ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ರಾಹುಲ್ ಗಾಂಧಿ ಅವರು ಎಲ್ಲರಂತೆ ‘ತಾವು, ತಮ್ಮ ಮನೆ, ತಮ್ಮ ಸಂಸಾರ’ ಎಂದು ಸ್ವಾರ್ಥಿಯಾಗಿದ್ದಿದ್ದರೆ ಇಷ್ಟೊತ್ತಿಗೆ ಅವರ ವಂಶದ ಕುಡಿ ಅವರಿಗೇ ಮತ ಚಲಾಯಿಸಬೇಕಿತ್ತು. ಆದರೆ ಮುತ್ತಾತ-ಅಜ್ಜಿ-ತಂದೆ ಕಟ್ಟಿದ ಪಕ್ಷದ ಏಳಿಗೆಯೇ ತಮ್ಮ ಬದುಕು ಎಂದು ಪರಿಭಾವಿಸಿದ ರಾಹುಲ್ ಗೃಹಸ್ಥರಾಗದೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರು.
ಎಲ್ಲದಕ್ಕೂ ಒಂದು ಬ್ರ್ಯಾಂಡ್ ಇರುತ್ತದೆ. ಮೈಗೆ ಲೈಫ್ ಬಾಯ್, ಮುಖಕ್ಕೆ ಲಿರಿಲ್, ಹಲ್ಲಿಗೆ ಕೋಲ್ಗೆಟ್ ಇದ್ದಹಾಗೆ ‘ಗಾಂಧಿ’ ಎಂಬ ಬ್ರ್ಯಾಂಡ್ ಇದ್ದರೇನೇ ಕಾಂಗ್ರೆಸ್ ಪಕ್ಷಕ್ಕೆ ರಾಜಕಳೆ. ಈ ಪಕ್ಷಕ್ಕೆ ಹೈಕಮಾಂಡ್ ಎಂಬ ಅಧಿಪತಿ ಅಥವಾ ಮೇಟಿ ಅಂತ ಇದ್ದರೆ ಅದು ‘ಗಾಂಧಿ’ ಕುಟುಂಬ ಮಾತ್ರ. ಅದಿದ್ದರೇನೇ ಹೈಕಮಾಂಡ್ ಎಂದು ಕರೆಸಿಕೊಳ್ಳುವುದಕ್ಕೆ ಒಂದು ಗತ್ತು, ಗಾಂಭೀರ್ಯ. ಹೀಗಾಗಿಯೇ ಸ್ವಾತಂತ್ರ್ಯ ದಕ್ಕಿದ ಮೇಲೆ ಗಾಂಧೀಜಿಯವರ ಆಶಯದಂತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸದೆ ಅದೇ ‘ಗಾಂಧಿ’ ಹೆಸರನ್ನು ಬ್ರ್ಯಾಂಡ್ ಮಾಡಿಕೊಂಡು ಕಾಂಗ್ರೆಸ್ಸನ್ನು ನೆಹರು ದತ್ತು ಪಡೆದಂದಿನಿಂದ ಇಲ್ಲಿಯವರೆಗೂ ‘ಕಾಂಗ್ರೆಸ್ ಎಂದರೆ ಗಾಂಧಿ, ಗಾಂಧಿ ಎಂದರೆ ಕಾಂಗ್ರೆಸ್’ ಎನ್ನುವಷ್ಟು ‘ಬ್ರ್ಯಾಂಡೆಡ್’ ಪಕ್ಷವಾಗಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಗಾಂಧಿಯೇತರ ನಾಯಕರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೂ ಅದು ಎಂಜಿನ್ ಇಲ್ಲದ ರೈಲುಬಂಡಿಯಂತೆ ಗೋಚರಿಸುವುದೇ ಹೆಚ್ಚು. ‘ಗಾಂಧಿ ಬ್ರ್ಯಾಂಡ್’ ಅಧ್ಯಕ್ಷಗಿರಿ ಇಲ್ಲದ ಪಕ್ಷ ಕಾಂಗ್ರೆಸ್ ಪಕ್ಷವೇ ಅಲ್ಲವೇನೋ ಎಂಬಂತೆ ಭಾಸವಾದರೆ ಆಶ್ಚರ್ಯವಿಲ್ಲ. ರಾಜೀವ್ ಗಾಂಧಿ ತಲೆಮಾರಿನ ‘ಗಾಂಧಿ ಅಂಬಾಸಿಡರ್’ ಕಾಂಗ್ರೆಸ್ ಎಷ್ಟು ಹೆಮ್ಮೆ ಎನಿಸಿಕೊಂಡಿತ್ತೆಂದರೆ ಅದರ ಅನುಯಾಯಿಗಳು ರಾಜೀವ್ ಗಾಂಧಿ ಅವರ ಹೆಣ್ಣುಮಗಳ ಹೆಸರನ್ನು ತಮ್ಮ ಗಂಡು ಮಗುವಿಗೂ ಇಟ್ಟು ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.
