Friday, 18th October 2024

ಬಿಜೆಪಿ, ಕಾಂಗ್ರೆಸ್‌ಗೆ ಸಿದ್ದರಾಮ ಆತಂಕೋತ್ಸವ

ವರ್ತಮಾನ

maapala@gmail.com

ಕಳೆದ ಎರಡು-ಮೂರು ದಿನಗಳಿಂದ ರಾಜಕೀಯ ವಲಯದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ದಾವಣಗೆರಯಲ್ಲಿ ನಡೆದ ಸಿದ್ದರಾಮೋತ್ಸವದ ಯಶಸ್ಸು ಮತ್ತು ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ನಾಯಕರ ಒಗ್ಗಟ್ಟು ಪ್ರದರ್ಶನ.

ಈ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಉಪಸ್ಥಿತರಿದ್ದುದು ಕಾರಣವಾಗಿರಬಹುದು. ಆದರೆ, ನೆರೆದ ಜನಸ್ತೋಮ ಮಾತ್ರ ಇತರೆ ಪಕ್ಷದವರಿಗೆ ಮಾತ್ರವಲ್ಲ, ಸ್ವತಃ ಕಾಂಗ್ರೆಸ್ಸಿಗರಲ್ಲೇ ಸಿದ್ದರಾಮಯ್ಯ ಅವರ ಬಗ್ಗೆ ಆತಂಕ ಹೆಚ್ಚುವಂತೆ ಮಾಡಿದ್ದಂತೂ ಸತ್ಯ. ಅದರಲ್ಲೂ ಸಿದ್ದರಾಮೋ ತ್ಸವದಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಪ್ರಮುಖರು, ಕಾರ್ಯಕರ್ತ ರಿಂದ ಸಿದ್ದರಾಮಯ್ಯ ಅವರ ಹೆಸರು ಘೋಷಣೆಯಾಗಿ ಗೊಂದಲ ಸೃಷ್ಟಿ ಯಾಗಬಹುದು. ಅದರಿಂದ ಕಾಂಗ್ರೆಸ್ಸನ್ನು ಹಣಿಯಲು ಒಂದಷ್ಟು ಸರಕು ಸಿಗಬಹುದು ಎಂದು ಕಾಯುತ್ತಿದ್ದ ಆಡಳಿತಾರೂಢ ಬಿಜೆಪಿ ಭ್ರಮನಿರಸನ ಗೊಂಡಿದ್ದು ಮಾತ್ರವಲ್ಲ, ನಾಯರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.

ಹೌದು, ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಆಡಳಿತಾ ರೂಢ ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಗೂ ಒಂದು ಸಂದೇಶವನ್ನು ನೀಡಿದೆ. ಅದು ಸಿದ್ದರಾಮಯ್ಯ ಅವರ ಶಕ್ತಿ ಮತ್ತು ಜನಪ್ರಿಯತೆ. ಕಾರ್ಯಕ್ರಮಕ್ಕೆ ಜನರನ್ನು ಸೇರಿಸುವುದು ದೊಡ್ಡ ವಿಷಯ ವೇನೂ ಅಲ್ಲ. ಹಣ ಖರ್ಚು ಮಾಡಿದರೆ ಎಷ್ಟು ಜನರನ್ನು ಬೇಕಾದರೂ ಸೇರಿಸಬಹುದು. ಜನರಿಗೆ ಸಾರಿಗೆ, ಊಟದ ವ್ಯವಸ್ಥೆ ಮಾಡಿ ಕೈಗೆ ಒಂದಷ್ಟು ಹಣ ಇಟ್ಟರೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರುತ್ತಾರೆ.

