Sunday, 15th December 2024

ಜನಸಂದಣಿಯೂ, ಗೆಲುವಿನ ಲೆಕ್ಕಾಚಾರವೂ…

ಅಭಿಮತ

ರಮಾನಂದ ಶರ್ಮಾ

ಭಾರತದಲ್ಲಿ ಮತಹಾಕುವಾಗ ಜನರು ಆಲೋಚಿಸುವ ಮತ್ತು ಬಳಸುವ ಮಾನದಂಡವೇ ಬೇರೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಸಭೆಗೆ ಸೇರುವ ಜನಸಂದಣಿ ಕಂಡು ಸಂತಸಗೊಳ್ಳುವುದು, ಪುಳಕಿತರಾಗುವುದು ಮತ್ತು ಅದರ ಮೇಲೆ ಆಶಾಗೋಪುರ ಕಟ್ಟುವುದು ಸಾಮಾನ್ಯ ಎನ್ನಬಹುದು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ೭೫ನೇ ಜನ್ಮದಿನೋತ್ಸವ ಸಮಾವೇಶದ ಆಭೂತಪೂರ್ವ ಯಶಸ್ಸಿನ ನಂತರ ಬಿಜೆಪಿಯೂ ಇಂಥ ಬೃಹತ್ ರ‍್ಯಾಲಿ ನಡೆಸಬಹುದು ಎನ್ನುವ ಊಹೆ ನಿಜವಾಗಿದ್ದು, ಸದ್ಯದಲ್ಲೇ ತನ್ನ ಸಮಾವೇಶವನ್ನು ಅದು ನಡೆಸಲಿದೆ. ಇಂಥ ಏಳು ಸಮಾವೇಶ ನಡೆಸಿ ರಾಜ್ಯದ ಕೊನೆಯ ವ್ಯಕ್ತಿಯವರೆಗೂ ತನ್ನ ಸಂದೇಶ ತಲುಪಿಸುವ ಉದ್ದೇಶ ಬಿಜೆಪಿಯದ್ದು.

ತನ್ನ ದಾವಣಗೆರೆ ಸಮಾವೇಶದಿಂದ ‘ಕ್ಲೌಡ್ ನೈನ್’ನಲ್ಲಿ ಇರುವ ಕಾಂಗ್ರೆಸ್ ಪಕ್ಷ, ಲಕ್ಷ ಜನರನ್ನು ಸೇರಿಸಿ ಸ್ವಾತಂತ್ರ್ಯ ನಡಿಗೆ ಹೆಸರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ಇನ್ನೊಂದು ರ‍್ಯಾಲಿ ನಡೆಸಿದೆ. ಜಾತ್ಯತೀತ ಜನತಾದಳವೂ ಮುಂದಿನ ದಿನಗಳಲ್ಲಿ ಇಂಥಹ ರ‍್ಯಾಲಿಯನ್ನು ಯೋಜಿಸಿದರೆ ಆಶ್ಚರ್ಯವಿಲ್ಲ. ರಾಜ್ಯದಲ್ಲಿ ಇನ್ನು ೮-೯ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಕರ್ನಾಟಕದ ಜನತೆಗೆ ಇಂಥ ರ‍್ಯಾಲಿಗಳ ಭರಪೂರ ಓವರ್ ಡೋಸ್ ಸಿಗುವುದು ಗ್ಯಾರಂಟಿ!

