Thursday, 12th December 2024

ಅಲ್ಲಿನ ನೆಲದಾಳದಲ್ಲಿ ಹರಿಯುತ್ತಿದೆಯೆ ಒಂದು ದ್ವೇಷದ ನದಿ?

ಶಶಿಧರ ಹಾಲಾಡಿ

ಅಮೆರಿಕ ಎಂಬ ಸ್ವಪ್ನ ನಗರಿಯ ಚಿತ್ರಣ ಸಾಬೂನು ಗುಳ್ಳೆಯಂತೆ ಒಡೆದುಹೋಗಿದೆ. ಇಪ್ಪತ್ತನೆಯ ಶತಮಾನದಲ್ಲಿ ಜಗತ್ತನ್ನು ಪರೋಕ್ಷವಾಗಿ ಆಳಿದ ಅಮೆರಿಕದ ಸುತ್ತಲೂ ನಿರ್ಮಾಣಗೊಂಡಿದ್ದ ಸುಂದರ ಪ್ರಭಾವಳಿಯು ತುಂಡು ತುಂಡಾಗಿ ಬಿದ್ದಿದೆ. ಅಲ್ಲಿನ ಆರ್ಥಿಕತೆಯು ಕುಸಿದಿರುವುದು ಒಂದು ಆಯಾಮವಾದರೆ, ಅಲ್ಲಿನ ಸಮಾಜದಲ್ಲಿ ಅಂತರ್ಗತವಾಗಿರುವ ಕ್ರೌರ್ಯ, ದ್ವೇಷಭಾವನೆ ಬಯಲಾಗುತ್ತಿದೆ. ಇಷ್ಟು ದಶಕಗಳ ಕಾಲ ಆ ಸಮಾಜವು ಜಾಗರೂಕತೆಯಿಂದ ಪರದೆಯ ಹಿಂದೆ ಮುಚ್ಚಿಟ್ಟಿದ್ದ ಕರಾಳ ಸತ್ಯವೊಂದು ಈಚೆಗಿನ ಕೆಲವು ವರ್ಷಗಳಲ್ಲಿ ಬಟಾಬಯಲಾಗಿದೆ. ಇಡೀ ಜಗತ್ತಿನ ಮತ್ತು ಕೆಲವೊಮ್ಮೆ ಮಾನವ ಕುಲದ ಸ್ವಾತಂತ್ರ್ಯದ ಪ್ರತೀಕ ಎಂದು ಬಿಂಬಿಸಿಕೊಂಡಿದ್ದ, ಹೊಗಳಿಸಿಕೊಂಡಿದ್ದ, ಮುಕ್ತ ಅಭಿವ್ಯಕ್ತಿಗೆ ಮಾದರಿ ಎಂದು ತೋರಿಸಿಕೊಂಡಿದ್ದ ಅಮೆರಿಕದ ಸಾಮಾಜಿಕ ಚೌಕಟ್ಟಿನೊಳಗೊಳಗೇ ಪ್ರವಹಿಸುತ್ತಲೇ ಇದ್ದ ಜನಾಂಗೀಯ ದ್ವೇಷ ಎಂಬ ವಿಷ, ಈಗ ಅಲ್ಲಿನ ರಸ್ತೆಗೆ ಚೆಲ್ಲಿಬಿದ್ದಿದೆ – ಜಗತ್ತಿನೆದುರು ಆ ದೇಶದ ಒಂದು ಕಪ್ಪು ಮುಖ ಬೆತ್ತಲಾಗಿದೆ.
ಹಾಗೆ ನೋಡಹೋದರೆ, ಅಮೆರಿಕದ ಆಂತರಿಕ ಸಾಮಾಜಿಕ ವರ್ತನೆಗಳ ಕುರಿತು ಕಟುವಾಗಿ ವ್ಯಾಖ್ಯಾನಿಸುವ ಹಕ್ಕು ನನಗಿಲ್ಲ ಎಂದು ಕೆಲವರು ವಾದಿಸಬಹುದು. ನಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಅಲ್ಲಲ್ಲಿ ಕಂಡು ಬರುತ್ತಿರುವ ಹಲವು ಸಾಮಾಜಿಕ, ಸಾಂಸ್ಕøತಿಕ ಕುಂದು ಕೊರತೆಗಳ ರೀತಿಯೇ, ಆ ಶ್ರೀಮಂತ ದೇಶದಲ್ಲೂ ವಿಭಿನ್ನ ಆಯಾಮದ ಕೊರತೆಗಳಿವೆ, ಅದು ಅವರವರ ಹಾಡು-ಪಾಡು. ಇನ್ನೂ ಮುಂದೆ ಹೋದರೆ, ಅದು ಅವರ ಆಂತರಿಕ ಸಮಸ್ಯೆ ಎಂದೂ ಹೇಳಿ, ಸುಮ್ಮನಾಗಬಹುದು. ಆದರೆ, ಕಳೆದ ಆರೆಂಟು