ಹಿಂದಿರುಗಿ ನೋಡಿದಾಗ
ಭಾರತದಲ್ಲಿ ಪ್ರಸವ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯು ಕ್ರಿ.ಪೂ. 2000ದಷ್ಟು ಹಿಂದಿನ ಕಾಲದಿಂದಲೂ ದೊರೆಯುತ್ತದೆ.
ಋಗ್ವೇದ, ಯಜುರ್ವೇದ, ಅಥರ್ವವೇದ, ಶತಪಥ ಬ್ರಾಹ್ಮಣ, ಛಾಂದೋಗ್ಯ ಉಪನಿಷತ್, ನಾರಾಯಣೋ ಪನಿಷತ್ ಹಾಗೂ ಗರ್ಭೋಪನಿಷತ್ತುಗಳಲ್ಲಿ ಇಂದಿಗೂ ಉಪಯುಕ್ತವಾಗಬಹುದಾದ ಅಸಂಖ್ಯ ಮಾಹಿತಿ ಗಳು ದೊರೆಯುತ್ತವೆ.
ಕ್ರಿ.ಪೂ. 2000ದಿಂದ ಕ್ರಿ.ಪೂ. 600ರವರೆಗೆ ಭಾರತದಲ್ಲಿ ಲಭ್ಯವಿದ್ದ ವೈದ್ಯಕೀಯ ಜ್ಞಾನವೆಲ್ಲ ಸುಶ್ರುತ ಸಂಹಿತೆಯಲ್ಲಿ ಸಂಗ್ರಹ ವಾಗಿದೆ. ಸಹಜವಾಗಿ ಇದರಲ್ಲಿ ಪ್ರಸವ ವಿಜ್ಞಾನಕ್ಕೆ ಸಂಬಂಽಸಿದ ಮಾಹಿತಿ ದೊರೆಯುತ್ತದೆ. ಕ್ರಿ.ಪೂ. 600ರಿಂದ ಕ್ರಿ.ಪೂ. 200 ರವರೆಗೆ ಆಯುರ್ವೇದದಲ್ಲಾದ ಬೆಳವಣಿಗೆಗಳು ಹಾಗೂ ಸುಧಾರಣೆಗಳು ಚರಕ ಸಂಹಿತೆ ಯಲ್ಲಿ ಸಂಗ್ರಹವಾಗಿವೆ. ಈ ಎರಡೂ ಸಂಹಿತೆಗಳಲ್ಲಿ ಲಭ್ಯವಿರುವ ಪ್ರಸವ ವಿಜ್ಞಾನದ ಮಾಹಿತಿಯು ಸಮಕಾಲೀನ ಪಾಶ್ಚಾತ್ಯ ಜಗತ್ತಿನಲ್ಲಿ ಇರಲಿಲ್ಲ ಎನ್ನುವ ವಿಚಾರವು ಗಮನೀಯ.
ಆಯುರ್ವೇದಕ್ಕೆ ಸ್ತ್ರೀಜನನಾಂಗಗಳ ಅಂಗರಚನೆಯ ಬಗ್ಗೆ ಪ್ರಾಥಮಿಕ ಅರಿವಿತ್ತು. ಮಹಿಳೆಯ ಸೊಂಟ ಪ್ರದೇಶವನ್ನು ರೂಪಿಸಿ, ಜನನಾಂಗಗಳಿಗೆ ಎಡೆಮಾಡಿಕೊಟ್ಟಿರುವ ಶ್ರೋಣಿ ಅಥವಾ ಪೆಲ್ವಿಸ್ ಹಾಗೂ ಅದರೊಳಗೆ ಇರುವ ಪ್ರಧಾನ ಭಾಗಗಳ ಪರಿಚಯ ವಿತ್ತು. ಸುಶ್ರುತ ಮಹರ್ಷಿಗಳ ಅನ್ವಯ ಶ್ರೋಣಿಯಲ್ಲಿ ಐದು ಅಸ್ಥಿಗಳಿವೆ. ತ್ರಿಕಾಸ್ಥಿ, ಹೆಸರೇ ಸೂಚಿಸುವ ತ್ರಿಕೋನಾ ಕೃತಿಯ ಮೂಳೆ (ಸೇಕ್ರಮ್). ಗುದಾಸ್ಥಿ (ಕಾಸಿಕ್ಸ್) ಎನ್ನುವುದು ಗುದ ಪ್ರದೇಶದಲ್ಲಿರುವ ಮೂಳೆ.
