Friday, 22nd November 2024

ಮತಾಂತರ: ಪತ್ರಿಕೋದ್ಯಮ ಚುರುಕಾಗಬೇಕಿದೆ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಮತಾಂತರ ನಿಷೇಧದ ವಿರುದ್ಧ ಕಾಂಗ್ರೆಸ್ ಅಬ್ಬರಿಸುತ್ತದೆ, ಆದರೆ ನಡೆಯುತ್ತಿರುವ ಅಂಥ ಮನೆಹಾಳು ಕೃತ್ಯಗಳನ್ನು ಪರಾ ಮರ್ಶಿಸಲು ಯತ್ನಿಸುವುದಿಲ್ಲ. ಹೀಗಾಗಿ, ಭ್ರಷ್ಟಾಚಾರ ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ಹಾಗೆಯೇ ಮತಾಂತರ ನಡೆಯುತ್ತಿದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ ಎಂಬಂತಾಗಿದೆ.

ಅದು 2008ರ ಡಿಸೆಂಬರ್. ರಾಮ್ ಎಂಬ ಸರಕಾರಿ ನೌಕರನೊಬ್ಬ ಬೆಂಗಳೂರಿನ ಮನೆಯೊಂದರ ಮೊದಲ ಮಹಡಿಯಲ್ಲಿ ವಾಸವಿದ್ದ. ಆತನ ಮನೆಯ ಪೋರ್ಟಿಕೋದಲ್ಲಿ ನಿಂತರೆ ಪಕ್ಕದ ಕಟ್ಟಡದ ಮನೆಯ ಬಾಗಿಲು ನೇರವಾಗಿ ಕಾಣುತ್ತಿತ್ತು. ಆ ಮನೆಯಲ್ಲಿ ಅವಿವಾಹಿತೆಯೋ ವಿಧವೆಯೋ ಎಂಬಂಥ ಹೆಂಗಸೊಬ್ಬಳಿದ್ದಳು. ಆಕೆ ಆ ಬೀದಿಯವರೊಂದಿಗೆ ನಾಜೂಕಾದ ಮಾತುಗಳನ್ನಾಡುತ್ತ ಎಲ್ಲರ ವಿಶ್ವಾಸ ಗಿಟ್ಟಿಸಿಕೊಂಡಿದ್ದಳು.

ಪ್ರತಿ ಬುಧವಾರ ಸಂಜೆ ಆಕೆಯ ಮನೆಯಲ್ಲಿ ಭಜನೆ ನಡೆಯುತ್ತಿತ್ತು. ಅನಕ್ಷರಸ್ಥ ಯುವತಿಯರು, ಮಹಿಳೆಯರು, ಅವರ ಪುಟ್ಟ ಮಕ್ಕಳು, ಬೀಡಿ ಸೇದುವಂಥ ವೃದ್ಧರು ಹೀಗೆ ವಾರವಾರವೂ ಆ ಭಜನೆಯಲ್ಲಿ ಹೊಸಬರ ಸೇರ್ಪಡೆಯಾಗುತ್ತಲೇ ಇತ್ತು. ಪಕ್ಕದ ಮನೆಯ ವಿಚಾರ ನಮಗೇಕೆ ಎಂದು ರಾಮ್ ಸುಮ್ಮನಿದ್ದ. ಆದರೆ ಒಂದು ದಿನ ಆತನ ತಾಯಿ, ‘ಪಕ್ಕದ ಮನೆಯ ವಳು ಭಜನೆಗೆ ಮತ್ತು ಆಕೆಯ ದೇವಸ್ಥಾನಕ್ಕೆ ಬರಲು ಹೇಳುತ್ತಿದ್ದಾಳೆ; ಅದರಿಂದ ನನ್ನ ಬಿ.ಪಿ., ಶುಗರ್ ಕಡಿಮೆಯಾಗುವಂತೆ ಮಾಡುತ್ತಾಳಂತೆ, ಹೋಗಲಾ?’ ಎಂದು ಕೇಳಿದರು.

ಪಕ್ಕದ ಮನೆಯಲ್ಲಿ ನಡೆಯುತ್ತಿದ್ದುದರ ‘ವಾಸನೆ’ ರಾಮ್ ತಲೆಗೆ ಬಡಿದದ್ದು ಆಗಲೇ. ಆಗಿನಿಂದ ನಿರಂತರ 2 ತಿಂಗಳು ಆಕೆಯ
ಚಟುವಟಿಕೆಗಳನ್ನು ಗಮನಿಸುತ್ತ ಬಂದಾಗ, ಆಕೆ ಮತಾಂತರವೆಂಬ ಪಕ್ಕಾ ಮನೆಹಾಳು ಕೆಲಸವನ್ನು ಮಾಡಿಕೊಂಡೇ ಬರುತ್ತಿದ್ದಾಳೆ ಹಾಗೂ ಅದಕ್ಕಾಗಿ ಆಕೆಯ ಹಿಂದೆ ಮಿಷನರಿಗಳ ವ್ಯವಸ್ಥಿತ ಜಾಲವಿದೆ ಎಂಬ ವಿಚಾರ ಸ್ಪಷ್ಟವಾಯಿತು. ಅದರಲ್ಲೂ ತನ್ನ ತಾಯಿಯನ್ನೇ ಮತಾಂತರಕ್ಕೆ ಈಡು ಮಾಡುವಂಥ ಯತ್ನವಾದ ಮೇಲೂ ಅದನ್ನು ನೋಡಿಕೊಂಡು
ಸುಮ್ಮನಿರಲಾರದ ರಾಮ್ ಪೊಲೀಸರಿಗೆ ತಿಳಿಸಲು ಬಯಸಿದ. ಆದರೆ ಅದಕ್ಕವರು ಯಥೋಚಿತವಾಗಿ ಸ್ಪಂದಿಸದಿದ್ದರೆ ‘ಸುಮ್ಮನಿರದೆ ಇರುವೆ ಬಿಟ್ಟುಕೊಂಡಂತೆ’ ಆಗುವ ಸಂಭವವೇ ಹೆಚ್ಚು ಅಂದುಕೊಂಡು ರಾಮ್ ಈ ವಿಷಯವನ್ನು ಕನ್ನಡದ
ಅಂದಿನ ಖ್ಯಾತ ಸುದ್ದಿವಾಹಿನಿಯ ವರದಿಗಾರ್ತಿಯ ಗಮನಕ್ಕೆ ತಂದ.

ಇದನ್ನು ಗಂಭೀರವಾಗಿ ಪರಿಗಣಿಸಿದ ಆಕೆ, ಆ ಮನೆಯಲ್ಲಿ ನಡೆಯುತ್ತಿರುವ ಮತಾಂತರ ಕುತಂತ್ರದ ಸಂಪೂರ್ಣ ಮಾಹಿತಿ
ಪಡೆದರು. ಅದೇ ಸಮಯದಲ್ಲಿ ಮತಾಂತರದ ವಿರುದ್ಧವಾಗಿ ರಾಜ್ಯದಲ್ಲಿ ನಡೆದ ಚರ್ಚುಗಳ ಮೇಲಿನ ದಾಳಿ ದೇಶವ್ಯಾಪಿ ಸುದ್ದಿಯಾಗಿತ್ತು. ಹೀಗಾಗಿ, ಮತಾಂತರ ಹೇಗೆಲ್ಲ ನಡೆಯುತ್ತದೆ ಎಂಬುದರ ಪ್ರತ್ಯಕ್ಷ ಸಾಕ್ಷಿಯನ್ನಿಟ್ಟುಕೊಂಡು ಈ ಸಂದರ್ಭ ವನ್ನು ವಿಶದವಾಗಿ ನಿರೂಪಿಸುವ ಉದ್ದೇಶದಿಂದ ಆ ವರದಿಗಾರ್ತಿ ಒಂದು ಗುಪ್ತ ಕಾರ್ಯಾಚರಣೆಗೆ ನಿರ್ಧರಿಸಿ, ನಿಗದಿತ ದಿನದಂದು ತನ್ನ ತಾಂತ್ರಿಕ ಸಿಬ್ಬಂದಿಯೊಂದಿಗೆ ರಾಮ್ ಮನೆಗೆ ಬಂದು ಪೋರ್ಟಿಕೋದಲ್ಲಿ ಗೋಪ್ಯವಾಗಿ ಕ್ಯಾಮರಾ ಇರಿಸಿದರು.

