Friday, 20th September 2024

ಕಾಲನ ಕತೆ ಹೇಳುವ ಸುಖಾಲಹಟ್ಟಿ ಗೆಸ್ಟ್ ಹೌಸ್ !

– ವಿಶ್ವೇಶ್ವರ ಭಟ್
ಕೆಲವು ದಿನಗಳ ಹಿಂದೆ, ನಾನು ಭದ್ರ ಅಣೆಕಟ್ಟಿಗೆ ಹೊಂದಿಕೊಂಡ ಹಿನ್ನೀರಿನಲ್ಲಿ, ರಿವರ್ ಟರ್ನ್ ಹಕ್ಕಿಗಳ ಸಾನ್ನಿಧ್ಯದಲ್ಲಿ ಒಂದು ದಿನ ಕಳೆಯಬೇಕೆಂದು ನಿರ್ಧರಿಸಿ, ನನ್ನ ಹತ್ಯಾರ (ಕೆಮರಾ) ಗಳೊಂದಿಗೆ ಬೀಡು ಬಿಟ್ಟಿದ್ದೆ.  ನಾನು ಅಲ್ಲಿಗೆ ಹೋದಾಗ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರಿವರ್ ಟರ್ನ್ ಗಳು  ಮರಿ ಹಾಕಿ, ಮರಿಗಳಿಗೆ ಒಂದೆರಡು  ವಾರಗಳಾಗಿದ್ದವು. ಇನ್ನೇನು ಒಂದೆರಡು ವಾರಗಳ ನಂತರ, ಅವು ತಮ್ಮ ತಮ್ಮ ತಾಯ್ನಾಡಿಗೆ ಮರಳುವ ಹುರುಪಿನಲ್ಲಿದ್ದವು.  ಆ ಹಕ್ಕಿಗಳು ಮರಿ ಹಾಕಿದ ಜಾಗ ಹೇಗಿತ್ತೆಂದರೆ, ಅಲ್ಲಿಗೆ ಹೋಗುವುದಕ್ಕೆ ನಾವು  ಹರಸಾಹಸಪಡಬೇಕಿತ್ತು. ಅಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು  ಬಾಣಂತಿ ಹಕ್ಕಿಗಳು ತಮ್ಮ ಮರಿಗಳ ಪೋಷಣೆಯ ಸಂಭ್ರಮದಲ್ಲಿದ್ದವು. ನಾನು ದೋಣಿಯಲ್ಲಿ  ಹುಲ್ಲಿನ ಗುಡಿಸಲು ಮಾಡಿಕೊಂಡು, ಕೆಮರಾಕ್ಕೆ ಟೆಲಿಲೆನ್ಸ್ ಅಳವಡಿಸಿಕೊಂಡು ಅವುಗಳ ಖಾಸಗಿ ಲೋಕದೊಳಗೆ ಕಣ್ಣುಗಳನ್ನು ನೆಟ್ಟಿ  ಕುಳಿತಿದ್ದೆ. ಅದೊಂದು ಧ್ಯಾನಸ್ಥ ಸ್ಥಿತಿ!
ಭದ್ರಾ ಹಿನ್ನೀರಿನಲ್ಲಿ ಅಂಥದ್ದೊಂದು ಸ್ಥಳವನ್ನು ಆಯ್ಕೆ ಮಾಡಿಕೊಂಡ ಆ ಹಕ್ಕಿಗಳ ಸೌಂದರ್ಯೋಪಾಸನೆಗೆ ಬಹಳ ಖುಷಿಯಾಯಿತು.  ಅದು ನರಮಾನವನಿಗೂ ನಿಲುಕದ, ಹದಿನಾರು ದಿಕ್ಕುಗಳಿಂದ ಜಲಾವೃತವಾದ ಸುಂದರ ದ್ವೀಪ. ನಿತ್ಯಾನಂದ ಸ್ವಾಮೀ ಅದ್ಯಾವುದೋ ದ್ವೀಪದಲ್ಲಿ ತನ್ನ ಸಂಸ್ಥಾನವನ್ನು ಸ್ಥಾಪಿಸಿಕೊಂಡು ಹಾಯಾಗಿದ್ದಾನಲ್ಲ, ಅದೇ ರೀತಿ ಈ ಹಕ್ಕಿಗಳೂ ಯಾರ ಕಣ್ಣಿಗೂ ಬೀಳದೇ, ಸುತ್ತಮುತ್ತಲಿನ ಪರಿಸರವನ್ನೆಲ್ಲ ತಮ್ಮದೇ ಸ್ವತ್ತು ಎಂಬಂತೆ ಕಬ್ಜ ಮಾಡಿಕೊಂಡಿದ್ದವು.
