ಸತ್ಯಮೇವ ಜಯತೆ – ಭಾಗ ೬೫ – ಶಂಕರ್ ಬಿದರಿ
ರಾಜ್ಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾನ್‌ಸ್ಟೇಬಲ್‌ಗಳಿಂದ ಸಬ್ ಇನ್ಸ್‌ಪೆಕ್ಟರ್ ದರ್ಜೆಯವರೆಗಿನ ಅಧಿಕಾರಿಗಳು ಬಹಳ ಬಡ ಕುಟುಂಬದಿಂದ ಬಂದವರಾಗಿ ರುತ್ತಾರೆ. ಅವರು ಕಾಲಕಾಲಕ್ಕೆ ತಮ್ಮ ಸಾಂಸಾರಿಕ ಸಮಸ್ಯೆಗಳಿಗಾಗಿ ಸಾಮಾನ್ಯ ಭವಿಷ್ಯ ನಿಧಿಯಲ್ಲಿ ಮುಂಗಡ ಹಣ ತೆಗೆದುಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದರು. ಈ ಅರ್ಜಿಗಳಿಗೆ ಮಂಜೂರಾತಿ ನೀಡುವ ಅಽಕಾರ
ಮೀಸಲು ಪಡೆಯ ಡಿ.ಐ.ಜಿ.ಯವರಿಗಿತ್ತು.
ರಾಜ್ಯ ಮೀಸಲು ಪಡೆಯಲ್ಲಿ ೧೦ ಸಾವಿರಕ್ಕಿಂತಲೂ ಹೆಚ್ಚು ಸಿಬ್ಬಂದಿ ಇದ್ದುದರಿಂದ, ಪ್ರತಿ ತಿಂಗಳು ಭವಿಷ್ಯ ನಿಧಿಯ ಮುಂಗಡ ಕ್ಕಾಗಿ ಸುಮಾರು ೨೦೦ರಿಂದ ೩೦೦ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಇವುಗಳ ವಿಲೇವಾರಿಯಲ್ಲಿ ಬಹಳ ವಿಳಂಬವಾಗುತ್ತಿತ್ತು. ಕೆಲವು ಸಲ ಅರ್ಜಿದಾರರ ಶೋಷಣೆಯೂ ಆಗುತ್ತಿತ್ತು. ಇದನ್ನು ತಪ್ಪಿಸಲು, ಭವಿಷ್ಯ ನಿಧಿಯ ಮುಂಗಡಕ್ಕಾಗಿ ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿ ಅರ್ಜಿಯ ಕೆಎಸ್‌ಆರ್‌ಪಿಯ ಡಿಐಜಿಯವರಿಗೆ ಸಲ್ಲಿಕೆಯಾಗಬೇಕೆಂದೂ, ಅವರು ಮುಂದಿನ ಮೂರು ದಿನಗಳಲ್ಲಿ ಮಂಜೂರಾತಿಗಾಗಿ ಆದೇಶ ಹೊರಡಿಸಬೇಕು ಎಂದೂ ಕಟ್ಟುನಿಟ್ಟಾದ ಸೂಚನೆ ನೀಡಿದೆನು. ಈ ಸೂಚನೆ ಪಾಲನೆ ಯಾಗುವಂತೆ, ಪ್ರತಿ ದಿನವೂ ಪರಿಶೀಲನೆ ಮಾಡುವ ವ್ಯವಸ್ಥೆಯನ್ನೂ ಪ್ರಾರಂಭಿಸಿದೆನು.
ಇದರಿಂದಾಗಿ ಭವಿಷ್ಯ ನಿಧಿಯ ಮುಂಗಡವನ್ನು ಪಡೆಯಲು ಸಿಬ್ಬಂದಿವರ್ಗದವರಿಗೆ ಇದ್ದ ಕುಂದುಕೊರತೆ ಮತ್ತು ವಿಳಂಬ ದೂರವಾಯಿತು. ಹೊಸದಾಗಿ ಸ್ಥಾಪಿಸಲಾದ ಬೆಟಾಲಿಯನ್‌ಗಳಿಗೆ ಮೂಲಸೌಕರ್ಯ ಒದಗಿಸಿದ ಕುರಿತು: ೧೯೯೧ರಲ್ಲಿ ರಾಜ್ಯದಲ್ಲಿ ನಡೆದ ರಾಮಶಿಲಾ ಯಾತ್ರೆಯ ಹಿನ್ನೆಲೆ ಯಲ್ಲಿ, ರಾಜ್ಯದಾದ್ಯಂತ ಭಾರಿ ಪ್ರಮಾಣದ ಕೋಮು ಗಲಭೆಗಳು ನಡೆದು, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ರಾಜ್ಯದಲ್ಲಿ ಪೊಲೀಸ್ ಪಡೆಯ ಸಂಖ್ಯೆಯಲ್ಲಿ, ಅದರಲ್ಲಿಯೂ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಸಂಖ್ಯಾಬಲದ ಕೊರತೆ ಸರ್ಕಾರದ ಗಮನಕ್ಕೆ ಬಂತು. ಆಗ ಈ ಕೊರತೆಯನ್ನು ತುಂಬಲು ಕೇಂದ್ರೀಯ ಪೊಲೀಸ್ ಪಡೆಗಳನ್ನು ರಾಜ್ಯಕ್ಕೆ ಬರಮಾಡಿಕೊಂಡು, ಆ ಪಡೆಗಳ ವೆಚ್ಚವನ್ನು ರಾಜ್ಯ ಸರಕಾರ ಭರಿಸುವ ಪರಿಸ್ಥಿತಿ ಎದುರಾಯಿತು.
ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ವೀರೇಂದ್ರ ಪಾಟೀಲರು ಈ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ರಾಜೀ ನಾಮೆ ನೀಡಿ, ಬಂಗಾರಪ್ಪ ನವರು ಮುಖ್ಯಮಂತ್ರಿಗಳಾದರು. ಆಗ ರಾಜ್ಯದ ಡಿಜಿಪಿಯವರಾಗಿದ್ದ ಬಾಲಕೃಷ್ಣರಾವ್ ಮತ್ತು ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿಗಳಾಗಿದ್ದ ಜಗನ್ನಾಥನ್ ಅವರ ಪರಿಶ್ರಮದ ಫಲವಾಗಿ, ಸರಕಾರವು ರಾಜ್ಯ ಪೊಲೀಸ್ ಬಲ ವರ್ಧನೆ ಮತ್ತು ರಾಜ್ಯದಲ್ಲಿದ್ದ ಮೀಸಲು ಪಡೆಯ ಪೊಲೀಸ್‌ನ ಐದು ಬೆಟಾಲಿಯನ್‌ಗಳ ಸಂಖ್ಯಾ ಬಲವನ್ನು ಹತ್ತು ಬೆಟಾಲಿ ಯನ್‌ಗಳಿಗೆ ಹೆಚ್ಚಿಸುವ ಪ್ರಸ್ತಾವನೆಗೆ ಮಂಜೂರಾತಿ ನೀಡಿತು.
