Thursday, 21st November 2024

ಆಗಿದ್ದು ಲವ್‌ ಲೈಟಾಗಿ, ಹಾಳಾಗಿದ್ದು ಲೈಫ್ ಬ್ರೈಟಾಗಿ

ಪರಿಶ್ರಮ

parishramamd@gmail.com

ಪ್ರತೀ ಕ್ಷಣವೂ ಯುಗದಂತೆ, ಪ್ರತಿ ನಿಮಿಷವೂ ವರ್ಷದಂತೆ, ಏಕಾಂತವು ಶಾಪದಂತೆ, ಒಂಟಿ ತನವು ಮರುಭೂಮಿಯಂತೆ ಕಾಡಲು ಪ್ರಾರಂಭಿಸಿದರೆ ಅದನ್ನ ಮೊದಲ ಪ್ರೀತಿ ಎನ್ನುತ್ತರೆ.

ಯೋಚನೆಗಳು ಡಿಸ್ಕೋ ಡ್ಯಾನ್ಸ್ ಮಾಡುತ್ತಾ, ಭಾವನೆಗಳು ಆಕ್ಸಿಡೆಂಟ್ ಜೋನ್‌ನ ಸಮೀಪ ಹೋಗಿ, ಕ್ಲಾರಿಟಿಗಿಂತ ಕನ್ಪ್ಯೂಷನ್ ಡಾಮಿನೇಟ್ ಮಾಡಿ, ಸೊಮಾಲಿಯಾದ ಸಮುದ್ರ ಕಳ್ಳರಿಗಿಂತ ತೀವ್ರವಾಗಿ ಕಾಡುವ ನೆನಪುಗಳನ್ನ ಮೊದಲ ಪ್ರೀತಿಯ ಸೆಳೆತಗಳು ಎಂದು ಕರೆಯುತ್ತಾರೆ. ಮೊದಲ ಪ್ರೀತಿಯ ತೀವ್ರತೆ ಸುನಾಮಿಗೆ ಸವಾಲು ಹಾಕಿದಂತೆ, ಮೌನಕ್ಕೆ ವಾರ್ನ್ ಮಾಡಿದಂತೆ. ಮೊದಲ ಪ್ರೀತಿ! ವಿವರಿಸಲಾಗದ ಸೆಳೆತಗಳು, ಅರ್ಥ ವಾಗದ ಆಕರ್ಷಣೆಗಳ ನಡುವೆ ಹುಟ್ಟುವ ಒಂದು ಅದ್ಭುತ ಸಂಗತಿ. ಆದರೆ, ಅದು ಏಕೋ ಸಣ್ಣ ಕಾರಣಕ್ಕೆ ಅದು ದೂರವಾಗಿ ಬಿಡುತ್ತೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಸುವ ಎರಡು ಜೀವಗಳು ವಿನಾಕಾರಣ ದೂರವಾಗಿ ಬಿಟ್ಟಿರುತ್ತಾರೆ. ಗೊತ್ತಿಲ್ಲದೆ ಫುಲ್ ಸ್ಟಾಪ್ ಬಿದ್ದುಹೋಗಿರುತ್ತೆ. ಮೊದಲ ಪ್ರೀತಿಯ ಅಗಲಿಕೆಯ ನೋವನ್ನ ಬಹಳಷ್ಟು ಹುಡುಗ- ಹುಡುಗಿ ಯರು ಸಹಿಸಿಕೊಳ್ಳುವುದು ಕಷ್ಟ. ಹುಡುಗಿ ಕಣ್ಣೀರು ಹಾಕ್ತಾಳೆ. ಒಂಟಿತನ ದಿಂದ ನರಳುತ್ತಾಳೆ, ಒಬ್ಬಳೇ ಮುಗ್ಧವಾಗಿ ಅಳುತ್ತಾಳೆ. ಮನೆ ಮೂಲೆಯಲ್ಲಿ ಕುಳಿತು ಡಿಪ್ರೆಷನ್‌ಗೆ ಒಳಪಡುತ್ತಾಳೆ.

