ನಮೀಬಿಯಾದಿಂದ 8 ಆಫ್ರಿಕನ್ ಚೀತಾಗಳು ಮಧ್ಯಪ್ರದೇಶಕ್ಕೆ ಬಂದಿಳಿದಿವೆ. ಅಲ್ಲಿಂದ ಕುನೋ ನ್ಯಾಷನಲ್ ಪಾರ್ಕ್ಗೆ ಚೀತಾ ಗಳನ್ನು ಸಾಗಿಸಲಾಗಿದೆ. ಚೀತಾವನ್ನು ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ವಿಮಾನದ ಮೂಲಕ ಸಾಗಿಸಿರುವುದು ವಿಶ್ವದಲ್ಲೇ ಇದು ಮೊದಲ ಬಾರಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದಿರುವ 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಇಂದು ಬಿಡುಗಡೆ ಮಾಡಿದ್ದಾರೆ.
ಭಾರತವು ಈ ವರ್ಷ 20 ಆಫ್ರಿಕನ್ ಚೀತಾಗಳನ್ನು ಸ್ವೀಕರಿಸಬೇಕಿತ್ತು. ಅವುಗಳಲ್ಲಿ 8 ಚೀತಾಗಳು ನಮೀಬಿಯಾದಿಂದ ಆಗಮಿಸಿದ್ದು, ಇನ್ನೂ 12 ಚೀತಾಗಳು ದಕ್ಷಿಣ ಆಫ್ರಿಕಾ ದಿಂದ ಆಗಮಿಸಬೇಕಾಗಿದೆ.
ಚೀತಾಗಳನ್ನು ವಿಮಾನಕ್ಕೆ ಹತ್ತಿಸುವ ಮುನ್ನ ಅವುಗಳನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಯಾವುದೇ ಸೋಂಕಿಗೆ ತುತ್ತಾಗ ದಂತೆ, ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿತ್ತು.
ಭಾರತವು ಹಿಂದೆ ಏಷ್ಯಾಟಿಕ್ ಚಿರತೆಗಳಿಗೆ ನೆಲೆಯಾಗಿತ್ತು. ಆದರೆ 1952 ರ ವೇಳೆಗೆ ಈ ಪ್ರಭೇದವು ದೇಶೀಯವಾಗಿ ಅಳಿವಿನಂಚಿ ನಲ್ಲಿದೆ ಎಂದು ಘೋಷಿಸಲಾಯಿತು. ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ವನ್ಯ ಮೃಗಗಳ ಸ್ಥಳಾಂತರ ಯೋಜನೆಯ ಭಾಗವಾಗಿ ಇದೀಗ 8 ಚಿರತೆಗಳನ್ನು ನಮೀಬಿಯಾದಿಂದ ಭಾರತಕ್ಕೆ ತರಲಾಗಿದೆ. ಈ ಚೀತಾಗಳು ವಾಸವಾಗಲಿರುವ ಕುನೋ ರಾಷ್ಟ್ರೀಯ ಉದ್ಯಾನವನವು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿದೆ.