Friday, 22nd November 2024

ರಾಜವಿಷ- ರಾಜರ ವಿಷ: ಶಂಖಪಾಷಾಣ !

ಹಿಂದಿರುಗಿ ನೋಡಿದಾಗ

ರಾಜಮಹಾರಾಜರನ್ನು, ಚಕ್ರವರ್ತಿಗಳನ್ನು, ಶ್ರೀಮಂತ ರನ್ನು, ಬುದ್ಧಿವಂತರನ್ನೂ ಕೊಲ್ಲಲು ಶಂಖಪಾಷಾಣವನ್ನು
ಪರಿಣಾಮಕಾರಿಯಾಗಿ ಬಳಸಿಕೊಂಡು ಬಂದಿರುವ ವಾಸ್ತವಿಕ ಸತ್ಯ. ಅದನ್ನು ಇಂದಿನ 21ನೆಯ ಶತಮಾನದಲ್ಲೂ ಬಳಸುತ್ತಾರೆ.

ಡಾ.ತಪನ್ ಸಿನ್ಹ, ಇಸ್ರೋ ವಿಜ್ಞಾನಿ. ಅಹಮದಾಬಾದಿನಲ್ಲಿರುವ ‘ಸ್ಪೇಸ್ ಅಪ್ಲಿಕೇಶನ್ ಸೆಂಟರ್’ ಮತ್ತು ‘ಫಿಸಿಕಲ್ ರಿಸರ್ಚ್ ಲೆಬೋರೇಟರಿ’ಯ ನಿರ್ದೇಶಕರು. ರಡಾರ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದವರು. ಇವರು ಜನವರಿ 5, 2021 ರಂದು ತಮ್ಮ ಫೇಸ್‌ ಬುಕ್ ಗೋಡೆಯ ಮೇಲೆ ಒಂದು ಆಘಾತಕರ ಸುದ್ದಿ ಬಹಿರಂಗಪಡಿಸಿದರು.

ತಾವು ಶಂಖಪಾಷಾಣ ವಿಷ ಪ್ರಯೋಗಕ್ಕೆ ಬಲಿಯಾಗಿರುವುದಾಗಿಯೂ, ಅದರಿಂದ ತುಂಬಾ ಕಷ್ಟಪಟ್ಟು ಹೊರಬಂದಿರುವು ದಾಗಿಯೂ ಅವರ ಬರಹದ ಸಾರಾಂಶವಾಗಿತ್ತು. ಇವರು ಮೇ 23, 2017ರಂದು, ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಬಂದಿದ್ದರು. ಆಗ ಶಂಖಪಾಷಾಣ ವನ್ನು ‘ಅರ್ಸೆನಿಕ್ ಟ್ರಯಾಕ್ಸೈಡ್’ ರೂಪದಲ್ಲಿ ಚಟ್ನಿಯೊಡನೆ ಬೆರೆಸಿ ನೀಡಲಾಗಿತ್ತು. 1971ರಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಮ್ ಸಾರಾಭಾಯಿಯವರ ಮರಣವೂ ಶಂಖಪಾಷಾಣ ವಿಷಪ್ರಾಶನ ದಿಂದಲೇ ಆಯಿತು ಎಂಬ ಸೋಟಕ ಮಾಹಿತಿ ಹಂಚಿಕೊಂಡರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಮುಂದುವರಿಯದಂತೆ ತಡೆಗಟ್ಟಲು ಅಂತಾ ರಾಷ್ಟ್ರೀಯ ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಶಂಖಪಾಷಾಣವು ‘ರಾಜವಿಷ-ರಾಜರ ವಿಷ’ಎಂದು ಕುಖ್ಯಾತವಾಗಿದೆ. ಶಂಖಪಾಷಾಣವು ಒಂದು ಲೋಹಾಬ (ಮೆಟಲಾಯ್ಡ್). ನಮ್ಮ ಭೂಮಿಯಲ್ಲಿ ಹೇರಳವಾಗಿದೆ. ಸಾಮಾನ್ಯ ವಾಗಿ ಗಂಧಕ, ಆಮ್ಲಜನಕ ಹಾಗೂ ಇತರ ಲೋಹಗಳ ಜತೆಯಲ್ಲಿ ಸಂಯುಕ್ತ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಶಂಖಪಾಷಾಣವು ಸಾಮಾನ್ಯವಾಗಿ ನಾಲ್ಕು ಖನಿಜಗಳ ರೂಪದಲ್ಲಿ ದೊರೆಯುತ್ತದೆ. ಅರ್ಸೆನೋಪೈರೇಟ್/ಬೂದು ಶಂಖಪಾಷಾಣ, ಸ್ಯಾಂಡಾರ್ಕ್/ಕೆಂಪು ಶಂಖಪಾಷಾಣ, ಆರ್ಪಿ ಮೆಂಟ್/ಹಳದಿ ಶಂಖಪಾಷಾಣ ಮತ್ತು ಆರ್ಸೆನೋಲೈಟ್/ಬಿಳಿ ಶಂಖಪಾಷಾಣ. ನಿರವಯವ (ಇನಾರ್ಗ್ಯಾನಿಕ್) ಶಂಖ ಪಾಷಾಣವು, ಸಾವಯವ (ಆರ್ಗ್ಯಾನಿಕ್) ಶಂಖಪಾಷಾಣಕ್ಕಿಂತ ಹೆಚ್ಚು ವಿಷಕಾರಿ.

ಆದರೆ ಸಾವಯವ ರೂಪದ ಶಂಖಪಾಷಾಣವು ಶರೀರದ ಒಳಗೆ ಹೋದಮೇಲೆ ನಿರವಯವ ರೂಪವನ್ನು ತಳೆಯುವು ದರಿಂದಲೂ, ಅದೂ ಮಹಾನ್ ವಿಷಕಾರಿಯಾಗುತ್ತದೆ. ಶಂಖಪಾಷಾಣಕ್ಕೆ ‘ಅರ್ಸೆನಿಕ್’ಎಂದು ಇಂಗ್ಲಿಷ್‌ನಲ್ಲಿ ಹೆಸರು. ಅರ್ಸೆನಿಕ್ ಶಬ್ದವು ಸಿರಿಯಾಕ್ ಮೂಲದ ಜ಼ರ್ನಿಕ, ಅರೇಬಿಕ್ ಮೂಲದ ಅಲ್-ಜ಼ರ್ನಿಕ್, ಗ್ರೀಕ್ ಮೂಲದ ಅರ್ಸೆನಿಕಾನ್, ಲ್ಯಾಟಿನ್ ಮೂಲದ ಅರ್ಸೆನಿಕಮ್- ಹೀಗೆಲ್ಲ ಬದಲಾವಣೆಯಾಗಿ ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ಅರ್ಸೆನಿಕ್ ಎಂಬ ರೂಪವನ್ನುತಳೆದಿದೆ. ಸಂಸ್ಕೃತ ಮತ್ತು ಕನ್ನಡದಲ್ಲಿ ಶಂಖಪಾಷಾಣವೆಂದು ಹೆಸರಾಗಿದೆ.

ರಾಜಮಹಾರಾಜರನ್ನು, ಚಕ್ರವರ್ತಿಗಳನ್ನು, ಶ್ರೀಮಂತರನ್ನು, ಬುದ್ಧಿವಂತರನ್ನೂ ಕೊಲ್ಲಲು ಶಂಖಪಾಷಾಣವನ್ನು ಪರಿಣಾಮ ಕಾರಿಯಾಗಿ ಬಳಸಿಕೊಂಡು ಬಂದಿರುವ ವಾಸ್ತವಿಕ ಸತ್ಯ. ಅದನ್ನು ಇಂದಿನ 21ನೆಯ ಶತಮಾನದಲ್ಲೂ ಬಳಸುತ್ತಾರೆ ಎನ್ನುವು ದಾದರೆ, ಅದರ ವಿಷತೀವ್ರತೆ-ಕುಖ್ಯಾತಿ ಎಷ್ಟಿದೆಯೆಂದು ಒಮ್ಮೆ ಯೋಚಿಸಬಹುದು. ಶಂಖಪಾಷಾಣವು ಪ್ರಾಚೀನ ಈಜಿಪ್ಷಿಯನ್ನ ರಿಗೆ, ಚೀನಿಯರಿಗೆ ಹಾಗೂ ಭಾರತೀಯರಿಗೆ, ಕನಿಷ್ಠ ೩೦೦೦ ವರ್ಷಗಳಿಂದ ಪರಿಚಿತವಾದ ರಾಸಾಯನಿಕ ವಸ್ತು.

