ಹಿಂದಿರುಗಿ ನೋಡಿದಾಗ
ಥಾಮಸ್ ಸಿಡೆನ್ಹ್ಯಾಮ್ (1624-1689) ಓರ್ವ ಖ್ಯಾತ ಇಂಗ್ಲಿಷ್ ವೈದ್ಯ. ಈತನನ್ನು ‘ಇಂಗ್ಲಿಷ್ ಹಿಪ್ಪೋಕ್ರೇಟ್ಸ್’ ಎಂದು ಕರೆ
ಯುತ್ತಿದ್ದರು (ಹಿಪ್ಪೋಕ್ರೇಟ್ಸ್ ಗ್ರೀಕ್ ವೈದ್ಯ. ಮನುಕುಲ ಕಂಡ ಮಹಾನ್ ವೈದ್ಯರಲ್ಲಿ ಒಬ್ಬ).
ರೋಗವೊಂದರ ಬಗೆಗಿನ ಈತನ ಲೇಖನದ ಒಂದು ಭಾಗ ಹೀಗಿದೆ: ‘ರೋಗಿಯು ರಾತ್ರಿ ಸ್ವಸ್ಥನಾಗಿ ಮಲಗಿ ನಿದ್ರಿಸಿದ. ಬೆಳಗಿನ ಜಾವ 2 ಗಂಟೆಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಅವನ ಕಾಲಿನ ಹೆಬ್ಬೆರಳ ಕೀಲಿನಲ್ಲಿ ನೋವು ಎಷ್ಟು ತೀವ್ರವಾಗಿತ್ತೆಂದರೆ, ಕೀಲು ಜಾರಿ ಮೂಳೆಗಳು ಪ್ರತ್ಯೇಕವಾಗಿಬಿಟ್ಟವೇನೋ ಎನಿಸುವಷ್ಟು. ಈ ಉಗ್ರನೋವಿನ ಬೆನ್ನಿನಲ್ಲಿಯೇ ವಿಪರೀತ ಚಳಿ, ನಡುಕ, ಸ್ವಲ್ಪ ಜ್ವರ ಕಂಡುಬಂದಿತು. ಆರಂಭದಲ್ಲಿ ಸೌಮ್ಯವಾಗಿದ್ದ ನೋವು ಗಂಟೆ ಗಂಟೆಗೆ ಉಗ್ರವಾಗುತ್ತಾ ಹೋಯಿತು. ಕೋಣೆಯಲ್ಲಿ ಯಾರಾದರೂ ನಡೆದಾಡಿದರೂ ಕೀಲುನೋವು ಹೆಚ್ಚುತ್ತಿತ್ತು’.
ಈ ಕೀಲುಗಳ ರೋಗವೇ ‘ರೋಗರಾಜ-ರಾಜರೋಗ’ ಎಂದು ಪ್ರಸಿದ್ಧವಾದ ‘ಗೌಟ್’ ಅಥವಾ ‘ಕೀಲುವಾತಕಿ’. ಸಿಡೆನ್ಹ್ಯಾಮ್ ಕೀಲುವಾತಕಿಯಿಂದ ನರಳುತ್ತಿದ್ದ ಕಾರಣ, ಆತನ ಈ ವಿವರಣೆಯಲ್ಲಿ ಉತ್ಪ್ರೇಕ್ಷೆ ಇಲ್ಲವೆನ್ನಬಹುದು. ಕೀಲುವಾತಕಿಯು ಹೆಸರೇ ಸೂಚಿಸುವಂತೆ ಕೀಲುಗಳನ್ನು ಕಾಡುವ ಉರಿಯೂತದ ರೋಗ. ಇದು ಬಂದಾಗ ಕೀಲು ಕೆಂಪಾಗುತ್ತದೆ, ಬಿಸಿಯಾಗುತ್ತದೆ, ಊದಿ ಕೊಳ್ಳುತ್ತದೆ.