ಮೊದಲಿಗೆ, ‘ಯೇಸಪ್ಪನನ್ನು ಕರೆಯೋಣ’ ಎಂದು ಒಂದು ರೌಂಡು ಭಜನೆಯಾಯಿತು. ನಂತರ, ‘ಯೇಸಪ್ಪ ಬಂದಿದ್ದಾರೆ, ನಿಮ್ಮನ್ನು ನೋಡುತ್ತಿದ್ದಾರೆ. ಕಣ್ಣು ಮುಚ್ಚಿಕೊಳ್ಳಿ, ನಿಮ್ಮ ಕಷ್ಟಗಳನ್ನೆಲ್ಲ ಯೇಸುಪ್ರಭುವಿಗೆ ಹೇಳಿಕೊಳ್ಳಿ. ನಾಳೆಯಿಂದ ಚರ್ಚ್‌ಗೆ ತಪ್ಪದೆ ಬಂದು ನಿನ್ನನ್ನು ಕಾಣುತ್ತೇವೆ ಎಂದು ಯೇಸಪ್ಪನಿಗೆ ಮಾತುಕೊಡಿ’ ಎಂಬ ಸೂಚನೆ ನೀಡಿದಳು ಆ ನಾಜೂಕಿನ ಹೆಂಗಸು. ನಂತರ, ‘ನೋಡಿ, ಯೇಸಪ್ಪ ನಿಮ್ಮ ತಲೆಯ ಮೇಲೆ ಕೈ ಇಡುತ್ತಿದ್ದಾರೆ, ನಿಮ್ಮನ್ನು ಪ್ರೀತಿಸುತ್ತಿದ್ದಾರೆ, ನಿಮಗೆ ಆಶೀರ್ವದಿಸಿ ಹೊರಡುತ್ತಿದ್ದಾರೆ. ಮೆಲ್ಲಗೆ ಕಣ್ಣನ್ನು ತೆರೆಯಿರಿ’ ಎಂಬ ಸೂಚನೆ.

ತರುವಾಯ ದಲ್ಲಿ, ‘ನೀವು ಪೂಜೆ ಮಾಡುವ ಅಣ್ಣಮ್ಮ, ಮಾರಮ್ಮ ಇವರ‍್ಯಾರೂ ದೇವರಲ್ಲ. ಇವರೆಲ್ಲ ರಕ್ತ ಕೇಳುವ ರಾಕ್ಷಸರು. ಯೇಸಪ್ಪನ ದೇಹದಿಂದ ನಿಮಗಾಗಿ ರಕ್ತ ಸೋರುತ್ತದೆ’ ಎಂಬ ಮಾತು ಆಕೆಯಿಂದ. ಹೀಗೆ ಆಕೆ ಮುಗ್ಧ ಹಿಂದೂಗಳನ್ನು
ಭಾವನಾತ್ಮಕ ನೆಲೆಗೆ ಒಯ್ದು ಮಾನಸಿಕ ಉದ್ವೇಗಕ್ಕೆ ಒಳಪಡಿಸಿದಾಗ ಅವರ ಕಣ್ಣಿನಿಂದ ನೀರುಹರಿಯಲು ಶುರುವಾಗಿ ‘ಕೃತಾರ್ಥ’ ರಾದರು. ಅಲ್ಲಿಗೆ ಮತಾಂತರದ ಮೊದಲ ಅಸ್ತ್ರ ಪ್ರಯೋಗವಾಗಿತ್ತು.

