Monday, 25th November 2024

ಇರಾನಿ ಸಾಂಪ್ರದಾಯಿಕ ವೈದ್ಯದಲ್ಲಿ ಮಿಜಾಜ್‌

ಹಿಂದಿರುಗಿ ನೋಡಿದಾಗ

ಒಂಬತ್ತು ಮಿಜಾಜ಼್‌ಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಪ್ರಶ್ನೆಯು ಹುಟ್ಟಬಹುದು. ಒಳ್ಳೆಯ ಮಿಜಾಜ಼್ ಎನ್ನುವುದಿಲ್ಲ. ಕೆಟ್ಟ ಮಿಜಾಜ಼್ ಎನ್ನುವುದೂ ಇಲ್ಲ. ಈ ಮಿಜಾಜ಼್ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತವೆ.

ಜಗತ್ತಿನ ಪ್ರಾಚೀನ ವೈದ್ಯ ಪದ್ಧತಿಗಳಲ್ಲಿ ಇರಾನೀ ಸಾಂಪ್ರದಾಯಿಕ ವೈದ್ಯ ಪದ್ಧತಿಯೂ ಒಂದು. ಇದನ್ನು ಪರ್ಷಿಯನ್ ಸಾಂಪ್ರದಾಯಿಕ ವೈದ್ಯ ಪದ್ಧತಿ ಎಂದೂ ಕರೆಯುವುದುಂಟು. ಇರಾನೀ ಸಾಂಪ್ರದಾಯಿಕ ವೈದ್ಯಕೀಯದ ಮೊದಲ ಹಾಗೂ ಬಹಳ ಮುಖ್ಯ ಪುಸ್ತಕವೆಂದರೆ ‘ಹಿದಾಯತ್ ಅಲ್-ಮುತ ಅಲ್ಲೆಮಿನ್ ಫಿ ಅಲ್-ತಿಬ್’.

ವೈದ್ಯ ಪದ್ಧತಿಯನ್ನು ಕಲಿಯುವವರ ಮಾರ್ಗದರ್ಶಿ ಎಂದು ಇದರ ಅರ್ಥ. ಇದು ಪರ್ಷಿಯನ್ ಭಾಷೆಯ ಕೃತಿ. ಇದನ್ನು ಬರೆದವನು ಅಬು ಬಕ್ರ್ ರಬಿ ಇಬ್ನ್ ಅಹಮದ್ ಅಲ್-ಅಖಾವಯ್ನಿ ಬುಖಾರಿ (ಕ್ರಿ.ಶ. -೯೮೩). ಈ ಪುಸ್ತಕದಲ್ಲಿ ಆರೋಗ್ಯದ ಮೂಲಭೂತ ತತ್ತ್ವಗಳ ವಿವರಣೆಯಿದೆ. ಆ ತತ್ತ್ವಗಳಲ್ಲಿ ಈ ಬ್ರಹ್ಮಾಂಡ ರಚನೆಗೆ ಕಾರಣವಾಗಿರುವ ಧಾತುಗಳು, ಮನೋಧರ್ಮ, ರಸಗಳು, ಸ್ವಚ್ಛತೆ, ಅಂಗರಚನೆ, ಅಂಗಕ್ರಿಯೆ, ರೋಗ ವಿಜ್ಞಾನ, ರೋಗಲಕ್ಷಣಗಳು ಹಾಗೂ ಚಿಹ್ನೆಗಳು ಹಾಗೂ ರೋಗಗಳ ಚಿಕಿತ್ಸೆಯು ಮುಖ್ಯವಾದವು.