ಇನ್ನು ಹುಡುಗರ ಕಥೆ ತುಂಬಾ ಭಿನ್ನ. ಅಳುತ್ತಾರೆ, ಒಂದು ಲಾಂಗ್ ಡ್ರೈವ್ ಹೋಗ್ತಾರೆ, ಡಾಬಾಗೋ, ಡಿಮೆಟ್ಸ್‌ಗೊ ಸೀಮಿತ ವಾಗಿಬಿಡುತ್ತಾರೆ. ‘ಇವತ್ತಲ್ಲ ನಾಳೆ ಮತ್ತೆ ಅವಳು ಸಿಗದೇ ಇರ‍್ತಾಳಾ?’ ಎಂಬ ನಿರೀಕ್ಷೆ ಯಲ್ಲೇ ಇರ‍್ತಾರೆ. ಆದರೂ ಬರ‍್ತಾ ಬರ‍್ತಾ ಕಾಲ ಬದಲಾಗುತ್ತೆ. ಅವಳ ನೆನಪು ಮಾಸಿ ಹೋಗುತ್ತೆ. ನೋವನ್ನ ಸಹಿಸಿಕೊಳ್ಳಲಾಗದೇ ಏನೋ ಮಾಡಬೇಕು ಜೀವನದಲ್ಲಿ ಅಂತ ಬಯಸುತ್ತಾರೆ. ಆದರೂ ಆ ನೋವನ್ನ ಮರೆಯ ಲಾಗದೆ ಒಬ್ಬ ಹುಡುಗ ಎರಡನೇ ಪ್ರೀತಿಗೆ ಕೈ ಹಾಕುತ್ತಾನೆ.

ಒಬ್ಬ ಹುಡುಗಿ ಎರಡನೇ ಪ್ರೀತಿಗೆ ಕೈ ಹಾಕುತ್ತಾಳೆ. ಇಲ್ಲಿಂದ ಶುರುವಾಗುತ್ತೆ ನಿಜವಾದ ಸಮಸ್ಯೆ. ಬಹಳಷ್ಟು ಮಂದಿ ಮೊದಲ ಪ್ರೀತಿಯಲ್ಲಿ ಸೋತ ತಕ್ಷಣ ಎರಡನೇ ಪ್ರೀತಿಗೆ ಕೈ ಹಾಕುತ್ತಾರೆ. ಎರಡನೇ ಪ್ರೀತಿಯಲ್ಲಿ ಮೊದಲನೇ ನೋವನ್ನ ಮರೆಯ ಬೇಕು. ಆ ಕಣ್ಣೀರನ್ನ ದೂರ ಮಾಡಿಕೋಬೇಕು ಎಂಬ ಪ್ರಯತ್ನವಿರುತ್ತೆ. ಆ ಕಾರಣಕ್ಕೆ ಎರಡನೇ ಪ್ರೀತಿಯಲ್ಲಿ ಕ್ಲಾರಿಟಿಯಿಲ್ಲದೆ ಕಮಿಟ್ ಆಗ್ಬಿಡುತ್ತಾರೆ. ಮೊದಲ ಪ್ರೀತಿಯ ದುಃಖವನ್ನ ಮರೆಯುವುದಕ್ಕೆ ‘ನೋಡು ನಿನಗಿಂತ ಒಳ್ಳೆ ಹುಡುಗೀನ ಪ್ರೀತಿಸು ತ್ತೀನಿ’ ಅಂತ ಮೊದಲ ಹುಡುಗಿಗೆ ತೋರಿಸಕ್ಕೆ, ‘ನಿನಗಿಂತ ಒಳ್ಳೆ ಹುಡುಗನನ್ನ ನಾನು ಪ್ರೀತಿಸುತ್ತೀನಿ’ ಅಂತ ಆ ಮೊದಲ ಹುಡುಗನಿಗೆ ತೋರಿಸಕ್ಕೆ ಎರಡನೇ ಪ್ರೀತಿಗಳು ಪ್ರಾರಂಭವಾಗುತ್ತವೆ.

