Sunday, 15th December 2024

ಹೇ ಕೃಷ್ಣಾ, ಇನ್ನೊಮ್ಮೆ ಅವತರಿಸಲಾರೆಯಾ ?

ಸಂಪ್ರತ

ವಿಜಯ್‌ ದರಡಾ

ಕೇವಲ ಉತ್ಸವಾಚರಣೆಗಳು ಮಾತ್ರವೇ ಕೃಷ್ಣನ ಜನುಮದಿನದ ವಿಶೇಷವೇ? ಆತನಲ್ಲಿದ್ದ ಗುಣವಿಶೇಷಣ ಗಳನ್ನು ನಾವು ಅಳವಡಿಸಿಕೊಳ್ಳುವುದು ಯಾವಾಗ ಎಂಬ ಚಿಂತನೆ ಮನವನ್ನು ಕಾಡಿತು. ನಾವು ಇದನ್ನು ಸಾಧಿಸಿದರೆ ಕಲಿಯುಗದ ಅನೇಕ ಜಂಜಡಗಳಿಂದ ಹೊರಬರುವುದು ಸಾಧ್ಯ.

ರಾತ್ರಿ ಸುಮಾರು ಹನ್ನೆರಡು ಗಂಟೆಯ ಸಮಯ, ನಾನು ಎಚ್ಚರದಲ್ಲಿದ್ದೆ. ನನ್ನ ಕಣ್ಗಳಲ್ಲಿ ಶ್ರೀಕೃಷ್ಣನ ಬಾಲ್ಯದ ರೂಪು ಅಚ್ಚೊತ್ತಿತ್ತು. ಮನಸ್ಸಿನಲ್ಲಿ ಒತ್ತೊತ್ತಾಗಿ ಹರಿದುಬರುತ್ತಿದ್ದ ಲಹರಿ ಶ್ರೀಕೃಷ್ಣನ ಹಲವಾರು ರೂಪಗಳನ್ನು ನೆನಪಿಸುತ್ತಿತ್ತು. ಬದುಕುವ ಕಲೆಯನ್ನು ಆತ ಅದೆಷ್ಟು ಚೆನ್ನಾಗಿ ವಿವರಿಸಿದ್ದಾನೆ.

ಶ್ರೀಕೃಷ್ಣನಂತಹ ಇನ್ನೊಬ್ಬ ಸಿಗಲಾರ. ಆತ ಕೊಟ್ಟ ಸಂದೇಶಗಳು ಅದೆಷ್ಟು ಅರ್ಥ ಪೂರ್ಣ. ನಾನು ನೆನಪಿನಂಗಳದಲ್ಲಿ ವಿಹರಿಸುತ್ತಿದ್ದಾಗಲೇ ಸುತ್ತಲ ಜಗದ ಗದ್ದಲ ನನ್ನನ್ನೆ ಬ್ಬಿಸಿತು. ಹಾಥೀ ಘೋಡಾ ಪಾಲ್ಕಿ, ಜೈ ಕನ್ಹಯ್ಯಾ ಲಾಲ್ ಕೀ ಘೋಷಣೆ ಮೊಳಗುತ್ತಿತ್ತು. ಅದು ಕೃಷ್ಣಜನ್ಮಾಷ್ಟಮಿಯ ರಾತ್ರಿ. ನನ್ನ ಮನಸ್ಸನ್ನು ಶ್ರೀಕೃಷ್ಣ  ಆವರಿಸಿಕೊಂಡು ಬಿಟ್ಟಿದ್ದ.

ಎಲ್ಲ ಅಪ್ಪಂದಿರೂ ತಮ್ಮ ಮಗ ಶ್ರೀಕೃಷ್ಣನಂತಿರಬೇಕೆಂದು ಬಯಸುತ್ತಾರೆ. ಮಕ್ಕಳಿಗೆ ಕೃಷ್ಣನ ಕಥೆಗಳನ್ನು ಹೇಳುತ್ತಾರೆ, ಆತನ ಬಾಲಲೀಲೆಗಳನ್ನು ಮೈಮರೆತು ವಿವರಿಸು ತ್ತಾರೆ. ನನ್ನ ಕಿವಿಯಲ್ಲಿ ಭಗವದ್ಗೀತೆಯ ವಾಕ್ಯಗಳು ಅನುರಣಿಸುತ್ತಿದ್ದವು. ಮಹಾನ್ ಗಣಿತಜ್ಞ ಆರ್ಯಭಟನ ಪ್ರಕಾರ ಐದುಸಾವಿರ ವರ್ಷಗಳ ಹಿಂದೆ ಈ ಭೂಮಿಯಲ್ಲಿ ಶ್ರೀಕೃಷ್ಣ 125 ವರ್ಷಗಳ ಕಾಲ ಬದುಕಿದ್ದ.

