ನೂರೆಂಟು ವಿಶ್ವ
vbhat@me.com
ಕಳೆದ ಎರಡು ವಾರಗಳಿಂದ ಬರಿ ಎಂಜಲು ಬಾಳೆಯದೇ ಪೋಸಿಂಗ್ಸ್, ವಾಟ್ಸಾಪ್ನಲ್ಲೂ ಅವೇ ಅವೇ ಚಿತ್ರ. ಬಿಸಿಬಿಸಿ ಚರ್ಚೆ!
ಹೀಗೆಂದು ಹಾಲಿ ಸಚಿವ ಮಿತ್ರರೊಬ್ಬರು ಚಟಾಕಿ ಹಾರಿಸಿದರು. ನಾನೂ ಸುಮ್ಮನೆ ನಕ್ಕೆ. ಮರು ಮಾತಿಗೆ ಅವರು, ‘ನೀವು
ಆರಂಭಿಸಿದ ಈ ಅಭಿಯಾನಕ್ಕೆ far reaching impact (ದೂರಗಾಮಿ ಪರಿಣಾಮ) ಇದೆ. ನಾನೂ ಇನ್ನು ಮುಂದೆ ಇದೇ ರೀತಿ ಊಟ ಮಾಡುತ್ತೇನೆ’ ಎಂದು ಹೇಳಿದರು. ಇದೆಲ್ಲ ಆರಂಭವಾಗಿದ್ದು ಶಂಕರಪುರಂನಲ್ಲಿರುವ ಬ್ರಾಹ್ಮಣ ಕಾಫಿ ಬಾರ್ನ ಮಾಲೀಕರಾದ ರಾಧಾಕೃಷ್ಣ ಅಡಿಗರಿಂದ. ಅವರನ್ನು ನಮ್ಮ ಮನೆಯ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದೆ. ಅವರು ಊಟ ಮಾಡಿದ್ದನ್ನು ನೋಡಿ ನನಗೆ ಬಹಳ ಸಂತೋಷವಾಯಿತು.
ಅವರು ಊಟ ಮಾಡಿ ಮುಗಿಸುತ್ತಿದ್ದಂತೆ, ಅವರ ಪಕ್ಕದಲ್ಲಿ ಕುಳಿತ ಸ್ನೇಹಿತರಾದ ನಂಜನಗೂಡು ಮೋಹನ್ ಅವರು, ‘ಭಟ್ರೇ, ಎಲ್ಲರದ್ದೂ ಊಟ ಮುಗಿಯಿತು, ಆದರೆ ಅಡಿಗರು ಮಾತ್ರ ಇನ್ನೂ ಅನ್ನವನ್ನೇ ಹಾಕಿಸಿ ಕೊಂಡಿಲ್ಲ, ಏನು ಸಮಸ್ಯೆ ಅಂತ ಅತಿಥಿ ಯನ್ನು ನೀವು ಕೇಳಬಾರದೇ?’ ಎಂದರು. ನನಗೆ ಒಂದು ಕ್ಷಣ ಗಾಬರಿ ಯಾಯಿತು. ‘ಏನು ಅಡಿಗರೇ, ಯಾವ ಪದಾರ್ಥವನ್ನೂ ಹಾಕಿಸಿಕೊಂಡಿಲ್ಲವಲ್ಲ? ಏನಾಯ್ತು? ಯಾಕೆ ಊಟ ಮಾಡಿಲ್ಲ?’ ಎಂದು ಕೇಳಿದೆ.
ಅದಕ್ಕೆ ಮೋಹನ್ ಅವರೇ ಹೇಳಿದರು – ‘ಭಟ್ರೇ, ಸುಮ್ನೆ ತಮಾಷೆ ಮಾಡಿದೆ. ಅಡಿಗರು ಈಗ ತಾನೇ ಊಟ ಮುಗಿಸಿದರು.’
ನನಗೆ ತಕ್ಷಣ ನಂಬಿಕೆ ಬರಲಿಲ್ಲ. ಅವರ ಬಾಳೆಲೆ ಸನಿಹ ಬಂದು ನೋಡಿದೆ. ಅವರು ಊಟ ಮಾಡಿದ ಯಾವ ಕುರುಹೂ
ಕಾಣಲಿಲ್ಲ. ಅವರ ಕೈಯನ್ನು ನೋಡಿದೆ. ಊಟ ಮಾಡಿದಂತೆ ಕಾಣಲಿಲ್ಲ. ‘ಅಡಿಗರೇ, ನಿಜಕ್ಕೂ ಊಟ ಮಾಡಿದ್ದೀರಾ?