ಇವೆಲ್ಲವೂ ಸುದ್ದಿವಾಹಿನಿಯ ಗುಪ್ತ ಕ್ಯಾಮರಾದಲ್ಲಿ ರೆಕಾರ್ಡ್ ಆಗುತ್ತಿರುವುದನ್ನು ಗ್ರಹಿಸಿದ ಯಾರೋ ಹೋಗಿ ಆಕೆಯನ್ನು ಎಚ್ಚರಿಸಿದ್ದರಿಂದ, ಅವಳ ‘ಹೆಲ್ಪರ್’ ಮತಾಂತರಿ ಯುವತಿ ಯರು ರಾಮ್ ಮನೆಗೆ ಬಂದು, ‘ನಾವೇನು ಇಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದೇವಾ? ಅದ್ಹೇಗೆ ನೀವು ನಮ್ಮ ಮನೆಗೆ ಕ್ಯಾಮರಾ ಗುರಿಯಿಟ್ಟು ರೆಕಾರ್ಡ್ ಮಾಡುತ್ತೀರಿ? ಅದಕ್ಕೆ ನಮ್ಮ ಅನುಮತಿ
ತಗೊಂಡಿದ್ದೀರಾ? ನಿಮ್ಮ ಮೇಲೆ ದೂರು ನೀಡುತ್ತೇವೆ’ ಎಂದು ಅಬ್ಬರಿಸಲಾರಂಭಿಸಿದರು.

ಆಗ ಆ ವರದಿಗಾರ್ತಿ ರಾಮ್‌ಗೆ ಥ್ಯಾಂಕ್ಸ್ ಹೇಳಿ, ‘ಸರ್, ಇವರಿಗೆ ಹೆದರಬೇಡಿ. ನಿಮ್ಮ ಮೇಲೆ ದೂರು ಕೊಟ್ಟರೆ ಕೊಡಲಿ ಬಿಡಿ. ಇವರ ಮತಾಂತರ ಕೃತ್ಯದ ಸಂಪೂರ್ಣ ದಾಖಲೆಯೀಗ ನಮ್ಮಲ್ಲಿದೆ. ಮತಾಂತರ ನಡೆಯುತ್ತದೆ ಎಂದು ಕೇಳಿದ್ದೇವೆ, ಆದರೆ ಅದು ಹೇಗೆ ನಡೆಯುತ್ತದೆ ಎಂಬುದರ ಸ್ಪಷ್ಟ ಫೂಟೇಜ್ ನಮಗೆ ಸಿಕ್ಕಿದೆ. ನೋಡುತ್ತಿರಿ, ನಾಳೆ ಬಿತ್ತರಗೊಂಡಾಗ ಇಡೀ ದೇಶ ನೋಡುತ್ತದೆ. ನೀವು ಧೈರ್ಯವಾಗಿರಿ’ ಎಂದು ಹೇಳಿ ತಾಂತ್ರಿಕ ಸಿಬ್ಬಂದಿಯೊಡನೆ ಕಾರನ್ನೇರಿ ಹೊರಟುಹೋದರು.

ದುರಂತವೆಂದರೆ, ಆ ಬೀದಿಯಲ್ಲಿದ್ದ ಹಿಂದೂಗಳೇ ಈ ಮತಾಂತರಿ ಹೆಂಗಸಿನ ಪರವಾಗಿ ನಿಂತರು, ಮನೆ ಖಾಲಿಮಾಡುವಂತೆ ರಾಮ್‌ಗೆ ಸೂಚಿಸುವಂತೆ ಮನೆಮಾಲೀಕರಿಗೆ ಎಚ್ಚರಿಸಿದರು. ಇದರಿಂದ ಕಂಗಾಲಾದ ರಾಮ್, ‘ಮೊದಲೇ ನಾನು ಸರಕಾರಿ ನೌಕರ; ಇನ್ನು ನನ್ನ ಮೇಲೆ ದೂರು ದಾಖಲಾದರೆ ನನ್ನ ಸೇವಾವಧಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಭಾವಿಸಿದ.

ಒಂದೊಮ್ಮೆ ತಾನು ಈ ಹಸಿಹಸಿ ಮತಾಂತರದ ವಿರುದ್ಧ ದೂರುನೀಡಲು ಹೊರಟರೆ ಪೊಲೀಸರು ಮೊದಲು ಕೇಳುವುದೇ ಸಾಕ್ಷಿಯನ್ನು. ಅಂಥ ಬಲವಾದ ಸಾಕ್ಷಿ ಸುದ್ದಿವಾಹಿನಿಯವರ ಬಳಿ ದಾಖಲಾಗಿದೆ. ಒಂದೋ ಈ ಸುದ್ದಿ ಬಿತ್ತರಗೊಂಡು
ಮತಾಂತರಿಗಳು ಬೆತ್ತಲಾಗಬೇಕು. ಇಲ್ಲದಿದ್ದರೆ ತಾನೇ ‘ಪಕ್ಕದ ಮನೆಗೆ ಗುರಿಯಾಗಿ ಕ್ಯಾಮರಾ ಇಟ್ಟ’ ಆರೋಪಕ್ಕೆ ಗುರಿ ಯಾಗಬೇಕಾಗುತ್ತದೆ ಎಂದು ರಾಮ್ ತಲ್ಲಣಗೊಂಡ. ಸಾಲದೆಂಬಂತೆ ಮತ್ತೊಂದು ಮಾಧ್ಯಮದ ಆಪ್ತರೊಬ್ಬರು, ‘ನೋಡಿ ರಾಮ್, ಈ ಚಾನಲ್‌ನವರನ್ನು ನಂಬಿಕೊಂಡು ದೂರುನೀಡಲು ಹೋಗಬೇಡಿ, ಅಲ್ಲಿನ ಆಂತರಿಕ ವಿಚಾರಗಳು ಬೇರೆಯೇ ಇರುತ್ತವೆ. ಅದು ನಿಮ್ಮಂಥವರಿಗೆ ಗೊತ್ತಾಗುವುದಿಲ್ಲ.

ಫೂಟೇಜ್ ಅವರ ಬಳಿಯಿದೆ. ಅದನ್ನವರು ಪೊಲೀಸರಿಗೆ ಕೊಡಲೂಬಹುದು ಅಥವಾ ನಾವು ಅಲ್ಲಿಗೆ ಹೋಗಲೇ ಇಲ್ಲ, ಕ್ಯಾಮರಾವನ್ನೂ ಇಟ್ಟಿಲ್ಲ ಅಂದುಬಿಟ್ಟರೆ ನೀವು ತಗಲ್ಹಾಕಿಕೊಳ್ತೀರಿ, ಹುಷಾರು’ ಎಂದು ಸಲಹೆಯಿತ್ತರು. ಆಗ ರಾಮ್
ಸಹಾಯಕ್ಕೆ ಬಂದಿದ್ದು ಮನೆಮಾಲೀಕರು ಮತ್ತು ಸ್ಥಳೀಯ ಹಿಂದೂಪರ ಸಂಘಟನೆಗಳು. ರಾಮ್ ಮೇಲೆ ಯಾವುದೇ ದೂರು ದಾಖಲಾಗಲಿಲ್ಲ. ಏಕೆಂದರೆ ಅಂಥ ಸಾಚಾಗಳೂ ಅವರಾಗಿರಲಿಲ್ಲ, ಅದು ಬೇರೆಯ ವಿಚಾರ.

