ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ
ಕಲಬುರಗಿ: ರಾಜ್ಯದಲ್ಲಿ ಲಂಬಾಣಿ ಸಮುದಾಯ ವಾಸಿಸುವ ತಾಂಡಾ ಮತ್ತು ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮ ಗಳನ್ನಾಗಿ ಮಾಡಲಾಗುತ್ತಿದ್ದು, ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯಿಂದಲೆ ಇದಕ್ಕೆ ಚಾಲನೆ ನೀಡಲಾ ಗುವುದು ಎಂದು ಕಂದಾಯ ಸಚಿವ ಅರ್.ಅಶೋಕ ಘೋಷಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಆಯೋಜಿಸಿದ ಗ್ರಾಮ ವಾಸ್ತವ್ಯ ಮತ್ತು ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯ 453 ತಾಂಡಾಗಳನ್ನು ಪೈಲೇಟ್ ಯೋಜನೆಯಡಿ ಕೈಗೆತ್ತಿಕೊಂಡು ಕಂದಾಯ ಗ್ರಾಮಗಳನ್ನಾಗಿ ಮುಂದಿನ ಎರಡು ತಿಂಗಳಲ್ಲಿ ಮಾಡಲಾಗುವುದು. ಇದಲ್ಲದೆ ಪ್ರಸ್ತುತ ತಾಂಡಾ, ಹಟ್ಟಿಯಲ್ಲಿ (ಶಾಲಾ-ಕಾಲೇಜು, ಸ್ಮಶಾನ ಹೊರತುಪಡಿಸಿ) ಅನಧಿಕೃತವಾಗಿ ವಾಸಿಸುವರನ್ನು ಅಧಿಕೃತಗೊಳಿಸಿ ಎಷ್ಟು ವಿಸ್ತೀರ್ಣದಲ್ಲಿ ಇದ್ದಾರೆ ಅಷ್ಟು ಜಾಗದ ನಿವೇಶನ, ಮನೆ ಅವರ ಹೆಸರಿಗೆ ನೋಂದಣಿ ಮಾಡಿಸಿ ಮನೆ ಕಟ್ಟಲು ಆರ್ಥಿಕ ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಏಕಕಾಲದಲ್ಲಿ 30 ಸಾವಿರ ಜನರಿಗೆ ಹಕ್ಕು ಪತ್ರ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ರೈತ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಿದೆ. ಕೃಷಿ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣ ಪಡೆಯಬೇಕು ಎಂಬ ನಿಟ್ಟಿನಲ್ಲಿ ಇಂಜಿನೀಯರಿಂಗ್, ವೈದ್ಯಕೀಯ, ಶಿಕ್ಷಣ, ವಕೀಲ ವೃತ್ತಿಯ ಉನ್ನತ ಶಿಕ್ಷಣ ಪಡೆಯಲು ಅವರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲಾ ಗುವುದು. ಸವಿತಾ, ಕುಂಬಾರ, ಬಡಿಗೇರ್ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 50 ಸಾವಿರ ರೂ. ಉದ್ಯೋಗ ನಿಧಿ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಮನೆ-ಮನೆಗೆ ಕಂದಾಯ ದಾಖಲೆಗಳು ಅಭಿಯಾನದಲ್ಲಿ 50 ಸಾವಿರ ಜನರಿಗೆ ಜಾತಿ, ಆದಾಯ, ಅಟ್ಲಾಸ್, ಪಹಣಿ ಪತ್ರಗಳನ್ನು ನೀಡಲಾಗಿದೆ. ಕಳೆದ 10 ಗ್ರಾಮ ವಾಸ್ತವ್ಯದಲ್ಲಿ ಇಂದಿಲ್ಲಿ ದಾಖಲೆ ಪ್ರಮಾಣದಲ್ಲಿ 28,900 ಜನರಿಗೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದ ಅವರು ಇದು ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ ಪ್ರತಿಫಲ ಎಂದರು.