ಪದೇಪದೆ ಕಾಡುವ ಈ ಕೀಲುನೋವು, ಆರಂಭವಾದ ೧೨ ಗಂಟೆಗಳೊಳಗೆ ಪರಾಕಾಷ್ಠೆ ಮುಟ್ಟುತ್ತದೆ. ಶೇ. 50ರಷ್ಟು ಪ್ರಕರಣದಲ್ಲಿ ಕೀಲುವಾತಕಿಯು ಕಾಲ ಹೆಬ್ಬೆರಳನ್ನೇ ಕಾಡುತ್ತದೆ. ಕೀಲುಗಳಲ್ಲಿ ಕೀಲುಗಂಟುಗಳು (ಟೋಫೈ) ಉಂಟಾಗಿ ಚಲನೆ ಅಸಾಧ್ಯ ವಾಗುತ್ತದೆ. ಮೂತ್ರಪಿಂಡಗಳಲ್ಲಿ ಕಲ್ಲುಗಳು ಬೆಳೆಯುತ್ತವೆ. ಮೂತ್ರಪಿಂಡ ವೈಫಲ್ಯಕ್ಕೆ ಎಡೆಮಾಡಿಕೊಟ್ಟು ಸಾವನ್ನೂ ತರಬ ಲ್ಲುದು. ರೋಗಿಯ ರಕ್ತದಲ್ಲಿ ಕ್ರಮವಾಗಿ ಏರುತ್ತಾ ಹೋಗುವ ಯೂರಿಕ್ ಆಸಿಡ್ಡಿನ ಪ್ರಮಾಣ ಕೀಲುವಾತಕಿಗೆ ಕಾರಣ. ರಕ್ತದಲ್ಲಿ ಅಧಿಕ ಪ್ರಮಾಣದ ಯೂರಿಕ್ ಆಸಿಡ್ ಇದ್ದಾಗ ಅದು ಹರಳುಗಟ್ಟುತ್ತದೆ.
ಕೀಲುಗಳು, ಕಂಡರಗಳು, ಮೂತ್ರ ಪಿಂಡಗಳಲ್ಲಿ, ಚರ್ಮದಡಿಯಲ್ಲಿ ಇಂತಹ ಹರಳುಗಟ್ಟುವಿಕೆ ಸಾಮಾನ್ಯ. ಮಿತಿಮೀರಿ ಮದ್ಯ ಪಾನ ಮಾಡುವ. ಸಕ್ಕರೆ ಅಧಿಕವಾಗಿರುವ ಪಾನೀಯಗಳನ್ನು ಮಿತಿಮೀರಿ ಸೇವಿಸುವ, ಪ್ಯೂರೈನ್ ಅಧಿಕವಿರುವ ಮೀನು-ಮಾಂಸ ತಿನ್ನುವ, ಬೊಜ್ಜು ಬೆಳೆಸಿಕೊಂಡಿರುವ ಜನರಲ್ಲಿ ಕೀಲುವಾತಕಿ ಕಂಡುಬರುವ ಸಾಧ್ಯತೆ ಅಧಿಕ. ಆನುವಂಶಿಕ ಹಿನ್ನೆಲೆಯೂ ಈ ರೋಗಕ್ಕುಂಟು.
ಕೀಲುವಾತಕಿ ಮನುಕುಲವನ್ನು ಕಾಡಿದ, ಕಾಡುತ್ತಿರುವ ರೋಗಗಳಲ್ಲಿ ಒಂದು. ಕ್ರಿ.ಪೂ. ೨೬೪೦ರಷ್ಟು ಹಿಂದೆಯೇ ಇದು ಈಜಿಪ್ಟಿನ ಶ್ರೀಮಂತರನ್ನು ಕಾಡುತ್ತಿದ್ದ ಬಗ್ಗೆ ದಾಖಲೆಯಿದೆ. ಈಬರ್ಸ್ ಪ್ಯಾಪಿರಸ್ ಮತ್ತು ಎಡ್ವಿನ್ ಸ್ಮಿತ್ ಪ್ಯಾಪಿರಸ್ನಲ್ಲಿ ಈ ರೋಗದ ವಿವರಣೆಯಿದೆ. ಕ್ರಿ.ಪೂ.400ರ ಅಸುಪಾಸಿನಲ್ಲಿ ಗ್ರೀಕ್ ವೈದ್ಯ ಹಿಪ್ಪೋಕ್ರೇಟ್ಸ್ ಗೆ ಕೀಲುವಾತಕಿ ಬಗ್ಗೆ ಅರಿವಿತ್ತು. ಕೀಲುವಾತಕಿ ಹಾಗೂ ಶ್ರೀಮಂತ ಜೀವನಶೈಲಿಯ ನಡುವೆ ಸಂಬಂಧ ಇರುವುದನ್ನು ಹಿಪ್ಪೋಕ್ರೇಟ್ಸ್ ಗುರುತಿಸಿದ್ದ. ನಮ್ಮ ಆರೋಗ್ಯವನ್ನು ರಕ್ತ,
ಕಫ, ಹಸಿರು ಪಿತ್ತ ಮತ್ತು ಕಪ್ಪು ಪಿತ್ತ ಎಂಬ 4 ರಸಗಳು ನಿಯಂತ್ರಿಸುತ್ತವೆ ಎಂದು ನಂಬಿದ್ದ (ಇದು ಒಂದು ಸಿದ್ಧಾಂತ
ಮಾತ್ರ).
