Monday, 25th November 2024

ಕರೋ‌ನಾ ನಡುವೆ ಮೆಡ್ರಾಸ್ ಐ ಕಾಟ!

ಬೆಂಗಳೂರು: ಕಾಲಕ್ಕೆ ತಕ್ಕಂತೆ ಖಾಯಿಲೆಗಳೂ ಮನುಷ್ಯರನ್ನ ಕಾಡುತ್ತಲೇ ಇದೆ. ಬೇಸಿಗೆಯಲ್ಲೊಂದಿಷ್ಟು, ಮಳೆಗಾಲಕ್ಕೆ ಮತ್ತೊಂದಿಷ್ಟು, ಚಳಿಗಾಲದಲ್ಲಿ ಬೇರೆಯದ್ದು ಹೀಗೆ. ಆದರೆ ಈ ಬಾರಿ ಎಲ್ಲಾ ಕಡೆ ಕೊರೋನಾ ವೈರಸ್ ಹಾವಳಿ ಜೋರಾಗಿರೋದರಿಂದ ಬೇರೆ ಎಲ್ಲಾ ಖಾಯಿಲೆಗಳೂ ಸ್ವಲ್ಪ ಸೈಡಿಗೆ ಹೋದಂತಾಗಿದೆ.
ಹೌದು, ಎಲ್ಲೆಡೆಯೂ ಕರೋನಾ ವೈರಸ್​ನದ್ದೇ ಹಾವಳಿ. ಇದೆಲ್ಲದರ ನಡುವೆಯೂ ಸ್ವಲ್ಪ ಹೆಚ್ಚೇ ಎನಿಸುವಂತೆ ಕಂಡು ಬರುತ್ತಿರೋದು ಮಡ್ರಾಸ್ ಐ ಅಥವಾ ಕಂಜಂಕ್ಟಿವೈಟಿಸ್. ಕಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಸುರು ತುಂಬಿದಂತಾಗೋದು, ನವೆಯಾಗುವುದು, ದೃಷ್ಟಿ ಮಬ್ಬಾಗೋದು, ಕಣ್ಣು ಊದಿಕೊಳ್ಳೋದು ಇವೆಲ್ಲಾ ಇದ್ದರೆ ಅದು ಖಂಡಿತಾ ಮಡ್ರಾಸ್ ಐ.
ಬೇಸಿಗೆ ಕಾಲದಲ್ಲಿ ತಪ್ಪದೇ ಬರೋ ಈ ಸೋಂಕಿನ ಮೂಲ ಬ್ಯಾಕ್ಟೀರಿಯಾ. ಒಬ್ಬರಿಂದ ಒಬ್ಬರಿಗೆ ಬೇಗನೇ ಹರಡೋ ಇದು ಶಾಲಾ ಮಕ್ಕಳ ಪಾಲಿಗೆ ದೊಡ್ಡ ವಿಲನ್ ಆಗುತ್ತಿತ್ತು.
 ಈ ಬಾರಿ ಲಾಕ್ ​​ಡೌನ್​​ನಿಂದಾಗಿ ಶಾಲಾ ಕಾಲೇಜುಗಳು ಮುಚ್ಚಿರೋದ್ರಿಂದ ಮಕ್ಕಳಲ್ಲಿ ಮಡ್ರಾಸ್ ಐ ಹರಡುವ ಅಪಾಯವಿಲ್ಲ. ಆದರೆ, ಅನೇಕರಲ್ಲಿ ಈ ಸೋಂಕಿನ ಹಾವಳಿ ಶುರುವಾಗಿದೆ. ಒಬ್ಬ ವ್ಯಕ್ತಿಗೆ ಮಡ್ರಾಸ್ ಐ ಉಂಟಾಗಿ ಆತ ಕಣ್ಣು ಮುಟ್ಟಿದ ಕೈಯಲ್ಲಿ ಮೇಜನ್ನು ಮುಟ್ಟಿರುತ್ತಾನೆ ಎಂದುಕೊಳ್ಳಿ. ಅದೇ ಮೇಜನ್ನು ಮತ್ತೊಬ್ಬ ಮುಟ್ಟಿ ತಿಳಿಯದೇ ಆ ಕೈಯಲ್ಲಿ ತನ್ನ ಕಣ್ಣು ಮುಟ್ಟಿ ಕೊಂಡರೆ ಸೋಂಕು ಹರಡುವುದು ಪಕ್ಕಾ.
ಹೀಗೆ ಒಬ್ಬರಿಂದ ಒಬ್ಬರಿಗೆ ಹರಡುವ ಕಣ್ಣಿನ ಈ ಸೋಂಕು ಸಂಪೂರ್ಣವಾಗಿ ಗುಣವಾಗಬಲ್ಲದು. ನಿರ್ಲಕ್ಷ್ಯ ಮಾಡಿ ವೈದ್ಯರ ಬಳಿ ಹೋಗದೇ ಇದ್ದರೆ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ಮಡ್ರಾಸ್ ಐ ಅಥವಾ ಕಂಜಂಕ್ಟಿವೈಟಿಸ್ ಇದೆ ಎಂದು ಅನುಮಾನ ಬಂದರೆ ಅಥವಾ ಕಣ್ಣಿನಲ್ಲಿ ಯಾವುದೇ ಬದಲಾವಣೆ ಉಂಟಾದರೂ ತಪ್ಪದೇ ವೈದ್ಯರನ್ನು ಕಾಣುವುದು ಒಳಿತು.