ಹಿಂದಿರುಗಿ ನೋಡಿದಾಗ
ಮಾನವನ ಇತಿಹಾಸವು ಕಂಡಂತಹ ಕುಖ್ಯಾತ ವಿಷಗಳಲ್ಲಿ ಶಂಖ ಪಾಷಾಣವೂ ಒಂದು. ಇದು ಬೂದು, ಕೆಂಪು, ಹಳದಿ ಮತ್ತು ಬಿಳಿ ಶಂಖಪಾಷಾಣ ಎಂಬ ರೂಪಗಳಲ್ಲಿ ದೊರೆಯುತ್ತದೆ. ಇವುಗಳಲ್ಲಿ ಸಾಮಾನ್ಯವಾಗಿ ಬೂದು ಶಂಖಪಾಷಾಣ ಎಲ್ಲೆಡೆ ದೊರೆಯುತ್ತದೆ. ವಿಷ ಪ್ರಾಶನದಲ್ಲಿ ಹೆಚ್ಚು ಪ್ರಯೋಗವಾಗುವುದು ಬಿಳಿಯ ಶಂಖ ಪಾಷಾಣ.
ರಾಸಾಯನಿಕವಾಗಿ ಇದು ಅರ್ಸೆನಿಕ್ ಟ್ರಯಾಕ್ಸೈಡ್. ಇದು ಹರಳು ರೂಪದ ಬಿಳಿಯ ಪುಡಿಯಾಗಿದ್ದು ನೀರಿನಲ್ಲಿ, ಪಾನೀಯ ಗಳಲ್ಲಿ ಹಾಗೂ ಆಹಾರ ಪದಾರ್ಥಗಳಲ್ಲಿ ಸುಲಭವಾಗಿ ಕರಗುತ್ತದೆ. ಇದಕ್ಕೆ ವಾಸನೆ, ರುಚಿ ಇಲ್ಲದ ಕಾರಣ, ಆಹಾರ ಪಾನೀಯ ಗಳಲ್ಲಿ ಶಂಖಪಾಷಾಣವನ್ನು ಬೆರೆಸಿರುವ ವಿಚಾರ ತಿನ್ನುವವನಿಗೆ ಗೊತ್ತಾಗಲು ಸಾಧ್ಯವೇ ಇಲ್ಲ. ಶಂಖಪಾಷಾಣ ವನ್ನು ಬಳಸಿ ಎರಡು ರೀತಿಯಲ್ಲಿ ಕೊಲ್ಲುತ್ತಿದ್ದರು.
ಮೊದಲನೆಯದು ತೀವ್ರ ವಿಷ ಪ್ರಯೋಗ ಹಾಗೂ ಎರಡನೆಯದು ನಿಧಾನ ವಿಷ ಪ್ರಯೋಗ. ತೀವ್ರ ವಿಷಪ್ರಯೋಗ ಎಂದರೆ ಅಧಿಕ ಪ್ರಮಾಣದಲ್ಲಿ ಶಂಖಪಾಷಾಣವನ್ನು ಆಹಾರದಲ್ಲಿ ಒಮ್ಮೆಲೆ ಬೆರೆಸಿ ತಿನ್ನಲು ನೀಡುವುದು. ಇದನ್ನು ತಿಂದವನಲ್ಲಿ ಕೂಡಲೇ ವಿಪರೀತ ವಾಂತಿ ಮತ್ತು ತೀವ್ರಬೇಧಿ ಕಾಣಿಸಿಕೊಳ್ಳುತ್ತದೆ. ಸ್ನಾಯುಗಳು ನಿಶ್ಚೇಷ್ಟಿತವಾಗುತ್ತವೆ. ಸದ್ದಿಲ್ಲದ ಹಾಗೆ ಸಾವು ಸಂಭವಿಸುತ್ತದೆ. ಈ ಲಕ್ಷಣಗಳೆಲ್ಲ ಆಹಾರ ನಂಜು ಇಲ್ಲವೇ ಫುಡ್ ಪಾಯ್ಸನಿಂಗ್ ಲಕ್ಷಣಗಳನ್ನು ಹೋಲುತ್ತದೆ. ಹಾಗಾಗಿ
ಸಾಮಾನ್ಯ ಸಂದರ್ಭಗಳಲ್ಲಿ ವೈದ್ಯರು ಶಂಖಪಾಷಾಣ ವಿಷ ಪ್ರಯೋಗವಾಗಿರಬಹುದು ಎಂದು ಯೋಚಿಸುವುದೇ ಇಲ್ಲ.
