Monday, 16th September 2024

ಎನ್.ಟಿ.ಪಿ.ಸಿ ಅಧಿಕಾರಿಗಳಿಂದ ಬಾಧಿತ ಜಮೀನು ಪರಿಶೀಲನೆ

ಕೋಲಾರ: ಕೂಡಗಿ ವಿದ್ಯುತ್ ಸ್ಥಾವರದ ಕೃತಕ ಕೆರೆಯ ನೀರು ಸಂಗ್ರಹದಿಂದ ಮಸೂತಿ ಗ್ರಾಮದ ವ್ಯಾಪ್ತಿಯ ಸುಮಾರು ನಾಲ್ಕು ನೂರರಿಂದ ಐದು ನೂರು ಎಕರೆ ಫಲವತ್ತಾದ ಜಮೀನು ಜವುಳು ಉಂಟಾಗಿದ್ದು ಕೂಡಲೇ ಎನ್.ಟಿ.ಪಿ.ಸಿ ಅಧಿಕಾರಿಗಳು ರೈತರ ಜಮೀನುಗಳನ್ನು ಭೂಸ್ವಾಧಿನ ಪಡಿಸಿಕೊಂಡು ಸೂಕ್ತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಆಗ್ರಹಿಸಿದ್ದ ಬೆನ್ನಲ್ಲೇ ಎನ್.ಟಿ.ಪಿ.ಸಿ ಅಧಿಕಾರಿ ಮಂಜುನಾಥ ಹಾಗೂ ಕೊಲ್ಹಾರ ತಾಲ್ಲೂಕ ದಂಡಾ ಧಿಕಾರಿ ಪಿ.ಜಿ ಪವಾರ್ ಮಂಗಳವಾರ ಮಸೂತಿ ಗ್ರಾಮದ ವ್ಯಾಪ್ತಿಯಲ್ಲಿನ ಭೂಮಿಯ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿದ್ದ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾದ್ಯಮ ದವರೊಂದಿಗೆ ಮಾತನಾಡುತ್ತಾ ವಿದ್ಯುತ್ ಸ್ಥಾವರದ ಕೃತಕ ಕೆರೆಯಿಂದ ಜಮೀನು ಜವುಳಾಗಿರುವುದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಕೂಡಲೇ ಅಧಿಕಾರಿಗಳು ಸೂಕ್ತವಾಗಿ ಸಮೀಕ್ಷೆ ನಡೆಸಿ ಬಾಧಿತ ಜಮಿನು ಸ್ವಾಧೀನಪಡಿಸಿ ಕೊಂಡು ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ರೈತಾಪಿವರ್ಗದ ಹಿತ ಕಾಪಾಡಬೇಕು ಎಂದು ಹೇಳಿದರು.