ದಶಕಗಳ ಕಾಲ ಜಗತ್ತಿನ ಎಲ್ಲಾ ಪ್ರಮುಖ ವಿದ್ಯಮಾನಗಳನ್ನು ತನಗೆ ಬೇಕಾದಂತೆ ನಿಯಂತ್ರಿಸಿ, ಬದಲಿಸಿ, ಬಿಗಿ ವರ್ತನೆ ತೋರಿದ ಅಮೆರಿಕದ ನಡೆಗಳು, ನೀತಿಗಳು ದೂರದ ಭಾರತದ ಮೇಲೂ ಬೃಹತ್ ಮಟ್ಟದ ಪರಿಣಾಮ ಬೀರಿವೆ. ಜತೆಗೆ, ನಮ್ಮ ದೇಶದ ಸಾಮಾಜಿಕ ಸಮಸ್ಯೆ, ಮತೀಯ ಗಲಭೆ, ಜಾತಿ ತಾರತಮ್ಯದ ಕುರಿತು ತನ್ನದೇ ರೀತಿಯಲ್ಲಿ, ತನ್ನದೇ ವಿಧಾನದ ಮೂಲಕ ಟೀಕೆ ಟಿಪ್ಪಣಿಯನ್ನು ಮಾಡಲು ಅಮೆರಿಕ ಸದಾ ತುದಿಗಾಲಲ್ಲಿ ನಿಂತಿರುವುದು ಸಹ ಒಂದು ವಾಸ್ತವ. ಈ ನಿಟ್ಟಿನಲ್ಲಿ ಯೋಚಿಸಿದರೆ, ಅಮೆರಿಕದ ಪ್ರಮುಖ ವಿದ್ಯಮಾನಗಳ ಕುರಿತು ನಾವು ಚರ್ಚಿಸುವುದು, ಚಿಂತಿಸುವುದು ತಪ್ಪೇನಿಲ್ಲ, ಅದು ಅಗತ್ಯ.
ಇದಕ್ಕಿಂತಲೂ ಮುಖ್ಯವಾಗಿ, ನಮ್ಮ ದೇಶದ ಕೆಲವು ಭಾಗಗಳಲ್ಲಿ ಮಾನವ ಹಕ್ಕುಗಳ ದಮನ ನಡೆಯುತ್ತಿದೆ ಎಂದು ಈ ಹಿಂದೆ ಹಲವು ಬಾರಿ, ಅಮೆರಿಕ ಪೆÇೀಷಿತ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಸಂಸ್ಥೆಗಳು ವ್ಯಾಪಕ ಪ್ರಚಾರ ನೀಡಿದ ವಿಚಾರ ಇಲ್ಲಿ ಪ್ರಸ್ತುತ. ಇಲ್ಲಿ ನಡೆದ ಕೆಲವು ಕೋಮುಗಲಭೆಗಳಿಗೆ, ಬಾಲಕಾರ್ಮಿಕರ ಸ್ಥಿತಿಯ ಬಗ್ಗೆ ಅಲ್ಲಿನ ಮಾನವ ಹಕ್ಕುಗಳ ಕಾರ್ಯಕರ್ತರು, ಅಷ್ಟೇಕೆ, ಅಲ್ಲಿನ ಕೆಲವು ರಾಜ್ಯಗಳ ಆಡಳಿತವು ತಮ್ಮದೇ ರೀತಿಯ ವ್ಯಾಖ್ಯಾನಗಳನ್ನು ನಿಡಿ, ನಮ್ಮ ದೇಶಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದು ಹಲವು ಬಾರಿ. ಸಾವಿರಾರು ಮೈಲಿ ದೂರವಿರುವ ಭಾರತದಂತಹ ದೇಶಗಳಲ್ಲಿ ನಡೆದಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿ, ಸಮಾನತೆ ಪ್ರತಿಪಾದಿಸಲು ಸದಾ ಯತ್ನಿಸುತ್ತಿಲೇ ಇರುವ ಅಮೆರಿಕದಲ್ಲಿ ಈಗ ಆಗುತ್ತಿರುವುದೇನು? ಈ ಹಿಂದೆ ಹಿಂಸೆಯ ಕುರಿತಾದ ಅಲ್ಲಿನ ಇತಿಹಾಸವೇನು? ಆ ಸಮಾಜದಲ್ಲಿ ಅಂತರ್ಗತವಾಗಿ ದ್ವೇಷದ ನದಿಯೊಂದು ಯಾವಾಗಲೂ ಹರಿಯುತ್ತಿದೆಯೆ?