ಆದರೆ, ಮತಾಂತರದ ಯತ್ನದ ಸಾಕ್ಷಾತ್ ದೃಶ್ಯವನ್ನು ಬಿತ್ತರಿಸಿ ತನ್ನ ಟಿಆರ್‌ಪಿ ಏರಿಸಿಕೊಳ್ಳಬೇಕಿದ್ದ ಆ ಸುದ್ದಿವಾಹಿನಿಯಲ್ಲಿ ಈ ‘ಸ್ಟೋರಿ’ ಬಿತ್ತರವಾಗಲೇ ಇಲ್ಲ. ಕೊನೆಗೆ ತಿಳಿದುಬಂದ ವಿಷಯವೆಂದರೆ, ವರದಿಗಾರ್ತಿ ಅಸಹಾಯಕರಾಗಿದ್ದರು. ಆಕೆ ಸಿದ್ಧಪಡಿಸಿದ್ದ ವರದಿಯನ್ನು ‘ಪರಾಮರ್ಶಿಸಿ’ದ ವಾಹಿನಿಯ ಸಂಪಾದಕರು, ‘ನೋಡಮ್ಮಾ, ಈಗಾಗಲೇ ಚರ್ಚ್ ಮೇಲಿನ
ದಾಳಿಯ ವಿಚಾರ ಗಂಭೀರವಾಗಿದೆ. ಈ ಸಂದರ್ಭದಲ್ಲಿ ಇವೆಲ್ಲ ಬೇಡ. ಇಲ್ಲದ ಉಸಾಬರಿ ನಮಗೇಕೆ? ಸುಮ್ಮನೆ ಇದ್ದು ಬಿಡಮ್ಮ’ ಎನ್ನುವುದರೊಂದಿಗೆ ಈ ಪ್ರಕರಣ ಮಣ್ಣಾಯಿತು.

ಹೀಗೆ ಮತಾಂತರ ನಡೆಯುತ್ತಿದ್ದು ಅದಕ್ಕೆ ದಾಖಲೆಯೂ ಇದ್ದರೂ, ದೂರು ದಾಖಲಾಗಲಿಲ್ಲ. ಒಂದೆಡೆ ಪೊಲೀಸರಿಗೆ ಸಾಕ್ಷಿ ಸಿಗಲಿಲ್ಲ, ಸಾಕ್ಷಿಯಿಟ್ಟುಕೊಂಡಿದ್ದ ಮಾಧ್ಯಮದವರಿಂದ ಹೊಮ್ಮಿದ್ದು ನಿರಾಸಕ್ತಿ. ಮನಸ್ಸಿಟ್ಟು ಹುಡುಕಿದರೆ ನಾಡಿನಾದ್ಯಂತ ಇಂಥ ನೂರಾರು ಪ್ರಕರಣಗಳು ಸಿಗುತ್ತವೆ. ಆದರೂ ಅದನ್ನು ನಿಯಂತ್ರಿಸುವ ಶಕ್ತಿ ಕಾನೂನಿಗಿಲ್ಲವಾಗಿದೆ. ಮೊದಲಿಗೆ, ಇದರ ವಿರುದ್ಧ ದೂರುಕೊಡಲು ಹೋದರೆ ಪೊಲೀಸರು, ‘ಮತಾಂತರ ಮಾಡಲು ನಿಮ್ಮ ಮನೆಗೇ ಬಂದಿದ್ದರಾ? ಅದಕ್ಕೆ ಸಾಕ್ಷಿ
ಇದೆಯಾ?’ ಎಂದು ಕೇಳುತ್ತಾರೆ.

ಮಾತ್ರವಲ್ಲ, ಸಮಾಜದಲ್ಲಿ ‘ಕೋಮುವಾದಿ’ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ವೋಟ್ ಬ್ಯಾಂಕ್ ರಾಜಕಾರಣಿಗಳ ಕುಮ್ಮಕ್ಕು ಇದ್ದರಂತೂ, ‘ಮತಾಂತರ ನಡೆಯುತ್ತಲೇ ಇಲ್ಲ, ಕಾಯ್ದೆಯ ಅವಶ್ಯಕತೆಯೇ ಇಲ್ಲ’ ಎಂದು ಅಂಥವರು ವಾದಿಸುತ್ತಾರೆ. ಟಿಪ್ಪು ವಿಚಾರದಲ್ಲೂ ಇದೇ ಗತಿಯಾಗಿದ್ದು. ಕನ್ನಡನಾಡಿನಲ್ಲಿ, ದೇಶದಲ್ಲಿ ಶ್ರೇಷ್ಠ ಇತಿಹಾಸ ಕಾರರು- ಸಂಶೋಧಕರು- ಸಾಕ್ಷಿಗಳಿದ್ದರೂ, ಉನ್ನತ ಮಟ್ಟದ ನ್ಯಾಯಾಂಗ ಸಮಿತಿಯೊಂದನ್ನು ರಚಿಸಿ ಸತ್ಯಶೋಧಿಸಿ ಅಂತಿಮಮುದ್ರೆ ಒತ್ತುವ ಇಚ್ಛಾಶಕ್ತಿ ಯಾರಿಗೂ ಇಲ್ಲ.

