Thursday, 12th December 2024

ಭೂಗತ ಪಾತಕಿ ರವಿ ಪೂಜಾರಿ 10 ದಿನ ಸಿಸಿಬಿ ವಶಕ್ಕೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ನ್ಯಾಯವಾದಿ ನೌಶಾದ್ ಕಾಶಿಂಜಿ ಅವರ ಹತ್ಯೆೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ, ಭೂಗತ ಪಾತಕಿ ರವಿ ಪೂಜಾರಿಯನ್ನು 10 ದಿನಗಳ ಕಾಲ ನಗರದ ಸಿಸಿಬಿ ವಶಕ್ಕೆೆ ಒಪ್ಪಿಸಲಾಗಿದೆ.

2004ರ ಏ.9ರಂದು ಮಂಗಳೂರಿನ ಪಳ್ನಿರ್ ಪ್ರದೇಶದ ಅಪಾಟ್‌ಮೆಂಟ್‌ನಲ್ಲಿ ನೌಷಾದ್ ಅವರನ್ನು ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಭೂಗತ ದೊರೆ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಬಾರಿ ಪರವಾಗಿ ನೌಷಾದ್ ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿ, ತನ್ನ ಸಹಚರರ ಮೂಲಕ ವಕೀಲ ನೌಶಾದ್ ಅವರನ್ನು ಹತ್ಯೆ ಮಾಡಿಸಿದ್ದ.

ನೌಷಾದ್ ಕಾಶಿಂಜಿ ಕೊಲೆಯಾಗುವ ಮುನ್ನ ಭೂಗತ ಪಾತಕಿ ರವಿ ಪೂಜಾರಿ ಆತನಿಗೆ ಕೊಲೆ ಬೆದರಿಕೆ ಹಾಕಿದ್ದ ಬಗ್ಗೆ ಕೊಲೆ ತನಿಖೆಯಲ್ಲಿ ಬಹಿರಂಗವಾಗಿತ್ತು. ಇದೀಗ ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರು ಪೊಲೀಸರ ವಶದಲ್ಲಿದ್ದು, ನೌಷಾದ್ ಕೊಲೆ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಹಸ್ತಾಾಂತರಿಸಲಾಗಿದೆ.

ಹಿರಿಯ ಅಧಿಕಾರಿಗಳ ಸೂಚನೆಯಂತೆ ಸಿಸಿಬಿ ತಂಡ ಮಂಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದೆ. ಇದೀಗ ಹೆಚ್ಚಿನ ತನಿಖೆಗಾಗಿ ರವಿ ಪೂಜಾರಿಯನ್ನು 10 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ. ಈಗಾಗಲೇ ನೌಶಾದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಅಧೀನ ನ್ಯಾಯಾಲಯ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ರಾಜ್ಯ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು.