Sunday, 15th December 2024

ಸಾಲದ ಶೂಲಕ್ಕೇರಿಸಲು ಬರುವ ಕರ ’ಕರೆ’

ವಿತ್ತಾವಲೋಖ

ರಮಾನಂದ ಶರ್ಮಾ

ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ಒಂದು ರೀತಿಯಲ್ಲಿ ಆಭಿಮನ್ಯುವಿನ ಚಕ್ರವ್ಯೂಹ ಪ್ರವೇಶಿಸಿದಂತೆ. ಬ್ಯಾಂಕ್ ಸಾಲದ ವಿಚಾರದಲ್ಲಿ, ಎಂಟ್ರಿ ಇದೆ: ಆದರೆ, push ಇಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಒಮ್ಮೆ ಸಾಲವನ್ನು ಪಡೆ ದರೆ, ಸಾಲದ ಜರ್ನಿ ಆರಂಭವಷ್ಟೇ, ಕೊನೆ ಎಂದೂ ಇರುವುದಿಲ್ಲ ಎಂಬ ಅನುಭವಿಗಳ ಮಾತು ಇದೆ.

ನಿಮ್ಮ ವೈಯಕ್ತಿಕ ಸಾಲದ ಅರ್ಜಿ ಮಂಜೂರಾಗಿದೆ. ಕಾಗದ ಪತ್ರಗಳನ್ನು ಸಹಿ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿ ಕೊಳ್ಳಿರಿ. ನಿಮ್ಮ ಸಾಲದ ಕೋರಿಕೆ(ಕೋರಿಕೆ ಮಾಡಿದವರು ಯಾರೋ?) ಅಪ್ರೂವ್ ಆಗಿದೆ, ನಮ್ಮನ್ನು ಸಂಪರ್ಕಿಸಿ. ಎದರೂ ನಿಮ್ಮಹಳೆ ಸಾಲವಿರಲಿ, ಅದನ್ನು ಕ್ಲೋಸ್ ಮಾಡಿ ಹೊಸ ಸಾಲ ಪಡೆಯಲು ಸಂಪರ್ಕಿಸಿ.

ನಿಮ್ಮ ಸಾಲದ ಬೇಡಿಕೆ ನಮ್ಮ ಪರಿಶೀಲನೆಯಲ್ಲಿದೆ, ಕೂಡಲೇ ಸಂಪರ್ಕಿಸಿ. ನಿಮ್ಮ ಬಂಗಾರದ ಒಡವೆಗಳನ್ನು ಬಿಡಿಸಿಕೊಳ್ಳಲು ಸಹಾಯ ಮಾಡಲಾಗುವುದು, ಸಂಪರ್ಕಿಸಿ. ಬಂಗಾರದ ಮೇಲೆ ಸಾಲ ಬೇಕೆ? ಬಂಗಾರವನ್ನು ಮನೆಯಲ್ಲಿ ಹಾಗೇ ಇಡಬೇಡಿ, ಅದರ ಮೇಲೆ ಸಾಲ ಪಡೆದು ಹೂಡಿಕೆ ಮಾಡಿ ಅದನ್ನು ದುಡಿಸಿಕೊಳ್ಳಿ. 5 ಲಕ್ಷ ರು.ವರೆಗೆ ಸಾಲ ಪಡೆಯಿರಿ. ಆದಾಯದ ದಾಖಲೆ ಬೇಕಿಲ್ಲ. ಕೇವಲ 30 ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ.

50 ಲಕ್ಷದ ವರೆಗೆ ಗೃಹಸಾಲ ಪಡೆಯಿರಿ, ತಲೆಯ ಮೇಲೊಂದು ಸೂರಿನ ಅನುಭವ ಪಡೆಯಿರಿ. ಎರಡೇ ನಿಮಿಷದಲ್ಲಿ ನಿಮ್ಮ ಸಾಲವನ್ನು ಮಂಜೂರು ಮಾಡಿಸಿಕೊಳ್ಳಿ. ಹೊಸ ವಾಹನ ಖರೀದಿಸಲು ಸಾಲ ನೀಡಲಾಗುವುದು. ಸೆಕೆಂಡ್ ಹ್ಯಾಂಡ್ ವಾಹನ ಕ್ಕೂ ಸಾಲ ನೀಡಲಾಗುವುದು. ಹಣದ ಅವಶ್ಯಕತೆ ಇದ್ದರೆ ವಾಹನದ ಮೇಲೂ ಸಾಲ ನೀಡಲಾಗುವುದು. ನಾವು ಎಲ್ಲ ರೀತಿಯ ಸಾಲಗಳನ್ನು ನೀಡುತ್ತೇವೆ, 25 ನಿಮಿಷದಲ್ಲಿ ಹಣ ಪಡೆದುಕೊಳ್ಳಲು ಸಂಪರ್ಕಿಸಿ.

ಮೊಬೈಲ್ ಇರಲಿ ಅಥವಾ ಮನೆಯಲ್ಲಿ ಒಂದು ಟೆಲಿಫೋನ್ ಇರಲಿ, ಮುಂಜಾನೆಯಿಂದ ಮುಸ್ಸಂಜೆ ಯವರೆಗೆ, ಇಂಥ ಕರೆಗಳು ಬರುತ್ತಿರುತ್ತವೆ. ಈ ಕರೆಗಳಿಗೆ ಹೊತ್ತು -ಕಾಲ ಯಾವುದರ ಪರಿವೆಯೂ ಇರುವುದಿಲ್ಲ. ನಿಮಗೆ ಗೊತ್ತಾ? ಹಣಕಾಸು ಸಚಿವ
ಪ್ರಣಾಬ್ ಮುಖರ್ಜಿ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸುತ್ತಿರುವಾಗ ಹೌಸಿಂಗ್ ಲೋನ್ ಬೇಕೆ ಎಂದು ಕೇಳಿ ಅವರ ಮೊಬೈಲ್‌ಗೆ ಕರೆ ಬಂದಿತ್ತಂತೆ!

ತೀವ್ರ ಸಿಡಿಮಿಡಿಗೊಂಡ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡಿದ್ದರಂತೆ. ವ್ಯಕ್ತಿ ಯೊಬ್ಬರಿಗೆ ಅವರು ಹರಿಶ್ಚಂದ್ರ ಘಾಟ್‌ನಲ್ಲಿ ಇರುವಾಗ ಇಂಥ ಕರೆ ಬಂದಿದ್ದು, ಅವರು ಕರೆಮಾಡಿದವರನ್ನು ಮನಸ್ವೀ ಝಾಡಿಸಿ
ದ್ದರಂತೆ. ಕೆಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ, ಇನ್ನು ಕೆಲವು ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಿಂದ ಇಂಥ ಕರೆಗಳು ಬರುತ್ತವೆ.

ಇತ್ತೀಚೆಗೆ ಕೆಲವು ಖಾಸಗೀ ಲೋನ್ ಆಪ್‌ಗಳಿಂದಲೂ ಇಂತಹ ಕರೆಗಳು ನಿರಂತರವಾಗಿ ಬರುತ್ತವೆ. ಸಾರ್ವಜನಿಕರಂಗದ ಬ್ಯಾಂಕು ಗಳಿಂದ ಇಂಥ ಕರೆಗಳು ಬರುವುದಿಲ್ಲ. ಇಂಥ ಕರೆಗಳು ಅವರ ವಿಮೆ, ಆರೋಗ್ಯ ವಿಮೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ ಬಗೆಗೆ ಮಾತ್ರ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ ಸಾಲ ನೀಡುವ ಬಗೆಗೆ ಅವರು ಕರೆ ಮಾಡುವುದಿಲ್ಲ. ಈ ರೀತಿ ಕರೆ ಮಾಡು ವರು ನೀವು ಸಿಡಿಮಿಡಿಗೊಂಡರೂ ಬೇಸರಿಸುವುದಿಲ್ಲ. ಅದೇ ನಂಬರ್‌ನಿಂದ ಇನ್ನು ಹತ್ತು ನಿಮಿಷಕ್ಕೆ ಇನ್ನೊಂದು ಕರೆ ಬರುತ್ತದೆ. ಪುನಃ ಸಂಪ ರ್ಕಿಸ ಬೇಡಿ ಎಂದು ಗದರಿದರೂ, ನಂಬರ್ ಅನ್ನು ಕಾಲ್‌ಲಿಸ್ಟ್‌ನಿಂದ ತೆಗೆದು ಹಾಕಿ ಎಂದು ಗೋಗರೆದೂ, ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೆದರಿಸಿ- ಬೆದರಿಸಿ ಎಚ್ಚರಿಸಿದರೂ ಅವರು ಬಿಡುವುದಿಲ್ಲ.

