೆಯೋ ಸ್ವಾರ್ಥಿಗಳ ಮಾತು
-ಕೊಲೆ ಒಳ್ಳೆಯದು
ಮೊನ್ನೆ ಕಾರ್ತಿಕ್ ಬ್ಯಾಟಿಂಗ್ ನೋಡಿ ಜನ ಕೇಳಿದ್ದು
-ಶುರುವಾಗಿದ್ದು ಶ್ರಾವಣ ಮಾಸನಾ, ಇಲ್ಲಾ ಕಾರ್ತಿಕ್ ಮಾಸ ನಾ?
ರಿವರ್ಸ್ ಸ್ವೀಪ್ ಹೊಡೆಯೋರ ಬಗ್ಗೆ ಜನ ಹೇಳೋ ಮಾತು
-ಇವ್ನಿಗೆ ನೆಟ್ಟಗೆ ಒಂದ್ ರನ್ ಹೊಡೆಯೂಕೂ ಬರಲ್ಲ.
ನಾವು ಸೋತಾಗ ಜನ ನಗ್ತಾರೆ. ಅದು ಜಗದ ನಿಯಮ. ಆದರೆ ಇತ್ತೀಚೆಗೆ ಯಾರೂ ನಮ್ಮನ್ನ ನೋಡಿ ನಗ್ತಾ ಇಲ್ಲ, ಅಂದ್ರೆ ನಾವು ಗೆಲ್ತಾ ಇದ್ದೀವಿ ಅಂತ ಅರ್ಥನಾ?
-ಅಲ್ಲ, ದಿನಾ ಸೋಲೋರಿಗೆ, ನಗೋರ್ಯಾರು ಅಂತ ಜನ ಸುಮ್ಮನಾಗಿದ್ದಾರೆ ಅಂತ ಅರ್ಥ.
ಕ್ಯಾಪ್ಟನ್ನೇ ವಿಕೆಟ್ ಕೀಪರ್ ಆದ್ರೆ, ಅವನ ಕೆಲಸ
-ಹಿಂದೆ ನಿಂತು ತಂಡವನ್ನು ಮುನ್ನಡೆಸೋದು
ದಡ್ಡರನ್ನ ಲೇವಡಿ ಮಾಡೋ ಉದ್ದೇಶದಿಂದ ಸರ್ ಅಂತ ಕರೆಯೋದು
-ಸರ್’ಕ್ಯಾಸ್ಟಿಕ್
ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?
-ಯಾಕಂದ್ರೆ ಅವು ‘ಬಾಲಾ’ಪರಾಧಿಗಳು
ಇಗೋ ಜಾಸ್ತಿ ಇದ್ದು ದುರಹಂಕಾರ ತೋರಿಸುವವರದು
-‘ನಾನ್’ಸೆ
ಯಾವಾಗಲೂ ನಾನು, ನಾನು ಅಂತನೇ ಮಾತಾಡೋನು
-‘ಐ’ ಸ್ಪೆಷಲಿಸ್ಟ್