ಜಸ್ಟಿಸ್ ಲಲಿತ್ ಅವರಿದ್ದ ನ್ಯಾಯಪೀಠ ಪೋಕ್ಸೋ ಕಾಯಿದೆಯ ಒಂದು ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ನಡೆಯುವ ಲೈಂಗಿಕ ಅಪರಾಧ ಕೇಸುಗಳನ್ನು ಇತ್ಯರ್ಥಪಡಿಸುವಾಗ ಬಾಧಿತ ವ್ಯಕ್ತಿ ಮತ್ತು ಆರೋಪಿಯ ನಡುವೆ ಯಾವುದೇ ದೈಹಿಕ ಸ್ಪರ್ಶ ಇರಲೇಬೇಕೆಂಬ ಕಡ್ಡಾಯವೇನಿಲ್ಲ ಎಂಬ ತೀರ್ಪನ್ನು ಕೊಟ್ಟಿದ್ದರು. ಬಾಂಬೆ ಹೈಕೋರ್ಟಿನ ಒಂದು ಪ್ರಕರಣವನ್ನು ನಿದರ್ಶನವಾಗಿಟ್ಟುಕೊಂಡು ಅತ್ಯುನ್ನತ ನ್ಯಾಯಾಲಯ ತಳೆದ ಅಭಿಪ್ರಾಯ ವಿಚಾರಾರ್ಹವಾಗಿತ್ತು. ಈ ಕಾಯಿದೆ ಇರುವುದು ಮಕ್ಕಳ ರಕ್ಷಣೆಗಾಗಿ, ಅವರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ತಪ್ಪಿಸುವ ಸಲುವಾಗಿ. ಈ ರೀತಿಯ ಸಂಕೀರ್ಣ ವ್ಯಾಖ್ಯಾನಗಳನ್ನು ಮಾಡುತ್ತ ಹೋದರೆ ಕಾಯಿದೆಯ ಮೂಲ ಉದ್ದೇಶಕ್ಕೇ ಧಕ್ಕೆಯಾಗಬಹುದು ಎಂಬ ಅಭಿಪ್ರಾಯವೂ ಬಂದಿತ್ತು.
ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ದೇಶವೇ ತತ್ತರಗೊಂಡಿತ್ತು. ಸರ್ವೋಚ್ಚ ನ್ಯಾಯಾಲಯದ ಕಾರ್ಯನಿರ್ವಹಣೆ ಕೂಡ 2021ರಲ್ಲಿ ಏಳುತಿಂಗಳ ಕಾಲ ಆನ್ಲೈನ್ ಮೂಲಕವೇ ನಡೆದಿದ್ದವು. ದೈಹಿಕವಾಗಿ ಮುಖಾಮುಖಿಯಾಗುವ ಸಂದರ್ಭ ವೇ ಇರಲಿಲ್ಲ. ಕಳೆದ ಅಕ್ಟೋಬರ್’ನಲ್ಲಿ ಕೋರ್ಟುಗಳಿಗೆ ಜನರ ಪ್ರವೇಶ ಮುಕ್ತಗೊಳಿಸಿದಾಗ ಎಡೆಗ್ಲಾಸ್ ತಡೆಗೋಡೆಗಳ ನಿರ್ಮಾಣ ಮಾಡಲಾಗಿತ್ತು, ಆಗಮಿಸುವ ಜನರ ಸಂಖ್ಯೆಯ ಬಗ್ಗೆಯೂ ನಿಯಂತ್ರಣವಿತ್ತು, ಜತೆಗೆ ಕಡ್ಡಾಯ ನಿಯಮ ಪಾಲನೆ ಕೂಡ ಅಗತ್ಯವಾಗಿತ್ತು.