ಈ ರೀತಿ ಫೋನಾಯಿಸುವುದು ಮತ್ತು ತನ್ಮೂಲಕ ಬಿಜಿನೆಸ್ ಹೆಚ್ಚಿಸುವುದು ಅವರ ಕಾರ್ಯದ ಒಂದು ಭಾಗ. ವಿಚಿತ್ರವೆಂದರೆ ಬಹುತೇಕ ಫೋನ್ ಕರೆ ಸ್ವೀಕರಿಸಿದವರಾರೂ, ಆ ಹಣಕಾಸು ಸಂಸ್ಥೆಗಳನ್ನು, ಬ್ಯಾಂಕುಗಳನ್ನು ಸೇವೆ ಅಥವಾ ಸಾಲಕ್ಕೆ ಸಂಪರ್ಕಿ ಸಿರುವುದಿಲ್ಲ. ನಿಮ್ಮ ಫೋನ್ ನಂಬರ್ ಅವರಿಗೆ ಹೇಗೆ ದೊರಕಿತು ಎನ್ನುವುದು ಮಾತ್ರ ತಿಳಿಯದು. ಇತ್ತೀಚೆಗೆ ಸಾಲ ಪಡೆಯಿರಿ ಎಂದು ಒಬ್ಬರನ್ನು ಒತ್ತಾಯಿಸಲು, ಈ ಫೋನ್ ಕರೆಯ ಕಾಟ ತಡೆಲಾರದೇ ಅವರು, ‘ನನಗೆ ಸಾಲ ಬೇಡ…ನೀವು ಸಾಲದ ಕಂತನ್ನು (EMI) ತುಂಬುವುದಿದ್ದರೆ ನಾನು ಸಾಲ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದರಂತೆ.

ಅಷ್ಟಕ್ಕೂ ಸಾಲವನ್ನು ಈ ರೀತಿ ಮಾರ್ಕೆಟಿಂಗ್ ಮಾಡುವುದೇಕೆ? ದಶಕಗಳ ಹಿಂದೆ ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹಿಸಲು ಈ ರೀತಿ ಮಾರ್ಕೆಟಿಂಗ್ ಮಾಡುವುದು ತೀರಾ ಸಾಮಾನ್ಯವಾಗಿತ್ತು, ಠೇವಣಿಗಾಗಿ ಗ್ರಾಹಕರನ್ನು ಭೇಟಿಮಾಡುವುದು, ಅವರಿಗೆ ಕೆಲವು ಪ್ರಭಾವಿಗಳಿಂದ ಹೇಳಿಸುವುದು, ಅವರಿಗೆ ಫೋನಾಯಿಸುವುದು, ಅವರೊಡನೆ ಸತತ ಸಂಪರ್ಕದಲ್ಲಿ ಇರುವುದು ಮಾಮೂ ಲಾಗಿತ್ತು.

ಅಂದಿನ ದಿನಗಳಲ್ಲಿ ಹೆಚ್ಚು ಠೇವಣಿ ಸಂಗ್ರಹಿಸಿದ ಮ್ಯಾನೇಜರ್‌ಗಳಿಗೆ ಹೆಚ್ಚಿನ ಮಹತ್ವ ಇತ್ತು ಮತ್ತು ಅವರನ್ನು ಡೈನಾಮಿಕ್ ಅಥವಾ ಲೈವ ವೈರ್ ಮ್ಯಾನೇಜರ್ ಎಂದೂ ಕರೆಯಲಾಗುತ್ತಿತ್ತು. ಆದರೆ, ಈಗ ಸೀನ್ ಬದಲಾಗಿದ್ದು ಯು ಟರ್ನ್ ಪಡೆದಿದೆ. ಇಂದು ಬ್ಯಾಂಕುಗಳು ಠೇವಣಿಗಾಗಿ ಮೊದಲಿನಂತೆ ಕಷ್ಟಪಡಬೇಕಾಗಿಲ್ಲ. ಹಲವಾರು ಖಾಸಗಿ ಹಣಕಾಸು ಸಂಸ್ಥೆಗಳ ವೈಫಲ್ಯ  ದಿಂದಾಗಿ, ಬಡ್ಡಿದರ ಸ್ವಲ್ಪ ಕಡಿಮೆಯಾದರೂ ಜನರು ಬ್ಯಾಂಕುಗಳಲ್ಲಿ ಠೇವಣಿ ಇಡುತ್ತಾರೆ.