ಗ್ರೀಕ್ ದೇಶದ ಹಿಪ್ಪೋಕ್ರೇಟ್ಸ್, ಥಿಯೋ-ಸ್ಟಸ್, ಪ್ಲೀನಿ ಮುಂತಾದವರಿಗೆ ಅದರ ಮಾರಕ ಗುಣಗಳ ಪರಿಚಯವಿತ್ತು. ಪೆಡಾನಿಯಸ್ ಡಯಾಸ್ಕೋರಿಡೆಸ್ ತನ್ನ ‘ದಿ ಮೆಟೀರಿಯ ಮೆಡಿಕ’ದಲ್ಲೂ ಶಂಖಪಾಷಾ ಣದ ಮಾರಕತೆಯನ್ನು ಬರೆದಿದ್ದಾನೆ. ಪ್ರಾಚೀನ ಗ್ರೀಸ್ ಇತಿಹಾಸದಲ್ಲಿ, ಕ್ರಿ.ಪೂ. ೪ನೆಯ ಶತಮಾನದಷ್ಟು ಹಿಂದೆಯೇ ‘ಶಂಖಪಾಷಾಣ ರಾಜಕೀಯ’ ಪ್ರಾರಂಭವಾಯಿತು. ಕ್ರಿ.ಪೂ. 4ನೆಯ ಶತಮಾನದ ಗ್ರೀಸಿನಲ್ಲಿ, ಮಹಿಳೆಯರ ಒಂದು ಗುಂಪು ಶಂಖಪಾಷಾಣ ಪ್ರಯೋಗ ಪರಿಣತಿಯನ್ನು ಗಳಿಸಿತ್ತು. ಶ್ರೀಮಂತ ಜನರನ್ನು ಹುಡುಕಿ ತಮ್ಮ ಒನಪು-ವಯ್ಯಾರಗಳ ಮೂಲಕ ಅವರನ್ನು ಆಕರ್ಷಿಸಿ, ಸದ್ದಿಲ್ಲದ ಹಾಗೆ ಅವರ ಮೇಲೆ ಶಂಖಪಾಷಾಣ
ವನ್ನು ಪ್ರಯೋಗಿಸುತ್ತಿದ್ದರು.

ಅವರನ್ನು ಕೊಂದು, ಅವರ ಶ್ರೀಮಂತಿಕೆಯನ್ನು ಅಪಹರಿಸುತ್ತಿದ್ದರು. ಕ್ರಿ.ಪೂ. 82ರಲ್ಲಿ ಶಂಖಪಾಷಾಣ ವಿಷಪ್ರಾಶನವು ಪಿಡುಗು ಸ್ವರೂಪವನ್ನು ತಳೆಯಿತು. ಅಂದಿನ ರೋಮ್ ಸಾಮ್ರಾಜ್ಯದ ಸೈನ್ಯಾಧಿಕಾರಿ ಹಾಗೂ ಗಣ್ಯನಾಗಿದ್ದ ಲ್ಯೂಶಿಯಸ್  ರ್ನೀಲಿಯಸ್ ಸುಳ್ಳ ಫೆಲಿಕ್ಸ್ (ಕ್ರಿ.ಪೂ. 138-ಕ್ರಿ.ಪೂ. 78) ರೋಮ್‌ದೇಶದ ಸರ್ವಾಧಿಕಾರಿಯಾಗಿ ಮೆರೆದು, ರೋಮ್‌ನ ಹಲವು ಕಾನೂನು ಗಳನ್ನು ಸುಧಾರಿಸುವಾಗ, ‘ಲೆಕ್ಸ್ ಕಾರ್ನೀ ಲಿಯ’ಎನ್ನುವ ಹೊಸ ಶಾಸನವನ್ನು ಜಾರಿಗೊಳಿಸಿದ.

