Sunday, 15th December 2024

ಉಕಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು, ಆದರೆ…

ಜನಮತ

ಎಸ್.ಜಿ.ಹೆಗಡೆ

shihegg@mail.com

ನಾವು ಉತ್ತರ ಕನ್ನಡದಿಂದ ಹೊರಗೆ ಬಂದ ಗೆಳೆಯರು ಭೇಟಿಯಾದಾಗ ಅಥವಾ ಮುಂಬೈನಲ್ಲೋ ಬೆಂಗಳೂರಿನಲ್ಲಿಯೋ
ಅಥವಾ ಇನ್ಯಾವುದೇ ಪಟ್ಟಣಗಳಲ್ಲಿ ವಾಸಿಯಾಗಿರುವ ಸಂಬಂಧಿಗಳ ಮನೆಯಲ್ಲಿ ಸೇರಿದಾಗ ಚರ್ಚೆಗೆ ಬರುವ ಮುಖ್ಯ ವಿಷಯ ಗಳಲ್ಲಿ ‘ಯಾಕೆ ಮರಳಿ ಅಲ್ಲಿಗೇ ಹೋಗಿ ನೆಲೆಯಾಗಬಾರದು’ ಎಂಬುದೂ ಒಂದು.

ಈ ವಿಷಯ ಬರಲು ಕಾರಣವೆಂದರೆ ನನ್ನ ಅಥವಾ ನನ್ನ ಹತ್ತಿರದ ವಯಸ್ಸಿನವರು ವೃತ್ತಿಯಿಂದ ನಿವೃತ್ತಿ ಪಡೆದವರು ಅಥವಾ ಕಾಲಾಂತರದಲ್ಲಿ ನಿವೃತ್ತಿಯಾಗಲಿರು ವವರು. ಇನ್ನು ಮುಂದೆ ಎಲ್ಲಿ ಹೇಗೆ ಉಳಿಯಬೇಕೆಂಬ ವಿಷಯವನ್ನು ಗಂಭೀರವಾಗಿ ಯೋಚಿಸುವ ಹಂತದಲ್ಲಿರುವವರು. ಉತ್ತರ ಕನ್ನಡವೆಂದರೆ ಎಲ್ಲರ ಮನಸ್ಸಿನಲ್ಲಿಯೂ ಹಚ್ಚ ಹಸಿರಾಗಿರುವ ಪ್ರದೇಶ. ಅಲ್ಲಿನ ನೆನಪುಗಳು ಕೂಡ. ಅಲ್ಲಿಯ ಮೂಲದ ಜನ ಎಲ್ಲೇ ಇದ್ದರೂ ಅಲ್ಲಿಯ ಸಾಂಪ್ರದಾಯಿಕ ಅಡುಗೆ ಮಾಡಿ ಊಟ ಮಾಡಲಿಚ್ಛಿಸು ತ್ತಾರೆ.

ಅಲ್ಲಿ ಕೇಳಿದ ಭಜನೆಗಳನ್ನು, ಹಾಡುಗಳನ್ನು ಹೇಳುತ್ತಾರೆ. ಮಾಲೆ ಕಟ್ಟಿ ಅಲ್ಲಿ ಮುಡಿದ ಥರ ಹೂವು ಮುಡಿಯುವುದಿದೆ.ಅಲ್ಲಿನ ಮೂಲದಲ್ಲಿ ಬಳಸುವ ನಾನಾ ತರಕಾರಿ ಹಣ್ಣುಗಳು ಪ್ರಿಯವಾಗುತ್ತವೆ. ಆಯಾ ಸಮುದಾಯದವರು ಆಡುತ್ತಬಂದ ಮಾತಿನ ರೀತಿಯಂತೂ ಪರಮ ಪ್ರೀತಿಯದೇ. ‘ಕನ್ನಡದಲ್ಲಿ ಹನ್ನೆರಡು ರೀತಿ’ಎಂಬ ಹೇಳಿಕೆಯಿದೆ. ಎಲ್ಲರೂ ಅವರವರ ಮನೆಮಾತನ್ನು
ಅಭಿಮಾನದಿಂದ ಆಡಿಕೊಳ್ಳುತ್ತಾರೆ.