2021ರ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಸುಪ್ರೀಂ ಕೋರ್ಟಿನ ಒಬ್ಬ ನ್ಯಾಯಾಧೀಶರು 42 ದಿನಗಳ ಕಾಲ 16 ರಾಜ್ಯಗಳಲ್ಲಿ ಸಂಚರಿಸಿ ದರು. ಲಢಾಕ್ನಿಂದ ಕನ್ಯಾಕುಮಾರಿಯ ತನಕ, ಕಛ್ನಿಂದ ಮಿಝೋ ರಾಮ್ ತನಕ, ಎಡೆ ಅವರು ಸಂಚರಿಸಿದ್ದರು. ಭಾರತದ ಅತ್ಯಂತ ದುರ್ಗಮ ಪ್ರದೇಶಗಳಿಗೂ ಅವರು ಹೋಗಿಬಂದರು. ಜನರಿಗೆ ಕಾನೂನು ನೆರವನ್ನು ಸುವ್ಯವಸ್ಥಿತವಾಗಿ ಒದಗಿಸುವುದು ಅವರ ಈ ಪ್ರಯಾಣದ ಮುಖ್ಯ ಉದ್ದೇಶವಾಗಿತ್ತು. ಅವರು ಬೇರಾರೂ ಅಲ್ಲ, ಸುಪ್ರೀಂ ಕೋರ್ಟಿನ ಜಸ್ಟಿಸ್ ಉದಯ್ ಯು.ಲಲಿತ್. ಅವರೀಗ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗಳಾಗಿ ನಿಯುಕ್ತರಾಗಿದ್ದಾರೆ.
ಪ್ರಾರಂಭದ ದಿನಗಳು
1957ರಲ್ಲಿ ಜನಿಸಿದ ಜಸ್ಟಿಸ್ ಲಲಿತ್ ತಂದೆ ಖ್ಯಾತ ಕ್ರಿಮಿನಲ್ ವಕೀಲರಾಗಿದ್ದ ಯು.ಆರ್.ಲಲಿತ್. ಅವರು ಬಾಂಬೆ
ಹೈಕೋರ್ಟಿನಲ್ಲಿ ನ್ಯಾಯಾಧೀಶರೂ ಆಗಿದ್ದವರು. ತಂದೆಯ ಹಾದಿಯ ಸಾಗಿ 1983ರಲ್ಲಿ ವಕೀಲರಾಗಿ ನೋಂದಾವಣೆ ಗೊಂಡ ಜಸ್ಟಿಸ್ ಲಲಿತ್ 1985ರ ತನಕ ಬಾಂಬೆ ಹೈಕೋರ್ಟಿನಲ್ಲಿ ವಕೀಲಿಕೆ ಮಾಡಿದ್ದರು. ನಂತರ ಅವರು ದೆಹಲಿಗೆ ಸ್ಥಳಾಂತರ ಗೊಂಡರು. ಅಟಾರ್ನಿ ಜನರಲ್ ಆಗಿ ಖ್ಯಾತರಾದ ಸೋಲಿ ಸೊರಾಬ್ಜಿಯವರ ಜತೆ 1986 ಮತ್ತು 1992ರ ನಡುವೆ ಅವರು ಕೆಲಸ ಮಾಡುವ ಅವಕಾಶ ಪ್ರಾಪ್ತವಾಯಿತು. 2004ರಲ್ಲಿ ಲಲಿತ್ ಅವರು ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿಯಾಗಿ ಗುರುತಿಸಿಕೊಂಡರು.
ವಕೀಲರಾಗಿ ಜಸ್ಟಿಸ್ ಲಲಿತ್, ತಾವು ವಹಿಸಿಕೊಂಡ ಪ್ರಕರಣದ ಸಾದ್ಯಂತ ಮಾಹಿತಿ ಪ್ರಸ್ತುತ ಪಡಿಸುವಲ್ಲಿ ಹೆಸರಾಗಿದ್ದವರು.