ಇದರಿಂದಾಗಿ, ರಾಜ್ಯದಲ್ಲಿದ್ದ ಬೆಂಗಳೂರಿನಲ್ಲಿ ಎರಡು, ಮೈಸೂರಿನಲ್ಲಿ ಒಂದು, ಬೆಳಗಾವಿಯಲ್ಲಿ ಒಂದು, ಗುಲ್ಬರ್ಗಾದಲ್ಲಿ
ಒಂದು ಬೆಟಾಲಿಯನ್‌ಗಳ ಜೊತೆಗೆ, ಮಂಗಳೂರು, ಶಿವಮೊಗ್ಗ ಮತ್ತು, ಶಿಗ್ಗಾಂವ್‌ಗಳಲ್ಲಿ ತಲಾ ಒಂದು ಹೊಸ ಬೆಟಾಲಿಯನ್ ಗಳನ್ನೂ ಮತ್ತು ಬೆಂಗಳೂರಿನಲ್ಲಿ ಎರಡು ಹೊಸ ಬೆಟಾಲಿಯನ್‌ಗಳನ್ನೂ ಸ್ಥಾಪಿಸಲು ಸರ್ಕಾರ ಮಂಜೂರಾತಿ ನೀಡಿತು. ಈ ಬೆಟಾಲಿಯನ್‌ಗಳಿಗೆ ಮೂಲಸೌಕರ್ಯ ಒದಗಿಸಲು ಸಹಿತ ಅಗತ್ಯ ಪ್ರಮಾಣದಲ್ಲಿ ಹಣ ಮಂಜೂರಾತಿ ನೀಡಿ, ಸರಕಾರ ಆದೇಶ
ಹೊರಡಿಸಿತ್ತು.
ಸರಕಾರದ ಆದೇಶದಂತೆ, ಈ ಐದು ಹೊಸ ಬೆಟಾಲಿಯನ್ ಗಳನ್ನು, ಲಭ್ಯವಿದ್ದ ಮೂಲಸೌಕರ್ಯ ಉಪಯೋಗಿಸಿಕೊಂಡು
ಸ್ಥಾಪಿಸಲಾಯಿತು. ಹೊಸ ಬೆಟಾಲಿಯನ್‌ಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಯಿತು. ಆದರೆ ಮೂಲ ಸೌಕರ್ಯಗಳಿಗೆ ಸರಕಾರ ಮಂಜೂರು ಮಾಡಿದ್ದ ಹಣವನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದಲ್ಲಿ ಸರಕಾರದ ಖಜಾನೆಯಿಂದ ತೆಗೆದು ಜಮಾ ಮಾಡಲಾಗಿತ್ತು. ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮವು ಮೂಲ ಸೌಕರ್ಯಗಳನ್ನು ಅಂದರೆ, ಬೆಟಾಲಿಯನ್ ಕಚೇರಿ, ಶಸ್ತ್ರಾಗಾರ ಇತ್ಯಾದಿ ನಿರ್ಮಾಣ ಕಾರ್ಯಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ, ಈ ರೀತಿ ಕರ್ನಾಟಕ ಪೊಲೀಸ್ ವಸತಿ ನಿಗಮದಲ್ಲಿ ಠೇವಣಿಯಾಗಿಟ್ಟ ಹಣವನ್ನು ಉಪಯೋಗ ಮಾಡಿ ಮೂಲ ಸೌಕರ್ಯಗಳನ್ನು
ನಿರ್ಮಿಸಿರಲಿಲ್ಲ.
ನಾನು ಪ್ರಭಾರ ವಹಿಸಿಕೊಂಡ ಮೇಲೆ ಈ ವಿಷಯ ನನ್ನ ಗಮನಕ್ಕೆ ಬಂತು. ನಾನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ದೊಂದಿಗೆ ಪತ್ರ ವ್ಯವಹಾರ ನಡೆಸಿ, ಹೊಸದಾಗಿ ಮಂಜೂರಾದ ಬೆಟಾಲಿಯನ್‌ಗಳಿಗೆ ಠೇವಣಿ ಇರಿಸಿದ್ದ ಹಣದಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡುವಂತೆ ವಿನಂತಿಸಿಕೊಂಡೆನು. ಮೇಲಿಂದ ಮೇಲೆ ಈ ವಿಷಯದಲ್ಲಿ ಪ್ರಗತಿಯನ್ನು ಪರಿಶೀಲಿಸಿ, ಬೆಂಗಳೂರಿನ ಎರಡು ಹೊಸ ಬೆಟಾಲಿಯನ್‌ಗಳಿಗೆ, ಮಂಗಳೂರು, ಶಿವಮೊಗ್ಗ ಮತ್ತು ಶಿಗ್ಗಾಂವ್ ಬೆಟಾಲಿಯನ್‌ಗಳಿಗೆ ಸರ್ಕಾರ ಮಂಜೂರಾತಿ ನೀಡಿದ ಪ್ರಕಾರ, ಮೂಲ ಸೌಕರ್ಯ ಒದಗಿಸುವ ಕಟ್ಟಡಗಳು ವಿಳಂಬವಿಲ್ಲದೆ ನಿರ್ಮಾಣವಾಗುವಂತೆ ನೋಡಿ ಕೊಂಡೆನು.
ಅದೇ ಪ್ರಕಾರ, ಹೊಸ ಬೆಟಾಲಿಯನ್‌ಗಳಿಗೆ ಪೊಲೀಸ್ ವಸತಿ ಗೃಹಗಳನ್ನು ಹಂಚಿಕೆ ಮಾಡುವಾಗ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆ ಮಾಡಿ, ಈ ಹೊಸ ಬೆಟಾಲಿಯನ್ ಗಳಲ್ಲಿ ಅವಶ್ಯವಿರುವಷ್ಟು ವಸತಿಗೃಹಗಳನ್ನು ನಿರ್ಮಾಣ ಮಾಡುವ ವ್ಯವಸ್ಥೆ ಮಾಡಿದೆನು. ಇದರಿಂದಾಗಿ ಹೊಸ ಐದು ಬೆಟಾಲಿಯನ್‌ಗಳು ಅವಶ್ಯವಿರುವ ಎಲ್ಲಾ ಮೂಲಸೌಕರ್ಯ ಗಳನ್ನು ಹೊಂದಿ, ಉತ್ತಮ ರೀತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು.
ರಾಜ್ಯ ಮೀಸಲು ಪೊಲೀಸ್ ಪಡೆಯ ಪ್ಲಟೂನ್‌ಗಳ ನಿಯೋಜನೆಯ ವರದಿ ನಾನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಐಜಿಪಿಯಾಗಿ ಪ್ರಭಾರ ವಹಿಸಿಕೊಳ್ಳುವ ಮುನ್ನ, ರಾಜ್ಯ ಮೀಸಲು ಪಡೆಯು ಪ್ಲಟೂನ್‌ಗಳನ್ನು ಕರ್ನಾಟಕ ರಾಜ್ಯ ಮೀಸಲು ಪಡೆಯ ನಿಯಂತ್ರಣ ಕೊಠಡಿಗೆ ಕಾಲಕಾಲಕ್ಕೆ ಐಜಿಪಿ ಕೆಎಸ್‌ಆರ್‌ಪಿ ಅಥವಾ ಎಡಿಜಿಪಿ ಕೆಎಸ್‌ಆರ್‌ಪಿ ಇವರು ಮೌಖಿಕ ವಾಗಿ ನೀಡಿದ ಸೂಚನೆಗಳಿಗೆ ಅನುಗುಣವಾಗಿ ಸಕ್ರಿಯ ಕರ್ತವ್ಯಕ್ಕೆ ವಿವಿಧ ಜಿಲ್ಲೆಗಳು ಹಾಗೂ ನಗರಗಳಿಗೆ ಸಮೀಪದ ಕೆಎಸ್ ಆರ್‌ಪಿ ಬೆಟಾಲಿಯನ್‌ಗಳಿಂದ ನಿಯೋಜಿಸಿ ರವಾನಿಸಲಾಗುತ್ತಿತ್ತು.
ಕೆಲವು ತುರ್ತು ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯವರು ಅಥವಾ ಡಿಜಿಪಿಯವರು ನೀಡಿದ ಮೌಖಿಕ
ಸೂಚನೆಗಳ ಪ್ರಕಾರ ನಿಯೋಜನೆ ಮಾಡಿ ರವಾನಿಸಲಾಗುತ್ತಿತ್ತು. ಈ ವ್ಯವಸ್ಥೆಯಿಂದಾಗಿ, ಪ್ರತಿ ದಿನ ಯಾವ ಯಾವ ಬೆಟಾಲಿ ಯನ್‌ಗಳಿಂದ ಎಷ್ಟು ಪ್ಲಟೂನ್ ಗಳನ್ನು ಸಕ್ರಿಯ ಕರ್ತವ್ಯಕ್ಕಾಗಿ ವಿವಿಧ ಪೊಲೀಸ್ ಘಟಕಗಳಿಗೆ ನಿಯೋಜಿಸಲಾಗಿದೆ ಎಂಬ ಮಾಹಿತಿ, ಕೆಎಸ್‌ಆರ್‌ಪಿ ಕೇಂದ್ರ ಸ್ಥಾನದಲ್ಲಿ ಲಭ್ಯವಾಗುತ್ತಿರಲಿಲ್ಲ.
ಕೆಲವು ಸಲ ಸಕ್ರಿಯ ಕರ್ತವ್ಯಕ್ಕೆ ನಿಯುಕ್ತಗೊಂಡ ಕೆಎಸ್‌ಆರ್‌ಪಿ ಪ್ಲಟೂನ್ ಗಳು ಅವುಗಳು ನಿಯುಕ್ತಗೊಂಡ ಘಟಕಗಳಲ್ಲಿ (ಜಿಲ್ಲೆ ಅಥವಾ ನಗರ ಪೊಲೀಸ್ ಘಟಕಗಳು), ತಿಂಗಳುಗಟ್ಟಲೆ ಸಕ್ರಿಯ ಕರ್ತವ್ಯದಲ್ಲಿರು ತ್ತಿದ್ದವು. ಇದರಿಂದಾಗಿ, ಆಯಾ ಪ್ಲಟೂನ್‌ಗಳಲ್ಲಿ ಸಕ್ರಿಯ ಕರ್ತವ್ಯಕ್ಕೆ ತೆರಳಿದ್ದ ಸಿಬ್ಬಂದಿ ವರ್ಗದವರಿಗೆ ಹಲವಾರು ವೈಯಕ್ತಿಕ ಮತ್ತು ಕೌಟುಂಬಿಕ ಅಡಚಣೆಗಳು ಉಂಟಾಗುತ್ತಿದ್ದವು.
ಕೆಲವು ಬೆಟಾಲಿಯನ್‌ಗಳಲ್ಲಿ, ಹೆಚ್ಚು ಕಡಿಮೆ ಬೆಟಾಲಿಯನ್ ನಲ್ಲಿದ್ದ ಎಲ್ಲಾ ಸಿಬ್ಬಂದಿ ಸಕ್ರಿಯ ಕರ್ತವ್ಯಕ್ಕೆ ನಿಯುಕ್ತ ಗೊಂಡಿದ್ದರೆ, ಕೆಲವು ಬೆಟಾಲಿಯನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ವರ್ಗದವರು ಬೆಟಾಲಿಯನ್ ಕೇಂದ್ರ ಸ್ಥಾನದಲ್ಲಿಯೇ
ಇರುತ್ತಿದ್ದರು. ಈ ಲೋಪದೋಷ ಗಳನ್ನು ಸರಿಪಡಿಸಲು ಮತ್ತು ಸಕ್ರಿಯ ಕರ್ತವ್ಯಕ್ಕೆ ಪ್ಲಟೂನ್‌ಗಳನ್ನು ನಿಯೋಜಿಸಲು ಒಂದು
ಸುಧಾರಿತ ವ್ಯವಸ್ಥೆಯನ್ನು ನಾನು ಜಾರಿಗೆ ತಂದೆನು.
