ವಿಶ್ವೇಶ್ವರ ಭಟ್,
ಅತ್ತ ಅಮೆರಿಕದಲ್ಲಿ ಕರೋನಾವೈರಸ್ಸಿನಿಂದ ಲಕ್ಷಕ್ಕೂ ಅಧಿಕ ಜನ ಸತ್ತಿದ್ದರೆ, ಇತ್ತ ವಿಯೆಟ್ನಾಮಿನಲ್ಲಿ ಒಬ್ಬೇ ಒಬ್ಬ ಸೋಂಕಿತನನ್ನು ಬದುಕಿಸಲು ಇಡೀ ದೇಶವೇ ಪಣತೊಟ್ಟಿದೆ. ಕಾರಣ ಇಲ್ಲಿಯವರೆಗೆ ವಿಯೆಟ್ನಾಮಿನಲ್ಲಿ ಕೋವಿಡ್ ಗೆ ಒಬ್ಬರೂ ಸತ್ತಿಲ್ಲ.
ಇಲ್ಲಿಯವರೆಗೆ 328 ಮಂದಿಗೆ ಸೋಂಕು ತಗಳಿರುವುದು ದೃಢಪಟ್ಟಿದೆ. ಆ ಪೈಕಿ 279 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಕೇವಲ ಒಬ್ಬನ ಸ್ಥಿತಿ ಮಾತ್ರ ಗಂಭೀರವಾಗಿದೆ. ಉಳಿದವರು ಕ್ವಾರಂಟೈನ್ ಆಗಿದ್ದಾರೆ. ವಿಯೆಟ್ನಾಮ್ ಏರ್ ಲೈನ್ಸ್ ನ ಬ್ರಿಟಿಷ್ ಮೂಲದ ಪೈಲಟ್ ಮಾತ್ರ ಸಾವು-ಬದುಕಿನ ಹೋರಾಟ ಮಾಡುತ್ತಿದ್ದಾನೆ. ಹೇಗಾದರೂ ಮಾಡಿ ಅವನನ್ನು ಬದುಕಿಸಲು ವೈದ್ಯರು ಶ್ರಮಿಸುತ್ತಿದ್ದಾರೆ.
ತೊಂಬತ್ತೇಳು ದಶಲಕ್ಷ ಜನಸಂಖ್ಯೆಯಿರುವ ವಿಯೆಟ್ನಾಮಿನಲ್ಲಿ ಕೋವಿಡ್ ಗೆ ಒಬ್ಬರೂ ಬಲಿಯಾಗದಿರುವುದು ಸಾಮಾನ್ಯ ಸಾಧನೆಯಲ್ಲ. ವಿಯೆಟ್ನಾಮ್ ಚೀನಾದ ಮಗ್ಗುಲು ದೇಶ. ಅದು ಚೀನಾದೊಂದಿಗೆ 1450 ಕಿಮಿ ದೂರದ ಗಡಿಯನ್ನು ಹಂಚಿಕೊಂಡಿದೆ. ಕರೋನಾವೈರಸ್ ತವರು ಮನೆಯಾದ ವುಹಾನ್ ನಿಂದ ವಿಯೆಟ್ನಾಮ್ ನ ಹೋಚಿಮಿನ್ ಸಿಟಿಗೆ ನೇರ ವಿಮಾನವಿದೆ. ಕರೋನಾವೈರಸ್ ಸೋಂಕಿನ ತೀವ್ರತೆಯನ್ನು ಅರಿತ ವಿಯೆಟ್ನಾಮ್ ಜನೆವರಿ 22ಕ್ಕೆ ಲಾಕ್ ಡೌನ್ ಘೋಷಿಸಿತು.
ವಿಶ್ವ ಆರೋಗ್ಯ ಸಂಸ್ಥೆ (WHO) ಜನೆವರಿ 30ರಂದು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸುವಂತೆ ಎಲ್ಲಾ ದೇಶಗಳಿಗೆ ಸೂಚಿಸಿದರೆ, ವಿಯೆಟ್ನಾಮ್ WHO ಅಧಿಕೃತ ಆದೇಶಕ್ಕೆ ಕಾಯದೇ, ಕ್ರಮಕ್ಕೆ ಮುಂದಾಯಿತು.
ಇದರ ಪರಿಣಾಮ, ವಿಯೆಟ್ನಾಮ್ ತನ್ನ ಗಡಿಯನ್ನು ಬಂದ್ ಮಾಡಿತು. ಸಾಮೂಹಿಕ ವೈದ್ಯಕೀಯ ಪರೀಕ್ಷೆ ಮತ್ತು ಕ್ವಾರಂಟೈನ್ ನ್ನು ಕಡ್ಡಾಯಗೊಳಿಸಿತು. ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತು. ಶಾಲೆ – ಕಾಲೇಜು – ವಿಶ್ವವಿದ್ಯಾಲಯಗಳನ್ನು ಮುಚ್ಚಿತು.
ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾರ್ಸ್, ಹಕ್ಕಿ ಜ್ವರ, ಡೆಂಘೆ, ಕಾಲು-ಬಾಯಿ ರೋಗ, ದಡಾರ, ಹಂದಿ ಜ್ವರ ಮುಂತಾದ ಸೋಂಕುರೋಗಗಳಿಂದ ತತ್ತರಿಸಿ ವಿಯೆಟ್ನಾಮ್ ಪಾಠ ಕಲಿತಿತ್ತು.
ಈ ಸಲ ಅದು ಯಾವ ರೀತಿಯಲ್ಲೂ ಮತ್ತೊಮ್ಮೆ ಮೂರ್ಖತನ ಪ್ರದರ್ಶಿಸಲು ಸಿದ್ಧವಿರಲಿಲ್ಲ. ಫೆಬ್ರವರಿ ಎರಡನೇ ವಾರದ ಹೊತ್ತಿಗೆ ಸೋಷಿಯಲ್ ಡಿಸ್ಟನ್ಸಿಂಗ್ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿತು.
ಈ ಮಧ್ಯೆ ಪ್ರತಿಯೊಬ್ಬರೂ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಿತು. ಭಾರತದಲ್ಲಿ ಮಾರ್ಚ್ ಇಪ್ಪತ್ತೈದರಂದು ಲಾಕ್ ಡೌನ್ ಘೋಷಿಸಿದರೆ, ವಿಯೆಟ್ನಾಮ್ ಆ ಸಮಯದಲ್ಲಿ ಆಗಲೇ ಕೋವಿಡ್ ವಿರುದ್ಧ ಅರ್ಧ ಯುದ್ಧವನ್ನು ಗೆದ್ದಿತ್ತು.
ಏಪ್ರಿಲ್ ಮೂರನೇ ವಾರದ ಹೊತ್ತಿಗೆ ಲಾಕ್ ಡೌನ್ ತೆರವುಗೊಳಿಸಿ, ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಿತು. ಈ ಅವಧಿಯಲ್ಲಿ ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಯಿತು. ಈಗ ಆ ದೇಶದಲ್ಲಿ ಕರೋನಾವೈರಸ್ ಜನರ ಮನಸ್ಸಿನಿಂದ ನಿಧಾನವಾಗಿ ದೂರವಾಗುತ್ತಿದೆ. ಜನಜೀವನ ಎಂದಿನ ಸಹಜ ಸ್ಥಿತಿಗೆ ಮರಳುತ್ತಿದೆ.
ಸಣ್ಣ ದೇಶವಿರಬಹುದು, ಆದರೆ ಕರೋನಾವೈರಸ್ಸಿಗೆ ಒಬ್ಬರನ್ನೂ ಬಲಿಕೊಡದೇ ವಿಯೆಟ್ನಾಮ್ ಸಾಧಿಸಿದ ಗೆಲುವು ಮತ್ತು ಅದರ ಸಾಹಸಗಾಥೆ ಮಾತ್ರ ಅಸಾಮಾನ್ಯವಾದುದು !