Friday, 20th September 2024

ಮಹಾಜನ್, ಅನಂತಕುಮಾರ ನೆನಪು ಬರಿಸಿದ ಆ ಡೈರಿ !

– ವಿಶ್ವೇಶ್ವರ ಭಟ್

ಲಾಕ್ ಡೌನ್ ಕಾಲದಲ್ಲಿ ಕಡತ ಯಜ್ಞ ಮಾಡುವಾಗ ನಾನು ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಬರೆದಿಟ್ಟ ಹಳೆಯ ಡೈರಿಗಳು ಸಿಕ್ಕಿದವು. ಡೈ ರಿಗಳು ನಮ್ಮದೇ ಆಗರಲಿ, ಬೇರೆಯವರದ್ದೇ ಆಗಿರಲಿ, ಓದಲು ಬಹಳ ಸ್ವಾರಸ್ಯವಾಗಿರುತ್ತವೆ. ಅದರಲ್ಲೂ ನಮ್ಮ ಡೈರಿಗಳನ್ನು ಓದುವುದು ಒಂದು ಅನೂಹ್ಯ ಅನುಭವ. ನನಗಂತೂ ಇಪ್ಪತ್ತೆರಡು ವರ್ಷಗಳ ಹಿಂದೆ ಹಿಂಬರ್ಕಿಯಲ್ಲಿ ಹೋದಂತಾಯಿತು. ಇದು ನಿಜಕ್ಕೂ ಒಂದು ರೋಮಾಂಚಕ ಫ್ಲ್ಯಾಶ್ ಬ್ಯಾಕ್. ಅವು ನನ್ನದೇ ಬದುಕಿನ ಹಾಳೆಗಳಾ ಎಂದು ಪುಟ್ಟ ಅಚ್ಚರಿ ಮೂಡಿಸುವಂತಿತ್ತು.

1999 ರ ಜೂನ್ ನಲ್ಲಿ ಅಂದಿನ ಕೇಂದ್ರ ಸಚಿವ ಪ್ರಮೋದ ಮಹಾಜನ್ ಅವರು ಬೆಂಗಳೂರಿಗೆ ಬಂದಿದ್ದರು. ಆಗ ನಾನು ಕೇಂದ್ರ ಸಚಿವ ಅನಂತಕುಮಾರ ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದೆ. ಅವರಿಬ್ಬರ ಜತೆ ಬೆಂಗಳೂರು ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣ ಮಾಡುವ ಅವಕಾಶ ಸಿಕ್ಕಿತ್ತು. ಅನಂತಕುಮಾರ ಮತ್ತು ಮಹಾಜನ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ನಾನು ಡ್ರೈವರ್ ಪಕ್ಕದಲ್ಲಿ ಮುಂದಿದ್ದೆ. ದುರ್ದೈವವೆಂದರೆ, ಈಗ ಈ ಇಬ್ಬರೂ ನಾಯಕರು ನಮ್ಮ ಮಧ್ಯದಲ್ಲಿ ಇಲ್ಲ. ಇವರಿಬ್ಬರೂ ಮಾತಾಡಲಾರಂಭಿಸಿದರೆ, ಅದನ್ನು ಕೇಳಿಸಿಕೊಂಡವನೇ ಪುಣ್ಯಾತ್ಮ.

