ಮುಂಬೈ:
ವಿನಾಶಕಾರಿ ಕರೋನಾ ಆಕ್ರಮಣದ ತೀವ್ರತೆ ದೇಶದಲ್ಲಿ ಮೂರು ಪಟ್ಟಿಗಿಂತಲೂ ಹೆಚ್ಚಾಗುತ್ತಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ನಾಲ್ಕನೇ ಹಂತದ ಲಾಕ್‌ಡೌನ್ ಸೋಮವಾರದಿಂದ ಜಾರಿಗೆ ಬಂದಿದ್ದು, ಇದರ ಬೆನ್ನಲೇ ಆತಂಕಕಾರಿ ವಾತಾವರಣವೂ ನಿರ್ಮಾಣವಾಗಿದೆ.
ಕರೋನಾ ವೈರಸ್ ಆರ್ಭಟ ಲಾಕ್ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿರುವುದು ಗಮನಾರ್ಹ ಸಂಗತಿ. ರಾಷ್ಟ್ರವ್ಯಾಪಿ
ಭಯಭೀತಿಯ ವಾತಾವರಣ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದ್ದು, ಸಾವು ಮತ್ತು ಸೋಂಕು ಪ್ರಕರಣಗಳು ಆಘಾತಕಾರಿ ಪ್ರಮಾಣದಲ್ಲಿ ವೃದ್ದಿಯಾಗುತ್ತಿದೆ. ಭಾರತದಲ್ಲಿ ಸಾವಿನ ಸಂಖ್ಯೆ 3 ಸಾವಿರ ದಾಟಿದ್ದು. ಸೋಂಕು ಪೀಡಿತರ ಸಂಖ್ಯೆಯೂ ಒಂದು ಲಕ್ಷ ಸನಿಹದಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಕಳೆದ ಒಂದು ದಿನದಲ್ಲಿ 157 ಸಾವುಗಳು ಮತ್ತು ಹೊಸ ದಾಖಲೆ ಪ್ರಮಾಣದ 5,245 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ನಾಲ್ಕನೆ ಹಂತದ ಲಾಕ್‌ಡೌನ್ ಜಾರಿಗೆ ಬಂದ ದಿನವೇ ದಾಖಲೆ ಪತ್ರಮಾಣದ ಸೋಂಕು ಕಂಡುಬಂದಿದೆ. ಇದು 5 ಸಾವಿರ ಪಾಸಿಟಿವ್ ಕೇಸ್ ದಾಖಲಾದ ಎರಡನೇ ದಿನ. ಮೇ 1ರಿಂದಲೂ ಅತಿ ಹೆಚ್ಚು ಸೋಂಕುಗಳ ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಲೇ ಇವೆ. ಈ ಅವಧಿಯಲ್ಲಿ ಪ್ರತಿ ದಿನ ಸರಾಸರಿ 3,400 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಕಳೆದ 12 ದಿನಗಳಲ್ಲಿ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿರುವುದೂ ಕೂಡ ಆತಂಕದ ಸಂಗತಿ. ಅಲ್ಲದೇ ದೇಶದ 550 ಜಿಲ್ಲೆಗಳಲ್ಲಿ ಕರೋನಾ ಆರ್ಭಟ ಮುಂದುವರಿದಿದೆ.
ಭಾನುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 157 ಮಂದಿಯನ್ನು ಮಹಾಮಾರಿ ಕರೋನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ 63, ಗುಜರಾತ್‌ನಲ್ಲಿ 34, ದೆಹಲಿ 31, ಪಶ್ಚಿಮ ಬಂಗಾಳ 6, ರಾಜಸ್ತಾನ ಮತ್ತು ಮಧ್ಯಪ್ರದೇಶ ತಲಾ 5, ತಮಿಳುನಾಡು 4, ಪಂಜಾಬ್ 3, ಆಂದ್ರಪ್ರದೇಶ, ಬಿಹಾರ, ಹರಿಯಾಣ, ಜಮ್ಮು-ಕಾಶ್ಮೀರ, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಭಾನುವಾರ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಕರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 3,029ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆೆ 96.196 ತಲುಪಿದೆ. ಸೋಮವಾರ ಮಧ್ಯರಾತ್ರಿಯೊಳಗೆ ಸೋಂಕಿತರ ಪ್ರಮಾಣ ಒಂದು ಲಕ್ಷ ದಾಟುವ ಆತಂಕ ಉಂಟಾಗಿದೆ.