ಈ ರಿವರ್ ಟರ್ನ್ ಎಂಥ ಬುದ್ಧಿವಂತ ಹಕ್ಕಿ ಎಂದರೆ, ಅದು ಮೊಟ್ಟೆಯಿಡುವುದು ಭೂಮಿಯ ಮೇಲೆ. ಗುಡ್ಡದ ಇಳಿಜಾರಿನಲ್ಲಿ ಅರ್ಧ ಅಡಿ ಕೊರೆದು ಅಲ್ಲಿಯೇ ಗೂಡು ನಿರ್ಮಿಸಿ ಮೊಟ್ಟೆ ಹಾಕಿ ಮರಿ ಮಾಡಿಕೊಂಡು ಇನ್ನೆಲ್ಲೋ ಹಾರಿಹೋಗುತ್ತವೆ. ಮೊಟ್ಟೆಯಿಟ್ಟು ಮರಿ ಮಾಡಿಕೊಳ್ಳಲು ಅವು ಸಾವಿರಾರು ಕಿವಿ ದೂರದಿಂದ ಬರುತ್ತವೆ. ಸುಮಾರು ಒಂದು ಎಕರೆ ಜಾಗದಲ್ಲಿ ಏನಿಲ್ಲವೆಂದರೂ ಸುಮಾರು ಮೂರ್ನಾಲ್ಕು  ಸಾವಿರ ಹಕ್ಕಿಗಳು ನೆಲದಲ್ಲಿ ಗೂಡು ಕೊರೆದು ಮೊಟ್ಟೆಗಳಿಗೆ ಕಾವು ಕೊಡುತ್ತಾ ಕುಳಿತಿರುತ್ತವೆ. ಆ ಹಿನ್ನೀರಿನಲ್ಲಿ ಎಲ್ಲೆಲ್ಲಿಗೋ ಹಾರಿಹೋಗಿ ವಾಪಸ್ ಬಂದರೆ, ನೇರವಾಗಿ ತಮ್ಮ ಗೂಡಿಗೇ ಮರಳುತ್ತವೆ.
ನಮಗೆ ಪಕ್ಕದ ಬಡಾವಣೆಯ ಎಂಟನೆಯದೋ, ಹದಿನಾರನೆಯದೋ ಅಡ್ಡರಸ್ತೆಯಲ್ಲಿರುವವರ ಮನೆಗೆ ಇನ್ನೊಮ್ಮೆ ಹೋಗುವಾಗ ದಾರಿ ತಪ್ಪುತ್ತೇವೆ. ಆದರೆ ಈ ಹಕ್ಕಿ ಹಾಗಲ್ಲ. ಅಷ್ಟು ಚಿಕ್ಕಪ್ರದೇಶದಲ್ಲಿ ಸಾವಿರಾರು ಗೂಡುಗಳಿದ್ದರೂ ನೇರವಾಗಿ ತನ್ನ ಗೂಡಿಗೇ ಮರಳುತ್ತವೆ. ಹುಟ್ಟಿ ಒಂದೆರಡು ದಿನಗಳಾದ ಮರಿಗಳೂ ಬೇರೆ ಯಾವುದೋ ಗೂಡಿಗೆ ಹೋಗದೇ ತನ್ನ ಗೂಡಿಗೇ ಮರಳುವುದು ಸಹ ಸೋಜಿಗವೇ. ಈ ಮರಿಗಳು ಸ್ವಲ್ಪ ದೊಡ್ಡ ಆದ ಬಳಿಕ, ಇನ್ನೇನು ಮೂರ್ನಾಲ್ಕು ವಾರಗಳಲ್ಲಿ ಈ ಹಕ್ಕಿಗಳೆಲ್ಲ ತಮ್ಮ ತಮ್ಮ ಊರುಗಳಿಗೆ ಮರಳುತ್ತವೆ. ಅದು ಆ ಮರಿ ಹಕ್ಕಿಗಳ ಮೊದಲ ನೆಗೆತ. ತಾಯಿ ಹಕ್ಕಿಯ ಜತೆಗೆ ಅವೂ ಹಾರಿ ಹೋಗುತ್ತವೆ. ಅದಾದ ಬಳಿಕ ಎರಡು ವರ್ಷಗಳ ಬಳಿಕ  ಮರಿ ಹಾಕಲು  ಅವು  ಇಲ್ಲಿಗೇ  ಬರುತ್ತವೆ. ಇದೊಂದು ವಿಸ್ಮಯವೇ ಸರಿ.
‘ಸಾರ್, ಇದೇ ಹಿನ್ನೀರಿನಲ್ಲಿ ಹೀಗೆ ನಡೆದರೆ ಅದೋ ಭದ್ರಾ ಹುಲಿ ಸಂರಕ್ಷಿತ ಪ್ರದೇಶ. ಎರಡು ದಿನಗಳ  ಹಿಂದೆ, ಅಲ್ಲಿ ಹುಲಿಗಳು ಕಾಣಿಸಿಕೊಂಡಿದ್ದವು. ನೀವು ಬಯಸಿದರೆ ಅಲ್ಲಿಗೆ ಹೋಗೋಣ’ ಎಂದು ನನ್ನ ಜತೆಗಿದ್ದ ಅರಣ್ಯ ಅಧಿಕಾರಿ ಸ್ನೇಹಿತರು ಹೇಳಿದರು. ಎರಡು ದಿನಗಳಿಂದ ಅಲ್ಲಿಯೇ ಡೇರೆ ಹಾಕಿದ್ದ ನನಗೆ ಇನ್ನೊಂದು ದಿನ ವಿಸ್ತರಿಸಲು ನೆಪ ಸಿಕ್ಕಂತಾಯಿತು.  ಹಿನ್ನೀರಿಗೆ ತಾಕಿಕೊಂಡಿರುವ ಭದ್ರಾ ಸಂರಕ್ಷಿತ ಅರಣ್ಯದೊಳಗೆ ತೂರಿಕೊಂಡೆವು. ಅಷ್ಟರಲ್ಲಾಗಲೇ ನೀರು ಕುಡಿಯಲು ಬಂದ ಒಂಟಿ ಸಲಗವೊಂದು, ಮೈಮೇಲೆಲ್ಲ ಕೆಂಪು ಹುಡಿಮಣ್ಣನ್ನು ಸಿಂಪಡಿಸಿಕೊಂಡು ನೀರಿಗಿಳಿದು ಮನಸೋಯಿಚ್ಛೆ ಆಟವಾಡಿ ಹೊರಟು ಹೋಯಿತು. ಆ ನೀರವ ಕಾಡಿನಲ್ಲಿ ಹುಲಿಯ ಹೆಜ್ಜೆ ಅರಸುತ್ತಾ ನಾವು ಉಸಿರು ಬಿಗಿ ಹಿಡಿದು ಜೀಪಿನಲ್ಲಿ ಸಾಗುತ್ತಿದ್ದೆವು. ‘ನಿನ್ನೆ ಇಲ್ಲಿಯೇ ಎರಡು ಹುಲಿಗಳು ಕಂಡಿದ್ದವು.. ಮೊನ್ನೆ ಅಲ್ಲಿ ಹೀಗೆ ಹಾದು ಹೋದವು… ಒಂದು ವಾರದ ಹಿಂದೆ ಇದೇ  ಜಾಗದಲ್ಲಿ ಒಂದು ಜಿಂಕೆಯನ್ನು ಸಾಯಿಸಿ ತಿಂದು ಹಾಕಿತ್ತು… ‘ಎಂದು ನಮ್ಮ ಜತೆಗಿದ್ದ ಫಾರೆಸ್ಟ್ ಜೀಪ್ ಡ್ರೈವರ್ ಎಲ್ಲಾ ವಿವರಗಳನ್ನು ಒಪ್ಪಿಸುತ್ತಿದ್ದ. ಆದರೆ ಹುಲಿಯ ದರ್ಶನ ಮಾತ್ರ ಆಗಲಿಲ್ಲ. ಅಷ್ಟೊತ್ತಿಗೆ ನಾವು ಕಾಡಿನಲ್ಲಿ ಸುಮಾರು ಇಪ್ಪತ್ತು ಕಿಮಿ ದೂರ ಕ್ರಮಿಸಿ ವಾಪಸ್ ಮರಳುವುದೋ, ಮುಂದಕ್ಕೆ ಹೋಗುವುದೋ ಎಂಬ ದ್ವಂದ್ವದಲ್ಲಿದ್ದೆವು. ಹುಲಿ ಸುಳಿವು ಇರಲಿಲ್ಲ.
ಅಷ್ಟೊತ್ತಿಗೆ ನಮ್ಮ ಸಾರಥಿ ‘ಸಾರ್, ಇಲ್ಲೊಂದು ಗೆಸ್ಟ್ ಹೌಸ್ ಇದೆ. ಸುಮಾರು ನೂರಾ ಹದಿನೈದು ವರ್ಷಗಳ ಹಳೆಯ ಫಾರೆಸ್ಟ್ ಗೆಸ್ಟ್ ಹೌಸ್. ನೀವು ನೋಡಬೇಕು’ ಎಂದ. ನನಗೆ ಅವನ ಮಾತುಗಳನ್ನು ನಂಬಲಾಗಲಿಲ್ಲ. ಭದ್ರಾ ಸಂರಕ್ಷಿತ ಅರಣ್ಯದ  ಮಧ್ಯ ಭಾಗದಲ್ಲಿ, ಆ ಗೊಂಡಾರಣ್ಯದೊಳಗೆ ಒಂದು ಗುಡಿಶಾಲಿನ ಅಸ್ತಿತ್ವವನ್ನು  ಸಹ ಕಲ್ಪಿಸಿಕೊಳ್ಳಲು ಆಗದಿರುವಾಗ, ಅಲ್ಲೊಂದು ಗೆಸ್ಟ್ ಹೌಸ್ ಪವಾಡ ರೀತಿಯಲ್ಲಿ ಅವತರಿಸಬೇಕಷ್ಟೆ ಎಂದು ನಾನು ಮನಸ್ಸಿನಲ್ಲಿ ಅಂದುಕೊಂಡೆ. ಕಾರಣ ನಾವಿದ್ದ ಜಾಗ ನಾಗರಿಕ ಪ್ರಪಂಚದಿಂದ ಅಷ್ಟು ದೂರ ಇತ್ತು. ಅಲ್ಲಿಗೆ  ಯಾವ ಗೆಸ್ಟ್ ಬರುವ ಸಾಧ್ಯತೆಯೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆ ದಟ್ಟ ಕಾಡಿನ ಮಧ್ಯದಲ್ಲಿ ಗೆಸ್ಟ್ ಹೌಸ್ ಕಟ್ಟಿಸಿದರೂ ಅಲ್ಲಿ ಉಳಿದುಕೊಳ್ಳುವವನಿಗೆ ಎಂಟೆದೆಯೇ ಬೇಕು. ಪುಕ್ಕಟೆ ಕೊಟ್ಟರೂ ಯಾರಿಗೂ ಬೇಡ. ಯಾವುದೋ ಕಾಡು ಪ್ರಾಣಿ ಅಥವಾ ಕಳ್ಳಕಾಕರು ಸಾಯಿಸಿ ಹಾಕಿದರೂ ಹೊರ ಪ್ರಪಂಚಕ್ಕೆ ಆ ಸುದ್ದಿ ಗೊತ್ತಾಗಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಆರು ತಿಂಗಳಾದರೂ ಗೊತ್ತಾಗಲಿಲ್ಲ ಅಂದರೆ, ಕುರುಹುಗಳೂ ಸಿಗಲಿಕ್ಕಿಲ್ಲ. ‘ವಿಶ್ವೇಶ್ವರ ಭಟ್ ನಿಗೂಢ ಕಣ್ಮರೆ’ ಎಂಬ ಹೆಡ್ ಲೈನ್ ಹಲವು ಸಂದೇಹ, ಊಹಾಪೋಹಗಳಿಗೆ ಆಸ್ಪದ ನೀಡಬಹುದಷ್ಟೇ. ಅಲ್ಲಿ ಮೊಬೈಲ್ ಸಂಪರ್ಕ ಸಿಗುತ್ತದೆ ಎಂದು ಯಾರೂ ನಿರೀಕ್ಷಿಸುವುದಿಲ್ಲ. ಜೋರಾಗಿ ಬೊಬ್ಬೆ ಹೊಡೆದುಕೊಂಡರೆ, ಕಿರುಚಿದರೆ ಯಾರೂ ಬರಲಾರರು. ಅಂಥ ಭೀಕರ ಮೌನ ಹುಟ್ಟಿಸುವ ಕಾಡು.
