Sunday, 24th November 2024

ರಾಜ್ಯ ಬಿಜೆಪಿಗೆ ಮೋದಿ ತುಂಬಿದ ವಿಶ್ವಾಸ

ಅಶ್ವತ್ಥಕಟ್ಟೆ

ranjith.hoskere@gmail.com

ಕರ್ನಾಟಕದಲ್ಲಿ ಉತ್ತಮ ಸಂಘಟನೆಯನ್ನು ಬಿಜೆಪಿಯವರು ಸೃಷ್ಟಿಸಿದ್ದರೂ, ಹಲವು ಕಾರಣಗಳಿಂದ ಅದನ್ನು ತಮ್ಮಷ್ಟಕ್ಕೆ ತಾವೇ ಹಾಳು ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿರುವುದರಿಂದ, ಈ ಬಾರಿ ಇದನ್ನು ಯಾವ ರೀತಿ ನಿಭಾಯಿಸು ತ್ತಾರೆ ಎನ್ನುವುದು ಕಾದು ನೋಡಬೇಕಿದೆ.

ಇಡೀ ದೇಶದಲ್ಲಿ ಅದರಲ್ಲಿಯೂ ಉತ್ತರ ಭಾರತದಲ್ಲಿ ಬಿಜೆಪಿ ಉತ್ತುಂಗ ಸ್ಥಿತಿಯಲ್ಲಿದ್ದರೂ, ದಕ್ಷಿಣ ಭಾರತದಲ್ಲಿ ವಿರುದ್ಧ ವಾತಾ ವರಣವಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಮಾತ್ರ ‘ಭದ್ರಕೋಟೆ’ ಎನ್ನುವ ಸ್ಥಿತಿ ಯಲ್ಲಿತ್ತು. ಆದರೆ ಕಳೆದ ಮೂರು ವರ್ಷದಿಂದ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರದ ವಿರುದ್ಧ ‘ಆಡಳಿತ ವಿರೋಧಿ ಅಲೆ’ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿರುವುದು, ವರಿಷ್ಠರ ಚಿಂತೆಗೆ ಕಾರಣವಾಗಿತ್ತು.

ಹಲವು ಕಾರಣಗಳಿಗೆ ಸಂಘಟನೆಯಲ್ಲಿಯೂ ಸೊರಗುತ್ತಿದ್ದ ಬಿಜೆಪಿಗೆ ಇದೀಗ ‘ಬೂಸ್ಟರ್ ಟಾನಿಕ್’ ದೊರೆತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರು ರ‍್ಯಾಲಿ ಹಾಗೂ ಇತ್ತೀಚಿಗೆ ಪೂರ್ಣಗೊಂಡ ‘ಜನಸ್ಪಂದನ’ ಸಮಾವೇಶದಿಂದ. ಹೌದು, ಯಡಿಯೂರಪ್ಪ ನೇತೃತ್ವದಲ್ಲಿ ಎರಡು ವರ್ಷ ಪೂರೈಸಿದ ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಒಂದು ವರ್ಷ ಪೂರೈಸಿ, ‘ಕಾಮನ್ ಮ್ಯಾನ್ ಸರಕಾರ’ ಎನ್ನುವ ಟ್ರೇಂಡ್ ಸೆಟ್ ಮಾಡುವ ಪ್ರಯತ್ನದಲ್ಲಿ ಬಿಜೆಪಿಯಿದ್ದರೂ, ನಾನಾ ಕಾರಣಗಳಿಗೆ ಬಿಜೆಪಿ ಸರಕಾರ ವಿವಾದದ ಸುಳಿಗೆ ಸಿಲುಕಿತು.

ಅದು 40 ಪರ್ಸೆಂಟ್ ಸರಕಾರದ ಆರೋಪವಿರಬಹುದು, ಹಿಂದೂ-ಮುಸ್ಲಿಂ ಧರ್ಮ ಸಂಘರ್ಷವಿರಬಹುದು ಅಥವಾ ಹಿಂದೂ ಕಾರ್ಯಕರ್ತರ ಕೊಲೆಗೆ ಸಂಬಂಽಸಿದ ಪ್ರಕರಣಗಳ ವಿಷಯಕ್ಕೆ ಇರಬಹುದು. ಒಟ್ಟಾರೆ, ಸರಕಾರದ ವಿರುದ್ಧ ಕೂಗೊಂದು
ಶುರುವಾಗಿತ್ತು. ಆ ಕೂಗು ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ, ಆಡಳಿತ ಪಕ್ಷದ ಕಟ್ಟರ್ ಬೆಂಬಲಿಗರಿಂದಲೇ ಶುರುವಾಗಿದ್ದು
ಬಿಜೆಪಿಯ ಆತಂಕಕ್ಕೆ ಕಾರಣವಾಗಿತ್ತು. ವಿಧಾನಸಭಾ ಚುನಾವಣೆಗೆ ಆರೇಳು ತಿಂಗಳಿರುವ ಹೊಸ್ತಿಲಲ್ಲಿ ಈ ರೀತಿ ಆಡಳಿತ ವಿರೋಧಿ ಕೂಗು, ರಾಜ್ಯ ಮತ್ತು ಕೇಂದ್ರ ನಾಯಕರ ಆತಂಕಕ್ಕೆ ಕಾರಣವಾಗಿತ್ತು ಎಂದರೆ ಸುಳ್ಳಲ್ಲ.

ಆದರೆ ಈ ವಿರೋಧಿ ಕೂಗನ್ನು ಬಗ್ಗುಬಡಿದು, ಆಡಳಿತ ಪರ ಅಲೆಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಬಳಿ ಸಾಕಷ್ಟ ಸಮಯ ವಿರಲಿಲ್ಲ. ಚುನಾವಣೆಗಿರುವ ಕೆಲ ತಿಂಗಳ ಅವಧಿಯಲ್ಲಿ ಪಕ್ಷದ ಮೇಲಿರುವ ಆರೋಪವನ್ನು ಬದಿಗಿಟ್ಟು, ಪಕ್ಷದ ಪರ ಅಲೆ ಎಬ್ಬಿಸುವ ಮಹತ್ತರ ಜವಾಬ್ದಾರಿ ರಾಜ್ಯ ನಾಯಕರ ಮೇಲಿತ್ತು. ಅದರಲ್ಲಿಯೂ ಶಿವಮೊಗ್ಗದಲ್ಲಿ ಹರ್ಷ ಹಾಗೂ ದಕ್ಷಿಣ ಕನ್ನಡದಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಪಕ್ಷದ ವಿರುದ್ಧ ಎದ್ದಿದ್ದ ಆಕ್ರೋಶವನ್ನು ತಣ್ಣಗಾ ಗಿಸದಿದ್ದರೆ, ಮುಂಬರುವ ಚುನಾವಣೆಯಲ್ಲಿ ಹಿನ್ನಡೆಯಾಗುವುದು ನಿಶ್ಚಿತ ಎನ್ನುವುದು ಬಹುತೇಕ ನಾಯಕರಿಗೆ ತಿಳಿದಿತ್ತು.

ಅದರಲ್ಲಿಯೂ ಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಕನ್ನಡದಲ್ಲಿನ ಆಕ್ರೋಶ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿತ್ತು. ಈ ವಿರೋಧಿ ಅಲೆಯನ್ನು ತಣಿಸುವ ಸಲುವಾಗಿ ಬಿಜೆಪಿ ನಾಯಕರು ಮಾಡಿದ ಮೊದಲ ಪ್ರಯತ್ನವೆಂದರೆ, ದಕ್ಷಿಣ
ಕನ್ನಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಹಾಗೂ ಸಾರ್ವಜನಿಕ ಸಮಾವೇಶ. ಸೆಪ್ಟೆಂಬರ್ ಆರಂಭದಲ್ಲಿ
ಮಂಗಳೂರಿನ ಬಂದರು ಹಾಗೂ ನಾನಾ ಕಾಮಗಾರಿಗಳ ಉದ್ಘಾಟನೆಗಾಗಿ ದಕ್ಷಿಣ ಕನ್ನಡಕ್ಕೆ ಆಗಮಿಸಿದ ಮೋದಿ ಅವರು, ಸ್ಥಳೀಯ ಕಾರ್ಯಕರ್ತರನ್ನು ಹಾಗೂ ಮತದಾರರಲ್ಲಿದ್ದ ಆಕ್ರೋಶವನ್ನು ತಣಿಸುವಲ್ಲಿ ಒಂದು ಮಟ್ಟಿಗೆ ಯಶಸ್ವಿ ಯಾದರು.