ಅದಕ್ಕೆ ಬಹುಮುಖ್ಯ ಕಾರಣ ಅವರಲ್ಲಿದ್ದ ಅಪಾರವಾದ ತಾಳ್ಮೆ. ಸುಪ್ರೀಂ ಕೋರ್ಟಿನ ಮುಂದೆ ಅವರು ಮಾಡುತ್ತಿದ್ದ ವಾದ ಮಂಡನೆಯೂ ವಿಶೇಷವಾಗಿರುತ್ತಿತ್ತು. ಕ್ಲಿಷ್ಟಕರವಾದ ಮತ್ತು ಸಂವೇದನಾಶೀಲ ಪ್ರಕರಣಗಳಲ್ಲಿ ವಾದ ಮಾಡುವಾಗ ಯಾವುದೇ ಭಾವಾತಿರೇಕಗಳಿಗೆ ಒಳಗಾಗದೇ ಅವರು ವಾದ ಮಾಡುತ್ತಿದ್ದ ಚರ್ಯೆ ಎಲ್ಲರ ಗಮನ ಸೆಳೆದಿತ್ತು. ಪಂಜಾಬಿನ ಪೂರ್ವ ಮುಖ್ಯಮಂತ್ರಿ ಅಮರಿಂದರ್ಸಿಂಗ್ ಸೇರಿದಂತೆ ಹಲವಾರು ರಾಜಕಾರಣಿಗಳಿಗೆ, ಸಲ್ಮಾನ್ ಖಾನ್ ಸೇರಿದಂತೆ ಹಲವು ಚಿತ್ರನಟರಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ವಕೀಲರಾಗಿ ಲಲಿತ್ ಅವರು ನಡೆದುಕೊಂಡ ರೀತಿ ದೇಶದ ಗಮನ ಸೆಳೆದಿತ್ತು.
ಅವರ ಸಾಮರ್ಥ್ಯ ಮತ್ತು ಸಮಗ್ರತೆಗಳನ್ನು ಗಮನಿಸಿದ ಸುಪ್ರೀಂ ಕೋರ್ಟು 2011ರಲ್ಲಿ ಅವರನ್ನು 2ಜಿ ಸ್ಪೆಕ್ಟಮ್ ಪ್ರಕರಣದಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸೆಕ್ಯೂಟರ್ ಆಗಿ ನೇಮಕ ಮಾಡಿತು. ನ್ಯಾಯೋಚಿತ ಕಾನೂನು ನಡವಳಿಕೆ ನಡೆಯ ಬೇಕೆನ್ನುವುದು ಈ ನೇಮಕದ ಹಿಂದಿನ ಉದ್ದೇಶವಾಗಿತ್ತು. ಕೇಂದ್ರ ಸರಕಾರ ಬೇರೊಬ್ಬ ವ್ಯಕ್ತಿಯನ್ನು ಆ ಸ್ಥಾನಕ್ಕೆ ನೇಮಕ ಮಾಡಬೇಕೆಂಬ ಪ್ರಸ್ತಾಪ ಮುಂದಿಟ್ಟಾಗ ಸುಪ್ರೀಂ ಕೋರ್ಟು ಅದನ್ನು ನಿರಾಕರಿಸಿದ್ದಲ್ಲದೇ ಹಿರಿಯ ವಕೀಲರಾದ ಲಲಿತ್ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪರ ವಕಾಲತ್ತು ವಹಿಸುವ ಜವಾಬ್ದಾರಿಯನ್ನೂ ಕೊಡಲಾಯ್ತು.
ಹಲವಾರು ಪ್ರಕರಣಗಳಲ್ಲಿ ನ್ಯಾಯಾಧೀಕರಣದ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದ ಲಲಿತ್ ಅವರು ಎರಡು ಅವಧಿಗೆ ಸುಪ್ರೀಂ ಕೋರ್ಟಿನ ಕಾನೂನು ಸೇವಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ನ್ಯಾಯಾಧೀಶರಾಗಿ
ಆಗಸ್ಟ್ 2014ರಲ್ಲಿ, ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ಬಡ್ತಿ ಪಡೆದ ಲಲಿತ್ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ
ನೇರವಾಗಿ ಅತ್ಯುನ್ನತ ನ್ಯಾಯಾಲಯದಿಂದ ನೇರ ನೇಮಕವಾದ ಆರನೇ ನ್ಯಾಯಾಧೀಶರೆಂಬ ಅಭಿದಾನಕ್ಕೆ ಪಾತ್ರರಾದರು. ಈ ಹುದ್ದೆಯ ಪ್ರಾರಂಭದ ದಿನಗಳಿಂದಲೇ ಅವರು ಅಳಿಸಲಾಗದ ಮಹತ್ವಪೂರ್ಣ ಮತ್ತು ಚರಿತ್ರಾರ್ಹ ದಾಖಲೆಗಳನ್ನು ಮಾಡುತ್ತ ಬಂದರು.
ಸುಪ್ರೀಂ ಕೋರ್ಟ್ ಸಮುಚ್ಚಯದ ಒಂದು ಮೂಲೆಯಲ್ಲಿ ಸದ್ದಿಲ್ಲದೇ ತಮ್ಮ ಕಾರ್ಯದಲ್ಲಿ ತೊಡಗಿರುತ್ತಿದ್ದ ಲಲಿತ್ ಮತ್ತು ಅವರ ಜತೆಗಾರರಾಗಿದ್ದ ಜಸ್ಟಿಸ್ ಆದರ್ಶ ಕೆ.ಗೋಯಲ್ ಅವರ ನ್ಯಾಯಪೀಠ ಹಲವು ಮಹತ್ವಪೂರ್ಣ ತೀರ್ಪುಗಳಿಗೆ ಸಾಕ್ಷಿಯಾ ಯಿತು.
2017ರಲ್ಲಿ ಜಾರಿ ಮಾಡಲ್ಪಟ್ಟ ಒಂದು ಚರಿತ್ರಾರ್ಹ ತೀರ್ಪಿನ ಮೂಲಕ ಕೋರ್ಟ್ ಹಾಲ್ಗಳಿಗೆ ಕ್ಯಾಮೆರಾಗಳನ್ನು ತರುವಲ್ಲಿದ್ದ ಅದೆಷ್ಟೋ ವರ್ಷಗಳ ನಿರ್ಬಂಧವನ್ನು ಮುರಿದು ಮೊದಲಬಾರಿಗೆ ದೇಶದ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕನಿಷ್ಠ ಎರಡು ಜಿಲ್ಲಾ ನ್ಯಾಯಾಲಯಗಳಲ್ಲಿ ಸಿಸಿಟಿವಿ ಅಳವಡಿಕೆಗೆ ದಾರಿಕೊಟ್ಟರು.
2017ರ ಜಾರಿಯಾದ ಇನ್ನೊಂದು ತೀರ್ಪಿನ ಮೂಲಕ ಎಲ್ಲ ಪ್ರಕರಣಗಳ, ವಿಶೇಷತಃ ಜಾಮೀನು ಪ್ರಕರಣಗಳ ತ್ವರಿತ
ವಿಲೆವಾರಿಗೆ ಒತ್ತುಕೊಡಲಾಯ್ತು. ಸಮಾಜದ ಸೇವೆಗೆ ನ್ಯಾಯಾಂಗ ವ್ಯವಸ್ಥೆ ಒಂದು ಉದ್ದೇಶವನ್ನು ಒದಗಿಸುವ ಅಂಗ. ಈ ಉದ್ದೇಶ ಈಡೇರದೇ ಇದ್ದಲ್ಲಿ, ಪ್ರಕರಣದ ದೂರುದಾರ ನ್ಯಾಯಕ್ಕಾಗಿ ದೀರ್ಘಕಾಲ ಸರತಿಸಾಲಿನಲ್ಲಿ ಕಾಯಬೇಕಾದ ಪ್ರಸಂಗ ಎದುರಾದರೆ ಅದಕ್ಕಿಂತ ದೊಡ್ಡ ಪ್ರಮಾದ ಇನ್ನೊಂದಿಲ್ಲ ಎಂಬುದು ಅವರ ವಾದಮಂಡನೆಯಾಗಿತ್ತು.