ಹಬ್ಬ-ಹರಿದಿನಗಳನ್ನು ಆಚರಿಸುವಾಗ ಸಾಂಪ್ರದಾಯಿಕ ರೀತಿಯಲ್ಲಿ ಅಲ್ಲಿ ಹೇಗೆ ನಡೆಸಿಕೊಂಡು ಬಂದಿದ್ದರು ಎಂದು ತಿಳಿದು ಕೊಳ್ಳುವ ಕುತೂಹಲ ಇದ್ದೇ ಇದೆ. ಅಲ್ಲಿನ ನಿಸರ್ಗದ ಸಿರಿವಂತಿಕೆ ಅನನ್ಯವಾದದ್ದು. ಹೀಗೆಲ್ಲಇರುವಾಗ ಅಲ್ಲಿಯೇ ಹೋಗಿ ಉಳಿದು ಬಿಟ್ಟರೆ ಹೇಗೆ ಎಂಬ ವಿಷಯವು ಚರ್ಚೆಗೆ ಬಂದೇ ಬರುತ್ತದೆ. ಅಂತಹ ಚರ್ಚೆಯಲ್ಲಿ ಬರುವ ವಿಚಾರಗಳು ಹಲವಾರು.
ದೂರದ ಪಟ್ಟಣದಲ್ಲಿ ಉಳಿದ ಮಕ್ಕಳು ಮತ್ತು ಮುಂದಿನ ಪೀಳಿಗೆಗೆ ಅಲ್ಲಿ ಹೋಗಿ ಉಳಿಯುವ ಆಸಕ್ತಿ ಅಥವಾ ಉಪಯುಕ್ತತೆ ಕಾಣ ಬರುವುದಿಲ್ಲ. ವ್ಯಾವಹಾರಿಕವಲ್ಲ.

ಏಕೆಂದರೆ ಅವರ ಬದುಕಿಗೆ ಬೇಕಾದ ಅಥವಾ ಅವರ ಸ್ಕಿಲ್ ಉಪಯೋ ಗವಾಗುವ ದಿಕ್ಕಿನಲ್ಲಿ ಅಲ್ಲಿ ಭವಿಷ್ಯ ಕಾಣಿಸುವುದಿಲ್ಲ. ಅಲ್ಲದೆ ಅಲ್ಲಿನ ದಿನ ನಿತ್ಯದ ಬೆಂಬಲ ವ್ಯವಸ್ಥೆಯ ಕುರಿತ ಆತಂಕವಿರುತ್ತದೆ. ಆಗಾಗ ಹಳ್ಳಿಗಳಲ್ಲಿ ವಿದ್ಯುತ್ ಕಡಿತವಾಗುವುದರ ಕುರಿತಿರಬಹುದು, ಮನೆ ಕೆಲಸದವರ, ಅಡುಗೆ ಮಾಡುವವವರ ಅಲಭ್ಯತೆಯ ಕುರಿತು, ಸಾಮಾನು ಸರಂಜಾಮಗಳ ಸುಲಭ ವ್ಯವಸ್ಥೆ ಸಾಧ್ಯವಾಗದ ಕುರಿತು ಹೀಗೆಲ್ಲ… ವಯಸ್ಸಾ ದ ಮೇಲೆ ಗಂಭೀರವಾದ ಅನಾರೋಗ್ಯಕ್ಕೆ ಸಿಲುಕಿದರೆ ಅಥವಾ ಹಠಾತ್ ತೊಂದರೆ ಬಂದರೆ ಏನು ಮಾಡುವುದು ಎಂಬ ಪ್ರಶ್ನೆ.

ಅಂತಹ ಮಹತ್ವದ ವಿಷಯವು ಈಗ ಜಿಲ್ಲೆಯಲ್ಲಿ ಭುಗಿಲೆದ್ದಿದೆ ಮತ್ತು ಅವಲೋಕನಕ್ಕೆ ಯೋಗ್ಯವಾಗಿದೆ. ಹಾಗೆ ಮಾತು ಬಂದಾಗ ಸಹಜವಾಗಿ ಏಳುವ ಪ್ರಶ್ನೆಯೆಂದರೆ ಅಲ್ಲೂ ಜನ ಜೀವನವು ಸಹಜವಾಗಿ ನಡೆದಿಲ್ಲವೇ ಎಂಬುದು. ನಾನೂ ಉತ್ತರ ಕನ್ನಡದ ಕುಮಟಾದ ಹತ್ತಿರದ ಮೂರೂರಿನಲ್ಲಿ ಹುಟ್ಟಿ ಅ ಓದಿ, ಅ ಇಪ್ಪತ್ತೊಂದು ವರ್ಷಗಳನ್ನು ಕಳೆದು ಬಂದಿರುವೆ. ಅಲ್ಲಿನ ಬದುಕಿನ ರೀತಿನೀತಿಗಳು,ಅಲ್ಲಿನ ಸಾಧಕ ಬಾಧಕಗಳು ತಿಳಿದಿದೆ. ತೊಂಬ ತ್ತೆರಡು ವರುಷ ವಯಸ್ಸಿನ ತಂದೆ, ಎಂಬತ್ತು ವಯಸ್ಸಿನ ತಾಯಿ ಇಬ್ಬರೇ ಇನ್ನೂ ಬದುಕಿನ ಚಟುವಟಿಕೆಯಲ್ಲಿ ಆರೋಗ್ಯದಿಂದ ಭಾಗಿಯಾಗಿದ್ದಾರೆ.