ಭಗಾಸ್ಥಿಯು (ಪ್ಯೂಬಿಸ್) ಯೋನಿಯನ್ನು ರಕ್ಷಿಸುವ ಪ್ರಮುಖ ಮೂಳೆ. ನಿತಂಬವನ್ನು ಎರಡು ಶ್ರೋಣಿ ಫಲಕಗಳು (ಐಲಿಯಂ) ರೂಪಿಸುತ್ತವೆ. ಪೃಷ್ಠಾಸ್ಥಿಯನ್ನು (ಇಸ್ಕಿಯಂ) ಶ್ರೋಣಿ ಫಲಕದ ಒಂದು ಭಾಗವೆಂದು ಭಾವಿಸಿದ್ದರು. ಯೋನಿನಾಳವು ಶಂಕುವಿನ ಹಾಗೆ ಇದ್ದು, ಮೂರು ತಿರುವುಗಳನ್ನು ಒಳಗೊಂಡಿದೆ. ಕೊನೆಯ ತಿರುವಿನಲ್ಲಿ ಗರ್ಭಾಶಯವಿರುತ್ತದೆ. ಭ್ರೂಣವು ರೂಪು ಗೊಳ್ಳುವ ಪರಿಯನ್ನು ‘ಗರ್ಭಾವಕ್ರಾಂತಿ’ ಎಂಬ ಶಬ್ದದ ಮೂಲಕ ವಿವರಿಸಿರುವರು.
ಪುರುಷನ ರೇತಸ್ಸು, ಜನನ ಮಾರ್ಗದ ಮೂಲಕ ಶೋಣಿತವನ್ನು (ಓವಮ್) ತಲುಪಿ ಸಂಯೋಗವಾಗುವಾಗ ಜೀವ (ಸೋಲ್)
ಮತ್ತು ಸತ್ತ್ವ (ಮೈಂಡ್) ಅವುಗಳ ಒಳಗೆ ಪ್ರವೇಶಿಸುತ್ತವೆ. ಇವು ಗರ್ಭಾಶಯವನ್ನು ಪ್ರವೇಶಿಸಿ, ಅಲ್ಲಿ ಸ್ಥಾಪಿತವಾಗುತ್ತವೆ. ಭ್ರೂಣ ಬೆಳೆಯಲಾರಂಭಿಸುತ್ತದೆ. ಪ್ರತಿ ತಿಂಗಳೂ ಭ್ರೂಣ ಬೆಳವಣಿಗೆಯಲ್ಲಿ ಆಗುವ ಬದಲಾವಣೆಗಳನ್ನು ಸುಶ್ರುತ ಮಹರ್ಷಿಗಳು ವಿವರಿ ಸಿರುವರು. ಗರ್ಭವತಿಯ ಆರೈಕೆಯ ಬಗ್ಗೆ ಹಾಗೂ ಆಕೆಯು ಪರಿಪಾಲಿಸಬೇಕಾದ ವಿಧಿ ನಿಷೇಧಗಳ ಬಗ್ಗೆ ಮಾಹಿತಿ ನೀಡುವರು.
ಸುಶ್ರುತ ಸಂಹಿತೆಯ 10ನೆಯ ಅಧ್ಯಾಯದಲ್ಲಿ ಪ್ರಸವ ವಿಜ್ಞಾನ ವಿವರಗಳನ್ನು ವಿಸ್ತೃತವಾಗಿ ನೀಡಿರುವರು. ಚಾಂದ್ರಮಾನ ಗಣನೆಯ ಅನ್ವಯ 9-10ನೆಯ ತಿಂಗಳಿನಲ್ಲಿ ಪ್ರಸವವಾಗುತ್ತದೆ. ಒಂದು ಶುಭದಿನದಂದು ದಿನ ತುಂಬಿದ ತಾಯಿಯನ್ನು ಸೂತಿ ಕಾಗೃಹಕ್ಕೆ ವರ್ಗಾಯಿಸುತ್ತಿದ್ದರು. ಪ್ರಸವದ ಸಮಯ ಹತ್ತಿರವಾದಾಗ, ಹೆರಿಗೆಯಲ್ಲಿ ನೆರವಾಗಲು ನಾಲ್ವರು ಉಪಚಾರಿಕೆ ಯರು (ಸಹಾಯಕಿಯರು/ ಸೂಲಗಿತ್ತಿಯರು) ಇರುತ್ತಿದ್ದರು. ಈ ಉಪಚಾರಿಕೆಯರು ತಮ್ಮ ವೈಯುಕ್ತಕ ಸ್ವಚ್ಛತೆಗೆ ಮುಖ್ಯವಾಗಿ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದರು.
ಉಗುರನ್ನು ಬೆಳೆಸಲು ಅವರಿಗೆ ಅನುಮತಿಯಿರಲಿಲ್ಲ. ಶುದ್ಧವಾದ ಬಿಳಿಯ ಉಡುಪನ್ನು ಧರಿಸಿರಬೇಕೆಂದು ನಿಯಮವನ್ನು ವಿಧಿಸಿದ್ದರು. ಇವರ ಮಾತುಕತೆ, ಭಾವಗಳೆಲ್ಲ ಗರ್ಭವತಿಯಲ್ಲಿ ವಿಶ್ವಾಸವನ್ನು ಹುಟ್ಟಿಸುವ ಹಾಗಿರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು. ಪ್ರಸವವೇದನೆಯು ಆರಂಭವಾದಾಗ, ಆಕೆಯ ಇಡೀ ಮೈಗೆ ಎಣ್ಣೆಯನ್ನು ಹಚ್ಚುತ್ತಿದ್ದರು. ಸುಖೋಷ್ಣ ನೀರಿನಲ್ಲಿ
ಸ್ನಾನ ಮಾಡಿಸುತ್ತಿದ್ದರು. ಆಗ ಹುಳಿ ಅಧಿಕವಿರುವ ಗಂಜಿಯನ್ನು ಯಥೇಚ್ಛವಾಗಿ ಕುಡಿಯಲು ನೀಡುತ್ತಿದ್ದರು.
ಗರ್ಭವತಿಯು ತನ್ನ ಬೆನ್ನಿನ ಮೇಲೆ ಮಲಗಿಕೊಂಡು, ಮಂಡಿಗಳೆರಡನ್ನು ಮಡಚಿಕೊಂಡು, ಕಾಲುಗಳನ್ನು ವಿಸ್ತರಿಸ ಬೇಕಾಗು ತ್ತಿತ್ತು. ಇದು ಇಂದಿನ ವೈದ್ಯರು ಅನುಸರಿಸುವ ಲಿಥಾಟಮಿ ಭಂಗಿಯನ್ನು ಹೋಲುತ್ತದೆ. ಹೆರಿಗೆಯು ತ್ವರಿತವಾಗಲಿ ಎಂದು ಯೋನಿ ಮತ್ತು ಭಗಪ್ರದೇಶವನ್ನು ನೀವುತ್ತಿದ್ದರು. ಗರ್ಭವತಿಯಲ್ಲಿ ನಿಜವಾದ ನೋವು ಕಾಣಿಸಿಕೊಂಡಾಗ ಮಾತ್ರ ಆಕೆಯು ಮುಕ್ಕಬೇಕಾಗಿತ್ತು. ಸುಮ್ಮನೇ ಮುಕ್ಕಿ ದಣಿಯುವುದನ್ನು ತಪ್ಪಿಸುವುದು ಅಗತ್ಯವಾಗಿತ್ತು.