ಈ ವ್ಯವಸ್ಥೆಯ ಪ್ರಕಾರ, ಪ್ರತಿಯೊಂದು ಬೆಟಾಲಿಯನ್‌ನಿಂದ ಸಕ್ರಿಯ ಕರ್ತವ್ಯಕ್ಕೆ ನಿಯುಕ್ತಿಗೊಳ್ಳುವ ಪ್ಲಟೂನ್‌ಗಳು ಮತ್ತು
ಅವುಗಳನ್ನು ನಿಯೋಜಿಸಿದ ಘಟಕ ಹಾಗೂ ದಿನಾಂಕ ಇವುಗಳ ವಿವರಗಳನ್ನು ಒಳಗೊಂಡ ಒಂದು ವರದಿಯನ್ನು ಪ್ರತಿ ದಿನ ಎಲ್ಲಾ ಕೆಎಸ್‌ಆರ್‌ಪಿ ಬೆಟಾಲಿಯನ್ ಗಳಿಗೆ ಸಂಬಂಧಿಸಿದಂತೆ ತಯಾರಿಸಿ, ಅದರ ಪ್ರತಿಯನ್ನು ಐಜಿಪಿ ಕೆಎಸ್‌ಆರ್‌ಪಿ, ಎಡಿಜಿಪಿ ಕೆಎಸ್‌ಆರ್‌ಪಿ, ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಡಿಜಿಪಿಯವರಿಗೆ ಸಲ್ಲಿಸುವ ವ್ಯವಸ್ಥೆ ಮಾಡಿದೆನು.
ವರದಿಗೆ ‘ದೈನಿಕ ನಿಯೋಜನಾ ವರದಿ’ (ಡೈಲಿ ಡಿಪ್ಲಾಯ್‌ಮೆಂಟ್ ರಿಪೋರ್ಟ್) ಎಂಬ ಶೀರ್ಷಿಕೆ ನೀಡಿದೆನು. ಈ ವರದಿಯನ್ನು ದಿನವೂ ಅವಲೋಕಿಸಿದಾಗ, ಯಾವ್ಯಾವ ಬೆಟಾಲಿಯನ್‌ಗಳಿಂದ ಎಷ್ಟು ಪ್ಲಟೂನ್‌ಗಳು, ಯಾವ ಯಾವ ಘಟಕಗಳಿಗೆ ಸಕ್ರಿಯ ಕರ್ತವ್ಯಕ್ಕೆ ನಿಯೋಜನೆಗೊಂಡಿವೆ, ಯಾವ ದಿನಾಂಕದಿಂದ ನಿಯೋಜನೆಗೊಂಡಿವೆ ಮತ್ತು ಎಷ್ಟು ಪ್ಲಟೂನ್‌ಗಳು ಬೆಟಾಲಿಯನ್ ಕೇಂದ್ರ ಸ್ಥಾನಗಳಲ್ಲಿ ಲಭ್ಯವಿವೆ ಎಂಬ ಮಾಹಿತಿ, ಎರಡು ಪುಟಗಳ ವರದಿಯಲ್ಲಿ ಎಲ್ಲಾ ಮೇಲಾಧಕಾರಿಗಳಿಗೆ ತಿಳಿಯುವ
ವ್ಯವಸ್ಥೆಯಾಯಿತು.
ಅದಲ್ಲದೆ, ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಿಂದ ಪ್ರತಿ ಬೆಟಾಲಿಯನ್ ಕೇಂದ್ರ ಸ್ಥಾನಕ್ಕೆ ಇರುವ ದೂರದ ಕೋಷ್ಟಕ ವೊಂದನ್ನು ತಯಾರಿಸಿ, ಎಲ್ಲಾ ಬೆಟಾಲಿಯನ್ ಕಮಾಂಡೆಂಟ್‌ಗಳ ಮಾಹಿತಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆನು. ಇದರಿಂದ ಯಾವುದೇ ಘಟಕದಲ್ಲಿ ಕೆಎಸ್‌ಆರ್‌ಪಿ ಪ್ಲಟೂನ್‌ಗಳ ಅಗತ್ಯ ಕಂಡು ಬಂದಾಗ, ಯಾವ ಸ್ಥಳದಲ್ಲಿ ಅವಶ್ಯಕತೆ ಇರುತ್ತದೆಯ, ಅಲ್ಲಿಗೆ ವಿವಿಧ ಬೆಟಾಲಿಯನ್ ಕೇಂದ್ರ ಸ್ಥಾನಗಳಿಂದ ಇರುವ ದೂರವನ್ನು ಪರಿಶೀಲಿಸಿ, ಸಕ್ರಿಯ ಕರ್ತವ್ಯಕ್ಕೆ ಪ್ಲಟೂನ್‌ಗಳನ್ನು ನಿಯೋಜಿಸುವ ವ್ಯವಸ್ಥೆ ಜಾರಿಗೆ ಬಂತು.
ಇದರಿಂದ ಗಣನೀಯ ಪ್ರಮಾಣದಲ್ಲಿ ಇಂಧನದ ಉಳಿತಾಯ ಆಗುತ್ತಿತ್ತು. ಸಕ್ರಿಯ ಕರ್ತವ್ಯಕ್ಕೆ ನಿಯೋಜನೆಗೊಂಡ ಪ್ಲಟೂನ್ ಗಳು ಬೇರೆ ಬೇರೆ ಘಟಕಗಳಿಗೆ ಸಾಧ್ಯವಿದ್ದಷ್ಟು ಕಡಿಮೆ ವೇಳೆಯಲ್ಲಿ ತಲುಪಲು ಸಾಧ್ಯವಾಯಿತು. ವಿವಿಧ ಘಟಕಗಳಲ್ಲಿ ಕೆಎಸ್‌ಆರ್‌ಪಿ ಪ್ಲಟೂನ್‌ಗಳನ್ನು ಒಂದು ವಾರಕ್ಕಿಂತ ಹೆಚ್ಚಿನ ಕಾಲ ಇಟ್ಟುಕೊಂಡರೆ, ಅವುಗಳನ್ನು ಮುಂದುವರಿಸುವ ಅವಶ್ಯಕತೆ ಇದೆಯೇ ಇಲ್ಲವೇ ಎಂಬುದನ್ನು ಪ್ರತಿದಿನ ಪರಿಶೀಲಿಸಲು ಅನುಕೂಲವಾಯಿತು. ನಾನು ಜಾರಿಗೆ ತಂದ ಈ ವ್ಯವಸ್ಥೆ ಈಗಲೂ ಕೆಎಸ್‌ಆರ್‌ಪಿಯಲ್ಲಿ ಮುಂದುವರಿದಿದೆ.