ಇಬ್ಬರೂ ಮಹಾ ಹರಟೆಕೋರರು. ಹಾಗಂತ ತಮ್ಮದೇ ಹಳವಂಡ ಹೇಳಿಕೊಂಡು, ಪರಾಕು ಕೊಚ್ಚಿಕೊಳ್ಳುವವರಲ್ಲ. ಇಬ್ಬರೂ ಮಾತಾಡಲಾರಂಭಿಸಿದರೆ, ಅದು ಮಹಾನದಿ. ರಾಜಕೀಯ, ಸಾಹಿತ್ಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ವಿಷಯಗಳಾಚೆ, ವ್ಯಕ್ತಿಗಳ ಜೀವನದ ರೋಚಕ ಪ್ರಸಂಗ , ಕತೆ, ಉಪಕತೆ, ದೃಷ್ಟಾಂತ, ಲೋಕಾಂತ, ಹಾಸ್ಯ, ವಿಡಂಬನೆ, ಚೋದ್ಯ, ಮಧ್ಯೆ-ಮಧ್ಯೆ ಗಂಭೀರ ವಿಷಯ, ತತ್ವಶಾಸ್ತ್ರ, ಹೀಗೆ ನೂರಾರು ವಿಷಯಗಳು ತೇಲಿ ಹೋಗುತ್ತಿದ್ದವು. ಇಬ್ಬರದೂ ಅಸಾಧಾರಣ ನೆನಪಿನ ಶಕ್ತಿ. ಯಾರು ಯಾರನ್ನು ಮೀರಿಸುತ್ತಿದ್ದಾರೆ ಎಂದು ಹೇಳುವುದು ಕಷ್ಟ, ಇಬ್ಬರ ನಡುವೆಯೂ ಅಂಥ ಪೈಪೋಟಿ. ಹಿಂದಿ ಭಾಷೆಯಲ್ಲಿ ಅನಂತಕುಮಾರ ಅವರಿಗಿಂತ ಮಹಾಜನ್ ಅವರಿಗೆ ಹಿಡಿತ ಮತ್ತು ಲಾಲಿತ್ಯವಿದ್ದುದರಿಂದ ಮತ್ತು ಮುಂಬೈ ಕಾರ್ಯಕ್ಷೇತ್ರವಾದುದರಿಂದ ಸಹಜವಾದ ಮೇಲುಗೈ ಸಾಧಿಸಿದ್ದರು. ಆದರೆ ಇಬ್ಬರೂ ಸಮ-ಸಮ ಹೆಜ್ಜೆ ಹಾಕಬಲ್ಲ ಸಾಮರ್ಥ್ಯ ಇದ್ದವರು.

ಹಾಗಂತ ಅನಂತಕುಮಾರರು ಮಹಾಜನ್ ಮುಂದೆ ತಮ್ಮನ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳುತ್ತಿದ್ದರು. ಮಹಾಜನ್ ಮುಂದೆ ತಮ್ಮ ಸ್ಥಾನ ಯಾವುದು ಎಂಬುದು ಅವರಿಗೆ ಗೊತ್ತಿತ್ತು. ಆ ದಿನಗಳಲ್ಲಿ ಮಹಾಜನ್ ಅವರು ಪ್ರಧಾನಿ ವಾಜಪೇಯಿ ಮತ್ತು ಉಪಪ್ರಧಾನಿ ಆಡ್ವಾಣಿ ಇಬ್ಬರಿಗೂ ಆಪ್ತರಾಗಿದ್ದರು. ಆ ಇಬ್ಬರು ಮೇರು ನಾಯಕರಿಗೂ ಮಹಾಜನ್ ಅವರ ತಾಕತ್ತು, ಸಾಮರ್ಥ್ಯ ಗೊತ್ತಿತ್ತು. ಅಲ್ಲದೇ ವಾಜಪೇಯಿ ಮತ್ತು ಆಡ್ವಾಣಿ ಅವರನ್ನು ಒಪ್ಪಿಸುವ, ಅವರ ಜತೆ ತಮ್ಮ ವಾದ ಮಂಡಿಸುವ ಸೊಗಸುಗಾರಿಕೆ ಮಹಾಜನ್ ಅವರಲ್ಲಿತ್ತು. ಮಹಾಜನ್ ಮಾತಾಡಲಾರಂಭಿಸಿದರೆ ಇಬ್ಬರೂ ಸಮಾಧಾನದಿಂದ ಕೇಳಿಸಿಕೊಳ್ಳುತ್ತಿದ್ದರು. ವಾಜಪೇಯಿ ಅವರು ಹದಿಮೂರು ದಿನ ಅಧಿಕಾರದಲ್ಲಿದ್ದಾಗ, ವಿಶ್ವಾಸಮತ ಸಾಬೀತು ಮಾಡುವ ಹಿಂದಿನ ದಿನ, ಮಹಾಜನ್ ಅವರನ್ನು ಕರೆಯಿಸಿದ್ದರಂತೆ. ವಾಜಪೇಯಿ ಜತೆಗೆ ಇದ್ದ ಮತ್ತೊಬ್ಬರೆಂದರೆ ಆಡ್ವಾಣಿ. ವಾಜಪೇಯಿ ಮತ್ತು ಆಡ್ವಾಣಿ ಮಾತಾಡುವುದನ್ನು ಮಹಾಜನ್ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಅವರಿಬ್ಬರೂ ಒಂದು ನಿರ್ಧಾರಕ್ಕೆ ಬಂದಿದ್ದರು. ಏನೇ ಆದರೂ ಬಹುಮತ ಸಾಬೀತುಪಡಿಸುವುದು ಕಷ್ಟ. ನಾಳೆ ರಾಜೀನಾಮೆ ಕೊಡುವುದೊಂದೇ ಉಳಿದಿರುವ ದಾರಿ.