ಆದರೆ ಎರಡನೇ ಪ್ರೀತಿಯಲ್ಲಿ ಬಿದ್ದಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಕಾರಣ ಅಲ್ಲಿ ನೀವಿರಲ್ಲ; ಇಗೋ ಇರುತ್ತದೆ. ಅಲ್ಲಿ ನೀವಿರಲ್ಲ ನಿಮ್ಮ ಪ್ರತಿಷ್ಠೆಯಿರುತ್ತದೆ. ಅಲ್ಲಿ ನೀವಿರಲ್ಲ ಮೊದಲ ಪ್ರೀತಿಯ ನೋವಿರುತ್ತದೆ. ಅಲ್ಲಿ ನಿವೇನೆಂದು ಪ್ರೂವ್ ಮಾಡುವ ಒಂದು ಬಯಕೆ ಇರುತ್ತದೆ. ಎರಡನೇ ಪ್ರೀತಿಗೆ ಕೈ ಹಾಕಿದ ತಕ್ಷಣ ಎಚ್ಚರಿಕೆಯಿಂದ ಇರಬೇಕು. ಅಪ್ಪಿ-ತಪ್ಪಿ ಜೀವನದಲ್ಲಿ ಮತ್ತೆ ಎಡವಟ್ಟಾಗಿ ಎರಡನೇ ಪ್ರೀತಿ ಸೋತರೆ ಆ ನೋವಿನಿಂದ ಆಚೆ ಬರುವುದು ತುಂಬಾ ಕಷ್ಟ.

ಬಹಳಷ್ಟು ಮಂದಿಗೆ ಈ ಪ್ರೀತಿಯಿಂದ ದೂರವಿರಲು ಸಾಧ್ಯವಿಲ್ಲ, ಹೀಗಾಗಿ ಆ ಪ್ರೀತಿಯ ಸೆಳೆತಕ್ಕೆ ಒಳಪಟ್ಟಿರುತ್ತಾರೆ. ಮನೆ ಸಂಪ್ರದಾಯ ನಡುವೆಯೂ ಅವನ, ಅವಳ ಸೆಳೆತ ಕೈ ಬೀಸಿ ಕರೆಯುತ್ತ ಇರುತ್ತೆ. ಒಂದಷ್ಟು ವರ್ಷಗಳ ಕಾಲ ಜೀವನ ಹಾಗೆ ನಡೆಯುತ್ತೆ. ಒಂದೂ, ಎರಡೂ ಪ್ರೀತಿ ಸೋಲುತ್ತೆ. ಕೊನೆಯದಾಗಿ ನಿಮ್ಮ ಕುಟುಂಬದ ದೊಡ್ಡವರ ತೀರ್ಮಾನ ಗೆಲ್ಲುತ್ತೆ. ತುಂಬಾ ಪ್ರೀತಿಗಳು ಸೋಲುತ್ತೆ. ಇದು ತುಂಬಾ ಜನರ ಲೈಫ್.

ಇನ್ನು ಕೆಲವರ ಕಥೆಗೆ ಬರೋಣ. ಹುಡುಗಿ ಪ್ರೀತಿಯಲ್ಲಿ ಬಿದ್ದಾಗ, ಹುಡುಗನು ಪ್ರೀತಿಯಲ್ಲಿ ಬಿದ್ದಾಗ ‘ಅವನು ನೂರು ವರ್ಷ ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಕೈ ಬಿಡಲ್ಲ’, ‘ಅವಳು ನನ್ನ ನೂರು ವರ್ಷ ಸಂತೋಷವಾಗಿ ಇಡ್ತಾಳೆ. ನನ್ನನ್ನ ದೂರ
ಮಾಡಲ್ಲ’ ಅನ್ನೋ ಒಂದು ಸಾಲಿಡ್ ಆದ ತೀರ್ಮಾನಗಳು ರೂಲ್ ಮಾಡ್ತಿರುತ್ತದೆ. ಆದರೆ ಟ್ರಾಜಿಡಿ ಏನು ಅಂದರೆ ಬರ‍್ತಾ ಬರ‍್ತಾ ಹುಡುಗನಿಗೆ ಹುಡುಗಿ ಮೇಲೆ ಗೊತ್ತಿಲ್ಲದೆ ಆಸಕ್ತಿ ಕಡಿಮೆ ಯಾಗುತ್ತಾ ಬರುತ್ತೆ.