ನಿಧಾನ ವಿಷ ಪ್ರಯೋಗವು ಎರಡನೆಯ ವಿಧಾನ. ಚಾಣಕ್ಯನ ಅರ್ಥಶಾಸವು ವಿಷಕನ್ಯೆಯ ಬಗ್ಗೆ ಪ್ರಸ್ತಾಪಿಸುತ್ತದೆ. ಪಾಟಲಿ ಪುತ್ರವನ್ನು ಶಿಶುನಾಗವಂಶದ ಕಾಲಕೋಶ ಅಥವ ಕಾಕವರ್ಣನು (395-367) ಆಳುತ್ತಿದ್ದ ಕಾಲ. ನಂದಿವರ್ಧನ ಕಾಲ ಕೋಶನ ತಂದೆ. ನಂದಿವರ್ಧನನಿಗೆ ಶೂದ್ರಕನ್ಯೆಯಲ್ಲಿ ಒಬ್ಬ ಮಗ. ಅವನೇ ಮಹಾಪದ್ಮನಂದ, ನಂದ ವಂಶದ ಸ್ಥಾಪಕ. ಈ ಮಹಾಪದ್ಮನಂದನು ವಿಷಕನ್ಯೆಯ ಮೂಲಕ ಕಾಲಕೋಶನನ್ನು ಕೊಲ್ಲಿಸಿ, ತಾನು ಪಾಟಲಿಪುತ್ರದ ಅರಸನಾದ. ಚಾಣಕ್ಯ ಮತ್ತು ಚಂದ್ರಗುಪ್ತರು ನಂದ ಸಾಮ್ರಾಜ್ಯಕ್ಕೆ ಮಗ್ಗುಲ ಮುಳ್ಳಾದಾಗ, ನಂದರ ಮಹಾಮಂತ್ರಿಯಾದ ಅಮಾತ್ಯ ರಾಕ್ಷಸನು ವಿಷಕನ್ಯೆಯ ಮೂಲಕ ಚಂದ್ರಗುಪ್ತನನ್ನು ಕೊಲ್ಲಲು ಹೊಂಚು ಹಾಕಿದ.
ಇದನ್ನು ತಿಳಿದ ಚಾಣಕ್ಯ, ಆ ವಿಷಕನ್ಯೆಯು ಪರ್ವತಕನ ಬಳಿಗೆ ಹೋಗುವಂತೆ ಮಾಡಿ ಚಂದ್ರಗುಪ್ತನನ್ನು ರಕ್ಷಿಸಿದ. ಭಾರ
ತೀಯ ಸಾಹಿತ್ಯದಲ್ಲಿ ವಿಷಕನ್ಯೆಯ ಪ್ರಸ್ತಾಪ ಹಲವೆಡೆ ಬರುತ್ತದೆ. ಓರ್ವ ಹೆಣ್ಣು ಮಗುವು ಹುಟ್ಟಿದ ಎರಡನೆಯ ದಿನದಿಂದಲೇ ಆಕೆಗೆ ಹಾವಿನ ವಿಷದಿಂದ ಹಿಡಿದು ಎಲ್ಲ ರೀತಿಯ ವಿಷಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ನೀಡುತ್ತಾ ಬೆಳೆಸುವರು. ಆ ವಿಷವು ಅವರ ಮೈಗೆ ಒಗ್ಗುತ್ತಾ ಹೋಗುತ್ತದೆ. ವಾಸ್ತವದಲ್ಲಿ ಇದೊಂದು ಅಪಾಯಕಾರಿ ಪ್ರಯೋಗ. ಹೆಚ್ಚಿನ ಮಕ್ಕಳು ಅಸುನೀಗು ತ್ತಿದ್ದರು. ಉಳಿದ ಕೆಲವು ಹೆಣ್ಣು ಮಕ್ಕಳು ಹದಿನಾರು ವಯಸ್ಸಿಗೆ ಬರುತ್ತಿದ್ದ ಹಾಗೆ ಅವರ ಇಡೀ ದೇಹವು ವಿಷಮಯ ವಾಗಿರುತ್ತಿತ್ತು. ರಾಜನು ಶತ್ರುಗಳನ್ನು ಕೊಲ್ಲಲು ಈಕೆಯನ್ನು ಬಳಸಿಕೊಳ್ಳುತ್ತಿದ್ದ. ಈ ವಿಷಕನ್ಯೆಯೊಡನೆ ದೈಹಿಕ ಸಂಪರ್ಕ ನಡೆಸುವವರು ಮರಣಿಸುವುದು ಖಚಿತ. ಈಕೆಯ ಜೊಲ್ಲು, ಬೆವರೂ ವಿಷಮಯವಾಗಿರುತ್ತಿದ್ದವು.