ಅನಿಶ್ಚಿತತೆಯಿಂದ ಕೂಡಿದ ನಾಳೆಗಾಗಿ ಉಳಿತಾಯ ಮಾಡಬೇಕೆನ್ನುವ ಪೃವೃತ್ತಿ ಹೆಚ್ಚಾಗುತ್ತಿದೆ. ಇಂದು ಬ್ಯಾಕಿಂಗ್ ಉದ್ಯಮ ದಲ್ಲಿ ಮಹತ್ತರ ಬದಲಾವಣೆಯಾಗಿದೆ. ಬ್ಯಾಂಕುಗಳ ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ಬಡ್ಡಿದರ ಇಳಿಯುತ್ತಿದೆ (ಈಗ 3-4 ತಿಂಗ ಳಿನಿಂದ ಮಾತ್ರ ಬಡ್ಡಿ ದರ ಏರಿಕೆಯಲ್ಲಿದೆ). ಸುಸ್ತಿ ಸಾಲ ಹೆಚ್ಚುತ್ತಿದೆ. ಬ್ಯಾಂಕುಗಳಲ್ಲಿ ಸಾಲ ವಿತರಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನ್ನಲಾಗುತ್ತಿದೆ. ಬಡ್ಡಿಯೇತರ ಆದಾಯದಲ್ಲಿ ಇಳಿಕೆ ಕಾಣುತ್ತಿದೆ.

ಬ್ಯಾಂಕುಗಳ ಬಡ್ಡಿಯೇತರ ಆದಾಯವೂ ಸರಕಾರದ ಹಲವು ನಿಯಂತ್ರಣಗಳಿಗೆ ಒಳಪಟ್ಟಿದೆ. ಸುಸ್ತಿ ಸಾಲದ ಮೇಲೆ ಬಡ್ಡಿ ವಿಽಸಿ
ಅದನ್ನು ಆದಾಯದಲ್ಲಿ ತೋರಿಸುವಂತಿಲ್ಲ. ಬ್ಯಾಂಕುಗಳಲ್ಲಿ ಬಡ್ಡಿ ಆದಾಯವನ್ನು ಮೊದಲಿನಂತೆ accrued basis ಮೇಲೆ ಲೆಕ್ಕ ಹಾಕದೇ, ಈಗ received baisis ಮೇಲೆ ಲೆಕ್ಕ ಹಾಕಬೇಕಾಗುತ್ತದೆ. ಗಳಿಸಿದ ಲಾಭದ ಬಹುಪಾಲು ಅನುತ್ಪಾದಕ (ಕೆಟ್ಟ ಸಾಲ)ಆಸ್ತಿಗೆ ವರ್ಗಾವಣೆಯಾಗುತ್ತಿದೆ. 2021-22 ರಲ್ಲಿ ಬ್ಯಾಂಕುಗಳು 2,08,654 ಕೋಟಿ ರು. ಲಾಭಗಳಿಸಿದರೂ 141918 ಕೋಟಿ ರು. ಕೆಟ್ಟ ಸಾಲ ಗಳಿಗೆ ವರ್ಗಾವಣೆ ಯಾಗಿರುವುದರಿಂದ ಬ್ಯಾಂಕುಗಳ ನಿವ್ವಳ ಲಾಭ 66736 ಕೋಟಿ ರು. ಮಾತ್ರ. ಬ್ಯಾಂಕುಗಳು ಹೆಚ್ಚಿಗೆ ಸಾಲ ನೀಡಿ ಬ್ಯಾಂಕುಗಳ ಆದಾಯವನ್ನು ಹೆಚ್ಚಿಸುವ ಅನಿವಾರ್ಯ ಇದೆ.

ಅಂತೆಯೇ ಬ್ಯಾಂಕುಗಳು ಸಾಲವನ್ನು ಯುದ್ಧೋಪಾದಿಯಲ್ಲಿ ಮಾರ್ಕೆಟಿಂಗ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಂದು ಹೆಚ್ಚು ಠೇವಣಿ ಸಂಗ್ರಹ ಮಾಡಿದವನು ಡೈನಾಮಿಕ್ ಮ್ಯಾನೇಜರ್ ಎಂದು ಕರೆಯಲ್ಪಟ್ಟಿದ್ದರೆ. ಇಂದು ಹೆಚ್ಚು ಸಾಲ ನೀಡಿದವನು ಮತ್ತು ಸಾಲ ಮರುಪಾವತಿ ಪಡೆದವನನ್ನು ಡೈನಾಮಿಕ್ ಮ್ಯಾನೇಜರ್ ಎಂದು ಕರೆಯಲ್ಪಡುತ್ತಾನೆ. ಬ್ಯಾಂಕುಗಳು ಸಾಲವನ್ನು ಮಾರ್ಕೆಟಿಂಗ್ ಮಾಡಿದರೂ, ಅವು ಖಾಸಗೀ ಹಣಕಾಸು ಸಂಸ್ಥೆ ಮತ್ತು ಕೆಲವು ಖಾಸಗಿ ಬ್ಯಾಂಕುಗಳಂತೆ ಅಗ್ರೆಸಿ ವ್
ಅಗಿ ಮಾರ್ಕೆಟಿಂಗ್ ಮಾಡುವುದಿಲ್ಲ. ಅವುಗಳಿಗೆ ಅವುಗಳದೇ ಅದ ನೀತಿ ನಿಯಮಾವಳಿಗಳು ಇವೆ.

ಮೇಲುನೋಟಕ್ಕೆ ಈ ರೀತಿಯ ಸಾಲದ ಮಾರ್ಕೆಟಿಂಗ್ ನಲ್ಲಿ ಯಾವುದೇ ಕಾನೂನಾತ್ಮಕ ಅಥವಾ ಶಿಷ್ಟಾಚಾರದ ತೊಂದರೆ ಇರುವುದಿಲ್ಲ. ಎಲ್ಲವೂ ಕಾನೂನಿನ ಮತ್ತು ವ್ಯವಹಾರದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಇದೂ ಒಂದು ರೀತಿಯ ಬಿಜಿನೆಸ್.
ಆದರೆ, ಕೆಲವು ಹಿರಿಯ ಮತ್ತು ನಿವೃತ್ತ ಬ್ಯಾಂಕರ್ ಗಳ ಮತ್ತು ಅರ್ಥಿಕ ತಜ್ಞರ ಪ್ರಕಾರ, ಸಾಲ ಬೇಕೇ? ಎಂದು ಕೇಳಿ, ಪ್ರಚೋದಿಸಿ, ಪ್ರೇರೇಪಿಸಿ ಒತ್ತಾಯ ಮಾಡಿ ಸಾಲ ನೀಡುವುದು ಒಳ್ಳೆಯ ಆರ್ಥಿಕತೆಯ ಲಕ್ಷಣವಲ್ಲ.

ಇದು ಜನರಲ್ಲಿ ಟ್ಞoಞ ಛ್ಟಿಜಿoಞ ನ್ನು ಹೆಚ್ಚಿಸುತ್ತದೆ. ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ಒಂದು ರೀತಿಯಲ್ಲಿ ಆಭಿಮನ್ಯುವಿನ ಚಕ್ರವ್ಯೂಹ ಪ್ರವೇಶಿಸಿದಂತೆ. ಬ್ಯಾಂಕ್ ಸಾಲದ ವಿಚಾರದಲ್ಲಿ, ಎಂಟ್ರಿ ಇದೆ: ಆದರೆ, ಛ್ಡಿಜಿಠಿ ಇಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಒಮ್ಮೆ ಸಾಲವನ್ನು ಪಡೆದರೆ, ಸಾಲದ ಜರ್ನಿ ಆರಂಭವಷ್ಟೇ, ಕೊನೆ ಎಂದೂ ಇರುವುದಿಲ್ಲ ಎಂಬ ಅನುಭವಿಗಳ ಮಾತು ಇದೆ. ಅದು ಸಾಲ ಮಾಡಿ ಸಾಲ ತೀರಿಸುವ ಮಟ್ಟಕ್ಕೆ ಇಳಿಯುತ್ತದೆ.