ಮೇಲ್ನೋಟಕ್ಕೆ ದಾವಣಗೆರೆ ಸಮಾವೇಶವು ಸಿದ್ದರಾಮಯ್ಯನವರ ಜನ್ಮದಿನೋತ್ಸವ ಎಂದು ಹೇಳಲ್ಪಟ್ಟರೂ, ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವತಯಾರಿ ಮತ್ತು ಮತದಾರರ ಮೂಡ್ ಅನ್ನು ಮುಂಚಿತವಾಗಿ ತಿಳಿದುಕೊಳ್ಳುವ ಗೋಪ್ಯ ಅಜೆಂಡಾ ಅದರ ಹಿಂದೆ ಅಡಕವಾಗಿತ್ತು ಎನ್ನುವ ವಿಶ್ಲೇಷಕರ ಅಭಿಪ್ರಾಯದಲ್ಲಿ ಅರ್ಥವಿದೆ. ಸಮಾವೇಶಕ್ಕೆ ಹತ್ತು ಲಕ್ಷ ಜನರ ಸೇರ್ಪಡೆಯಾಗಿದ್ದು ಮತ್ತು ಸುಮಾರು ೭,೦೦೦ ವಾಹನಗಳು ಬಂದಿದ್ದು ಕಾಂಗ್ರೆಸ್ ಪಕ್ಷವನ್ನು ಪುಳಕಿತಗೊಳಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಈ ಜನಸಂದಣಿ ನೋಡಿ ಸಂಘಟಕರೇ ಬೆರಗಾದರಂತೆ.

ಕಳೆದ ವರ್ಷದಿಂದ ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ, ವಿಸ್ತರಣೆ, ೪೦% ಕಮಿಷನ್ ಅರೋಪ,
ಪಿಎಸ್‌ಐ ಅಯ್ಕೆ ಹಗರಣ, ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಲುಸಾಲು ಕೊಲೆಗಳು, ಸರಕಾರದ ವಿರುದ್ದ ಸ್ವಪಕ್ಷೀಯ ರಿಂದಲೇ ಹೊಮ್ಮಿದ ಲಘುಮಾತು, ಎದುರಾಳಿ ಪಕ್ಷದ ಧುರೀಣರೊಬ್ಬರಿಂದ ಹೊಮ್ಮಿದ ಮುಖ್ಯಮಂತ್ರಿಯಾಗುವ
ಆಶಯ, ಕೆಲವು ಯುವಮೋರ್ಚಾ ಸದಸ್ಯರ ರಾಜೀನಾಮೆ ಇತ್ಯಾದಿಗಳಿಂದ ವಿಚಲಿತವಾದ ಬಿಜೆಪಿಯನ್ನು ಈ ಬೆಳವಣಿಗೆ
ಧೃತಿಗೆಡಿಸಿದ್ದು, ತನ್ನ ಸಪೋರ್ಟ್ ಬೇಸ್ ಮತ್ತು ಮತಬ್ಯಾಂಕ್ ಶಿಥಿಲವಾಗಿಲ್ಲ ಎನ್ನುವುದನ್ನು ದೃಢಗೊಳಿಸುವ ಅವಶ್ಯಕತೆ
ಮತ್ತು ಅನಿವಾರ್ಯತೆ ಅದಕ್ಕೆ ಎದುರಾಗಿದೆ; ರ‍್ಯಾಲಿ ನಡೆಸಿ ಜನಬೆಂಬಲದ ಸ್ಥಿರತೆ, ಹೆಚ್ಚಳ ಅಥವಾ ಕ್ಷೀಣತೆಯ ಮಾಪನ
ತಿಳಿದುಕೊಳ್ಳಲು ಅದು ತವಕಿಸುತ್ತಿದೆ.

ಇಂಥ ರ‍್ಯಾಲಿಗಳಿಗೆ ಸೇರುವ ಜನಸಂದಣಿ ಆಯಾ ಪಕ್ಷಕ್ಕೆ ಗೆಲುವಿನ ಮಾನದಂಡವಾಗಿರುತ್ತದೆ, ಹೀಗೆ ಬಂದವರು ಆ
ಪಕ್ಷಕ್ಕೇ ಮತ ನೀಡುತ್ತಾರೆ ಮತ್ತು ಅ ಪಕ್ಷದ ಆಭಿಮಾನಿಗಳಾಗಿರುತ್ತಾರೆ ಎನ್ನಲಾಗದು. ಏಕೆಂದರೆ, ಸುಮ್ಮನೆ ಭಾಷಣ
ಕೇಳಿಸಿಕೊಂಡು ಹೋಗುವವರ ಸಂಖ್ಯೆಯೂ ಗಮನಾರ್ಹವಾಗಿರುತ್ತದೆ. ಇಂಥ ರ‍್ಯಾಲಿಗಳಲ್ಲಿ ಭಾಷಣಕಾರರಿಂದ
ಹೊಮ್ಮುವ ಟೀಕೆ-ಟಾಂಗ್, ಅರೋಪ-ಪ್ರತ್ಯಾರೋಪಗಳನ್ನು ಸವಿಯಲು ಬರುವವರೂ ಇರುತ್ತಾರೆ!