ಕೆಲವು ಇತಿಹಾಸಕಾರರು ವಿಷಕನ್ಯೆ ಎಂಬ ಪರಿಕಲ್ಪನೆಯನ್ನೇ ನಿರಾಕರಿಸಿರುವುದುಂಟು. ಸುಂದರ ಹುಡುಗಿಯು ತನ್ನ ಒನಪು-ವೈಯಾರಗಳ ಮೂಲಕ, ದೇಶದ ಶತ್ರುಗಳ ಜತೆ ಇರುಳನ್ನು ಕಳೆಯುತ್ತಾ, ಅವರಿಗೆ ವಿಷಪ್ರಾಶನ ಮಾಡಿಸಿ ಕೊಲ್ಲುತ್ತಿದ್ದು ದರಿಂದ ಅವರಿಗೆ ವಿಷಕನ್ಯೆ ಎಂಬ ಹೆಸರು ಬಂದಿರಬಹುದು ಎಂಬ ಗುಮಾನಿಯನ್ನೂ ವ್ಯಕ್ತಪಡಿಸಿರುವುದುಂಟು.
ಅರಿಸ್ಟಾಟಲ್ ‘ಸೆಕ್ರೆಟಮ್ ಸೆಕ್ರೆಟೋರಮ್’ (ರಹಸ್ಯಗಳ ರಹಸ್ಯ) ಎನ್ನುವ ಗ್ರಂಥವನ್ನು ಬರೆದಿರುವನಂತೆ (ವಾಸ್ತವ
ದಲ್ಲಿ ಇದನ್ನು ಅರಿಸ್ಟಾಟಲ್ ಬರೆದಿರಲಾರ.
ಯಾರೋ ಬರೆದು ಅದನ್ನು ಅರಿಸ್ಟಾಟಲನಿಗೆ ಆರೋಪಿಸಿರುವರು ಎನ್ನುವುದೇ ಬಹುಮಾನ್ಯವಾದ ವಿಚಾರ). ಅದರಲ್ಲಿ ಆತನು ತನ್ನ ಶಿಷ್ಯನಾದ ಅಲೆಗ್ಸಾಂಡರನಿಗೆ ‘ಭಾರತೀಯ ಅರಸರು ನೀಡುವ ಉಡುಗೊರೆಗಳ ಬಗ್ಗೆ ಎಚ್ಚರಿಕೆಯಿಂದಿರು. ವಿಷಕನ್ಯೆಯ ರಿಂದ ದೂರವಿರು’ ಎಂಬ ಎಚ್ಚರಿಕೆ ನೀಡಿರುವುದನ್ನು ನೋಡಬಹುದು. ವಾಗ್ಭಟನ ‘ಅಷ್ಟಾಂಗ ಸಂಗ್ರಹ’ವು (1.8.86-87) ‘ಓರ್ವ ಹೆಣ್ಣುಮಗಳು ಬಾಲ್ಯದಿಂದಲೇ ವಿಷವನ್ನು ಮೈಗೂಡಿಸಿಕೊಂಡು ಬೆಳೆದರೆ, ಆಕೆ ವಿಷಕನ್ಯೆ ಯಾಗಿ ಬೆಳೆಯುತ್ತಾಳೆ. ಆಕೆ ತನ್ನ ಪ್ರಿಯಕರನನ್ನು ಕೇವಲ ತನ್ನ ಸ್ಪರ್ಶದಿಂದ ಅಥವಾ ಉಸಿರಿನಿಂದ ಕೊಲ್ಲಬಲ್ಲಳು.
ಆಕೆ ಹೂವು ಮುಡಿದರೆ, ಅವು ವಿಷಪ್ರಭಾವಕ್ಕೆ ಸಿಲುಕಿ ಮುರುಟಿ ಹೋಗುತ್ತವೆ. ಆಕೆಯ ಹಾಸಿಗೆಯಲ್ಲಿ ತಿಗಣೆಗಳು ಬದುಕ ಲಾರವು, ತಲೆಯಲ್ಲಿ ಹೇನುಗಳು ಉಳಿಯಲಾರವು. ಆಕೆ ಸ್ನಾನ ಮಾಡಿದ ನೀರು ಯಾರ ಸಂಪರ್ಕಕ್ಕಾದರೂ ಬಂದರೆ,
ಅವರು ಸಾಯುವುದು ಖಚಿತ. ಇದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಆಕೆಯಿಂದ ದೂರರಬೇಕು’ಎಂದು ಹೇಳುತ್ತದೆ.