ಕೀಲುಗಳಲ್ಲಿ ಕಫವು ಅಧಿಕವಾಗಿ ಸಂಗ್ರಹವಾದಾಗ ಕೀಲುವಾತಕಿ ತಲೆದೋರುತ್ತದೆ ಎಂದು ಭಾವಿಸಿದ್ದ. ಕೀಲುವಾತಕಿಯಾದಾಗ ಒಂದೇ ಒಂದು ಹೆಜ್ಜೆ ಮುಂದಿಡಲು ಯಮಯಾತನೆ ಅನುಭವಿಸಬೇಕಾಗಿದ್ದ ಕಾರಣದಿಂದ ಅದನ್ನು ‘ನಡೆಯಲಾಗದ ರೋಗ’ ಎಂದು ಕರೆದ, ಶ್ರೀಮಂತರ ಕಾಯಿಲೆ ಎಂದೂ ಹೆಸರಿಸಿದ. 6 ದಶಕಗಳ ನಂತರ ರೋಮನ್ ವೈದ್ಯ ಗ್ಯಾಲನ್ ರೋಗಿಯ ಕೀಲುಗಳಲ್ಲಿ ಕಂಡುಬರುವ ಕೀಲುಗಂಟನ್ನು (ಟೋಫೈ) ವಿವರಿಸಿದ.
ಹಾಗೆಯೇ ರೋಗಿಯ ಮೂತ್ರದಲ್ಲಿ ವಿಶಿಷ್ಟ ಹರಳು ಗಳಿರುವುದನ್ನು (ಮಾನೋಸೋಡಿಯಂ ಯೂರೇಟ್) ಗುರುತಿಸಿದ. ಕೀಲುವಾತಕಿ ದೀರ್ಘಕಾಲ ಕಾಡಿದಾಗ, ಚರ್ಮದ ಕೆಳಗೆ ಹರಳುಗಳು ಗಂಟುಕಟ್ಟುವುದನ್ನು ವರ್ಣಿಸಿದ. ಗ್ಯಾಲನ್ ಸಹ, ಶಿಸ್ತಿಲ್ಲದ ಜೀವನಶೈಲಿ ಹಾಗೂ ಆನುವಂಶಿಕತೆ ಈ ರೋಗಕ್ಕೆ ಕಾರಣವೆಂದ. ಕೀಲುವಾತಕಿ ಆನುವಂಶಿಕವಾಗಿ ಬರಬಹುದೆಂಬ ಗುಮಾನಿ ಯನ್ನು ರೋಮನ್ ಸೆನೇಟರ್ ಲ್ಯೂಶಿಯಸ್ ಆನಿಯಸ್ ಸೆನೆಕ ವ್ಯಕ್ತಪಡಿಸಿದ್ದ.
ರೂಫಸ್ ಆಫ್ ಈಫಿಸಸ್ ಹರಳುಗಳು ರೋಗಿಯ ಉದರದಲ್ಲಿ ಬೆಳೆಯಬಹುದೆಂದ. ಈ ಹರಳುಗಳು ಬೆಳೆಯುವುದರಿಂದ ಶ್ವಾಸಕೋಶ, ಮೂತ್ರಪಿಂಡ ಮತ್ತು ಮಿದುಳಿನ ವೈಫಲ್ಯಗಳಾಗಿ, ಸಾವು ಸಂಭವಿಸಬಹುದೆಂದ. ಈ ಕಾಯಿಲೆಗೆ ‘ಗೌಟ್ ಪೋಡಾಗ್ರ’ ಎಂದು ಹೆಸರಿಸಿದವನು ರ್ಯಾಂಡಾಲಸ್ ಆಫ್ ಬಾಕಿಂಗ್ ಎಂಬ ಸನ್ಯಾಸಿ. ‘ಗೌಟ್’ ಎನ್ನುವ ಶಬ್ದ ಲ್ಯಾಟಿನ್ ಭಾಷೆಯ ‘ಗುಟ್ಟ’
ಎನ್ನುವ ಶಬ್ದದಿಂದ ರೂಪುಗೊಂಡಿದೆ. ‘ಬಿಂದು’ಅಥವಾ ‘ಹನಿ’ ಎಂದು ಇದರರ್ಥ. ಕಫವು ಹನಿರೂಪದಲ್ಲಿ ಕೀಲಿನೊಳಗೆ ಪ್ರವೇಶಿಸುವುದರಿಂದ ಕೀಲುವಾತಕಿಯಾಗುತ್ತದೆ ಎನ್ನುವುದು ಇದರರ್ಥ.
