Friday, 22nd November 2024

ವಿವಾದಾತ್ಮಕ ಮಸೂದೆಗೆ ತಿದ್ದುಪಡಿ: ಈಶಾನ್ಯ ರಾಜ್ಯದಲ್ಲಿ ಭಾರೀ ಪ್ರತಿಭಟನೆ

ಗುವಾಹಟಿ: ಮಣಿಪುರದ ಗುಡ್ಡಗಾಡು ಜಿಲ್ಲೆಗಳಿಗೆ ಹೆಚ್ಚಿನ ಸ್ವಾಯತ್ತತೆಗೆ ಸಂಬಂಧಿಸಿದ ವಿವಾದಾತ್ಮಕ ಮಸೂದೆಗೆ ಎರಡು ತಿದ್ದುಪಡಿಗಳು ಈಶಾನ್ಯ ರಾಜ್ಯದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆಯು ಅನಿರ್ದಿಷ್ಟ ಆರ್ಥಿಕ ದಿಗ್ಬಂಧನ ವಿಧಿಸಿದೆ ಹಾಗೂ ಬಂದ್‌ಗಳು ಜನ ಜೀವನವನ್ನು ಅಸ್ತವ್ಯಸ್ತ ಗೊಳಿಸಿದೆ. ರಾಜಧಾನಿ ಇಂಫಾಲ್‌ನಲ್ಲಿ ಪೊಲೀಸರು ಪ್ರತಿಭಟನಾ ರ್ಯಾಲಿ ತಡೆದಾಗ 30ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಐವರು ಬುಡಕಟ್ಟು ವಿದ್ಯಾರ್ಥಿ ನಾಯಕರನ್ನು ಬಂಧಿಸಿ 15 ದಿನಗಳ ಕಾಲ ಜೈಲಿಗೆ ಕಳುಹಿಸಲಾಯಿತು.

ಮಣಿಪುರದಾದ್ಯಂತ ಐದು ದಿನಗಳ ಕಾಲ ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಶೇಷ ಕಾರ್ಯದರ್ಶಿ (ಗೃಹ) ಎಚ್.ಜ್ಞಾನ್ ಪ್ರಕಾಶ್ ಅವರು ಆದೇಶ ಹೊರಡಿಸಿದ್ದಾರೆ.

ಬಂಧಿತ ತಮ್ಮ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ಎಟಿಎಸ್‌ಯುಎಂ) ಹೆದ್ದಾರಿಗಳಲ್ಲಿ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನ ವಿಧಿಸಿದೆ. ವಾಹನಕ್ಕೆ ಬೆಂಕಿ ಹಚ್ಚುವುದು ಸೇರಿದಂತೆ ಕೆಲವು ಘಟನೆಗಳು ವರದಿಯಾಗಿವೆ.