ಇಸ್ಲಾಂ ಜಗತ್ತಿನಲ್ಲಿ ಮನೋವೈದ್ಯಕೀಯ ರೋಗಗಳನ್ನು ಕುರಿತು ಮೊದಲ ಬಾರಿಗೆ ಗುರುತಿಸಿ, ಅವುಗಳನ್ನು ಪ್ರಯತ್ನಿಸಿದ ಮೊದಲ ವೈದ್ಯ ಅಖಾವಯ್ನಿ ಬುಖಾರಿ ಎನ್ನು ವುದು ಗಮನೀಯ ಅಂಶ. ಇರಾನೀ ಸಾಂಪ್ರದಾಯಿಕ ವೈದ್ಯ ಪದ್ಧತಿಯು ಮುಹಮ್ಮದ್ ಇಬ್ನ್ ಜ಼ಕಾರಿಯ ಅಲ್-ರಾಜ಼ಿ, ಇಬ್ನ್ ಸಿನ ಮತ್ತು ಇಸ್ಮೇಲ್ ಜೋರ್ಜಾನಿ ಅವರ ಕಾಲ ದಲ್ಲಿ ಸರ್ವತೋಮುಖ ಪ್ರಗತಿಯನ್ನು ಕಂಡಿತು.

ಅವಿಸೆನ್ನನು ಇರಾನೀ ಸಾಂಪ್ರದಾಯಿಕ ವೈದ್ಯಕೀಯದ ಮೂಲ ತತ್ತ್ವ ನಾಲ್ಕು ರಸಗಳ ಕುರಿತು ವಿಸ್ತೃತವಾಗಿ ವಿವರಿಸಿದ. ನಮ್ಮ ಶರೀರದಲ್ಲಿ ನಾಲ್ಕು ರೀತಿಯ ರಸಗಳು (ಹ್ಯೂಮರ್) ಇರುತ್ತವೆ. ಈ ರಸಗಳ ನಡುವೆ ಸಮತೋಲನೆಯಿದ್ದಾಗ ಆರೋಗ್ಯ ಸಹಜವಾಗಿ ಲಭಿಸುತ್ತದೆ. ಈ ರಸಗಳ ನಡುವೆ ಏರುಪೇರಾದಾಗ, ನಾನಾ ರೀತಿಯ ಅನಾರೋಗ್ಯಗಳು ತಲೆದೋರುತ್ತವೆ. ಈ ಏರು
ಪೇರನ್ನು ಗಮನಿಸಿ, ಅದನ್ನು ಸರಿಪಡಿಸುವುದು ಚಿಕಿತ್ಸೆಯ ಮೂಲ ಉದ್ದೇಶವಾಗಿರುತ್ತದೆ.

ಸಮತೋಲನೆಯು ಮರು ಸ್ಥಾಪಿತವಾದಾಗ ಆರೋಗ್ಯವು ಮರಳಿ ದೊರೆಯುತ್ತದೆ ಎನ್ನುವುದು ಈ ಸಿದ್ಧಾಂತದ ತಿರುಳು. ಈ ನಾಲ್ಕು ರಸಗಳೆಂದರೆ ಬಲಗಮ್ (ಕ-) ದಮ್ (ರಕ್ತ) ಸ- (ಹಳದಿ ಪಿತ್ತ) ಮತ್ತು ಸೌದಾ (ಕಪ್ಪು ಪಿತ್ತ). ಈ ಹೆಸರನ್ನು ಓದುತ್ತಿರು ವಂತೆಯೇ ನಮಗೆ ಗ್ರೀಕರ ನಾಲ್ಕು ರಸಗಳು ನೆನಪಿಗೆ ಬರುತ್ತವೆ. ಈ ಪರಿಕಲ್ಪನೆಯನ್ನು ಅಲ್-ರಾಜ಼ಿ ಮತ್ತು ಅವಿಸೆನ್ನರು ನೇರ ವಾಗಿ ಗ್ರೀಕ್ ವೈದ್ಯಕೀಯ ದಿಂದ ಪಡೆದರು ಎಂಬ ಸಂಗತಿ ನಿರ್ವಿವಾದ.