ಆಸಿಡ್ ಸಂತ್ರಸ್ತರಿಗೆ 10 ಸಾವಿರ ರೂ. ಪಿಂಚಣಿ: ಯಾಸಿಡ್ ಸಂತ್ರಸ್ತರಿಗೆ ಈ ಹಿಂದೆ 3 ಸಾವಿರ ರೂ. ಪಿಂಚಣಿ ಕೊಡಲಾಗುತಿತ್ತು, ಅದನ್ನು ಈಗ 10 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಿದೆ. ಇದಲ್ಲದೆ ಅವರಿಗೆ ಸೂರು ಕಲ್ಪಿಸುವ ಉದ್ದೇಶ ದಿಂದ ಉಚಿತ ಸೈಟ್ ನೀಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾ ಗುವುದು. ಸ್ವಯಂ ಉದ್ಯೋಗ ಮಾಡಲು ಸಂತ್ರಸ್ತರು ಮುಂದೇ ಬಂದಲ್ಲಿ 5 ಲಕ್ಷ ರೂ. ವರೆಗೆ ಧನಸಹಾಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಂದಾಯ ಸಚಿವರು ಹೇಳಿದರು.
ಗ್ರಾಮ ವಾಸ್ತವ್ಯ ಪರಿಣಾಮ,72 ಗಂಟೆಯಲ್ಲಿ ಪಿಂಚಣಿ ಜಾರಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಿಂದ ಅನೇಕರಿಗೆ ಅನುಕೂಲವಾಗಿದೆ. ಇದು ನನಗೂ ಗ್ರಾಮಸ್ಥೃ ಸಮಸ್ಯೆ ಅರಿಯಲು ಪಾಠವಾಗಿದೆ. ಇದರಿಂದ ರೈತರ, ಸಾರ್ವಜನಿಕರ ಹಲವಾರು ಸಮಸ್ಯೆಗಳು ಸ್ಥಳದಲ್ಲಿಯೇ ಪರಿಹರಿಸಲ್ಪಟ್ಟಿವೆ. ಡಿ.ಸಿ., ತಹಶೀಲ್ದಾರರು ಹಳ್ಳಿಗೆ ಹೋಗಿ ಜನರ ಸಮಸ್ಯೆ ಆಲಿಸು ತ್ತಿದ್ದಾರೆ. ಗ್ರಾಮ ವಾಸ್ತವ್ಯ ಪರಿಣಾಮ ಮತ್ತು ಕಲಬುರಗಿ ಡಿ.ಸಿ. ಯಶವಂತ ವಿ. ಗುರುಕರ್ ಅವರ ಸಲಹೆ ಮೇರಿಗೆ ರಾಜ್ಯದಾದ್ಯಂತ 72 ಗಂಟೆಯಲ್ಲಿ ವೃದ್ಧಾಪ್ಯ ವೇತನ ನೀಡುವ “ಹಲೋ ಕಂದಾಯ ಸಚಿವರೇ” ಕಾರ್ಯಕ್ರಮ ಜಾರಿಗೊಳಿಸಿದೆ. ಯೋಜನೆ ಜಾರಿಯಾದ 2 ತಿಂಗಳಿನಲ್ಲಿ 28 ಸಾವಿರ ಜನರಿಗೆ ವೇತನ ನೀಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಒಟ್ಟಾರೆ 10 ಸಾವಿರ ಕೋಟಿ ರೂ. ಸಾಮಾಜಿಕ ಪಿಂಚಣಿ ನೀಡುತ್ತಿದೆ ಎಂದರು.
ಅತಿವೃಷ್ಟಿ ಪರಿಹಾರ ಕುರಿತಂತೆ ಮಾತನಾಡಿದ ಸಚಿವರು, ಹಿಂದಿನ 25 ವರ್ಷ ಇತಿಹಾಸ ತಿರುಗಿ ನೋಡಿದಾಗ, ಒಂದು ವರ್ಷದ ನಂತರವೇ ಪರಿಹಾರ ಸಿಕ್ಕಿದೆ. ನಮ್ಮ ಸರ್ಕಾರ ಬಂದ ಮೇಲೆ 30 ದಿನದಲ್ಲಿಯೇ ಬೆಳೆ ಪರಿಹಾರ ನೀಡಲು ಪ್ರೂಟ್ಸ್ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದೇವೆ. ಕಳೆದ ವರ್ಷ 18.02 ಲಕ್ಷ ರೈತರಿಗೆ ಎನ್.ಡಿ.ಅರ್.ಎಫ್ ಮಾರ್ಗಸೂಚಿ ಯಂತೆ 1,252.89 ಕೋಟಿ ರೂ. ಪರಿಹಾರ ಕೇಂದ್ರ ಸರ್ಕಾರ ನೀಡಿದರೆ, ರಾಜ್ಯ ಸರ್ಕಾರ 1,135 ಕೋಟಿ ರೂ. ಹೆಚ್ಚುವರಿ ಪರಿಹಾರ ನೀಡಿದೆ ಎಂದು ಆರ್.