ಮೋಹನ್ ತಮಾಷೆ ಮಾಡುತ್ತಿಲ್ಲವಷ್ಟೆ?’ ಎಂದು ಕೇಳಿದೆ.
ಅಡಿಗರು ತಮ್ಮ ಹೊಟ್ಟೆಯನ್ನು ಸವರುತ್ತಾ, ಸಣ್ಣಗೆ ತೇಗಿದರು. ಆಗ ಅವರು ಊಟ ಮಾಡಿದ್ದು ದೃಢವಾಯಿತು! ಅಡಿಗರು ಅಷ್ಟು ಸಪಾಟವಾಗಿ, ಸ್ವಚ್ಛವಾಗಿ ಊಟ ಮಾಡಿದನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಕಾರಣ ನಾನೂ ಹಾಗೇ
ಊಟ ಮಾಡುವವನು. ನಾನು ಊಟ ಮಾಡಿ ಎದ್ದ ನಂತರ, ತಾಟು ಅಥವಾ ಬಾಳೆಯಲ್ಲಿ ಒಂದೇ ಒಂದು ಅಗುಳನ್ನು ಸಹ ನೋಡಲು ಸಾಧ್ಯವಿಲ್ಲ. ಉಪ್ಪು, ಉಪ್ಪಿನಕಾಯಿ, ಬೇವಿನ ಸೊಪ್ಪನ್ನು ಸಹ ನಾನು ಬಿಡುವುದಿಲ್ಲ.
ಅಪವಾದವೆಂದರೆ ನುಗ್ಗೆಕಾಯಿ ಹೋಳು. ಅದನ್ನು ಮಾತ್ರ ಜಗಿದು ಜಗಿದು, ಗಾಣಕ್ಕೆ ಸಿಕ್ಕ ಕಬ್ಬಿನ ಜಯಂತೆ ರಸಹೀರಿ ಬಾಳೆಲೆಯ ತುದಿಯಲ್ಲಿ ಬಿಡುತ್ತೇನೆ. ಅದು ಬಿಟ್ಟರೆ ನನ್ನ ಪಾಲಿಗೆ ಎಲ್ಲವೂ ಭಕ್ಷ್ಯವೇ. ಕೆಲವು ಸ್ನೇಹಿತರು ನಾನು ಊಟ ಮಾಡುವ ರೀತಿಯನ್ನು ನೋಡಿ, ‘ಸಾಕು ಊಟ ಮಾಡಿದ್ದು, ನಮ್ಮ ಮನೆಯ ಪ್ಲೇಟನ್ನಾದರೂ ಬಿಡು ಮಾರಾಯ’ ಎಂದು ತಮಾಷೆ ಮಾಡುವುದುಂಟು.
ಈ ವಿಷಯದಲ್ಲಿ ನಾನು shameless felow. ಮನೆಯಲ್ಲಿ ಯಾರಾದರೂ ಒಂದು ಅಗುಳು ಅನ್ನಬಿಟ್ಟರೆ, ತರಕಾರಿಯನ್ನು ಬಿಟ್ಟರೆ, ಅಂದು ಊಟದ ಟೇಬಲ್ ಮುಂದೆ ಸಣ್ಣ ಕದನ. ಇದರಿಂದ ನನ್ನ ಮಗನಿಗೆ, ಪತ್ನಿಗೆ ಕಸಿವಿಸಿಯಾಗಬಹುದು, ಆಗುತ್ತದೆ. ಆದರೆ ನಾನು ಮಾತ್ರ ಈ ವಿಷಯದಲ್ಲಿ ಮಹಾ ಜಿಗುಟ. ಈ ವಿಷಯದಲ್ಲಿ ಬೇರೆಯವರಿಗೆ ಕಸಿವಿಸಿಯಾದರೂ ಪರವಾಗಿಲ್ಲ, ನಾನು ಒಂದು ‘ಬೌದ್ಧಿಕ್’ ಕೊಟ್ಟೇ ಕೊಡ್ತೇನೆ.
