Friday, 22nd November 2024

ಆ.24 ರಂದು ‘ಮಹಾಘಟಬಂಧನ್’ ಸರ್ಕಾರದ ವಿಶ್ವಾಸಮತ

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ‘ಮಹಾಘಟಬಂಧನ್’ ಸರ್ಕಾರದ ವಿಶ್ವಾಸಮತ ಯಾಚನೆ ಆ.24 ರಂದು ನಡೆಯಲಿದೆ.

ಜನತಾ ದಳ-ಯುನೈಟೆಡ್ (ಜೆಡಿ-ಯು) ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಜೊತೆಗಿನ ಸಂಬಂಧ ಕಡಿದುಕೊಂಡಿರುವ ನಿತೀಶ್ ಕುಮಾರ್, ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಜೊತೆಗೆ ಸೇರಿ ಮಹಾಘಟ ಬಂಧನ್’ ಸರ್ಕಾರ ರಚಿಸಿದ್ದಾರೆ.

ಬುಧವಾರ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಆರ್‌ಜೆಡಿಯ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ, ಹೊಸ ‘ಮಹಾಘಟಬಂಧನ್’ (ಮಹಾಮೈತ್ರಿ ಕೂಟ)ದ 55 ಶಾಸಕರು ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

ಮಹಾಮೈತ್ರಿಕೂಟವು ವಿಧಾನಸಭೆಯಲ್ಲಿ ಒಟ್ಟು 164 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 77 ಶಾಸಕರನ್ನು ಹೊಂದಿದೆ.