೭೦-೮೦ರ ದಶಕದಲ್ಲಿ, ಅಟಲ್ ಬಿಹಾರಿ ವಾಜಪೇಯಿ, ಆಡ್ವಾಣಿ, ರಾಮಕೃಷ್ಣ ಹೆಗಡೆ, ಜಗನ್ನಾಥರಾವ್ ಜೋಷಿ,
ಭಾವುರಾವ್ ದೇಶಪಾಂಡೆ ಮತ್ತು ಜಾರ್ಜ್ ಫೆರ್ನಾಂಡಿಸ್ ರಂಥ ಧುರೀಣರ ಚುನಾವಣಾ ಭಾಷಣ ಕೇಳಲು ಜನ ಕಿಕ್ಕಿರಿದು ಸೇರುತ್ತಿದ್ದರು. ಒಂದೆರಡು ಸಣ್ಣಪುಟ್ಟ ಅಪವಾದಗಳನ್ನು ಬಿಟ್ಟರೆ ಸ್ವಂತ ಕಿಸೆಯಿಂದ ಹಣ ಖರ್ಚುಮಾಡಿ, ತಮ್ಮ
ಪ್ರಯಾಣ, ಊಟೋಪಚಾರ ಮತ್ತು ವಸತಿಯ ವ್ಯವಸ್ಥೆ ಮಾಡಿಕೊಂಡು ತಂಡೋಪತಂಡವಾಗಿ ಚುನಾವಣಾ ಸಭೆಗೆ
ಬರುತ್ತಿದ್ದ ಮತ್ತು ತಮ್ಮ ಧುರೀಣರ ಮಾತುಗಳನ್ನು ಕೊನೆಯವರೆಗೂ ತದೇಕಚಿತ್ತರಾಗಿ ಆಲಿಸುತ್ತಿದ್ದ ಜನ ಅವರಾಗಿರು
ತ್ತಿದ್ದರು. ಧುರೀಣರ ಮಾತು ಕೇಳಲು ಗಂಟೆಗಟ್ಟಲೆ ಮೊದಲೇ ಬಂದು ಜಾಗ ಹಿಡಿಯುತ್ತಿದ್ದರು.