ಮಗುವಿನ ಶಿರವು ಯೋನಿಮುಖದಲ್ಲಿ ಕಾಣಿಸಿಕೊಂಡಾಗ ಜೋರಾಗಿ ಮುಕ್ಕಲು ಸೂಚನೆಯನ್ನು ಕೊಡುತ್ತಿದ್ದರು. ಹೆರಿಗೆಯು ಸ್ವಲ್ಪ ತಡವಾಗುತ್ತಿದೆ ಎಂದು ಅನಿಸಿದಾಗ, ಹೆರಿಗೆಯು ತ್ವರಿತವಾಗಿ ನಡೆಯಲು ಯೋನಿ ಪ್ರದೇಶದಲ್ಲಿ ವಿಶೇಷ ಲೇಪನವನ್ನು
ಹಚ್ಚುತ್ತಿದ್ದರು. ಈ ಲೇಪನವು ಹೆರಿಗೆಯನ್ನು ತ್ವರಿತಗೊಳಿಸುತ್ತಿತ್ತು. ಶಿಶುಜನನವಾದ ಕೂಡಲೆ, ಶಿಶುವಿನ ಕಣ್ಣು, ಕಿವಿ, ಮೂಗು,
ಂi ಸ್ವಚ್ಛಗೊಳಿಸಬೇಕಾಗಿತ್ತು.
ಮಗುವು ಉಸಿರಾಡದಿದ್ದಲ್ಲಿ ತಣ್ಣೀರನ್ನು ಮುಖಕ್ಕೆ ಎರಚುತ್ತಿದ್ದರು. ಹೊಕ್ಕಳು ಬಳ್ಳಿಯನ್ನು ದಾರದಿಂದ ಕಟ್ಟುತ್ತಿದ್ದರು. ಹೊಕ್ಕಳಿನಿಂದ ಸುಮಾರು ಎಂಟು ಬೆರಳುಗಳಷ್ಟು ದೂರದಲ್ಲಿ ದಾರವನ್ನು ಕಟ್ಟಿ, ಬಳ್ಳಿಯನ್ನು ಛೇದಿಸುತ್ತಿದ್ದರು. ಶಿಶುವಿನ ಹೆರಿಗೆಯು ಸರಾಗವಾಗಿ ಆದಮೇಲಿನ 10-15 ನಿಮಿಷಗಳಲ್ಲಿ ಅದು ಸ್ವಯಂ ಹೊರಬೇಕಾಗುತ್ತದೆ. ಹಾಗೆ ಹೊರ ಬರಲು ತಡ ವಾದರೆ ಅದು ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು. 30 ನಿಮಿಷಗಳಾದರೂ ಮಾಸು ಹೊರಬರ ದಿದ್ದಲ್ಲಿ, ಅದನ್ನು ತಡೆ ಹಿಡಿದ ಮಾಸು (ರೀಟೈನ್ಡ್ ಪ್ಲಾಸೆಂಟ) ಎಂದು ಕರೆಯುತ್ತಾರೆ. ಈ ಬಗ್ಗೆ ಸುಶ್ರುತ ಮಹರ್ಷಿಗಳಿಗೆ ಅರಿವಿತ್ತು.
ಇಂತಹ ಸಂದರ್ಭದಲ್ಲಿ ಮಾಸು ಸರಾಗವಾಗಿ ಹೊರಬರಲು ಸುಶ್ರುತ ಮಹರ್ಷಿಗಳು, ಸೂಲಗಿತ್ತಿಯು ತನ್ನ ತೋರುಬೆರಳಿಗೆ ಕೂದಲನ್ನು ಸುತ್ತಿಕೊಂಡು, ಅದನ್ನು ಗರ್ಭವತಿಯ ಗಂಟಲಿನೊಳಗೆ ತೂರಿಸಬೇಕು ಎನ್ನುತ್ತಿದ್ದರು. ಆಗ ಗರ್ಭವತಿಗೆ ವಾಂತಿ ಬಂದಂತಾಗಿ ವಾಕರಿಸುತ್ತಿದ್ದಳು. ಆಗ ಆಕೆಯ ಉದರ ಪ್ರದೇಶದಲ್ಲಿ ಅಧಿಕ ಒತ್ತಡವು ಏರ್ಪಟ್ಟು, ಆ ಒತ್ತಡವು ಗರ್ಭಕೋಶಕ್ಕೂ ವರ್ಗಾವಣೆಯಾಗಿ ಮಾಸು ತ್ವರಿತವಾಗಿ ಹೊರಬರುತ್ತಿತ್ತು.