ಸಿದ್ದರಾಮೋತ್ಸವದಲ್ಲೂ ಅದು ಸ್ವಲ್ಪ ಮಟ್ಟಿಗೆ ಆಗಿರಬಹುದು. ಆದರೆ, ಅಲ್ಲಿ ಸೇರಿದ್ದ ಸಾಕಷ್ಟು ಮಂದಿಯ ‘ಬಾಡಿ
ಲ್ಯಾಂಗ್ವೇಜ್’ ನೋಡಿದರೆ ಅವರೆಲ್ಲರೂ ಕರೆದುಕೊಂಡು ಬಂದವರಲ್ಲ, ತಾವಾಗಿಯೇ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಬಂದಿರುವುದು ಕಂಡುಬರುತ್ತದೆ. ಏಕೆಂದರೆ, ಅಲ್ಲಿ ಸಿದ್ದರಾಮಯ್ಯ ಪರ ಘೋಷಣೆಗಳಿತ್ತೇ ಹೊರತು ಅತಿಯಾದ ಓಲೈಕೆ ಕಾಣಿಸುತ್ತಿರಲಿಲ್ಲ.

ಕಾಂಗ್ರೆಸ್ ವಿಚಾರದಲ್ಲಿ, ಪಕ್ಷ ಅಧಿಕಾರದಲ್ಲಿದ್ದರೆ ಮುಖ್ಯಮಂತ್ರಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಅಧಿಕಾರದಲ್ಲಿ ಇಲ್ಲದಿದ್ದರೆ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಅರ್ಥಾತ್ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ವಾಡಿಕೆ. ಉದಾಹರಣೆಗೆ 2013ರ ವಿಧಾನಸಭೆ ಚುನಾವಣೆಯನ್ನೇ ತೆಗೆದುಕೊಳ್ಳೋಣ. ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೂ ಚುನಾವಣೆ ಎದುರಿಸಿದ್ದು ಕೆಪಿಸಿಸಿ ಅಧ್ಯಕ್ಷರಾಗಿದ್ದ
ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ.

ಅಂದರೆ, 2023ರ ಚುನಾವಣೆಯನ್ನು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಹಮ್ಮಿಕೊಳ್ಳಬೇಕಿತ್ತು. ಅದರೆ, ಮುಂದಿನ ಚುನಾವಣೆ ಯನ್ನು ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಎದುರಿಸೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಘೋಷಿಸಿ ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸೋಣ ಎಂದರೆ ಅಲ್ಲಿ ಸೇರಿದ್ದ ಜನ ಸ್ತೋಮ, ಕಾರ್ಯಕ್ರಮದ ಯಶಸ್ಸು ಯಾವ ಮಟ್ಟಿಗೆ ಸಿದ್ದರಾಮಯ್ಯ ಅವರ ಅನಿವಾರ್ಯತೆಯನ್ನು ಕಾಂಗ್ರೆಸ್‌ಗೆ ತೋರಿಸಿ ಕೊಟ್ಟಿದೆ ಎಂಬುದು ಸಾಬೀತಾಗುತ್ತದೆ.

ಇನ್ನೂ ಒಂದು ಸಂದೇಶ ಡಿ.ಕೆ.ಶಿವಕುಮಾರ್ ಮತ್ತು ಅವರ ಬೆಂಬಲಿಗರಿಗೆ ಸಿಕ್ಕಿದೆ. ಸಿದ್ದರಾಮೋತ್ಸವ ರೀತಿಯಲ್ಲಿ
ಶಿವಕುಮಾರೋತ್ಸವ ಮಾಡಬೇಕು ಎಂದು ಹೇಳುತ್ತಿದ್ದವರಿಗೆ ಎಚ್ಚರಿಕೆಯ ಸಂದೇಶ ಹೋಗಿದೆ. ಒಂದೊಮ್ಮೆ ಸಿದ್ದರಾಮಯ್ಯ ಮತ್ತುಅವರ ಬೆಂಬಲಿಗರಿಗಿಂತ ನಾವೇನು ಕಮ್ಮಿ ಎಂದು ಶಿವಕುಮಾರೋತ್ಸವ ಮಾಡಲು ಹೊರಟರೆ ಅಪಾಯಕ್ಕೆ ಸಿಕ್ಕಿಕೊಳ್ಳಬೇಕಾಗುತ್ತದೆ. ಒಂದೊಮ್ಮೆ ಬೆಂಬಲಿಗರ ಬಲವಂತಕ್ಕೆ ಶಿವಕುಮಾರ್ ಒಪ್ಪಿ, ಶಿವಕುಮಾರೋತ್ಸವ ನಡೆಸಲು
ಒಪ್ಪಿದರೆ, ಆ ಕಾರ್ಯಕ್ರಮ ನಡೆದು ಸಿದ್ದರಾಮೋತ್ಸವದಷ್ಟು ಯಶಸ್ವಿ ಆಗದೇ ಇದ್ದರೆ ಅಲ್ಲಿಗೆ ಡಿ.ಕೆ.ಶಿವಕುಮಾರ್ ಸೋತ ರೆಂದೇ ಅರ್ಥ.