ಜುಲೈ-2017ರಲ್ಲಿ ಜಸ್ಟಿಸ್ ಲಲಿತ್ ಅವರಿದ್ದ ನ್ಯಾಯಪೀಠ ವರದಕ್ಷಿಣೆ ವಿರುದ್ಧದ ಪ್ರಕರಣಗಳಲ್ಲಿ ತ್ವರಿತ ದಸ್ತಗಿರಿಗೆ ಒತ್ತು
ನೀಡುವ ತೀರ್ಪನ್ನು ಕೊಟ್ಟಿತ್ತು. ಭಾರತೀಯ ದಂಡಸಂಹಿತೆಯ ವಿಧಿ 498ಎ ಅಡಿಯಲ್ಲಿ ವರದಕ್ಷಿಣೆಗಾಗಿ ನಡೆಯುವ ಕ್ರೌರ್ಯದ ವಿಚಾರ ಬಂದಾಗ ಅದು ಸಾಮಾನ್ಯ ಪ್ರಕರಣವೆಂದು ಪರಿಗಣಿಸಲಾಗದು. ಮುಗ್ಧಜನರ ಮಾನವಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂಬ ತೀರ್ಪು ಅವರದಾಗಿತ್ತು. ಪ್ರತಿ ಜಿಲ್ಲೆಯಲ್ಲೂ ಕುಟುಂಬ ಕಲ್ಯಾಣ ಸಮಿತಿಗಳ ರಚನೆ ಯಾಗಬೇಕು ಮತ್ತು ಪೋಲೀಸರಿಗೆ ಅಥವಾ ಕೋರ್ಟಿನ ಮುಂದೆ ಬರುವ ಫಿರ್ಯಾದುಗಳನ್ನು ಈ ಸಮಿತಿಯ ಅವಗಾಹನೆಗೆ ತರತಕ್ಕದ್ದು ಎಂಬ ಅಂಶವನ್ನು ಅವರು ಎತ್ತಿಹಿಡಿದಿದ್ದರು.
ಇನ್ನೊಂದು ಚರಿತ್ರಾರ್ಹ ತೀರ್ಪು ಆಗಸ್ಟ್ 22, 2017ರಲ್ಲಿ ಹೊರಬಿತ್ತು. ಅದರಂತೆ ತ್ರಿವಳಿ ತಲಾಖ್ ಕುರಿತಾಗಿ ಮಹತ್ವದ ತೀರ್ಪನ್ನು ಅವರು ಕೊಟ್ಟಿದ್ದರು. ಐದು ಜನರಿದ್ದ ನ್ಯಾಯಪೀಠದಲ್ಲಿ ಜಸ್ಟಿಸ್ ಲಲಿತ್ ಕೂಡ ಒಬ್ಬರಾಗಿದ್ದರು. ಮುಸ್ಲಿಂ ವೈಯ್ಯಕ್ತಿಕ ಕಾಯಿದೆ (ಶರಿಂಜಿಢಜಿತ್) 1937ರ ವಿಧಿ-2ರಲ್ಲಿರುವ ವಿಚ್ಛೇದನ ಕುರಿತಾದ ಉಲ್ಲೇಖಗಳನ್ನು ಅನೂರ್ಜಿತ ಎಂದು ಪರಿಗಣಿಸ ತಕ್ಕದ್ದು ಎಂದು ಜಸ್ಟಿಸ್ ಲಲಿತ್ ಅವರು ಜಸ್ಟಿಸ್ ಆರ್.ಎಫ್.ನಾರಿಮನ್ ಮತ್ತು ಕುರಿಯನ್ ಜೋಸೆಫ್ ಜೊತೆಗೂಡಿ ತೀರ್ಪು ಕೊಟ್ಟಿದ್ದರು.
ನವೆಂಬರ್ 2021ರಲ್ಲಿ ಜಾರಿಯಾದ ಇನ್ನೊಂದು ಚರಿತ್ರಾರ್ಹ ತೀರ್ಪು ವಿಶೇಷವಾದದ್ದು. ಜಸ್ಟಿಸ್ ಲಲಿತ್ ಅವರಿದ್ದ ನ್ಯಾಯ ಪೀಠ ಪೋಕ್ಸೋ ಕಾಯಿದೆಯ ಒಂದು ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ನಡೆಯುವ ಲೈಂಗಿಕ ಅಪರಾಧ ಕೇಸುಗಳನ್ನು ಇತ್ಯರ್ಥಪಡಿಸುವಾಗ ಬಾಧಿತ ವ್ಯಕ್ತಿ ಮತ್ತು ಆರೋಪಿಯ ನಡುವೆ ಯಾವುದೇ ದೈಹಿಕ ಸ್ಪರ್ಶ ಇರಲೇಬೇಕೆಂಬ ಕಡ್ಡಾಯ ವೇನಿಲ್ಲ ಎಂಬ ತೀರ್ಪನ್ನು ಕೊಟ್ಟಿದ್ದರು.