ಹೀಗಾಗಿ ಅಲ್ಲೊಂದು ಗೆಸ್ಟ್ ಹೌಸ್ ಇದೆ ಎಂದು ತಕ್ಷಣ ನಂಬಲು ಆಗಲಿಲ್ಲ. ಹೀಗೆ ಅಂದುಕೊಳ್ಳುತ್ತಿರುವಂತೆ, ನಾನು ಸುಖಾಲಹಟ್ಟಿ ವಿಶ್ರಾಂತಿಧಾಮದ ಎದುರು ಇದ್ದೆ. ಆ ಜಾಗದಲ್ಲಿ ನಿಂತು ಪೂರ್ವ ಯಾವುದು, ಪಶ್ಚಿಮ ಯಾವುದು ಎಂಬುದು ತಕ್ಷಣ ಗೊತ್ತಾಗಲಿಲ್ಲ. ಕಾರಣ ಸೂರ್ಯನ ಕಿರಣಗಳು ಸಹ ಸೋಕದ ದಟ್ಟ ಕಾಡದು. ಇನ್ನು ಅಲ್ಲಿ ಯಾವ ಜಿಪಿಎಸ್ ಸಹ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ನಾವು ಎಲ್ಲಿದ್ದೇವೆ, ಯಾವ ದಿಕ್ಕಿಗಿದ್ದೇವೆ  ಎಂಬುದು ತಕ್ಷಣ ಗೊತ್ತಾಗುವಂತಿರಲಿಲ್ಲ. ಅಂಥ  ಜಾಗದಲ್ಲಿ, ನೂರಾ ಹದಿನೈದು ವರ್ಷಗಳ ಹಿಂದೆ, ಅಂದರೆ 1905 ರಲ್ಲಿ, ಯಾವನೋ ಅಲ್ಲಿ ಬಂದು ಗೆಸ್ಟ್ ಹೌಸ್ ಕಟ್ಟಿದ್ದಾನೆಂದರೆ ಅವನ ಗುಂಡಿಗೆಯನ್ನು ಮೆಚ್ಚಲೇಬೇಕು. ಈಗ ನಾಗರಿಕತೆ ಇಷ್ಟು ಬೆಳೆದಿದೆ. ಮೊಬೈಲ್ ಹೋಗದ ಜಾಗವಿಲ್ಲ ಎಂದು ಹೇಳುವ ದಿನಗಳಲ್ಲಿ ಯಾವ ಪ್ರದೇಶವೂ ರಿಮೋಟ್ ಅಲ್ಲ. ಆದರೆ ಆ ದಿನಗಳಲ್ಲಿ ಆ ಕಾಡಿನಲ್ಲಿ ಸುಮಾರು ಆರು ಅಡಿ ಎತ್ತರದ ಮಂಜಾಣದ (ವಿಶಾಲ ಕಟ್ಟೆ) ಮೇಲೆ ಎತ್ತರದ ಚಾವಣಿಯಿರುವ (ಡಬಲ್ ಸೀಲಿಂಗ್) ಎರಡು ರೂಮುಗಳನ್ನು ಕಟ್ಟಿದ್ದಾನೆಂದರೆ, ಅವನ ಧೈರ್ಯವನ್ನು ಎಷ್ಟು ಹೊಗಳಿದರೂ ಕಮ್ಮಿಯೇ.
ಇಂದಿಗೂ ಕರೆಂಟು ಪ್ರವೇಶಿಸದಿರುವ ಆ ಗೆಸ್ಟ್ ಹೌಸ್ ನಲ್ಲಿ, ಒಂದು ರಾತ್ರಿ ಕಳೆದರೆ ಹತ್ತು ಲಕ್ಷ ಕೊಡ್ತೇನೆ ಎಂದು ಯಾರಾದರೂ ಬೆಟ್ ಕಟ್ಟಿದರೂ ಉಳಿದುಕೊಳ್ಳಲು ಗುಂಡಿಗೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಅಷ್ಟಾಗಿಯೂ ಉಳಿದುಕೊಂಡರೆ, ಕಣ್ಣೊಳಗೆ ನಿದ್ದೆಯಂತೂ ಸುಳಿಯುವುದಿಲ್ಲ. ಒಂಥರಾ ಭೂತ ಬಂಗಲೆಯದು. ಈ ಗೆಸ್ಟ್ ಹೌಸ್ ಗೆ ತಾಕಿಕೊಂಡು ಒಂದು ಅಡುಗೆ ಮನೆಯಿದೆ. ಅದರ ಪಕ್ಕದಲ್ಲಿಯೇ ಒಂದು ಬಾವಿಯಿದೆ. ಇತ್ತೀಚೆಗೆ ಆಧುನಿಕತೆಯ ಕುರುಹು ಎಂಬಂತೆ ಅಲ್ಲೊಂದು ಸೋಲಾರ್ ಪ್ಯಾನೆಲ್ ನೆಟ್ಟಿದ್ದಾರೆ. ಆದರೆ ಸೂರ್ಯನ ಕಿರಣಗಳು ಪ್ರಖರವಾಗಿರದಿರುವುದರಿಂದ, ಅದು ಇದ್ದೂ ಇಲ್ಲದಂತೆ. ‘ಸರ್, ಈ ರಾತ್ರಿ ಇಲ್ಲಿಯೇ ಕಳೆಯೋಣವಾ?’ ಎಂದು ನಮ್ಮ ಸಾರಥಿ ಕೇಳಿದೆ. ‘ನೀನು ನನ್ನ ಸ್ನೇಹಿತ ಎಂದು ಈ ಕ್ಷಣದ ತನಕ ಭಾವಿಸಿದ್ದೆ. ಈಗ್ಯಾಕೋ ಅನುಮಾನ ಬರುತ್ತಿದೆ ಕಣಯ್ಯಾ’ ಎಂದೆ.  ‘ಮನಸ್ಸು ಮಾಡಿದರೆ ಇಲ್ಲೇ ಉಳಿಯೋಣ. ಅದ್ಭುತ ಅನುಭವ. ನಾನು ಹಲವು ಸಲ ಇಲ್ಲಿ ಉಳಿದಿದ್ದೇನೆ. ರಾತ್ರಿ ಗುಂಡು ಸೂಜಿ ಬಿದ್ದರೂ ಕೇಳಿಸುತ್ತದೆ. ಒಮ್ಮೊಮ್ಮೆ ವಿಚಿತ್ರ ಸಪ್ಪಳವಾಗುತ್ತದೆ. ಅದು ಪ್ರಾಣಿಯದೋ, ಮನುಷ್ಯರದೋ, ಭೂತ-ಪಿಶಾಚಿಗಳದೋ ಗೊತ್ತಾಗುವುದಿಲ್ಲ. ಕಾಡಾನೆ, ಹುಲಿ ಸನಿಹದಲ್ಲಿಯೇ ಹೋಗುತ್ತವೆ. ಬಾಗಿಲ ಬೀಗ ಭದ್ರವಾಗಿದೆ. ಇಲ್ಲೇ ಉಳಿದುಬಿಡೋಣ’ ಅಂದ.
ನನ್ನ ಜಂಘಾಬಲವೇ ಉಡುಗಿಹೋಯಿತು. ಅಲ್ಲಿ ಒಂದು ರಾತ್ರಿ ಕಳೆಯುವುದನ್ನು ಯೋಚಿಸುವುದೂ ಸಾಧ್ಯವಿರಲಿಲ್ಲ.
ನಾನು ರವಾಂಡಾದ ಕಾಡಿಗೆ ಹೋಗಿ ಬಂದವನು. ಮಸೈಮರಾದ ಕಾಡಿನಲ್ಲಿ ಬಿದ್ದುಕೊಂಡವನು. ಉಗಾಂಡದ ಹುಲ್ಲುಗಾವಲಿನಲ್ಲಿ ಕಳೆದವನು. ಆದರೆ ಸುಖಾಲಹಟ್ಟಿಯ ಆ ಗೆಸ್ಟ್ ಹೌಸ್ ಮುಂದೆ ನಿಂತಾಗ ಸಾಯಂಕಾಲ ಏಳು ಗಂಟೆ.   ಇನ್ನು ಅರ್ಧ ಗಂಟೆ ಸಹ ನಿಂತುಕೊಳ್ಳಲು ಅದೇನೋ ಭೀತಿ. ‘ನಮ್ಮೂರ ಮಸಣ, ಪರ ಊರಿನ ಕೆರೆ ಕಂಡರೆ ಯಾವತ್ತೂ ಭೀತಿ’ ಎಂಬ ಗಾದೆಯಿದೆ. ಬೇರೆ ಊರಿನ ಸ್ಮಶಾನದ ಪಕ್ಕದಲ್ಲಿಯೇ ಮಲಗಿದರೆ ಏನೂ ಅನಿಸುವುದಿಲ್ಲ. ಅದೇ ನಮ್ಮೂರಿನ ಮಸಣದ ಸನಿಹ ರಾತ್ರಿಯಾಗುತ್ತಿದ್ದಂತೆ ಹೋಗಲು ಭಯ.  ಆ ಗೆಸ್ಟ್ ಹೌಸ್ ಒಳಗೆ ಕಾಲಿಟ್ಟರೆ ಗೋಡೆಗೆ ತಗುಲಿ ಹಾಕಿದ , ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬಲಿಯಾದ ಅರಣ್ಯಾಧಿಕಾರಿ ಶ್ರೀನಿವಾಸನ್ ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ಕಾಡಾನೆ ತುಳಿತದಿಂದ ಪ್ರಾಣಬಿಟ್ಟ ಹಿರಿಯ ಅರಣ್ಯಾಧಿಕಾರಿ ಎಸ್.ಮಣಿಕಂಠನ್ ಅವರ ಫೋಟೋಗಳು ಮನಸ್ಸನ್ನು ಶೋಕತಪ್ತಗೊಳಿಸುವಂತಿದ್ದವು.  ಆ ನೂರಾ ಹದಿನೈದು ವರ್ಷಗಳ ಇತಿಹಾಸದ ಕತ್ತಲ ಕೋಣೆಯೊಳಗೆ ಕಾಲಿಡುವಾಗ ಎಂಥವರ  ಮನಸ್ಸಾದರೂ ಒಂದು ಕ್ಷಣ ಗಲಿಬಿಲಿಗೊಳಗಾಗಬೇಕು, ಆ ಥರದ ಭಾವನೆ ಮುಸುಕುತ್ತವೆ.
‘ಇಲ್ಲಿ ಯಾರಾದರೂ ಬಂದು ಉಳಿಯುತ್ತಾರಾ?’ ಎಂದು ಕೇಳಿದೆ. ‘ಇಲ್ಲಿ ಯಾರು ಬೇಕಾದರೂ ಉಳಿದುಕೊಳ್ಳಬಹುದು. ಆದರೆ ಯಾರೂ ಬರುವುದಿಲ್ಲ.’ ಎಂದು ಫಾರೆಸ್ಟ್ ಗಾರ್ಡ್ ಹೇಳಿದ. ‘ತಲೆಕೆಟ್ಟವರು ಮಾತ್ರ ಬರಬೇಕಷ್ಟೇ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಆ ಕೋಣೆಯ ಮಧ್ಯಭಾಗದಲ್ಲಿ ನಿಂತು ಸುತ್ತೆಲ್ಲಾ ಕಣ್ಣಾಡಿಸಿದೆ. ಯಾಕೋ ತೆಲುಗು ಸಿನಿಮಾದ ಮಾಂತ್ರಿಕನ ಚಿತ್ರಣ ಕಣ್ಮುಂದೆ ಹಾದುಹೋಯಿತು. ಅಲ್ಲಿ ಏನೇ ಮುಟ್ಟಿದರೂ ಶತಮಾನದ ಇತಿಹಾಸದ ಜತೆಗೆ ಸಹಸ್ಪಂದನೆ ಏರ್ಪಟ್ಟ ಅನುಭವಾಗುತ್ತಿತ್ತು. ನಾವು ನಿಂತಾಗಲೇ ಬಾವಲಿಯೊಂದು ನಮ್ಮ ಮುಂದೆಯೇ ಹಾರಿ ಹೋಯಿತು.  ಕಟ್ಟಿಸಿದಾಗ ಹೇಗಿತ್ತೋ ಹಾಗಿಯೇ ಇರುವ, ಕಾಲದ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ನಿಂತ ಕಟ್ಟಡವದು.  ಇಂದಿಗೂ ಜಬರ್ದಸ್ತಾಗಿದೆ. ಗೋಡೆಯಲ್ಲಾಗಲಿ, ಕಟ್ಟಿಗೆಯಲ್ಲಾಗಲಿ ವಯಸ್ಸಿನ ಕುರುಹು ಸಹ ಇಲ್ಲ. ಅಲ್ಲಿನ ಕುರ್ಚಿ, ಮಂಚ ಅವೆಷ್ಟು ಶರೀರಗಳನ್ನು ಹೊತ್ತುಕೊಂಡಿದ್ದವೋ  ಏನೋ ?
ನಾನು ಆ ಗೆಸ್ಟ್ ಹೌಸಿನ  ಒಂದು ಸುತ್ತು ಹಾಕಿದೆ. ವಯಸ್ಸೇ ಆಗದ ಹೆಂಗಸಿನಂತೆ ಕಂಡಿತು.  ‘ಯಾರ್ರೀ ಅವನು ಇಲ್ಲಿ ಬಂದು ಗೆಸ್ಟ್ ಹೌಸ್ ಕಟ್ಟಿದವನು?’ ಎಂದು ಕೇಳಿದೆ. ‘ಸಾರ್, ಬ್ರಿಟಿಷರಲ್ಲದೆ ಮತ್ಯಾರು ? ನಮ್ಮವರಿಗೆಲ್ಲ ಇದು ಸಾಧ್ಯವಾ?’ ಎಂದ ಗಾರ್ಡ್. ಆ ಗೆಸ್ಟ್ ಹೌಸಿನ ಪ್ರಾಂಗಣದಲ್ಲಿ ನನ್ನ ಪಾಡಿಗೆ ನಾನು ಒಂದೆರಡು ಸುತ್ತು ಓಡಾಡಿದೆ, ನಾಲ್ಕೂ ಮೂಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಇಡೀ ಕಟ್ಟಡ ಎಲ್ಲೂ ಊನವಾಗಿರಲಿಲ್ಲ, ಸಣ್ಣ ಬಿರುಕು ಸಹ ಬಿಟ್ಟಿರಲಿಲ್ಲ. ಆ ಗೆಸ್ಟ್ ಹಾಸಿನ ಕಟ್ಟಡಕ್ಕೆ ಅಂಟಿಸಿದ ಕಪ್ಪು ಕಲ್ಲೊಂದು ಕಾಣಿಸಿತು. ಅದರ ಮೇಲೆ ಈ ಕಟ್ಟಡ ಸಮುದ್ರ ಮಟ್ಟದಿಂದ 757 ಮೀಟರ್ ಎತ್ತರದಲ್ಲಿದೆಯೆಂದು ಬರೆದಿತ್ತು. ಅಷ್ಟೇ ಅಲ್ಲ, ‘ಈ ಗೆಸ್ಟ್ ಹೌಸಿನ ನಿರ್ಮಾಣ ಕಾರ್ಯ 1905 ರಲ್ಲಿ ಆರಂಭವಾಗಿ  1907 ರಲ್ಲಿ ಮುಗಿಯಿತು,  ವಿಶ್ರಾಂತಿಧಾಮ, ಅಡುಗೆ ಮನೆ ಮತ್ತು ಬಾವಿಯ ನಿರ್ಮಾಣಕ್ಕೆ ತಗುಲಿದ ಒಟ್ಟೂ ವೆಚ್ಚ 2470 ರೂ.ಗಳು’ ಎಂದು ಬರೆದಿತ್ತು.  ನನ್ನ ಕಣ್ಣುಗಳನ್ನು ನಾನೇ ನಂಬದಾದೆ.