ಕುಟುಂಬದ ಕವಲುಗಳು ಅಲ್ಲಿ ಹಬ್ಬಿಕೊಂಡಿವೆ. ಅರವತ್ತರಿಂದ ಎಂಬತ್ತರ ನಾನುಳಿದ ದಶಕದ ದಿನಗಳಲ್ಲಿ ಅಲ್ಲಿ ಮನೆ ತುಂಬ ಮಕ್ಕಳಿದ್ದರು, ಊರು ತುಂಬಾ ಜನರೇ ಜನರು. ಊರಿನಿಂದ ಕುಮಟಾಕ್ಕೆ ಹೋಗುವ ಬಸ್ಸನ್ನು ಏರಲು ಸಾಧ್ಯವಿಲ್ಲದಷ್ಟು ರಶ್ ಆಗಿ ಬಸ್ ಓಡಿತ್ತು. ಅಂದು ಅಷ್ಟೆಲ್ಲ ಜನರಿದ್ದ ಬಹುತೇಕ ಹಳ್ಳಿಗಳಲ್ಲಿ MBBS ಕಲಿತು ಬಂದ ಡಾಕ್ಟರ್ ಇರಲಿಲ್ಲ. ಜನರಿಗೆ ಬರುವ ರೋಗಕ್ಕೆ ಅಲ್ಲಿನದೇ ವೈದ್ಯಕೀಯ ಉಪಚಾರವಿತ್ತು.

ಗಿಡ ಮೂಲಿಕೆಯನ್ನು ಬಳಸಿ ಮನೆಯಲ್ಲಿಯೇ ತಯಾರಿಸಿದ ಮನೆ ಮದ್ದು ಅಥವಾ ಆರೋಗ್ಯ ವಿಷಯದಲ್ಲಿ ಡಿಪ್ಲೋಮಾ ಕೋರ್ಸ್ ಮಾಡಿದ್ದ ವೈದ್ಯರಿಂದ ತಂದ ಔಷಧಿಯಾಗಿತ್ತು. ಅಂದಿನ ವೈದ್ಯರು ಔಷಧ ಬಾಟಲಿಗಳ ಮೇಲೆ ಕಾಗದ ಕತ್ತರಿಸಿ ಅಂಟಿ ಸಿದ ನಕ್ಷತ್ರ ರೂಪಿನ ಹಾರವನ್ನು ಗ್ರಹಿಸಿ ನೀರು ಔಷಧದ ಡೋಸ್ ಸೇವಿಸಬೇಕಿತ್ತು. ಬಹುತೇಕ ಜನರು ಅಲ್ಲಿನ ಅಂತಹ ಔಷಧ ಗಳಿಂದ ಗುಣಮುಖರಾಗಿದ್ದರು.