ಸಿಬ್ಬಂದಿ ವರ್ಗದವರ ಕೋರಿಕೆ ಮೇರೆಗೆ ಕ್ಷಿಪ್ರ ವರ್ಗಾವಣೆ ವ್ಯವಸ್ಥೆ: ಕಾನ್ ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್ ಮತ್ತು ಮತ್ತು ಪಿಎಸ್‌ಐಗಳು ಸಾಮಾನ್ಯವಾಗಿ ಅವರು ಸೇವೆಗೆ ಸೇರಿಕೊಂಡ ಬೆಟಾಲಿಯನ್‌ಗಳಲ್ಲಿಯೇ ಬಹಳ ವರ್ಷಗಳ ಕಾಲ ಸೇವೆ ಯಲ್ಲಿರ ಬೇಕಾಗುತ್ತಿತ್ತು. ಜಿಲ್ಲೆ ಮತ್ತು ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಸಬ್ ಇನ್ಸ್‌ಪೆಕ್ಟರ್‌ಗಳಿಗಿಂತ ಕೆಳವರ್ಗದ ಸಿಬ್ಬಂದಿ ಯವರು ಹೆಚ್ಚು ಕಡಿಮೆ ತಮ್ಮ ಸೇವಾವಧಿಯನ್ನು ತಮ್ಮ ಜಿಲ್ಲೆಯಲ್ಲಿಯೇ ಪೂರ್ತಿಗೊಳಿಸುವ ವ್ಯವಸ್ಥೆ ಇತ್ತು.
ಕೆಲವು ಕೆಎಸ್‌ಆರ್‌ಪಿ ಘಟಕಗಳಲ್ಲಿ ಹಲವು ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್ ಮತ್ತು ಎಎಸ್‌ಐಗಳು ತಮ್ಮ ಸ್ವಂತ ಊರಿ ನಿಂದ ಬಹಳ ದೂರದಲ್ಲಿದ್ದ ಬೆಟಾಲಿಯನ್ ಕೇಂದ್ರಸ್ಥಾಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಸಿಬ್ಬಂದಿ ವರ್ಗದವರು ತಮ್ಮ ಕುಟುಂಬದ ಯೋಗ ಕ್ಷೇಮ ನೋಡಿಕೊಳ್ಳಲು, ಸ್ವಂತ ಮದುವೆ ಅಥವಾ ಕುಟುಂಬದ ಇತರ ಸಮಾರಂಭಗಳಲ್ಲಿ ಭಾಗವಹಿಸಲು
ಬಹಳ ಹೆಚ್ಚಿನ ದೂರವನ್ನು ತಮ್ಮ ಬೆಟಾಲಿಯನ್ ಕೇಂದ್ರ ಸ್ಥಾನದಿಂದ ಕ್ರಮಿಸಿ, ಅವರ ಸ್ವಂತ ಊರಿಗೆ ಹೋಗಬೇಕಾಗಿತ್ತು.
ಇದರಿಂದಾಗಿ, ಅವರಿಗೆ ತಮ್ಮ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುವುದು ಬಹಳ ದುಸ್ತರವಾಗುತ್ತಿತ್ತು. ತುಲನಾತ್ಮಕವಾಗಿ, ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಆರ್ಥಿಕವಾಗಿಯೂ ಇದರಿಂದ ಹೊರೆಯಾಗುತ್ತಿತ್ತು. ರಾಜ್ಯದಲ್ಲಿ ೨೭ ಜಿಲ್ಲೆಗಳಿದ್ದರೂ ಸಹಿತ, ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳು ಏಳು ಸ್ಥಳಗಳಲ್ಲಿ ಮಾತ್ರ ನೆಲೆಗೊಂಡಿದ್ದವು. ಇದರಿಂದ ಹಲವಾರು ಬೆಟಾಲಿಯನ್ ಗಳಲ್ಲಿ, ಗಣನೀಯ ಸಂಖ್ಯೆಯಲ್ಲಿ ಸಿಬ್ಬಂದಿ ವರ್ಗದವರು ತಮ್ಮ ಸ್ವಂತ ಊರುಗಳಿಂದ ಬಹಳ ದೂರದಲ್ಲಿ ಸೇವೆ ಸಲ್ಲಿಸಬೇಕಾದ ಪ್ರಮೇಯ ಇತ್ತು. ಈ ಕಾರಣಗಳಿಂದಾಗಿ, ಬಹಳಷ್ಟು ಸಿಬ್ಬಂದಿಯವರು ತಮ್ಮ ಸ್ವಂತ ಊರುಗಳಿಗೆ ೧೦೦-೨೦೦ ಕಿ.ಮೀ ವ್ಯಾಪ್ತಿಯಲ್ಲಿರುವ ಬೆಟಾಲಿಯನ್‌ಗಳಿಗೆ ವರ್ಗಾವಣೆಗೊಳ್ಳಲು ಹಾತೊರೆಯುತ್ತಿದ್ದರು.
ಈ ಪರಿಸ್ಥಿತಿಯನ್ನು ಅರಿತ ನಾನು, ಕಾನ್‌ಸ್ಟೇಬಲ್‌ಗಳಿಂದ ಎಎಸ್‌ಐವರೆಗಿನ ಸಿಬ್ಬಂದಿ ವರ್ಗದವರಿಗೆ, ಅವರು ಕೋರಿದ ಬೆಟಾಲಿಯನ್‌ಗಳಿಗೆ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದೆನು. ಎಲ್ಲವೂ ಕೋರಿಕೆಯ ವರ್ಗಾವಣೆಗಳಾಗಿದ್ದು ದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹಣಕಾಸಿನ ಹೊರೆ ಉಂಟಾಗುತ್ತಿರಲಿಲ್ಲ. ಬೀದರ್, ಗುಲ್ಬರ್ಗಾ, ರಾಯಚೂರು ಇತ್ಯಾದಿ
ಜಿಲ್ಲೆಗಳಿಂದ ನೇಮಕವಾಗಿದ್ದ ಕೆಳವರ್ಗದ ಸಿಬ್ಬಂದಿ ವರ್ಗದವರು, ಬೆಂಗಳೂರು, ಮಂಗಳೂರು ಮುಂತಾದ ಬಹು ದೂರದ ಸ್ಥಳಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರು.
ಅವರು ಕೌಟುಂಬಿಕ ಕಾರಣಗಳಿಂದಾಗಿ ತಮ್ಮ ಸ್ವಂತ ಊರಿಗೆ ಸಮೀಪದಲ್ಲಿರುವ ಬೆಟಾಲಿಯನ್‌ಗಳಿಗೆ ವರ್ಗಾವಣೆ ಹೊಂದಲು ಸತತ ಯತ್ನ ಮಾಡುತ್ತಿದ್ದರು. ಮೈಸೂರು, ಮಂಗಳೂರು ಜಿಲ್ಲೆಗಳಿಗೆ ಸೇರಿದ ಸಿಬ್ಬಂದಿವರ್ಗದವರು ದೂರದ ಗುಲ್ಬರ್ಗಾ, ಬೆಳಗಾವಿ ಮುಂತಾದೆಡೆ ಸೇವೆ ಸಲ್ಲಿಸುತ್ತಿದ್ದರು. ಈ ಸಮಸ್ಯೆಯನ್ನು ಬಗೆಹರಿಸಲು ಕಾನ್‌ಸ್ಟೇಬಲ್ ಮತ್ತು ಎಎಸ್‌ಐವರೆಗಿನ ಸಿಬ್ಬಂದಿ ಕೋರಿಕೆಯ ವರ್ಗಾವಣೆ ಅರ್ಜಿಗಳನ್ನು ಉದಾರವಾಗಿ ಪರಿಗಣಿಸಿ, ಸಾಧ್ಯ ವಾದಷ್ಟು ಬೇಗನೆ ಅವರಿಗೆ ಅವರು ಕೇಳಿದ ಸ್ಥಳಗಳಿಗೆ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸಿದೆನು.
ಅವರು ವರ್ಗಾವಣೆ ಕೋರಿದ್ದ ಸ್ಥಳಗಳಲ್ಲಿ ರಿಕ್ತ ಸ್ಥಾನಗಳಿದ್ದರೆ ಅಥವಾ ಕಾಲಕಾಲಕ್ಕೆ ಅಲ್ಲಿ ಯಾವುದೇ ಸ್ಥಾನಗಳು ರಿಕ್ತವಾದರೆ, ಅವರು ಕೋರಿಕೆ ಅರ್ಜಿಯ ಹಿರಿತನ ವನ್ನು ಪರಿಗಣಿಸಿ, ಆ ಸ್ಥಳಗಳಿಗೆ ವರ್ಗಾವಣೆ ಮಾಡಲುಪ್ರಾರಂಭಿಸಿದೆನು. ಕೆಎಸ್‌ಆರ್‌ಪಿ ಐಜಿಪಿಯಾಗಿ ನನ್ನ ಸೇವಾ ಅವಧಿಯಲ್ಲಿ ಸುಮಾರು ೬,೦೦೦ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರಿಗೆ ಕೋರಿಕೆ ವರ್ಗಾವಣೆಯನ್ನು
ಆದೇಶಿಸಿ, ಅವರು ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟೆನು.
ಅದೇ ರೀತಿ, ಕಾನ್‌ಸ್ಟೇಬಲ್ ಹುದ್ದೆಯಿಂದ ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ ಪದೋನ್ನತಿ ನೀಡುವಾಗ ಮತ್ತು ಹೆಡ್ ಕಾನ್‌ಸ್ಟೇಬಲ್ ಹುದ್ದೆಯಿಂದ ಎ.ಎಸ್.ಐ. ಹುದ್ದೆಗೆ ಪದೋನ್ನತಿ ನೀಡುವಾಗ, ರಿಕ್ತ ಸ್ಥಾನಗಳನ್ನು ಪರಿಗಣಿಸಿ, ಅವರು ಕೋರಿದ ಸ್ಥಳಗಳಿಗೆ ಪದೋನ್ನತಿ ನೀಡಿ ವರ್ಗಾವಣೆ ಮಾಡುವ ವ್ಯವಸ್ಥೆ ಪ್ರಾರಂಭಿಸಿದೆನು. ಕೆಲವು ಸಲ, ಕೆಳವರ್ಗದ ಸಿಬ್ಬಂದಿವರ್ಗದವರು ಕೆಲವು ಸಲ ಪದೋನ್ನತಿ ಪಡೆದಾಗ ಬಹಳ ದೂರದ ಊರುಗಳಿಗೆ ವರ್ಗಾವಣೆ ಹೊಂದುವುದನ್ನು ತಪ್ಪಿಸಿಕೊಳ್ಳಲು, ಕೆಲವು ಸಲ ಅವರಿಗೆ ಪದೋನ್ನತಿಯೇ ಬೇಡ ಎಂದು ಅರ್ಜಿ ಸಲ್ಲಿಸಿ ಪದೋನ್ನತಿಯನ್ನು ನಿರಾಕರಿಸುತ್ತಿದ್ದರು. ನಾನು ಕೈಗೊಂಡ ಕ್ರಮಗಳಿಂದಾಗಿ, ಪದೋನ್ನತಿಯನ್ನು ನಿರಾಕರಿಸುವ ಪ್ರಕರಣಗಳು ಬಹಳ ಕಡಿಮೆಯಾದವು. ಈ ಕ್ರಮಗಳಿಂದ ಕೆಎಸ್‌ಆರ್‌ಪಿಯ ಕೆಳವರ್ಗದ
ಸಿಬ್ಬಂದಿಯವರು ನೆಮ್ಮದಿಯಿಂದ ಸೇವೆ ಸಲ್ಲಿಸಲು ಅವಕಾಶ ದೊರೆಯಿತು.