ಅನಿವಾರ್ಯವಾದರೆ ಮಾತ್ರ ಸಾಲಕ್ಕೆ ಮೊರೆ ಹೋಗಬೇಕು ಮತ್ತು ಅದು ಕೊನೆಯ ಅಸ್ತ್ರವಾಗಬೇಕು ಎನ್ನುವುದು ಬದುಕಿನ ಮಂತ್ರವಾಗಬೇಕು. ಬ್ಯಾಂಕರುಗಳಿಗೆ ಸಾಲದ ಪೋರ್ಟ್ ಫೋಲಿಯೋ ಹಿಗ್ಗಿದಷ್ಟೂ ಒಳ್ಳೆಯದು. ಆದರೆ, ಎನ್ನ ಸಾಲಗಾರನ ಮಾಡಬೇಡಿರಯ್ಯಾ ಎಂದು ಗ್ರಾಹಕರು ವ್ಯಾಕುಲಗೊಳ್ಳುವಷ್ಟು ಮಿತಿ ಮೀರಬಾರದು. ಆಕಳಕರು ಆಕಳನ್ನು ಹುಡುಕಿಕೊಂಡು ಬರುವಂತೆ, ಸಾಲದ ಅವಶ್ಯಕತೆ ಇದ್ದವರು ಬ್ಯಾಂಕುಗಳನ್ನು, ಹಣ ಕಾಸು ಸಂಸ್ಥೆಗಳನ್ನು ಹುಡುಕಿಕೊಂಡು ಬರುತ್ತಾರೆ.

ವಿಧಿಸುವ ಪ್ರತಿಯೊಂದು ಶರತ್ತುಗಳನ್ನು ಪಾಲಿಸುತ್ತಾರೆ. ಕೇಳಿದ ಪ್ರತಿಯೊಂದು ಕಾಗದಪತ್ರಗಳನ್ನು ಮತ್ತು ದಾಖಲೆಗಳನ್ನು (documents) ನೀಡುತ್ತಾರೆ. ಈ ನಡಾವಳಿ ಸಾಲ ಮರುಪಾವತಿಗೆ ಗ್ರಾಹಕನನ್ನು ಬಂಧಿಸುತ್ತದೆ. ಅವರಲ್ಲಿ ಬ್ಯಾಂಕಿನವರ ಹಣ
ಕಾಸು ಸಹಾಯ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸುತ್ತದೆ. ಬ್ಯಾಂಕುಗಳೇ ಕೇಳಿ, ಒತ್ತಾಯ ಮಾಡಿ ಸಾಲವನ್ನು ನೀಡಿದರೆ, documentation, compilation of terms and conditions ಕಷ್ಟವಾಗುತ್ತದೆ ಎಂದು ಬ್ಯಾಂಕರುಗಳು ಹೇಳುತ್ತಾರೆ. ಗ್ರಾಹಕ ಸಾಲ ವನ್ನು ಮತ್ತು ಅದರ ಮರುಪಾವತಿಯನ್ನು ಲಘುವಾಗಿ ಕಾಣುತ್ತಾನೆ ಎನ್ನುವುದು ಬ್ಯಾಂಕರುಗಳ ಅನುಭವದ ಅನಿಸಿಕೆ.

ಆದರೆ, ಇದಕ್ಕೆ ಬದಲಾಗಿ ಬ್ಯಾಂಕಿನ ವೈಯಕ್ತಿಕ ಹಿತಾಸಕ್ತಿಗಾಗಿ, ಗ್ರಾಹಕ ಹೆಚ್ಚು ಕೇಳದೇ, ಬ್ಯಾಂಕಿನವರೇ ಮುಗಿಬಿದ್ದು, ಸಾಲ ನೀಡಿದರೆ, ಗ್ರಾಹಕನಿಗೆ ಅದರ ಅರ್ಥ ಆಗುವುದಿಲ್ಲ. ಅದರ ಹಿಂದಿನ ಗಂಭೀರತೆ ತಿಳಿಯುವುದಿಲ್ಲ. ಅಂತೆಯೇ ಮರುಪಾವತಿ
ಯೂ ಸುಲಭವಾಗಿ ಬರುವುದಿಲ್ಲ. ಬ್ಯಾಂಕ್ ಮ್ಯಾನೇಜರ್‌ನನ್ನು, ಆ ಸಾಲಗಾರರು, ನಾನೇನೂ ಸಾಲ ಕೊಡಿ ಅಂತ ನಿಮ್ಮನ್ನು ಕೇಳಿರಲಿಲ್ಲ. ನೀವೇ ಮುಗಿಬಿದ್ದು ಸಾಲ ನೀಡಿದ್ದು. ನನ್ನ ಬಳಿ ಹಣ ಇಲ್ಲ.

