Saturday, 23rd November 2024

ಸಿಕ್ಸರ್‌ಗಳ ಶತಕದ ಸಾಧನೆಗೆ ‘ಕಿಂಗ್ ಕೊಹ್ಲಿ’ಗೆ ಮೂರು ಸಿಕ್ಸರ್ ಬೇಕು…!

ದುಬೈ: ವಿರಾಟ್ ಕೊಹ್ಲಿಗೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಮಾದರಿಯಲ್ಲಿ ಸಿಕ್ಸರ್‌ಗಳ ಶತಕದ ಸಾಧನೆಗೆ ಕೇವಲ ಮೂರು ಸಿಕ್ಸರ್ ಬಾರಿಸುವ ಅಗತ್ಯವಿದೆ.

ಈ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಗಳಿಸಿದ ಭಾರತದ ಎರಡನೇ ಹಾಗೂ ಒಟ್ಟಾರೆಯಾಗಿ ವಿಶ್ವದ 10ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಟೀಮ್ ಇಂಡಿಯಾ ಮತ್ತೆ ಪಾಕಿಸ್ತಾನ ತಂಡದ ಸವಾಲನ್ನು ಎದುರಿಸಲಿದೆ.

ವಿರಾಟ್ ಕೊಹ್ಲಿ ಇದುವರೆಗೆ 101 ಪಂದ್ಯಗಳಲ್ಲಿ (93 ಇನ್ನಿಂಗ್ಸ್) 97 ಸಿಕ್ಸರ್ ಸಿಡಿಸಿದ್ದಾರೆ. ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ ಗಳಿಸಿರುವ ಬ್ಯಾಟರ್‌ ಪಟ್ಟಿ ಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಮುಂಚೂಣಿಯಲ್ಲಿದ್ದಾರೆ. ಅವರು ಒಟ್ಟು 172 ಸಿಕ್ಸರ್ (117 ಇನ್ನಿಂಗ್ಸ್‌) ಬಾರಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದು, 165 ಸಿಕ್ಸ್ (126 ಇನ್ನಿಂಗ್ಸ್) ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್ 124 ಸಿಕ್ಸರ್ (75 ಇನ್ನಿಂಗ್ಸ್) ಸಿಡಿಸಿದ್ದಾರೆ.