ಅಖಾವಯ್ನಿ ಬುಖಾರಿಯು ಆರೋಗ್ಯ ನಿರ್ವಹಣೆಗೆ ಆದ್ಯತೆ ನೀಡಿದ್ದ. ಬುಖಾರಿಯು ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ
ಮನೋಧರ್ಮವನ್ನು (ಟೆಂಪರಮೆಂಟ್) ಪಡೆದಿರುತ್ತಾನೆ ಎಂದು ನಂಬಿದ್ದ. ಅವನ ಆರೋಗ್ಯ- ಅನಾರೋಗ್ಯವನ್ನು ಆರು ಅಂಶಗಳು ನಿರ್ಧರಿಸುತ್ತವೆ ಎಂದ. ಇದನ್ನು ಪರ್ಷಿಯನ್ ಭಾಷೆಯಲ್ಲಿ ಸೆತಾ ಜ಼ರೋರಿಯ ಎಂದು ಕರೆದ. ಈ ಆರು ಅಂಶ ಗಳೆಂದರೆ ವ್ಯಕ್ತಿಯ ಆಹಾರ ಪದ್ಧತಿ, ವ್ಯಕ್ತಿಯು ವಾಸಿಸುವ ಪರಿಸರ, ವ್ಯಕ್ತಿಯ ದೈನಂದಿನ ಶಾರೀರಿಕ ಚಟುವಟಿಕೆ, ವ್ಯಕ್ತಿಯ ದೈನಂದಿನ ನಿದ್ರಾಪ್ರವೃತ್ತಿ, ವ್ಯಕ್ತಿಯ ದೈನಂದಿನ ಭಾವಾವೇಶಗಳು ಹಾಗೂ ವ್ಯಕ್ತಿಯ ಒಡಲಿನಿಂದ ತ್ಯಾಜ್ಯವಸ್ತುಗಳ ದೈನಂದಿನ ನಿರ್ವಹಣೆ.

ಪ್ರತಿಯೊಬ್ಬ ವ್ಯಕ್ತಿಯೂ ಈ ಆರು ಅಂಶಗಳಿಗೆ ಸಂಬಂಧಪಟ್ಟ ತನ್ನ ಮನೋಧರ್ಮವನ್ನು ಅರಿಯಬೇಕು ಹಾಗೂ ಅವುಗಳನ್ನು ನಿರ್ವಹಿಸುವುದನ್ನು ಕಲಿಯಬೇಕು. ಆಗ ಅವನಿಗೆ ಆರೋಗ್ಯ ಸಹಜವಾಗಿ ಲಭಿಸುತ್ತದೆ ಎಂದ. ಇದು ಮನೋಧರ್ಮದ ಹಿಂದಿರುವ ಸಿದ್ಧಾಂತ. ಒಬ್ಬ ವ್ಯಕ್ತಿಯ ಮನೋಧರ್ಮ ಮತ್ತೊಬ್ಬ ವ್ಯಕ್ತಿಯ ಮನೋಧರ್ಮದ ಹಾಗಿರುವುದಿಲ್ಲ. ಹಾಗಾಗಿ ವ್ಯಕ್ತಿಗತ ವಿಶೇಷವಾದ ಮನೋಧರ್ಮವನ್ನು ಮಿಜಾಜ಼್ ಎಂದು ಕರೆದ.

ಮಿಜಾಜ಼್ನ ನಾಲ್ಕು ಮುಖ್ಯ ಘಟಕಗಳೆಂದರೆ ಶರೀರದ ಶಾಖ, ಶೈತ್ಯ, ಶುಷ್ಕತೆ ಹಾಗೂ ಆರ್ದ್ರತೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಈ ನಾಲ್ಕು ಘಟಕಗಳು ಇರುತ್ತವೆ. ಆದರೆ ಅವುಗಳ ಪ್ರಮಾಣ ಮಾತ್ರ ಭಿನ್ನವಾಗಿರುತ್ತದೆ. ಹಾಗಾಗಿ ಒಬ್ಬರ ಮಿಜಾಜ಼್‌ನಂತೆ ಮತ್ತೊಬ್ಬರ ಮಿಜಾಜ಼್ ಇರುವುದಿಲ್ಲ. ಆದರೆ ಮಕ್ಕಳ ಮಿಜಾಜ಼್ ಸ್ವಲ್ಪ ಮಟ್ಟಿಗೆ ಹೆತ್ತವರ ಮಿಜಾಜ಼ನ್ನು ಹೋಲುಬಹುದು. ಒಬ್ಬ ವ್ಯಕ್ತಿಯ ಮಿಜಾಜ಼್, ಅವನ ಗರ್ಭಾವಸ್ಥೆಯಲ್ಲಿಯೇ ರೂಪುಗೊಳ್ಳುತ್ತದೆ. ಹಾಗೆ ರೂಪುಗೊಳ್ಳುವಾಗ, ನಾಲ್ಕು ಘಟಕಗಳಲ್ಲಿ ಯಾವುದಾದರೊಂದು ಘಟಕವು ಪ್ರಬಲವಾಗಬಹುದು.