ಅಶೋಕ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿಗೆ ನೋಂದಣಿ ಶುಲ್ಕದಲ್ಲಿ ಈಗಾಗಲೆ ಶೇ.10ರಷ್ಟು ರಿಯಾಯಿತಿ ನೀಡಿದ್ದು, ಇನ್ನೂ ಶೇ.10ರಷ್ಟು ರಿಯಾಯಿತಿ ನೀಡಲಾಗು ವುದು ಎಂದು ಇದೇ ಸಂದರ್ಭದಲ್ಲಿ ಕಂದಾಯ ಸಚಿವರು ತಿಳಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಮಾತನಾಡಿ, ಗ್ರಾಮ ವಾಸ್ತವ್ಯ ಅಂಗವಾಗಿ ಇಂದು 30 ಸಾವಿರ ಜನರಿಗೆ ವಿವಿಧ ಸೌಲಭ್ಯ ವಿತರಣೆ ಮಾಡಲಿದ್ದೇವೆ. ಡಿ.ಸಿ.ಸಿ ಬ್ಯಾಂಕಿನಿಂದ ಇಂದು 10 ಸಾವಿರ ಜನರಿಗೆ ಸಾಲ ನೀಡಲಾಗುತ್ತಿದೆ. ಕಂದಾಯ ಸಚಿವ ಆರ್.ಅಶೋಕ ಅವರು ಇಡೀ ದಿನ ಇಲ್ಲಿಯೇ ಇದ್ದು, ಗ್ರಾಮಸ್ಥರ ಅಹವಾಲು ಆಲಿಸಲಿದ್ದಾರೆ ಎಂದರು.
ಸೇಡಂ ತಾಲೂಕಿನ 40 ಹಳ್ಳಿಗಳ 70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 630 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಈಗಾಗಲೆ ಮೊದಲನೇ ಹಂತವಾಗಿ 154 ಕೋಟಿ ರೂ. ಮೊತ್ತದ ಯೋಜನೆಗೆ ಟೆಂಡರ್ ಸಹ ಕರೆಯಲಾಗಿದೆ. ಇದಲ್ಲದೆ ಸನ್ನತ್ತಿ ಬ್ಯಾರೇಜಿನಿಂದ ಈ ಪ್ರದೇಶದ 80 ಹಳ್ಳಿಗಳ 54 ಕೆರೆ ತುಂಬಲು ಡಿ.ಪಿ.ಅರ್. ಸಿದ್ಧಪಡಿಸಿದ್ದು, 592 ಕೋಟಿ ರೂ. ಯೋಜನೆ ಇದಾಗಿದೆ. ಇದರಿಂದ ಮುಂದಿನ ದಿನದಲ್ಲಿ ಸೇಡಂ ತಾಲೂಕು ಸಂಪೂರ್ಣ ನೀರಾವರಿಕ ಪ್ರದೆಶವಾಗಿ ಬದಲಾಗಲಿದೆ ಎಂದರು.
ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷನಾದ ಮೇಲೆ ರಾಜ್ಯ ಸರ್ಕಾರದ ಸಹಾಯದೊಂದಿಗೆ ಬ್ಯಾಂಕಿಗೆ ಕಾಯಕಲ್ಪ ನೀಡಲು ಮುಂದಾಗಿದ್ದೇನೆ. ಕಳೆದ ವರ್ಷ 1.50 ಲಕ್ಷ ರೈತರಿಗೆ 1,000 ಕೋಟಿ ರೂ. ಸಾಲ ನೀಡಿದ್ದು, ಈ ವರ್ಷ 2,500 ಕೋಟಿ ರೂ. ಸಾಲ ನೀಡುವ ಗುರಿ ಹೊಂದಿದ್ದೇವೆ. ಒಟ್ಟಿನಲ್ಲಿ ದೇಶದ ಬೆನ್ನೆಲುಬಾದ ರೈತಾಪಿ ವರ್ಗಕ್ಕೆ ಅರ್ಥಿಕ ಸಹಾಯ ನೀಡಲು ಪಣ ತೊಟ್ಟಿದ್ದೇವೆ. ಅಡಕಿಯ ಕಸ್ತೂರಿ ರಂಗನಾಥನ ದೇವಸ್ಥಾನ ಸೇರಿದಂತೆ ಕ್ಷೇತ್ರದ 100 ಪುರಾತನ ದೇಗುಲಗಳನ್ನು 25 ಕೋಟಿ ರೂ.ವೆಚ್ಚದಲ್ಲಿ ಜೋರ್ಣೋದ್ಧಾರ ಮಾಡಲಾಗುತ್ತಿದೆ. ಸೇಡಂ ಕ್ಷೇತ್ರಕ್ಕೆ ಕಳೆದ 4 ವರ್ಷದಲ್ಲಿ 900 ಕೋಟಿ ರೂ. ತಂದಿದ್ದೇನೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.
ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ, ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮಡು ಮಾತನಾಡಿದರು.
ಸೌಲಭ್ಯ ವಿತರಣೆ; ಗ್ರಾಮ ವಾಸ್ತವ್ಯ ಅಂಗವಾಗಿ 28,900 ಜನರಿಗೆ ವಿವಿಧ ಸೌಲಭ್ಯ, ಪ್ರಮಾಣ ಪತ್ರಗಳು ನೀಡಲಾಯಿತು. ಇದರಲ್ಲಿ ಸೇಡಂ ತಾಲೂಕಿನ 448 ಸೇರಿ 522 ಸಂಘಗಳು ಸೇರಿದಂತೆ ಡಿ.ಸಿ.ಸಿ. ಬ್ಯಾಂಕಿನಿಂದ 10 ಸಾವಿರ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಯಿತು. ವೇದಿಕೆ ಮೇಲೆ ಸಚಿವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ಉಳಿದವರಿಗೆ ವಿವಿಧ ಇಲಾಖೆಗಳು ಹಾಕಿರುವ ಮಳಿಗೆಯಲ್ಲಿಯೇ ಅಧಿಕಾರಿಗಳು ಸೌಲಭ್ಯ ವಿತರಿಸಿದರು.
ಗ್ರಾಮ ವಾಸ್ತವ್ಯ ಅಂಗವಾಗಿ ಕಂದಾಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ರೇಷ್ಮೆ, ವಿಕಲಚೇತನರ ಕಲ್ಯಾಣ, ಭೂದಾಖಲೆ, ಆರೋಗ್ಯ, ಕಾರ್ಮಿಕ, ಆಹಾರ ಹೀಗೆ ವಿವಿಧ 27 ಇಲಾಖೆಗಳು ಮಳಿಗೆ ಹಾಕಿ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಬೈಕ್ ರ್ಯಾಲಿಗೆ ಚಾಲನೆ: ಇದಕ್ಕೂ ಮುನ್ನ, ಸೇಡಂ ಪಟ್ಟಣದ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಅಡಕಿ ಗ್ರಾಮದ ಬಸ್ ನಿಲ್ದಾಣವರೆಗೆ ಬೈಕ್ ರ್ಯಾಲಿಗೆ ಕಂದಾಯ ಸಚಿವ ಆರ್ ಅಶೋಕ್ ಚಾಲನೆ ನೀಡಿದರು. ಬೈಕ್ ರ್ಯಾಲಿಯಲ್ಲಿ ಸುಮಾರು 3 ಸಾವಿರ ಬಿಜೆಪಿ ಕಾರ್ಯಕರ್ತರೊಂದಿಗೆ ತೆರೆದ ವಾಹನದ ಮೂಲಕ ಆಗಮಿಸಿದರು. ಬಳಿಕ ಇತಿಹಾಸ ಪ್ರಸಿದ್ಧ ಕಸ್ತೂರಿ ರಂಗನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಕಲಾ ತಂಡಗಳೊಂದಿಗೆ ಸಾವಿರಕ್ಕೂ ಅಧಿಕ ಮುತೈದೆಯರಿಂದ ಕುಂಭ ಮೇಳ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಸಾರ್ವಜನಿಕರು ಭಾಗವಹಿಸಿದರು.
