ವಿಶೇಷ ವರದಿ: ಶಿವಕುಮಾರ ಬೆಳ್ಳಿತಟ್ಟೆ
ಕೇಂದ್ರ ಸಚಿವೆ ಶೋಭಾಗೆ ಪಟ್ಟ ಕಟ್ಟಲು ಚಿಂತನೆ: ಪ್ರಧಾನಿ ಚರ್ಚೆ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿ ಸಮಿತಿ (ಚುನಾವಣಾ ಸಮಿತಿ ) ಸದಸ್ಯರಾದ ಬೆನ್ನ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಸಾಧ್ಯತೆ ಕಾಣುತ್ತಿದೆ.
ರಾಜ್ಯ ಬಿಜೆಪಿ ಸಂಘಟನೆಯನ್ನುಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಮಹಿಳಾ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಸಂಭವ ಇದೆ. ಅದರಲ್ಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಶೋಭಾ ಕರಂದ್ಲಾಜೆ ಅವರನ್ನು ಮುಂಬರುವ ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಬಳಸಿಕೊಳ್ಳುವುದು ಹಾಗೂ ಕರಾವಳಿ ಮತ್ತು ಒಕ್ಕಲಿಗರ ಪ್ರಾತಿನಿ ಧ್ಯದಲ್ಲಿ ಬಳಸಿಕೊಂಡು ಪಕ್ಷವನ್ನುಅಧಿಕಾರಕ್ಕೆ ತರುವ ಆಲೋಚನೆ ನಡೆದಿದೆ ಎಂದು ಬಿಜೆಪಿ ದೆಹಲಿ ಕಚೇರಿ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರನ್ನು ಸಂಸದೀಯ ಸಮಿತಿಗೆ ಆಯ್ಕೆ ಮಾಡಿ ಅಚ್ಚರಿ ಮೂಡಿಸಿ ದಂತೆಯೇ ಪಕ್ಷದ ವರಿಷ್ಠರು ಒಂದೊಮ್ಮೆ ನಾಯಕತ್ವ ಬದಲಾವಣೆಗೆ ಮುಂದಾದಲ್ಲಿ, ಅಲ್ಲಿಯೂ ಶೋಭಾ ಕರಂದ್ಲಾಜೆ ಅವರಿಗೆ ಅದೃಷ್ಟ ಖುಲಾಯಿಸುವ ಸಂಭವ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಏಕೆಂದರೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳಿಂದ ಪಕ್ಷದ ಕಾರ್ಯಕರ್ತರಲ್ಲಿ ಅಭದ್ರತೆಯ ಭಾವ ಹೆಚ್ಚಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಕಾರ್ಯ ಕರ್ತರಲ್ಲಿ ವಿಶ್ವಾಸ ಹೆಚ್ಚಿಸುವ ಮೂಲಕ ಕಾರ್ಯಕರ್ತ ರನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳಬೇಕಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಿಸುವ ಅನಿವಾರ್ಯ ಎದುರಾಗಿದ್ದು, ಶೀಘ್ರವೇ ನೂತನ ರಾಜ್ಯಾಧ್ಯಕ್ಷ
ಹೆಸರು ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ಹಿರಿಯರು ಹೇಳಿದ್ದಾರೆ.
ಶೋಭಾ ಎಫೆಕ್ಟ್ ಹೇಗಿರುತ್ತೆ?: ಪಕ್ಷದ ವರಿಷ್ಠರು ಈಗಾಗಲೇ ತೀರ್ಮಾನಿಸಿರುವಂತೆ ರಾಜ್ಯಾಧ್ಯಕ್ಷರ ಬದಲಾವಣೆ ಶೀಘ್ರದ ನಡೆಯಲಿದೆ. ಈ ಸ್ಥಾನಕ್ಕೆ ಸದ್ಯ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಸಿ. ಟಿ. ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಸಚಿವ ಡಾ ಅಶ್ವತ್ಥ್ ನಾರಾಯಣ ಕೂಡ ಪ್ರಯತ್ನ ಮಾಡಿದ್ದಾರೆ.ಈ ಮಧ್ಯೆ ಒಂದು ವೇಳೆ ಶೋಭಾ ಅವರೇ ರಾಜ್ಯಾಧ್ಯಕ್ಷರಾದರೆ ಪಕ್ಷದ ರಾಜ್ಯ ಹಿರಿಯ ನಾಯಕರು ಹೇಗೆ ವರ್ತಿಸುತ್ತಾರೆ ಎನ್ನುವ ಪ್ರಶ್ನೆ ಎರಡನೇ ಹಂತದ
ನಾಯಕರಲ್ಲಿ ಶುರುವಾಗಿದೆ.