ಹುಡುಗಿಗೂ ಹುಡುಗನ ಮೇಲೆ ಗೊತ್ತಿಲ್ಲದೆ ಆಸಕ್ತಿ ಕಡಿಮೆಯಾಗುತ್ತ ಬರುತ್ತೆ. ಯಾಕೆಂದರೆ ಪ್ರೀತಿಯಲ್ಲಿದ್ದಾಗ ಪ್ರತಿಯೊಬ್ಬ ಹುಡುಗನು ಹುಡುಗಿಗೆ ಕೃತಕ ಜಗತ್ತು ತೋರಿಸಿರುತ್ತಾನೆ. ಇಲ್ಲದ ಕಲ್ಪನೆಗಳನ್ನ, ನನಸಾಗದ ಕನಸುಗಳ ಗೋಪುರವನ್ನು ಕಟ್ಟಿರುತ್ತಾನೆ. ಸೆಳೆತಗಳ ಸಹವಾಸವೇ ಹಾಗೆ, ಮಾತು ಕೇಳದ ಮನಸ್ಸು. ಹಾದಿ ತಪ್ಪಿಸುವ ಪ್ರಾಯ. ಎಷ್ಟೇ ಪ್ರಯತ್ನ
ಪಟ್ಟರೂ ನಿಗ್ರಹಕ್ಕೆ ಸಿಗದ ಏಕಾಗ್ರತೆ ಏನೇ ಸಾಧಿಸಬೇಕೂ ಅಂತ ಎಷ್ಟೇ ಪಟ್ಟರೂ ಕಾಲೇಜ್‌ನ ಕಾರಿಡರ್‌ನಲ್ಲಿ, ಎಂಜಿನಿ ಯರಿಂಗ್‌ನ ಅಂಗಳದಲ್ಲಿ, ಮೆಡಿಕಲ್‌ನ ಲ್ಯಾಬ್ ಗಳಲ್ಲಿ, ಡಿಗ್ರಿಯ ಬಿಡುವಿನ ವೇಳೆಯಲ್ಲಿ ಒಂದು ಚಿಕ್ಕ ಮುಗುಳ್ನಗೆ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿರುತ್ತೆ.

ಸಾಧಿಸಬೇಕೆಂಬ ಛಲ ಏನೋ ಅಚೀವ್ ಮಾಡಬೇಕು ಅನ್ನೋ ಗುರಿ ಎಷ್ಟೇ ಇದ್ದರೂ ಸಹ ಸೆಳೆತಗಳ ಸಹವಾಸಕ್ಕೆ ಸಿಗದಿರುವ ಜೀವಗಳು ಸಿಗುವುದು ತುಂಬಾ ಕಷ್ಟ. ಪಿಯುಸಿಯ ವೆಲ್‌ಕಮ್‌ನಲ್ಲೋ, ಮತ್ತ್ಯಾವ ಕಾರ್ಯಕ್ರದಲ್ಲೋ, ಟ್ರಿಪ್ ಹೋದಾಗ್ಲೊ, ಕೈ ಬೀಸಿ ಕರೆದಂತಹ ಸೆಳೆತ, ಕೆಲಸಕ್ಕೆ ಸೇರಿದಾಗ ಊಟದ ಸಮಯದಲ್ಲಿ ಚಿಕ್ಕ ಪರಿಚಯವಾಗಿ ಇಳೀ ಸಂಜೆಯಲ್ಲಿ ಬಿಡದೇ ಕಾಡಿದ ಸೆಳೆತ, ಕೆಲಸಕ್ಕೆ ಸೇರಿದಾಗ ಊಟದ ಸಮಯದಲ್ಲಿ ಚಿಕ್ಕ ಪರಿಚಯವಾಗಿ ಇಳಿ ಸಂಜೆಯಲ್ಲಿ ಬಿಡದೆ ಕಾಡಿದ ಸೆಳೆತ, ಕೆಲಸ ಸಿಗದಿದ್ದಾಗ ನಿರುದ್ಯೋಗಿ ಗಳಾಗಿ ಅಲೆಯುವಾಗ ಅಲ್ಲೆಲ್ಲೋ ಪರಿಚಯವಾಗಿ ಧೈರ್ಯ ತುಂಬುವ ಅ ಜೀವದ ಸೆಳೆತ ಒಂದಾ, ಎರಡಾ? ಹೇಳಲು ಹೋದರೆ ಪ್ರತಿಯೊಬ್ಬ ಯುವಕ-ಯುವತಿಯ ಕಥೆಯು ಮೊಗ್ಗಿನ ಮನಸ್ಸಿನ ಕಥೆ ಆಗುತ್ತೆ.