ಮಹಾಭಾರತದ ಯುದ್ಧ ಮುಗಿದು ಸರಿಸುಮಾರು 35 ವರ್ಷಗಳ ನಂತರದಲ್ಲಿ ಆತ ಮರಣಿಸಿದ. ನಂತರದಲ್ಲಿ ಶುರುವಾಗಿದ್ದೇ ಕಲಿಯುಗ. ಆತ ದೈಹಿಕವಾಗಿ 125 ವರ್ಷ ಕಾಲ ಬದುಕಿದ್ದಿರಬಹುದು, ಆದರೆ ಆತನ ಬದುಕು, ಸಂದೇಶ ಎಂದೆಂದೂ ಶಾಶ್ವತ ಮತ್ತು ಅಮರ. ಹಾಗಾಗಿಯೇ ಇಂದಿಗೂ ಕೃಷ್ಣ ನಮ್ಮ ಸುಪ್ತಪ್ರಜ್ಞೆಯಲ್ಲೂ ಇದ್ದಾನೆ, ಬದುಕಿನ ಭಾಗವಾಗಿಯೂ ಇದ್ದಾನೆ. ಅದಕ್ಕೆ ಕಾರಣ ಆತ ಬೋಧಿಸಿದ ನೈತಿಕ ಆದರ್ಶಗಳು. ಬಾಲ್ಯದಿಂದಲೇ ಆತನ ಬದುಕು ಅತ್ಯಂತ ರೋಚಕವೂ, ಸಂತೋಷ ದಾಯಕವೂ ಆಗಿತ್ತು. ಆತ ರಾಜನಾಗಿದ್ದರೆ, ಆತನ ಆಪ್ತಮಿತ್ರ ಸುಧಾಮ ಕಡುಬಡವ. ಇಂತಹ ಉದಾಹರಣೆಗಳು ಸಿಗುವುದು ಬಲು ವಿರಳ.

ಪ್ರೀತಿ, ಭಾವೋದ್ರೇಕ ಮತ್ತು ಜೀವಕಾರುಣ್ಯ ಇವುಗಳು ಹಣಕ್ಕಿಂತ, ಸಿರಿವಂತಿಕೆಗಿಂತ ಮಿಗಿಲಾದ ಸಂಗತಿ ಗಳು. ಆತ ಭಗವದ್ಗೀತೆ ಯನ್ನು ಬೋಧಿಸುವಾಗ ಮಾನವೀಯತೆ ಮತ್ತು ಕರ್ಮದ ಬಗ್ಗೆ ಮಾತನಾಡುತ್ತಾನೆ. ಆತ ಪ್ರತಿಪಾದಿಸುವ ಧರ್ಮ ಜಾತಿ, ಪಂಥ, ಧರ್ಮಗಳನ್ನು ಮೀರಿದ್ದು. ಆತನ ಧರ್ಮದ ಮೂಲಧಾತು ಮನುಷ್ಯ ಧರ್ಮ. ಇಂತಹದೊಂದು ಸೌಹಾರ್ದ ಮತ್ತು ಒಗ್ಗಟ್ಟಿನ ಉದಾಹರಣೆ ಇನ್ನೆಲ್ಲಿ ಸಿಗುವುದು ಸಾಧ್ಯ? ಬಾಲ್ಯದಲ್ಲಿ ತುಂಟತನ, ಮೋಜು ಮತ್ತು ಜೀವಂತಿಕೆಯ ಬದುಕನ್ನು
ಅನುಭವಿಸಿದ ಕೃಷ್ಣ ಸಾಮಾಜಿಕ ಕ್ರಾಂತಿಗೆ ಕಾರಣನಾದ ಮಹಾಪುರುಷ.