ಇದು ವಿಷಪ್ರಯೋಗದ ವಿರುದ್ಧ ಶಿಕ್ಷೆಯನ್ನು ಕೊಡುವ ಕಾನೂನಾಗಿ ಪ್ರಸಿದ್ಧವಾಯಿತು. ಬಹುಶಃ ಇದು, ವಿಷಪ್ರಯೋಗವನ್ನು
ಪ್ರತಿಬಂಽಸುವ ಜಗತ್ತಿನ ಮೊದಲ ಕಾನೂನು. ರೋಮನ್ ಚಕ್ರವರ್ತಿ ನೀರೋ ಕ್ಲಾಡಿಯಸ್ ಸೀಸರ್ ಅಗಸ್ಟಸ್ ಜರ್ಮೇನಿಕಸ್ (ಕ್ರಿ.ಶ. 37-ಕಿ.ಶ. 68) ಇತಿಹಾಸದಲ್ಲಿ ‘ನೀರೋ’ ಎಂಬ ಹೆಸರಿನಲ್ಲಿ ಪ್ರಖ್ಯಾತ. ಇವನು ತನ್ನ ಮಲಸೋದರ ಟೈಬೀರಿಯಸ್ ಬ್ರಿಟಾನಿಕಸ್ (ಕ್ರಿ.ಶ. 41-ಕಿ.ಶ. 55) ನನ್ನು ಅವನ 14ನೆಯ ಹುಟ್ಟುಹಬ್ಬದಂದು ಶಂಖಪಾಷಾಣ ವಿಷಪ್ರಾಶನದಿಂದ ಸಾಯು ವಂತೆ ಯೋಜನೆಯನ್ನು ರೂಪಿಸಿದ. ಬ್ರಿಟಾನಿಕಸ್ ಸತ್ತ ಕೂಡಲೇ ನೀರೋ ರೋಮಿನ ಚಕ್ರವರ್ತಿಯಾದ.

ಪುನರುತ್ಥಾನ ಅಥವಾ ರಿನೇಸಾನ್ಸ್ ಅವಧಿಯ ಯೂರೋಪಿನಲ್ಲಿ ಶಂಖಪಾಷಾಣ ವಿಷಪ್ರಾಶನವು ದೊಡ್ಡ ಪ್ರಮಾಣದಲ್ಲಿ ಮರುಕಳಿಸಿತು. ಫಾರೆನ್ಸ್ ನಗರಸಭೆಯ ದಾಖಲೆಗಳಲ್ಲಿ ಯಾರುಯಾರು ಶಂಖಪಾಷಾಣ ವಿಷಪ್ರಾಶನದಿಂದ ಸತ್ತರು, ಅವರನ್ನು ಕೊಂದವರು ಯಾರು, ಕೊಲ್ಲಲು ಎಷ್ಟು ಶುಲ್ಕವು ನಿಗದಿಯಾಗಿತ್ತು, ಆ ಶುಲ್ಕವು ಕೊಲೆಗಾರರಿಗೆ ಹೇಗೆ ತಲುಪಿತು ಇತ್ಯಾದಿ ಮಾಹಿತಿಯೆಲ್ಲವೂ ದಿನಾಂಕಗಳ ಸಮೇತ ದೊರೆಯುತ್ತದೆ. ಈ ವೃತ್ತಿಪರ ಕೊಲೆಗಾರರಲ್ಲಿ ಬಹಳ ಕುಖ್ಯಾತಳೆಂದರೆ ಗುಲಿಯ ತೋ-ನ (ಮರಣ: ೧೬೫೧) ಎನ್ನುವ ಮಹಿಳೆ. ಬಹುಶಃ ಈಕೆಯ ತಾಯಿ ‘ಅಕ್ವಾತೋ ಪಾನ’ ಎಂಬ ಶಂಖಪಾಷಾಣ ಪಾನೀಯವನ್ನು ಸಿದ್ಧಪಡಿಸಿದಳು.

ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆಯರು, ತೋಫಾನ ಬಳಿ ಅಕ್ವಾತೋ-ನವನ್ನು ಕೊಂಡುಕೊಳ್ಳುತ್ತಿದ್ದರು. ಸದ್ದಿಲ್ಲದ ಹಾಗೆ ಅದನ್ನು ತಮ್ಮ ಗಂಡಂದಿರ ಮೇಲೆ ಪ್ರಯೋಗಿಸುತ್ತಿದ್ದರು. ನಂತರ ಶ್ರೀಮಂತ ವಿಧವೆಯರು ಸೂಕ್ತ ವರನನ್ನು ಹುಡುಕಿ ಮತ್ತೆ ಮರುಮದುವೆಯಾಗುತ್ತಿದ್ದರು. ಗುಲಿಯ ತೋ-ನ ತನ್ನ ಹಾಗೆ ಶಂಖಪಾಷಾಣ ವಿಷಪ್ರಯೋಗ ಪರಿಣತರ ಒಂದು ಸಂಘಟನೆ ಯನ್ನು ಕಟ್ಟಿದಳು.