ಲಾಕ್‌ಡೌನ್ ಸಡಿಲಿಸಿದ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕರೋನಾ ಮಹಾಸ್ಫೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಜತೆಗೆೆ ಸಮುದಾಯ ಸೋಂಕಿನ ಸಾಧ್ಯತೆಯ ಭಯವೂ ಕಾಡುತ್ತಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.38.29ರಷ್ಟು ಸುಧಾರಣೆ ಕಂಡುಬಂದಿದ್ದರೂ, ಮತ್ತೊೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಈವರೆಗೆ ಸಂಭವಿಸಿರುವ 3,029 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 1,198 ಸಾವುಗಳು ವರದಿಯಾಗಿವೆ. ಮೇ ತಿಂಗಳಿನಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಮಹಾರಾಷ್ಟ್ರದಲ್ಲೇ ಶೇ.57ರಷ್ಟು ಮರಣ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ 33,053 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಮುಂಬೈನಲ್ಲಿ ಅತಿ ಹೆಚ್ಚು ಸಾವು ಮತ್ತು ಸೋಂಕು ಪ್ರಕರಣಗಳು ದಾಖಲಾಗಿವೆ.
ನಂತರದ ಸ್ಥಾನಗಳಲ್ಲಿ ಗುಜರಾತ್ (659), ಮಧ್ಯಪ್ರದೇಶ (248), ಪಶ್ಚಿಮ ಬಂಗಾಳ (238), ದೆಹಲಿ (160). ರಾಜಸ್ತಾನ (131), ಉತ್ತರ ಪ್ರದೇಶ (104), ತಮಿಳುನಾಡು (78), ಆಂಧ್ರಪ್ರದೇಶ (50), ಕರ್ನಾಟಕ (37), ಪಂಜಾಬ್ (35), ತೆಲಂಗಾಣ (34) ರಾಜ್ಯಗಳಿವೆ. ಹರಿಯಾಣ 14, ಜಮ್ಮು-ಕಾಶ್ಮೀರ 13, ಬಿಹಾರ ಎಂಟು, ಕೇರಳ ಮತ್ತು ಒಡಿಶಾ ನಾಲ್ಕು, ಜಾರ್ಖಂಡ್, ಚಂಡಿಗಢ, ಮತ್ತು ಹಿಮಾಚಲ ಪ್ರದೇಶ ತಲಾ ಮೂರು, ಅಸ್ಸಾಾಂ ಎರಡು ಹಾಗೂ ಪುದುಚೇರಿ, ಮೇಘಾಲಯ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.
ಕರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 56,316ರಷ್ಟಿದೆ. ಈ ಮಧ್ಯೆ, ಈವರೆಗೆ 36,823(ಚೇತರಿಕೆ ಪ್ರಮಾಣ ಶೇ.38.29) ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.
ಸೋಮವಾರ ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆೆಯಾಗಿವೆ.
ಸೋಮವಾರದಿಂದ ಜಾರಿಗೆ ಬಂದಿರುವ ಲಾಕ್‌ಡೌನ್4 ಈ ತಿಂಗಳಾಂತ್ಯದವರೆಗೂ ವಿಸ್ತರಣೆಯಾಗಿದೆ. ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿ ಆರ್ಥಿಕ ಪುನ:ಶ್ಚೇತನ ಮತ್ತು ಸಾರ್ವಜನರಿಗೆ ಅನುಕೂಲ ಕಲ್ಪಿಸಿದ್ದರೂ, ಕರೋನಾ ದಾಳಿ ಮತ್ತಷ್ಟು ತೀವ್ರವಾಗುವ ಆತಂಕವೂ ಎದುರಾಗಿದೆ. ಮುಂದೇನು ಎಂಬ ಚಿಂತೆ ಭಾರತೀಯರನ್ನು ಕಾಡುತ್ತಿದೆ.