ಆಂಟನ್ ವಾನ್ ಲ್ಯೂವೆನ್ಹಾಕ್ ಕೀಲುವಾತಕಿಯಲ್ಲಿ ಸಂಗ್ರಹವಾಗಿರುವ ಕೀಲುಗಂಟನ್ನು ಸೂಕ್ಷದರ್ಶಕ ಯಂತ್ರದಲ್ಲಿ ಪರೀಕ್ಷಿಸಿ, ಅಲ್ಲಿರುವ ಹರಳುಗಳ ಸ್ವರೂಪವನ್ನುಅನಾವರಣ ಮಾಡಿದ. ಲ್ಯೂವೆನ್ ಹಾಕನ ವರ್ಣನೆ ಗಮನೀಯ- ‘ನಮ್ಮ
ಬರಿಗಣ್ಣಿಗೆ ಸುಣ್ಣದ ಹಾಗೆ ಕಾಣುವ ಆ ಘನವಸ್ತುವನ್ನು ಸೂಕ್ಷ್ಮವಾಗಿ ಗಮನಿಸಿದೆ. ನನ್ನ ಮೊದಲ ಅನಿಸಿಕೆ ತಪ್ಪಾಗಿರುವುದು ಅಚ್ಚರಿಯುಂಟುಮಾಡಿತು. ಆ ಸುಣ್ಣದಂಥ ವಸ್ತುವಿನಲ್ಲಿ ನೀಳ, ಪಾರದರ್ಶಕ ಎಳೆಗಳಿದ್ದವು. ಅವುಗಳ ಎರಡೂ ತುದಿಗಳು ಚೂಪಾಗಿದ್ದವು. ಕುದುರೆಯ ಬಾಲದ ಕೂದಲನ್ನು 1/6 ಇಂಚು ಕತ್ತರಿಸಿದರೆ ಹೇಗೆ ಕಾಣುವುದೋ ಹಾಗೆ ಕಾಣುತ್ತಿದ್ದವು’ ಎಂದು ಟಿಪ್ಪಣಿಯನ್ನು ದಾಖಲಿಸಿದ.
1776ರಲ್ಲಿ ಸ್ವೀಡಿಶ್ ರಸಾಯನಶಾಸ್ತ್ರಜ್ಞ ಕಾರ್ಲ್ ವಿಲ್ಹೆಲ್ಮ್ ಶೀಲೆ ಈ ಕೀಲುಗಂಟಿನ ಹರಳು ಸ್ವರೂಪವನ್ನು ವಿವರಿಸಿದ.
ನಂತರ ಸರ್ ಆಲ್-ಡ್ ಬೇರಿಂಗ್ಗ್ಯಾರೊ ಕೀಲುವಾತಕಿ ಯನ್ನು ಪತ್ತೆಹಚ್ಚಲು ನೆರವಾಗುವ ಒಂದು ಪರೀಕ್ಷೆಯನ್ನು ರೂಪಿಸಿದ. ಕೀಲುವಾತಕಿ ರೋಗಿಯ ಮೂತ್ರದಲ್ಲಿ ಒಂದು ದಾರವನ್ನು ನೆನೆಸಿ ಅದನ್ನು ಒಣಗಲು ಬಿಟ್ಟರೆ, ಸ್ವಲ್ಪ ಹೊತ್ತಿನಲ್ಲಿ ಅದರ ಮೇಲೆ ಹರಳು ಸಂಗ್ರಹವಾಗಿರುವುದನ್ನು ನೋಡಬಹುದು. ಆಧುನಿಕ ವೈದ್ಯಕೀಯ ಜ್ಞಾನದಲ್ಲಿ ರೂಪುಗೊಂಡ ಮೊತ್ತಮೊದಲ ರೋಗನಿದಾನ ಪರೀಕ್ಷೆಯಿದು.