ಬಾಂಬೆ ಹೈಕೋರ್ಟಿನ ಒಂದು ಪ್ರಕರಣವನ್ನು ನಿದರ್ಶನವಾಗಿಟ್ಟುಕೊಂಡು ಅತ್ಯುನ್ನತ ನ್ಯಾಯಾಲಯ ತಳೆದ ಅಭಿಪ್ರಾಯ ವಿಚಾರಾರ್ಹವಾಗಿತ್ತು. ಈ ಕಾಯಿದೆ ಇರುವುದು ಮಕ್ಕಳ ರಕ್ಷಣೆಗಾಗಿ, ಅವರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ತಪ್ಪಿಸುವ ಸಲುವಾಗಿ. ಈ ರೀತಿಯ ಸಂಕೀರ್ಣ ವ್ಯಾಖ್ಯಾನಗಳನ್ನು ಮಾಡುತ್ತ ಹೋದರೆ ಕಾಯಿದೆಯ ಮೂಲ ಉದ್ದೇಶಕ್ಕೇ ಧಕ್ಕೆಯಾಗಬಹುದು ಎಂಬ ಅಭಿಪ್ರಾಯವೂ ಬಂದಿತ್ತು.
ಜಸ್ಟಿಸ್ ಲಲಿತ್ ಅವರ ನೇತೃತ್ವದ ನ್ಯಾಯಪೀಠ ಸ್ವಯಂಪ್ರೇರಿತವಾಗಿ ವಿಚಾರವೊಂದನ್ನು ಎತ್ತಿಕೊಂಡು ದೇಶದಲ್ಲಿ ಮರಣ ದಂಡನೆ ಪ್ರಕರಣಗಳನ್ನು ನ್ಯಾಯಾಲಯಗಳು ಕೈಬಿಟ್ಟಿವೆ, ಈ ನಿಟ್ಟಿನಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯದಾನ ಮಾಡುವ ತ್ವರಿತ ಕ್ರಮಕ್ಕೆ ಮುಂದಾಗಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮರಣದಂಡನೆಗೆ ಒಳಗಾಗಬೇಕಾದ ವ್ಯಕ್ತಿಯ
ಸಾಮಾಜಿಕ ಆರ್ಥಿಕ, ಮಾನಸಿಕ ಮತ್ತು ಮನೋವೈಜ್ಞಾನಿಕ ಸ್ಥಿತಿಯನ್ನು ಅರಿತುಕೊಂಡು ಕ್ರಮಜರುಗಿಸುವ ಒಂದು ಪ್ರಕ್ರಿಯೆ
ಅಸ್ತಿತ್ವಕ್ಕೆ ಬರಬೇಕು ಎಂದೂ ಅಭಿಪ್ರಾಯಿಸಿತು.
ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಗೆ ಇರುವ 2005ರ ಕಾಯಿದೆಯ ಕುರಿತಾಗಿ ತಮ್ಮ ಮುಂದೆ ಬಂದಿದ್ದ ಒಂದು
ಸಾರ್ವಜನಿಕ ಹಿತಾಸಕ್ತಿ ದೂರನ್ನು ಪರಿಗಣಿಸಿದ ಜಸ್ಟಿಸ್ ಲಲಿತ್ ಅವರ ಪೀಠ, ಕ್ರೌರ್ಯ ಮತ್ತು ಶೋಷಣೆಗೆ ಒಳಗಾದ ಮಹಿಳೆ
ಯರಿಗೆ ರಕ್ಷಣೆ ಕೊಡುವ ವ್ಯವಸ್ಥೆ, ವಸತಿಗೆ ಸೂರುಕೊಡುವ ವ್ಯವಸ್ಥೆಯ ಬಗ್ಗೆಯೂ ತೀರ್ಪಿತ್ತು ತಮ್ಮ ಕಾಳಜಿಯನ್ನು ವ್ಯಕ್ತ ಪಡಿಸಿದ್ದರು.