ಕಳ್ಳೇಕಾಯಿ ತಿನ್ನುತ್ತ ಕುಕ್ಕರಗಾಲಿನಲ್ಲಿ ನೆಲದಲ್ಲಿ ಕುಳಿತು ಭಾಷಣ ಕೇಳುತ್ತಿದ್ದರು. ಯಾರಿಗೂ ಕುಡಿಯುವ ನೀರಿನ ಸೌಕರ್ಯವೂ ಇರುತ್ತಿರಲಿಲ್ಲ. ಇಂಥದೊಂದು ಬೃಹತ್ ಚುನಾವಣಾ ಸಭೆಯಲ್ಲಿನ ಅಪಾರ ಜನಸಂದಣಿ ನೋಡಿ ಅಟಲ್ ಬಿಹಾರಿ ವಾಜಪೇಯಿ ಯವರು, ಇಂಥ ಸಭೆಗೆ ಬರುವವರಲ್ಲಿ ಕನಿಷ್ಠಪಕ್ಷ ೨೫% ಜನ ತಮ್ಮ ಪಕ್ಷಕ್ಕೆ ಮತಹಾಕಿದ್ದಿದ್ದರೆ, ತಮ್ಮ ಪಕ್ಷ ಯಾವಾಗಲೋ ಅಧಿಕಾರಕ್ಕೆ ಬರುತ್ತಿತ್ತು ಮತ್ತು ತಾವು ಈ ದೇಶದ ಪ್ರಧಾನಿಯಾಗಿ ದಶಕಗಳೇ ಸಂದಿರುತ್ತಿದ್ದವು ಎಂದು ಮಾರ್ಮಿಕವಾಗಿ ಹಾಸ್ಯಚಟಾಕಿ ಹಾರಿಸಿದ್ದರು. ಬಹುಶಃ, ಚುನಾವಣಾ ಪ್ರಚಾರ ಸಭೆಗೆ ಬರುವ ಜನಸಂದಣಿಯ ನಾಡಿಮಿಡಿತವನ್ನು ರಾಜಕಾರಣಿಗಳ ಪೈಕಿ ಸರಿಯಾಗಿ ಗ್ರಹಿಸಿದ್ದು ಅವರೊಬ್ಬರೇ ಇರಬೇಕು!

ಇಂದು ದೃಶ್ಯಾವಳಿ ಬದಲಾಗಿದೆ. ಯಾವ ರಾಜಕೀಯ ಪಕ್ಷದವರು ಏನೇ ಹೇಳಿಕೊಳ್ಳಲಿ, ಸ್ವ ಇಚ್ಛೆ ಮತ್ತು ಆಭಿಮಾನದಿಂದ ಇಂಥ ಸಭೆಗಳಿಗೆ ಬರುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಯಾವುದೋ ಹೇಳಲಾರದ ಶಕ್ತಿ, ಆಮಿಷ ಮತ್ತು ಒತ್ತಡ ಜನರನ್ನು ಇಂಥ ಸಭೆಗಳಿಗೆ ಕಳಿಸುತ್ತದೆ ಎನ್ನುವ ಮಾತಿದೆ. ಪಕ್ಷಗಳು ಪ್ರಯಾಣ ಸೌಲಭ್ಯ ಮತ್ತು ಊಟೋಪಚಾರ ನೀಡಿಯೇ ಜನರನ್ನು ಕರೆದು ತರಬೇಕಾದ ಅನಿವಾರ್ಯತೆ ಎದ್ದುಕಾಣುತ್ತಿದೆ.

“ನೀನು ಇಷ್ಟು ಜನರನ್ನು ಕರೆದುತಾ… ಅವನು ಅಷ್ಟು ಜನರನ್ನು ಕರೆದುಕೊಂಡು ಬರಲಿ” ಎನ್ನುವುದು ಸಭೆಯ ಮುನ್ನಾ
ದಿನಗಳಲ್ಲಿ ಕಾಣಬರುವ ತೀರಾ ಸಾಮಾನ್ಯ ದೃಶ್ಯ ಎನ್ನುತ್ತಾರೆ ರಾಜಕೀಯ ವೀಕ್ಷಕರು. ಈ ನಿಟ್ಟಿನಲ್ಲಿ ಆಧುನಿಕ ನಿರ್ವಹಣಾ
ಶಾಸದ (event management) ಬಳಕೆಯಾಗುತ್ತಿದೆಯಂತೆ. ಸಭೆಗೆ ಬಂದವರಿಗೆ ನಿಜವಾಗಿಯೂ, ಆ ಪಕ್ಷದಲ್ಲಿ ಮತ್ತು ಅದರ ಆಭ್ಯರ್ಥಿಯಲ್ಲಿ ವಿಶ್ವಾಸವಿದೆಯೇ, ಅವರಿಗೆ ಮತ ಹಾಕುತ್ತಾರೆಯೇ ಎನ್ನುವುದು ಬೇರೆ ಮಾತು. ಸ್ವ ಇಚ್ಛೆ ಮತ್ತು ಅಭಿಮಾನದಿಂದ ಬಂದವರೇ ಮತಹಾಕದಿರುವಾಗ, ಬಲವಂತವಾಗಿ ಕರೆತಂದವರು ಮತಹಾಕುತ್ತಾರೆ ಎನ್ನುವ
ಖಾತ್ರಿ ಇದೆಯೇ? ಮೇಲಾಗಿ, ಇಂಥವರಲ್ಲಿ ದಿನದ ಬದುಕಿನಲ್ಲಿ ಕೊಂಚ ಬದಲಾವಣೆಗಾಗಿ ಬಂದವರೂ ಇರುತ್ತಾರೆ;
ಹಾಗೆಯೇ ಮಜಾ ತೆಗೆದುಕೊಳ್ಳಲು ಬರುವವರೂ ಇಲ್ಲದಿಲ್ಲ.

ಹೀಗೆ ಬಂದವರಲ್ಲಿ ಹಲವರಿಗೆ ತಾವು ಏಕೆ ಬಂದಿದ್ದೇವೆ ಎಂದೂ ತಿಳಿದಿರುವುದಿಲ್ಲ. “ನಮ್ಮ ಲೀಡರ್ ಹೇಳಿದ್ದಾರೆಂದು
ಬಂದಿದ್ದೇವೆ” ಎನ್ನುವ ಸಾಕಷ್ಟು ಜನರಿರುತ್ತಾರೆ. ಸ್ವಂತ ಕೆಲಸಕ್ಕಾಗಿ ಇಂಥ ಅವಕಾಶವನ್ನು ಉಪಯೋಗಿಸಿಕೊಳ್ಳುವವರೂ
ಇರುತ್ತಾರೆ. ಕೆಲವು ಕಟ್ಟಾ ಅಭಿಮಾನಿಗಳನ್ನು ಬಿಟ್ಟರೆ, ಉಳಿದವರು ಇಂಥವರಿಗೇ ಮತ ಹಾಕುತ್ತಾರೆ ಎನ್ನಲಾಗುವುದಿಲ್ಲ.
ಈ ಜನಸಂದಣಿಯು ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಒಂದು ರೀತಿಯ ಮಾನಸಿಕ ಸ್ಥೈರ್ಯ ನೀಡುವಂಥದ್ದು ಎನ್ನಲಡ್ಡಿಯಿಲ್ಲ. ಆದರೆ, ಪಕ್ಷಗಳು ಜನರಿಗೆ ಯಾವುದೇ ರೀತಿಯ ಪ್ರಯಾಣ ಸೌಲಭ್ಯ, ಉಟೋಪಚಾರ ನೀಡದೆ ಸಭೆಗೆ ಜನರನ್ನು ಸೇರಿಸುವ ಸಾಹಸ ಮಾಡಿ ತಮ್ಮ ಜನಪ್ರಿಯತೆಯ ಮಾಪನ ಮಾಡಲಿ ನೋಡೋಣ!

ಇಂಥ ಯಾವುದೇ ಆಮಿಷ ತೋರಿಸದೆ ಯಾವುದಾದರೂ ಪಕ್ಷ ರ‍್ಯಾಲಿ ಅಥವಾ ಸಭೆಯನ್ನು ಆಯೋಜಿಸಲಿ ನೋಡೋಣ!
ಮೇಲ್ನೋಟಕ್ಕೆ ಕಾಣದಿದ್ದರೂ ಜನರಿಂದು ಜಾಗೃತರಾಗಿದ್ದಾರೆ. ಭಾರತದಲ್ಲಿ ಮತಹಾಕುವಾಗ ಜನರು ಆಲೋಚಿಸುವ
ಮತ್ತು ಬಳಸುವ ಮಾನದಂಡವೇ ಬೇರೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಸಭೆಗೆ ಸೇರುವ
ಜನಸಂದಣಿ ಕಂಡು ಸಂತಸಗೊಳ್ಳುವುದು, ಪುಳಕಿತರಾಗುವುದು ಮತ್ತು ಅದರ ಮೇಲೆ ಆಶಾಗೋಪುರ ಕಟ್ಟುವುದು
ಸಾಮಾನ್ಯಎನ್ನಬಹುದು. ಇಂಥ ರ‍್ಯಾಲಿಗಳಿಗೆ/ಸಭೆಗಳಿಗೆ ಬರುವ ಜನರನ್ನು ಸೂಕ್ಞ್ಮವಾಗಿ ಗಮನಿಸಿದರೆ, ಹಲವರು
ಅವರವರೇ ಇರುತ್ತಾರೆ ಎನ್ನುವುದರಲ್ಲಿ ಸತ್ಯವಿಲ್ಲದಿಲ್ಲ.