ಹೀಗಾಗಿ ಶಿವಕುಮಾರೋತ್ಸವದ ಮೂಲಕ ತಮ್ಮ ನಾಯಕನನ್ನು ಆರಾಧಿಸಲು ಹೊರಟವರಿಗೆ ಸಿದ್ದರಾಮೋತ್ಸವ ಎಚ್ಚರಿಕೆಯ ಗಂಟೆಯಾಗಿದೆ. ಈ ಯಶಸ್ಸನ್ನು ನೋಡಿ ಅವರಾರೂ ಇನ್ನು ಶಿವಕುಮಾರೋತ್ಸವ ಮಾಡುವ ಬಗ್ಗೆ ಯೋಚಿಸುವುದೂ ಕೂಡ ಎಂದು ಕಾಣಿಸುತ್ತದೆ. ಬಿಜೆಪಿ ವಿಚಾರಕ್ಕೆ ಬಂದರಂತೂ ಸಿದ್ದರಾಮೋತ್ಸವ, ಪಕ್ಷಕ್ಕೆ ಹಲವು ಎಚ್ಚರಿಕೆ ನೀಡಿದೆ. ಹೋದಲ್ಲೆಲ್ಲಾ ಟೀಕಿಸುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಪೋಸ್ಟ್ ಹಾಕುತ್ತಾ ಇದ್ದರೆ ಸಿದ್ದರಾಮಯ್ಯ ಅವರ ಜನಪ್ರಿಯತೆ, ಶಕ್ತಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.

ಅವರ ಶಕ್ತಿ ಕಡಿಮೆ ಮಾಡಬೇಕಾದರೆ ಸಂಘಟನೆ ಬಲಪಡಿಸಬೇಕು. ಅದಕ್ಕಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಇತರೆ ನಾಯಕರಂತೆ ಸಿದ್ದರಾಮಯ್ಯ ಕೂಡ ಒಬ್ಬ ನಾಯಕ ಅಲ್ಲ. ಅವರ ಹಿಂದೆ ಬೆಂಬಲಿಗರ ಪಡೆಯೇ ಇದೆ. ಅದರಲ್ಲೂ ಕುರುಬ ಸಮುದಾಯ ತಮ್ಮ ನಾಯಕನನ್ನಾಗಿ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ಇವರೊಂದಿಗೆ ಇತರೆ ಹಿಂದುಳಿದ ವರ್ಗದವರೂ ಇದ್ದಾರೆ. ಈ ಸಮುದಾಯದ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂಬ ಸಂದೇಶವನ್ನು ಬಿಜೆಪಿಗೆ ನೀಡಿದೆ.