ಜಾರ್ಜ್ ಫ್ಲಾಯ್ಡ್ ಎಂಬ ಕರಿಯ ಜನಾಂಗದ ವ್ಯಕ್ತಿಯನ್ನು ಮೇ 25ರಂದು ಅಮೆರಿಕದ ಡೆರೆಕ್ ಚಾವಿನ್ ಎಂಬ ಬಿಳಿಯ ಪೆÇಲೀಸ್, ಉಸಿರುಗಟ್ಟಿಸಿ ಕೊಂದ. 20 ಡಾಲರ್ ನಕಲಿ ನೋಟನ್ನು ಚಲಾವಣೆ ಮಾಡಲು ಆತ ಯತ್ನಿಸಿದ ಎಂಬುದು ಆಪಾದನೆ. ನಿರಾಯುಧನಾಗಿದ್ದ ಆ ಬಲಶಾಲಿ ಫ್ಲಾಯ್ಡ್‍ನನ್ನು ಪೆÇಲೀಸರು ಸಾಯಿಸಿದ ವಿಧಾನ, ಕ್ರೌರ್ಯವು ಹಲವು ವಿಡಿಯೋಗಳಲ್ಲಿ ಪ್ರದರ್ಶನಗೊಂಡು, ಜಗತ್ತಿನಾದ್ಯಂತ ಚರ್ಚೆಗೆ ಒಳಗಾಗಿದೆ. ಫ್ಲಾಯ್ಡ್‍ನು ರಸ್ತೆಯ ಮೇಲೆ ಬಿದ್ದು, ತನಗೆ ಉಸಿರಾಡಲು ಆಗುತ್ತಿಲ್ಲ ಎಂದು 15ಬಾರಿ ಮನವಿ ಮಾಡಿದರೂ, ಪೆÇಲೀಸ್ ಡೆರೆಕ್ ಚಾವಿನ್ ಬಿಡಲಿಲ್ಲ. ಆರು ನಿಮಿಷಗಳ ಕಾಲ ಆತನ ಕುತ್ತಿಗೆಯ ಮೇಲೆ ಮೊಳಕಾಲೂರಿ ಉಸಿರುಗಟ್ಟಿಸಿದಾಗ, ಫ್ಲಾಯ್ಡ್ ಪ್ರಜ್ಞೆ ಕಳೆದುಕೊಂಡ. ಇನ್ನೂ ಮೂರು ನಿಮಿಷಗಳ ಕಾಲ ಕಾಲನ್ನು ಒತ್ತಿ ಹಿಡಿದು, ಆತ ಸತ್ತದ್ದನ್ನು ಖಚಿತಪಡಿಸಿಕೊಂಡ, ಆ ಕ್ರೂರಿ ಪೆÇಲೀಸ್! ಆತನ ಜತೆ ಇನ್ನೂ ಮೂವರು ಪೆÇಲೀಸರಿದ್ದರು, ಅವರೆಲ್ಲ ಸೇರಿ ಸಲೀಸಾಗಿ ಫ್ಲಾಯ್ಡ್‍ನನ್ನು ಬಂಧಿಸಬಹುದಿತ್ತು. ತನ್ನ ಕಾಲಿನಡಿ ಸಿಕ್ಕಿಬಿದ್ದ ಆ ಕರಿಯ ವ್ಯಕ್ತಿಯ ಕುತ್ತಿಗೆಯನ್ನು ಮೊಣಕಾಲಿನಿಂದ ಒತ್ತುತ್ತಿದ್ದ ಡೆರೆಕ್ ಚಾವಿನ್‍ನಲ್ಲಿ ಎಂತಹ ನಿರ್ಲಕ್ಷ್ಯ ಮತ್ತು ದುರಹಂಕಾರವಿತ್ತೆಂದರೆ, ದಾರಿಯ ಮೇಲೆ ಓಡಾಡುತ್ತಿದ್ದ ಜನರು ಮೊಬೈಲ್‍ನಲ್ಲಿ ಈ ಕ್ರೌರ್ಯವನ್ನು ಚಿತ್ರಿಸುತ್ತಿದ್ದರೂ, ಆತ ಅಳುಕಲಿಲ್ಲ. ಅಮೆರಿಕದಂತಹ ಬಲಾಢ್ಯ ಬಿಳಿಯರ ದೇಶದಲ್ಲಿರುವ ತಾನು, ಕರಿಯ ವ್ಯಕ್ತಿಯನ್ನು ಸಾಯಿಸುವಾಗ, ಯಾರಿಗೆ, ಯಾಕೆ ಹೆದರಬೇಕೆಂಬ ದಾಷ್ಟ್ರ್ಯ ಆತನಲ್ಲಿದ್ದಿರಬಹುದೇ?