ತಾಲೂಕಾ ಮಟ್ಟದಲ್ಲಿ ಪದವಿಗಳಿಸಿದ ವೈದ್ಯರೂ ಇದ್ದರು. ನಾಡಿ ನೋಡಿ ಅಥವಾ ದೈಹಿಕ ಪರೀಕ್ಷೆಗಳಿಂದಲೇ ರೋಗ ಪತ್ತೆ ಹಚ್ಚಬಲ್ಲ ಪರಿಣಿತಿ ಅವರಲ್ಲಿತ್ತು. ಮೂತ್ರ, ರಕ್ತಪರೀಕ್ಷೆಯು ಅಂದು ವಿರಳವಾಗಿತ್ತು. ಸ್ಕ್ಯಾನಿಂಗ್ ಮತ್ತು ಇನ್ನೂ ಹೆಚ್ಚಿನ ಆಧುನಿಕ ಉಪಕರಣಗಳಂತೂ ಅಸಾಮಾನ್ಯ ಸಂಗತಿಯಾಗಿತ್ತು. ಅಂದು ವೈದ್ಯರು ಯಾವುದೇ ರೋಗಿಗೆ ಮಣಿಪಾಲ ಅಥವಾ ಕೆಎಂಸಿಗೆ ಕರೆದುಕೊಂಡು ಹೋಗುವ ಸಲಹೆ ನೀಡಿದ್ದರೆ ಅದು ಅತಿರೇಕ ರೂಪು ತಳೆದಿರುವ ಅರ್ಥ ಪಡೆದಿತ್ತು.

ಊರಲ್ಲ ಈ ಕುರಿತು ಸುದ್ದಿ ಹರಡಿತ್ತು. ಕೆಲವೊಮ್ಮೆ ಅನಾರೋಗ್ಯ ಅಥವಾ ಅಪಘಾತದ ಪರಿಣಾಮವು ಮಿತಿ ಮೀರಿzಗ ಮುಂದಿನ ಭಾರವನ್ನು ದೇವರ ಮೇಲೆ ಬಿಡಲಾಗಿತ್ತು.ಅದೇ ಚಿತ್ರಣವು ಬಹುತೇಕ ಉತ್ತರ ಕನ್ನಡದ ಎಡೆ ಇತ್ತು. ಅದು ಕೆಲ ದಶಕದ ಹಿಂದಿನ ಮಾತುಗಳು. ಈಗ ಅವೆಲ್ಲವನ್ನು ನೆನಪಿಗಷ್ಟೇ ಹಂಚಿಕೊಳ್ಳಬಹುದು. ಆದರೆ ಹೆಚ್ಚಿನ ವಿಚಾರಗಳು ಇಂದು ವಾಸ್ತವಿಕವಲ್ಲ. ಅಂದಿನ ಮಾದರಿ ಇಂದು ಸಂಗತವೂ ಅಲ್ಲ. ಇಂದಿನ ಆರೋಗ್ಯ ಮತ್ತು ವೈದ್ಯಕೀಯತೆಯ ಸಮಾಜದಲ್ಲಿ ಜನರು ಖಾಯಿಲೆಗಳ
ಕುರಿತು ಶುರುವಿನಲ್ಲಿಯೇ ತಿಳಿದುಕೊಳ್ಳಲು ಮತ್ತು ಅದಕ್ಕೆ ತಕ್ಕ ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ.

ಹಲ್ಲು ಜುಮ್ ಎನ್ನುವ ಮೊದಲೇ ದಂತ ವೈ ದ್ಯರಿಂದ ಸಲಹೆ ಪಡೆದಿರುತ್ತಾರೆ. ಆಗಾಗ ರಕ್ತಮತ್ತು ಮೂತ್ರ ತಪಾಸಣೆ ಮಾಡಿಸಿ ಕೊಂಡು ಮುಂದೆ ಬರಬಹುದಾದ ರೋಗಕ್ಕೆ ನಿರೋಧತೆಯ ಕುರಿತು ಯೋಚಿಸುತ್ತಾರೆ. ವೈದ್ಯರು ಕೂಡ ಆಧುನಿಕ ತಂತ್ರಜ್ಞಾನ ಗಳನ್ನು ಒಳಗೊಂಡ ಇನ್ವೆಸ್ಟಿಗೇಟೀವ್ ಮೆಡಿಕೇಷನ್ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ವೈ ದ್ಯಕೀಯ ಜಗತ್ತು ಕಳೆದ ದಶಕದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ರೋಗದ ಬೇರನ್ನೇ ಹುಡುಕಿ ಹೋಗುವ ಪರಿಶೋಧನಾ ಕ್ರಮ ಅಳವಡಿಕೆಯಾಗಿದೆ.