ಕಾನೂನು ಸುಧಾರಣೆ
ಮೇ-2021ರಲ್ಲಿ ಜಸ್ಟಿಸ್ ಲಲಿತ್ ಅವರು ನ್ಯಾಶನಲ್ ಲೀಗಲ್ ಸರ್ವಿಸ್ ಅಥಾರಿಟಿ (ನಾಲ್ಸಾ) ಕಾರ್ಯಕಾರಿ ಅಧ್ಯಕ್ಷರಾಗಿ
ನೇಮಕಗೊಂಡರು. ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ಭಾರತದಲ್ಲಿ ಕಾನೂನು ನ್ಯಾಯದಾನ ಸುಧಾರಣೆ ಅತ್ಯುತ್ತಮವಾಗಿ ಜಾರಿಗೆ ಬರಲಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಆಗಲೇ ಹರಳುಗಟ್ಟಿತ್ತು. ತಾವು ಅಧಿಕಾರ ಗ್ರಹಣ ಮಾಡಿದಾಕ್ಷಣದಿಂದಲೇ ಜಸ್ಟಿಸ್ ಲಲಿತ್ ಅವರು ತಡಮಾಡದೇ ಎಲ್ಲ ರಾಜ್ಯಮಟ್ಟದ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ.
ಆನ್ಲೈನ್ ಸಭೆಗಳನ್ನು ನಿರಂತರವಾಗಿ ನಡೆಸಿದ್ದಲ್ಲದೇ ಕಾನೂನು ನೆರವನ್ನು ಸಕ್ರಿಯಗೊಳಿಸುವಲ್ಲಿ ಇರುವ ತೊಂದರೆ ಮತ್ತು ಸವಾಲುಗಳ ಬಗ್ಗೆಯೂ ಸಾಧ್ಯಂತ ತಿಳಿದುಕೊಂಡರು. ಕಾನೂನು ಸಮಸ್ಯೆ ಬಂದಾಗ ಸಾಮಾನ್ಯ ವ್ಯಕ್ತಿಯೊಬ್ಬ ಯಾರನ್ನು ಸಂಪರ್ಕಿಸಬೇಕು, ಹೇಗೆ ಮುಂದುವರಿಯಬೇಕು, ನ್ಯಾಯಪಡೆಯುವುದು ಹೇಗೆ ಎಂಬ ಕುರಿತಾದ ವ್ಯಾಪಕ ಚರ್ಚೆಗಳೂ ಆದವು.
ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವಾರಾಂತ್ಯದಲ್ಲಿ ಜಸ್ಟಿಸ್ ಲಲಿತ್ ಅವರು ದೇಶದ ನಾನಾ
ಭಾಗ ಗಳಿಗೆ ಪ್ರವಾಸ ಹೋಗುವುದನ್ನು ಆರಂಭಿಸಿದರು. ಅಕ್ಟೋಬರ್-ನವೆಂಬರ್ 2021ರಲ್ಲಿ ಈ ರೀತಿಯ ಆರು ವಾರಾಂತ್ಯ ಗಳಲ್ಲಿ ಅವರು ವ್ಯಾಪಕವಾಗಿ ಭಾರತದಾದ್ಯಂತ ಪ್ರಯಾಣ ಕೈಗೊಂಡರು. 42 ದಿನಗಳಲ್ಲಿ 16 ರಾಜ್ಯಗಳಲ್ಲಿ ಸಂಚರಿಸಿದರು 15 ಲಕ್ಷ ಗ್ರಾಮಗಳ ಜನರೊಂದಿಗೆ ಸಂವಹನ ನಡೆಸಿದರು.