ಪಕ್ಷದ ನಾಯಕನ ಪ್ರಕಾರ ಅರವಿಂದ ಲಿಂಬಾವಳಿ ರಾಜ್ಯಾಧ್ಯಕ್ಷರಾಗಲು ಬಿ.ಎಲ್. ಸಂತೋಷ್ ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇನ್ನು ಸಚಿವ ಅಶ್ವತ್ಥ್ ನಾರಾಯಣ್ ಈ ಸ್ಥಾನ ಅಲಂಕರಿಸಲು ಸಚಿವ ಆರ್ ಅಶೋಕ್ ಎಷ್ಟರಮಟ್ಟಿಗೆ ಸಹಕಾರ ನೀಡುತ್ತಾರೆ ಎನ್ನುವ ಸಂಶಯ ಕೂಡ ಬಲವಾಗಿದೆ. ಇದರ ಮಧ್ಯೆ ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ನಡುವೆ ಪರೋಕ್ಷ
ಪೈಪೋಟಿ ಶುರುವಾಗಿದ್ದು ಇವರಲ್ಲಿ ಸಂತೋಷ್ ಯಾರನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವಲಂಬಿತ.
ಹಾಗೊಂದು ವೇಳೆ ಶೋಭಾ ರಾಜ್ಯಾಧ್ಯಕ್ಷರಾದರೆ ಅದಕ್ಕೆ ಹಿರಿಯರಾದ ಅಶೋಕ್, ಈಶ್ವರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ. ಅರವಿಂದ ಲಿಂಬಾವಳಿ ಅವರು ಹೇಗೆ ಸಹಕಾರ ನೀಡುತ್ತಾರೆ ಎನ್ನುವ ಅನುಮಾನ ಗಳು ಇವೆ. ಈ ಮಧ್ಯೆ ಶೋಭಾಗೆ ಯಡಿಯೂರಪ್ಪ ಮತ್ತು ಅವರ ಆಪ್ತ ಸಚಿವರು ಶಾಸಕರು ನಾಯಕರ ಬೆಂಬಲ ಇದೆ ಎನ್ನುವ ಸಂದೇಶ ಪಕ್ಷದ ವರಿಷ್ಠರಿಗೆ ಮುಟ್ಟಿದೆ.
ಮೋದಿ ಜತೆ ಚರ್ಚಿಸಿದ್ದು ಏನು?
ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯದಲ್ಲಿ ಉನ್ನತ ಸ್ಥಾನ ನೀಡುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಸಕ್ತಿ ತೋರಿಸಿದ್ದು ಇದರ ಬಗ್ಗೆ ಅವರು ಶೋಭಾ ಅವರ ಜತೆ ಕಳೆದ ತಿಂಗಳ ಕೊನೆಯ ವಾರದಲ್ಲಿ ಸುಮಾರು ೨೦ ನಿಮಿಷಕ್ಕೂ
ಹೆಚ್ಚು ಕಾಲ ಚರ್ಚೆ ನಡೆಸಿದರು ಎನ್ನಲಾಗಿದೆ. ಗುಜರಾತ್ನಲ್ಲಿ ಆನಂದಿ ಭಯಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ
ಮಾದರಿಯ ಕರ್ನಾಟಕದಲ್ಲೂ ಪ್ರಥಮ ಬಾರಿಗೆ ಮಹಿಳಾ ರಾಜ್ಯಾಧ್ಯಕ್ಷರನ್ನು ಮಾಡಬೇಕೆನ್ನುವ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಶೋಭಾ ಕರಂದ್ಲಾಜೆ ಕೂಡ ಸಮ್ಮತಿ ನೀಡಿದ್ದು ಪಕ್ಷ ವಹಿಸಿದರೆ ರಾಜ್ಯದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಬದ್ಧತೆಯ ಮಾತುಗಳನ್ನಾಡಿದ್ದಾರೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.