ಆ ಸಂದರ್ಭದಲ್ಲಿ, ಆ ಜ್ಯೇಷ್ಠ ನಾಯಕರು ಮೌನಕ್ಕೆ ಶರಣಾದಾಗ, ಮಹಾಜನ್ ಹೇಳಿದರಂತೆ – ‘ನೀವಿಬ್ಬರೂ ಅನುಮತಿ ಕೊಟ್ಟರೆ, ನಾನು ಬಹುಮತ ಸಾಬೀತುಪಡಿಸುತ್ತೇನೆ.’ ವಾಜಪೇಯಿ ಮತ್ತು ಆಡ್ವಾಣಿ ಅವರಿಗೆ ಮಹಾಜನ್ ಏನು ಹೇಳುತ್ತಿದ್ದಾರೆ, ಅವರು ಯಾವ ರೀತಿ ಬಹುಮತ ಸಾಬೀತುಪಡಿಸುತ್ತಾರೆ ಎಂಬುದು ಗೊತ್ತಿತ್ತು. ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಒಂದು ವೇಳೆ ಮಹಾಜನ್ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದರೆ, ಕತೆಯೇ ಬೇರೆ ಆಗಿರುತ್ತಿತ್ತು. ‘ನನಗೆ ಅವರು (ವಾಜಪೇಯಿ-ಆಡ್ವಾಣಿ ಅನುಮತಿ ನೀಡಲಿಲ್ಲ. ಅದರರ್ಥ ಅವರಿಗೆ ನನ್ನ ಸಾಮರ್ಥ್ಯದ ಬಗ್ಗೆ ಸ್ವಲ್ಪವೂ ಅನುಮಾನ ಇರಲಿಲ್ಲ. ಆದರೆ ನಾನು ಬಹುಮತ manufacture ಮಾಡುವುದು ಅವರಿಗೆ ಬೇಕಾಗಿರಲಿಲ್ಲ. ಆದರೆ ನಾನಂತೂ ಬಹುಮತ manufacture ಮಾಡಲು ಎಲ್ಲಾ ರೀತಿಯಿಂದಲೂ ಸಿದ್ಧನಾಗಿದ್ದೆ. ಒಂದು ವೇಳೆ ಅವರಿಬ್ಬರೂ ನನಗೆ ಅನುಮತಿ ನೀಡಿದ್ದರೆ, ವಾಜಪೇಯಿ ಸರಕಾರವನ್ನು ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲ್ಲಿಸುತ್ತಿದ್ದೆ. ನನಗೆ ಆ ಬಗ್ಗೆ ವಿಷಾದವಿದೆ. ನನ್ನ ಸಾಮರ್ಥ್ಯವೇನು ಎಂದು ಇಡೀ ದೇಶಕ್ಕೆ ತೋರಿಸುವ ಅವಕಾಶ ತಪ್ಪಿಹೋಯಿತಲ್ಲ ಎಂದು ಆಗಾಗ ಬೇಸರವಾಗುತ್ತದೆ’ ಎಂದು ಮಹಾಜನ್ ಹೇಳಿದ್ದರು.