ಒಬ್ಬ ಮೋಜುಗಾರ-ಸೊಗಸುಗಾರ ಅನುಭವಿಸಬಹುದಾದ ಎಲ್ಲ ಸುಖಗಳನ್ನೂ ಅನುಭವಿಸಿದ ನೆಹರು ಅವರು ಸಹಜಸಾವು ಕಂಡರೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ. ಸಂಜಯ್ ಗಾಂಧಿ ದುರಂತ ಸಾವನ್ನೇ ಕಂಡರು. ಹೀಗಾಗಿ ದೇಶದಲ್ಲಿ ಬಿಜೆಪಿ ಚಿಗುರುವ ಮುನ್ನವೇ ‘ಗಾಂಧಿಪಕ್ಷ’ ಕಾಂಗ್ರೆಸ್ ಮುಗ್ಧಜನರ ಅನುಕಂಪ ಪಡೆದುಕೊಂಡಿತು. ಈ ದುರಂತ ಸಾವುಗಳನ್ನೇ ಉಲ್ಲೇಖಿಸುತ್ತ ಇಂದಿನ ಕಾಂಗ್ರೆಸ್ ನಾಯಕರು ‘ದೇಶಕ್ಕಾಗಿ ಒಂದು ನಾಯಿಯೂ ಸತ್ತಿಲ್ಲ’ ಎಂದು ಹೇಳಿಕೊಂಡು ‘ಗಾಂಧಿ’ ಬ್ರ್ಯಾಂಡ್ ಕುರಿತು ಹೆಮ್ಮೆಪಡುತ್ತಿರುವುದು.
ಹೀಗೆ ಕಾಂಗ್ರೆಸ್ ಪಕ್ಷಕ್ಕೆ ‘ಗಾಂಧಿ’ ಬ್ರ್ಯಾಂಡ್ ಒಂದು ಬೆನ್ನೆಲುಬನ್ನು ಸೃಷ್ಟಿಸಿತು. ಅಷ್ಟೇ ಅಲ್ಲ ಆ ಕುಟುಂಬಕ್ಕೆ ಅನುಕಂಪ ಎಂಬ ಬೂಸ್ಟರ್ ಡೋಸ್ ಕೊಡುತ್ತಲೇ ಬಂದ ನಾಯಕರು ಇನ್ನೆಂದೂ ಗಾಂಽರಹಿತ ಕಾಂಗ್ರೆಸ್ ಹೈಕಮಾಂಡ್ ಸ್ಥಾಪನೆಯಾಗದಂತೆ ಕಾಪಾಡಿಕೊಂಡು ಬಂದರು. ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಿರಾಕರಿಸಿದರೆಂದು ಗಾಂಧಿಯೇತರ
ನಾಯಕರು ಅಧ್ಯಕ್ಷಗಿರಿಗೆ ಬಂದು ಕೂರುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ಪಾಪ, ಈ ಗಾಂಧಿ ಕುಟುಂಬದವರು ಮಾಡಿರುವ ತ್ಯಾಗಗಳನ್ನು ನೋಡುತ್ತಿದ್ದರೆ ಕಾಂಗ್ರೆಸ್ ಕಾರ್ಯಕರ್ತರ ಕರುಳು ಕಿತ್ತುಬರುತ್ತದೆ.
