Friday, 22nd November 2024

ನ್ಯಾಷನಲ್ ಹೆರಾಲ್ಡ್: ಮತ್ತೆ ಮೂವರಿಗೆ ಸಮನ್ಸ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೂವರು ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ ನಡೆಸಿರುವ ಇಡಿ ಇದೀಗ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಒಟ್ಟು ಮೂವರು ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಿದೆ.

ಕಳೆದ ತಿಂಗಳು ಮಲ್ಲಿಕಾರ್ಜುನ ಖರ್ಗೆಗೂ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಯಂಗ್ ಇಂಡಿಯಾ ಲಿಮಿಟೆಡ್ ಕಚೇರಿ ಯಲ್ಲಿ ಹಾಜರಿರುವಂತೆ ಖರ್ಗೆ ಸೂಚನೆ ನೀಡಲಾಗಿತ್ತು.

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮೂವರು ನಾಯಕರ ಹೆಸರು ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಿರ್ದೇಶಕರಾಗಿರುವ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿರು ವಾಗಲೇ, ಮಧ್ಯಪ್ರದೇಶ ಸರ್ಕಾರ ಕೂಡ ತನಿಖೆಗೆ ಆದೇಶಿಸಿದೆ. ಭೋಪಾಲ್‌ನ ಪ್ರೆಸ್‌ ಕಾಂಪ್ಲೆಕ್ಸ್‌ನಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ ನಿಯಮ ಬಾಹಿರವಾಗಿ ಅಲ್ಲಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವುದಾಗಿ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಭೂಪೇಂದ್ರ ಸಿಂಗ್‌ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.