ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಅಧ್ಯಕ್ಷರೇ ಕುರ್ಚಿ ಬಿಡಿ ಹೋರಾಟಕ್ಕೆ ಸಂಘಟನೆಗಳು ಸಜ್ಜು
ಅಧಿವೇಶನದಲ್ಲೂ ಶಾಸಕರ ಕೂಗು
ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮ ಅಧ್ಯಕ್ಷರ ನಿಷ್ಕ್ರಿಯತೆ ವಿರುದ್ಧ ಸಿಡಿದೆದ್ದು ಹೋರಾಟ ಮಾಡಲು ಒಕ್ಕಲಿಗ ಸಂಘಟನೆಗಳು
ತೀರ್ಮಾನಿಸಿವೆ.
ನಿಗಮ ಆರಂಭವಾಗಿ ಎರಡು ವರ್ಷಗಳೇ ಕಳೆದಿದ್ದರೂ ಈತನಕ ಸಮುದಾಯಕ್ಕೆ ಯಾವುದೇ ಸೌಲಭ್ಯ ಒದಗಿಸದ ಅಧ್ಯಕ್ಷರ ವಿರುದ್ಧ ಕುರ್ಚಿ ಬಿಟ್ಟು ಇಳಿಯಿರಿ ಹೋರಾಟ ನಡೆಸಲು ಒಕ್ಕಲಿಗರ ಒಕ್ಕೂಟಗಳು ಒಗ್ಗೂಡಿ ಹೋರಾಟ ನಡೆಸಲು ನಿರ್ಧರಿಸಿವೆ.
ಮುಂದಿನ ವಾರ ಆರಂಭವಾಗಲಿರುವ ಅಧಿವೇಶನದಲ್ಲಿ ನಿಗಮದ ಅಧ್ಯಕ್ಷರ ಅಸಮರ್ಥತೆ, ಅದಕ್ಷತೆ ವಿರುದ್ಧ ದನಿ ಎತ್ತಿ ಹೋರಾಟ ನಡೆಸಲು ಸಮುದಾಯದ ಶಾಸಕರೂ ನಿರ್ಧರಿಸಿದ್ದಾರೆ.
ಅಚ್ಚರಿ ಎಂದರೆ ನಿಗಮದ ಆಡಳಿತ ಮಂಡಳಿಯಲ್ಲಿರುವರೇ ಅಧ್ಯಕ್ಷರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಬದಲಾವಣೆಗೆ ಒತ್ತಡ ಹಾಕುವ ಅನಿವಾರ್ಯವಿದೆ. ಇದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ‘ವಿಶ್ವವಾಣಿ’ಗೆ ಪ್ರತ್ರಿಕ್ರಿಯೆ ನೀಡಿರುವ ಮಾಜಿ ಸಚಿವ, ಹಿರಿಯ ಶಾಸಕ ಕೃಷ್ಣ ಬೈರೇಗೌಡ, ನಿಗದ ಅಧ್ಯಕ್ಷರು ಹೊಣೆ ವಹಿಸಿಕೊಂಡ ಮೇಲೆ ಜವಾಬ್ದಾರಿ ಯಿಂದ ಕೆಲಸ ಮಾಡಬೇಕು. ಇಲ್ಲವಾದರೆ ಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರು ಹಾಗೂ ನಾನಾ ಪ್ರಮುಖ ರಾಜ್ಯಮಟ್ಟದ ಸಂಘಟನೆಗಳ ಅಧ್ಯಕ್ಷರು
‘ಯೋಗ್ಯತೆ ಇದ್ದರೆ ಕೆಲಸ ಮಾಡಿ. ಇಲ್ಲವೇ ಬಿಟ್ಟು ಹೋಗಿ ಅಧ್ಯಕ್ಷರೇ’ ಎನ್ನುವ ಘೋಷಣೆಯೊಂದಿಗೆ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಶಾಸಕರು ಹೇಳುವುದೇನು ?
ನಿಗಮದಲ್ಲಿ ಸಮುದಾಯದ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ಅಧ್ಯಕ್ಷರು ಮತ್ತು ಬೇರೆಯವರು ಅಭಿವೃದ್ಧಿಯಾಗುತ್ತಿದೆ.
ಇದನ್ನು ಕಳೆದ ಬಾರಿ ವಿಧಾನಸಭೆಯ ಪ್ರಸ್ತಾಪಿಸಿದೆ. ಆದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಇದನ್ನು ಅಲಕ್ಷ್ಯ
ಎನ್ನಬೇಕೋ ಅಥವಾ ಅಧಿಕಾರದ ಮದ ಎನ್ನಬೇಕೋ ತಿಳಿಯುತ್ತಿಲ್ಲ. ಈಗಲೂ ನಿಗಮ ಬರೀ ಅಧ್ಯಕ್ಷರ ಕಾರು, ಬಂಗಲೆಗೆ
ಸೀಮಿತವಾಗಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.