ಸುಶ್ರುತ ಸಂಹಿತೆಯ ಬಗ್ಗೆ ದಲ್ಹಣನು ಮಾಡಿರುವ ಟೀಕೆಯು (5.1.4-6) ‘ಆಕೆಯು ನಿನ್ನನ್ನು ಸ್ಪರ್ಶಿಸಿದರೂ, ಆಕೆಯ
ಬೆವರು ನಿನ್ನನ್ನು ತಾಕಿದರೂ ಸಾಕು ಅದು ನಿನ್ನನ್ನು ಕೊಲ್ಲುತ್ತದೆ.
ಆಕೆಯೊಡನೆ ಸಂಭೋಗ ನಡೆಸಿದರೆ, ಕಳಿತ ಹಣ್ಣು ಮರದ ತೊಟ್ಟಿನಿಂದ ಬೀಳುವಂತೆ ನಿನ್ನ ಶಿಶ್ನವೂ ಉದುರಿ ಹೋಗುತ್ತದೆ’
ಎಂದಿರುವುದು ಗಮನೀಯವಾದದ್ದು. ಚರಕ ಸಂಹಿತೆಯು ‘ಸಾತ್ಮ್ಯ’ದ ಬಗ್ಗೆ ಸುದೀರ್ಘವಾಗಿ ವಿವರಿಸುತ್ತದೆ. ಸಾತ್ಮ್ಯವೆಂದರೆ ಪ್ರಕೃತಿಗೆ, ದೇಶಕ್ಕೆ, ಋತುವಿಗೆ, ವ್ಯಾಧಿಗೆ, ಸ್ವಭಾವಕ್ಕೆ, ವಯಸ್ಸಿಗೆ ಸರಿಯಾಗಿ ದೇಹವನ್ನು ಅಣಿಗೊಳಿಸುವುದು. ಇದರಲ್ಲಿ ‘ಓಕಸಾತ್ಮ್ಯ’ವಿದೆ.
ಇದು ವಿಷಕನ್ಯೆಯ ತತ್ತ್ವವನ್ನು ವಿವರಿಸುತ್ತದೆ. ಯಾವುದಾದರೂ ಒಂದು ವಸ್ತುವನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ, ಕೊನೆಗೆ ದೇಹವು ಆ ವಿಷಯಕ್ಕೆ ಪೂರ್ಣವಾಗಿ ಒಗ್ಗಿಕೊಳ್ಳುತ್ತದೆ ಎನ್ನುವುದು ಈ ಪರಿಕಲ್ಪನೆಯ ಸಾರಾಂಶ. ಅವರಿಗೆ ಆ ವಿಷವು ಅಪಾಯವನ್ನು ಉಂಟುಮಾಡದು ಎನ್ನುವುದು ಇದರ ಸಾರಾಂಶ. ಸುಲ್ತಾನ್ ಮುಹಮ್ಮದ್ ಬೇಗ್ರ / ಮುಹಮ್ಮದ್ ಬೇಗ್ಡ / ಮುಹಮ್ಮದ್ ಷಾ-1 (1458-1511) ಗುಜರಾತ್ ಪ್ರದೇಶವನ್ನು ಆಳಿದ ಪ್ರಮುಖ ಸುಲ್ತಾನರಲ್ಲಿ ಒಬ್ಬ (ಬೇ = ಎರಡು + ಗಡ = ಅಭೇದ್ಯ ಕೋಟೆ = ಬೇಗಡ; ಗುಜರಾತಿನ ಪಾವಗಡ ಮತ್ತು ಜುನಾಗಡವನ್ನು ಗೆದ್ದ ಕಾರಣ, ಎರಡು
ಕೋಟೆಗಳನ್ನು ಗೆದ್ದ ವೀರ ಎಂಬ ಹೆಸರು), ಈ ಸುಲ್ತಾನನು ಓಕಸಾತ್ಯ್ಮವನ್ನು ಮೈಗೂಡಿಸಿಕೊಂಡಿದ್ದನೆಂದು ಪ್ರತೀತಿ
ಯಿದೆ.
ಈ ಬಗ್ಗೆ ಡ್ಯುರೇಟ್ ಬಾರ್ಬೋಸ (1480-1521) ಮತ್ತು ಲ್ಯೂಡೋವಿಕೋ ಡಿ ವರ್ತೆಮ (1470-1517) ಎಂಬ ಇಬ್ಬರು ದೇಶಿ ಪ್ರವಾಸಿಗಳು ದಾಖಲಿಸಿರುವರು. ಡ್ಯುರೇಟ್ ಬಾರ್ಬೋಸ ಪೋರ್ಚುಗೀಸ್ ಅಧಿಕಾರಿ ಹಾಗೂ ಲೇಖಕನಾಗಿದ್ದ. ಇವನು ‘ಬುಕ್ ಆಫ್ ಡ್ಯುರೇಟ್ ಬಾರ್ಬೋಸ’ ಎನ್ನುವ ಪ್ರವಾಸಿ ಕಥನವನ್ನು ಬರೆದ. ಅದರಲ್ಲಿ ಮುಹಮ್ಮದ್ ಬೇಗಡನ ಬಗ್ಗೆ ಬರೆಯುತ್ತಾ, ‘ಒಂದು ನೊಣವು ಆತನ ಮೈಮೇಲೆ ಕುಳಿತುಕೊಂಡರೆ ಕೂಡಲೆ ಸತ್ತು ಬೀಳುತ್ತಿತ್ತು’ ಎನ್ನುತ್ತಾನೆ. ಸುಲ್ತಾನನ ಅಂತಃಪುರದಲ್ಲಿ ಯಾವಾಗಲೂ 3000-4000 ರಾಣಿಯರಿರುತ್ತಿದ್ದರು.
ಸುಲ್ತಾನ ಯಾವ ರಾಣಿಯ ಜತೆ ಆ ರಾತ್ರಿಯನ್ನು ಕಳೆಯುತ್ತಿದ್ದನೋ, ಆಕೆ ಬೆಳಗಾಗುವಷ್ಟರಲ್ಲಿ ಸತ್ತಿರುತ್ತಿದ್ದಳು. ಹಾಗಾಗಿ
ಸುಲ್ತಾನನ ಅಂತಃಪುರ ಯಾವಾಗಲೂ ಸುಂದರಿಯರಿಂದ ತುಂಬಿ ತುಳುಕುತ್ತಿತ್ತು’ ಎನ್ನುತ್ತಾನೆ. ವರ್ತೆಮ ಇಟಾಲಿಯನ್
ಪ್ರವಾಸಿ ಮತ್ತು ಲೇಖಕ. ಇವನು ‘ಸುಲ್ತಾನನು ತನ್ನ ಶತ್ರುವಿನ ಮೇಲೆ ಉಗುಳಿದರೂ ಸಾಕು, ಅವನು ಒಂದು ಗಂಟೆಯೊಳಗೆ
ಸಾಯುತ್ತಿದ್ದ’ ಎಂದು ಬರೆಯುತ್ತಾನೆ. ಇದು ನಂಬಲು ಕಷ್ಟವೆನಿಸುವ ವಿಚಾರವಾಗಿದೆ. ಸುಲ್ತಾನನು ಧರಿಸಿದ ಬಟ್ಟೆಗಳು
ವಿಷಮಯವಾಗಿರುತ್ತಿದ್ದವು. ಹಾಗಾಗಿ ಅವನ್ನು ಯಾರೂ ಒಗೆಯುತ್ತಿರಲಿಲ್ಲ. ಅವನು ಒಂದು ಉಡುಪನ್ನು ಒಂದೇ ಸಲ
ಧರಿಸಿದ್ದರೂ, ಮರುದಿನ ಅದನ್ನು ಸುಟ್ಟು ಹಾಕುತ್ತಿದ್ದರು. ಆ ಬೂದಿಯೂ ಸಹ ವಿಷಮಯವಾಗಿರುತ್ತಿತ್ತಂತೆ!
ಮಾನವನ ಇತಿಹಾಸದಲ್ಲಿ ‘ವಿಷಪ್ರಯೋಗ ವಿಜ್ಞಾನ’ ಹಾಗೂ ‘ವಿಷನಿವಾರಣಾ ವಿಜ್ಞಾನ’ ಒಟ್ಟೊಟ್ಟಿಗೆ ಬೆಳೆದುಬಂದಿವೆ. ಹಾಗಾಗಿ ವೈದ್ಯಕೀಯ ಇತಿಹಾಸದ ಜತೆಜತೆಯಲ್ಲಿ ವೈಷವೈದ್ಯಕೀಯ ಜ್ಞಾನವೂ ಬೆಳೆದುಬಂದಿತು. ಪ್ರಾಚೀನ ಭಾರತದಲ್ಲಿ ‘ಅಗದತಂತ್ರ’ ಎಂದು ಹೆಸರುವಾಸಿಯಾಗಿದ್ದ ವಿಷವೈದ್ಯಕೀಯವು, ಆಧುನಿಕ ಜ್ಞಾನದಲ್ಲಿ ‘ಟಾಕ್ಸಿಕಾಲಜಿ’ ಎಂದು ಹೆಸರಾಗಿದೆ. ಪ್ರಾಚೀನ ಭಾರತದಲ್ಲಿ ಅಗದ ತಂತ್ರಕ್ಕೆ ಸಂಬಂಧಿಸಿ ಹಲವು ಗ್ರಂಥಗಳಿದ್ದವು.