ಉಳಿದ ಮೂರು ನಾನಾ ಮಟ್ಟದಲ್ಲಿ ದುರ್ಬಲವಾಗಬಹುದು. ಹಾಗಾಗಿ ವ್ಯಕ್ತಿಯು ಹುಟ್ಟಿದಾಗ ಈ ನಾಲ್ಕು ಘಟಕಗಳು ನಾನಾ ಪ್ರಮಾಣದಲ್ಲಿ ಸಂಯೋಜನೆಯಾಗಿ ೯ ನಮೂನೆಯ ಮಿಜಾಜ಼್ ರೂಪುಗೊಳ್ಳಬಹುದು. ಅವು ಶಾಖ, ಶೈತ್ಯ, ಶುಷ್ಕ, ಆರ್ದ್ರ, ಶಾಖ-
ಶುಷ್ಕ, ಶಾಖ-ಆರ್ದ್ರ, ಶೈತ್ಯ-ಶುಷ್ಕ, ಶೈತ್ಯ-ಆರ್ದ್ರ ಮತ್ತು ಸಮ್ಮಿಶ್ರ. ಈ ಒಂಬತ್ತನೆಯ ಸಮ್ಮಿಶ್ರ ನಮೂನೆಯಲ್ಲಿ ಎಲ್ಲ ಘಟಕಗಳು ಹೆಚ್ಚೂ ಕಡಿಮೆ ಸಮಪ್ರಮಾಣದಲ್ಲಿರುತ್ತವೆ.

ಒಂಬತ್ತು ಮಿಜಾಜ಼್‌ಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಪ್ರಶ್ನೆಯು ಹುಟ್ಟಬಹುದು. ಒಳ್ಳೆಯ ಮಿಜಾಜ಼್ ಎನ್ನುವುದಿಲ್ಲ. ಕೆಟ್ಟ ಮಿಜಾಜ಼್ ಎನ್ನುವುದೂ ಇಲ್ಲ. ಈ ಮಿಜಾಜ಼್ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತವೆ. ಈ ಪ್ರಭಾವವು ಹಿತ-ಮಿತ ಪ್ರಮಾಣದಲ್ಲಿದ್ದರೆ ಎಲ್ಲ ಮಿಜಾಜ಼್‌ಗಳೂ ಒಳ್ಳೆಯವೆ. ಮಿತಿಮೀರಿದಾಗ ಅನಾರೋಗ್ಯಗಳು ತಲೆದೋರುತ್ತವೆ. ಮಿಜಾಜ಼್ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುವಂತೆ, ಆ ವ್ಯಕ್ತಿಯ ಜೀವನಶೈಲಿಯೂ ಬದಲಾಗುತ್ತದೆ.

ಈ ಜೀವನಶೈಲಿಯು ಮಿತಿಮೀರದ ಹಿತ-ಮಿತ ಪ್ರಮಾಣದಲ್ಲಿದ್ದರೆ, ಅವನು ಆರೋಗ್ಯವಂತನಾಗಿರುತ್ತಾನೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಮಿಜಾಜ಼್‌ನ್ನು ಕಂಡುಕೊಂಡು, ಅದಕ್ಕೆ ಅನುಗುಣ ಜೀವನಶೈಲಿಯನ್ನು ಹಿತ-ಮಿತ ಪ್ರಮಾಣದಲ್ಲಿ ರೂಪಿಸಿ ಕೊಳ್ಳುವುದೇ ಆರೋಗ್ಯದ ಗುಟ್ಟು ಎನ್ನುತ್ತದೆ ಇರಾನೀ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ. ಒಂಬತ್ತು ಮಿಜಾಜ಼್‌ ಗಳನ್ನು ತಿಳಿದುಕೊಂಡೆವು. ಒಬ್ಬ ವ್ಯಕ್ತಿಯ ಮಿಜಾಜ಼್ ಯಾವ ನಮೂನೆಯದು ಎನ್ನುವುದನ್ನು ವ್ಯಕ್ತಿಯ ಶಾರೀರಿಕ ಲಕ್ಷಣಗಳು ಹಾಗೂ ವ್ಯಕ್ತಿಯ ದೈನಂದಿನ ವರ್ತನೆಗಳನ್ನು ಅಧ್ಯಯನ ಮಾಡುವುದರ ಮೂಲಕ ತಿಳಿದುಕೊಳ್ಳಬಹುದು.

ದೇಹದ ಚೌಕಟ್ಟು: ಕುಳ್ಳಗೆ, ದಪ್ಪಗೆ, ಬಲವಾದ ಮೂಳೆ ಮತ್ತು ಸ್ನಾಯುಗಳು ಹಾಗೂ ವಯಸ್ಸಾಗುತ್ತಿರುವಂತೆ ಬೊಜ್ಜನ್ನು ಬೆಳೆದರೆ ಅದು ಆರ್ದ್ರತೆಯ ಮಿಜಾಜ಼್‌ನ್ನು ತೋರುತ್ತದೆ. ಶುಷ್ಕ ಮಿಜಾಜ಼್ ಅನ್ನು ಹೊಂದಿರುವವರು ತೆಳ್ಳಗೆ, ಉದ್ದಕ್ಕೆ ಹಾಗೂ ಇವರು ಶರೀರ ತೂಕವನ್ನು ಅಷ್ಟಾಗಿ ಗಳಿಸುವುದಿಲ್ಲ.

ಅಂಗಾಂಗಗಳು: ಆರ್ದ್ರ ಮಿಜಾಜ಼್ ಇರುವವರ ಶರೀರದ ನಾನಾ ಅಂಗಗಳು ದೊಡ್ಡದಾಗಿರುತ್ತವೆ. ದೊಡ್ಡ ಮುಖ, ದೊಡ್ಡ ತುಟಿ, ದೊಡ್ಡ ಮೂಗು, ದೊಡ್ಡ ಕೈಕಾಲುಗಳಿರುತ್ತವೆ. ಶುಷ್ಕ ಮಿಜಾಜ಼್ ಇರುವವರ ಶರೀರದ ಅಂಗಗಳೆಲ್ಲ ಸಪೂರವಾಗಿ, ಚಿಕ್ಕದಾಗಿರುತ್ತವೆ.

ಮೈಬಣ್ಣ: ಶಾಖ ಮತ್ತು ಆರ್ದ್ರ ಮಿಜಾಜ಼್‌ನವರ ಮೈಬಣ್ಣವು ಗುಲಾಬಿ ಇಲ್ಲವೇ ಕೆಂಬಣ್ಣಕ್ಕಿರುತ್ತದೆ. ಶಾಖ ಮತ್ತು
ಶುಷ್ಕದವರ ಮೈಬಣ್ಣದಲ್ಲಿ ಸ್ವಲ್ಪ ಹಳದಿ ಛಾಯೆಯು ಬೆರೆತಿರುತ್ತದೆ. ಶೈತ್ಯ ಮತ್ತು ಆರ್ದ್ರ ಮಿಜಾಜ಼್‌ನವರ ಮೈಬಣ್ಣವು
ಬೆಳ್ಳಗೆ ಲಘುವರ್ಣಕ್ಕಿರುತ್ತದೆ. ಶೈತ್ಯ ಮತ್ತು ಶುಷ್ಕ ಮಿಜಾಜ಼್ ನವರ ಮೈಬಣ್ಣ ಕಪ್ಪಗೆ, ದಟ್ಟವರ್ಣವಾಗಿರುತ್ತದೆ.