ಆತ ಒಂದು ಕೈಯ್ಯಲ್ಲಿ ಕಾಳಿಂಗ ಸರ್ಪವನ್ನೂ ಮಣಿಸಬಲ್ಲ, ಇನ್ನೊಂದೆಡೆ ಕ್ರೂರ ಕಂಸನ ಸಂಹಾರವನ್ನೂ ಮಾಡಬಲ್ಲ. ನ್ಯಾಯಕ್ಕಾಗಿ ಆತ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುವುದಕ್ಕೂ ಸಿದ್ಧ. ಕಥೆಗಳ ಪ್ರಕಾರ ಆತನಿಗೆ 16108 ಪತ್ನಿಯರಿದ್ದರು ಎಂಬ ಉಲ್ಲೇವಿದೆ. ಒಬ್ಬ ವ್ಯಕ್ತಿಗೆ ಇಷ್ಟೊಂದು ಹೆಂಡಂದಿರು ಇರುವುದು ಸಾಧ್ಯವೇ? ಪುರಾಣಕಥೆಗಳಿಂದ ನಾವಿದನ್ನು ಕೇಳುತ್ತೇವೆ. ಹಿಂದೆ ಭೌಮಾಸುರನೆಂಬ ರಾಕ್ಷಸನಿದ್ದ.

ಆತ 16 ಸಾವಿರ ಕನ್ಯೆಯರನ್ನು ಅಪಹರಿಸಿ ಬಂಧನದಲ್ಲಿಟ್ಟಿದ್ದ. ಅಷ್ಟೂ ಕನ್ಯೆಯರನ್ನು ಕೃಷ್ಣ ರಕ್ಷಿಸಿ ಅವರವರ ಮನೆಗೆ ಕಳುಹಿಸಿದ. ಅವರುಗಳು ತಮ್ಮ ಮನೆಗಳನ್ನು ತಲುಪಿದ ಮೇಲೆ ಮನೆಮಂದಿ ಅವರ ನಡತೆಯ ಬಗ್ಗೆ ಮನೆಯವರೂ ಸೇರಿದಂತೆ
ಎಲ್ಲರೂ ಅನುಮಾನ ವ್ಯಕ್ತಪಡಿಸಿದರು. ಅದನ್ನು ಅನುಲಕ್ಷಿಸಿ ಅಷ್ಟೂ ಮಂದಿಯನ್ನು ಕೃಷ್ಣ ವಿವಾಹ ಮಾಡಿಕೊಂಡ. ಇದು
ಕಥೆ. ಇಲ್ಲಿ ಗಮನಿಸಬೇಕಾದ ತತ್ವವೆಂದರೆ ಶ್ರೀಕೃಷ್ಣ, ದಮ ನಿತ, ನಿಂದಿತ ಮತ್ತು ತಳಸಮುದಾಯಕ್ಕೆ ಸೇರಿದವರಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಹೇಗೆ ಮಾಡುತ್ತಿದ್ದ ಎಂಬುದು.

ಆ ಹೆಣ್ಮಕ್ಕಳಲ್ಲಿ ಆತ ಯಾರ ಜಾತಿ, ಕುಲಗೋತ್ರಗಳನ್ನೂ ಕೇಳಲಿಲ್ಲ. ಎಲ್ಲರೂ ತನ್ನವರು ಎಂದು ಪರಿಭಾವಿಸಿದ. ಇನ್ನೊಂದು ವಿಚಾರ ಗಮನಿಸಿ, ಐದುಸಾವಿರ ವರ್ಷಗಳ ಹಿಂದೆಯೇ ದ್ರೌಪದಿಯ ಮಾನವನ್ನು ಕಾಪಾಡಿ ಆಕೆಯನ್ನು ರಕ್ಷಿಸುವ ಮೂಲಕ ಮಹಿಳೆಯರೆಡೆಗೆ ಆತನಿಗಿದ್ದ ಕಾಳಜಿ ಮತ್ತು ಗೌರವವನ್ನು ಆತ ವ್ಯಕ್ತಪಡಿಸಿದ್ದ. ಆದರೆ ಇಂದಿಗೂ ನಮ್ಮ ಸಮಾಜ ಮಹಿಳೆಯರ ಶೋಷಣೆಯಲ್ಲಿ ತೊಡಗಿದೆ. ಶ್ರೀಕೃಷ್ಣ ಕಾಡುಗಳನ್ನು ಸಂರಕ್ಷಿಸಿ, ಹಸುಗಳನ್ನು ಸಂರಕ್ಷಿಸಿ ಎಂಬ ಸಂದೇಶವನ್ನು ಕೊಟ್ಟಿದ್ದ.