ಹತ್ತಾರು ಸಂದರ್ಭಗಳಲ್ಲಿ ಈ ಇಬ್ಬರ ಹರಟೆ – ಮಾತುಕತೆಯನ್ನು ಕೇಳುವ ಅವಕಾಶ ನನಗೆ ಸಿಕ್ಕಿತ್ತು. ಇವರಿಬ್ಬರೂ ಮಾತುಕತೆಗೆ ಕುಳಿತರೆ ಬೇಗ ಏಳುತ್ತಿರಲಿಲ್ಲ. ಅದು ಅವರಿಗೆ ಸಾಧ್ಯವೂ ಇರಲಿಲ್ಲ. ಅವರೊಂದು ಪ್ರಸಂಗ ಹೇಳಿದರೆ, ಇವರೊಂದು ಪ್ರಸಂಗ ಹೇಳುತ್ತಿದ್ದರು. ಇಬ್ಬರ ನಡುವೆ ಸದಾ ಹಿತವಾದ ಜುಗಲಬಂದಿ ಏರ್ಪಡುತ್ತಿತ್ತು. ಎಲ್ಲಿಂದಲೋ ಆರಂಭವಾಗಿ ಇನ್ನೆಲ್ಲಿಗೋ ಹೋಗುತ್ತಿತ್ತು. ಕೊನೆಯಲ್ಲಿ ಇಬ್ಬರೂ ಗೆಲ್ಲುತ್ತಿದ್ದರು. ಇಬ್ಬರ ನಡುವೆ ಹೇಳಿಕೊಳ್ಳಲು, ಹಂಚಿಕೊಳ್ಳಲು ಸಮಾನ ಆಸಕ್ತ ವಿಷಯಗಳಿದ್ದವು. ಇಬ್ಬರ ಟೆಂಪರಮೆಂಟ್ ಹೆಚ್ಚು-ಕಮ್ಮಿ ಒಂದೇ ಆಗಿತ್ತು. ಅದರಲ್ಲೂ ಮಹಾಜನ್ ಮಾತಾಡಲಾರಂಭಿಸಿದರೆ, ಅನಂತಕುಮಾರ ಧ್ಯಾನಾಸಕ್ತರಾಗಿ ಕೇಳುತ್ತಿದ್ದರು. ಅನಂತಕುಮಾರ ಮಾತಾಡಲಾರಂಭಿಸಿದಾಗಲೂ ಮಹಾಜನ್ ಅವರಿಗೆ ಅದೇ ಆಸಕ್ತಿ. ಇವರಿಬ್ಬರೂ ಮಾತಾಡುವುದನ್ನು ಮೂರನೆಯವರಾಗಿ ಕೇಳುವವರು ಪುಣ್ಯಾತ್ಮರು ಎಂದು ನಾನು ಹೇಳಿದ್ದು ಅದಕ್ಕೆ.

ಅಂದು ಬೆಂಗಳೂರಿಗೆ ಬಂದ ಮಹಾಜನ್ ಎರಡು ದಿನ ಇಲ್ಲಿದ್ದರು. ವೆಸ್ಟ್ ಎಂಡ್ ಹೋಟೆಲಿನಲ್ಲಿ ವಾಸವಾಗಿದ್ದರು. ಆ ಎರಡೂ ದಿನ ಅನಂತಕುಮಾರ ಅವರ ಜತೆಗಿದ್ದರು. ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನಾನು ಇವರಿಬ್ಬರ ಜತೆ ಸಾಥಿಯಾಗಿದ್ದೆ. ಇವರ ಮಾತುಗಳನ್ನು ಕೇಳಿದರೆ, ಅನೇಕ finer points ದಕ್ಕದೇ ಹೋಗಬಹುದು ಎಂದು ಆಯಾ ದಿನ ಮನೆಗೆ ಬಂದವನೇ ಎಲ್ಲವನ್ನೂ ನನ್ನ ಡೈರಿಯಲ್ಲಿ ದಾಖಲಿಸಿದ್ದೆ. ಮೊನ್ನೆ ಈ ಡೈರಿ ಸಿಕ್ಕಾಗ ಮಹಾಜನ್ ಮತ್ತು ಅನಂತಕುಮಾರ ಅವರ ನೆನಪು ಒತ್ತರಿಸಿ ಬಂತು. ಆ ಎರಡು ದಿನ ಅವರಿಬ್ಬರ ನಡುವೀಣೆ ಅನೇಕ ಹರಟೆ-ಚರ್ಚೆಗಳ ಪೈಕಿ, ಒಂದು ಪ್ರಸಂಗವನ್ನಷ್ಟನ್ನೇ ಹೇಳುತ್ತೇನೆ.