ಇಂತಹ ಹಿನ್ನೆಲೆ ಮತ್ತು ಸನ್ನಿವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಮಹತ್ವ ಪಡೆಯುತ್ತದೆ. ಅಂತಹ ಆಸ್ಪತ್ರೆ ಬೇಕೆಂಬ ಬೇಡಿಕೆ ಇಂದಿನದಲ್ಲ, ಹಲವಾರು ವರ್ಷಗಳಿಂದ ಕೇಳಿ ಬಂದಿದ್ದು. ಆದರೆ ಅದು ಉನ್ಮಾ ದದ ಸ್ವರೂಪ ಪಡೆದಿದ್ದು ಇತ್ತೀಚೆಗೆ. ಕಳೆದ ಜುಲೈ ಇಪ್ಪತ್ತರಂದು ಹೊನ್ನಾವರದಿಂದ ರೋಗಿಯೊಬ್ಬನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಹು ಸುವಿಧತೆ ಯುಳ್ಳ ಆಸ್ಪತ್ರೆಗೆ ಒಯ್ಯುವಾಗ ದುರ್ಘಟನೆಯೊಂದು ನಡೆಯಿತು.

ದಾರಿಯಲ್ಲಿ ಬೈಂದೂರು ಹತ್ತಿರದ ಶಿರೂರ್ ಗೇಟ್ ಹತ್ತಿರ ರೋಗಿಯನ್ನು ಒಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತಕ್ಕೊಳಗಾಯಿತು. ಗಂಭೀರ ಅಪಘಾತದಲ್ಲಿ ರೋಗಿಯ ಸಹಿತ ಜತೆಗಿದ್ದವರರೂ ಸೇರಿ ನಾಲ್ವರು ಮೃತರಾದರು. ಬಹು ಸುವಿಧ ಆಸ್ಪತ್ರೆಯಿಲ್ಲದೆ ನೊಂದಿದ್ದ ಉತ್ತರ ಕನ್ನಡದ ಜನತೆಗೆ ಈ ಘಟನೆಯು ನೋವಿನ ಹುಣ್ಣಿಗೆ ಉಪ್ಪು ಎರಚಿದಂತಾಗಿ ಭಾರೀ ತಲ್ಲಣಕ್ಕೆ ಕಾರಣ
ವಾಯಿತು. ಉದ್ರೇಕಗೊಂಡ ಜನತೆಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯ ಕುರಿತು ಆಂದೋಲನಕ್ಕಿಳಿದರು.

ಮೆರವಣಿಗೆ, ಟ್ವಿಟ್ಟರ್ ಕ್ಯಾಂಪೇನ್, ಮಾಧ್ಯಮಗಳ ಮೂಲಕದ ಹೋರಾಟ ಆರಂಭವಾಯಿತು. ಮುಖ್ಯಮಂತ್ರಿ ಬೊಮ್ಮಾಯಿ, ಅರೋಗ್ಯ ಮಂತ್ರಿಗಳಲ್ಲದೆ ಪ್ರಧಾನ ಮಂತ್ರಿಗಳ ಗಮನವನ್ನೂ ಸೆಳೆಯಲು ಮನ್ ಕಿ ಬಾತ್ ಕಾರ್ಯ ಕ್ರಮದಲ್ಲಿ ಎರಡು ಲಕ್ಷ ಪ್ರಶ್ನೆಗಳ ಸುರಿಮಳೆ ಸುರಿಸಲು ನಿರ್ಧರಿಸಿದ್ದಾರೆ. ಈ ಸಾರಿ ವಿಷಯವನ್ನು ನಿಶ್ಚಿತತೆಯ ಮಟ್ಟಕ್ಕೆ ಒಯ್ಯಲು ಫಣ ತೊಟ್ಟಿದ್ದಾರೆ.

ಉತ್ತರ ಕನ್ನಡಕ್ಕೆ ಬಹು ಸುವಿಧ ಆಸ್ಪತ್ರೆ ಬೇಕೆಂಬುದರ ಕುರಿತು ಎರಡು ಮಾತಿರಬಾರದು. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡದಲ್ಲಿ ಹನ್ನೊಂದು ತಾಲೂಕುಗಳಿವೆ. ಸುಮಾರು ಹದಿನಾರು ಲಕ್ಷ ಜನ ವಾಸಿಸುತ್ತಾರೆ. ಇಂತಹ ಪ್ರದೇಶದಲ್ಲಿ ಒಂದು ಬಹು ಸುವಿಧ ಆಸ್ಪತ್ರೆ ಬೇಕೆಂಬ ಬೇಡಿಕೆಯು ನ್ಯಾಯ ಸಮ್ಮತವಾಗಿದೆ ಮತ್ತು ಆದಷ್ಟು ಬೇಗ ಪರಿಗಣನೆಗೆ ಯೋಗ್ಯವಾಗಿದೆ.