ಒಂದು ರೀತಿಯಲ್ಲಿ ನೋಡಿದರೆ, ಆತನ ದುರಹಂಕಾರ ಸಕಾರಣ! ಪ್ರತಿ ವರ್ಷ ಸುಮಾರು 1,000 ಜನರನ್ನು ಅಮೆರಿಕದ ಪೆÇಲೀಸರು ಸಾಯಿಸುತ್ತಾರೆ – ಅವರಲ್ಲಿ ಹಲವರು ನಿರಾಯಧರು! ತುಸುವೇ ಅನುಮಾನ ಬಂದರೂ ಅಲ್ಲಿನ ಪೆÇಲೀಸ್ ಜನರ ಮೇಲೆ ಶೂಟ್ ಮಾಡುತ್ತಾರೆ. 20 ಡಾಲರ್ ನಕಲಿ ನೋಟಿನ ಕ್ಷುಲ್ಲಕ ಪ್ರಕರಣದಲ್ಲಿ ವ್ಯಕ್ತಿಯನ್ನು ಸಾಯಿಸಿದ ಘಟನೆಯನ್ನು ಹೋಲುವ ಹಲವು ಕೊಲೆಗಳನ್ನು ಆ ಪೆÇಲೀಸರು ಕಳೆದ ಕೆಲವು ವರ್ಷಗಳಲ್ಲಿ ಮಾಡಿದ್ದಾರೆ. ಫ್ಲಾಯ್ಡ್‍ನನ್ನು ಸಾಯಿಸಿದ ಬಿಳಿಯ ಪೆÇಲೀಸ್ ಡೆರೆಕ್ ಚಾವಿನ್, ಈ ಹಿಂದೆ ಜನರ ಮೇಲೆ ಶೂಟ್ ಮಾಡಿದ್ದ! ಆತನ ವರ್ತನೆಯ ವಿರುದ್ಧ 17 ತನಿಖೆಗಳಾಗಿದ್ದವು. ಆದರೆ ಆತನಿಗೆ ಸಣ್ಣ ಪ್ರಮಾಣದ ಶಿಕ್ಷೆಯಾಗಿದ್ದು ಕೇವಲ ಒಂದು ಬಾರಿ. ಅಮೆರಿಕದ ಪೆÇಲೀಸ್ ದೌರ್ಜನ್ಯದ ಕೆಲವು ದಾಖಲೆಗಳು ಇದನ್ನು ಹೋಲುತ್ತವೆ. ಕಳೆದ 15 ವರ್ಷಗಳ ಅವಧಿಯಲ್ಲಿ ಸುಮಾರು 15,000 ಜನರನ್ನು ಅಲ್ಲಿನ ಪೆÇಲೀಸರು ಸಾಯಿಸಿದ್ದಾರೆ. ಆ ಅವಧಿಯಲ್ಲಿ ಕೇವಲ 35 ಪೆÇಲೀಸರಿಗೆ ದೌರ್ಜನ್ಯದ ವಿರುದ್ಧ ಶಿಕ್ಷೆಯಾಗಿದೆ. ಜಗತ್ತಿನ ಯಾವುದೇ ಅಭಿವೃದ್ಧಿ ಹೊಂದಿದ ದೇಶದಲ್ಲಿ ಈ ಪ್ರಮಾಣದಲ್ಲಿ ಜನರನ್ನು ಸಾಯಿಸುವ ಪದ್ಧತಿ ಇಲ್ಲ. ಈ ರೀತಿಯ ಪರಂಪರೆ ಹೊಂದಿದ್ದರಿಂದಲೇ, ಮೇ 25ರಂದು ಜಾರ್ಜ್ ಫ್ಲಾಯ್ಡ್ ಎಂಬ ಕರಿಯನನ್ನು ಆ ಬಿಳಿಯ ಪೆÇಲೀಸ್, ರಸ್ತೆಯ ಪಕ್ಕ, ಹಗಲಿನಲ್ಲಿ, ಸಾರ್ವಜನಿಕರ ಎದುರು ಉಸಿರುಗಟ್ಟಿಸಿ ಸಾಯಿಸುವ ಧೈರ್ಯ ಮಾಡಿದ್ದು.
ಜಗತ್ತಿನ ಯಾವ್ಯಾವುದೋ ದೇಶದ ಮಾನವ ಹಕ್ಕುಗಳ ಕುರಿತು, ಜಾತಿ ಪದ್ಧತಿಯ ಕುರಿತು, ಬಾಲಕಾರ್ಮಿಕರ ಕುರಿತು, ಮತೀಯ ದ್ವೇಷದ ಕುರಿತು ವ್ಯಾಖ್ಯಾನ ಮಾಡುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಪಡಿಸುವ, ಅಂತಹ ದೇಶಗಳನ್ನು ತನ್ನದೇ ರೀತಿಯಲ್ಲಿ ಶಿಕ್ಷೆಗೆ ಒಳಪಡಿಸುವ ಅಮೆರಿಕದಲ್ಲಿ, ಜನಸಾಮಾನ್ಯರ ಮೇಲೆ ಇಂತಹ ಕ್ರೌರ್ಯವೆ? ಅದರಲ್ಲೂ ವಿಶೇಷವಾಗಿ ಕರಿಯ ಜನಾಂಗದ ವಿರುದ್ಧ ತಾರತಮ್ಯ, ಹಿಂಸೆ ತೋರುವ ನೀತಿಯು ಅಮೆರಿಕದಲ್ಲಿ ಈ ಮಟ್ಟದಲ್ಲಿ ಇಂದಿಗೂ ಇದೆಯೆ? ಹೊರಜಗತ್ತಿಗೆ ತಿಳಿಯದ ಕಪ್ಪು ಮುಖವೊಂದು ಅಮೆರಿಕ ಸಮಾಜದಲ್ಲಿ ಹುದುಗಿದೆಯೆ? ಆ ದೇಶದ ಸಾಮಾಜಿಕ ಚೌಕಟ್ಟಿನಲ್ಲಿ, ಕಪ್ಪು ಜನರ ವಿರುದ್ಧ ದ್ವೇಷದ ಸೆಲೆಯೊಂದು ನೆಲದಾಳದ ನದಿಯಂತೆ ಪ್ರವಹಿಸುತ್ತಿದೆಯೆ?