ಭಾರತದಲ್ಲಿ ಚೆನ್ನಾಗಿ ಓದಿಕೊಂಡ, Well Qualified ರಾಜಕಾರಣಿ ಯಾರು ಎಂಬ ಬಗ್ಗೆ ಅಂದು ಅವರಿಬ್ಬರ ಮಾತುಕತೆ ನಡೆದಿತ್ತು. ಅನಂತಕುಮಾರ ಸುಮಾರು ಅಂದಿನ ಹತ್ತು ರಾಜಕಾರಣಿಗಳ ಹೆಸರುಗಳನ್ನು ಹೇಳಿದರು. ಅದಕ್ಕೆ ಪೂರಕವಾಗಿ ಮಹಾಜನ್ ಅವರು ಸ್ವಾತಂತ್ರ್ಯ ಬಂದಾಗಿನಿಂದ ಲೋಕ ಸಭೆಯನ್ನು ಅಲಂಕರಿಸಿದ, ಹಲವಾರು ಡಿಗ್ರಿ, ವಿದೇಶಿ ಡಿಗ್ರಿಗಳನ್ನು ಪಡೆದ ಸುಮಾರು ಮೂವತ್ತಕ್ಕೂ ಹೆಚ್ಚು ರಾಜಕಾರಣಿಗಳ ಹೆಸರುಗಳನ್ನು ಹೇಳಿದರು. ಆ ಎಲ್ಲಾ ರಾಜಕಾರಣಿಗಳು ಓದಿದ ಕಾಲೇಜು, ಪಡೆದ ಡಿಗ್ರಿ, ವಿಷಯ ಮುಂತಾದ ಅನೇಕ ವಿವರಗಳನ್ನು ಮಹಾಜನ್ ಪಟಪಟನೆ ಒಪ್ಪಿಸಿದರು. ನನಗೆ ಅವರ ಒಂದು ಗುಣ ಇಷ್ಟವಾಯಿತು. ಆಗ ಅವರು ಮಾಹಿತಿ ತಂತ್ರಜ್ಞಾನ ಮತ್ತು ಸಂಸದೀಯ ವ್ಯವಹಾರಗಳ ಖಾತೆಗಳ ಸಚಿವರಾಗಿದ್ದರು. ಲೋಕಸಭೆಯ ಎಲ್ಲಾ 542 ಸದಸ್ಯರ ಹೆಸರುಗಳನ್ನು ಅವರ ಕ್ಷೇತ್ರ ಸಮೇತ ಹೇಳಿದ್ದರು. ಲೋಕಸಭಾ ಸ್ಪೀಕರ್ ಸದನದಲ್ಲಿ ಕುಳಿತಾಗ, ಆ ಎಲ್ಲಾ ಸದಸ್ಯರ ಹೆಸರು ಮತ್ತು ಕ್ಷೇತ್ರಗಳ ಮಾಹಿತಿಯನ್ನು ಒಪ್ಪಿಸಲಿಕ್ಕಿಲ್ಲ. ಆದರೆ ಮಹಾಜನ್ ಅವರಿಗೆ ಗೊತ್ತಿತ್ತು. ಆ ಎಲ್ಲಾ ಸದಸ್ಯರು ಎದುರಿಗೆ ಬಂದರೆ ಅವರ ಹೆಸರು ಮತ್ತು ಕ್ಷೇತ್ರದ ಹೆಸರು ಹೇಳಿ ಮಾತಾಡಿಸುತ್ತಿದ್ದರು. ಬೆಂಗಳೂರಿನ ಕಾರ್ಯಕ್ರಮದಲ್ಲಿ ಸಂಸದ ರಾಮಚಂದ್ರ ವೀರಪ್ಪ ಎದುರಿಗೆ ಬಂದಾಗ, ‘ರಾಮಚಂದ್ರ ವೀರಪ್ಪಾಜಿ , ಬೀದರ್ ಕೈಸೇ ಹೈ’ ಎಂದು ಕೇಳಿ ಸುತ್ತಲಿದ್ದವರಲ್ಲಿ ಅಚ್ಚರಿ ಮೂಡಿಸಿದ್ದರು.

ಅನಂತಕುಮಾರ ಅವರು ಬ್ರಿಟಿಷ್ ಪಾರ್ಲಿಮೆಂಟಿನ ಉನ್ನತ ಶೈಕ್ಷಣಿಕ ಪದವಿ ಪಡೆದ ಸುಮಾರು ಹತ್ತು ಸದಸ್ಯರ ಹೆಸರುಗಳನ್ನು ಹೇಳಿದರು. ಆಗ ಮಹಾಜನ್ , ‘ಅನಂತ್, ನೀವು ಶ್ರೀಕಾಂತ ಜಿಛ್ಕರ್ ಎಂಬುವವರ ಹೆಸರನ್ನುಂಕೇಳಿದ್ದೀರಾ?’ ಎಂದು ಕೇಳಿದರು. ಅದಕ್ಕೆ ಅನಂತಕುಮಾರ ನಕಾರಾತ್ಮಕವಾಗಿ ತಲೆಯಾಡಿಸಿದರು. ‘ಹೌದಾ? ನೀವು ಅವರ ಹೆಸರನ್ನು ಕೇಳಿಲ್ಲವಾ ? ನನಗೆ ಆಶ್ಚರ್ಯವಾಗುತ್ತಿದೆ. ನನಗೆ ತಿಳಿದಂತೆ ಜಿಛ್ಕರ್ ಭಾರತದ ಅತ್ಯಂತ ಸುಶಿಕ್ಷಿತ, ಅತಿ ಹೆಚ್ಚು ಡಿಗ್ರಿ ಪಡೆದ, Highly Well – Qualified Politician. ಇವರಂಥ ಮತ್ತೊಬ್ಬ ರಾಜಕಾರಣಿಯನ್ನು ಹುಡುಕುವುದು ಕಷ್ಟ’ ಎಂದು ಮಹಾಜನ್ ಹೇಳಿದರು. ಅನಂತಕುಮಾರ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆಯಿತ್ತು.

ಮೂಲತಃ ಜಿಛ್ಕರ್ ಮಹಾರಾಷ್ಟ್ರದ ಕಟೋಲದವರು. ಕಾಂಗ್ರೆಸ್ ನಾಯಕರು. ಅವರು ಮೊದಲ ಬಾರಿಗೆ ಅವರು ಮಹಾರಾಷ್ಟ್ರ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದಾಗ ಅವರಿಗೆ ಇಪ್ಪತ್ತೈದು ವರ್ಷ. ರಾಷ್ಟ್ರದಲ್ಲೇ ಅತ್ಯಂತ ಕಿರಿಯ ಶಾಸಕ ಎಂಬ ಅಗ್ಗಳಿಕೆಗೆ ಪಾತ್ರರಾದವರು. ವೈದ್ಯಕೀಯ ಶಿಕ್ಷಣ (ಎಂಬಿಬಿಎಸ್) ಮುಗಿಸಿದ ಜಿಛ್ಕರ್ , ಎಂಡಿ ಪದವಿ ಗಿಟ್ಟಿಸಿದರು. ಅದಾದ ಬಳಿಕ ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ಎಲ್ಎಲ್ .ಎಂ ಮಾಡಿದರು. ಜತೆಯಲ್ಲೇ ಎಂಬಿಎ (ಮಾಸ್ಟರ್ಸ್ ಇನ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ) ಪದವಿಯನ್ನೂ ಪಡೆದರು. ಜತೆಯಲ್ಲೇ ಸಂಸ್ಕೃತ ಭಾಷೆಯಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಮಾಡಿದರು.