ಅವರಲ್ಲಿ ಮುಖ್ಯವಾಗಿ 6 ಮಹಿಳೆಯರಿದ್ದು ಅವರಲ್ಲಿ ಗಿರೋಲಾಮೋ ಸ್ಪಾನ (1615-1659) ಕೂಡ ಒಬ್ಬಳಾಗಿದ್ದಳು. ತೋಫಾನ ಮರಣಾನಂತರ ಗಿರೋಲಾಮೋ ಆಕೆಯ ಸ್ಥಾನವನ್ನು ಗ್ರಹಿಸಿ, ಹತ್ಯಾವೃತ್ತಿಯನ್ನು ಸದ್ದಿಲ್ಲದಂತೆ ಮುಂದುವರಿಸಿ ಕೊಂಡು ಹೋದಳು. ಇಟಲಿ ಮೂಲದ ಸ್ಪಾನ ತನ್ನದೇ ಆದ ‘ಸೇಲ್ಸ್‌ಗರ್ಲ್ಸ್’ ತಂಡವನ್ನು ಕಟ್ಟಿಕೊಂಡು ವ್ಯಾಪಾರವನ್ನು ಚುರುಕುಗೊಳಿಸಿ ದಳು. ಒಂದು ಸಲ ಜಿಯೋವನ್ನ ಡಿ ಗ್ರಾಂಡಿಸ್ (ಮರಣ: 1659) ಎಂಬ ಸೇಲ್ಸ್ ಗರ್ಲ್ ವಿಷಪ್ರಯೋಗ ಸಂದರ್ಭದಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಳು.

ಅಧಿಕಾರಿಗಳು ಅವಳನ್ನು ಬಂಧಿಸಿದಾಗ ಜಿಯೋ ವನ್ನ ಗಿರೋಲಾಮ ಸ್ಪಾನ ಹೆಸರು ಹೊರಬಂತು. ಸ್ಪಾನ ತನ್ನ ಅಪರಾಧ ವನ್ನು ಒಪ್ಪಿಕೊಂಡಳು. ಗಿರೋಲಾಮ ಸ್ಪಾನ ಹಾಗೂ ಜಿಯೋವನ್ನ ಡಿ ಗ್ರಾಂಡಿಸ್ ಜತೆಯಲ್ಲಿ ಇನ್ನಿಬ್ಬರು ಸೇಲ್ಸ್‌ಗರ್ಲ್‌ಗಳಾದ ಮಾರಿಯ ಸ್ಪಿನೋಲ ಹಾಗೂ ಗ್ರೇಜಿಯೋಸ ಫಾರೀನಳನ್ನು ಬಂಧಿಸಿದರು. ಎಲ್ಲರಿಗೂ ಜುಲೈ 5, 1659ರಂದು ಮರಣದಂಡನೆ ವಿಧಿಸಲಾಯಿತು.

ರಿನೇಸಾನ್ಸ್ ಇಟಲಿಯಲ್ಲಿ ಹತ್ಯಾವೃತ್ತಿಪರ ಮಹಿಳೆಯರಷ್ಟೇ ಕುಖ್ಯಾತವಾದದ್ದು ಬೋರ್ಜಿಯ ಕುಟುಂಬದ ವಿಷಪ್ರಾಶನದ ಕಥೆ. ಈ ಕುಟುಂಬವು ಮನುಷ್ಯನ ಕೊಲೆ, ಕಾಮ ಮತ್ತು ದುರಾಸೆಯ ಪ್ರತೀಕವೆಂದು ಕುಖ್ಯಾತವಾಗಿದೆ. ಸ್ಪೇನ್ ದೇಶದ ವೇಲೆನ್ಷಿಯ ಪ್ರಾಂತದ ಬೋರ್ಜ ಕುಟುಂಬವು, 15 ಮತ್ತು 16ನೆಯ ಶತಮಾನದಲ್ಲಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿತು. ಈ ಕುಟುಂಬಕ್ಕೆ ಸೇರಿದ ಅಲೆಗ್ಸಾಂಡರ್-ಗಿI (1431-1503) ಪೋಪ್ ಆಗಿ ಪ್ರಸಿದ್ಧನಾಗಿದ್ದನು.