ಪ್ರಯೋಗ ಸಮುಚ್ಚಯ, ವಿಷವೈದ್ಯ ಜ್ಯೋತ್ಸ್ನಿಕ, ಕ್ರಿಯಾ ಕೌಮುದಿ, ವಿಷವೈದ್ಯ ಸಾರ ಸಮುಚ್ಚಯ ಇತ್ಯಾದಿ. ಆಯುರ್ವೇದ ದಲ್ಲಿ ವಿಷಗಳನ್ನು ಅವುಗಳ ಗುಣಲಕ್ಷಣಗಳನ್ನಾಧರಿಸಿ ಗರವಿಷ (ಕೃತಕ/ರಾಸಾಯನಿಕ ವಿಷಗಳು) ದೂಷಿವಿಷ (ನಿಧಾನ ವಿಷಗಳು) ಜಂಗಮವಿಷ (ಪ್ರಾಣಿಜನ್ಯ ವಿಷಗಳು) ಸ್ಥಾವರ ವಿಷ (ಸಸ್ಯಜನ್ಯ ವಿಷಗಳು) ವಿರುದ್ಧವಿಷ (ಒಗ್ಗದ ಆಹಾರ ವಿಷಗಳು) ಹಾಗೂ ಭಿನ್ನವಿಷಗಳು (ವಿಷವು ದೇಹದ ವಿವಿಧ ಅಂಗಗಳಲ್ಲಿ ಸಂಗ್ರಹವಾಗಿ ನಾನಾ ಲಕ್ಷಣಗಳನ್ನು ತೋರುವಂತಹದ್ದು) ಎಂದು ವರ್ಗೀಕರಿಸುತ್ತಿದ್ದರು.
ಕನ್ನಡದಲ್ಲಿಯೂ ಮುಗಳೀಪುರದ ಅರಸ ಮಂಗರಾಜ (1360) ವಿಷವೈದ್ಯಕೀಯಕ್ಕೆ ಸಂಬಂಧಿಸಿದ ಹಾಗೆ ರಚಿಸಿದ ‘ಖಗೇಂದ್ರಮಣಿ ದರ್ಪಣ’ವು ಪ್ರಖ್ಯಾತವಾದದ್ದು. ಇದೊಂದು ಅದ್ಭುತ ಕೃತಿಯಾಗಿದ್ದು, ಪ್ರಾಚೀನ ಭಾರತದ ವಿಷ
ವೈದ್ಯಕೀಯದ ಜ್ಞಾನವೆಲ್ಲ ಇದರಲ್ಲಿ ಅಡಕವಾಗಿದೆ. ಪಾಶ್ಚಾತ್ಯ ಜಗತ್ತಿನಲ್ಲಿಯೂ ವಿಷವೈದ್ಯಕೀಯವು ಕುಖ್ಯಾತವಾಗಿದೆ. ಎಲ್ಲ ರಾಜ ಮಹಾರಾಜರು ತಮ್ಮ ಶತ್ರುಗಳು ಯಾವಾಗ, ಎಲ್ಲಿ, ಹೇಗೆ, ಯಾರಿಂದ ವಿಷಪ್ರಾಶನ ಮಾಡಿಸಿ ತಮ್ಮನ್ನು ಕೊಲ್ಲುತ್ತಾರೋ ಎನ್ನುವ ಭೀತಿಯಲ್ಲೇ ಬದುಕನ್ನು ನಡೆಸುತ್ತಿದ್ದರು.