ಲಾನ್ಸ್‌ನಾಯಕ್, ನಾಯಕ್ ಹುದ್ದೆಗಳ ರದ್ದತಿ; ಹವಾಲ್ದಾರ್ ಹುದ್ದೆಯ ಮುಂದುವರಿಕೆ: ಕೆ.ಎಸ್.ಆರ್.ಪಿ. ಬೆಟಾಲಿ ಯನ್‌ಗಳ ಸಂಘಟನೆಯನ್ನು ಸೈನ್ಯದ ಬೆಟಾಲಿಯನ್‌ಗಳ ಮಾದರಿಯಲ್ಲಿ ಮಾಡಲಾಗಿತ್ತು. ಕೆಎಸ್‌ಆರ್‌ಪಿಯಲ್ಲಿ ಸೇವೆ ಸಲ್ಲಿಸು ತ್ತಿದ್ದ ಕಾನ್‌ಸ್ಟೇಬಲ್‌ಗಳು ಅವರ ಸೇವಾ ಹಿರಿತನದ ಪ್ರಕಾರ, ಮೊದಲು ಲಾನ್ಸ್‌ನಾಯಕ್ ಹುದ್ದೆಗೆ (ಒಂದು ಭುಜ ಪಟ್ಟಿ), ಲಾನ್ಸ್ ನಾಯಕ್ ಹುದ್ದೆಯಿಂದ ನಾಯಕ್ ಹುದ್ದೆಗೆ (ಎರಡು ಭುಜ ಪಟ್ಟಿ) ಮತ್ತು ನಾಯಕ್ ಹುದ್ದೆಯಿಂದ ಹವಾಲ್ದಾರ್ ಹುದ್ದೆಗೆ (ಮೂರು ಭುಜ ಪಟ್ಟಿ) ಪದೋನ್ನತಿ ಹೊಂದುವ ವ್ಯವಸ್ಥೆ ಇತ್ತು.
ಈ ವ್ಯವಸ್ಥೆಯಿಂದಾಗಿ, ಪ್ರತಿ ಸಲವೂ ಅವರು ಪದೋನ್ನತಿ ಹೊಂದುವಾಗ, ಹೆಚ್ಚಿನ ಸಂಖ್ಯೆಯಲ್ಲಿ ಪದೋನ್ನತಿ ಪಡೆಯುವವರು ಆಯಾ ಬೆಟಾಲಿಯನ್ ಗಳಲ್ಲಿರುವ ರಿಕ್ತ ಸ್ಥಾನಗಳ ಹಿನ್ನೆಲೆಯಲ್ಲಿ, ಒಂದು ಬೆಟಾಲಿಯನ್‌ನಿಂದ ಮತ್ತೊಂದಕ್ಕೆ ವರ್ಗಾವಣೆ ಹೊಂದಬೇಕಾಗುತ್ತಿತ್ತು.ಇದರಿಂದ ಸಿಬ್ಬಂದಿ ವರ್ಗದವರಿಗೆ ಬಹಳಷ್ಟು ಕೌಟುಂಬಿಕ ತೊಂದರೆಗಳಾಗುತ್ತಿದ್ದವು. ಸರ್ಕಾರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವರ್ಗಾವಣೆ ವೆಚ್ಚದ ಹೊರೆ ಬೀಳುತ್ತಿತ್ತು.
ಸಿವಿಲ್ ಪೊಲೀಸ್ ಮತ್ತು ಜಿಲ್ಲಾ/ನಗರ ಮೀಸಲು ಪಡೆಗಳಲ್ಲಿ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಅಲ್ಲಿ ಕಾನ್‌ಸ್ಟೇಬಲ್ ಹುದ್ದೆಯಿಂದ ತಮ್ಮ ಸೇವಾ ಹಿರಿತನದ ಆಧಾರದ ಮೇಲೆ ನೇರವಾಗಿ ಹವಾಲ್ದಾರ್ ಅಥವಾ ಹೆಡ್‌ಕಾನ್‌ಸ್ಟೇಬಲ್ ಹುದ್ದೆಗೆ
ಪದೋನ್ನತಿ ಪಡೆಯುತ್ತಿದ್ದರು. ಲಾನ್ಸ್ ನಾಯಕ್, ನಾಯಕ್ ಮತ್ತು ಹವಾಲ್ದಾರ್ ಹುದ್ದೆಗಳು ಕೆಎಸ್‌ಆರ್‌ಪಿಯಲ್ಲಿ ಮಾತ್ರ ಇದ್ದವು.
೧೯೮೭ರಲ್ಲಿ, ಕರ್ನಾಟಕ ರಾಜ್ಯದ ವೇತನ ಆಯೋಗ ಲಾನ್ಸ್‌ನಾಯಕ್, ನಾಯಕ್ ಮತ್ತು ಹವಾಲ್ದಾರ್ ಹುದ್ದೆಗಳಿಗೆ ಒಂದೇ ವೇತನ ಶ್ರೇಣಿಯನ್ನು ನಿಗದಿಪಡಿಸಿತ್ತು. ವಿವಿಧ ವೇತನ ಶ್ರೇಣಿಗಳಲ್ಲಿದ್ದ ಹಲವು ಹುದ್ದೆಗಳಿಗೆ ಒಂದೇ ವೇತನ ಶ್ರೇಣಿಯನ್ನು ನಿಗದಿಪಡಿಸಿ, ವಿವಿಧ ವೇತನ ಶ್ರೇಣಿಗಳಲ್ಲಿ ಇದ್ದ ಹುದ್ದೆಗಳನ್ನು ಹೆಡ್‌ಕಾನ್‌ಸ್ಟೇಬಲ್ ಹುದ್ದೆಯಲ್ಲಿ ವಿಲೀನಗೊಳಿಸಲಾಗಿತ್ತು. ಆದರೆ, ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ, ಸರ್ಕಾರ ನೀಡಿದ್ದ ಈ ಆದೇಶವನ್ನು ಜಾರಿಗೆ ತಂದಿರಲಿಲ್ಲ.
ನಾನು, ವೇತನ ಆಯೋಗದ ಶಿಫಾರಸ್ಸು ಮತ್ತು ಆ ಶಿಫಾರಸ್ಸಿನ ಮೇಲೆ ಸರ್ಕಾರ ನೀಡಿದ ಆದೇಶವನ್ನು ಪರಿಶೀಲಿಸಿ, ಕೆ.ಎಸ್.ಆರ್
.ಪಿ.ಯಲ್ಲಿದ್ದ ಲಾನ್ಸ್‌ನಾಯಕ್, ನಾಯಕ್ ಮತ್ತು ಹವಾಲ್ದಾರ್ ಹುದ್ದೆಗಳನ್ನು ಹವಾಲ್ದಾರ್ ಹುದ್ದೆಯಲ್ಲಿ ವಿಲೀನಗೊಳಿಸುವ ಒಂದು ನಡವಳಿಯನ್ನು ತಯಾರಿಸಿ, ಮಾನ್ಯ ಡಿ.ಜಿ.ಪಿ.ಯವರ ಅನುಮೋದನೆ ಪಡೆದುಕೊಂಡು ಜಾರಿಗೆ ತಂದೆನು.