ದೂರದ ಇಟಲಿಯಿಂದ ಭಾರತದ ಸೊಸೆಯಾಗಿ ಬಂದ ‘ಎಡ್ವಿಗ್ ಆಂಟೋನಿಯಾ ಅಲ್ಬಿನಾ ಮೈನೊ’ ಅಲಿಯಾಸ್ ಸೋನಿಯಾ ಗಾಂಧಿಯವರು ಅನಾಯಸವಾಗಿ ದೊರಕಿದ್ದ ಪ್ರಧಾನಮಂತ್ರಿ ಪದವಿಯನ್ನು ಕಳೆದುಕೊಂಡರು (ವಿರೋಧಿಗಳು ಕಳೆದರು). ಈಗ ಅದೇ ಪ್ರಧಾನಮಂತ್ರಿಗಿರಿಗೆ ಒಂದೂವರೆ ಡಜನ್ ನಷ್ಟು ಅಯೋಗ್ಯರು, ಬಫೂನ್ಗಳು ಬಕಪಕ್ಷಿಯಂತೆ ಕಾಯುತ್ತಿದ್ದಾರೆ.
ಪ್ರಧಾನಮಂತ್ರಿಯಾಗುವ ಮಜಾ(?) ಸಿಗುತ್ತದೆಂದರೆ ಪಕ್ಕದ ಪಾಕಿಸ್ತಾನ, ಬಾಂಗ್ಲಾದೇಶವಲ್ಲದೆ ತಾಲಿಬಾನಿಗಳನ್ನೂ ಏರ್
ಲಿಫ್ಟ್ ಮಾಡಿಕೊಂಡು ಬಂದು ಅವರಿಗೆ ಇವರ ‘ಹಾದಾರ್’ ಕಾರ್ಡ್, ವೋಟರ್ ಐಡಿ ಮಾಡಿಸಿ ಕೊಟ್ಟು ಬಾಹುಬಲಿಯ ಕಾಲಕೇಯನಂತೆ ಆಕ್ರಮಿಸುವ ಹಪಾಹಪಿಯಲ್ಲಿದ್ದಾರೆ. ಆದರೆ ಅಂದು ಇಂಥ ಪದವಿಯನ್ನು‘ಕಳೆದುಕೊಂಡ’ ಸೋನಿಯಾ
ಗಾಂಧಿಯವರ ತ್ಯಾಗ, ಉದಾರತೆಯನ್ನೆಲ್ಲ ಮರೆತು ಅವರ ಅನಾರೋಗ್ಯದ ಕಾರಣವೊಡ್ಡಿ ಅವರನ್ನು ಕಡೆಗಣಿಸುವುದು ಯಾವ ನ್ಯಾಯ? ಸೋನಿಯಾ ಗಾಂಧಿ ಅವರು ಇ.ಡಿ. ಕಚೇರಿಗೆ ಹೊರಟ ದಿನ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದೆ
ಸಂತಾಪ ವ್ಯಕ್ತಪಡಿಸಿದ, ಗಾಂಧಿ ಕುಟುಂಬದ ಕಟ್ಟಪ್ಪ ನಂತಿರುವ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಈ ಸಂದರ್ಭದಲ್ಲಿ ತಮ್ಮ ಆತ್ಮಸಾಕ್ಷಿಯನ್ನು ಕಾಂಗ್ರೆಸ್ ಕಾರ್ಯಕರ್ತರ ಎದುರು ತೆರೆದಿಡಬೇಕು.