ಕ್ರಿ.ಪೂ. 281ರಲ್ಲಿ ಪಾಂಟಸ್ ಎನ್ನುವ ಸಾಮ್ರಾಜ್ಯತ್ತು (ಇಂದಿನ ಟರ್ಕಿ). ಇದರ ಸಂಸ್ಥಾಪಕ ಮಿತ್ರಿಡೇಟಿಸ್-1 ಎಂಬುವವನು. ಮಿತ್ರಿಡೇಟಿಸ್ ಶಬ್ದವು ಪರ್ಷಿಯನ್ ಮೂಲದ ‘ಮಿತ್ರಿದಾತ್’ ಇಂದ ರೂಪುಗೊಂಡಿದೆ. ಇದಕ್ಕೆ ಮೂಲ ‘ಮಿತ್ರ’ ಎನ್ನುವ ಇಂಡೋ- ಇರಾನಿ ಮೂಲದ ಶಬ್ದ. ‘ಸೂರ್ಯ’ ಎಂದು ಈ ಶಬ್ದದ ಅರ್ಥ. ಇವನ ವಂಶದಲ್ಲಿ ಮಿತ್ರಿಡೇಟಿಸ್-6-ಯೂಪಟರ್ (ಕ್ರಿ.ಪೂ. 135-ಕ್ರಿ.ಪೂ. 63) ಎಂಬುವವನು ಹುಟ್ಟಿದ.
ಈತನು ಮಹಾನ್ ಶಕ್ತಿಶಾಲಿ, ಕ್ರೂರಿ ಹಾಗೂ ಚಾಣಾಕ್ಷನಾಗಿದ್ದ. ಮುಂದಿನ ದಿನಗಳಲ್ಲಿ ಈತನು ‘ಮಿತ್ರಿಡೇಟಿಸ್, ದಿ
ಗ್ರೇಟ್’ ಎಂಬ ಹೆಸರನ್ನು ಗಳಿಸಿದ. ಜತೆಯಲ್ಲಿ ‘ವಿಷದ ರಾಜ’ (ದಿ ಪಾಯ್ಸನ್ ಕಿಂಗ್) ಎಂದೂ ಹೆಸರಾದ. ಇದಕ್ಕೆ ಕಾರಣ
ವಿದೆ. ಈತನ ತಾಯಿಯೇ, ಈತನ ತಂದೆಗೆ ವಿಷಪ್ರಾಶನ ಮಾಡಿ ಕೊಂದಳಂತೆ. ಹಾಗಾಗಿ ಯಾರಾದರೂ ವಿಷಪ್ರಯೋಗ
ದಿಂದ ತನ್ನನ್ನು ಕೊಲ್ಲಬಹುದೆಂಬ ಭೀತಿ ಈತನನ್ನು ಕಾಡು ತ್ತಿತ್ತು. ತನ್ನ ತಂದೆಯನ್ನು ಕೊಲ್ಲಲು ಬಳಸಿದ ವಿಷವನ್ನೇ ಅತ್ಯಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬಂದ.
ನಂತರ ತನ್ನ ಮೇಲೆ ಯಾವುದೇ ವಿಷವನ್ನು ಪ್ರಯೋಗಿಸಿದರೂ, ಆ ವಿಷವನ್ನು ನಿರ್ವೀರ್ಯಗೊಳಿಸುವಂಥ ಶಕ್ತಿಶಾಲಿ ಪ್ರತಿವಿಷವನ್ನು ರೂಪಿಸಿದ. ಈ ಪ್ರತಿವಿಷವನ್ನು ನೂರಕ್ಕೆ ನೂರರಷ್ಟು ಪ್ರಮಾಣ ಬದ್ಧವಾಗಿಸಲು, ಅಸಂಖ್ಯ ಖೈದಿಗಳ ಮೇಲೆ ಪ್ರಯೋಗಿಸಿ ಅದರ ಪರಿಣಾಮವನ್ನು ಖಚಿತಪಡಿಸಿಕೊಂಡ. ಈ ಪ್ರತಿವಿಷದಲ್ಲಿ 45 ವಿವಿಧ ವಸ್ತುಗಳಿದ್ದವು. ಅವುಗಳಲ್ಲಿ ಅಫೀಮು, ಮಿರ್ರಾ, ಅರಸಿನ, ಶುಂಠಿ, ಚಕ್ಕೆ, ಹರಳು ಮುಖ್ಯವಾಗಿದ್ದವು.
ಈ ಪ್ರತಿವಿಷವು ಮಿತ್ರಿಡೇಟ್/ಮಿತ್ರಿಡೇಟಿಕಮ್/ಮಿತ್ರಿಡೇಟಿಯಂ ಎಂಬ ನಾನಾ ಹೆಸರುಗಳಲ್ಲಿ ಪ್ರಸಿದ್ಧಿಯಾಯಿತು.