ಸ್ಪಷ್ಟವಾಗಿ ಗಮನಿಸಿದರೆ ಪ್ರತಿಯೊಬ್ಬ ಯುವಕ-ಯುವತಿಯ ಕಥೆಯು ಸಹ ಸೂಪರ್ ಹಿಟ್ ಸಿನಿಮಾ ತೆಗೆಯುವಂತಹ ಚಿತ್ರಕಥೆ ಇರುತ್ತೆ. ಪ್ರಾಯದಲ್ಲಿ ಸೆಳೆತಗಳು ಸಹಜ. ಸೆಳೆತದಿಂದ ದೂರ ಇರುವುದು ತುಂಬಾ ಕಷ್ಟ. ‘ಇಲ್ಲಪ್ಪ ಸೆಳೆತಗಳೇ ಗೊತ್ತಿಲ್ಲ ಅದು ಹೇಗಿರುತ್ತೆ’ ಅಂತ ಮುಗ್ಧವಾಗಿ ಪ್ರಶ್ನೆ ಮಾಡುವ ಯುವತಿ, ಸೆಳೆತವನ್ನು ‘ಹೇ ನನಗೆ ಅವೆಲ್ಲಾ ಆಗಲ್ಲ’
ಅಂತ ಏನೋ ದೊಡ್ಡ ರೋಪ್‌ಮಾಡಲ್ ತರಹ ಮಾತನಾಡುವ ಹುಡುಗ.

ಇವರಿಬ್ಬರನ್ನೂ ಖಂಡಿತವಾಗ್ಲೂ ನಂಬಬಾರದು. ಯಾಕೆಂದರೆ ಇವರೇ ತಮ್ಮ ಜೀವನದಲ್ಲಿ ಜಾಸ್ತಿ ಸೆಳೆತದ ತೀವ್ರಕ್ಕೆ ಒಳಪಟ್ಟಿರುತ್ತಾರೆ. ಸೆಳೆತದ ತೀವ್ರತೆ ಹೆಚ್ಚಾದಾಗ ಏಕಾಗ್ರತೆ ದಾರಿ ತಪ್ಪುತ್ತೆ. ಶ್ರದ್ಧೆ ಹೋಗುತ್ತೆ. ಸಾಧಿಸಬೇಕು ಅನ್ನೋ ಛಲ ಸತ್ತೇ ಹೋಗಿಬಿಡುತ್ತೆ. ನಾಲ್ಕು ಜನ ಮೆಚ್ಚಬೇಕು ಅಂತ ಬಯಸುವ ಪ್ರತಿ ಜೀವವು, ನಾಲ್ಕು ಜನ ಏನು ಅಂದುಕೊಂಡರೆ ನನಗೇನು, ಅವಳೇ ಬೇಕು ಅಥವಾ ಅವನೇ ಬೇಕು, ಎಂಬ ತೀರ್ಮಾನಕ್ಕೆ ಬಂದುಬಿಡ್ತಾರೆ.

ಒಂದಂತೂ ಸತ್ಯ. ಸೆಳೆತ ನಿಮ್ಮನ್ನ ಸೆಳೆದಾಗ, ಬಿಡದೆ ಕಾಡಿದಾಗ, ನಿದ್ದೆ ಕೆಡಿಸಿದಾಗ, ಅನುಕ್ಷಣ ನೆನಪಾಗುವಂತೆ
ಮಾಡಿದಾಗ ಒಂದು ಯೋಚಿಸಿ. ಖಂಡಿತವಾಗ್ಲೂ ಸೆಳೆತ ಗಳು ಪಾಸಿಟೀವ್ ಆಗಿ ಇದ್ದರೆ ಅದು ನಿಮ್ಮನ್ನ ಇನ್ ಸ್ಪೈರ್ ಮಾಡಿದರೆ, ಗುರಿಯ ಕಡೆ ಕೊಂಡೊಯ್ದರೆ ಅಂತಹ ಸೆಳೆತಗಳು ನಿಮ್ಮ ಬದುಕಿನಲ್ಲಿ ಇರಲಿ. ಸಪೋಸ್ ಸೆಳೆತಗಳು ನಿಮ್ಮ ಏಕಾಗ್ರತೆಯನ್ನು ಕೆಡಿಸಿ, ನಿಮ್ಮ ಬದುಕನ್ನ ಬೀದಿಗೆ ತಂದು ನಿಲ್ಲಿಸಿ, ಅತ್ತ ಗೆಲ್ಲಕ್ಕೆ ಆಗದೇ ಸೋಲಕ್ಕೂ ಆಗದೆ ನಡು ದಾರಿಯಲ್ಲಿ ನಿಲ್ಲಿಸಿ ಬಿಟ್ರೆ ಅಂತಹ ಸೆಳೆತಗಳ ಬಗ್ಗೆ ಎಚ್ಚರಿಕೆಯಿಂದ ಇರೀ.