ಕೂದಲು: ಶುಷ್ಕ ಮಿಜಾಜ಼್‌ನವರ ಕೂದಲು ಒರಟಾಗಿರುತ್ತದೆ, ಗುಂಗುರುಗುಂಗುರಾಗಿರುತ್ತದೆ. ಶಾಖ ಮಿಜಾಜ಼್ ನವರ ಕೂದಲು ತ್ವರಿತವಾಗಿ ಬೆಳೆಯುತ್ತದೆ. ಕೂದಲು ದಟ್ಟವಾಗಿದ್ದು ಕಪ್ಪುಬಣ್ಣಕ್ಕಿರುತ್ತದೆ. ಆರ್ದ್ರ ಮಿಜಾಜ಼್‌ನವರ ಕೂದಲು ಮೃದುವಾಗಿರು ತ್ತದೆ, ನೆಟ್ಟಗಿರುತ್ತದೆ, ತೆಳುವಾಗಿರುತ್ತದೆ ಹಾಗೂ ಲಘುವರ್ಣಕ್ಕಿರುತ್ತದೆ. ಇವರ ಕೂದಲು ಅಷ್ಟು ವೇಗವಾಗಿ ಬೆಳೆಯುವುದಿಲ್ಲ.

ಚರ್ಮ: ಶುಷ್ಕ ಮಿಜಾಜ಼್‌ನವರ ಮೈಚರ್ಮವು ಒಣಗಿರುತ್ತದೆ. ಆರ್ದ್ರ ಮಿಜಾಜ಼್ನವರ ಮೈಚರ್ಮವು ಮೃದುವಾಗಿರುತ್ತದೆ. ಶಾಖ ಮಿಜಾಜ಼್‌ನವರ ಮೈಶಾಖವು ಇತರರಿಗಿಂತ ಸ್ವಲ್ಪ ಹೆಚ್ಚಿರುತ್ತದೆ ಹಾಗೂ ಶೈತ್ಯ ಮಿಜಾಜ಼್‌ನವರ ಮೈಶಾಖವು ಯಾವಾಗಲೂ ತಣ್ಣಗಿರುತ್ತದೆ.

ಚಟುವಟಿಕೆ: ಶಾಖ ಮಿಜಾಜ಼್‌ನವರ ಶರೀರದಲ್ಲಿ ಹೆಚ್ಚು ಶಕ್ತಿಯು ಉತ್ಪಾದನೆಯಾಗುವ ಕಾರಣ, ಅವರು ಸದಾ ಚಟುವಟಿಕೆ ಯಿಂದಿರುತ್ತಾರೆ ಹಾಗೂ ಬೇಸರವಿಲ್ಲದೆ ಮಾತನಾಡುತ್ತಲೇ ಇರುತ್ತಾರೆ. ಶೈತ್ಯ ಮಿಜಾಜ಼್‌ನವರ ಶರೀರದಲ್ಲಿ ಮಿತಪ್ರಮಾಣದ ಶಕ್ತಿಯು ಉತ್ಪಾದನೆಯಾಗುವ ಕಾರಣ, ಅವರು ಅಧಿಕ ಚಟುವಟಿಕೆಯನ್ನು ತೋರದೆ ಎಷ್ಟು ಬೇಕೋ ಅಷ್ಟು ಮಾತ್ರ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಅವರು ಅನಗತ್ಯವಾಗಿ ಮಾತನಾಡುವುದು ಕಡಿಮೆ.

ಬೌದ್ಧಿಕ ಲಕ್ಷಣಗಳು: ಶಾಖ ಮಿಜಾಜ಼್‌ನವರು ಬಾಹ್ಯಾಮುಖಿಗಳು. ಸ್ನೇಹಪರರು. ತಾಳ್ಮೆಯು ಕಡಿಮೆ. ಹಾಗಾಗಿ ಇವರಲ್ಲಿ ಒತ್ತಡಗಳು ಅಧಿಕವಾಗಿರುತ್ತವೆ. ಶೈತ್ಯ ಮಿಜಾಜ಼್‌ನವರು ಅಂತರ್ಮುಖಿಗಳು. ತಮ್ಮ ಪಾಡಿಗೆ ತಾವಿರುವರು. ಶಾಂತಚಿತ್ತರಾಗಿರು ವರು. ತಾಳ್ಮೆಯು ಹೆಚ್ಚಿರುತ್ತದೆ. ಒಂದು ರೀತಿಯ ಖಿನ್ನತೆ ಹಾಗೂ ವಿಷಣ್ಣತೆಯು ಮನೆ ಮಾಡಿರುತ್ತದೆ. ಭ್ರಮಾಧೀನರಾಗಬಹುದು.