ಜಿಛ್ಕರ್ ಅವರಿಗೆ ತಾವು ಐಎಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇತ್ತು. 1978 ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದರು. ಆದರೆ ನಿರೀಕ್ಷಿತ ಅಂಕಗಳು ಬರದೇ ಇದ್ದುದರಿಂದ ಐಎಎಸ್ ಬದಲು ಐಪಿಎಸ್ ಸಿಕ್ಕಿತು. ಆದರೆ ಅವರು ಐಪಿಎಸ್ ಅಧಿಕಾರಿ ಆಗಲಿಲ್ಲ. ಪುನಃ ಪರೀಕ್ಷೆ ಬರೆದರು. ಆ ಸಲ ಐಎಎಸ್ ಸಿಕ್ಕಿತು. ಅವರು ತಮ್ಮ ಜೀವಮಾನದ ಕನಸನ್ನು ನನಸು ಮಾಡಿಕೊಂಡರು. ನಾಲ್ಕು ತಿಂಗಳು ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಿದರು. ಅಷ್ಟೊತ್ತಿಗೆ ಕಾಂಗ್ರೆಸ್ ಪಕ್ಷ ಅವರಿಗೆ ವಿಧಾನ ಸಭೆಗೆ ಪಕ್ಷದ ಟಿಕೆಟ್ ನೀಡಿದ್ದರಿಂದ, ಅವರು ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದರು. ಮಹಾರಾಷ್ಟ್ರ ಸರಕಾರದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಮಂತ್ರಿಯಾದ ದಾಖಲೆಯೂ ಜಿಛ್ಕರ್ ಹೆಸರಿನಲ್ಲಿದೆ. ಒಂದು ಸಂದರ್ಭದಲ್ಲಿ ಅವರು ಹದಿನಾಲ್ಕು ಖಾತೆಗಳನ್ನು ಹೊಂದಿದ್ದ ಅತ್ಯಂತ ಪ್ರಭಾವಿ ಮಂತ್ರಿ ಎನಿಸಿಕೊಂಡಿದ್ದರು. ಮಂತ್ರಿಯಾಗಿದ್ದಾಗಲೂ ಅವರು ತಮ್ಮ ಓದು, ಬರಹ, ಅಧ್ಯಯನವನ್ನು ನಿಲ್ಲಿಸಿರಲಿಲ್ಲ. ಮಂತ್ರಿಯಾಗಿ ಪರೀಕ್ಷೆ ಬರೆದು ಡಿಗ್ರಿ ಪಡೆದವರು.

1973 ರಿಂದ 1990 ರವರೆಗೆ ಜಿಛ್ಕರ್ ಅವರು ನಲವತ್ತೆರಡು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಬರೆದು ಡಿಗ್ರಿ ಪಡೆಡಿದ್ದರು. ಸುಮಾರು ಹದಿನೇಳು ವರ್ಷಗಳವರೆಗೆ ಸತತವಾಗಿ, ಬೇಸಿಗೆಯಲ್ಲಿ ಒಂದಿಲ್ಲೊಂದು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಜಿಛ್ಕರ್ ಹಾಜರಾಗುತ್ತಿದ್ದರು. ಅವರು ಮೂವತ್ತಕ್ಕೂ ಹೆಚ್ಚು ಬಂಗಾರದ ಪದಕ ಪದಕಗಳನ್ನು ಪಡೆದಿದ್ದರು. ಅಂದರೆ ಶೋಕಿಗಾಗಿ, ಡಿಗ್ರಿ ಆಸೆಗಾಗಿ ಅವರು ಪರೀಕ್ಷೆ ಬರೆಯುತ್ತಿರಲಿಲ್ಲ. ಮೊದಲ ಸ್ಥಾನದಲ್ಲಿ ತೇರ್ಗಡೆಯಾಗಬೇಕು ಎಂಬ ಹಂಬಲದಿಂದಲೇ, ಗಂಭೀರ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯುತ್ತಿದ್ದರು. ಜಿಛ್ಕರ್ ಅಪರೂಪದ ಗ್ರಂಥಾಲಯವನ್ನು ಹೊಂದಿದ್ದರು. ಅದರಲ್ಲಿ ಸುಮಾರು ಅರವತ್ತು ಸಾವಿರ ಪುಸ್ತಕಗಳಿದ್ದವು. ದೇಶದ ಅತ್ಯಂತ ಸುಶಿಕ್ಷಿತ, ಅತಿ ಹೆಚ್ಚು ಪದವಿ ಹೊಂದಿದ ರಾಜಕಾರಣಿ ಎಂದು ಮಹಾರಾಷ್ಟ್ರ ವಿಧಾನಸಭೆ ಅವರನ್ನು ಅಭಿನಂದಿಸಿತ್ತು. ಅವರು ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಷ್ಟೇ ಅಲ್ಲ, ಒಂದು ಅವಧಿಗೆ (1992–98) ಅವರು ರಾಜ್ಯಸಭಾ ಸದಸ್ಯರೂ ಆಗಿದ್ದರು. ಇಂಥ ಮೇಧಾವಿ ರಾಜಕಾರಣಿ ತಮ್ಮ ನಲವತ್ತೊಂಬತ್ತನೇ ವಯಸ್ಸಿನಲ್ಲಿ, ಹದಿನಾರು ವರ್ಷಗಳ ಹಿಂದೆ (2 ಜೂನ್, 2004 ರಲ್ಲಿ), ರಸ್ತೆ ಅಪಘಾತದಲ್ಲಿ ನಿಧನರಾದರು. ಇಂದಿಗೂ ಭಾರತದಲ್ಲಿ ಅತಿ ಹೆಚ್ಚು ಪದವಿ ಪಡೆದ ರಾಜಕಾರಣಿ ಎಂಬ ಶ್ರೇಯಸ್ಸು ಜಿಛ್ಕರ್ ಅವರ ಹೆಸರಿನಲ್ಲಿಯೇ ಇದೆ.