ಲಕ್ಷಾಂತರ ಮಂದಿ ಭಾಗವಹಿಸಿದ್ದ ಕಾರ್ಯಕ್ರಮದ ಮೂಲಕ, ಈ ಹಿಂದೆ ಪ್ರವೀಣ್ ನೆಟ್ಟಾರ್ ಕೊಲೆಯಾದ ಸಮಯದಲ್ಲಿ ಬಿಜೆಪಿ ವಿರುದ್ಧ ಎದ್ದಿದ್ದ ಆಕ್ರೋಶ ತಣ್ಣಗಾದಂತೆ ಕಾಣಿಸಿತು. ಈ ಮೂಲಕ ಕರಾವಳಿ ಭಾಗವನ್ನು ಮತ್ತೆ ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿ ಒಂದು ಹಂತಕ್ಕೆ ಬಿಜೆಪಿ ಯಶಸ್ವಿಯಾಗಿದೆ. ಇದಾದ ಬಳಿಕ ಬಿಜೆಪಿ ಸಂಘಟನೆಯನ್ನು ಬಲಪಡಿದಿದೆ ಎನ್ನುವು ದನ್ನು ಸಾಬೀತುಪಡಿಸಲು ಬಳಸಿಕೊಂಡ ಮತ್ತೊಂದು ವೇದಿಕೆ ಎಂದರೆ ‘ಜನ ಸ್ಪಂದನ’ ಕಾರ್ಯಕ್ರಮ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ‘ದುರ್ಬಲ’ವಾಗಿದೆ ಎಂದು ಹೇಳುತ್ತಿದ್ದ ಪ್ರತಿಪಕ್ಷಗಳಿಗೆ ಸೆಡ್ಡು ಹೊಡೆದು ಲಕ್ಷಾಂತರ ಮಂದಿಯನ್ನು ಸೇರಿಸಿ ಜನಸ್ಪಂದನ ಕಾರ್ಯಕ್ರಮ ಮಾಡುವ ಮೂಲಕ, ಈ ಭಾಗದಲ್ಲಿ ನಾವು ‘ಬಲಿಷ್ಠ’ರಾಗಲು ಶಕ್ತ ಎನ್ನುವ ಸಂದೇಶವನ್ನು ಸಾರುವ ಕೆಲಸಕ್ಕೆ ಬಿಜೆಪಿ ಕೈಹಾಕಿದೆ. ಇಡೀ ಸಮಾವೇಶವನ್ನು ಸಚಿವರಾದ ಸುಧಾಕರ್ ನೇತೃತ್ವ ವಹಿಸಿದ್ದರೂ, ವಲಸಿಗ ಸಚಿವರಾದ ಎಂಟಿಬಿ ನಾಗರಾಜ್, ಮುನಿರತ್ನ, ಗೋಪಾಲಯ್ಯ ಅವರು ತಮ್ಮ ಬೆಂಬಲಿ ಗರನ್ನು ಸೇರಿಸುವ ಮೂಲಕ ‘ಜನ ಸೇರುವಂತೆ ನೋಡಿಕೊಂಡರು ಎಂದರೆ ತಪ್ಪಾಗುವುದಿಲ್ಲ.