ಕೋವಿಡ್19 ಸೋಂಕಿನ ಕಾಲದಲ್ಲಿ, ಅದೆಷ್ಟೋ ಜನರ ಮುಖವಾಡ ಕಳಚಿ ಬಿದ್ದು, ಅವರ ನಿಜ ಸ್ವರೂಪ ಬಯಲಾಯಿತು! ಅದೇ ರೀತಿ, ಕೆಲವು ಪ್ರಬಲ ದೇಶಗಳಲ್ಲಿದ್ದ, ಹೆಚ್ಚು ಪ್ರಚಾರಕ್ಕೆ, ಚರ್ಚೆಗೆ ಒಳಪಡದ ಕೆಲವು ಆಯಾಮಗಳು ಸಹ ಬೆತ್ತಲಾದವು. ಚೀನಾದ ವೆಟ್ ಮಾರ್ಕೆಟ್ ಇಂತಹ ಒಂದು ಉದಾಹರಣೆ. ಅಂತಹದೇ ಇನ್ನೊಂದು ಉದಾಹರಣೆ ಅಮೆರಿಕದ ಜನಾಂಗೀಯ ದ್ವೇಷದ ಇತಿಹಾಸ. ಆ ದೇಶದಲ್ಲಿ ಕರಿಯರು ಸುಮಾರು ಶೇ.13ರಷ್ಟು ಇದ್ದಾರೆ. ಅಮೆರಿಕದ ಅಪರಾಧಿಗಳ ಪೈಕಿ ಶೇ.33ರಷ್ಟು ಕರಿಯರು! ಇದಕ್ಕೆ ಆ ಜನಾಂಗದ ಹಿಂದುಳಿದ ಸ್ಥಿತಿ ಒಂದು ಕಾರಣವಾದರೆ, ಕಳೆದ ಮೂರು ಶತಮಾನಗಳಿಂದ ಅವರನ್ನು ಮುಖ್ಯವಾಹಿನಿಗೆ ಸೇರಿಸುವಲ್ಲಿ ಪರೋಕ್ಷವಾಗಿ ತೋರುತ್ತ ಬಂದಿರುವ ತಾರತಮ್ಯ ನೀತಿಯೂ ಇನ್ನೊಂದು ಕಾರಣ ಎಂದು ಕರಿಯರ ಪರ ವಾದಿಸುವವರು ಅಂಕಿ ಅಂಶಗಳ ಸಹಿತ ಪ್ರತಿಪಾದಿಸುತ್ತಾರೆ. ಕೋವಿಡ್19 ಸೋಂಕಿಗೆ ಅಲ್ಲಿ ಬಲಿಯಾದವರಲ್ಲಿ ಕರಿಯರ ಶೇಕಡಾವಾರು ಪ್ರಮಾಣ ಹೆಚ್ಚು. ಅವರು ಹಿಂದುಳಿದಿರುವುದೇ ಇದಕ್ಕೆ ಮುಖ್ಯ ಕಾರಣ.
ಸುಮಾರು 400 ವರ್ಷಗಳಿಂದ ಕರಿಯ ಜನಾಂಗದವರನ್ನು ಶೋಷಿಸುತ್ತಾ ಬಂದಿರುವ ಅಮೆರಿಕದಲ್ಲಿ, ಇಂದಿಗೂ ಕ್ಷುಲ್ಲಕ ಕಾರಣಗಳಿಗಾಗಿ ಅಲ್ಲಿನ ಬಿಳಿಯ ಪೆÇಲೀಸರ ಕೈಗೆ ಸಿಕ್ಕು ಪ್ರಾಣ ಕಳೆದುಕೊಳ್ಳುತ್ತಿರುವ ರೀತಿಯನ್ನು ಕಂಡರೆ, ಸಖೇದಾಚ್ಚರಿಯಾಗುತ್ತದೆ. `ವಿಶ್ವವಾಣಿ’ಯ ಅಂಕಣಕಾರ, ಅಮೆರಿಕ ವಾಸಿ ಶಿಶಿರ್ ಹೆಗಡೆ ಈಚೆಗೆ ಬರೆದಿದ್ದರು – `ಇಲ್ಲಿನ ಪೆÇಲೀಸ್ ವ್ಯವಸ್ಥೆಯಲ್ಲಿ ಬಹುತೇಕರು ಬಿಳಿಯರೇ. ನಾನು ಕರಿಯ ಪೆÇಲೀಸರನ್ನು ಇಲ್ಲಿಯವರೆಗೆ ನೋಡಿದ್ದು ಕೇವಲ ಬೆರಳೆಣಿಕೆಯಷ್ಟೇ ಸಲ.’ ಅಮೆರಿಕವನ್ನು ಸಿನಿಮಾದಲ್ಲಿ ಮಾತ್ರ ನೋಡಿರುವ ನಾವು, ಆ ದೇಶವು ಸ್ವಾತಂತ್ರ್ಯದ ಮತ್ತು ಸಮಾನತೆಯ ಹರಿಕಾರ ಎಂದು ಕಲ್ಪಿಸಿಕೊಂಡಿದ್ದೆವು; ಈ ಕೋವಿಡ್19 ಕಾಲದಲ್ಲಿ ಆ ತಿಳಿವಳಿಕೆ ಹುಸಿ ಎನಿಸಿದೆ. ಕರಿಯ ಜನಾಂಗದ ಜಾರ್ಜ್ ಫ್ಲಾಯ್ಡ್‍ನನ್ನು ಅಲ್ಲಿನ ಬಿಳಿಯ ಪೆÇಲೀಸ್ ಸಾಯಿಸಿದ್ದನ್ನು ಪ್ರತಿಭಟಿಸಿ, ಅಲ್ಲಿನ 100ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಪ್ರತಿಭಟನೆ ನಡಿದಿದೆ. ಪ್ರತಿಭಟನಾಕಾರರಲ್ಲಿ 18 ಜನ ಸತ್ತಿದ್ದಾರೆ. ಅಲ್ಲಲ್ಲಿ ಮಾಲ್ ಲೂಟಿಯಾಗಿದೆ. ನ್ಯೂಯಾರ್ಕ್‍ನಲ್ಲಿ ಕಫ್ರ್ಯೂ ವಾತಾವರಣವಿದೆ. ಪ್ರತಿಭಟನಾಕಾರರಿಗೆ ಬೆದರಿ ಅಲ್ಲಿನ ಅಧ್ಯಕ್ಷರು ಕೆಲಕಾಲ ಸುರಕ್ಷಿತ ಬಂಕ್‍ನಲ್ಲಿ ಕಾಲಕಳೆದರು. ಇವೆಲ್ಲವೂ ಅಮೆರಿಕದ ಬೇರೆಯೇ ಚಿತ್ರಣ ನೀಡುತ್ತಿದೆ. ಅಲ್ಲಿನ ಬಹುಸಂಖ್ಯಾತ ಬಿಳಿ ಜನಾಂಗದ ಪರ ತಾನು ಎಂದು ಅಲ್ಲಿನ ಅಧ್ಯಕ್ಷ ಬಹಿರಂಗವಾಗಿ ಬಿಂಬಿಸಿಕೊಳ್ಳುತ್ತಿರುವುದು ಸಹ, ಅಲ್ಲಿನ ಕರಿಯರ ಮೇಲಿನ ದೌರ್ಜನ್ಯಕ್ಕೆ ಇಂಬು ಕೊಡುತ್ತಿದೆ.
ನೂರಾರು ವರ್ಷಗಳಿಂದ ಅಲ್ಲಿದ್ದ ಗುಲಾಮೀ ಸಂಸ್ಕøತಿಯು ಕಾನೂನು ರೀತಿಯಲ್ಲಿ ನಿಷೇಧಿತಗೊಂಡಿದ್ದರೂ, ಇಂದಿಗೂ ಅಂತಹದೊಂದು ನೀತಿಯನ್ನು ಪರೋಕ್ಷವಾಗಿ ಪಾಲಿಸಿಕೊಂಡು ಬರುತ್ತಿರುವ ದೇಶ ಅದು ಎಂದು, ಜಾರ್ಜ್ ಫ್ಲಾಯ್ಡ್‍ನ ನಡುಹಗಲಿನ ಕೊಲೆ ಪ್ರಕರಣ ಸೂಚಿಸುತ್ತಿದೆಯೆ? 1619ರಲ್ಲಿ ಅಮೆರಿಕಕ್ಕೆ ಮೊದಲ ಗುಲಾಮರನ್ನು ಕರೆತರಲಾಗಿತ್ತು. ಡಚ್ ಹಡಗೊಂದರಲ್ಲಿ ಜಾರ್ಜ್‍ಟೌನ್, ವರ್ಜೀನಿಯಾಕ್ಕೆ ಕರೆತಂದ ಇಪ್ಪತ್ತು `ಅಂಗೋಲನ್’ ವ್ಯಕ್ತಿಗಳು ಮೊದಲ ಗುಲಾಮರು. ಆದರೆ ಅವರನ್ನು ಅಲ್ಲಿ `ವ್ಯಕ್ತಿಗಳು’ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಸಾಕುಪ್ರಾಣಿಗಳಂತೆ ಕರೆತಂದು, ಮಾರಾಟ ಮಾಡುತ್ತಿದ್ದ ಆಫ್ರಿಕನ್ ಗುಲಾಮರ ದೈಹಿಕ ಶ್ರಮವು ಅಮೆರಿಕವನ್ನು ಕಟ್ಟಲು ತನ್ನದೇ ಆದ ಕೊಡುಗೆಯನ್ನು ನೀಡಿದೆ.
