ಇದೇ ಅಂತರಂಗ ಸುದ್ದಿ
vbhat@me.com
ಒಂದು ಸಾಧನೆ ಮಾಡಿ ಸಂಭ್ರಮಿಸುತ್ತ ಅದರಲ್ಲಿಯೇ ಕಾಲ ಕಳೆಯುವುದರ ಬದಲು, ಅದನ್ನು ಬಿಟ್ಟು ಮತ್ತೊಂದು ಸಾಧನೆಗೆ ಮುಖ ಮಾಡಬೇಕು. ಒಂದೇ ಕೆಲಸವನ್ನು ಜೀವನವಿಡೀ ಮಾಡುವುದು ನೀರಸವೇ. ನಮ್ಮಲ್ಲಿರುವ ಸಾಮರ್ಥ್ಯವನ್ನು ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಬೇಕು. ಅದು ಸಾಧ್ಯವಿದೆ.
ಪೀಟರ್ ಅಟಕಿನ್ಸ್ ಎಂಬ ತಂತ್ರಜ್ಞ, ಮೈಕ್ರೋಸಾಫ್ಟ್ ಕಂಪನಿಯ ಮಾಜಿ ಉದ್ಯೋಗಿ ಮತ್ತು ಬಿಜಿನೆಸ್ ಮ್ಯಾನೇಜಮೆಂಟ್ ಗುರು ಒಂದು ಚೆಂದದ ಪುಸ್ತಕ ಬರೆದಿದ್ದಾನೆ. ಅದರ ಹೆಸರು Life Is Short And So Is This Book : Brief thoughts on making the most of your life.
ಜೀವನ ಬಹಳ ಚಿಕ್ಕದು. ನೀವು ಕಷ್ಟಪಟ್ಟು ದುಡಿದರೆ, ನೀವು ಅದೃಷ್ಟವಂತ ರಾಗಿದ್ದರೆ, ನಿಮಗೆ ಸಿಕ್ಕ ಅಲ್ಪ ಜೀವಿತಕಾಲದಲ್ಲಿ ಮಹಾನ್ ಸಾಧನೆಯನ್ನು ಮಾಡಬಹುದು. ಸಾಮಾನ್ಯವಾಗಿ ಮನುಷ್ಯನ ಜೀವಿತ ಅವಧಿ ಸುಮಾರು ಇಪ್ಪತ್ತೈದು ಸಾವಿರ ದಿನಗಳು. ಒಬ್ಬ ವ್ಯಕ್ತಿ ನೆನಪಿರುವಂಥ ಸಾಧನೆ ಮಾಡಲು ಇಪ್ಪತ್ತೈದು ಸಾವಿರ ದಿನಗಳು ಸಾಕು. ಹೀಗಿರುವಾಗ ಈ ದಿನ ಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಏನಾದರೂ ಸಾಧನೆ ಮಾಡಲು ಇಷ್ಟು ದಿನ ಸಾಲದಾ? ತುಸು ಯೋಚಿಸಿ.
ನಮಗೆ ಹೆಚ್ಚು ಸಮಯ ಇದ್ದರೆ, ಇನ್ನಷ್ಟು ವಿವರವಾಗಿ ಬರೆಯುತ್ತಿದ್ದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಪೀಟರ್ ಅಟಕಿನ್ಸ್ ಹೇಳುತ್ತಾರೆ – ‘”If I had more time, I would have written a shorter letter’ (ನನಗೆ ಇನ್ನಷ್ಟು ಸಮಯ ಇದ್ದಿದ್ದರೆ, ನಾನು ಇನ್ನೂ ಚಿಕ್ಕದಾದ ಪತ್ರ ಬರೆಯುತ್ತಿದ್ದೆ). ನಾವು ದೊಡ್ಡ ಸಾಧನೆ ಮಾಡಲು ಶತಾಯುಷಿಗಳಾಗ ಬೇಕಿಲ್ಲ. ಸುದೀರ್ಘ ಕಾಲ ಬದುಕಬೇಕಿಲ್ಲ.
ನಮಗೆ ಸಿಕ್ಕ ಚಿಕ್ಕ ಜೀವಿತ ಅವಽಯಲ್ಲಿ ಈ ಸಮಾಜ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಘನ ಕಾರ್ಯವನ್ನು ಮಾಡಬಹುದು. ನಾವು ಎಷ್ಟು ವರ್ಷ ಬದುಕಿದೆವು ಎನ್ನುವುದು ಮುಖ್ಯವಲ್ಲ. ಬದುಕಿದ ಕಿರು ಅವಧಿಯಲ್ಲಿ ಹೇಗೆ ಜೀವಿಸಿದೆವು, ಯಾವ ಸಾಧನೆ
ಮಾಡಿದೆವು ಎನ್ನುವುದೇ ಮುಖ್ಯ. ಈ ಜಗತ್ತಿನಲ್ಲಿ ಮಹಾನ್ ಸಾಧನೆ ಮಾಡಿದವರೆಲ್ಲ ಬಹಳ ವರ್ಷ ಬದುಕಿದವರಲ್ಲ. ಅರವತ್ತು ವರ್ಷಕ್ಕಿಂತ ಕಡಿಮೆ ವರ್ಷ ಬದುಕಿದ, ಆದರೆ ಈ ಜಗತ್ತು ಶತಶತಮಾನಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಕಾರ್ಯವನ್ನು ಮಾಡಿದ ಅವೆಷ್ಟೋ ಮಹಾತ್ಮರಿದ್ದಾರೆ.
ಅಂದರೆ ಈ ಪ್ರಪಂಚ ನೆನಪಿನಲ್ಲಿಟ್ಟುಕೊಳ್ಳುವಂಥ ಕಾರ್ಯ ಮಾಡಲು ಸುದೀರ್ಘ ಕಾಲ ಬದುಕಬೇಕಿಲ್ಲ. ನಮಗೆ ಸಿಕ್ಕ ಅಲ್ಪ ಕಾಲಾವಧಿಯ ಗಣನೀಯ ಸಾಧನೆ ಮಾಡಬಹುದು. ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರಿಂದ ಹಿಡಿದು ಸ್ಟೀವ್ ಜಾಬ್ಸ್ ತನಕ ಮಹಾನ್ ಸಾಧಕರೆಂದು ಕರೆಯಿಸಿಕೊಂಡವರೆಲ್ಲ ಅಲ್ಪಾವಧಿಗೆ ಬದುಕಿದವರೇ. ಇವರೆಲ್ಲರೂ ಪ್ರಾತಃ ಸ್ಮರ ಣೀಯರಾದರು. ಹುಟ್ಟಿದವರೆಲ್ಲರೂ ದೀರ್ಘಾಯುಷ್ಯವನ್ನು ಬಯಸುತ್ತಾರೆ.
ಮೃತ್ಯಂಜಯರಾಗಲು ತವಕಿಸುತ್ತಾರೆ. ದೇವರೇನಾದರೂ ಹಠಾತ್ ಪ್ರತ್ಯಕ್ಷನಾದರೆ, ಎಲ್ಲರೂ ಕೇಳುವುದು ದೀರ್ಘಾಯುಷ್ಯ ವನ್ನೇ. ಮರುಜನ್ಮದಲ್ಲಿ ನಂಬಿಕೆಯಿದ್ದವರು ಕೇಳುವುದು ಮತ್ತೊಮ್ಮೆ ಮನುಷ್ಯನಾಗಿ ಹುಟ್ಟಿ ಬರಲೆಂದು. ಹಾಗೆ ಹುಟ್ಟಿದ ನಂತರ ಕೇಳುವುದು ಮತ್ತೆ ದೀರ್ಘಾಯುಷ್ಯವನ್ನೇ. ಆದರೆ ಅಷ್ಟು ವರ್ಷ ಬದುಕಿ ತಾವೇನು ಮಾಡುತ್ತೇವೆ ಎಂಬುದನ್ನು ಮಾತ್ರ ಹೇಳು ವುದಿಲ್ಲ, ನಿರ್ಧರಿಸಿರುವುದಿಲ್ಲ.