ಅದಕ್ಕಾಗಿಯೇ ನಾನು ಶ್ರೀಕೃಷ್ಣ ಒಬ್ಬ ಮಹಾನ್ ಮಾನವತಾವಾದಿ ಮತ್ತು ಸಾಮಾಜಿಕ ಕ್ರಾಂತಿಕಾರಿ ಯುಗಪುರುಷ ಎಂದು ನಂಬುತ್ತೇನೆ. ರಾಜಕಾರಣ ಹೇಗಿರಬೇಕೆಂಬುದರ ದೃಷ್ಟಾಂತವನ್ನು ಆತ ಜಗತ್ತಿಗೆ ತೋರಿಸಿಕೊಟ್ಟ. ಆತ ರಾಜಕಾರಣ ಮತ್ತು
ತತ್ವಶಾಸದಲ್ಲಿ ಪಾರಂಗತನಾದವನು. ಕಲಿಕೆಯಲ್ಲಿರುವ ಸುಖ, ಸಂತೋಷ, ನೋವು, ಆಕರ್ಷಣೆ ಇವೆಲ್ಲವನ್ನೂ ಆತ ಜಗತ್ತಿಗೆ ತೋರಿಸಿ ಕೊಟ್ಟವನು. ಆತನೊಬ್ಬ ಅಸಾಧಾರಣ ವ್ಯಕ್ತಿ ಮಾತ್ರವಲ್ಲ ಬಹುಮುಖೀ ವ್ಯಕ್ತಿತ್ವವಿದ್ದ ಮಹನೀಯ.

ಆತ ಭಗವದ್ಗೀತೆಯಲ್ಲಿ ವಿವರಿಸಿದ ಸಂಗತಿಗಳು ಸರಳ. ಆದರೆ ಅಷ್ಟೇ ಅಗಾಧ ಅರ್ಥವಂತಿಕೆಯನ್ನು ಹೊಂದಿವೆ. ಆತನ ಅನುಯಾಯಿಗಳಿಗೆ ಆತ ಭಗವಂತ ಮಾತ್ರವಲ್ಲ, ಪರಮಗುರುವೂ ಹೌದು. ಭಗವದ್ಗೀತೆ ಎಂಬುದು ಜ್ಞಾನದ ಪರಮ ಭಂಡಾರ. ಸ್ವಾಮಿ ವಿವೇಕಾನಂದರಿಂದ ಮೊದಲ್ಗೊಂಡು ಮಹಾತ್ಮ ಗಾಂಧಿ ವಿನೋಬಾ ಭಾವೆಯವರ ತನಕ ಎಲ್ಲರೂ ಭಗವದ್ಗೀತೆಯನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿದ್ದಾರೆ.

ತತ್ವ ಜ್ಞಾನಿ ಓಶೋ ನಿಂದ ಮಹಾನ್ ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ತನಕ ಅನೇಕರು ಶ್ರೀಕೃಷ್ಣನ ಗೀತಾ ತತ್ವಗಳಿಂದ
ಪ್ರಭಾವಿತರಾಗಿದ್ದಾರೆ. ಭಾರತ ಮಾತ್ರವಲ್ಲ ಇಡೀ ವಿಶ್ವವೇ ಭಗವದ್ಗೀತೆಯನ್ನು ಕೊಂಡಾಡುತ್ತಿದೆ. ಅದರಲ್ಲಿರುವ ಜೀವನ ತತ್ವಗಳು ಇಂದಿಗೂ ಪ್ರಸ್ತುತ ಎಂದು ಒಪ್ಪುತ್ತದೆ. ೧೭೮೫ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯವರು ಭಗವದ್ಗೀತೆಯನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿ ಪ್ರಕಟಿಸಿದ್ದರು. ಚಾರ್ಲ್ಸ್ ವಿಲ್ಕಿನ್ಸ್ ಅದರ ಭಾಷಾಂತರ ಮಾಡಿದ್ದ. ತದನಂತರದಲ್ಲಿ ಭಗವದ್ಗೀತೆ ಫ್ರೆಂಚ್, ಜರ್ಮನ್, ಡ್ಯಾನಿಶ್, ಚೈನೀಸ್ ಸೇರಿದಂತೆ ಸುಮಾರು ೫೯ ಭಾಷೆಗಳಿಗೆ ತರ್ಜುಮೆಯಾಗಿದೆ.