ತಡೆ ಹಿಡಿದ ಮಾಸನ್ನು ಹೊರತಲು ಯೋನಿ ಅಥವ ಉದರ ಭಿತ್ತಿಗೆ ಕೆಲವು ಲೇಪನಗಳನ್ನು ಹಚ್ಚಲೂ ಸೂಚಿಸುತ್ತಿದ್ದರು. ಪ್ರಸವದ ನಂತರ ರಕ್ತಸ್ರಾವ ಮತ್ತು ನೋವನ್ನು ಕಡಿಮೆ ಮಾಡಲು ಮೂಲಿಕೆಗಳಿಂದ ತಯಾರಿಸಿದ ಔಷಧಗಳನ್ನು ನೀಡು ತ್ತಿದ್ದರು. ಸುಶ್ರುತ ಮಹರ್ಷಿಗಳು ಹಾಗೂ ನಂತರದ ಆಯುವೇದಾಚಾರ್ಯರು ಮೂಢಗರ್ಭ ಅಥವಾ ದುರ್ಗಮ ಪ್ರಸವಗಳ (ಅಬ್‌ಸ್ಟ್ರಕ್ಟೆಡ್ ಲೇಬರ್) ವಿಸ್ತೃತ ವಿವರಣೆಯನ್ನು ನೀಡಿರುವರು. ಸಕಾಲದಲ್ಲಿ ಪ್ರಸವವು ಆಗದಿರಲು ದೋಷಗಳು ತಾಯಿಯ ಗರ್ಭಾಶಯದಲ್ಲಿರಬಹುದು ಅಥವಾ ಮಗುವಿನ ರಚನೆಯಲ್ಲಿರಬಹುದು.
ಸಂದರ್ಭಕ್ಕೆ ತಕ್ಕ ಹಾಗೆ ನೀಡಬೇಕಾದ ಉಪಚಾರದ ಬಗ್ಗೆ ವಿವರಗಳಿವೆ. ಸಹಜಪ್ರಸವದಲ್ಲಿ ಮೊದಲು ಮಗುವಿನ ತಲೆಯು ಹೊರಗೆ ಬಂದು, ನಂತರ ಮಗುವಿನ ಉಳಿದ ಶರೀರ ಭಾಗವು ಹೊರಬರುತ್ತದೆ. ಅಸಹಜ/ದುರ್ಗಮ ಪ್ರಸವದಲ್ಲಿ ಮಗುವಿನ ದೇಹ ಅಡ್ಡಡ್ಡ ಸಿಕ್ಕಿಹಾಕಿಕೊಳ್ಳಬಹುದು, ತಲೆಯ ಬದಲು ಮಗುವಿನ ಗುದ ಇಲ್ಲವೇ ಪಾದವೇ ಮುಂದಾಗಿ ಬರಬಹುದು. ಇಂತಹ
ಸಮಯದಲ್ಲಿ ತಾಯಿಯ ಹೊಟ್ಟೆಯನ್ನು ನೀವಿ ಮಗುವಿನ ಸ್ಥಾನವನ್ನು ಬದಲಿಸಿ ಪ್ರಸವವನ್ನು ಸರಾಗವಾಗಿಸುವ ತಂತ್ರವನ್ನು ವಿವರಿಸಿರುವರು.