ಏನು, ನೂರಾ ಹದಿನೈದು ವರ್ಷಗಳ ಹಿಂದೆ, ಈ ಗೆಸ್ಟ್ ಹೌಸ್, ಪ್ರತ್ಯೇಕ ಅಡುಗೆ ಮನೆ ಮತ್ತು ಬಾವಿಯ ನಿರ್ಮಾಣಕ್ಕೆ ಖರ್ಚಾದ ಹಣ ಕೇವಲ 2470 ರೂ.ಗಳಾ? ಆ ಕಾಡಿನ ಮಧ್ಯೆಕ್ಕೆ ಇಷ್ಟೆಲ್ಲಾ ಸಾಮಾನು, ಸರಂಜಾಮುಗಳನ್ನು ಸಾಗಿಸಿ,  ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಎರಡು ವರ್ಷಗಳ ಕಾಲ ಹಿಡಿದರೂ, ಖರ್ಚಾಗಿದ್ದು ಅಷ್ಟೇನಾ? Unbelievable! ಈಗ ಆ ಗೆಸ್ಟ್ ಹೌಸಿನ ಮುಂದೆ ನಿರ್ಮಾಣ ಕಾರ್ಯದ ಈ ಎಲ್ಲಾ ವಿವರಗಳನ್ನು ನೀಡುವ ಆ ಕಲ್ಲೊಂದನ್ನೇ ನೆಡಲು ಏನಿಲ್ಲವೆಂದರೂ ಕನಿಷ್ಠ ಇಪ್ಪತ್ತು ಸಾವಿರ ರುಪಾಯಿ ಬೇಕು. ಅಂದರೆ ಒಂದು ಕಲ್ಲು ನೆಡುವ ಹಣದಲ್ಲಿ, ಅಂದು ಇಂಥ ಹತ್ತು ಗೆಸ್ಟ್ ಹೌಸುಗಳನ್ನು ಬ್ರಿಟಿಷರು ಕಟ್ಟಿರುತ್ತಿದ್ದರು.
ಎರಡೂವರೆ ಸಾವಿರಕ್ಕೆ ಇನ್ನೂ ಮೂವತ್ತು ರುಪಾಯಿ ಕಡಿಮೆ ಹಣದಲ್ಲಿ ಇಂದಿಗೂ ಗಟ್ಟಿಮುಟ್ಟಾಗಿರುವ ಇಂಥದ್ದೊಂದು ಅದ್ಭುತ ಗೆಸ್ಟ್ ಹೌಸ್ ಕಟ್ಟಿದ್ದಾರಲ್ಲ, ಅದು ಹೇಳುವ ಕತೆ ಸ್ವಾತಂತ್ರ್ಯ ನಂತರದ ನಮ್ಮ ದೇಶದ ಚರಿತ್ರೆಗೆ ಬರೆದ ಮುನ್ನುಡಿಯಂತಿದೆ. ಅದೇ ಗೆಸ್ಟ್ ಹೌಸ್, ಅಡುಗೆಮನೆ ಮತ್ತು ಬಾವಿಯ ನಿರ್ಮಾಣಕ್ಕೆ ಇಂದು ಟೆಂಡರ್ ಕರೆದರೆ, ಯಾವ ಗುತ್ತಿಗೆದಾರನೂ ಕನಿಷ್ಠ ಮೂರು  ಕೋಟಿಗಿಂತ ಕಡಿಮೆ ಬಿಡ್ ಮಾಡುವುದಿಲ್ಲ. ಆ ಗುತ್ತಿಗೆ ಗಿಟ್ಟಿಸಲು ಹತ್ತು ಪರ್ಸೆಂಟ್ ಅಂದರೂ ಮೂವತ್ತು ಲಕ್ಷ ರುಪಾಯಿ ಲಂಚ ಕೊಡಬೇಕಲ್ಲ ? ಇನ್ನು ಗುತ್ತಿಗೆದಾರನಿಗೆ ಕನಿಷ್ಠ ಐವತ್ತು ಲಕ್ಷ ರುಪಾಯಿ ಲಾಭ ಬೇಡವಾ? ಇನ್ನು ಉಳಿದವರಿಗೆಲ್ಲ ಹಂಚಲು ಇಪ್ಪತ್ತು ಲಕ್ಷ ಬೇಕು. ಅಂದರೆ ಮೂರರಲ್ಲಿ ಒಂದು ಕೋಟಿ ಹೋಯಿತು. ಇನ್ನು ಎರಡು ಕೋಟಿಯಲ್ಲಿ ಗೆಸ್ಟ್ ಹೌಸ್ ಮುಗಿಸಬೇಕು. ಅದು ಮುಗಿಯುವ ಹೊತ್ತಿಗೆ ನೆಟ್ಟಗೆ ಖರ್ಚಾಗಿರುವುದು