ಆಮೆಯೊಂದನ್ನು ಹೊರತುಪಡಿಸಿ ಯಾವ ಪ್ರಾಣಿಯೂ, ಅದು ನಾಯಿ, ಕತ್ತೆ, ಬೆಕ್ಕು, ಹುಲಿ, ಸಿಂಹವಾಗಿರಬಹುದು, ಇಪ್ಪತ್ತು ವರ್ಷಕ್ಕಿಂತ ಹೆಚ್ಚು ಕಾಲ ಬದುಕುವುದಿಲ್ಲ. ದೇವರು ಮನುಷ್ಯನಿಗೆ ಮಾತ್ರ ಏಕೆ ಅಷ್ಟು ಸುದೀರ್ಘ ಆಯುಷ್ಯವನ್ನು ನೀಡಿ ದ್ದಾನೋ ಗೊತ್ತಿಲ್ಲ. ಮನುಷ್ಯನಿಗೇನಾದರೂ ದೇವರು ಐವತ್ತು ವರ್ಷ ಆಯುಷ್ಯವನ್ನು ನೀಡಿದ್ದರೆ, ನೂರು ವರ್ಷ
ಬದುಕಿದ್ದಿದ್ದರೆ ಮಾಡುವಷ್ಟು ಸಾಧನೆಯನ್ನು, ಅಷ್ಟು ಅವಧಿಯಲ್ಲಿ ಮಾಡಿರುತ್ತಿದ್ದ. ಶಂಕರರು ಆ ಕಾಲದಲ್ಲಿಯೇ ಬರಿಗಾಲಲ್ಲಿ ಭಾರತವನ್ನು ನಾಲ್ಕು ಸಲ ಸುತ್ತು ಹಾಕಲಿಲ್ಲವೇ? ಸಾಧನೆಗೂ, ಸುದೀರ್ಘ ಆಯುಷ್ಯಕ್ಕೂ ಯಾವ ಸಂಬಂಧವೂ ಇಲ್ಲ.
ಈ ಜಗತ್ತು ಮೆಚ್ಚುವ ಸಾಧನೆ ಮಾಡಲು ಅತಿ ಹೆಚ್ಚೆಂದರೆ ಹತ್ತು ವರ್ಷಗಳು ಸಾಕಂತೆ. ಉಳಿದವು ಬದುಕಿದ್ದಷ್ಟು ಸಮಯ
ಅವುಗಳ ಮೆಲುಕು ಹಾಕುವುದು. ಇದು ಪೀಟರ್ ಅಟಕಿನ್ಸ್ನ ಪುಸ್ತಕದ ಸಾರಾಂಶ. ಈ ಪುಸ್ತಕ ಓದಿದ ನಂತರ ನನಗೆ ಅನಿಸಿದ್ದು, ನಾವು ಒಂದೇ ಜೀವಿತ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬದುಕನ್ನು ಬಾಳಲು ಸಾಧ್ಯವಿರುವುದು. ನೀವು ಈ ಬದುಕಿನಲ್ಲಿ ಕ್ರಿಕೆಟ್ ಆಟಗಾರನಾಗಿ ಸಾಧನೆ ಮಾಡಿ, ಕ್ರಿಕೆಟ್ ಆಟಗಾರನಾಗಿಯೇ ಸಾಯಬೇಕಿಲ್ಲ.
ಕ್ರಿಕೆಟ್ ಆಟಗಾರನಾಗಿ ನಿವೃತ್ತಿ ಹೊಂದಿದ ಬಳಿಕ, ಒಳ್ಳೆಯ ಗಾಲ್ಫ್ ಆಟಗಾರರೂ ಆಗಬಹುದು, ಬಿಲಿಯರ್ಡ್ಸ್
ಆಟಗಾರರೂ ಆಗಬಹುದು. ಅಂದರೆ ಒಂದು ಬದುಕಿನಲ್ಲಿ ಒಂದಕ್ಕಿಂತ ಹೆಚ್ಚು ಅವತಾರಗಳಲ್ಲಿ, ಕ್ಷೇತ್ರಗಳಲ್ಲಿ ಸಾಧನೆ
ಮಾಡಬಹುದು. ಆದರೆ ನೂರರಲ್ಲಿ ತೊಂಬತ್ತೆಂಟು ಮಂದಿ ಒಂದು ಸಾಧನೆ ಮಾಡಿ ವಿರಮಿಸುತ್ತಾರೆ. ತಮ್ಮಲ್ಲಿರುವ
ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸದೇ ನಿರರ್ಥಕಗೊಳಿಸುತ್ತಾರೆ. ಒಂದು ಸಾಧನೆ ಮಾಡಿ ಸಂಭ್ರಮಿಸುತ್ತ
ಅದರಲ್ಲಿಯೇ ಕಾಲ ಕಳೆಯುವುದರ ಬದಲು, ಅದನ್ನು ಬಿಟ್ಟು ಮತ್ತೊಂದು ಸಾಧನೆಗೆ ಮುಖ ಮಾಡಬೇಕು.
ಒಂದೇ ಕೆಲಸವನ್ನು ಜೀವನವಿಡೀ ಮಾಡುವುದು ನೀರಸವೇ. ನಮ್ಮಲ್ಲಿರುವ ಸಾಮರ್ಥ್ಯವನ್ನು ಬೇರೆ ಬೇರೆ ಕ್ಷೇತ್ರಗಳಿಗೂ
ವಿಸ್ತರಿಸಬೇಕು. ಅದು ಸಾಧ್ಯವಿದೆ. ಯೋಚಿಸಿ.
ಯಾರು ಡಮ್ಮಿ?
ಇಂದು ಇಡೀ ದೇಶದ ರಾಜಕಾರಣದ narratives ಸಾಕಷ್ಟು ಬದಲಾಗಿದೆ. ಮೋದಿ ಅವರು ರಾಷ್ಟ್ರ ರಾಜಕಾರಣದ ರಂಗ ಸ್ಥಳಕ್ಕೆ ಬಂದ ನಂತರ, ಹಳೆ ಪಟ್ಟುಗಳೆಲ್ಲ ಅಪ್ರಸ್ತುತವಾಗಿವೆ. ವೋಟ್ ಬ್ಯಾಂಕ್ ಪೊಲಿಟಿಕ್ಸ್ ಮತಗಳನ್ನು ತಂದು ಕೊಡುತ್ತಿಲ್ಲ. ಮುಸ್ಲಿಮರು ಭದ್ರ ಮತಬ್ಯಾಂಕುಗಳಾಗಿ ಉಳಿದಿಲ್ಲ. ಅದು ಸಾಕಷ್ಟು ಚುನಾವಣೆಗಳಲ್ಲಿ ಸಾಬೀತಾಗಿದೆ. ಅವರನ್ನು ಸೆಳೆಯಲು ಇಷ್ಟು ವರ್ಷ ಅನುಸರಿಸುತ್ತಿದ್ದ ಚೇಷ್ಟೆಗಳೆಲ್ಲ ಈಗ ಫಲಕಾರಿಯಾಗುತ್ತಿಲ್ಲ.
ಜಾತಿ ಧರ್ಮ ದಾಟಿ ಜನ ಮತ ಹಾಕುತ್ತಿದ್ದಾರೆ. ಅಭಿವೃದ್ಧಿ ಮತ್ತು ವಿಕಾಸ ಜನರ ಮಂತ್ರಗಳಾಗುತ್ತಿವೆ. ರಾಷ್ಟ್ರ ಭಕ್ತಿ ಪ್ರಾಮುಖ್ಯ ಪಡೆದುಕೊಂಡಿದೆ. ನಾಯಕರ ವೈಯಕ್ತಿಕ ಚಾರಿತ್ರ್ಯ, ವ್ಯಕ್ತಿತ್ವ ಶುದ್ಧತೆ ಮಾನದಂಡಗಳಾಗಿವೆ. ಸೋಶಿಯಲ್ ಮೀಡಿಯಾ ಸರಕಾರಕ್ಕಿಂತ ದೊಡ್ಡ ವ್ಯವಸ್ಥೆಯಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯವೂ ಮಾನ್ಯತೆ ಪಡೆಯುತ್ತಿದೆ. ಯಾರು ಬೇಕಾದರೂ ಇಂದು ’ಚಿಯರ್ ಲೀಡರ್’ ಆಗಬಹುದಾಗಿದೆ.
ಹತ್ತು ವರ್ಷಗಳಲ್ಲಿ ಭಾರತದ ರಾಜಕೀಯ ಭೂಪಟ, ಮನಃಪಟ ಸಂಪೂರ್ಣ ಬದಲಾಗಿದೆ. ಜನರ ಚಿಂತನೆಯ ಬ್ಯಾಂಡ್ವಿಡ್ತ್
ಸಹ ಹಿಗ್ಗಿದೆ. ಮೊದಲಿನ ಪಟ್ಟುಗಳ್ಯಾವವೂ ವೋಟು ತಂದು ಕೊಡುವ ಚಮತ್ಕಾರಗಳಾಗಿ ಉಳಿದಿಲ್ಲ. ಈ ಆಟದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಓಡುವ ಕುದುರೆಗಳಾಗಿ ಉಳಿದಿಲ್ಲ. ಅವರ ವರಸೆ ನೋಡಿದರೆ ಪಿಂಜರಾಪೋಲಿಗೆ ಸೇರುವ ದನದಂತಿದ್ದಾರೆ. ಅವರು ಈಗಿನ ಜಾಯಮಾನದ ಜನರಿಗೆ ಕನೆಕ್ಟ್ ಆಗುವುದು
ಕಾಣೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಏನೋ ಸಾಧಿಸಬಹುದು ಎಂದುಕೊಂಡವರಿಗೆಲ್ಲ ಭ್ರಮನಿರಸನವಾಗಿದೆ.
ಅವರು ಪದೇ ಪದೆ ಸೋಲನ್ನು ಅನುಭವಿಸುತ್ತಿದ್ದಾರೆ. 75 ದಾಟಿದ ಸೋನಿಯಾ ಅವರಿಂದ ಯಾವ ಜಾದೂವನ್ನು
ನಿರೀಕ್ಷಿಸುವುದು ಸಾಧ್ಯವಿಲ್ಲ. ಅಷ್ಟಕ್ಕೂ ಸೋನಿಯಾ ಅವರ ಕಾರ್ಯವೈಖರಿ, ನಾಯಕತ್ವ ಭಾರತೀಯರಿಗೆ ಹೊಸತೇನೂ
ಅಲ್ಲ. ಅದನ್ನು ಇಡೀ ದೇಶವೇ ನೋಡಿದೆ. ಅವರ ಸಾಮರ್ಥ್ಯವೇನು ಎಂಬುದು ಗೊತ್ತಿರುವ ಸಂಗತಿಯೇ. ಇನ್ನೂ ಅವರಲ್ಲಿ ಜನರಿಗೆ ಕಾಣದ, ಮುನ್ನೆಲೆಗೆ ಬಾರದ ವಿಷಯಗಳಿವೆ ಎಂದು ಅನಿಸುವುದಿಲ್ಲ.
ಹಾಗೆ ನೋಡಿದರೆ ಅವರು ಗುಂಡು ಖಾಲಿಯಾದ, ಹಳೆ ತುಪಾಕಿ ! ಸೋನಿಯಾ ಅವರಲ್ಲಿ ಮೊದಲಿನ ಕ್ರಿಯಾಶೀಲತೆಯೂ ಇಲ್ಲ. ರಾಹುಲ್ ಐವತ್ತರ ಹೊಸ್ತಿಲ ಠುಸ್ ಪಟಾಕಿ. ಈ ಮಧ್ಯೆ ಪಕ್ಷವನ್ನು ತೊರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ರಾಜ್ಯ ಗಳಲ್ಲೂ ಘಟಾನುಘಟಿ ನಾಯಕರೇ ಪಕ್ಷ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ.
ಮೋದಿ-ಶಾ ಜೋಡಿ ಇದೇ ಪ್ರಮಾಣದಲ್ಲಿ ಮುನ್ನಡೆದರೆ, ಕಾಂಗ್ರೆಸ್ ನಾಮಾವಶೇಷ ವಾಗಲಿದೆ ಎಂದು ಕಾಂಗ್ರೆಸಿಗರೇ ಹೇಳುತ್ತಿದ್ದಾರೆ. ಹಡಗು ಮುಳುಗಬಹುದು ಎಂಬ ಮುನ್ಸೂಚನೆ ಇಲಿಗಳಿಗೆ ಸಿಗಲಾರಂಭಿಸಿದೆ. ಹೀಗಾಗಿ ಈಗಲೇ ದಡ ದಲ್ಲಿರುವ ಹಡಗಿನಿಂದ ಇಲಿಗಳು ಜಿಗಿಯಲಾರಂಭಿಸಿವೆ. ಅವರನ್ನು ತಡೆಯುವ, ಅವರಲ್ಲಿ ಭರವಸೆ ತುಂಬುವ ಕೆಲಸ ಗಳಾಗುತ್ತಿಲ್ಲ. ಅವರ ಮನಸ್ಸಿನಲ್ಲಿರುವ ಭಾವನೆಗಳನ್ನು ಕೇಳುವ ಸಂಯಮವೂ ಯಾರಲ್ಲೂ ಇಲ್ಲ.
ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಸೋಲು. ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾಗುವುದಾದರೆ, ಇನ್ನು ಮುಂದೆ ಪಕ್ಷದಲ್ಲಿ ರಾಹುಲ್ ಪಾತ್ರವೇನು? ರಾಹುಲ್ ಡಮ್ಮಿಯಾಗಿರುತ್ತಾರಾ, ಹೊಸ ಅಧ್ಯಕ್ಷರು ಆ ಪಾತ್ರ ನಿರ್ವಹಿಸುತ್ತಾರೆ? ಈ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.
ಅಂದುಕೊಂಡ ಹಾಗೆ ಆಗುವುದಾ?
ಇತ್ತೀಚೆಗೆ ನಾನು ಒಂದು ಪುಸ್ತಕ ಓದುತ್ತಿದ್ದೆ. ‘ವಾಯ್ನರ್ ಎಕ್ಸ್’ ಕಂಪನಿ ಅಧ್ಯಕ್ಷ, ‘ವಾಯ್ನರ್ ಮೀಡಿಯಾ’ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಐದು ಸಲ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಅತ್ಯುತ್ತಮ ಲೇಖಕ ಪ್ರಶಸ್ತಿಗೆ ಪಾತ್ರನಾದ ಗ್ಯಾರಿ ವಾಯ್ನರ್ಚುಕ್ನ ಅನುಭವವನ್ನು ಓದುತ್ತಿದ್ದೆ.
ಆತ ಹೀಗೆ ಹೇಳುತ್ತಾನೆ : ಮೂವತ್ನಾಲ್ಕು ವರ್ಷಗಳಲ್ಲಿ, ನಾನು ನನ್ನ ತಂದೆಯ ಲಿರ್ಕ್ಕರ್ ವ್ಯವಹಾರವನ್ನು ಅರವತ್ತು ಮಿಲಿಯನ್ ಡಾಲರ್ಗೆ ಏರಿಸಿದೆ. ಯಾವ ವರ್ಷವೂ, ನನಗೆ ಒಂದೂವರೆ ಲಕ್ಷ ಡಾಲರ್ಗಿಂತ ಅಧಿಕ ಗಳಿಕೆ ಸಾಧ್ಯವಾಗಲಿಲ್ಲ. ನನಗೆ ಮೂವತ್ನಾಲ್ಕು ವರ್ಷವಾಗುವವರೆಗೆ, ನಾನು ಇಂಟರ್ನೆಟ್ನಲ್ಲಿ ಒಂದೇ ಒಂದು ಸಾಲನ್ನು ಬರೆದಿರಲಿಲ್ಲ.
ನಾನು ನನ್ನ ಹೆಸರಿನ ‘ವಾಯ್ನರ್ ಮೀಡಿಯಾ’ ಎಂಬ ಕಂಪನಿಯನ್ನು ’ಬಡಿ ಮೀಡಿಯಾ’ ಎಂಬ ಸಂಸ್ಥೆಯ ಕಾನ್ಫೆರೆನ್ಸ್
ರೂಮಿನಲ್ಲಿ ಸ್ಥಾಪಿಸಿದೆ. ಯಾಕೆಂದರೆ ನನಗೆ ನನ್ನದೇ ಆದ ಆಫೀಸು ಇರಲಿಲ್ಲ. ಕಾರಣ ನನ್ನಲ್ಲಿ ಹಣವಿರಲಿಲ್ಲ. ಹಾಗಾದರೆ ಇದರ ಅರ್ಥವೇನು? ನೀವು ಏನೇ ಮಾಡಿ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಹಿಡಿಯುತ್ತದೆ. ನೀವು ಎಷ್ಟೇ ಪರಿಶ್ರಮ ಪಡಿ, ಬೆವರು ಸುರಿಸಿ, ರಾತ್ರಿ-ಹಗಲು ದುಡಿಯಿರಿ, ನೀವು ಅಂದುಕೊಂಡ ಫಲಿತಾಂಶ ನಿರೀಕ್ಷಿತ ಅವಽಯಲ್ಲಿ ಸಿಗುವುದಿಲ್ಲ.
ನೀವು ಒಂದು ತೆಂಗಿನ ತೋಟ, ದ್ರಾಕ್ಷಿ ತೋಟ ಮಾಡಬೇಕು ಎಂದುಕೊಳ್ಳುತ್ತೀರಿ. ಐದು ವರ್ಷಗಳಲ್ಲಿ ಫಲ ಬರಬಹುದು
ಎಂದು ನಿರೀಕ್ಷಿಸುತ್ತೀರಿ. ಆದರೆ ಅಷ್ಟು ಅವಧಿಯಲ್ಲಿ ಬರುವುದಿಲ್ಲ. ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನೀವು ಯಾವುದೋ ಹೊಸ ಉದ್ಯಮ ಆರಂಭಿಸುತ್ತೀರಿ. ಆಗಲೂ ಈ ಮಾತು ನಿಜ. ನೀವು ಈಗಾಗಲೇ ನಿಮ್ಮ ಪಾಟ್ ನರ್ ಜತೆ ಮಾಡುತ್ತಿದ್ದ ಉದ್ಯಮವನ್ನು, ಸ್ವಂತ ಮಾಡಲು ನಿರ್ಧರಿಸುತ್ತೀರಿ. ಅಂದರೆ ನಿಮಗೆ, ಆ ಉದ್ಯಮದ ಉದ್ದ-ಅಗಲ ಗೊತ್ತಿರು ತ್ತದೆ. ಐದು ವರ್ಷಗಳಲ್ಲಿ ಲಾಭ ಮಾಡಬಹುದು ಎಂದು ನೀವು ಲೆಕ್ಕ ಹಾಕಿರುತ್ತೀರಿ.
ಸೋಜಿಗವೆಂದರೆ, ನೀವು ಅಂದುಕೊಂಡ ಹಾಗೆ ಆಗುವುದಿಲ್ಲ. ಲಾಭ ಬರಲು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ
ಹಿಡಿಯುತ್ತದೆ. ಬೇಕಾದರೆ ಪ್ರಯತ್ನಿಸಿ. ಇದರರ್ಥ The bigger the ambition, the slower you need to go. ನಿಮ್ಮ ಆಸೆ, ಯೋಜನೆ ದೊಡ್ಡದಾದಷ್ಟೂ, ನೀವು ನಿಧಾನವಾಗಿ ಸಾಗಬೇಕು. ಯಾವ ಕೆಲಸವೂ ನೀವು ಅಂದು ಕೊಂಡಿದ್ದ ಕ್ಕಿಂತ ಮುಂಚೆ ಮುಗಿಯುತ್ತದೆ ಎಂದು ಭಾವಿಸಬಾರದು.
ಬೇಗ ಮುಗಿದರೆ ಒಳ್ಳೆಯದು. ಆದರೆ ಬೇಗನೆ ಮುಗಿಯುವುದಿಲ್ಲ. ಅದು ವಾಸ್ತವ. ಅಂದರೆ ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಹೊಸ ಸಾಹಸ, ಸಾಧನೆ, ಸಾಧ್ಯತೆಗಳಿಗೆ ಮುಂದಡಿಯಿಡಬೇಕು.
