Friday, 22nd November 2024

ಏಕನಾಥ್‌ ಸಚಿವ ಸಂಪುಟ ವಿಸ್ತರಣೆ: 18 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಮತ್ತು ಶಿವಸೇನೆ ಬಣದ ತಲಾ 9 ಶಾಸಕರು ಒಟ್ಟು 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣ, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿದ 40 ದಿನಗಳ ಬಳಿಕ ಈ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗಿದೆ.

55 ಶಿವಸೇನಾ ಶಾಸಕರ ಪೈಕಿ 40 ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿದ್ದಾರೆ.

ಮುಂಬೈನ ರಾಜಭವನದಲ್ಲಿ ಮಹಾರಾಷ್ಟ್ರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಒಂಬತ್ತು ಬಿಜೆಪಿ ನಾಯಕರಲ್ಲಿ ಚಂದ್ರಕಾಂತ ಪಾಟೀಲ್ ಮತ್ತು ವಿಜಯ್ ಕುಮಾರ್ ಗವಿತ್ ಸೇರಿದ್ದಾರೆ.

ಅಂತಿಮ ಪಟ್ಟಿಯಲ್ಲಿ ಏಕನಾಥ್ ಶಿಂಧೆ ಉತ್ತಮ ಸಮತೋಲನವನ್ನು ಉಳಿಸಿದ್ದು, ಬಿಜೆಪಿ ಯಲ್ಲಿಯೂ ಯಾವುದೇ ಅಸಮಾ ಧಾನವಿಲ್ಲ ಎಂದು ನಾಯಕರು ತಿಳಿಸಿದ್ದಾರೆ.

ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗಂತಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಡೆ, ರಾಧಾಕೃಷ್ಣ ವಿಖೆ ಪಾಟೀಲ್, ರವೀಂದ್ರ ಚವ್ಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗಾವಿತ್ ಮತ್ತು ಅತುಲ್ ಸೇವ್ ಬಿಜೆಪಿ ಶಾಸಕರು ಸಂಪುಟ ಸ್ಥಾನ ಪಡೆದಿದ್ದಾರೆ.

ಬಂಡಾಯ ಶಿವಸೇನಾ ಬಣದಿಂದ ದಾದಾ ಭೂಸೆ, ಸಂದೀಪನ್ ಬುಮ್ರೆ, ಉದಯ್ ಸಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್, ಸಂಜಯ್ ರಾಥೋಡ್ ಮತ್ತು ಶಂಭುರಾಜೇ ದೇಸಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶಿವಸೇನೆಯಲ್ಲಿನ ಬಂಡಾಯದಿಂದಾಗಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಹೂಡಿದ್ದ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಜೂನ್ 30 ರಂದು ಪ್ರಮಾಣವಚನ ಸ್ವೀಕರಿಸಿದರು.