ಅಲೆಗ್ಸಾಂಡರನಿಗೆ ಒಬ್ಬ ಅನಧಿಕೃತ ಮಗ ಸೀಸರ್ ಬೋರ್ಜಿಯ (1475-1507) ಹಾಗೂ ಮಲಮಗಳು ಲ್ಯೂಕ್ರಿಯ ಬೋರ್ಜಿಯ (1480-1519). ಅಲೆಗ್ಸಾಂಡರ್ ಪೋಪ್ ಆಗಿದ್ದ ಕಾರಣ, ಆತನೇ ಬಿಷಪ್ಪರನ್ನು, ಕಾರ್ಡಿನಲ್‌ರನ್ನು ಆಯ್ಕೆ ಮಾಡುತ್ತಿದ್ದ. ಅವರ ಜತೆ ನಿಕಟ ಸ್ನೇಹವನ್ನು ಗಳಿಸುತ್ತಿದ್ದ. ಅವರು ವೈಯುಕ್ತಿಕವಾಗಿ ಹೆಚ್ಚು ಹೆಚ್ಚು ಹಣವನ್ನು ಸಂಪಾದಿಸು ವಂತಹ ಮಾರ್ಗ ಗಳನ್ನು ತೋರಿಸುತ್ತಿದ್ದ.

ಅವರು ಪ್ರತ್ಯಕ್ಷ-ಪರೋಕ್ಷ ಮಾರ್ಗಗಳಿಂದ ಸಾಕಷ್ಟು ಹಣಗಳಿಸಿ ಶ್ರೀಮಂತರಾದಾಗ, ಅವರಿಗೆ ವೈನಿನೊಳಗೆ ‘ಕ್ಯಾಂಟರೆಲ್ಲ’ ಎಂಬ ಶಂಖಪಾಷಾಣದ ವಿಷವನ್ನು ಬೆರೆಸಿ ಕೊಲ್ಲುತ್ತಿದ್ದ. ಬಳಿಕ ಅಲೆಗ್ಸಾಂಡರ್, ಆ ಅತಿಥಿ ಬಿಷಪ್/ಕಾರ್ಡಿನಲ್ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದ್ದ. ಅಲೆಗ್ಸಾಂಡರ್ ಬಹಳ ನಾಜೂಕಾಗಿ ತನ್ನ ಹತ್ಯಾಕಾಂಡವನ್ನು ಮಾಡಿ ಮುಗಿಸಿ, ನಂತರ ಏನೂ  ಗೊತ್ತಿಲ್ಲದವನಂತೆ ಮೌನವಾಗಿರುತ್ತಿದ್ದ. ಈ ಬಗ್ಗೆ ಯಾರಿಗೂ ಏನೂ ಅನುಮಾನ ಬರಲಿಲ್ಲ. ಕ್ರೈಸ್ತಧರ್ಮದ ಪರಮೋಚ್ಚ ಗುರುವಾದ ಪೋಪ್ ಓರ್ವ ಹೀಗೆ ಹತ್ಯಾಕಾಂಡವನ್ನು ನಡೆಸುತ್ತಿರಬಹುದು ಎಂದು ಯಾರು ತಾನೆ ಊಹಿಸಿಯಾರು? ಅತ್ಯಲ್ಪ
ಕಾಲದಲ್ಲಿ ಅಲೆಗ್ಸಾಂಡರ್ ಇಟಲಿಯ ಶ್ರೀಮಂತರಲ್ಲಿ ಒಬ್ಬನಾಗಿ ಮೆರೆಯಲಾರಂಭಿಸಿದ.

