Friday, 20th September 2024

ತರೂರ ಪದಪ್ರೀತಿ

– ವಿಶ್ವೇಶ್ವರ ಭಟ್

ಕೇರಳದ ತಿರುವನಂತಪುರದಿಂದ ಸತತ ಮೂರು ಸಲ ಲೋಕ ಸಭೆಗೆ ಆಯ್ಕೆಯಾಗಿರುವ ಶಶಿ ತರೂರ್ ಅವರಿಗೆ ಇಂಗ್ಲಿಷ್ ಭಾಷೆ ಮೇಲಿರುವ ಪ್ರೀತಿ, ಹಿಡಿತ ಅನನ್ಯವಾದುದು.

ಅವರು ಯಾರೂ ಕೇಳಿರದ, ಬಳಕೆಯಲ್ಲಿ ಇಲ್ಲದ, ಡಿಕ್ಷನರಿಯಲ್ಲಿ ಮಾತ್ರ ಉಳಿದುಕೊಂಡ ಪದಗಳನ್ನು ಬಳಸುವ ಮೂಲಕ, ಆ ಪದಗಳನ್ನು ಚಲಾವಣೆಗೆ ತರುತ್ತಾರೆ. ಅವರ ಬಾಯಲ್ಲಿ, ಬರಹದಲ್ಲಿ ಬರುವ ಪದಗಳು ಏಕಾಏಕಿ ಮರುಜನ್ಮ ಪಡೆಯುತ್ತವೆ, ಹಠಾತ್ ಜನಪ್ರಿಯವಾಗುತ್ತವೆ.

ಶಶಿ ತರೂರ್ ಯಾವ ಹೊಸ ಪದ ಬಳಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಯುವ ಬಹುದೊಡ್ಡ ಸಮೂಹವೇ ಇದೆ. 2017 ರಲ್ಲಿ ತರೂರ್ ತಮ್ಮ ಒಂದು ಟ್ವೀಟ್ ನಲ್ಲಿ Farrago ಎಂಬ ಪದವನ್ನು ಬಳಸಿದ್ದರು. ಅದು ರಾತ್ರಿ ಬೆಳಗಾಗುವುದರೊಳಗೆ, ಅನೇಕರ ನಾಲಗೆ ಮೇಲೆ ನಲಿದಾಡಲಾರಂಭಿಸಿತ್ತು.

ಆ ದಿನ ಗೂಗಲ್ ನಲ್ಲಿ ಅತಿ ಹೆಚ್ಚು ಜನ ಆ ಪದದ ಅರ್ಥವೇನು ಎಂದು ಹುಡುಕಿದ್ದರು. ಶಶಿ ತರೂರ್ ಅವರಿಗೂ ಗೊತ್ತು, ತಾವು ಬಳಸುವ ಹೊಸ ಪದ ಚರ್ಚೆಗೆ ಒಳಗಾಗುತ್ತದೆ, ಜನ ಅದನ್ನು ಬಳಸಲು ಆರಂಭಿಸುತ್ತಾರೆ, ಆ ಪದದ ಬಗ್ಗೆ ಒಂದು ರೀತಿಯ ಮೋಹ ತಾಳುತ್ತಾರೆ ಎಂದು.

ಹೀಗಾಗಿ ಅವರು ಆಗಾಗ ಇಂಥ ಪದಗಳನ್ನು ಬಳಸಿ ಜನರಿಗೆ ಹುಚ್ಚು ಹಿಡಿಸುತ್ತಾರೆ. ಅವರು ಆಗಾಗ ಬಳಸಿದ ಪದಗಳನ್ನು ಸೇರಿಸಿ ‘ತರೂರ್ ನಮಗೆ ಕಲಿಸಿದ ವಿಶಿಷ್ಟ ಪದಗಳ ಸಂಗ್ರಹ’ (Unique English words that Dr Shashi Tharoor taught us) ಎಂಬ ಪ್ರಭೇದವೇ ಹುಟ್ಟಿಕೊಂಡಿದೆ.

Hippopotomonstrosesquipedaliophobia ಎಂಬ ಪದವನ್ನು ಅವರು ಬಳಸಿದಾಗಲೂ ಈ ಪದದ ಅರ್ಥದ ಬಗ್ಗೆ ಬಹಳ ಚರ್ಚೆಯಾಗಿತ್ತು. ಅನೇಕರು ಈ ಪದವನ್ನು ಉಚ್ಚರಿಸಲಾಗದೇ ಕಷ್ಟಪಟ್ಟರು. ಉದ್ದ ಪದಗಳ ಬಗ್ಗೆ ಕೆಲವರಿಗೆ ತುಸು ಭಯವಿರುತ್ತದೆ. ಅದಕ್ಕೆ Hippopotomonstrosesquipedaliophobia ಅಂತಾರೆ.