ಮಳಿಗೆ ಸ್ಥಾಪನೆ: ಕಾರ್ಯಕ್ರಮದ ಅಂಗವಾಗಿ ಮೋರಾರ್ಜಿ ದೇಸಾಯಿ ವಸತಿ ಶಾಲೆ ಅವರಣದಲ್ಲಿ ಕೃಷಿ, ರೇಷ್ಮೆ, ಆರೋಗ್ಯ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಭೂದಾಖಲೆಗಳು, ಕಾರ್ಮಿಕ ಇಲಾಖೆ, ಕಂದಾಯ, ಸಮಾಜ ಕಲ್ಯಾಣ, ಆರೋಗ್ಯ ಹೀಗೆ ಒಟ್ಟು 27 ಪ್ರಮುಖ ಇಲಾಖೆಗಳು ಮಳಿಗೆ ಸ್ಥಾಪಿಸಲಾಗಿತ್ತು. ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ವಿವಿಧ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ: ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿಶೇಷ ಐದು ತಂಡಗಳಿಂದ ಜಾನಪದ, ನೃತ್ಯ, ಡೊಳ್ಳು ಕುಣಿತ ನಡೆದವು. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಮಹಿಳಾ ವೀರಗಾಸೆ ತಂಡ, ಸಂಜು ಬರಗಾವಿ ತಂಡದಿಂದ ಡೊಳ್ಳು ಕುಣಿತ, ಮಂಡ್ಯದ ಸವಿತಾ ಚಿರಕುನ್ನಿ ತಂಡದಿಂದ ಪೂಜಾ ಕುಣಿತ, ಮಂಡ್ಯದ ಪಠ ಕುಣಿತ, ಸೇಡಂ ತಾಲೂಕಿನ ಬಂಜಾರ ಸಮುದಾಯ ವತಿಯಿಂದ ಜಾನಪದ ನೃತ್ಯ ಅದ್ಧೂರಿಯಾಗಿ ಜರುಗಿತು.
ಮಠದ ಜೀರ್ಣೋದ್ಧಾರಕ್ಕೆ ಅಡಿಗಲ್ಲು: ತಾಲೂಕಿನ ಶ್ರೀ ಹಾಲಪ್ಪಯ್ಯ ವಿರಕ್ತ ಮಠ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಶ್ರೀ ಮಠದ ಜೀರ್ಣೋದ್ಧಾರ ಕಟ್ಟಡಕ್ಕೆ ಸುಮಾರು 25 ಲಕ್ಷ ರು. ವೆಚ್ಚದಲ್ಲಿ 500 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಹಾಲಪ್ಪಯ್ಯ ಮಠಕ್ಕೆ ಸಚಿವ ಆರ್. ಅಶೋಕ್ ಅಡಿಗಲ್ಲು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ 55 ಲಕ್ಷ ರೂ. ವೆಚ್ಚ ಮಾಡಿ ಗ್ರಾಮದಲ್ಲಿ ನಿರ್ಮಿಸಲಾದ 8 ವಾಣಿಜ್ಯ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು.
***
ಕಲ್ಯಾಣ ಕರ್ನಾಟಕ ಭಾಗವನ್ನು 40 ವರ್ಷದಿಂದ ಅವಲೋಕಿಸಿದ್ದೇನೆ. ದುಡಿಯದೆ ಯಾರು ಮುಂದೆ ಬರಲು ಸಾಧ್ಯವಿಲ್ಲ. ಸಮಾಜದ ಸುಖವಾಗಿದ್ದರೆ. ನಾವೆಲ್ಲರೂ ಸುಖವಾಗಿರಲು ಸಾಧ್ಯ. ಈ ಭಾಗದಲ್ಲಿ ಎಲ್ಲರೂ ದುಡಿಯುವುದು ಕಲಿಯಬೇಕು. ಆ ಮೂಲಕ ಇಡೀ ರಾಜ್ಯಕ್ಕೆ ಆದರ್ಶವಾಗಬೇಕು. ಕೊಡುವ ಗುಣ ರೂಡಿಸಿಕೊಳ್ಳಬೇಕು.
ಬಸವರಾಜ್ ಪಾಟೀಲ್ ಸೇಡಂ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಂಸ್ಕೃತಿ ಸಂಘದ ಅಧ್ಯಕ್ಷ
***
ಸಂದರ್ಭದಲ್ಲಿ ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಆಡಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಸಾಯಿರೆಡ್ಡಿ, ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಡಿ.ಸಿ.ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಗಿರೀಶ್ ಡಿ. ಬದೋಲೆ, ಸೇಡಂ ಸಹಾಯಕ ಆಯುಕ್ತ ಕಾರ್ತಿಕ್, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಸೇಡಂ ಮಹಿಳಾ ಪಿ.ಕೆ.ಪಿ.ಎಸ್ ಸಂಸ್ಥೆಯ ಅಧ್ಯಕ್ಷೆ ಸಂತೋಷಿ ರಾಣಿ ಪಾಟೀಲ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾವಿರಾತು ಸಂಖ್ಯೆಯ ಜನಸ್ತೋಮ ಸಾಕ್ಷಿಯಾಯಿತು.