ಮನುಷ್ಯರ ಬೌದ್ಧಿಕ ಲಕ್ಷಣಗಳು ಸ್ಥಿರವಲ್ಲ. ಅವು ಬದಲಾಗುತ್ತಿರುತ್ತವೆ. ಒಬ್ಬ ವ್ಯಕ್ತಿಯು ಬೆಳೆಯುವ ಪರಿಸರ, ಧಾರ್ಮಿಕತೆ, ಅಧ್ಯಾತ್ಮಿಕತೆ ಹಾಗೂ ಬುದ್ಧಿವಂತರಾಗಬೇಕೆನ್ನುವ ತುಡಿತವು ಅವರ ಬೌದ್ಧಿಕ ಲಕ್ಷಣಗಳನ್ನು ಬದಲಿಸಬಲ್ಲುದು. ಹಾಗಾಗಿ ವ್ಯಕ್ತಿಯ ತೋರಿಕೆಯ ಮಿಜಾಜ಼್‌ಗೂ ಹಾಗೂ ಬೌದ್ಧಿಕ ಸಾಮರ್ಥ್ಯಕ್ಕೂ ನೇರವಾದ ಸಂಬಂಧಗಳು ಕಾಣದಿರಬಹುದು.

ಸಂವೇದನಾಶೀಲತೆ: ಶಾಖ ಮಿಜಾಜ಼್‌ನವರು ಉಷ್ಣ ಪರಿಸರವನ್ನು ತಾಳಿಕೊಳ್ಳಲಾರರು. ಶೈತ್ಯ ಮಿಜಾಜ಼್‌ನವರು ಶೀತಲ ಪರಿಸರಕ್ಕೆ ಹೊಂದಿಕೊಳ್ಳಲಾರರು. ಶುಷ್ಕ ಮಿಜಾಜ಼್ ನವರು ಆದ್ರತೆಯಿಲ್ಲದೆ ಒಣಹವೆಯಲ್ಲಿ ಚಡಪಡಿಸಿರುವರು. ಹಾಗೆಯೇ ಆರ್ದ್ರ ಮಿಜಾಜ಼್‌ನವರು ಹೆಚ್ಚು ಆರ್ದ್ರ ಪರಿಸರದಲ್ಲಿ ಇರಲಾರರು. ತಕ್ಷಣವೇ ಅವರು ಶುಷ್ಕ ಪರಿಸರಕ್ಕೆ ಹೋಗಲು ಇಷ್ಟಪಡುವರು.

ನಿದ್ರೆ: ಆರ್ದ್ರ ಮಿಜಾಜ಼್‌ನವರು ಹೆಚ್ಚು ಕಾಲ ನಿದ್ರಿಸುವರು; ಶುಷ್ಕ ಮಿಜಾಜ಼್‌ನವರು ಕಡಿಮೆ ಕಾಲ ನಿದ್ರೆಯನ್ನು ಮಾಡುವರು.

ತ್ಯಾಜ್ಯ: ಶಾಖ ಮಿಜಾಜ಼್‌ನವರ ಶರೀರದಿಂದ ಹೊರಬರುವ ಬೆವರು, ಮಲ, ಮೂತ್ರಗಳಿಗೆ ಗಾಢ ಬಣ್ಣ ಹಾಗೂ ಕಟು ವಾಸನೆ ಯಿರುತ್ತದೆ. ಶೈತ್ಯ ಮಿಜಾಜ಼್‌ನವರ ಮಲಮೂತ್ರಗಳಿಗೆ ಲಘುಬಣ್ಣ ಹಾಗೂ ವಾಸನೆಯು ಅಷ್ಟು ಉಗ್ರವಾಗಿರುವುದಿಲ್ಲ.

ಇರಾನೀ ಸಾಂಪ್ರದಾಯಿಕ ವೈದ್ಯಕೀಯದ ಮಿಜಾಜ಼ಿನ ವರ್ಣನೆಯು ಆಯುರ್ವೇದದ ತ್ರಿದೋಷ ಸಿದ್ಧಾಂತವನ್ನು ನೆನಪಿಗೆ ತರುತ್ತದೆ.