ಈತನ ಅನಧಿಕೃತ ಮಗ ಸೀಸರ್ ಸಹ ಈ ಹತ್ಯಾವಿದ್ಯೆಯನ್ನು ಕರಗತಮಾಡಿಕೊಂಡಿದ್ದ. ಅವನು ಸೇನೆಯಲ್ಲಿ ಜನರಲ್ ಆಗಿದ್ದ. ಹಾಗಾಗಿ ಅವನ ಮೇಲೆ ಕೊಲೆಯ ಆರೋಪ ಹೊರಿಸುವ ಧೈರ್ಯವನ್ನು ಮಾಡುತ್ತಿರಲಿಲ್ಲ. ಇನ್ನು ಲ್ಯೂಕ್ರೀಷಿಯ. ಈಕೆ ಓರ್ವ
ರಾಜಕೀಯ ಮುತ್ಸದ್ದಿಯಾಗಿದ್ದಳು. ಈಕೆ ಮೂರು ಬಾರಿ ಮದುವೆಯಾದಳು. ಮೂವರು ಗಂಡಂದಿರು ತಮ್ಮ ಅಪಾರ ಆಸ್ತಿ ಯನ್ನು ಬಿಟ್ಟು ಅನುಮಾನಾಸ್ಪದ ರೀತಿಯಲ್ಲಿ ಮರಣಿಸಿದರು. ಈಕೆಯೂ ಶಂಖಪಾಷಾಣ ಪ್ರಯೋಗ ಪ್ರವೀಣೆ ಎಂದು ಕೆಲವು ದಾಖಲೆಗಳು ಹೇಳಿದರೂ, ಇನ್ನು ಕೆಲವು ದಾಖಲೆಗಳು ಈಕೆ ಮುಗ್ಧಳು ಎನ್ನುತ್ತವೆ.

ಅದೊಂದು ರಾತ್ರಿ ಓರ್ವ ಕಾರ್ಡಿನಲ್‌ಗಾಗಿ ವಿಶೇಷ ಭೋಜನ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಅಲೆಗ್ಸಾಂಡರ್ ಹಾಗೂ ಸೀಸರ್, ಆ ಸಂಜೆ ಸ್ವಲ್ಪ ಬೇಗ ಮನೆಗೆ ಬಂದಿದ್ದರು. ಸ್ವಲ್ಪ ಆರಾಮವಾಗಿ ಮೈಚಾಚೋಣ ಎನಿಸಿತು. ವೈನ್ ತರುವಂತೆ ಸೇವಕರಿಗೆ ಹೇಳಿದರು. ಆ ಸೇವಕನು ಪೋಪ್ ಕುಡಿಯುವ ವೈನಿನ ಬದಲು, ಗೊತ್ತಿಲ್ಲದೆ ಕ್ಯಾಂಟರೆಲ್ಲ ಬೆರೆತ ವೈನನ್ನು ತಂದುಕೊಟ್ಟುಬಿಟ್ಟ. ಇದನ್ನು ತಿಳಿಯದ ತಂದೆ ಮತ್ತು ಮಗ ಇಬ್ಬರೂ ಕ್ಯಾಂಟರೆಲ್ಲ ವೈನನ್ನು ಕುಡಿದರು. ತಂದೆಯು ಕ್ಯಾಂಟರೆಲ್ಲ ಪ್ರಭಾವಕ್ಕೆ ತುತ್ತಾಗಿ ಆ ಸಂಜೆಯೇ ಮರಣಿಸಿದ. ಆದರೆ ಮಗ ಸೀಸರ್ ಮಾತ್ರ ಹೇಗೋ ಬದುಕುಳಿದ.

ಆತನು ತನಗೆ ವಿಷಪ್ರಾಶನವಾಗಿದೆ ಎಂದು ಅನುಮಾನ ಪಡುತ್ತಿರುವಂತೆಯೇ ಒಂದು ಮೃತಕುದುರೆಯ ಶರೀರದೊಳಗೆ ಅವಿತು ಕೊಂಡನಂತೆ. ಇದು ಆತನ ವಿಷವನ್ನು ತಗ್ಗಿಸಿತು ಎನ್ನುವ ಮಾಹಿತಿಯು ದೊರೆಯುತ್ತದೆ. ಬಹುಶಃ ಆತನು ಕ್ಯಾಂಟರೆಲ್ಲ ವೈನನ್ನು ಸಾವು ತರುವಷ್ಟು ಪ್ರಮಾಣದಲ್ಲಿ ಸೇವಿಸಿರಲಿಲ್ಲವೇನೋ.