ಪಿಯುಸಿ ಕೆಂಗೆಡಿಸಿದ ಗೆಳತಿ-ಗೆಳೆಯನ ಸೆಳೆತಗಳ ಬಗ್ಗೆ ಸ್ವಲ್ಪ ಎಚ್ಚರವಿರಲಿ. ಡಿಗ್ರಿಯಲ್ಲಿ ಮೂರು ವರ್ಷ ಅಥವಾ ಎಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷ ಅಥವಾ ಮೆಡಿಕಲ್ ನಲ್ಲಿ ನಾಲ್ಕೂವರೆ ವರ್ಷ ಮುಗಿಯುವುದರೊಳಗೆ ಸೆಮಿ ಸ್ಟರ್ ಪಾಸ್ ಆಗದೆ ಬ್ಯಾಕ್ ಲಾಗ್ ಮೇಲೆ ಬ್ಯಾಕ್‌ಲಾಗ್ ಇಟ್ಕೊಂಡು ಲೈಫ್ ಎಲ್ಲ ಲಾಗ್ ಆಗೋ ಹಾಗೆ ನೋಡಿಕೊಳ್ಳುವ ಸೆಳೆತಗಳಿಂದ ಸ್ವಲ್ಪ ದೂರವಿರಿ.

ಸೆಳೆತ ಬೇರೆ, ಅಟ್ರಾಕ್ಷನ್ ಬೇರೆ, ಇನ್‌ಪ್ಯಾಕ್ಚು ಯೇಶನ್ ಬೇರೆ, ಪ್ರೀತಿ ಬೇರೆ. ನಿಮ್ಮದು ಯಾವುದು ಅಂತ ಫಸ್ಟ್ ಅರ್ಥ ಮಾಡಿಕೊಳ್ಳಿ. ನಿಮ್ಮ ಪ್ರೀತಿ ಪರಿ ಶುದ್ಧವಾಗಿದ್ರೆ, ನಿಮ್ಮ ಪ್ರೀತಿಯ ನೈವೇದ್ಯದಲ್ಲಿ ಸ್ಪಷ್ಟತೆ ಇದ್ರೆ, ನೀವು ಆರಾಧಿಸುವ ಜೀವವನ್ನು ಪ್ರೀತಿಸುವುದು ಸತ್ಯವೇ ಆದ್ರೆ, ಮೊದಲು ಯಶಸ್ಸಿನ ಕಡೆ ಗಮನ ಕೊಡಿ. ನೀವೇನು ಅಂತ ತೋರಿಸಿ. ಗೆದ್ದು ತೋರಿಸಿ. ಕೈ ತುಂಬಾ ಹಣ, ಅಟ್‌ಲೀಸ್ಟ್ ಹುಡುಗಿ ಮನೆ ಕಡೆ ಕೇಳಿದಾಗ ಉತ್ತರಿಸುವಷ್ಟು ಬೇಕಾಗಿರುವ ಕರೆನ್ಸಿ, ಬೇಕಾಗಿರೋ ಕಾನ್‌ಫಿಡೆನ್ಸ್ ಸಂಪಾದಿಸಿಕೊಳ್ಳಿ.