ರೋಮನ್ನರು ಯುದ್ಧದಲ್ಲಿ ಈ ಮಿತ್ರಿಡೇಟಿಸ್‌ನನ್ನು ಸೋಲಿಸಿದರು. ರೋಮನ್ನರಿಗೆ, ಮಿತ್ರಿಡೇಟಿಸ್ ಸ್ವಹಸ್ತಾಕ್ಷರದಲ್ಲಿ ಬರೆದಿದ್ದ ಮಿತ್ರಿಡೇಟ್ ಪ್ರತಿವಿಷವನ್ನು ತಯಾರಿಸುವ ರಹಸ್ಯಪ್ರತಿಯು ದೊರೆಯಿತಂತೆ. ಆಗ ರೋಮನ್ನರು ತಮ್ಮದೇ ಆದ ಮಿತ್ರಿಡೇಟ್ ಪ್ರತಿವಿಷವನ್ನು ರೂಪಿಸಲಾರಂಭಿಸಿದರು. ರೋಮನ್ ವೈದ್ಯ ಔಲಸ್ ಕಾರ್ನೀಲಿಯಸ್ ಸೆಲ್ಸಸ್ (ಕ್ರಿ.ಪೂ. 25-ಕ್ರಿ.ಶ. 50) ‘ಡೀ ಮೆಡಿಸಿನ’ ಎಂಬ ವೈದ್ಯಕೀಯ ಗ್ರಂಥವನ್ನು ಬರೆದ.
ಇದರಲ್ಲಿ ಮಿತ್ರಿಡೇಟ್ ತಯಾರಿಕೆಯನ್ನು ಪರಿಷ್ಕರಿಸಿ, ಅದಕ್ಕೆ ‘ಆಂಟಿಡೋಟಮ್ ಮಿತ್ರಿ ಡೇಟಿಕಮ್’ ಎಂದು ಹೆಸರನ್ನು ನೀಡಿದ. ಇದರ ತಯಾರಿಕೆಯಲ್ಲಿ ಬಳಸಿದ ಎಲ್ಲ 64 ಘಟಕಗಳ ಹೆಸರು ಮತ್ತು ಅವುಗಳ ಪ್ರಮಾಣವನ್ನು ಬರೆದ. ರೋಮನ್ ಅರಸ ‘ನೀರೊ’ ಎಂದು ಹೆಸರುವಾಸಿಯಾಗಿರುವ ನೀರೋ ಕ್ಲಾಡಿಯಸ್ ಸೀಸರ್ ಅಗಸ್ಟಸ್ ಜರ್ಮೇನಿಕಸ್ (ಕ್ರಿ.ಶ. 37-ಕ್ರಿ.ಶ. 68) ರಾಜನ ಖಾಸಾ ವೈದ್ಯ ಆಂಡ್ರೋಮ್ಯಾಕಸ್, ದಿ ಎಲ್ಡರ್ ಈ ಮಿತ್ರಿಡೇಟನ್ನು ಮತ್ತೆ ಪರಿಷ್ಕರಿಸಿದ.
ತಾನು ಪರಿಷ್ಕರಿಸಿದ ಮಿತ್ರಿಡೇಟಿಗೆ ‘ಥೇರಿಯಾಕ ಆಂಡ್ರೋಮ್ಯಾಕೈ’ ಎಂಬ ಹೊಸ ಹೆಸರನ್ನು ನೀಡಿದ. ಇದರಲ್ಲಿ ವೈಪರ್ ಹಾವಿನ ಮಾಂಸ ಮತ್ತು ಅಫೀಮನ್ನು ಬೆರೆಸಿದ. ಇದು ‘ಥೇರಿಯಾಕ್’ ಅಥವ ‘ಥೇರಿ ಯಾಕ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾ ಯಿತು. ರೋಮನ್ ವೈದ್ಯ ಗ್ಯಾಲನ್ (ಕ್ರಿ.ಶ. 129-ಕ್ರಿ.ಶ. 216) ಥೇರಿಯಾಕವನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ಸಮಗ್ರವಾಗಿ ವಿವರಿಸಲು ಒಂದು ಇಡೀ ಪುಸ್ತಕವನ್ನೇ ಮೀಸಲಿಟ್ಟ. ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್ (ಕ್ರಿ.ಶ. 120-ಕ್ರಿ.ಶ. 180) ಗ್ಯಾಲನ್ ತಯಾರಿಸಿದ ಥೇರಿಯಾಕವನ್ನು ಪ್ರತಿದಿನವೂ ಸೇವಿಸುತ್ತಿದ್ದ.