ಆದರೆ.. ಬಹು ಸುವಿಧ ಆಸ್ಪತ್ರೆಯ ಕುರಿತು ನಿರ್ಧರಿಸುವಾಗ ಹಲವು ಮಹತ್ವದ ವಿಚಾರಗಳನ್ನು ಪರಿಶೀಲಿಸಲೇಬೇಕು. ಅವೆಂದರೆ ಎಲ್ಲಿ, ಹೇಗೆ ಮತ್ತು ಯಾರು ಎಂಬುದರ ಕುರಿತು. ದೊಡ್ಡ ಜಿಯಾಗಿರುವ ಉತ್ತರಕನ್ನಡದಲ್ಲಿ ಕುಮಟಾ ಮತ್ತು ಭಟ್ಕಳ್ ನಡುವಿನ ಜನತೆಗೆ ಸುಮಾರು ಎರಡು ತಾಸಿನ ಪ್ರಯಾಣದಲ್ಲಿ ಪ್ರಸಿದ್ಧ ಮಣಿಪಾಲ ಮತ್ತು ಇತರ ಆಸ್ಪತ್ರೆಗಳಿವೆ. ಅಂಕೋಲಾ ಮತ್ತು ಕಾರವಾರ ಜನತೆಗೆ ಅಷ್ಟೇ ದೂರ ಗೋವಾದಲ್ಲಿ ಮತ್ತು ಘಟ್ಟದ ಮೇಲಿನ ತಾಲೂಕುಗಳಿಗೆ ಇನ್ನೂ ಸಮೀಪದಲ್ಲಿ
ಹುಬ್ಬಳ್ಳಿಯ ಅನೇಕ ಬಹು ಸುವಿಧ ಆಸ್ಪತ್ರೆಗಳಿವೆ.

ಹೀಗಿರುವುದರಿಂದ ಉತ್ತರ ಕನ್ನಡದಲ್ಲಿ ಸ್ಥಾಪಿಸಲಾಗುವ ವ್ಯವಸ್ಥೆಯು ಎಲ್ಲರಿಗೂ ಕಡಿಮೆ ಸಮಯದಲ್ಲಿ ಸುಲಭವಾಗಿ ತಲುಪ
ಬಲ್ಲ ಸ್ಥಳವಾಗಬೇಕು. ಕುಮಟಾ ಇದಕ್ಕೆ ಹೆಚ್ಚು ಪ್ರಶಸ್ತವೇ ಅಥವಾ ಇನ್ಯಾವ ಸ್ಥಳವೇ? ಅನುಕೂಲಕರ ಸ್ಥಳವಾಗದಿದ್ದರೆ ಅಥವಾ ಅಷ್ಟೇ ಪ್ರಯಾಣದ ಸಮಯ ಬೇಕಿದ್ದರೆ ಈಗಾಗಲೇ ಸಿದ್ಧವಿರುವ ಸುತ್ತಲಿನ ಆಸ್ಪತ್ರೆಗೆ ಹೋಗದೆ ಇಲ್ಲಿಗೆ ಏಕೆ ಬಂದಾರು? ಇನ್ನೊಂದು ಮಹತ್ವದ ವಿಚಾರವೆಂದರೆ ಯೋಗ್ಯ ವೈದ್ಯರ ಲಭ್ಯತೆ.

ನಿಪುಣ ವೈದ್ಯರು ಪಟ್ಟಣಕ್ಕೆ ಹೋಗಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ತವಕದಲ್ಲಿರುವಾಗ ಇಲ್ಲಿ ಅವರನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು. ನಿಪುಣ ವೈದ್ಯರಿಲ್ಲದ ವ್ಯವಸ್ಥೆಗೆ ಅರ್ಥ ವಿರುವುದಿಲ್ಲ. ಮತ್ತೊಂದು ಮಾತೆಂದರೆ ಉತ್ತರ ಕನ್ನಡದ ಸಾಮಾನ್ಯ ಜನತೆಯು ಇಂತಹ ಹೈಟೆಕ್ ಆಸ್ಪತ್ರೆಗಳ ವೆಚ್ಚವನ್ನು ಸಾಮಾನ್ಯ ಸ್ಥಿತಿಯಲ್ಲಿ ನಿಭಾಯಿಸಬಲ್ಲರೇ ಎಂಬ
ಮತ್ತು ಜನರಲ್ಲಿರುವ ಆರೋಗ್ಯ ಮತ್ತು ಅಪಘಾತ ವಿಮೆಯ ಕುರಿತೂ ಸರ್ವೇ ನಡೆಸಿಕೊಳ್ಳಬೇಕು.