ಇಂಥ ಸಮಾವೇಶಗಳಿಗೆ ಸೇರಿದ ಜನಸಂದಣಿಯನ್ನು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸಮೀಕ್ಷಾಕಾರರು ಬಳಸಿ ಕೊಳ್ಳುತ್ತಾರಂತೆ. ಇಂಥ ರ‍್ಯಾಲಿ ನಡೆಯುವ ಸ್ಥಳಗಳಲ್ಲಿ ಜನಸಾಮಾನ್ಯರ ನಿತ್ಯಜೀವನಕ್ಕೆ ಅನನುಕೂಲ ಮಾಡುವುದು, ಕೇಟರಿಂಗ್ ಮತ್ತು ಸಾರಿಗೆ ಉದ್ಯಮಗಳಿಗೆ ಒಂದು ದಿನ ಬಿಜಿನೆಸ್ ನೀಡುವುದರ ಹೊರತಾಗಿ ಇನ್ನೇನನ್ನು ಸಾಽಸಬಹುದು ಎನ್ನುವ ಪ್ರಶ್ನೆ ಕಾಡುತ್ತದೆ. ಈ ರ‍್ಯಾಲಿ ಮತ್ತು ಅದರ ಪರಿಣಾಮದ ಬಗೆಗೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಒಂದೆರಡು
ದಿನ ಬರೆಯಬಹುದು, ಕೊರೆಯಬಹುದು.

ರಾಜಕೀಯ ವಿಶ್ಲೇಷಕರು ಈ ರ‍್ಯಾಲಿಯ ಪರ ಅಥವಾ ವಿರೋಧವಾಗಿ, ತಮ್ಮ ರಾಜಕೀಯ ನಿಲುವಿಗೆ ಅನುಗುಣವಾಗಿ ಒಂದಿಷ್ಟು ವಿಶ್ಲೇಷಿಸಬಹುದು. ಅದರೆ, ಇಂಥ ಸಮಾವೇಶಗಳು ಮುಂಬರುವ ಚುನಾವಣಾ ಫಲಿತಾಂಶದ ಸುಳಿವು ನೀಡುತ್ತವೆ ಎನ್ನುವ ವಿಶ್ಲೇಷಣೆಯನ್ನು ಒಪ್ಪುವುದು ಕಷ್ಟ. ಕಾರಣ, ಇಂಥ ಎಲ್ಲ ಸಮಾವೇಶಗಳಲ್ಲೂ ಮೈದಾನ ತುಂಬಿ ತುಳಕುತ್ತಿದ್ದು, ಮತ ದಾರರು ಎಲ್ಲ ಪಕ್ಷಗಳನ್ನು ಸಮನಾಗಿ ನೋಡಿ ಗುಟ್ಟು ಬಿಟ್ಟುಕೊಡದೆ ರಾಜಕೀಯ ಧುರೀಣರನ್ನು ಖುಷಿ ಪಡಿಸುತ್ತಾರೆ ಮತ್ತು ಮತದಾನದ ದಿನ ತಮ್ಮ ಚಿಂತನೆಗೆ ಸರಿಯಾಗಿ ಮತಹಾಕುತ್ತಾರೆ.