Saturday, 23rd November 2024

ಏಷ್ಯಾಕಪ್ ಕ್ರಿಕೆಟ್: ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಿದರೆ ₹ 5,000 ದಂಡ..!

ಶ್ರೀನಗರ: ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯ ವನ್ನು ಗುಂಪು ಕಟ್ಟಿಕೊಂಡು ನೋಡದಂತೆ ಮತ್ತು ಯಾವುದೇ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಂತೆ ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ  ವಿದ್ಯಾರ್ಥಿ ಗಳಿಗೆ ತಿಳಿಸಿದೆ.

ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಹೊರಡಿಸಿದ ನೋಟಿಸ್‌ನಲ್ಲಿ, ಪಂದ್ಯದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿದ ಕೊಠಡಿಗಳಲ್ಲಿ ಉಳಿಯುವಂತೆ ಮಂಡಳಿ ತಿಳಿಸಿದೆ.

‘ದುಬೈನ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿವಿಧ ರಾಷ್ಟ್ರಗಳನ್ನು ಒಳಗೊಂಡ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕ್ರೀಡೆಯನ್ನು ಕೇವಲ ಒಂದು ಆಟದಂತೆ ತೆಗೆದುಕೊಳ್ಳುವಂತೆ ಮತ್ತು ಸಂಸ್ಥೆ ಅಥವಾ ಹಾಸ್ಟೆಲ್‌ನಲ್ಲಿ ಯಾವುದೇ ರೀತಿಯ ಅಶಿಸ್ತು ಸೃಷ್ಟಿಸದಂತೆ ಸೂಚಿಸಲಾಗಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ನಿಗದಿಪಡಿಸಿದ ನಿರ್ದಿಷ್ಟ ಕೋಣೆಯಲ್ಲಿಯೂ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಪಂದ್ಯ ವೀಕ್ಷಿಸಿದರೆ, ಆ ನಿರ್ದಿಷ್ಟ ಕೊಠಡಿಯಲ್ಲಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಹಾಸ್ಟೆಲ್ ವಸತಿಯಿಂದ ಡಿಬಾರ್ ಮಾಡಲಾಗುತ್ತದೆ. ಪಂದ್ಯ ವೀಕ್ಷಣೆಯಲ್ಲಿ ತೊಡಗಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕನಿಷ್ಠ ₹ 5,000 ದಂಡ ವಿಧಿಸಲಾಗುತ್ತದೆ’ ಎನ್‌ಐಟಿ ಹೇಳಿದೆ.

2016 ರಲ್ಲಿ ಟಿ-20 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋತ ನಂತರ ಹೊರರಾಜ್ಯ ಮತ್ತು ಸ್ಥಳೀಯ ವಿದ್ಯಾರ್ಥಿಗಳ ನಡುವೆ ಇನ್‌ಸ್ಟಿಟ್ಯೂಟ್‌ನಲ್ಲಿ ಘರ್ಷಣೆಗಳು ಸಂಭವಿಸಿದವು. ಇದರಿಂದ ಎನ್‌ಐಟಿಯನ್ನು ಹಲವು ದಿನಗಳವರೆಗೆ ಮುಚ್ಚಲಾಗಿತ್ತು.