ನನ್ನ ಕೈಯಲ್ಲಿ ಹಣ ಬಂದಾಗ ನೋಡುತ್ತೇನೆ (ಕೊಡುತ್ತೇನೆ ಎನ್ನುವ ಶಬ್ದ ಬರುವುದಿಲ್ಲ)ಎನ್ನುತ್ತಾರಂತೆ. ಸಾಲ ವಸೂಲಿಗೆ ಸಾಲಗಾರರ ಮನೆಬಾಗಿಲಿಗೆ ಹೋದಾಗ, ಸಾಲಗಾರ ಟಿವಿ ಚಾನೆಲ್‌ನವರನ್ನು ಕರೆಯುತ್ತೇನೆ ಎಂದು ಧಮಕಿ ಹಾಕಿದ
ಉದಾಹರಣೆಯೂ ಇದೆಯಂತೆ. ಕೆಲವು ಪದಾರ್ಥಗಳಿಗೆ, ಸೇವೆಗಳಿಗೆ ಪ್ರಚಾರದ, ಪ್ರಚೋದನೆಯ, ಒತ್ತಡದ ಅವಷ್ಯಕತೆ ಇರುವು
ದಿಲ್ಲ. ಗೃಹೋಪಯೋಗಿ ವಸ್ತುಗಳು, ಪೆಟ್ರೋಲ್, ಔಷಧಗಳಿಗೆ ಪ್ರಚಾರದ ಅವಶ್ಯಕತೆ ಇರುವುದಿಲ್ಲ. ಇವು ನಿತ್ಯ ಜೀವನದ ಅವಶ್ಯಕತೆಗಳ ಭಾಗವಾಗಿದ್ದು, ಹಾಗೆಯೇ ಮಾರಾಟವಾಗುತ್ತವೆ. ಹಣದ, ಸಾಲದ ಅವಶ್ಯಕತೆ ಇದ್ದವನು ತಾನಾಗಿಯೇ ಬ್ಯಾಂಕುಗಳನ್ನು ಹುಡುಕಿಕೊಂಡು ಹೋಗುತ್ತಾನೆ.

ಯುರೋಪ್‌ನ ಕೆಲವು ದೇಶಗಳಲ್ಲಿ ಬ್ಯಾಂಕ್‌ಗಳ ಎದುರು ಒಂದೇ ಒಂದು ಬ್ಯಾಂಕಿನ ಹೆಸರಿರುವ ನಾಮಫಲಕ ಮಾತ್ರ ಇರುತ್ತದೆ. ಯಾವ ಬ್ಯಾಂಕೂ ತನ್ನ ಬ್ಯಾಂಕಿನ ಎದುರಿನಲ್ಲಿ, ಅವರಣದಲ್ಲಿ ತಾನು ನೀಡುವ ಸೇವೆ, ನೀಡುವ ಸೌಲಭ್ಯ(products) ಗಳ ಬಗೆಗೆ ಪೋಸ್ಟರ್ ಮತ್ತು ಭಿತ್ತಿ ಪತ್ರಗಳನ್ನು ಅಂಟಿಸುವುದಿಲ್ಲ. ಗ್ರಾಹಕರು ಸಂಬಂಧಪಟ್ಟ ಅಧಿಕಾರಿಗಳೊಡನೆ ಕುಳಿತು ಚರ್ಚಿಸುತ್ತಾರೆ ಮತ್ತು ಚರ್ಚೆಗೆ ಅನುಗುಣವಾಗಿ ನಿರ್ಣಯಿಸುತ್ತಾರೆ. ಕೇಳದೇ ಸಾಲ ನೀಡಿದರೆ, ಅದು ಉತ್ಪಾದನೆ ಮತ್ತು ಅವಶ್ಯಕತೆಗಳಿಗೆ ಬಳಸದೇ, ಕೊಳ್ಳುಬಾಕ ಹವ್ಯಾಸಕ್ಕೆ ಉಪಯೋಗವಾಗುತ್ತದೆ ಎನ್ನುವುದು ಸಾಮಾನ್ಯ ಅಭಿಪ್ರಾಯ.

