ಗದಗ: ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಜಿಮ್ಸ್ ಆಸ್ಪತ್ರೆ ಔಷಧ ಉಗ್ರಾಣಕ್ಕೆ ನೀರು ನುಗ್ಗಿದ್ದು, ನೆಲ ಮಹಡಿ ಯಲ್ಲಿರುವ ಮುಖ್ಯ ಡ್ರಗ್ ಸ್ಟೋರ್‌ನಲ್ಲಿ ಮಳೆ ನೀರು ತುಂಬಿ ಕೋಟ್ಯಂತರ ಮೌಲ್ಯದ ಔಷಧಿಗಳು, ಮೆಡಿಕಲ್ ಉಪಕರಣಗಳು ಜಲಾವೃತವಾಗಿವೆ.
ಮಳೆರಾಯನ ಆರ್ಭಟದಿಂದ ಪಕ್ಕದಲ್ಲಿರುವ ಗುಡ್ಡದ ನೀರು ಆಸ್ಪತ್ರೆ ನೆಲ ಮಹಡಿಗೆ ನುಗ್ಗಿ ಅಪಾರ ಪ್ರಮಾಣದ ಔಷಧಿಗಳು ಹಾಳಾಗಿವೆ. ನಾಗಾವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಸುರಿದ ಬಗ್ಗೆ ವರದಿ ಆಗಿದೆ. ಆಸ್ಪತ್ರೆಯ ಔಷಧಿ ಗೋಡೌನ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ, ಔಷಧಿ ಬಾಕ್ಸ್‌ಗಳೆಲ್ಲ ನೀರು ಪಾಲಾಗಿವೆ.
ಉಗ್ರಾಣದಲ್ಲಿ ಸುಮಾರು ಮೂರು ಫೀಟ್‌ನಷ್ಟು ನೀರು ಸಂಗ್ರಹ ಆಗಿದೆ. ಗೋಡೌನ್‌ನಲ್ಲಿ ಇರಿಸಿದ್ದ ಸಿರೆಂಜ್, ಸ್ಯಾನಿಟೈಸರ್, ಟ್ಯಾಬ್ಲೆಟ್ ತುಂಬಿದ ಡಬ್ಬ, ಸರ್ಜಿಕಲ್ ಗ್ಲೌಸ್, ಔಷಧ ಬಾಟಲಿಗಳು ನೀರಿನಲ್ಲಿ ತೇಲಾಡಿವೆ.
ಗೋಡೋನ್‌ನಲ್ಲಿ ತುಂಬಿದ್ದ ನೀರನ್ನು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪಂಪ್‌ಸೆಟ್ ಮೂಲಕ ನೀರು ಖಾಲಿ ಮಾಡುವುದಕ್ಕೆ ಮುಂದಾಗಿದ್ದರು. ಜಿಮ್ಸ್ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್, ಡ್ರಗ್ ಹೌಸ್ ಸಿಬ್ಬಂದಿಗಳೇ ಸೇರಿ ಔಷಧಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಿದ್ದರು.
ಡ್ರಗ್ ಗೋಡೌನ್‌ನಲ್ಲಿ ಅಂದಾಜು 4 ಕೋಟಿ ರೂಪಾಯಿ ಮೌಲ್ಯದ ಔಷಧಿ ಸಂಗ್ರಹ ವಾಗಿತ್ತು ಎನ್ನಲಾಗಿದೆ. ಅದರಲ್ಲಿ ಸುಮಾರು ಒಂದು ಕೋಟಿ ಮೌಲ್ಯದ ಸಾಮಗ್ರಿ ಹಾಳಾಗಿರುವ ಬಗ್ಗೆಯೂ ಅಂದಾಜಿಸ ಲಾಗುತ್ತಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಜಿಮ್ಸ್ ನಿರ್ದೇಶಕಿ ರೇಖಾ ಸೋನವಣೆ, “ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅನ್ನುವುದು ನೆಮ್ಮದಿಯ ವಿಚಾರ. ಮೊದಲು ಔಷಧಿಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾಗಿ ದ್ದೇವೆ. ಬಹುತೇಕ ಔಷಧಿಗಳ ಪ್ಯಾಕೆಟ್ ಏರ್ ಸೀಲ್ ಆಗಿದೆ. ಮರುಬಳಕೆ ಮಾಡಬಹುದಾದ ಔಷಧಿಗಳ ಪಟ್ಟಿ ಮಾಡುತ್ತೇವೆ. ಔಷಧಿ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ,” ಎಂದರು.
ಗೌಡೌನ್ ಸ್ಥಳಾಂತರ ಮಾಡದಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಸಿಬ್ಬಂದಿಗಳ ಅಭಿಪ್ರಾಯ ಆಗಿದೆ.
talonjaz681@axl