ಸಿದ್ದರಾಮಯ್ಯ ಅವರ ಜನ್ಮದಿನವನ್ನು ಅವರ ಬೆಂಬಲಿಗರು ಸಿದ್ದರಾಮೋತ್ಸವ ಎಂದು ಆಚರಿಸುವುದಾಗಿ ಘೋಷಿಸಿದ ಬಳಿಕ ಬಿಜೆಪಿ ನಾಯಕರು ಆ ಬಗ್ಗೆ ಟೀಕಿಸುತ್ತಲೇ ಇದ್ದರು. ಇಲ್ಲಿ ವ್ಯಕ್ತಿ ಪೂಜೆ ನಡೆಯುತ್ತಿದೆ. ಜನರು ವ್ಯಕ್ತಿಪೂಜೆಯನ್ನು ಬೆಂಬಲಿಸುವು ದಿಲ್ಲ ಎನ್ನುತ್ತಿದ್ದರು. ರಾಜ್ಯದಲ್ಲಿ ಮಳೆ, ಪ್ರವಾಹ ಬಂದು ಜನತೆ ಸಂಕಷ್ಟದಲ್ಲಿರುವಾಗ ಇಂತಹ ಉತ್ಸವಗಳು ಬೇಕಿತ್ತಾ ಎಂದು ಪ್ರಶ್ನಿಸಿದ್ದರು. ಈ ಎಲ್ಲದಕ್ಕೂ ಸಿದ್ದರಾಮೋತ್ಸವ ಉತ್ತರ ನೀಡಿದೆ. ಒಂದು ಹಂತದಲ್ಲಿ ಬಿಜೆಪಿಯ ಈ ಟೀಕೆ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ತಟ್ಟಿದೆ.

ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಟೀಕೆ, ವ್ಯಂಗ್ಯಗಳಿಗೆ ಸಿದ್ದರಾಮೋತ್ಸವದಲ್ಲಿ ಒಂದಷ್ಟು ಸರಕು ಸಿಗಬಹುದು
ಎಂಬ ಬಿಜೆಪಿಯ ನಿರೀಕ್ಷೆಯೂ ಸುಳ್ಳಾಗಿದೆ. ರಾಹುಲ್ ಗಾಂಧಿ ಸೂಚನೆ ಕೊಟ್ಟ ಮೇಲೆ ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್ ತಬ್ಬಿಕೊಂಡಿದ್ದರಿಂದ ಇದು ನಕಲಿ ಒಗ್ಗಟ್ಟು ಎಂದು ಟೀಕಿಸಲು, ರಾಹುಲ್ ಗಾಂಧಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ವೇಳೆ ಆದ ಅವಾಂತರಗಳು, ರಾಹುಲ್ ತೀರ್ಥ ತೆಗೆದುಕೊಳ್ಳುವ ವೀಡಿಯೋಗಳಂಥ ಸಣ್ಣ ಪುಟ್ಟ ಅವಾಂತರಗಳು ಮಾತ್ರ ಸಿಕ್ಕಿವೆಯೇ ಹೊರತು ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆಯಾಗುವ ಯಾವೊಂದು ಬೆಳವಣಿಗೆ ನಡೆಯಲಿಲ್ಲ.

ಸಿದ್ದರಾಮೋತ್ಸವದ ಬಗ್ಗೆ ಬಿಜೆಪಿಯವರು ಏನೇ ಟೀಕೆ ಮಾಡುತ್ತಿರಲಿ, ಅವರಲ್ಲಿ ಆತಂಕ ಮೂಡಿದ್ದಂತೂ ಸತ್ಯ ಎಂಬುದು ಕಳೆದ ಎರಡು-ಮೂರು ದಿನಗಳ ಬೆಳವಣಿಗೆಗಳಿಂದ ಗೊತ್ತಾಗುತ್ತಿದೆ. ಕಾರ್ಯಕ್ರಮದ ಯಶಸ್ಸು, ಅಲ್ಲಿ ಸೇರಿದ್ದ ಜನರ ಬಗ್ಗೆಯೇ ನಾಯಕರ ಮಟ್ಟದಲ್ಲಿ ಸಮಾಲೋಚನೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ವಿರುದ್ಧದ ವೈಯಕ್ತಿಕ ಟೀಕೆಗಳೂ ಕಡಿಮೆ ಯಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣಾ ಚಾಣಕ್ಯ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದಾಗಲೂ ಅವರೊಂದಿಗೆ ಸಿದ್ದರಾಮೋತ್ಸವದ ಬಗ್ಗೆ ಚರ್ಚೆಯಾಗಿದೆ ಎಂದರೆ ಪಕ್ಷದ ನಾಯಕರು ಎಷ್ಟು ಆತಂಕ ಗೊಂಡಿದ್ದಾರೆ ಎಂಬುದು ಗೊತ್ತಾಗು ತ್ತದೆ.

ಹೀಗಾಗಿ ಬಿಜೆಪಿ ಈಗ ತನ್ನ ರಾಜಕೀಯ ರಣತಂತ್ರಗಳಲ್ಲಿ ಪರಿವರ್ತನೆ ಮಾಡಿಕೊಳ್ಳಲು ಯೋಚಿಸುವಂತಾಗಿದೆ. ಕೇವಲ
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾ, ಬಿಜೆಪಿ ಮತ್ತು ಸರಕಾರದ ಆಡಳಿತವನ್ನು ಸಮರ್ಥಿಸಿಕೊಳ್ಳುತ್ತಾ
ಕಾಲ ಕಳೆದರೆ ಅದರಿಂದ ಪ್ರಯೋಜನವಿಲ್ಲ. ಉತ್ತಮ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಬೇಕು. ಕಾರ್ಯಕರ್ತರಿಗೆ ಉತ್ಸಾಹ ತುಂಬಿ ಪಕ್ಷ ಸಂಘಟನೆ ಮಾಡಲೇ ಬೇಕು ಎಂಬ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕಾದ ಅನಿವಾರ್ಯ ವನ್ನು ಸೃಷ್ಟಿಸಿದೆ.

ಹಾಗೆಂದು ಬಿಜೆಪಿ ಹೆದರಿಕೊಂಡಿದೆ ಎಂದರೆ ಅದಕ್ಕಿಂತ ದೊಡ್ಡ ಜೋಕ್ ಬೇರೊಂದಿಲ್ಲ. ಏಕೆಂದರೆ, ಆ ಪಕ್ಷಕ್ಕೆ ತಳ ಮಟ್ಟ
ದಲ್ಲಿ ಸಂಘ ಪರಿವಾರದ ಶಕ್ತಿ ಇದೆ. ಮೇಲಿನ ಹಂತದಲ್ಲಿ ಅಮಿತ್ ಶಾ, ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಭೂಪೇಂದ್ರ ಯಾದವ್ ಅವರಂತಹ ಚುನಾವಣಾ ತಂತ್ರಗಾರಿಕೆಯ ದೊಡ್ಡ ತಂಡವೇ ಇದೆ. ರಾಜ್ಯದಲ್ಲೂ ಬಿ.ಎಸ್.ಯಡಿಯೂರಪ್ಪರಂಥ ಜನ ನಾಯಕರಿದ್ದಾರೆ. ಬಹುಷಃ ಸಿದ್ದರಾಮಯ್ಯ ಅವರನ್ನು ಎದುರಿಸಬೇಕಾದರೆ ಈಗ ಯಡಿಯೂರಪ್ಪ ಅವರ ಸಂಪೂರ್ಣ ಸಹಕಾರ ಬೇಕೇ ಬೇಕು. ಜತೆಗೆ ವರಿಷ್ಠರು ರೂಪಿಸುವ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತರುವಂತಹ ಎರಡನೇ ಹಂತದ ನಾಯಕರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.

ರಾಜ್ಯ ಬಿಜೆಪಿಯಲ್ಲಿರುವ ನಾಯಕರು ವೈಯಕ್ತಿಕ ಪ್ರತಿಷ್ಠೆ, ಇನ್ನೊಬ್ಬ ನಾಯಕನ ವಿರುದ್ಧ ಇರುವ ಅಸಮಾಧಾನವನ್ನು ಬದಿಗಿಟ್ಟು ಕೆಲಸ ಮಾಡಬೇಕು. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಬಿಜೆಪಿಯ ರಾಜ್ಯ ನಾಯಕರು ಹೇಗೆ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಲಾಸ್ಟ್ ಸಿಪ್: ಎದುರಾಳಿ ಸಮರ್ಥನಿದ್ದಾಗ ಆತನ ವಿರುದ್ಧ ಹೋರಾಟದಲ್ಲಿ ಗೆಲ್ಲಬೇಕಾದರೆ ಸಮರ್ಥರನ್ನೇ ಮುಂದೆ ಬಿಡಬೇಕು.