ಈ ಪೃವೃತ್ತಿ ಬ್ಯಾಂಕುಗಳಲ್ಲಿ ಅನುತ್ಪಾದಕ ಅಸ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅರ್ಥ ಶಾಸ್ತ್ರ ಜ್ಞರು ಹೇಳುತ್ತಾರೆ.
ಯಾವುದೇ ಕನಸ್ಯೂಮರ್ ಗೂಡ್ಸ್ ಖರೀದಿಯ ಹಿಂದಿನ ಹಣಕಾಸು ವ್ಯವಸ್ಥೆಯನ್ನು ನೋಡಿದಾಗ ಈ ಸತ್ಯದ ಅರಿವು ಆಗುತ್ತದೆ. ಬ್ಯಾಂಕ್ ಸಾಲ ಇಲ್ಲದೇ ಕನ್ಸ್ಯೂಮರ್ ಗೂಡ್ಸ್ ಮಾರಾಟವಾಗುವುದಿಲ್ಲ ಎನ್ನುವುದು ಮಾರುಕಟ್ಟೆಯಲ್ಲಿ ದೃಢವಾಗಿ ಕೇಳುವ
ಮಾತು. ದಶಕಗಳ ಹಿಂದೆ ಬ್ಯಾಂಕ್ ಸಾಲ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಮಾತ್ರ ನೀಡಲಾಗುತ್ತಿತ್ತು.

ಯಾವುದಕ್ಕೆ ಸಾಲ ನೀಡಬೇಕು ಎನ್ನುವ ಲಿಸ್ಟ್ ಗೇಣುದ್ದ ಇರುತ್ತಿತ್ತು. ಇಂದು ಯಾವುದಕ್ಕೆ ಸಾಲ ಇಲ್ಲ ಎನ್ನುವ ಲಿಸ್ಟ್ ಗೇಣುದ್ದ ಇರುತ್ತದೆ. ಅಷ್ಟರ ಮಟ್ಟಿಗೆ ಸಾಲ ಸರ್ವವ್ಯಾಪಿ- ಸರ್ವಾಂತರ ವ್ಯಾಮಿಯಾಗಿದೆ. ಸಾಲವನ್ನು ಬ್ಯಾಂಕಿನವರೇ ಕೇಳಿ ನೀಡಿದರೆ,
ಶರತ್ತುಗಳು ಕಡಿಮೆ ಇರಬಹುದು, ಮರುಪಾವತಿ ಸುಲಭ ಇರಬಹುದು ಮತ್ತು ಬಡ್ಡಿದರ ಕಡಿಮೆ ಇರಬಹುದು ಎನ್ನುವ ಕೆಲವು ಕಲ್ಪನೆಗಳು ಗ್ರಾಹಕರಲ್ಲಿ ಇರುತ್ತದೆ. ಇದು ಒಂದು ರೀತಿಯಲ್ಲಿ ಅರ್ಥ ಶಾಸ್ತ್ರದ ಬೇಡಿಕೆ-ಪೂರೈಕೆ ತತ್ವದಡಿಯಲ್ಲಿ ಇದ್ದು,
ಗ್ರಾಹಕರಿಗೆ ಅನುಕೂಲವಾಗಬಹುದು ಎನ್ನುವ ತಪ್ಪು ಕಲ್ಪನೆ ಕೂಡ ಕೆಲವರಲ್ಲಿ ಇದೆ.

ಆದರೆ, ಸಾಲ ಸಾಲವೇ. ಯಾವುದೇ ವಿನಾಯಿತಿ ಇರುವುದಿಲ್ಲ. ಇದು ಸಾಲವನ್ನು push ಮಾಡುವ ಒಂದು ತಂತ್ರವಷ್ಟೆ.