ಕಾನೂನು ಜಾಗೃತಿಯ ಸಂದೇಶವನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ 464000 ಜಾಗೃತಿ ಕಾರ್ಯಕ್ರಮಗಳು ನಡೆದು ಆರುಕೋಟಿ ಮೂವತ್ತು ಲಕ್ಷ ಜನರೊಂದಿಗೆ ಸಂವಹನ ಸಾಧ್ಯವಾಯ್ತು. 2021ರಲ್ಲಿ ಹಿಂದುಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮಾರಂಭದಲ್ಲಿ ಮಾತನಾಡುತ್ತಿದ್ದ ಜಸ್ಟಿಸ್ ಲಲಿತ್ ಜನರಿಗೆ ಗುಣಮಟ್ಟದ ಕಾನೂನು ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಆಗಬೇಕಾದ ಪ್ರಕ್ರಿಯೆಗಳ ಕುರಿತು ಮತ್ತು ಜನರ ವಿಶ್ವಾಸಾರ್ಹತೆಯನ್ನು ಗಳಿಸುವ ದಿಸೆಯಲ್ಲಿ ಆರ್ಥಿಕವಾಗಿ ಹಿಂದುಳಿದವರು, ದೈಹಿಕವಾಗಿ ಸವಾಲುಗಳಿರುವವರು ಮತ್ತು ಮಂಗಳಮುಖಿಯರೂ ಸೇರಿದಂತೆ ಎಲ್ಲರನ್ನು ಒಳಗೊಳ್ಳಿಸುವ
ಯತ್ನ ಆಗಬೇಕಿದೆ, ಕಾನೂನು ವಿಚಾರದಲ್ಲಿ ಯಾರೂ ಅವಕಾಶ ವಂಚಿತರಾಗಬಾರದು ಎಂದರು.
ಸಮಾಜದಲ್ಲಿ ನಾಯಕತ್ವ ವಹಿಸಿರುವವರೆಲ್ಲರೂ ಈ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಅವರು ಅಭಿಪ್ರಾಯಿಸಿದರು. ಕಳೆದ ವಾರ ಅಖಿಲಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಥಮ ಸಭೆ ದೆಹಲಿಯಲ್ಲಿ ನಡೆದಾಗ ಮಾತನಾಡಿದ ಜಸ್ಟಿಸ್ ಲಲಿತ್, ತಾವು ಅಧಿಕಾರ ವಹಿಸಿಕೊಂಡ ನಂತರ ದಲ್ಲಿ, ವಿಚಾರಣಾಪೂರ್ವ ಹಂತದಲ್ಲಿಯೇ 3 ಕೋಟಿ ಪ್ರಕರಣಗಳು ಲೋಕ ಅದಾಲತ್ತಿನಲ್ಲಿ ಇತ್ಯರ್ಥವಾಗಿರುವ ಬಗ್ಗೆ ತಿಳಿಸಿದ್ದರು.
ಈಗಾಗಲೇ ನ್ಯಾಯಾಲಯಗಳು ಪ್ರಕರಣಗಳ ದಟ್ಟಣೆಯಿಂದ ತೊಂದರೆಗೊಳಗಾಗಿ ನ್ಯಾಯದಾನ ವಿಳಂಬವಾಗುತ್ತಿರುವುದರ
ಹಿನ್ನೆಲೆಯಲ್ಲಿ ಇದೊಂದು ಸಕಾರಾತ್ಮಕ ಉಪಕ್ರಮವೂ ಆಗಿದೆ. ಜಸ್ಟಿಸ್ ಎನ್.ವಿ. ರಮಣ ಅವರು ನಿವೃತ್ತರಾಗುತ್ತಿರುವ
ಭಾರತದ ಮುಖ್ಯ ನ್ಯಾಯಮೂರ್ತಿಗಳ ಸ್ಥಾನಕ್ಕೆ, ಆಗಸ್ಟ್ 27ರಂದು ಜಸ್ಟಿಸ್ ಲಲಿತ್ ಅಧಿಕಾರಗ್ರಹಣ ಮಾಡಲಿದ್ದಾರೆ.