ಒಂದೂವರೆ ಕೋಟಿಯಷ್ಟೇ. ಅದೂ ಕಳಪೆ ಕಾಮಗಾರಿ, ಬೇಕಾಬಿಟ್ಟಿ ಕೆಲಸ. ಆ ಕಟ್ಟಡದ ತಾಳಿಕೆ-ಬಾಳಿಕೆ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ. ನಾಲ್ಕೇ ವರ್ಷಗಳಲ್ಲಿ ಕಟ್ಟಡ ಶಿಥಿಲವಾಗಲಿ, ಉದುರಿ ಬೀಳಲಿ, ಯಾರೂ ಕೇಳುವುದಿಲ್ಲ. ಮಂತ್ರಿಗಳೇ ಗುತ್ತಿಗೆದಾರರ ರಕ್ಷಣೆಗೆ ನಿಂತಿರುತ್ತಾರೆ.  ಕಳಪೆ ಕಾಮಗಾರಿಗೆ ಇಲ್ಲಿ ತನಕ ಒಬ್ಬೇ ಒಬ್ಬ ಗುತ್ತಿಗೆದಾರ ಶಿಕ್ಷೆ ಅನುಭವಿಸಿಲ್ಲ.  ಮೊದಲನೆಯದಾಗಿ, ಸುಖಾಲಹಟ್ಟಿ ವಿಶ್ರಾಂತಿ ಧಾಮವನ್ನು ಇಂದು ಕಟ್ಟಬೇಕೆಂದರೆ, ಒಂದೇ ದಿನ ಹತ್ತು ಮಂದಿ ಕೂಲಿಯಾಳುಗಳಿಗೆ ಕೊಡಬೇಕಾದ ಹಣವೇ ಎರಡೂವರೆ ಸಾವಿರಕ್ಕಿಂತ ಹೆಚ್ಚಾಗುತ್ತವೆ. ಆ ಹಣದಲ್ಲಿ ಅಂದು ಇಡೀ ಗೆಸ್ಟ್ ಹೌಸ್, ಅಡುಗೆಮನೆ ಮತ್ತು ಬಾವಿಯನ್ನು ಕಟ್ಟಿದ್ದರು.  ಚಂದಮಾಮ ಕತೆಯಲ್ಲಿ ಸಹ ಅಷ್ಟು ಕಡಿಮೆ ಹಣದಲ್ಲಿ ಕಟ್ಟಲು ಸಾಧ್ಯವಿಲ್ಲ.
ಅಂದಿಗೂ, ಇಂದಿಗೂ ಹೋಲಿಕೆಯೇ ಸರಿ ಅಲ್ಲ. ಆದರೂ ಅಂದಿನಿಂದ ಇಂದಿಗೆ ಅಷ್ಟು ದೂರ ಸಾಗಿ ಬಂದರೂ ನಾವು  ನೈತಿಕವಾಗಿ ಅದೆಷ್ಟು ದಿವಾಳಿಯಾಗಿದ್ದೇವೆ, ನಮಗೇ ನಾವು ಹೇಗೆ ಮೋಸ ಮಾಡಿಕೊಳ್ಳುತ್ತಿದ್ದೇವೆ, ಮೌಲ್ಯಗಳನ್ನೆಲ್ಲ ಹೇಗೆ ಗಾಳಿಗೆ ತೂರಿದ್ದೇವೆ, ಗುಣಮಟ್ಟವನ್ನು ಹೇಗೆ ಕಾಲಕಸವಾಗಿಸಿದ್ದೇವೆ ಎಂಬುದರ ಪ್ರತೀಕದಂತೆ, ಭದ್ರಾ ಅಭಯಾರಣ್ಯದಲ್ಲಿರುವ ಸುಖಾಲಹಟ್ಟಿ ಗೆಸ್ಟ್ ಹೌಸ್ ಮೂಕ ಸಾಕ್ಷಿಯಂತೆ ನಿರುಮ್ಮಳವಾಗಿ ನಿಂತಿದೆ. ನಮ್ಮ ಲೋಕೋಪಯೋಗಿ  ಸಚಿವರಿಗೆ, ಐಎಎಸ್ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಈ ಸರಕಾರ ಭದ್ರಾ ಅಭಯಾರಣ್ಯಕ್ಕೆ ಒಂದು ಸ್ಟಡಿ ಟೂರ್ ಏರ್ಪಡಿಸಿ, ಈ ಗೆಸ್ಟ್ ಹೌಸನ್ನು ತೋರಿಸಬೇಕು. ಕಿಂಚಿತ್ತು ನಿಯತ್ತು ಇದ್ದವರಿಗೆ ಅಲ್ಪಸ್ವಲ್ಪ ಪ್ರೇರಣೆ ಸಿಕ್ಕೀತು !