ಮಹಾಜನ್ ಜಿಛ್ಕರ್ ಅವರ ವ್ಯಕ್ತಿಚಿತ್ರಣ ಹೇಳಿದಾಗ, ಅನಂತಕುಮಾರ ಮತ್ತು ನಾನು ತದೇಕಚಿತ್ತದಿಂದ ಕೇಳುತ್ತಿದ್ದೆವು.

ರಾಜಕಾರಣಿಗಳ ಬಗ್ಗೆ ನಮ್ಮ ಜನರಲ್ಲಿ ಇರುವ ಭಾವನೆಗಳ ಪೈಕಿ, ಅವರು ಹೆಚ್ಚು ಓದಿದವರಲ್ಲ ಎಂಬುದೂ ಹೌದು. ಸಾಕಷ್ಟು ಓದಿದವರು, ವಿದ್ಯಾವಂತರು, ವಿಷಯ ಪರಿಣತರು ರಾಜಕಾರಣಕ್ಕೆ ಬರುವುದಿಲ್ಲ ಎಂಬ ಭಾವನೆಯೇ ಎಲ್ಲರಲ್ಲಿ ಇದೆ. ರಾಜಕಾರಣಕ್ಕೆ ಅಷ್ಟೇನೂ ಓದದವರು, ಎಲ್ಲೂ ಸಲ್ಲದವರು, ಅಪಾಪೋಲಿಗಳು, ಕ್ರಿಮಿನಲ್ ಗಳು, ರೌಡಿಗಳು, ಬರುತ್ತಾರೆ, ಸಂಭಾವಿತರು, ಯೋಗ್ಯರು, ಒಳ್ಳೆಯವರು, ಕಲಿತವರು ಬರುವುದಿಲ್ಲ ಎಂದೇ ಅನೇಕರು ಭಾವಿಸಿದ್ದಾರೆ. ಅಂಥವರ ಮಧ್ಯೆ ಜಿಛ್ಕರ್ ಅಂಥವರೂ ಇದ್ದರು ಎಂಬುದು ಬಹಳ ಜನರಿಗೆ ಗೊತ್ತಿಲ್ಲ.

ಆ ಡೈರಿ ಪುಟಗಳ ಮೇಲೆ ಕಣ್ಣಾಡಿಸಿದಾಗ, ಕಳೆದುಹೋದ ನೆನಪುಗಳೆಲ್ಲಾ ಮರುಕಳಿಸಿದವು.

(ನೂರೆಂಟು ವಿಶ್ವ ಅಂಕಣದಿಂದ)