ಅಂದರೆ ಸ್ಥಾಪಿತವಾದ ಬಹು ಸುವಿಧ ಆಸ್ಪತ್ರೆಯು ಆರ್ಥಿಕ ಅಥವಾ ಇನ್ಯಾವುದೇ ತೊಂದರೆಯಿಲ್ಲದೆ ಸಮರ್ಥವಾಗಿ ಮುಂದೆ
ನಡೆಯುವ ಕುರಿತು ಸಾಕಷ್ಟು ವಿಚಾರಪೂರ್ಣ ಅನುಷ್ಠಾನ ಬೇಕು. ಇಲ್ಲದಿದ್ದರೆ ಯೋಜನೆಯು ವಿಫಲವಾಗಿ ಹೋಗುವ ಸಾಧ್ಯತೆ ಇದೆ. ಉತ್ತರ ಕನ್ನಡಲ್ಲಿ ಮಲ್ಟಿ ಸ್ಪೆ ಷಾಲಿಟಿ ಆಸ್ಪತ್ರೆ ಬೇಕು ಎಂಬ ಜನರ ಬೇಡಿಕೆ ಕೂಡಲೇ ಗಣನೆಗೆ ಯೋಗ್ಯವಾದದ್ದು.

ಆದರೆ ಅಂತಹ ನಿರ್ಧಾರಕ್ಕೆ ಬರುವಾಗ ಸರಕಾರವು ಎಲ್ಲ ಸಂಬಂಧಿತ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ
ಸಮಗ್ರತೆಯ ನಿರ್ಣಯ ತೆಗೆದುಕೊ ಳ್ಳಬೇಕು. ಈಗಾಗಲೇ ಸುತ್ತಲಿನ ಜಿಲ್ಲೆಗಳಲ್ಲಿ ಯಶಸ್ವಿ ಯಾಗಿ ನಡೆಯುತ್ತಿರುವ ಆರ್ಥಿಕವಾಗಿ ಗಟ್ಟಿಯಿರುವ ಮಣಿಪಾಲ, ಧರ್ಮಸ್ಥಳ ಅಥವಾ ಕೆಇಎಲ್ ಈ ಮೊದಲಾದ ಸಂಸ್ಥೆಗಳನ್ನು ಮನವೊಲಿಸಿ ಅವರದೇ ಒಂದು ವ್ಯವಸ್ಥಿತ ವಿಭಾಗವನ್ನು ತೆರೆಯುವಂತಾದರೆ ಒಳ್ಳೆಯದು. ಸರಕಾರವು ಈ ಕುರಿತು ಯೋಚಿಸಬಹುದು ಅಥವಾ ತನ್ನದೇ ಆಸ್ಪತ್ರೆಯನ್ನು ಸರಿಯಾದ ರೀತಿಯಲ್ಲಿಯೂ ಸ್ಥಾಪಿಸಬಹುದು.

ಅದು ಆಡಳಿತಾಂಗದ ನಿರ್ಧಾರಕ್ಕೆ ಬಿಟ್ಟ ವಿಷಯ. ಆದರೆ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಮಹತ್ವವಾದದ್ದು. ನಿರ್ಧಾರವಾದ ಮೇಲೆ ಆಸ್ಪತ್ರೆಯ ಸ್ಥಾಪನೆಯು ಯಾವುದೇ ರೀತಿಯ
ನನೆಗುದಿಗೆ ಬೀಳಬಾರದು ಅಲ್ಲದೇ ಸ್ಥಾಪಿತವಾದ ಮೇಲೆ ಯಾವುದೇ ರೀತಿಯ ದುರವಸ್ಥೆಯನ್ನು ಕಾಣಬಾರದು. ಜಿಲ್ಲೆಯ ಜನತೆಯ ಬಹು ಸುವಿಧ ಆಸ್ಪತ್ರೆಯ ಬೇಡಿಕೆಗೆ ಸೂಕ್ತ ರೀತಿಯ ಪರಿಹಾರ ದೊರಕಬೇಕು.