ಗಾಂಧಿ ಮನೆತನದ ಕೊನೆಯ ಕುಡಿ ಇರುವವರೆಗೂ ಖರ್ಗೆಯವರಾಗಲಿ ಕಮಲನಾಥ್, ಅಶೋಕ್ ಗೆಹ್ಲೋತ್ರಂಥ ಯಾರೇ ಆಗಲಿ ಅಂಥ ಆತ್ಮವಂಚನೆಯ ಆಲೋಚನೆಯನ್ನು ಮಾಡಕೂಡದು. ಅದೇ ಪವಿತ್ರವಾದ, ನಿಷ್ಕಲ್ಮಶವಾದ ಸ್ವಾಮಿನಿಷ್ಠೆ. ಖರ್ಗೆಯವರು ಅಧ್ಯಕ್ಷರಾದರೆ ಅವರ ಆಪ್ತರಿಗೆ, ಅವರ ಮನೆಯವರಿಗೆ ಖುಷಿಯಾಗಬಹುದು. ಆದರೆ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ರಕ್ತದ ಕಣಕಣದಲ್ಲೂ ‘ಗಾಂಧಿಗಿರಿ’ಯ ಚಿಲುಮೆ ಇದೆ, ಉತ್ಸಾಹ-ಹುರುಪು-ಚೈತನ್ಯವಿದೆ. ಹೀಗಿರುವಾಗ ಅಂಥ ಕುಟುಂಬವನ್ನು ಬಿಟ್ಟು ಅನ್ಯರು ಯಾರೇ ಅಧ್ಯಕ್ಷರಾದರೂ ಕಾಂಗ್ರೆಸ್ಗೆ ಶೋಭೆಯಲ್ಲ.
ಇನ್ನು ವೀರಪ್ಪ ಮೊಯ್ಲಿಯವರು ‘ಸೋನಿಯಾ ಗಾಂಧಿಯವರು ಕಾಂಗ್ರೆಸ್ ಪಕ್ಷದ ತಾಯಿ ಇದ್ದಂತೆ, ನಮ್ಮ ಬೆಂಬಲ ಎಂದೆಂದಿಗೂ ಅವರಿಗಿದೆ’ ಎಂದಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಶಕ್ತಿ ಏನೆಂದು ಅವರಿಗೆ ಗೊತ್ತು.
ವಯಸ್ಸಿನಲ್ಲಿ ತಮಗಿಂತ ಕಿರಿಯಳಾದರೂ ಸೋನಿಯಾ ಗಾಂಧಿಯವರ ಕಾಲಿಗೆರಗಿ ತಮ್ಮ ಸ್ವಾಮಿನಿಷ್ಠೆಯ ಪರಮಾವಧಿ ಯನ್ನು ತೋರುವ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.
ಗಾಂಧಿ ಕುಟುಂಬದ ಮೆಚ್ಚುಗೆಗಾಗಿ ಎಂಥ ತ್ಯಾಗಕ್ಕೂ ಸಿದ್ಧವಿರುವ ನಾಯಕರುಗಳಿದ್ದಾರೆ. ಅವರ ಉನ್ಮಾದ ಯಾವ ಮಟ್ಟಕ್ಕಿದೆಯೆಂದರೆ, ಆಂಧ್ರದ ವೈ.ಎಸ್.ರಾಜಶೇಖರ ರೆಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕಾರಣ (ಆತನಿಂದ ಊರೂರೇ ಮತಾಂತರಗೊಂಡಿದ್ದು ಬೇರೆ ವಿಚಾರವಲ್ಲ) ಬಹುಬೇಗ ಸೋನಿಯಾ ಗಾಂಧಿಯವರ ಮೆಚ್ಚುಗೆ ಸಂಪಾದಿಸಿ ಮುಖ್ಯಮಂತ್ರಿಯೂ ಆಗಿಬಿಡುತ್ತಾರೆ. ನಮ್ಮಲ್ಲಿಯೂ ಕೆ.ಜೆ. ಜಾರ್ಜ್ರಂಥ ಶಾಸಕರಿದ್ದರೂ ಅವರನ್ನು ವಿರೋಽಗಳು ಬೆಳೆಯಲು ಬಿಡಲಿಲ್ಲ.