ನಂತರ ನಿಮ್ಮನ್ನನ ಪಾಸಿಟೀವ್ ಆಗಿ ನಡೆಸಿದಂತಹ ಸೆಳೆತಕ್ಕೆ ಒಂದು ಥ್ಯಾಂಕ್ಸ್ ಹೇಳಿ. ಇಷ್ಟ ಪಟ್ಟವಳು ಮನೆಗೆ ಬರ‍್ತಾಳೆ, ಇಷ್ಟ ಪಟ್ಟವನು ಬಾಳಸಂಗಾತಿ ಆಗ್ತಾನೆ, ಸಪೋಸ್ ಸೆಳೆತಗಳಿಂದ ಹೆಚ್ಚು ಕಡಿಮೆಯಾದರೆ ಬದುಕು ಬೀದಿಗೆ ಬಂದು ಬಿಡುತ್ತೆ. ಕೆಲಸ ಇರಲ್ಲ, ಬದುಕೋದೆ ಕಷ್ಟ ಆಗಿಬಿಡುತ್ತೆ. ಸ್ನೇಹಿತರು ಕೊಡಿಸೋ ಟೀ ಗೋಸ್ಕರ, ಸಿಕ್ಕಿದವರು ಯಾರೋ ಕೊಡಿಸುವ ಟಿ-ನ್‌ಗೋಸ್ಕರ ಬದುಕು ಕಳೆಯಬೇಕಾಗುತ್ತೆ; ಏನಂತೀರಾ? ಸೆಳೆತಗಳ ಜತೆ ಸಹವಾಸ ಮಾಡಿರೋ ಇಲ್ಲ ಬದುಕೆಲ್ಲ ವನವಾಸ
ಮಾಡ್ತಿರೋ ತೀರ್ಮಾನ ನಿಮಗೆ ಬಿಟ್ಟಿದ್ದು.

ವಿರಹ ಅದೊಂದು ತರಹ, ನೆನಪು ಕೊಟ್ಟವಳು ದೂರ ವಾದರೆ ವಿರಹ, ಸನಿಹ ಇದ್ದು ಸೆಳೆದವನು ಮರೆಯಾದರೆ ವಿರಹ, ಸಾಕಾಗದ ಏಕಾಂತ ಕಲಿಸಿದ ಪ್ರೇಯಸಿ ಮುನಿಸಿ ಕೊಂಡರೆ ವಿರಹ, ಪ್ರೀತಿಸ್ತೀನಿ ಅಂತ ಹೇಳಿ ಮದುವೆ ಯಾದ ಗಂಡ ಕಾರಣವಿಲ್ಲದೆ ನೆಗ್ಲೆಟ್ ಮಾಡಿದರೆ ವಿರಹ, ಸೌಂದರ್ಯದಿಂದ ಸೆಳೆತ ಪ್ರೇಯಸಿ ಮತ್ತೊಬ್ಬನೊಂದಿಗೆ ಸಲಿಗೆಯಿಂದ ಮಾತನಾಡಿದರೆ ವಿರಹ, ನಂಬಿದವರು ಅಟ್ ಎ ಟೈಮ್ ನಂಬಿಕೆ ದ್ರೋಹ ಮಾಡಿದರೆ ವಿರಹ, ಜೀವನಪೂರ್ತಿ, ನೆನಪಿಸಿ ಕೊಳ್ಳುವಂತ ಮಧುರಕ್ಷಣಗಳನ್ನ ಕೊಟ್ಟ ಗೆಳೆಯ ಮರೆಯಾದರೆ ವಿರಹ, ಹೇಳಲಾಗದ, ವಿವರಿಸಲಾಗದ, ವರ್ಣಿಸಲಾಗದ ಯಾತನೆ ವಿರಹ.

ವಿರಹ ಬಂತೆಂದು ಕಣ್ಣೀರು ಹಾಕಬಾರದು, ಡಿಪ್ರೆಷನ್ ಗೆ ಒಳಗಾಗಬಾರದು, ವೇದನೆಯನ್ನು ವೇತನದಂತೆ ಸ್ವೀಕರಿಸ ಬಾರದು, ಬಹಳಷ್ಟು ಮಂದಿ ಸಹನೆಯಿಂದ ವರ್ತಿಸುತ್ತಾರೆ. ಕಾರಣ ಅವರಿಗೆ ಕಷ್ಟ ಬಂದಿಲ್ಲವೆಂದಿಲ್ಲ, ಕಷ್ಟವನ್ನು ಮೌನದಲ್ಲಿ ವ್ಯಕ್ತಪಡಿಸುತ್ತಾರೆ. ಏನೇ ಆಗಲಿ, ಎಷ್ಟೇ ನೋವಾಗಲಿ, ಇಷ್ಟ ಪಟ್ಟವರು ದೂರವಾದರೂ, ನಂಬಿದವರು ದ್ರೋಹಿಗಳಾದರೂ ಸ್ಟೇ ಕೂಲ್.

ಬಿಟ್ಟು ಹೋದ ಪ್ರೇಯಸಿ ‘ಇವನ್ನ ಮಿಸ್ ಆಗಬಾರದಿತ್ತು’ ಎಂದು ಕೊರಗುವಂತೆ ಬದುಕಬೇಕು. ದ್ರೋಹ ಮಾಡಿದವರು ನಾನು ದೊಡ್ಡ ತಪ್ಪು ಮಾಡಿಬಿಟ್ಟೇ ಎಂದು ನರಳುವಂತೆ ಬದುಕಬೇಕು. ನೆನಪು ಕೊಟ್ಟು ಹೋದವಳು ಪ್ರತಿಕ್ಷಣ ನಿನ್ನ ನೆನಪಿಸಿಕೊಂಡು ಬೇಸರ ಪಡುವಂತೆ ಸಾಧಿಸಿ ತೋರಿಸಬೇಕು.

ಪ್ರೀತಿಯ ಯುವಕ-ಯುವತಿಯರೇ ಬದುಕಿನಲ್ಲಿ ಏನೇ ಕಷ್ಟ ಬಂದರು, ಅದಕ್ಕೆ ನೀವು ಪ್ರತಿಕ್ರಿಯೆ ನೀಡುವ ಶೈಲಿಯಲ್ಲಿ ಭವಿಷ್ಯದ ಗೆಲುವಿರುತ್ತೆ. ಪ್ರೀತಿಯಲ್ಲಿ ಸೋತ ತಕ್ಷಣ ಹತಾಶರಾಗಬೇಡಿ. ಬದುಕೇ ಮುಗಿದುಹೋಯ್ತು ಎಂಬ ‘ಲೈಫ್ ಎಂಡಿಂಗ್’ ತೀರ್ಮಾನಕ್ಕೆ ಬರಬೇಡಿ. ಪಾತಾಳಕ್ಕೆ ಬಿದ್ದಾಗಲೇ ಆಕಾಶವನ್ನ ಸೂಕ್ಷ್ಮವಾಗಿ ಗಮಿಸಲು ಸಾಧ್ಯ. ಬೀದಿಗೆ ಬಿದ್ದಾಗಲೇ ಗೊತ್ತಾಗೋದು ಕಷ್ಟ ಬಂದಾಗ ಹೇಗೆ ಬದುಕಬೇಕೆಂದು.

ಅವಮಾನವಾದಾಗಲೇ ಅರ್ಥವಾಗೋದು ನಿನ್ನ ವಿಲ್‌ಪವರ್ ಏನೆಂದು. ನಂಬಿಕೆ ದ್ರೋಹವಾದಾಗಲೇ ಗೊತ್ತಾಗೋದು ಯಾರನ್ನ ಎಷ್ಟು ಬೇಕು ಅಷ್ಟೇ ನಂಬಬೇಕು ಅಂತ. ಎಡವಟ್ಟಾದಾಗಲೇ ಇಡುವ ಹೆಜ್ಜೆಗಳಲ್ಲಿ ಸ್ಪಷ್ಟತೆ ಬರೋದು. ಎಲ್ಲವನ್ನು ಕಳೆದುಕೊಂಡಾಗಲೇ ಅರ್ಥವಾಗೋದು ಯಾವುದನ್ನ ಹೇಗೆ ಪಡೆಯಬೇಕೆಂದು. ಅರ್ಥವಾಯ್ತ? ಇನ್ನಾದರೂ ಧೈರ್ಯವಾಗಿರಿ, ಪ್ರೀತಿಯಲ್ಲಿ ಸೋತೋದೆ, ಬದುಕು ಮುಗಿದೇ ಹೋಯ್ತು ಅಂತ ಕೊರಗಬೇಡಿ. ತಾಕತ್ತಿದ್ದರೆ ಬದುಕಿ ತೋರಿಸಿ. ಗುಡ್‌ಲಕ್!