ಅಚ್ಚರಿಯ ವಿಷಯವೊಂದಿದೆ. 4.7.1776ರಂದು ಅಮೆರಿಕಕ್ಕೆ ಸ್ವಾತಂತ್ರ್ಯ ದೊರೆತರೂ, ಅಲ್ಲಿನ ಕರಿಯ ಗುಲಾಮರು, ಬಿಳಿಯರ ಗುಲಾಮರಾಗಿಯೇ ಮುಂದುವರಿದರು. ಅದಾಗಿ, ಸುಮಾರು ಒಂದು ಶತಮಾನದ ನಂತರ, ಅಬ್ರಾಹಂ ಲಿಂಕನ್ ಅಧ್ಯಕ್ಷನಾದ ಮೇಲೆÀ, 1865ರಲ್ಲಿ ಗುಲಾಮ ಪದ್ಧತಿಯನ್ನು ಕಾನೂನುಬಾಹಿರ ಗೊಳಿಸಲಾಯಿತು. ಆದರೆ, ಕರಿಯ-ಬಿಳಿಯರ ತಾರತಮ್ಯಕ್ಕೆ ಯಾವುದೇ ಚ್ಯುತಿ ಬರಲಿಲ್ಲ! 1896ರ ಅಲ್ಲಿನ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ, ರೈಲುಗಳಲ್ಲಿ ಬಿಳಿಯರಿಗೆ ಮತ್ತು ಕರಿಯರಿಗೆ ಪ್ರತ್ಯೇಕ ಸ್ಥಳ ಗುರುತಿಸುವುದು ಕ್ರಮಬದ್ಧ ಎನಿಸಿತ್ತು! 1954ರ ತನಕವೂ ಅಲ್ಲಿನ ಶಾಲೆಗಳಲ್ಲಿ ಬಿಳಿಯ ಮತ್ತು ಕರಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಿದ್ದವು. 1955ರಲ್ಲಿ ರೋಸಾ ಪಾಕ್ರ್ಸ್ ಎಂಬಾಕೆ, ಸಾರ್ವಜನಿಕ ಬಸ್ಸಿನಲ್ಲಿ ಬಿಳಿಯನೊಬ್ಬನಿಗೆ ಸೀಟುಬಿಟ್ಟುಕೊಡಲು ನಿರಾಕರಿಸಿ, ಬಂಧನಕ್ಕೆ ಒಳಗಾಗಬೇಕಾಯಿತು! 1956ರಲ್ಲಷ್ಟೇ, ಅಲ್ಲಿನ ಸಾರ್ವಜನಿಕ ಬಸ್ಸುಗಳಲ್ಲಿ ಬಿಳಿಯರಿಗೆ ಪ್ರತ್ಯೇಕ ವ್ಯವಸ್ಥೆ ಕಾನೂನು ಬಾಹಿರ ಎನಿಸಿತು! ಇವೆಲ್ಲಾ ಅಂಕಿ ಅಂಶಗಳು ಇಂದಿನ ಅಂತರ್ಜಾಲ ಯುಗದಲ್ಲಿ ಸುಲಭವಾಗಿ, ಜನಸಾಮಾನ್ಯರ ಕೈಗೆ ದೊರೆಯುತ್ತಿರುವುದರಿಮದಾಗಿ, ಅಮೆರಿಕದಲ್ಲಿ ಕರಿಯರ ಮೇಲೆ ನಡೆದ, ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯದ ವ್ಯಾಪ್ತಿಯ ವಿವರ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದೆ. ಅಚ್ಚರಿಯ ವಿಷಯವೆಂದರೆ, 1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಎಲ್ಲರಿಗೂ ಮತದಾನ ಮಾಡುವ ಅಧಿಕಾರ ಬಂತು; ಕ್ರಮೇಣ ಸಮಾನ ಶಿಕ್ಷಣ ಜಾರಿಗೊಂಡಿತು. ಆದರೆ, 1954ರ ತನಕವೂ ಅಮೆರಿಕದ ಶಾಲೆಗಳಲ್ಲಿ ಬಿಳಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗ ತೆರೆಯಲು ಕಾನೂನಿನಲ್ಲಿ ಅವಕಾಶವಿತ್ತು ಎಂಬ ಅಂಶ ಸಣ್ಣಗೆ ಬೆಚ್ಚಿಗೆ ಬೀಳಿಸುವಂತಹದ್ದು. ಹಾಗಿದ್ದರೆ, ಎಲ್ಲೆಡೆ ಪ್ರಚಾರಗೊಂಡಿರುವ ಅಲ್ಲಿನ ಸಮಾನ ಅವಕಾಶ ಮತ್ತು ಸ್ವಾತಂತ್ರ್ಯವು ಅತಿರಂಜಿತ ಅರ್ಧಸತ್ಯವೆ?