ಹೀಗೆ ತಮ್ಮ ಹುಟ್ಟು, ಧರ್ಮ, ಸಂಸ್ಕೃತಿ, ಸಂಪ್ರದಾಯವನ್ನೇ ಧಿಕ್ಕರಿಸಿ ಕಾಂಗ್ರೆಸ್ ಹೈಕಮಾಂಡ್ನ ಮೆಚ್ಚುಗೆಗಾಗಿ ಹಾತೊರೆಯುವ ಅಸಂಖ್ಯಾತ ನಾಯಕರು, ಕಾರ್ಯಕರ್ತರು ಇನ್ನೂ ಬದುಕಿರುವಾಗಲೇ ‘ಬ್ರ್ಯಾಂಡ್ ಗಾಂಧಿ’ ಅವರನ್ನು ಪಕ್ಷದ
ಅಧ್ಯಕ್ಷಗಿರಿಯಿಂದ ದೂರವಿಡುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಪವೇ ಸರಿ. ಇನ್ನು ರಾಹುಲ್ ಗಾಂಧಿಯವರ ಬದುಕಿನ
ಹೋರಾಟವನ್ನು ನೋಡುತ್ತಿದ್ದರೆ ಕರುಳು ಮಾತ್ರವಲ್ಲ ಮಿದುಳೂ ಕಿತ್ತುಬರುತ್ತದೆ.
ರಾಹುಲ್ ಅವರು ಎಲ್ಲರಂತೆ ‘ತಾವು, ತಮ್ಮ ಮನೆ, ತಮ್ಮ ಸಂಸಾರ’ ಎಂದು ಸ್ವಾರ್ಥಿಯಾಗಿ ವಿಲಾಸಿಯಾಗಿದ್ದಿದ್ದರೆ
ಇಷ್ಟೊತ್ತಿಗೆ ಅವರ ವಂಶದ ಕುಡಿ ಅವರಿಗೇ ಮತ ಚಲಾಯಿಸಬೇಕಿತ್ತು. ಆದರೆ ತಮ್ಮ ಮುತ್ತಾತ- ಅಜ್ಜಿ-ತಂದೆ ಕಟ್ಟಿದ ಪಕ್ಷದ ಏಳಿಗೆಯೇ ತಮ್ಮ ಬದುಕು ಎಂದು ಪರಿಭಾವಿಸಿದ ರಾಹುಲ್ ಅವರು ಎಲ್ಲ ನಾಯಕರ ಮಕ್ಕಳಂತೆ ಯೌವನದಲ್ಲಿ ಗೃಹಸ್ಥ ರಾಗದೆ ವೈವಾಹಿಕ ಬದುಕನ್ನು ತ್ಯಜಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರ, ಅಂಥ ಚಿನ್ನದಂಥ ಮಗನನ್ನು ಇಂದಿನ ಯಾವ ಕಾಂಗ್ರೆಸ್ ನಾಯಕರು ಹಡೆದಿದ್ದಾರೆ ಹೇಳಿ? ಎಲ್ಲರೂ ತಮ್ಮ ಮಕ್ಕಳಿಗೆ ಮದುವೆ ಮಾಡಿ ಮೊಮ್ಮಕ್ಕಳು ಮರಿ ಮಕ್ಕಳನ್ನು ಕಂಡು ಅವರಿಗೂ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಮಂತ್ರಿಗಳನ್ನಾಗಿ ಮಾಡಿ ವೈಭೋಗ ಅನುಭವಿಸುತ್ತಿದ್ದಾರೆ.
ಆದರೆ ಪಾಪ, ರಾಹುಲ್ ಗಾಂಧಿಯವರು ಮಾತ್ರ ವಿವಾಹವಾಗದೆ ಪಕ್ಷಕ್ಕಾಗಿ ದೇಶ-ವಿದೇಶ ಸುತ್ತುತ್ತಿದ್ದಾರೆ. ಇದು ಯಾವ
ಸೀಮೆಯ ನ್ಯಾಯ?! ಇಂಥ ಮಹಾನ್ ನಾಯಕನನ್ನು ಮನವೊಲಿಸಿ ಪುನಃ ಅಧ್ಯಕ್ಷಗಿರಿಗೆ ತಂದು ಪಕ್ಷವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡದೆ ಗಾಂಧಿಯೇತರರು ಪಕ್ಷದ ಅಧ್ಯಕ್ಷ ಗಾದಿಯಲ್ಲಿ ಕೂರುವುದಕ್ಕೆ ಅದು ಯಾರಪ್ಪನ ಆಸ್ತಿ? ನಿಜಕ್ಕೂ
ಇದು ಪಾಪದ ಕೃತ್ಯ.
ಇನ್ನು ಡಿ.ಕೆ. ಶಿವಕುಮಾರ್ ಅವರು ಕಾಶ್ಮೀರದ ಪಂಡಿತರ ಹೆಣದರಾಶಿ ಬಿದ್ದರೂ ಲೆಕ್ಕಿಸದೆ ಭಾವೋದ್ವೇಗಗೊಂಡು, ರಾಹುಲ್ ಗಾಂಧಿಯವರು ಕಾಶ್ಮೀರಿ ಪಂಡಿತ ವಂಶಸ್ಥರೆಂದು ಹೆಮ್ಮೆಪಡುತ್ತಾರೆ. ಪಕ್ಷದ ವೇದಿಕೆಗಳಲ್ಲಿ ‘ಸೋನಿಯಾ ಗಾಂಧಿ ಕೀ, ರಾಹುಲ್ ಗಾಂಧಿ ಕೀ, ಪ್ರಿಯಾಂಕ ಗಾಂಧಿ ಕೀ’ ಎಂದು ಕೂಗಿ ಜೈಕಾರ ಎಬ್ಬಿಸುತ್ತಾರೆ. ಇಂಥ ಮಮಕಾರವಿರುವ ನಾಯಕರು ದೇಶದುದ್ದಕ್ಕೂ ಇದ್ದಾರೆ.
ರಾಹುಲ್ ಗಾಂಧಿಯೊಳಗಿರುವ ಅತ್ಯಂತ ಎತ್ತರದ ಮುತ್ಸದ್ದಿತನವನ್ನು ಅರಿತಿರುವ ಸಿದ್ದರಾಮಯ್ಯನವರ ಹೃದಯದಲ್ಲಿ ರಾಹುಲ್ ಗಾಂಧಿಯವರು ಅಜರಾಮರ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯನವರು ಹೈಕಮಾಂಡ್ನಲ್ಲಿ ಗಳಿಸಿಕೊಂಡಿರುವ
ವಿಶ್ವಾಸ-ಪ್ರೀತಿ-ವಾತ್ಸಲ್ಯ ಅವರ ವಿರೋಧಿಗಳ ನಿದ್ದೆ ಗೆಡಿಸುತ್ತದೆ. ಇನ್ನು ಯುವಕಾಂಗ್ರೆಸ್ಸಿಗ ನಲಪಾಡ್ಗೆ ಗಾಂಧಿ ಕುಟುಂಬದ ಮೇಲಿರುವ ಉಗ್ರಪ್ರೀತಿ, ವ್ಯಾಘ್ರ ಅಭಿಮಾನವನ್ನು ನೋಡುತ್ತಿದ್ದರೆ ಕಾಂಗ್ರೆಸ್ ಕಾರ್ಯಕರ್ತರ ನರನಾಡಿಗಳು ಎದ್ದುನಿಲ್ಲುತ್ತವೆ.
ತಮ್ಮ ಪಕ್ಷಕ್ಕಾಗಿ ಚೀನಾದಿಂದ ಹಿಡಿದು ಕೇರಳದವರೆಗೂ ಸುತ್ತಿ ಪಕ್ಷವನ್ನು ಸಂಘಟಿಸುತ್ತಿರುವ ಮುಗ್ಧನಾಯಕರಾದ ರಾಹುಲ್ ಗಾಂಧಿಯವರು ಇಲ್ಲಿಯವರೆಗೂ ಎಷ್ಟು ಮಠ-ಮಂದಿರ-ಮಸೀದಿ -ಚರ್ಚುಗಳನ್ನು ಸುತ್ತಿದ್ದಾರೆ ಸುತ್ತಬೇಕಿದೆ ಎಂಬುದು ದೇಶದ ಕಾರ್ಯಕರ್ತರಿಗೆ ಗೊತ್ತು. ಹೋದ ಕಡೆಗಳಲ್ಲ ಅವರು ಮಾಡುವ ಭಾಷಣ ನಡೆನುಡಿಗಳಿಗೆ ಅಭಿಮಾನಿಗಳು ಹುಚ್ಚೆದ್ದು
ಅಭಿಮಾನಿಸುತ್ತಾರೆ. ದಕ್ಷಿಣದ ಭಾಷೆ ಗೊತ್ತಿಲ್ಲದ ಹಿಂದಿವಾಲಾ ಅವರಾಗಿದ್ದರೂ, ಕನ್ನಡದ ಪದಗಳನ್ನು ಉಚ್ಚರಿಸುವಲ್ಲಿನ ಅವರ ಪ್ರಾಮಾಣಿಕ ಪ್ರಯತ್ನಎಲ್ಲ ಹಿಂದಿವಾಲಾಗಳಿಗೂ ಮಾದರಿ.
ಅವರ ಈ ಮುಗ್ಧತನವನ್ನು ಮಗುವಿನಂತೆ ಕಾಣುವ ಹೊಟ್ಟೆಪಾಡಿನ ಹೋರಾಟಗಾರರು ಗಾಂಧಿ ಕುಟುಂಬ ಹಿಂದಿವಾಲಾ ಆಗಿದ್ದರೂ ‘ಹೊಟ್ಟೆಗೆ’ ಹಾಕಿಕೊಂಡು ಅವರ ವಿರುದ್ಧ ಸೊತ್ತದೆ ಬರಿಯ ಬಿಜೆಪಿಯನ್ನೇ ಹಿಂದಿವಾಲಾಗಳೆಂದು ತೆಗಳುತ್ತಾ
ಕೆರೆದು ಗಾಯಮಾಡಿಕೊಂಡು ಕಾಂಗ್ರೆಸ್ನ ಅಂತರಂಗದ ಪ್ರೇಮಿಗಳಾಗಿದ್ದಾರೆ.
ಗಾಂಧಿ ಆಧರಿತ ಕಾಂಗ್ರೆಸ್ ಪಕ್ಷದ ಅನೇಕ ಭರವಸೆಗಳು ಇನ್ನೂ ನೆರವೇರಿಲ್ಲ. ಕಳೆದ ಏಳು ದಶಕಗಳಿಂದ ಭಾರತದಲ್ಲಿ ಬಡತನ ನಿರ್ಮೂಲನೆ ಮಾಡುತ್ತೇವೆಂದು ಪಣತೊಟ್ಟು ಅದಕ್ಕಾಗಿ ದುಡಿಯುತ್ತಲೇ ಇರುವ ಈ ಕುಟುಂಬ ಮತ್ತು ಅವರ
ಅಸಾಮಾನ್ಯ ಹಿಂಬಾಲಕರು ಇನ್ನೂ ಗುರಿಯನ್ನೇ ಮುಟ್ಟಿಲ್ಲ. ಅವರನ್ನು ಅವರ ನಾಯಕತ್ವವನ್ನೇ ನಂಬಿಕೊಂಡಿರುವ ಬುದ್ಧಿಜೀವಿಗಳು, ವಿಚಾರವಾದಿಗಳು, ಪ್ರಗತಿಪರರು, ಕೆಲ ಸಾಹಿತಿಗಳು, ಬಣ್ಣ ಹಚ್ಚುವವರನ್ನು ಒಳಗೊಂಡ ನಿರಾಶ್ರಿತ ಕೂಟ
ದವರು ಹಿಂದುತ್ವ ವಿರೋಧಿಗಳೆಂಬ ಬಿರುದು ಗಳಿಸಿಕೊಂಡು ಬಹುಸಂಖ್ಯಾತ ಹಿಂದೂಗಳಿಂದ ಉಗಿಸಿಕೊಂಡು ಒರೆಸಿಕೊಂಡು ಬದುಕುತ್ತಿದ್ದಾರೆ.
ಇನ್ನು ಭಾರತದೊಳಗೆ ಭಯೋತ್ಪಾದನೆಯ ಸರಣಿ ಸಂಚು ಹೂಡುವ ಭಯೋತ್ಪಾದಕರು, ಮತಾಂಧ ಜಿಹಾದಿಗಳು, ಹೊರಗಿನ ಶತ್ರುಗಳು, ದೇಶ ದೊಳಗಿನ ದ್ರೋಹಿಗಳು ಬಿಜೆಪಿಯನ್ನು ಶಪಿಸಿಕೊಂಡು ಬದುಕುತ್ತಿದ್ದಾರೆ. ಇಂಥವರನ್ನು ಮಟ್ಟಹಾಕಲು ಗಾಂಧಿ ಕುಟುಂಬದ ಕುಡಿಗಳು ಪಣ ತೊಡುತ್ತಾರೆಂದು ಮುಗ್ಧ ಕಾರ್ಯಕರ್ತರು ನಂಬಿಕೊಂಡಿದ್ದಾರೆ.
ಹಾಗೆ ನೋಡಿದರೆ ಈ ಅರವಿಂದ ಕ್ರೇಜಿವಾಲ್, ಮಮತಾ ಬ್ಯಾನರ್ಜಿ, ಮಾಯಾವತಿ, ನಿತೀಶ್ ಕುಮಾರ್, ಚಂದ್ರಶೇಖರ ರೆಡ್ಡಿ ಅಲ್ಲದೆ, ಸಮಯಕ್ಕೆ ತಕ್ಕಂತೆ ಟವಲ್ ಹಾಸುವ ಪುಟಗೋಸಿ ಪಕ್ಷಗಳ ನಾಯಕರಿಗಿಂತ ರಾಹುಲ್ ಗಾಂಧಿಯವರು ನೂರು
ಪಾಲು ಮೇಲು. ರಾಹುಲ್ ಗಾಂಧಿಯವರ ದುರದೃಷ್ಟವೇನೆಂದರೆ, ಪಕ್ಷದಲ್ಲಿದ್ದ ಪಿ.ವಿ. ನರಸಿಂಹರಾವ್, ಎಸ್.ಎಂ. ಕೃಷ್ಣ, ಬಂಗಾರಪ್ಪ, ಜನಾರ್ದನ ಪೂಜಾರಿಯವರಂಥ ನಾಯಕರ ಮಾರ್ಗದರ್ಶನ ಅವರಿಗೆ ಸಿಗಲಿಲ್ಲ. ಅಂಥವರ ಗರಡಿಯಲ್ಲಿ
ಪಳಗಿದ್ದರೆ ರಾಹುಲ್ ಗಾಂಧಿ ಇಷ್ಟೊತ್ತಿಗೆ ಎಲ್ಲಾ ಹೋಗಿ ನಿಲ್ಲುತ್ತಿದ್ದರು. ಆದರೂ ಅವರು ಈಗ ಚಿಂತಿಸಬೇಕಿಲ್ಲ.
ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಉಗ್ರಪ್ಪ, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ದಿನೇಶ್ ಗುಂಡುರಾವ್ರಂಥ ಮಹಾನ್ ಸಿಹಿ ‘ಹಲಸು’ಬಾಯಿಯ ವಾಕ್ಚತುರರಿದ್ದಾರೆ. ನಲಪಾಡ್, ಗೆರಿ ಸೀನರಂಥ ಯುವನೇತಾರರಿದ್ದಾರೆ. ಇವರೆಲ್ಲ ಸೇರಿಕೊಂಡು ಎಂದಾದರೊಂದು ದಿನ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಕನಸನ್ನು ನನಸು ಮಾಡಿಯೇ ತೀರುತ್ತಾರೆ.
ಆದ್ದರಿಂದ ಅದೇನೇ ಆಗಿಹೋಗಲಿ ರಾಹುಲ್ ಗಾಂಧಿಯೇ ಅಧ್ಯಕ್ಷರಾಗಿ ಸದಾ ರಾರಾಜಿಸುತ್ತಿರಲಿ. ಇದು ಕೇವಲ ಕಾಂಗ್ರೆಸ್ ಕಾರ್ಯಕರ್ತರ ನಂಬಿಕೆ ಮಾತ್ರವಲ್ಲ, ಬಿಜೆಪಿ ಕಾರ್ಯಕರ್ತರ ಹರಕೆಯೂ ಹೌದು!