ಕೊನೆಗೆ ಮ್ಯಾಕ್ಕಾರ್ಟಿ ಮತ್ತು ಹಾಲಂಡರ್ ಎಂಬ ವಿಜ್ಞಾನಿಗಳು ೧೯೬೧ರಲ್ಲಿ ಕೀಲುದ್ರವವನ್ನುಅಧ್ಯಯನ ಮಾಡಿ, ಈ ಹರಳುಗಳು ರಾಸಾಯನಿಕವಾಗಿ ಮಾನೋ ಸೋಡಿಯಂ ಯೂರೇಟ್ ಎನ್ನುವುದನ್ನು ಖಚಿತ ಪಡಿಸಿದರು. ಕೀಲುವಾತಕಿ ಆನುವಂಶಿಕವಾಗಿ ಬರಬಹುದು ಎನ್ನುವ ಗುಮಾನಿಯನ್ನು ಹಿಪ್ಪೋಕ್ರೇಟ್ಸ್, ಸೆನೆಕ ಮತ್ತು ಕಪ್ಪಡೋಶಿಯನ್ ವೈದ್ಯ ಅರೇಯಸ್ ಹೇಳಿದ್ದರೂ, ಅಧಿಕೃತವಾದ ತೀರ್ಮಾನವನ್ನು 1931ರಲ್ಲಿ ಸರ್ ಆರ್ಕಿಬಾಲ್ಡ್ ಗ್ಯಾರೊ(ಸರ್ ಆಲ್-ಡ್ಗ್ಯಾರೋ ಅವರ ಮಗ) ನೀಡಿದ.
ಇದು ಜನ್ಮದತ್ತ ಉಪಾಪಚಯ ವೈಪರೀತ್ಯದ ರೋಗ (ಇನ್ಬಾರ್ನ್ ಎರರ್ ಆಫ್ ಮೆಟಬಾಲಿಸಂ) ಆಗಿರಬಹುದು ಎಂಬ ಅನಿಸಿಕೆಯನ್ನು ಮುಂದಿಟ್ಟ. ಕೊನೆಗೆ 1967ರಲ್ಲಿ ಪ್ಯೂರೈನ್ ಎಂಬ ಪ್ರೋಟೀನ್ ಘಟಕದ ಉಪಾಪಚಯ ವೈಪರೀತ್ಯದ ಕಾರಣ,
ಯೂರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ ಮತ್ತು ಅದರ ವಿಸರ್ಜನಾ ವೈಪರೀತ್ಯದ ಕಾರಣ, ಕೀಲುವಾತಕಿ ಸಂಭವಿಸುತ್ತದೆ ಎಂಬುದು ಖಚಿತವಾಯಿತು.
ಕೀಲುವಾತಕಿಯ ಚಿಕಿತ್ಸೆಯಲ್ಲಿ ಕ್ರೋಕಸ್ (ಕಾಲ್ಚಿಕಮ್ ಆಟಮ್ನೇಲ್) ಅಥವಾ ಕೇಸರಿಗಿಡ ಪ್ರಧಾನಪಾತ್ರ ವಹಿಸಿದೆ.
ಸಂಸ್ಕೃತದ ‘ಕುಂಕುಮಮ್’ ಎಂಬ ಶಬ್ದವು ಅರೇಬಿಕ್ ಭಾಷೆಯಲ್ಲಿ ‘ಕುರುಕುಮ್’ ಆಗಿ, ಅರಮೈಕ್ನಲ್ಲಿ ‘ಕುರ್ಕಮ’ ಆಗಿ, ಹಿಬ್ರೂ ಭಾಷೆಯಲ್ಲಿ ‘ಕರ್ಕೋಮ್’ ಆಗಿ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಲ್ಲಿ ‘ಕ್ರೋಕಸ್’ ಆಗಿದೆ. ಕೀಲುವಾತಕಿಯ ಚಿಕಿತ್ಸೆಯಲ್ಲಿ ಕ್ರೋಕಸ್ ಉಪಯುಕ್ತ ಎನ್ನುವ ವಿಚಾರವನ್ನು ಈಜಿಪ್ಷಿಯನ್ನರ ಈಬರ್ಸ್ ಪ್ಯಾಪಿರಸ್ ಕೃತಿಯು ಮೊದಲ ಬಾರಿಗೆ ದಾಖಲಿಸಿದೆ.
ಆನಂತರ ಮೊದಲನೆಯ ಶತಮಾನದಲ್ಲಿ ಪೆಡಾನಿಯಸ್ ಡಯಾಸ್ಕೋರಿಡೆಸ್ ಬರೆದ ‘ದಿ ಮೆಟೀರಿಯ ಮೆಡಿಕ’ ಗ್ರಂಥವು ಕ್ರೋಕಸ್ ಸಾರವನ್ನು ಕೀಲುವಾತಕಿಯಲ್ಲಿ ಬಳಸಬಹುದು ಎನ್ನುತ್ತದೆ. ಅಲೆಕ್ಸಾಂಡರ್ ಆಫ್ ಟ್ರಾಲೆಸ್ (525-605) ಕ್ರೋಕಸ್ ಗಡ್ಡೆಗಳ ಉಪಯೋಗವನ್ನು ತನ್ನ ‘ಟ್ವೆಲ್ವ್ ಬುಕ್ಸ್ ಆನ್ ಮೆಡಿಸಿನ್’ನಲ್ಲಿ ವಿವರಿಸಿದ. ಪರ್ಷಿಯನ್ ವೈದ್ಯ ಅವಿಸೆನ್ನ ಹಾಗೂ ಆಂಬ್ರೋಸ್ ಪ್ಯಾರೆ ಸಹ ಕ್ರೋಕಸ್ ಸಾರದಿಂದ ಕೀಲುವಾತಕಿಯನ್ನು ನಿಯಂತ್ರಿಸುವ ಬಗ್ಗೆ ದಾಖಲಿಸಿರುವರು. ಕೊನೆಗೆ ೧೬ನೆಯ
ಶತಮಾನದ ಲಂಡನ್ -ರ್ಮಕೋಪಿಯದಲ್ಲಿ, ಕೀಲುವಾತಕಿಯ ಚಿಕಿತ್ಸೆಯಲ್ಲಿ ಕ್ರೋಕಸ್ ಉಪಯುಕ್ತ ಎಂದು ದಾಖಲಾಯಿತು.
ಬೆಂಜ಼ಮಿನ್ ಫ್ರಾಂಕ್ಲಿನ್ ಫ್ರಾನ್ಸ್ ದೇಶದಲ್ಲಿ ಅಮೆರಿಕದ ರಾಯಭಾರಿಯಾಗಿದ್ದಾಗ ಅವನನ್ನು ಕೀಲುವಾತಕಿ ಇನ್ನಿಲ್ಲದಂತೆ ಕಾಡಿತ್ತು. ಆಗ ಫ್ರಾಂಕ್ಲಿನ್ ಕ್ರೋಕಸ್ ಗಿಡವನ್ನು ಅಮೆರಿಕಕ್ಕೆ ಕೊಂಡೊಯ್ದು, ಕೀಲುವಾತಕಿಯ ನಿಗ್ರಹದಲ್ಲಿ ಈ ಗಿಡ ಎಷ್ಟು ಉಪಯುಕ್ತ ಎಂಬುದನ್ನು ಅಮೆರಿಕನ್ನರಿಗೆ ತೋರಿಸಿದ. 1820ರಲ್ಲಿ ಫ್ರೆಂಚ್ ರಸಾಯನ ಶಾಸ್ತ್ರಜ್ಞರಾದ ಪಿಯರಿ ಜೋಸೆಫ್ ಪೆಲಿಟೀರ್ (1788-1842) ಮತ್ತು ಜೋಸೆಫ್ ಬೈನೇಮ್ ಕೊವೆಂಟೊ (1795-1877) ಕ್ರೋಕಸ್ ಗಡ್ಡೆಯಿಂದ ಆಲ್ಕಲಾಯ್ಡ್ ರಾಸಾಯನಿಕಗಳ ವರ್ಗಕ್ಕೆ ಸೇರಿದ ‘ಕಾಲ್ಚಿಸಿನ್’ ಎಂಬ ವಸ್ತುವನ್ನು ಪ್ರತ್ಯೇಕಿಸಿದರು.