‘ಟಿಪ್ಪು ಮತಾಂಧನಲ್ಲ, ಸ್ವಾತಂತ್ರ್ಯ ಹೋರಾಟಗಾರ’ ಎಂಬುದಾಗಿ ಇಂಥ ರಾಜಕಾರಣಿಗಳೇ ತಿಪ್ಪೆ ಸಾರಿಸಿ ನಿರ್ಧರಿಸಿ ಬಿಡುತ್ತಾರೆ. ಈಗ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ತಾನು ಹಿಂದೂ ವಿರೋಧಿಗಳ ಪಕ್ಷ ಎಂಬುದನ್ನು ಮತ್ತೊಮ್ಮೆ ಎತ್ತಿತೋರಿಸಿದೆ. ಇಲ್ಲಿರುವ ಸೂಕ್ಷ್ಮವೆಂದರೆ, ವೇಶ್ಯಾವಾಟಿಕೆಯ ಮೇಲೆ ದಾಳಿಮಾಡಿ ಬಂಧಿಸು ವಂತೆ ಈ ಮತಾಂತರದ ಬಾಬತ್ತನ್ನು ಕಾನೂನಿನ ವ್ಯಾಪ್ತಿಗೆ ತರುವುದು ಅಷ್ಟು ಸುಲಭವಲ್ಲ.

ಇದೊಂಥರ ಭ್ರಷ್ಟಾಚಾರವಿದ್ದಂತೆ. ಗುತ್ತಿಗೆದಾರರಿಂದ 40 ಪರ್ಸೆಂಟ್ ಲಂಚ ಪಡೆಯಲಾಗುತ್ತಿರುವುದರ ಆರೋಪ ಮಾಡಿದ
ಕೆಂಪಣ್ಣ ಅದಕ್ಕೆ ಪೂರಕ ಸಾಕ್ಷಿ ನೀಡಲಾಗುತ್ತಿಲ್ಲ. ಎಲ್ಲ ಪಕ್ಷಗಳ ನಾಯಕರೂ ಲಂಚಾವತಾರ- ಭ್ರಷ್ಟಾಚಾರದ ಬಗ್ಗೆ ಬೊಂಬಡಾ ಹೊಡೆಯುತ್ತಾರೆ; ಆದರೆ ತಮ್ಮಲ್ಲಿರುವ ದಾಖಲೆಗಳನ್ನು ಯಾರೂ ಮುಖದ ಮೇಲೆ ಬಿಸಾಡುವುದೇ ಇಲ್ಲ. ಹಾಗೆಯೇ, ಮತಾಂತರ ನಿಷೇಧದ ವಿರುದ್ಧ ಕಾಂಗ್ರೆಸ್ ಅಬ್ಬರಿಸುತ್ತದೆ, ಆದರೆ ನಡೆಯುತ್ತಿರುವ ಅಂಥ ಮನೆಹಾಳು ಕೃತ್ಯಗಳನ್ನು ಖುದ್ದು ಪರಾಮರ್ಶಿಸುವ ಯತ್ನವನ್ನೇ ಮಾಡುವುದಿಲ್ಲ.