ಇದರಿಂದಾಗಿ, ಕೆ.ಎಸ್.ಆರ್.ಪಿ. ಬೆಟಾಲಿಯನ್‌ಗಳಲ್ಲಿ ಲಾನ್ ನಾಯಕ್, ನಾಯಕ್ ಹುದ್ದೆಗಳು ರದ್ದಾದವು ಹಾಗೂ ಎಲ್ಲಾ ಲಾನ್ಸ್‌ನಾಯಕ್ ಮತ್ತು ನಾಯಕ್ ಹುದ್ದೆಗಳು ಹಾಗೂ ಹವಾಲ್ದಾರ್ ಹುದ್ದೆಗಳಾಗಿ ಪರಿವರ್ತನೆಗೊಂಡವು. ಇದರಿಂದಾಗಿ, ಜಿಲ್ಲಾ ಮತ್ತು ನಗರ ಪೊಲೀಸ್ ಘಟಕಗಳಲ್ಲಿ ಇದ್ದ ನಾಗರಿಕ ಸೇವಾ ಸಿಬ್ಬಂದಿ ಮತ್ತು ಜಿಲ್ಲಾ/ನಗರ ಮೀಸಲು ಪೊಲೀಸ್ ಸಿಬ್ಬಂದಿಗೆ ಅನ್ವಯವಾಗುತ್ತಿದ್ದ ವ್ಯವಸ್ಥೆಯು, ಕೆ.ಎಸ್.ಆರ್.ಪಿ. ಸಿಬ್ಬಂದಿಗೂ ಅನ್ವಯವಾಯಿತು.
ಇದರಿಂದ ಯಾವುದೇ ವೇತನ ಹೆಚ್ಚಳವಿಲ್ಲದೆ, ಕೆ.ಎಸ್.ಆರ್.ಪಿ. ಸಿಬ್ಬಂದಿ ಯವರು ಪದೇ ಪದೇ ವರ್ಗಾವಣೆಗೊಳ್ಳುತ್ತಿದ್ದ ಕ್ರಮ
ನಿಂತುಹೋಯಿತು. ಈ ಆದೇಶ ದಿಂದಾಗಿ ಕೆ.ಎಸ್.ಆರ್.ಪಿ.ಯ ಕೆಳವರ್ಗದ ಸಿಬ್ಬಂದಿಯವರಿಗೆ ಬಹಳ ಸಂತೋಷ ಮತ್ತು ನೆಮ್ಮದಿ ಉಂಟಾಯಿತು.
* * *
ಕೆಎಸ್‌ಆರ್‌ಪಿ ಘಟಕಕ್ಕೆ ಅವಶ್ಯ ಸೌಲಭ್ಯಗಳ ವ್ಯವಸ್ಥೆ : ಒಕ್ಕೂಟ ಸರ್ಕಾರದವರು ರಾಜ್ಯಗಳ ಪೊಲೀಸ್ ಪಡೆಗಳ ಆಧುನೀ ಕರಣಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನು ಎಲ್ಲಾ ರಾಜ್ಯಗಳಿಗೆ ಪ್ರತಿವರ್ಷ ನೀಡುತ್ತಿದ್ದರು. ಇದಕ್ಕೆ ರಾಜ್ಯದವರು ತಮ್ಮ
ಪಾಲನ್ನು ಸೇರಿಸಿ, ಈ ಹಣವನ್ನು ರಾಜ್ಯ ಪೊಲೀಸ್ ಪಡೆಗಳ ಆಧುನೀಕರಣಕ್ಕೆ ಉಪಯೋಗಿಸಬೇಕಾಗಿತ್ತು. ಈ ಆಧುನೀಕರಣದ ವೆಚ್ಚದಲ್ಲಿ, ಸುಮಾರು ೧೦ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದ್ದ ಮತ್ತು ರಾಜ್ಯ ಪೊಲೀಸ್ ಸಂಖ್ಯಾಬಲದಲ್ಲಿ ಶೇಕಡಾ ೧೫ಕ್ಕಿಂತಲೂ ಹೆಚ್ಚು ಸಂಖ್ಯಾಬಲವನ್ನು ಹೊಂದಿದ್ದ, ಕೆಎಸ್‌ಆರ್‌ಪಿ ಘಟಕಕ್ಕೆ ಬಹಳ ಕಡಿಮೆ ಪ್ರಮಾಣದಲ್ಲಿ ಪಾಲು ದೊರೆಯುತ್ತಿತ್ತು.
ಈ ವಿಷಯವನ್ನು ನಾನು ಆಗ ಡಿಜಿಪಿಯವರಾಗಿದ್ದ ದಿನಕರ್ ಅವರ ಗಮನಕ್ಕೆ ತಂದೆನು. ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳ ಆಧುನೀಕರಣ, ಅವರಿಗೆ ವೈರ್‌ಲೆಸ್ ಉಪಕರಣಗಳ ಪೂರೈಕೆ, ಹೊಸ ವಾಹನಗಳನ್ನು ಒದಗಿಸುವ ಕುರಿತು ಮತ್ತು ಬೆಟಾಲಿಯನ್ ಗಳಿಗೆ ಅವಶ್ಯವಿದ್ದ ಹೊಸ ಕಟ್ಟಡಗಳಿಗೆ ಅನುದಾನವನ್ನು, ಆಧುನೀಕರಣ ಯೋಜನೆಯ ವೆಚ್ಚದಲ್ಲಿ ನೀಡಲು ಮನವಿ ಮಾಡಿದೆನು.
ಆಧುನೀಕರಣ ವೆಚ್ಚದ ಶೇ. ೧೫ರಷ್ಟು ಮೊತ್ತವನ್ನು, ಪ್ರತಿಯೊಂದು ಶೀರ್ಷಿಕೆಯಡಿಯಲ್ಲಿ ಕೆಎಸ್‌ಆರ್‌ಪಿ ಘಟಕಕ್ಕೆ ಮೀಸಲಿಡ ಬೇಕು ಎಂದು ಕೇಳಿಕೊಂಡೆನು.
(…ಮುಂದುವರಿಯುವುದು)