ನಿಗಮ ಶುರುವಾಗಿ ೨ ವರ್ಷಗಳೇ ಆಗಿವೆ. ಆದರೆ ಈವರೆಗೂ ಒಬ್ಬ ವಿದ್ಯಾರ್ಥಿಯಾಗಲಿ, ಒಬ್ಬ ರೈತನಾಗಲಿ ಒಂದು ಪೈಸೆಯಷ್ಟು
ಸಹಾಯ ತೆಗೆದುಕೊಂಡಿರುವ ಉದಾಹರಣೆ ಇಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ನಿಗಮವನ್ನು ಹೇಗಾದರೂ
ಉಳಿಸಲು ಸರಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತೇವೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ವಿಶ್ವ ಒಕ್ಕಲಿಗರ ಮಹಾವೇದಿಕೆ
ನಿಗಮದ ನಿಷ್ಕ್ರಿಯತೆ ಗಮನಿಸಿದರೆ ಅಧ್ಯಕ್ಷರಿಗೆ ಸಮುದಾಯದ ಬಗ್ಗೆ ಅಭಿಮಾನವೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅವರು ಬರೀ ಕ್ಷೇತ್ರ ಸುತ್ತಿಕೊಂಡಿದ್ದಾರೆ. ಇದರ ವಿರುದ್ಧ ನಾವೇ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿಶ್ವ ಒಕ್ಕಲಿಗರ ಮಹಾವೇದಿಕೆ ಅಧ್ಯಕ್ಷ ವೈ.ಡಿ. ರವಿಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಮುದಾಯ ಕಾರ್ಯಕ್ರಮಗಳಿಗೆ ಆದಿಚುಂಚನಗಿರಿ ಸ್ವಾಮೀಜಿಗಳೇ ಆಹ್ವಾನಿಸಿದರೂ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಸಮುದಾಯ ವಿಚಾರಗಳಿಗೆ ಭಾಗವಹಿಸುವುದಿಲ್ಲ. ಇಂಥವರನ್ನು ಅಧ್ಯಕ್ಷರನ್ನಾಗಿ ಮಾಡಿ ಏನು ನಿರೀಕ್ಷಿಸುವುದು. ಈ ವಿಚಾರ ವಾಗಿ ನಾವು ಅನೇಕ ಬಾರಿ ಅಧ್ಯಕ್ಷರನ್ನು ಭೇಟಿಯಾಗಲು ಯತ್ನಿಸಿದ್ದೇವೆ. ಆದರೂ ಕೈಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಈಗ ಸಂಘಟನೆಗಳ ಮೂಲಕ ನಾವೇ ಈಗ ನಿಗಮದ ವಿಚಾರಕ್ಕೆ ಹೋರಾಟ ಮಾಡಬೇಕಾದ ಅನಿವಾರ್ಯವಿದೆ ಎಂದಿದ್ದಾರೆ.
ಒಕ್ಕಲಿಗರ ಸಂಘಟನೆಗಳ ಒಕ್ಕೂಟ
ಈ ನಿಗಮಕ್ಕೆ ಶಾಸಕರನ್ನು ನೇಮಕ ಮಾಡಿದರೆ ಅದು ರಾಜಕೀಯ ಪುನರ್ವಸತಿ ಕೇಂದ್ರವಾಗುತ್ತದೆ ಎಂದು ಹೇಳಿದ್ದೆವು. ಆದರೂ ಶಾಸಕರನ್ನು ನೇಮಕ ಮಾಡಲಾಯಿತು. ಪರಿಣಾಮ ಇಂದು ನಿಷ್ಕ್ರಿಯವಾಗಿದೆ. ವೀರಶೈವ ಮತ್ತು ಲಿಂಗಾಯತ ಅಭಿವೃದ್ಧಿ ನಿಗಮದಲ್ಲಿ ಪರಮಶಿವಯ್ಯ ಅಂಥವರನ್ನು ನಿಗಮಕ್ಕೆ ನೇಮಿಸಬೇಕು. ಇಲ್ಲವಾದರೆ ಹೋರಾಟ ನಿಶ್ಚಿತ ಎಂದು ಕರ್ನಾಟಕ
ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆನಾಲಿಗೌಡ ಹೇಳಿದ್ದಾರೆ. ಆಗಿರುವ ಅನ್ಯಾಯ, ಅಕ್ರಮಗಳ ಬಗ್ಗೆ ಸಂಬಂಧಿಸಿದ ಸಚಿವರು ಅಥವಾ ನಿಗಮದ ಅಧ್ಯಕ್ಷರು ಕೂಡಲೇ ಸಮುದಾಯಕ್ಕೆ ಉತ್ತರ ನೀಡಬೇಕು. ಸದ್ಯದ ಒಕ್ಕಲಿಗರ ಸಂಘಸಂಸ್ಥೆಗಳ ಒಕ್ಕೂಟದಿಂದ ಅನ್ಯಾಯದ ವಿರುದ್ಧ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘ
ಒಕ್ಕಲಿಗರ ಸಣ್ಣ ಉಪ ಜಾತಿಗಳಿವೆ. ಅವುಗಳನ್ನು ಗುರುತಿಸಬೇಕು. ಆ ಸಮುದಾಯ ಸಂಘಟನೆಗಳು, ನಾಯಕರನ್ನು ಕರೆದು ಚರ್ಚಿಸಬೇಕು. ಆ ಉಪ ಜಾತಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು. ಆದರೆ ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು
ಆಗುತ್ತಿಲ್ಲ. ಇಂಥ ಅಧ್ಯಕ್ಷರಿಂದ ಯಾವುದೇ ಪ್ರಯೋಜನ ಆಗಿಲ್ಲಎಂದು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ
ಅಸಮಾಧಾನ ವ್ಯಕ್ತಪಡಿಸಿದ್ದಾರೆ.