ಶ್ರೀಕೃಷ್ಣನಲ್ಲಿರುವ ಬಹುಮುಖ್ಯ ಸಂಗತಿಯೆಂದರೆ ಭಕ್ತರೆಡೆಗೆ ಆತನಿಗಿರುವ ಅದಮ್ಯ ಪ್ರೀತಿ. ತನ್ನನ್ನು ಸ್ಮರಿಸುವ ಎಲ್ಲ ಭಕ್ತರಿಗೂ ಆತನ ಅನುಗ್ರಹ ಪ್ರಾಪ್ತವಾಗುತ್ತದೆ. ಬೆಣ್ಣೆಕೃಷ್ಣ, ಗೋಪಿಕೆಯರ ಮನಕದ್ದ ಕೃಷ್ಣ ಹೀಗೆ ಆತನಿಗೆ ಒಂದೆರಡಲ್ಲ ಹಲವು ಹೆಸರು ಗಳಿವೆ. ಒಂದೆಡೆ ಆತ ರಾಜ ಮತ್ತು ಚಾಣಾಕ್ಷ ರಾಜಕಾರಣಿ, ಇನ್ನೊಂದೆಡೆ ಆತ ಸುದರ್ಶನ ಚಕ್ರಧಾರಿಯಾಗಿರುವ ಮಹಾಯೋಧ ನೂ ಹೌದು. ಸ್ನೇಹತ್ವಕ್ಕೆ ಕೃಷ್ಣ-ಸುದಾಮರಿಗಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ.

ಕೊಳಲು ನುಡಿಸಿದಾಗ ಆತ ಮಹಾನ್ ಸಂಗೀತಗಾರನಾಗುತ್ತಾನೆ. ಆತನೊಳಗಿರುವ, ತತ್ವಶಾಸ್ತ, ಕಲೆ ಮತ್ತು ಜೀವನಪ್ರೀತಿಯ ದ್ಯೋತಕ ಸಾಟಿಯಿಲ್ಲದ್ದು. ಅಂದು ರಾತ್ರಿ ಕಳೆದು ಬೆಳಗಾಯಿತು. ಕೇವಲ ಉತ್ಸವಾಚರಣೆಗಳು ಮಾತ್ರವೇ ಕೃಷ್ಣನ ಜನುಮದಿನದ ವಿಶೇಷವೇ? ಆತನಲ್ಲಿದ್ದ ಗುಣವಿಶೇಷಣಗಳನ್ನು ನಾವು ಅಳವಡಿಸಿಕೊಳ್ಳುವುದು ಯಾವಾಗ ಎಂಬ ಚಿಂತನೆ ಮನವನ್ನು ಕಾಡಿತು.

ನಾವು ಇದನ್ನು ಸಾಧಿಸುವುದು ಸಾಧ್ಯವಾದರೆ ಇಂದು ಕಲಿಯುಗದಲ್ಲಿ ಎದುರಿಸುತ್ತಿರುವ ಅನೇಕ ಜಂಜಡಗಳಿಂದ ಹೊರಬರು ವುದು ಸಾಧ್ಯ. ಇಂದಿನ ಪರಿಸ್ಥಿತಿಯಲ್ಲಿ ಶ್ರೀಕೃಷ್ಣನ ಸಾಕ್ಷಾತ್ಕಾರದ ಅಗತ್ಯವಿದೆ. ಈ ಎಲ್ಲ ಯೋಚನೆಗಳ ನಡುವೆ ನನ್ನ ಮನಸ್ಸು ಭಾರವೆನಿಸುತ್ತಿತ್ತು. ನನ್ನ ಮನದಾಳದಲ್ಲಿ ಮೂಡಿದ ಭಾವನೆ ಇಷ್ಟೆ. ಹೇ ಶ್ರೀಕೃಷ್ಣ, ನೀನು ಇನ್ನೊಮ್ಮೆ ಈ ಭುವಿಯಲ್ಲಿ ಅವತರಿಸಬಾರದೇ?