ಹೀಗಾಗಿ, ಭ್ರಷ್ಟಾಚಾರ ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ಹಾಗೆಯೇ ಮತಾಂತರ ನಡೆಯುತ್ತಿದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ ಎಂಬಂತಾಗಿದೆ. ಈ ‘ಇದೆ’ ಎಂಬುದನ್ನು ನಿರೂಪಿಸಲು ಪೊಲೀಸರು ಮತ್ತು ಪತ್ರಿಕೋದ್ಯಮ ಮೊದಲು
ಮುಂದಾಗಬೇಕಿದೆ. ಸಮಾಜ, ಕಾನೂನು, ನ್ಯಾಯ ಪರತೆಯನ್ನು ಕಾಯಲು ಇರುವ ಪತ್ರಿಕೋದ್ಯಮವೂ ಇಂಥ ಮತಾಂತ ರದ ವಿರುದ್ಧ ಯಾವುದೇ ಮುಲಾಜಿಲ್ಲದೆ ‘ಸ್ಟಿಂಗ್ ಆಪರೇಷನ್’ ನಡೆಸಿ ಕಾನೂನಿಗೆ ಕನ್ನಡಿ ಹಿಡಿಯುವಂಥ ಎದೆಗಾರಿಕೆ ತೋರಬೇಕು.

ಕಳ್ಳತನ ಮಾಡುವಾಗ ಕಳ್ಳನಿಗೆ ಪೊಲೀಸರಿಗಿಂತ ತನ್ನ ಕೃತ್ಯವನ್ನು ನೋಡುವವರ ಭಯವೇ ಹೆಚ್ಚಿರುತ್ತದೆ. ಹಾಗೆಯೇ, ಮತಾಂತರ ಮಾಡುವವರೂ ಕಳ್ಳರಂಥ ಮನಸ್ಥಿತಿಯಲ್ಲಿರುತ್ತಾರೆ. ಅಂಥವರನ್ನು ಮಾಧ್ಯಮದವರು ಎಚ್ಚರಿಸಿದರಷ್ಟೇ
ಸಾಕು. ಹಾಗೆಯೇ, ಮತಾಂತರದ ಅನುಭವವಾದ ರಾಮ್‌ನಂಥ ಸಾಮಾಜಿಕ ಬದ್ಧತೆಯುಳ್ಳ ವ್ಯಕ್ತಿಗಳು ದೂರು ಕೊಡಲು ಬಂದಾಗ ಪೊಲೀಸರು ದರ್ಪ ತೋರದೆ ಸಕಾರಾತ್ಮಕವಾಗಿ ಸ್ಪಂದಿಸಿ, ಗಂಭೀರವಾಗಿ ಪರಿಗಣಿಸಿ, ಮತಾಂತರ ನಡೆಯು ತ್ತಿರುವ ಸ್ಥಳಕ್ಕೆ ದಂಡಿನ ಸಮೇತ ತೆರಳಿ ತನಿಖೆ ಮಾಡಿ ದೂರು ದಾಖಲಿಸುವ ಪ್ರಾಮಾಣಿಕತೆ ಮತ್ತು ದಿಟ್ಟತನ ತೋರ ಬೇಕು. ಹೀಗಾದಲ್ಲಿ ಕೇವಲ ಮತಾಂತರ ನಿಷೇಧ ಕಾಯ್ದೆಯಲ್ಲ, ದೇಶದ ಎಲ್ಲ ಕಾನೂನು-ಕಾಯ್ದೆಗಳೂ ಬಲಿಷ್ಠವಾಗುತ್ತವೆ.

ಜತೆಗೆ ಅವಿವೇಕಿಗಳಂತೆ ವಾದಿಸುವ ಕೆಲವು ತಥಾಕಥಿತ ಜನಪ್ರತಿನಿಧಿಗಳ ಬಾಯಿಯನ್ನೂ ಮುಚ್ಚಿಸಿದಂತಾಗುತ್ತದೆ. ಕಾಯ್ದೆ-ಕಾನೂನು ತರುವುದಷ್ಟೇ ಸರಕಾರದ ಕೆಲಸ; ಆದರೆ ಅದರ ಜಾರಿಯನ್ನು ಸಾರ್ಥಕಗೊಳಿಸಿ ಬಲಿಷ್ಠಗೊಳಿಸಬೇಕಾದ್ದು ಮಾತ್ರ
ಪೊಲೀಸ್ ವ್ಯವಸ್ಥೆ ಮತ್ತು ಪತ್ರಿಕೋದ್ಯಮದ ಕೆಲಸ.