Saturday, 23rd November 2024

ಇಪ್ಪತ್ತು ವರ್ಷ ಹಿಂದಿನ ವಿವಾಹ ರದ್ದುಗೊಳಿಸಿದ ಕೌಟುಂಬಿಕ ನ್ಯಾಯಾಲಯ..!

ಜೋಧ್‌ಪುರ: ಒಂದು ವರ್ಷದ ಮಗುವಾಗಿದ್ದಾಗಲೇ ವಿವಾಹವಾಗಿದ್ದ ಯುವತಿಯ(21) ಮದುವೆಯನ್ನು ರಾಜಸ್ಥಾನದ ಕೌಟುಂಬಿಕ ನ್ಯಾಯಾಲಯ ಅನೂರ್ಜಿತಗೊಳಿಸಿದೆ.

ಮಗುವಿಗೆ 1 ವರ್ಷವಾಗಿದ್ದಾಗಲೇ ಆಕೆಯ ಪೋಷಕರು ಮದುವೆ ಶಾಸ್ತ್ರ ನೆರವೇರಿಸಿದ್ದರು. ಯುವತಿಗೆ ಈಗ 21 ವರ್ಷವಾಗಿದೆ. ಇಷ್ಟವಿಲ್ಲದ ಈ ಬಾಲ್ಯ ವಿವಾಹದಿಂದ ನೊಂದಿದ್ದ ಯುವತಿ ನ್ಯಾಯ ಕೊಡಿಸಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಳು.

ಸಾರಥಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೀರ್ತಿ ಭಾರ್ತಿ ಮಾತನಾಡಿ, ರೇಖಾ ಅವರು ತಮ್ಮ ಅಜ್ಜನ ನಿಧನದ ನಂತರ ತಮ್ಮ ಹಳ್ಳಿಯ ಹುಡುಗನಿಗೆ ಒಂದು ವರ್ಷದ ಮಗುವಿದ್ದಾಗಲೇ ವಿವಾಹ ಮಾಡಲಾಗಿತ್ತು ಎಂದಿದ್ದಾರೆ.

ಮದುವೆಯ ಶಾಸ್ತ್ರಗಳಿಗೆ ಒಪ್ಪದ ಆಕೆಯ ಸಂಬಂಧಿಕರು ಜಾತಿ ಪಂಚಾಯತಿ ನಡೆಸಿ ಆಕೆಗೆ 10 ಲಕ್ಷ ರೂ. ದಂಡ ವಿಧಿಸಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಕೀರ್ತಿ ಭಾರತಿ ಹೇಳಿದ್ದಾರೆ.

ಕೌಟುಂಬಿಕ ನ್ಯಾಯಾಲಯದ ಅಧ್ಯಕ್ಷ ಪ್ರದೀಪ್ ಕುಮಾರ್ ಮೋದಿ ಅವರು ವಿವಾಹ ರದ್ದುಗೊಳಿಸುವಂತೆ ಆದೇಶಿಸಿದರು.

ನ್ಯಾಯಾಲಯದ ಆದೇಶದ ನಂತರ ರೇಖಾ, ಇಂದು ನನ್ನ ಕನಸು ನನಸಾಗಿದೆ. ಈಗ ನಾನು ನರ್ಸ್ ಆಗುವತ್ತ ಗಮನ ಹರಿಸುತ್ತೇನೆ. ಇಂದು ನನಗೆ 21 ವರ್ಷವಾಗಿದೆ. 20 ವರ್ಷ ಹಿಂದಿನ ನನ್ನ ಮದುವೆಯನ್ನು ರದ್ದುಗೊಳಿಸುವಿಕೆಯು ನನಗೆ ಮತ್ತು ನನ್ನ ಕುಟುಂಬಕ್ಕೆ ಹುಟ್ಟುಹಬ್ಬದ ಉಡುಗೊರೆಯಾಗಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.‌