ಅಮೆರಿಕದ ಜೀವನಶೈಲಿ
ಅಮೆರಿಕದ ಜೀವನ ಶೈಲಿಯನ್ನು ಇದಕ್ಕಿಂತ ಕಡಿಮೆ ಪದಗಳಲ್ಲಿ, ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಿಲ್ಲ. ಆಕೆ ತನ್ನ ಮದುವೆಗೆ ಎಲ್ಲರನ್ನೂ ಕರೆದಳು. ಆದರೆ ತನ್ನ ತಂದೆಯನ್ನೇ ಆಮಂತ್ರಿಸಲು ಮರೆತುಬಿಟ್ಟಳು. ಆಗ ಅವಳ ತಂದೆ ಮಗಳನ್ನು ಸಮಾಧಾನಪಡಿಸುತ್ತಾ ಹೇಳಿದನಂತೆ – ‘ಮಗಳೇ, ಪರವಾಗಿಲ್ಲ. ನಿನ್ನ ಮುಂದಿನ ಮದುವೆಗೆ ಕರೆಯಲು ಮರೆಯಬೇಡ’
ಲೇಡಿಸ್ ಫಸ್ಟ್
ನೀವು ಯಾವುದೇ ಕೆಲಸಕ್ಕೆ ಮುಂದಾದಾಗ, ಅಲ್ಲಿ ಮಹಿಳೆಯರಿದ್ದರೆ, ಸಾಮಾನ್ಯವಾಗಿ ಎಲ್ಲರೂ ಹೇಳುವುದೇನೆಂದರೆ, ‘ಲೇಡಿಸ್ ಫಸ್ಟ್’. ಮಹಿಳೆಯರಿಗೆ ಆದ್ಯತೆ ನೀಡುವುದು ಉದ್ದೇಶ. ‘ಲೇಡಿಸ್ ಫಸ್ಟ್’ ಎನ್ನುವುದು ಜನಪ್ರಿಯವಾದ ಪದಪುಂಜ. ‘ಲೇಡಿಸ್ ಫಸ್ಟ್’ ಎಂಬ ಪದಪುಂಜ ಜಾರಿಗೆ ಬಂದಿದ್ದಾರೂ ಹೇಗೆ? ಇದಕ್ಕೆ ಒಂದು ತಮಾಷೆಯ, ಕಾಲ್ಪನಿಕ ಪ್ರಸಂಗ.
ಒಮ್ಮೆ ಪ್ರೇಮಿಗಳಿಬ್ಬರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಹುಡುಗ ಮುಂದೆ ಬಂದ.
ಹುಡುಗಿಯ ಮುಖವನ್ನು ಅಂತಿಮವಾಗಿ ನೋಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ. ನಂತರದ ಸರದಿ
ಹುಡುಗಿಯದು. ಅವಳು ಕಟ್ಟಡದಿಂದ ಜಿಗಿಯಲೇ ಇಲ್ಲ. ಅಂದಿನಿಂದ ‘ಲೇಡಿಸ್ ಫಸ್ಟ್’ ಎಂಬ ಪರಿಕಲ್ಪನೆ ಮೂಡಿದ್ದು.
ಸಂಕಟ ಸಮಯದಲ್ಲಿ…
ತೀರಾ ಸಂಕಷ್ಟದಲ್ಲಿದ್ದಾಗಲೂ, ತಮಾಷೆಯ ಪ್ರಸಂಗ ಎದುರಾಗುತ್ತದೆ. ಆದರೆ ನಮಗೆ ಅದನ್ನು ಗುರುತಿಸುವ ಮನಸ್ಥಿತಿ ಇರಬೇಕಷ್ಟೆ. ನೀವು ಪರೀಕ್ಷಾ ಕೊಠಡಿಯಲ್ಲಿ ಕುಳಿತು, ಪ್ರಶ್ನೆಪತ್ರಿಕೆಯಲ್ಲಿನ ಯಾವ ಪ್ರಶ್ನೆಗೂ ಉತ್ತರ ಗೊತ್ತಿಲ್ಲದೇ ತಿಣುಕಾ ಡುತ್ತಿರುತ್ತೀರಿ. ಮೈ ತಣ್ಣಗೆ ಬೆವರುತ್ತಿರುತ್ತದೆ. ಫೇಲಾಗುವುದು ಗ್ಯಾರಂಟಿ ಎಂದು ನಿಮಗೆ ಖಚಿತವಾಗುತ್ತದೆ. ಆಗ ಅಲ್ಲಿಗೆ ಪರೀಕ್ಷಾ ಮೇಲ್ವಿಚಾರಕನೊಬ್ಬ ಹತ್ತಿರ ಬಂದು ಹೇಳುತ್ತಾನೆ – ‘ಸರಿಯಾಗಿ ಕುಳಿತುಕೊಳ್ಳಿ. ಇಲ್ಲದಿದ್ದರೆ ನಿಮ್ಮ
ಉತ್ತರವನ್ನು ಪಕ್ಕದಲ್ಲಿರುವವರು ಕಾಪಿ ಮಾಡಬಹುದು.’