ಹಾಗೇ ನೋಡಿದರೆ ಈ ಎರಡು ಸಮಾವೇಶದಿಂದ ರಾಜ್ಯ ಬಿಜೆಪಿಯಲ್ಲಿ ಏನೋ ಬದಲಾವಣೆ ಬರುತ್ತದೆ ಎಂದಲ್ಲ. ಈ
ರೀತಿಯ ಸಮಾವೇಶಕ್ಕೆ ಜನರನ್ನು ಸೇರಿಸುವುದು ದೊಡ್ಡ ವಿಷಯವಲ್ಲ. ಆದರೆ ಈ ರೀತಿಯ ಸಾಲು ಸಾಲು ಸಮಾವೇಶಗಳ ಮೂಲಕ ‘ಶಕ್ತಿ ಪ್ರದರ್ಶನ’ ಮಾಡಿದರೆ ಬಿಜೆಪಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಂಚ ಸಹಾಯವಾಗುವುದು ನಿಶ್ಚಿತ. ಈ ಕಾರಣಕ್ಕಾಗಿಯೇ ಮುಂದಿನ ಆರೇಳು ತಿಂಗಳಲ್ಲಿ, ಕರ್ನಾಟಕಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ಟ್ರಂಪ್ ಕಾರ್ಡ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾಲು ಸಾಲು ಕಾರ್ಯಕ್ರಮ ಗಳನ್ನು ಆಯೋಜಿಸುವ ಲೆಕ್ಕದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರಿದ್ದಾರೆ.

2024ರಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಉತ್ತಮ ಸ್ಥಾನ ಪಡೆಯಬೇಕಾದರೆ
ಕರ್ನಾಟಕ ಮುಖ್ಯವಾಗುತ್ತದೆ ಎನ್ನುವುದು ದೆಹಲಿ ನಾಯಕರಿಗೆ ಗೊತ್ತಿದೆ. ಆದ್ದರಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಅಗತ್ಯವಿರುವ ಎಲ್ಲ ‘ಬೂಸ್ಟರ್’ ನೀಡಲು ಮುಂದಾಗಿದ್ದಾರೆ.

ಹಾಗೇ ನೋಡಿದರೆ ಬಿಜೆಪಿ ವಿರುದ್ಧ ಜನಾಕ್ರೋಶಕ್ಕಿಂತ ಕಾರ್ಯಕರ್ತರ ಹಾಗೂ ನಿಷ್ಠಾವಂತರ ಆಕ್ರೋಶ ಹೆಚ್ಚಾಗಿದ್ದ ಕೇವಲ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆಯಿಂದಾಗಿಯಲ್ಲ. ಈ ಹಿಂದೆ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಹಿಜಾಬ್, ಝಾಟ್ಕ, ಆಜಾನ್ ವಿವಾದಗಳು ಎದುರಾದಾಗಲೆಲ್ಲ, ಪಕ್ಷದ ನಾಯಕ ಧೋರಣೆ ವಿರುದ್ಧ ಆಂತರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರೊಂದಿಗೆ ಆಡಳಿತದಲ್ಲಿನ ಭ್ರಷ್ಟಾಚಾರ, ತಮ್ಮ ಪಕ್ಷದ ಕಾರ್ಯಕರ್ತರ ಕೆಲಸಗಳಲ್ಲಿಯೇ ವಿಳಂಬ ಧೋರಣೆ, ನಿತ್ಯ ಒಂದಿಲ್ಲೊಂದು ವಿವಾದದಿಂದ ರೋಸಿದ್ದರು. ಈ ಎಲ್ಲದರ ಆಕ್ರೋಶ ಸ್ಫೋಗೊಳ್ಳಲು ಪ್ರವೀಣ್ ನೆಟ್ಟಾರ್ ಹತ್ಯೆ ವೇದಿಕೆಯಾಗಿ ಕಾರ್ಯಕರ್ತರಿಗೆ ಸಿಕ್ಕಿತ್ತು. ಆದರೆ ಈ ರೀತಿ ಆಕ್ರೋಶ ಹೊರಹಾಕಿದವರು, ಪಕ್ಷ ತೊರೆದು ಕಾಂಗ್ರೆಸ್‌ಗೆ ಅಥವಾ ಜೆಡಿಎಸ್‌ಗೆ ಹೋಗುವ ಮನಸ್ಥಿತಿಯಲ್ಲಿ ಇರಲಿಲ್ಲ.

ಬದಲಿಗೆ ಅವರಿಗೆ ಒಂದು ‘ವಿಶ್ವಾಸ’ ಬೇಕಿತ್ತು. ಆ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಹಾಗೂ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸೇರಿದ ಜನರ ಸಂಖ್ಯೆಯಿಂದ ಸಿಕ್ಕಿದೆ. ಆದ್ದರಿಂದ ‘ಇನ್ನಾದರೂ ನಮ್ಮ ರಾಜ್ಯ ನಾಯಕರು
ಸರಿ ಹೋಗಲಿ’ ಎನ್ನುವ ಮಾತಿನೊಂದಿಗೆ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುವ ಲೆಕ್ಕಾಚಾರದಲ್ಲಿ ಎನ್ನುವ
ಆಶಯದಲ್ಲಿ ನಾಯಕರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಹಾಗೂ ಮುಂಬರುವ ದಿನದಲ್ಲಿ ರಾಷ್ಟ್ರ ನಾಯಕರಿಂದ ಬರಲಿರುವ ರ‍್ಯಾಲಿಗಳಿಂದ ಪಕ್ಷ ಸಂಘಟನೆಯನ್ನು ಹೆಚ್ಚಿಸುವುದು ದೊಡ್ಡ ವಿಷಯವಲ್ಲ. ಆದರೆ ರಾಷ್ಟ್ರ ನಾಯಕರು ಬಂದು, ಹಾಕಿ ಕೊಡುವ ಬುನಾದಿಯನ್ನು ಇಲ್ಲಿರುವ ನಾಯಕರು ಮುಂದುವರಿಸಿಕೊಂಡು ಹೋಗಬೇಕಿದೆ. ಕರ್ನಾಟಕದಲ್ಲಿ ಉತ್ತಮ ಸಂಘಟನೆಯನ್ನು ಬಿಜೆಪಿಯವರು ಸೃಷ್ಟಿಸಿದ್ದರೂ, ಹಲವು ಕಾರಣಗಳಿಂದ ಅದನ್ನು ತಮ್ಮಷ್ಟಕ್ಕೆ ತಾವೇ ಹಾಳು ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿ ರುವುದರಿಂದ, ಈ ಬಾರಿ ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ.

ಉಪಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹಾಗೂ ಆನಂತರ ನಡೆದ ಧರ್ಮ ಸಂಘರ್ಷಗಳು, ಕಾನೂನು ಸುವ್ಯವಸ್ಥೆಯಲ್ಲಿನ ಲೋಪದಿಂದ ರಾಜ್ಯ ಬಿಜೆಪಿ ಸರಕಾರ ಭಾರಿ ಹಿನ್ನಡೆಯಾಗಿದ್ದು ಸ್ಪಷ್ಟ. ಆದರೀಗ ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರಿನ ಕಾರ್ಯಕ್ರಮ, ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ, ದೊಡ್ಡಬಳ್ಳಾಪುರ ದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಈ ಹಿನ್ನಡೆಯನ್ನು ಸರಿದೂಗಿಸಲು ಟಾನಿಕ್ ನೀಡಿರುವುದೂ ಸುಳ್ಳಲ್ಲ.

ಆದರೆ ಈಗ ರಾಜ್ಯ ಬಿಜೆಪಿಗೆ ಸಿಕ್ಕಿರುವ ಈ ಮುನ್ನಡೆಯನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಹಾಗೂ ಚುನಾವಣಾ ಸಮಯ ದಲ್ಲಿ ಈ ರೀತಿಯ ‘ಬೂಸ್ಟರ್’ಗಳು ಇನ್ನೆಷ್ಟು ಸಿಗಲಿದೆ ಎನ್ನುವುದರ ಮೇಲೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಗದ್ದುಗೆ ಬರುವುದೇ ಇಲ್ಲವೇ ಎನ್ನುವುದು ತೀರ್ಮಾನವಾಗಲಿದೆ.