‘ನಿಮಗೆ ಇಷ್ಟ ಇ ಅಂದ್ರೆ ಯಾಕೆ ಹಾಕಿಸಿಕೊಂಡಿರಿ? ನೀವು ಆಹಾರವನ್ನು ಬೆಳೆದರೂ, ಅದನ್ನು ಚೆಲ್ಲುವ ಅಧಿಕಾರವಿಲ್ಲ. ಅದರಲ್ಲೂ ನೀವು ಭತ್ತ ಮತ್ತು ತರಕಾರಿ ಬೆಳೆಯುವುದಿಲ್ಲ. ಹಣ ಕೊಟ್ಟು ಖರೀದಿಸಿದ ಮಾತ್ರಕ್ಕೆ ಅವನ್ನು ಬಿಸಾಡುವ ಅಽಕಾರ ಇಲ್ಲ. ನೀವು ತಾಟಿನಲ್ಲಿ ಅನ್ನವನ್ನು ಚೆಲ್ಲುವಾಗ, ಎರಡು ಹೊತ್ತು ಊಟಕ್ಕೆ ಗತಿಯಿಲ್ಲದವರನ್ನು ನೆನಪಿಸಿಕೊಳ್ಳಿ, ಹಸಿವಿನಿಂದ ಸಾಯುವವರನ್ನು ನೆನಪಿಸಿಕೊಳ್ಳಿ.
ಅಷ್ಟಾಗಿಯೂ ಅನ್ನ ಬಿಡಬೇಕು ಎಂದು ಅನಿಸಿದರೆ ಬಿಡಿ. ನಿನ್ನ ಒಂದು ಅಗುಳು, ಇರುವೆಗೆ ಆ ದಿನದ ಭರ್ಜರಿ ಭೋಜನ!
ಒಂದು ಅಗುಳನ್ನೂ ವ್ಯರ್ಥ ಮಾಡಬೇಡಿ. ಬೇಕಷ್ಟನ್ನೇ ಹಾಕಿಸಿಕೊಳ್ಳಿ. ಉಪ್ಪು – ಉಪ್ಪಿನಕಾಯಿ ಬೇಡವೆಂದರೆ, ಹಾಕಿಸಿ ಕೊಳ್ಳ ಬೇಡಿ. ನೀವು ಉಣ್ಣುವುದು ಎರಡು ಸೌಟು ಅನ್ನವಾದರೆ, ಮೂರನೇ ಸೌಟನ್ನು ಯಾವ ಕಾರಣಕ್ಕೂ ಹಾಕಿಸಿಕೊಳ್ಳಬೇಡಿ.
ಒಂದು ವೇಳೆ ಒತ್ತಾಯ ಮಾಡಿ ಬಡಿಸಿದರೆ, ಅದನ್ನು ಚೆಲ್ಲ ಬೇಡಿ. ತುಸು ಭಾರವೆನಿಸಿದರೂ ಊಟ ಮಾಡಿ, ರಾತ್ರಿ ಊಟವನ್ನು ಬಿಡಿ ಅಥವಾ ಕಡಿಮೆ ಮಾಡಿ. ಹೊರತು ಯಾವ ಕಾರ ಣಕ್ಕೂ ಬಾಳೆಲೆಯಲ್ಲಿ ಏನನ್ನೂ ಬಿಡಬೇಡಿ’ ಎಂದು ಸಣ್ಣ
ಭಾಷಣವನ್ನೇ ಮಾಡುತ್ತೇನೆ.
ಇದರಿಂದ ಯಾರು ಏನೇ ತಿಳಿದುಕೊಳ್ಳಲಿ, ನಾನು ಹೇಳುವುದನ್ನು ಹೇಳಿಯೇ ತೀರುತ್ತೇನೆ. ಕಾರಣ ನಮಗೆ ಆಹಾರ ಚೆಲ್ಲುವ ಅಧಿಕಾರ ಇಲ್ಲವೇ ಇಲ್ಲ ಎಂದು ಬಲವಾಗಿ ನಂಬಿದವನು ನಾನು. ಇದರಿಂದ ನನಗೆ ಗೊತ್ತು, ನನ್ನ ಮಗನಿಗೆ ಆರಂಭದಲ್ಲಿ ತುಸು ‘ಹಿಂಸೆ’ ಆಗುತ್ತಿತ್ತು. ಈಗ ಆತನಿಗೆ ನಾನೇಕೆ ಗದರುತ್ತೇನೆ ಎಂಬುದು ಅರ್ಥವಾಗಿದೆ. ಈಗ ಬೇರೆಯವರಿಗೆ ಬೌದ್ಧಿಕ್
ಕೊಡುವಷ್ಟು ಆತ ಬದಲಾಗಿದ್ದಾನೆ. ಮನೆಯಲ್ಲಿ ಬದಲಾವಣೆ ತರದೇ ಅದನ್ನು ಬೀದಿಯಲ್ಲಿ, ಸಮಾಜದಲ್ಲಿ ತರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಅಡಿಗರು ಸ್ವಚ್ಛವಾಗಿ ಊಟ ಮಾಡಿದ್ದನ್ನು ನೋಡಿ ಬಹಳ ಸಂತೋಷ ಮತ್ತು ಸಮಾಧಾನವಾಯಿತು.
ತಕ್ಷಣ ಅಡಿಗರ ಸ್ವಚ್ಛ ಬಾಳೆಲೆಯ ಫೊಟೋವನ್ನು ಕ್ಲಿಕ್ಕಿಸಿಕೊಂಡು, ನಾನು ನನ್ನ ಫೇಸ್ ಬುಕ್ ಗೋಡೆಯ ಮೇಲೆ ಪೋಸ್ಟ್
ಮಾಡಿದೆ. ಮದುವೆ-ಮುಂಜಿ, ಗೃಹಪ್ರವೇಶ, ಔತಣಕೂಟದಲ್ಲಿ ಬಾಳೆಯಲ್ಲಿ ಹಾಕಿಸಿಕೊಂಡ ಭೋಜನವನ್ನು ಅರ್ಧ ಊಟ ಮಾಡಿ, ನಿರ್ದಯವಾಗಿ ಬಿಸಾಕುವವರಿಗೆ, ಅಡಿಗರು ಆದರ್ಶವಾಗಲಿ, ಅವರು ಊಟ ಮಾಡುವ ರೀತಿಯಿಂದ ಪ್ರೇರಣೆ ಸಿಗಲಿ ಎಂಬ ಕಾರಣಕ್ಕೆ ನಾನು ಅದನ್ನು ಪೋಸ್ಟ್ ಮಾಡಿದ್ದು.
ಇಲ್ಲಿ ನನಗೆ ಬೇಸರವಾಗಿದ್ದೇನೆಂದರೆ ಅನೇಕರು, ‘ಅಡಿಗರು ಊಟ ಮಾಡಿಲ್ಲ, ಅದು ಊಟ ಮಾಡುವುದಕ್ಕಿಂತ ಅಂದರೆ
ಬಾಳೆಲೆಗೆ ಪದಾರ್ಥಗಳನ್ನು ಬಡಿಸುವುದಕ್ಕಿಂತ ಮುನ್ನ ತೆಗೆದ ಫೋಟೋ ಇರಬಹುದು, ಅವರು ಊಟ ಮಾಡಿದಂತೆ ಅನಿಸುವುದಿಲ್ಲ, ಕೈ ನೆಕ್ಕಿರುವ ಸಾಧ್ಯತೆ ಇಲ್ಲ, ಕೈ ಕ್ಲೀನಾಗಿದೆ, ನಾಲಗೆಯಲ್ಲಿ ನೆಕ್ಕಿದ್ರೂ ಇಷ್ಟು ಕ್ಲೀನ್ ಆಗಲಿಕ್ಕಿಲ್ಲ.. ಹೇಗೆ ಇಷ್ಟು
ಕ್ಲೀನ್ ಮಾಡಿದ್ರೋ ಗೊತ್ತಾಗಲಿಲ್ಲ…ವೀಡಿಯೋ ಇದ್ದಿದ್ರೆ ಹಾಕಬೇಕಿತ್ತು, ಇದು ಊಟದ ಮುಂಚಿನ ಫೊಟೋನೇ, ಊಟ ಮಾಡಿದ ನಂತರ ಈ ರೀತಿಯ ಸ್ವಚ್ಛತೆ ಸಾಧ್ಯವೇ?, ಕೊನೆ ಪಕ್ಷ ಬಿಸಿ ಅನ್ನ ಬಿಸಿ ಸಾಂಬಾರ್ ಬಿದ್ದ ನಂತರ ಎಲೆಯ
ಬಣ್ಣ ಸ್ವಲ್ಪ ಬದಲಾಗುತ್ತದೆ, ಈ ಪರಿ ಸ್ವಚ್ಛವಾಗಿರಲು ಸಾಧ್ಯವೇ?, ಊಟ ಮಾಡಿರೋ ವಿಡಿಯೋ ಇದ್ರೆ ದಯಮಾಡಿ ಹಾಕಿ ನಮಗೆ ಇನ್ನೂ ನಂಬಿಕೆ ಬರ್ತಾ ಇಲ್ಲ, ಇದು ಊಟಕ್ಕಿಂತ ಮೊದಲಿನ ಫೋಟೊ, ಬೇರೇನೂ ನೋಡಬೇಡಿ.. ನೀರಿನ ಬಾಟಲಿ ನೋಡಿ ಅದರ ಮುಚ್ಚಳದ ಸೀಲ್ ಓಪನ್ ಕೂಡ ಆಗಿಲ್ಲ, ಇಷ್ಟು ಸ್ವಚ್ಛವಾಗಿ ಊಟ ಆದ ನಂತರ ಎಲೆ ಇರಲು ಸಾಧ್ಯವೇ ಇಲ್ಲ… ಅವ್ರು ಒಂದ ಊಟದ ಮೊದಲು ಐಸ್ ಕ್ರೀಮ್ ತಿನ್ನುತ್ತಿರಬೇಕು ಅಥವಾ ಎರಡನೇ ಪಂಕ್ತಿಗೆ ಹಾಕಿರುವ ಎಲೆ ಮುಂದೆ ಕೂತು ಐಸ್ ಕ್ರೀಮ್ ತಿನ್ನುತ್ತಿರಬೇಕು.. ಹೀಗೆ ಕಾಮೆಂಟ್ ಮಾಡುತ್ತಾ, ಆ ರೀತಿ ಸ್ವಚ್ಛವಾಗಿ ಊಟ ಮಾಡಿದ್ದರ ಸಾಚಾತನವನ್ನೇ ಪ್ರಶ್ನೆ ಮಾಡಿದ್ದರು.
ತಮಗೆ ಸಾಧ್ಯವಾಗದ್ದು ಬೇರೆಯವರಿಂದಲೂ ಸಾಧ್ಯವಾಗದು ಎಂದು ಅವರು ಭಾವಿಸಿದ್ದರಲಿಕ್ಕೂ ಸಾಕು. ಅದಾಗಿ ಒಂದೆರಡು ದಿನಗಳ ಬಳಿಕ, ನಾನೂ ಅದೇ ರೀತಿ ಊಟ ಮಾಡಿದ ಸ್ವಚ್ಛ ಬಾಳೆಲೆ ಫೋಟೋವನ್ನೂ ಪೋಸ್ಟ್ ಮಾಡಿದೆ. ಅದಕ್ಕೂ ಅದೇ ರೀತಿ ಚರ್ಚೆ, ವಾದ. ಬಹಳ ಜನರಿಗೆ ನಾನು ಹಾಕಿದ ಪೋಸ್ಟ್ನ ಮರ್ಮ ಅರ್ಥವಾಗಿತ್ತು. ಅಲ್ಲಿ ಪ್ರಚಾರ, ವೈಯಕ್ತಿಕ ತೆವಲಿ ಗಿಂತ ಆಹಾರದ ಬಗ್ಗೆ ಕಾಳಜಿಯೇ ಮುಖ್ಯವಾಗಿತ್ತು. ಆದರೆ ಕೆಲವರಿಗೆ ಅದು ಸಹ ಸಹ್ಯವಾಗಿರಲಿಲ್ಲ.
ಅದಾಗಿ ಒಂದು ವಾರದ ಬಳಿಕ ನಾನು ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಂತರ ಭೋಜನವಿತ್ತು. ನಾನು ನನ್ನ ಪಾಡಿಗೆ ಊಟ ಮಾಡಿ ಎದ್ದು ಬಂದೆ. ಆದರೆ ನನ್ನ ಮೊದಲಿನ ಎರಡು ಪೋಸ್ಟ್ಗಳನ್ನು ನೋಡಿದ್ದ ಜಾನ್ಸಿ ಲಕ್ಷ್ಮಿ ಎಂಬ ಸದ್ ಗೃಹಿಣಿಯೊಬ್ಬರು, ನಾನು ಊಟ ಮಾಡಿ ಎದ್ದು ಹೋದ ನಂತರ, ಸ್ವಚ್ಛವಾದ ಬಾಳೆಲೆಯನ್ನು ಫೋಟೋ ಹೊಡೆದು ನನಗೆ ಕಳಿಸಿಕೊಟ್ಟಿದ್ದರು. ಭಟ್ಟರು ನಿಜಕ್ಕೂ ಸ್ವಚ್ಛವಾಗಿ ಊಟ ಮಾಡುತ್ತಾರಾ ಎಂಬ ಸಣ್ಣ ತನಿಖಾನೋಟವೂ ಅವರಲ್ಲಿದಂತಿತ್ತು. ಆದರೆ ನನಗೆ ಅವರ ಕಳಕಳಿ ಇಷ್ಟವಾಯಿತು.
ಇದೇನೇ ಇರಲಿ, ಸ್ವಚ್ಛ ಬಾಳೆಲೆ ಅಭಿಯಾನ ಯಾವುದೇ ಪ್ರಚಾರಕ್ಕಾಗಿ ಮಾಡಿದ್ದಲ್ಲ. ನನಗೆ ಅದರ ಅಗತ್ಯವೂ ಇಲ್ಲ.
ಆದರೆ ನನಗೆ ಸಮಾಧಾನವಾದ ಸಂಗತಿಯೇನೆಂದರೆ, ಇದಕ್ಕೆ ಸಿಕ್ಕ ಪ್ರತಿಸ್ಪಂದನೆ. ನನ್ನ ಮೊಬೈಲ್ ತುಂಬಾ ಬರೀ ಸ್ವಚ್ಛವಾಗಿ ಉಂಡ ಬಾಳೆಲೆಗಳೇ! ಇಲ್ಲಿ ತನಕ ಏನಿಲ್ಲವೆಂದರೂ ಸಾವಿರಕ್ಕೂ ಹೆಚ್ಚು ಜನ ತಾವು ನೀಟಾಗಿ ಬಾಳೆಲೆಯಲ್ಲಿ ಊಟ ಮಾಡಿದ ಫೋಟೋವನ್ನು ಕಳಿಸಿಕೊಟ್ಟಿದ್ದಾರೆ.
ನೂರಾರು ಜನ ತಮ್ಮ ಫೇಸ್ ಬುಕ್ ಗೋಡೆಯ ಮೇಲೆ, ತಾವೂ ಹೀಗೆ ಕ್ಲೀನಾಗಿ ಊಟ ಮಾಡುತ್ತೇವೆ ಎಂದು ಅಭಿಮಾನದಿಂದ, ಕಾಳಜಿ ಪೂರ್ವಕವಾಗಿ ಹೇಳಿಕೊಂಡಿದ್ದಾರೆ. ಇನ್ನು ಅನೇಕರು ಇನ್ನು ಮುಂದೆ ತಾವೂ ಹೀಗೆ ಊಟ ಮಾಡುವುದನ್ನು ಅಭ್ಯಾಸ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಮೊನ್ನೆ ನಾನು ರೈಲಿನಲ್ಲಿ ಶಿವಮೊಗ್ಗಕ್ಕೆ ಹೋಗುವಾಗ,
ಟಿಕೆಟ್ ಕಲೆಕ್ಟರ್ ಒಬ್ಬರು, ‘ತಾವು ಭಟ್ಟರಲ್ಲವಾ? ನೀವು ಊಟ ಮಾಡಿದ ಫೋಟೋವನ್ನು ನನ್ನ ಮಗಳು ತೋರಿಸಿದಳು.
ನಾನೂ ಅದೇ ರೀತಿ ಊಟ ಮಾಡುತ್ತೇನೆ. ರೈಲು ನಿಲ್ದಾಣದಲ್ಲಿ ಜನ ಅರ್ಧಂಬರ್ಧ ತಿಂದು ಬಿಸಾಡುವಾಗ ಬಹಳ ನೋವಾಗುತ್ತದೆ. ಜನ ಹಣವನ್ನು ಬಿಸಾಡುತ್ತಾರಲ್ಲ ಅನಿಸುತ್ತದೆ. ಹಣವನ್ನಾದರೂ ಬಿಸಾಡಬಹುದು, ಕಾರಣ ದುಡಿದು ಹಣ ಗಳಿಸಬಹುದು. ಆದರೆ ಹಣ ಕೊಟ್ಟರೂ ಆಹಾರ ಸಿಗದ ಪರಿಸ್ಥಿತಿ ಬಂದರೆ ಇವರು ಹಣವನ್ನು ತಿಂದು ಬದುಕುತ್ತಾರಾ? ಅದೇನೇ
ಇರಲಿ, ಸ್ವಚ್ಛ ಬಾಳೆಲೆ ಊಟ ಅಭಿಯಾನ ಮುಂದುವರಿಸಿ ’ಎಂದು ಹೇಳಿದ್ದು ನನಗೆ ವಿಶೇಷವಾಗಿ ಕಂಡಿತು.
ನಾನು ಶಿವಮೊಗ್ಗ ನಿಲ್ದಾಣದಲ್ಲಿ ಇಳಿದು ರಾಯಲ್ ಆರ್ಕಿಡ್ ಹೋಟೆಲ್ಗೆ ಹೋದೆ. ಅಲ್ಲಿನ ವೇಟರ್ ಕೂಡ ಫೇಸ್ ಬುಕ್ನಲ್ಲಿ ನಾನು ಹಾಕಿದ ಪೋಸ್ಟನ್ನು ನೋಡಿದ್ದರು. ‘ಸಾರ್, ನೀವು ಹಾಕಿದ ಫೋಟೋವನ್ನು ನೋಡಿ ನಾಲ್ಕು ಜನರಲ್ಲಿ ಮನಃ ಪರಿವರ್ತನೆಯಾದರೆ ಸಾರ್ಥಕ. ನಮ್ಮ ಹೋಟೆಲಿನಲ್ಲಿ ಗಿರಾಕಿಗಳು ಪ್ರತಿದಿನ ಬಿಸಾಡುವ ಆಹಾರದಲ್ಲಿ ಕನಿಷ್ಠ ನೂರು ಜನರ ಹಸಿವನ್ನು ನೀಗಬಹುದು. ಆದರೆ ಹಣ ಕೊಟ್ಟು ಜನ ಆಹಾರವನ್ನು ಬಿಸಾಡುತ್ತಾರೆ. ಬಹಳ ಬೇಸರವಾಗುತ್ತದೆ. ಆಹಾರ ಬಿಸಾಡುವವರನ್ನು ಬರಗಾಲ ಪ್ರದೇಶಕ್ಕೆ ಕಳಿಸಬೇಕು ಸಾರ್’ ಎಂದ.
ಗೊತ್ತಿರಲಿ, ಬೆಂಗಳೂರು ನಗರದಂದೇ ಪ್ರತಿ ವರ್ಷ 400 ಕೋಟಿ ರುಪಾಯಿ ಆಹಾರವನ್ನು ನಿರ್ದಾಕ್ಷಿಣ್ಯವಾಗಿ ತಿಪ್ಪೆಗೆ ಎಸೆಯುತ್ತಾರೆ. ದೊಡ್ಡ ದೊಡ್ಡ ಮದುವೆಗಳಲ್ಲಿ ಜನ ತಿನ್ನುವುದಕ್ಕಿಂತ ಹೆಚ್ಚು ಬಿಸಾಡುತ್ತಾರೆ. ವಿಚಿತ್ರ ಅಂದ್ರೆ ಪೂರ್ತಿ
ತಿನ್ನುವುದು ಅಥವಾ ಅರ್ಧ ತಿಂದು ಇನ್ನರ್ಧ ಬಿಡುವುದು ಒಂಥರಾ ಫ್ಯಾಷನ್. ಪೂರ್ತಿ ಪ್ಲೇಟನ್ನು ನೆಕ್ಕಿದರೆ, ಅನಾಗರಿಕ
ಅಥವಾ ಸಂಸ್ಕಾರ ಇಲ್ಲದವ ಎಂಬ ಭಾವನೆ ಅನೇಕರಲ್ಲಿದೆ.
ಹೀಗಾಗಿ ಅವರೆಲ್ಲ ಕೊನೆಯಲ್ಲಿ ಸ್ವಲ್ಪ ಕಾಫಿ, ಸ್ವಲ್ಪ ಜ್ಯೂಸ್, ಸ್ವಲ್ಪ ಅನ್ನ… ಉಳಿಸಿರುತ್ತಾರೆ. ದೊಡ್ಡ ದೊಡ್ಡ ಪಾರ್ಟಿಗಳಲ್ಲಂತೂ ಇದು ಸರ್ವೇಸಾಮಾನ್ಯ. ಯಾರೂ ಹಾಕಿಸಿಕೊಂಡಷ್ಟು ಆಹಾರವನ್ನು ಪೂರ್ಣ ಸೇವಿಸುವುದಿಲ್ಲ. ಅರ್ಧ ತಿಂದು ಬಿಡುವವರೇ ಹೆಚ್ಚು. ಸ್ಟಾರ್ ಹೋಟೆಲ್ಲುಗಳಲ್ಲಿ ಒಬ್ಬರು ಊಟ ಮಾಡುವಾಗ ನಾಲ್ಕು ಸಲ ಪ್ಲೇಟುಗಳನ್ನು ಬದಲಿಸುತ್ತಾರೆ. ಪ್ರತಿ ಪ್ಲೇಟಲ್ಲೂ ಸ್ವಲ್ಪ ಆಹಾರವನ್ನು ಬಿಟ್ಟೇ ಬಿಡುತ್ತಾರೆ. ಅಂದರೆ ಒಬ್ಬ ಊಟ ಮಾಡಿದರೆ, ತಿನ್ನುವುದಕ್ಕಿಂತ ಬಿಸಾಡುವುದೇ ಹೆಚ್ಚು.
ಇಂಥವರಿಗೆ ಆಹಾರಗಳನ್ನು ಬಿಸಾಡುವಾಗ ಏನೂ ಅನಿಸುವುದಿಲ್ಲ.