ನಿಜ, ಈ ರೀತಿಯ ಅಂಕಿಸಂಕಿಗಳಿಗಂದ ಅಲ್ಲಿನ ವಾಸ್ತವವನ್ನು ಪೂರ್ಣಪ್ರಮಾಣದಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲವಾದರೂ, ಕೋವಿಡ್19ಗೆ ಅಮೆರಿಕ ಬೆದರಿದ ರೀತಿ, ಅದೇ ಸಮಯದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕರಿಯನನ್ನು ಅಲ್ಲಿ ಬಿಳಿಯ ಪೆÇಲೀಸ್ ಕ್ಷುಲ್ಲಕ ಕಾರಣಕ್ಕಾಗಿ ಉಸಿರುಗಟ್ಟಿ ಸಾಯಿಸಿದ ಕ್ರೌರ್ಯ, ಕೋವಿಡ್19 ಲಾಕ್‍ಡೌನ್‍ನಲ್ಲಿ ಕೆಲಸ ಕಳೆದುಕೊಂಡ ಅಲ್ಲಿನ ಜನರ ಪ್ರಮಾಣ, ಈಗ ಅಲ್ಲಿ ನಡೆಯುತ್ತಿರುವ ಸಾಮೂಹಿಕ ಪ್ರತಿಭಟನೆ ಮತ್ತು ಮಾಲ್‍ಲೂಟಿ – ಇವೆಲ್ಲವೂ ಅಮೆರಿಕವು ತನ್ನ ಸುತ್ತಲೂ ಬೆಳೆಸಿಕೊಂಡು, ಪೆÇೀಷಿಸಿಕೊಂಡು ಬರುತ್ತಿದ್ದ ಪ್ರಖರ ಪ್ರಭಾವಳಿಯನ್ನು ಛಿದ್ರ ಮಾಡಿವೆ ಎಂಬುದರಲ್ಲಿ ಅನುಮಾನವಿಲ್ಲ. ಈ ಕ್ಲಿಷ್ಟ ಮತ್ತು ಸಂಕೀರ್ಣ ಸಮಯದಲ್ಲಿ ಚಿತ್ರ ವಿಚಿತ್ರ ಹೇಳಿಕೆ ನೀಡುತ್ತಿರುವ ಅಲ್ಲಿನ ಅಧ್ಯಕ್ಷರ ನಡೆ ನುಡಿ ಸಹ ಇದಕ್ಕೆ ಸಹಕರಿಸಿದೆ. ಕ್ವಾಕ್ ಡಾಕ್ಟರುಗಳ ರೀತಿ, ಕೋವಿಡ್19 ಸೋಂಕು ಎದುರಿಸಲು ಕ್ಲಿನಕಲ್ ಟ್ರಯಲ್‍ಗೆ ಒಳಗಾಗದೇ ಇರುವ ಹೈಡ್ರಾಕ್ಸಿ ಕ್ಲೋರೋಕ್ವಿನ್ ಸೇವಿಸುವಂತೆ ಬಹಿರಂಗವಾಗಿ ಸಲಹೆ ನೀಡುವ ಆ ಅಧ್ಯಕ್ಷನನ್ನು ಕಂಡರೆ, ಅಮೆರಿಕದ ಕುರಿತು ತುಸು ಕನಿಕರವೂ ಮೂಡುತ್ತದೆ. ನಡುಬೀದಿಯ ಪೆÇಲೀಸ್ ದೌರ್ಜನ್ಯವೊಂದರ ವಿರುದ್ಧ ಲಕ್ಷಾಂತರ ಜನರು ಅಲ್ಲಿ ಈಗ ಪ್ರತಿನಿತ್ಯವೆಂಬಂತೆ ಪ್ರತಿಭಟನೆ ನಡೆಸುತ್ತಿದ್ದರೂ, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೋ ಏನೋ, ಬಹುಸಂಖ್ಯಾತ ಬಿಳಿಯರ ಪಕ್ಷಪಾತಿ ಎಂಬಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಅಲ್ಲಿನ ಅಧ್ಯಕ್ಷರು, ಆ ಸಮಾಜದಲ್ಲಿ ಅಂತರ್ಗತವಾಗಿರುವ ಒಂದು ಮನಸ್ಥಿತಿಯ ಪ್ರತೀಕವೇನೋ ಎಂದೂ ಅನಿಸುತ್ತದೆ.
ಬಹುಷಃ, ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್‍ನ ಕೊಲೆ, ಅದನ್ನು ನಡೆಸಿದ ಬಿಳಿಯ ಪೆÇಲೀಸ್‍ನ ದಾಷ್ಟ್ಯ, ನಂತರದ ದಿನಗಳಲ್ಲಿ ಅಲ್ಲಿ ಕಂಡು ಬಂದ ಪ್ರತಿಭಟನೆ, ಲೂಟಿ – ಇವೆಲ್ಲವೂ ಕೋವಿಡೋತ್ತರ ದಿನಗಳಲ್ಲಿ, ಅಮೆರಿಕವು ತನ್ನ ಶಕ್ತಿಯನ್ನು ವಿಶ್ವಮಟ್ಟದಲ್ಲಿ ಕಳೆದುಕೊಳ್ಳುತ್ತಿರುವ ಸೂಚನೆಯೇ ಇರಬಹುದು.