ಇದೇ ರೀತಿ ಅವರು ತಮ್ಮ ಟ್ವೀಟ್ ನಲ್ಲಿ Floccinaucinihilipilification ಎಂಬ ಪದವನ್ನು ಬಳಸಿದ್ದರು. ಆ ಟ್ವೀಟ್ ಹ್ಯಾಶ್ ಟ್ಯಾಗ್ ಆಗಿ ಆ ದಿನದ ಟ್ರೆಂಡ್ ಆಗಿತ್ತು. ಈ ಪದವನ್ನು ಉಚ್ಚರಿಸುವುದು ಹೇಗೆ ಎಂಬುದನ್ನು ಹೇಳಬೇಕು ಎಂದು ಅನೇಕರು ತರೂರ್ ಅವರನ್ನು ಆಗ್ರಹಿಸಿದರು. ಆನಂತರ ಅವರು ಸುಲಭವಾಗಿ ಈ ಪದವನ್ನು ಉಚ್ಚರಿಸುವುದನ್ನು ತಿಳಿಸಿಕೊಟ್ಟರು.

ಅಂದ ಹಾಗೆ ಈ ಪದದ ಅರ್ಥ – ಯಾವುದಾದರೂ ನಿರರ್ಥಕ ಅಥವಾ ನಿಷ್ಪ್ರಯೋಜಕವಾದುದನ್ನು ಊಹಿಸುವ ಕ್ರಿಯೆ ಅಥವಾ ಹವ್ಯಾಸ (The action or habit of estimating something as worthless.)

ಕೆಲವರಿಗೆ ಅಸಭ್ಯ, ಅಶ್ಲೀಲ ಪದಗಳನ್ನು ಬಳಸಿದರೆ ಮಾನಸಿಕ ಸಮಾಧಾನ ಸಿಗುತ್ತದೆ. ಅವರು ಉದ್ದೇಶರಹಿತವಾಗಿ, ಸಕಾರಣವಿಲ್ಲದೇ ಅಂಥ ಪದ ಪ್ರಯೋಗ ಮಾಡುತ್ತಿರುತ್ತಾರೆ. ಅದರಿಂದ ಅವರಿಗೆ ಏನೋ ಖುಷಿ, ನೆಮ್ಮದಿ. ಈ ಭಾವನೆಯನ್ನು ಬಣ್ಣಿಸಲು ಇಂಗ್ಲೀಷಿನಲ್ಲಿ ಒಂದು ಪದವಿದೆ. ಅದಕ್ಕೆ Lalochezia (ಉಚ್ಚಾರ la-lO-‘chez-E-o ) ಅಂತಾರೆ.

ಈ ಪದವನ್ನು ತರೂರ್ ಬಳಸಿದ ಬಳಿಕ ಈಗ ಟ್ವಿಟರ್ ನಲ್ಲಿ ಮೇಲಿಂದ ಮೇಲೆ ಬಳಕೆಯಾಗುತ್ತಿದೆ.

ಕೆಲವು ತಿಂಗಳುಗಳ ಹಿಂದೆ, ತಮ್ಮ ರಾಜಕೀಯ ಎದುರಾಳಿಯ ಬಗ್ಗೆ ಅವರು Snollygoster (ಮಹಾ ಕಪಟ, ಆದರೆ ಸಿದ್ಧಾಂತವಿಲ್ಲದ ವ್ಯಕ್ತಿ, ವಿಶೇಷವಾಗಿ ರಾಜಕಾರಣಿ) ಎಂಬ ಪದ ಬಳಸಿದಾಗ ಬಹಳ ಜನ ಗೂಗಲ್ ಸರ್ಚ್ ಮೊರೆ ಹೋಗಿದ್ದರು.

ಭಾರತದಲ್ಲಿ ಒಬ್ಬ ರಾಜಕಾರಣಿ ಅಥವಾ ಸಂಸದ ಪದಗಳ ಬಗ್ಗೆ ದೇಶಾದ್ಯಂತ ಜನರಲ್ಲಿ ಆಸಕ್ತಿ, ಕುತೂಹಲ ಮೂಡಿಸಿದ್ದು ಇದೇ ಮೊದಲಿರಬಹುದು. ಅವರು ಪ್ರತಿ ಭಾನುವಾರ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ಒಂದು ಪದವನ್ನಿಟ್ಟುಕೊಂಡು ಅಂಕಣ ಬರೆಯುತ್ತಿದ್ದಾರೆ. ಖುಷಿಕೊಡುವ ಬರಹವಿದು.

ತರೂರ್ ಅವರಂತೆ ಅಕ್ಷರಗಳಿಂದಲೂ ರಾಜಕಾರಣ ಮಾಡಬಹುದು ಎಂಬುದನ್ನು ಸಂಸದರು ಮನಗಾಣಬೇಕು.

(ಸಂಪಾದಕರ ಸದ್ಯಶೋಧನೆ ಅಂಕಣದಿಂದ)