ಕೆಲವರಿಗೆ ಎಲ್ಲ ಐಟಮ್ಮುಗಳ ರುಚಿ ನೋಡುವ ಆಸೆ. ಆದರೆ ಯಾವುದನ್ನೂ ಪೂರ್ತಿ ತಿನ್ನುವುದಿಲ್ಲ. ಒಂದು ಸಲ ಕಚ್ಚಿ, ಉಳಿದುದನ್ನು ಬಿಟ್ಟುಬಿಡುತ್ತಾರೆ. ತಾವು ಸೇವಿಸುವುದು ಸಾಕ್ಷಾತ್ ಅನ್ನ ದೇವರು, ಅನ್ನ ಲಕ್ಷ್ಮಿ, ದೇವರ ಪ್ರಸಾದ, ಪ್ರಕೃತಿಯ ವರ.. ಎಂದು ಭಾವಿಸುವುದಿಲ್ಲ. ಭಾರತದಂಥ ದೇಶದಲ್ಲಿ ಪ್ರತಿ ವರ್ಷಕ್ಕೆ ಒಂದು ಲಕ್ಷ ಕೋಟಿಗಿಂತ ಅಧಿಕ ಮೊತ್ತದ
ಆಹಾರವನ್ನು ತಿಪ್ಪೆಗೆ ಎಸೆಯುತ್ತಾರೆ ಎಂಬುದನ್ನು ಕೇಳಿದರೆ, ಕರುಳು ಚುರ್ರ್ ಎನ್ನುತ್ತದೆ. ಭಾರತ ಬಡ ದೇಶ ಎನ್ನುತ್ತೇವೆ.
ಹಸಿವಿನಿಂದ ಸಾಯುವವರು ಇಂದಿಗೂ ಇದ್ದಾರೆ. ಆದರೆ ಅದೇ ದೇಶದಲ್ಲಿ ನಾಲಗೆ ಮೇಲಿಡುವ ಆಹಾರವನ್ನು ತಿಪ್ಪೆಗೆ
ಎಸೆಯುತ್ತಾರಲ್ಲ? ಇದಕ್ಕೇನೆನ್ನಬೇಕು? ಬೇಕಾದರೆ ಹಣವನ್ನು ಎಸೆಯಿರಿ, ಆದರೆ ಆಹಾರವನ್ನಂತೂ ಎಸೆಯಲೇಕೂಡದು.
ಕಾರಣ Money is yours but resources belong to the society. ಒಮ್ಮೆ ಉದ್ಯಮಿ ರತನ್ ಟಾಟಾ
ಜರ್ಮನಿಗೆ ಹೋದಾಗ, ಹೋಟೆಲಿನಲ್ಲಿ ಆಹಾರವನ್ನು ಅರ್ಧ ಸೇವಿಸಿ ವ್ಯರ್ಥ ಮಾಡಿದ ಜನರ ಜತೆ ವಾದ ಮಾಡಿದ ಘಟನೆ
ನೆನಪಿರಬಹುದು. ನಿಮ್ಮ ದೇಶ ಶ್ರೀಮಂತವಾಗಿರಬಹುದು. ಆದರೆ ಆಹಾರವನ್ನು ಬಿಸಾಡುವ ಹಕ್ಕು ನಿಮಗಿಲ್ಲ ಎಂದು
ಹೇಳಿದ್ದು ನೆನಪಾಗುತ್ತದೆ.
ಎಷ್ಟು ಬೇಕಾದರೂ ಸೇವಿಸಿ ತಪ್ಪೇನಿಲ್ಲ, ಅದು ನಮ್ಮ ಹೊಟ್ಟೆ, ನಮ್ಮ ಇಚ್ಛೆ. ಆದರೆ ಒಂದು ಅಗುಳು ಬಿಸಾಡುವಾಗ ನೂರು ಸಲ ಯೋಚಿಸಿ. ಯಾಕೆಂದರೆ ಹಣ ನಮ್ಮದಾದರೂ, ಅನ್ನ ಬಿಸಾಡಲು ನಮಗೆ ಹಕ್ಕಿಲ್ಲ. ಅದು ಬೇರೆಯವರ ಅನ್ನಕ್ಕೆ ಕಲ್ಲು ಹಾಕಿದಂತೆ. ಸಾಧ್ಯವಾದರೆ ನೀವೂ ನೀವು ಸ್ವಚ್ಛವಾಗಿ ಊಟ ಮಾಡಿದ ಬಾಳೆಲೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ. ಹಸಿದ ಹೊಟ್ಟೆಗೆ ಅನ್ನ ಬೀಳುವಂತಾಗಲಿ. ಒಂದು ಅಗುಳು ಸಹ ತಿಪ್ಪೆಗೆ ಹೋಗದಿರಲಿ.