ವಾಸ್ತವದಲ್ಲಿ ಈ ಕ್ರೋಕಸ್ ಗಿಡದಲ್ಲಿದ್ದ ಕಾಲ್ಚಿಸಿನ್ ಕೀಲುವಾತಕಿಯ ಉಗ್ರನೋವನ್ನು ಶಮನ ಮಾಡುತ್ತಿತ್ತು. 1833ರಲ್ಲಿ ಪಿ.ಎಲ್. ಗೀಗರ್ ಕಾಲ್ಚಿಸಿನ್ ಆಲ್ಕಲಾಯ್ಡನ್ನು ಶುದ್ಧೀಕರಿಸಿ, ಅದಕ್ಕೆ ಮೊದಲಬಾರಿಗೆ ಕಾಲ್ಚಿಸಿನ್ ಎಂಬ ಹೆಸರನ್ನು ನೀಡಿದ. ಕಾಲ್ಚಿಸಿನ್ ವಿಪರೀತ ಹೊಟ್ಟೆನೋವು ಹಾಗೂ ಬೇಧಿಯನ್ನು ಉಂಟುಮಾಡುತ್ತಿದ್ದ ಕಾರಣ, ಕಾಲಕ್ರಮೇಣ ಇದರ ಉಪಯೋಗವು ತಗ್ಗಿತು.
ಕೊನೆಗೆ ಜಾರ್ಜ್ ಹರ್ಬರ್ಟ್ ಹಿಚಿಂಗ್ಸ್ (1905-1998) ಹಾಗೂ ಗೆರ್ಟ್ರೂಡ್ ಬೆಲ್ಲಿ ಇಲಿಯನ್ (1918-1999) ಅಲ್ಲೋಪ್ಯೂರಿನಾಲ್ ಎಂಬ ಔಷಧವನ್ನು ಪ್ರಯೋಗಾಲಯದಲ್ಲಿ ಸೃಜಿಸಿದರು. ಇವರ ಈ ಸಂಶೋಧನೆಗೆ 1988ರ ನೊಬೆಲ್ ಪಾರಿತೋಷಕ ದಕ್ಕಿತು. ಮನುಷ್ಯನನ್ನು ಅನಾದಿ ಕಾಲದಿಂದಲೂ ಕಾಡಿಕೊಂಡು ಬರುತ್ತಿದ್ದ ಕೀಲುವಾತಕಿಗೆ ಈಗ ಉತ್ತಮ ಉಪಶಮನ ದೊರೆತಿದೆ. SLC2A9, SLC22A12 ಮತ್ತು ABCG2 ವಂಶವಾಹಿಗಳ ವೈಪರೀತ್ಯ ಇರುವವರಲ್ಲಿ ಈ ರೋಗ ಕಂಡುಬರುವ ಸಾಧ್ಯತೆ ಶೇ. 60ರಷ್ಟಿರುತ್ತದೆ.
ಇಂಥವರು ಮಾಂಸಾಹಾರ ತ್ಯಜಿಸುವುದು ಒಳ್ಳೆಯದು. ಬಿಯರ್, ವಿಸ್ಕಿ, ರಮ್ ಮುಂತಾದ ಮಾದಕ ಪಾನೀಯಗಳಿಂದ ದೂರ ವಿರಬೇಕಾಗುತ್ತದೆ. ಅವಶ್ಯವೆನಿಸಿದಲ್ಲಿ ವೈನ್ ಸೇವಿಸಬಹುದು. ಬೊಜ್ಜನ್ನು ಬೆಳೆಸಿಕೊಳ್ಳಬಾರದು. ಸಸ್ಯಾಹಾರ ರೂಢಿಸಿ ಕೊಂಡು ವಿಟಮಿನ್-ಸಿ ಅಂಶವನ್ನು ಹೆಚ್ಚಿಗೆ ಸೇವಿಸುತ್ತಿದ್ದರೆ, ಕೀಲುವಾತಕಿಯನ್ನು ಬಹುಪಾಲು ನಿಯಂತ್ರಿಸಬಹುದು. ಇಷ್ಟೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ಮೇಲೂ ಕೀಲುವಾತಕಿ ಬಂದರೆ, ಅದನ್ನು ನಿಗ್ರಹಿಸಲು ಈಗ ಉತ್ತಮ ಔಷಧಗಳಿವೆ.