ತಾಯಿಯ ಹೊಟ್ಟೆಯಲ್ಲಿ ಮಗುವು ಸತ್ತಿದ್ದರೆ, ಸತ್ತ ಮಗುವನ್ನು ತುಂಡು ಮಾಡಿ ಹೊರತೆಗೆಯುವ ಅಥವಾ ತಾಯಿಯು ಮರಣಿಸಿ, ಮಗುವು ಜೀವಂತವಾಗಿದ್ದಾಗ, ತಾಯಿಯ ಉದರವನ್ನು ಸೀಳಿ, ಮಗುವನ್ನು ಹೊರತೆಗೆಯುವ ಶಸ್ತ್ರ ಚಿಕಿತ್ಸೆಯ
ಬಗ್ಗೆಯೂ ವಿವರಿಸಿರುವರು. ಸುಶ್ರುತ ಮಹರ್ಷಿಗಳಿಗೆ ಬಾಣಂತಿಯ ನಂಜು ತಿಳಿದಿತ್ತು. ಇದನ್ನು ಶರೀರ ಅಧ್ಯಾಯದಲ್ಲಿ ತಿಳಿಸಿದ್ದು ಇದನ್ನು ಸೂತಿಕಾ ಮಕ್ಕಾಲ ಶೂಲ ಎಂದು ಕರೆದಿರುವರು. ಇದು ಪ್ರಸವ ಸೋಂಕು. ಜನನಮಾರ್ಗದಲ್ಲಾದ ಗಾಯಗಳಲ್ಲಿ ಅಥವಾ ಅಳಿದುಳಿದ ರಕ್ತದಲ್ಲಿ ಬ್ಯಾಕ್ಟೀರಿಯ ಇಲ್ಲವೇ ವೈರಸ್‌ಗಳು ವಧಿಸಿದಾಗ ನಂಜಿಗೆ ಕಾರಣವಾಗುತ್ತದೆ.
ಬಾಣಂತಿಯ ನಂಜು ತಾಯಂದಿರ ಸಾವಿಗೆ ಕಾರಣವಾಗುತ್ತಿದ್ದುದು ಅಪರೂಪವೇನಲ್ಲ. ಸುಶೃತ ಮಹರ್ಷಿಗಳು ಈ ನಂಜನ್ನು
ತಡೆಗಟ್ಟಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ವಿಸ್ತೃತವಾಗಿ ವಿವರಿಸಿರುವರು. ಸೂತಿಕಾ ಪರಿಚರ್ಯ ಎಂಬ ಹೆಸರಿ ನಲ್ಲಿ ಪ್ರಸವೋತ್ತರ ತಾಯಂದಿರ ಆರೈಕೆಯನ್ನು ಹೇಗೆ ಮಾಡಬೇಕೆಂದು ವಿವರಗಳು ದೊರೆಯುತ್ತವೆ.
ಪ್ರಸವದ ನಂತರ ಶಿಶುವಿನ ಆರೈಕೆಯ ಕುರಿತೂ ವಿವರಗಳು ದೊರೆಯುತ್ತವೆ. ಶಿಶುವನ್ನು ನವಿರಾದ ಎಣ್ಣೆಲೇಪಿತ ಬಟ್ಟೆಯಲ್ಲಿ ಸುತ್ತುತ್ತಿದ್ದರು. ಶಿಶುವಿನ ಕೋಣೆಯಲ್ಲಿ ವಿಶೇಷ ಧೂಪವನ್ನು ಹಾಕುತ್ತಿದ್ದರು. ಶಿಶುವಿರುವ ಪರಿಸರವು ಸಾಕಷ್ಟು ಕ್ರಿಮಿರಹಿತ ವಾಗಿರಲಿ ಎನ್ನುವುದು ಈ ನಿತ್ಯ ಧೂಪಚಿಕಿತ್ಸೆಯ ಮೂಲ ಉದ್ದೇಶವಾಗಿತ್ತು. ತಾಯಿಯು ತನ್ನ ಹಾಲನ್ನು ಮೊದಲ ಎರಡು ದಿನಗಳವರೆಗೆ ನೀಡದಂತೆ ತಡೆಯುತ್ತಿದ್ದರು. ಈ ಪದ್ಧತಿಯು ಅವೈಜ್ಞಾನಿಕ ಎಂದು ಈಗ ತಿಳಿದಿದೆ.
ಮೊದಲ ೨ ದಿನ ಒಸರುವ ಹಳದಿಬಣ್ಣದ ಗಿಣ್ಣು ಹಾಲಿನಲ್ಲಿ ರೋಗಜನಕಗಳನ್ನು ನಿಗ್ರಹಿಸುವ ಇಮ್ಯುನೋಗ್ಲಾಬ್ಯುಲಿನ್ನುಗಳು ಹೇರಳವಾಗಿರುವ ಕಾರಣ, ಈ ಹಳದಿಹಾಲನ್ನು ಕಡ್ಡಾಯವಾಗಿ ಕುಡಿಸಬೇಕಾಗುತ್ತದೆ. ಪ್ರಾಚೀನ ಭಾರತದಲ್ಲಿ ಈ ಹಳದಿ ಹಾಲನ್ನು ಅಸಹಜ ಹಾಲೆಂದು ಅಥವಾ ಅದನ್ನು ಶಿಶುವು ಜೀರ್ಣಿಸಿಕೊಳ್ಳಲಾರದೆಂದು ತರ್ಕಿಸಿ, ಬಹುಶಃ ಹಾಲನ್ನು ಹಿಂಡಿ ಚೆಲ್ಲುತ್ತಿದ್ದರೆಂದು ಕಾಣುತ್ತದೆ. ಈ ಅವಧಿಯಲ್ಲಿ ಮಗುವಿಗೆ ಜೇನುನೀರನ್ನು ಕುಡಿಸುತ್ತಿದ್ದರು.
ಚರಕಮಹರ್ಷಿಗಳು ಪ್ರಸವವನ್ನು ಮಾಡಿಸಲು ಪುರುಷ ಸೂಲಗಿತ್ತಿಯರೇ ಸೂಕ್ತ ಎಂದಿರುವರು. ಉಪಚಾರಿಕೆಯರ ಲಕ್ಷಣ ಗಳ ಬಗ್ಗೆ ನಿಖರ ಮಾಹಿತಿಯನ್ನು ನೀಡಿರುವರು. ಮೊದಲನೆಯದು ಸ್ವಚ್ಛತೆ. ಅವರು ದೈಹಿಕವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳ ಬೇಕಿತ್ತು. ಎರಡನೆಯದು ಇತ್ಯಾತ್ಮಕ ಮನೋಭಾವ. ಅವರು ಯಾವಾಗಲು ಮನಸ್ಸಿನಲ್ಲಿ ಇತ್ಯಾತ್ಮಕವಾದ ವಿಚಾರಗಳನ್ನೇ ಮಾಡಬೇಕಾಗಿತ್ತು. ಅವರು ದಕ್ಷರಾಗಿರಬೇಕಿತ್ತು. ಅಂದರೆ ಅವರಿಗೆ ಅಗತ್ಯ ಅನುಭವವು ಇರಬೇಕಿತ್ತು.
ಮೂರನೆಯ ಲಕ್ಷಣವೆಂದರೆ ಅನುರಕ್ತಾ. ಅಂದರೆ ತಾವು ಮಾಡುವ ಕೆಲಸವನ್ನು ಅವರು ಮನಸಾರೆ ಒಪ್ಪಿ ಮಾಡಬೇಕಾಗಿತ್ತು. ನಾಲ್ಕನೆಯ ಬುದ್ಧಿಮಾನ್, ಅಂದರೆ ಬುದ್ಧಿವಂತಿಕೆಯಿರಬೇಕಿತ್ತು. ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಅಗತ್ಯವಾದ ಮಾಹಿತಿ ಮತ್ತು ಧೈರ್ಯವಿರಬೇಕಿತ್ತು. ಅಶೋಕನ ಕಾಲದಲ್ಲಿ ಆಸ್ಪತ್ರೆಗಳು ನಿರ್ಮಾಣವಾದವು. ಬೌದ್ಧ ಗುರುಗಳು ವೈದ್ಯಕೀಯ ಚಿಕಿತ್ಸೆಯ ಹೊಣೆಯನ್ನು ಹೊತ್ತಿದ್ದರು. ಭಾರತದ ಮೇಲೆ ಮುಸ್ಲಿಮರ ಆಕ್ರಮಣವಾಗುವವರೆಗೂ ಇಲ್ಲಿನ ವೈದ್ಯಕೀಯ ಚಿಕಿತ್ಸೆ ಯಲ್ಲಿ ಯಾವುದೇ ಅನಗತ್ಯ ಬದಲಾವಣೆಗಳು ಆಗದೆ ಅನೂಚಾನವಾಗಿ ನಡೆದುಕೊಂಡು ಹೋಗುತ್ತಿದ್ದವು.