ಕಬ್ಬು ಖರೀದಿ ತಡವಾದ ಹಿನ್ನೆಲೆಯಲ್ಲಿ ಬೇರೆ ಕಾರ್ಖಾನೆಯವರು ಈಗಾಗಲೇ ಒಂದು ಲಕ್ಷ ಟನ್ ಕಬ್ಬು ಖರೀದಿ ಮಾಡಿದ್ದಾರೆ. ನಮ್ಮ ಕಾರ್ಖಾನೆಯಿಂದ ಶೇ. ನೂರರಷ್ಟು ಕಬ್ಬು ಖರೀದಿ ಮಾಡಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತರ ಕಬ್ನು ಖರೀದಿ ಮಾಡಲಾಗುತ್ತದೆ. ಕಾರ್ಖಾನೆ ಆರಂಭ ಕುರಿತು ಮಾತುಕೊಟ್ಟಂತೆ ನಡೆದುಕೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಸೆ.30 ರ ನಂತರ ಕಾರ್ಖಾನೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಗುವುದು. ಶಾಶ್ವತವಾಗಿ ಈ ಕಾರ್ಖಾನೆ ನಡೆಯಬೇಕೆನ್ನುವುದು ಸರಕಾರದ ಆಶಯವಾಗಿದೆ ಎಂದರು.
ಸಕ್ಕರೆ ಕಾರ್ಖಾನೆ ಮೈಷುಗರ್ ಕಾರ್ಖಾನೆಗೆ ಕಬ್ಬಿನ ಕಂತೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೆಪ್ಟೆಂಬರ್ 1ರಂದು ಚಾಲನೆ ನೀಡಿದ್ದರು. ರಾಜ್ಯದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್, ಇದು ರೈತರ ಬದುಕಿನ ಜೀವನಾಡಿಯಾಗಿದ್ದು, ಲಾಭದಾಯಕ ವಾಗಿ ನಡೆಯುವಂತಾಗಬೇಕು. ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಅವರ ಇಚ್ಚೆಯಂತೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ನಡೆಯಲಿದೆ ಎಂದು ಭರವಸೆ ನೀಡಿದ್ದರು.
ಸದ್ಯ 4 ಸಾವಿರ ಟನ್ ಕಬ್ಬು ಅರೆಯುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ಇನ್ನೂ ಸಣ್ಣ ಪುಟ್ಟ ಸಮಸ್ಯೆಗಳು ಇವೆ. ಪ್ರಾಯೋಗಿಕವಾಗಿ ಕಾರ್ಖಾನೆಯನ್ನು ಚಾಲನೆ ಮಾಡಲಾಗಿದೆ. ಇದರಿಂದ ಎಲ್ಲೆಲ್ಲಿ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೋ ಅವೆಲ್ಲವನ್ನೂ ಪರಿಹರಿಸಿ ಮುನ್ನಡೆಸಲಾಗುವುದು. ಎಂಟತ್ತು ದಿನಗಳ ನಂತರ ಮುಖ್ಯಮಂತ್ರಿಗಳನ್ನು ಕರೆಯಿಸಿ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಬಳಿಕ ಯಾವುದೇ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು.