Sunday, 24th November 2024

ಐಟಿ ಕಂಪನಿಗಳಿಗೆ ಈಗಲೂ ಬೆಂಗಳೂರೇ ಫೇವರೇಟ್

ಹಲವು ಸಮಸ್ಯೆ ಬಗ್ಗೆ ಗೊಣಗಿದರೂ, ಕರ್ನಾಟಕಕ್ಕೆ ಆದ್ಯತೆ 

ಕಳೆದ ಐದು ವರ್ಷಗಳಲ್ಲಿ ಎರಡರಷ್ಟಾದ ಐಟಿ ಕಂಪನಿಗಳು

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಸೃಷ್ಟಿಯಾಗಿದ್ದ ಪ್ರವಾಹದಿಂದ ಬೇಸತ್ತು ಕೆಲ ಐಟಿ ಕಂಪನಿಗಳು ‘ಬೆಂಗಳೂರು ಬಿಡುವು’ ದಾಗಿ ಹೇಳಿದ್ದವು.

ಆದರೆ ಅಂಕಿ-ಅಂಶವನ್ನು ಗಮನಿಸಿದರೆ, ಈಗಲೂ ಐಟಿ ಸಂಸ್ಥೆಗಳಿಗೆ ಬೆಂಗಳೂರೇ ನೆಚ್ಚಿನ ತಾಣ ಎನ್ನುವುದು ಸ್ಪಷ್ಟವಾಗುತ್ತದೆ. ಹೌದು, ಕಳೆದ ಐದು ವರ್ಷಗಳಿಗೆ ಹೋಲಿಸಿ ದರೆ ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಐಟಿ ಹಾಗೂ ಐಟಿಇಎಸ್
ಸಂಸ್ಥೆಗಳು ಬಹುತೇಕ ಡಬಲ್ ಆಗಿದೆ. ಇದರೆ ಜತೆಜತೆಗೆ ಬೆಂಗಳೂರಿನಿಂದ ರಫ್ತಾಗು ತ್ತಿರುವ ಆದಾಯದಿಂದ ಬರುವ ಆದಾಯ ಸುಮಾರು ಐದು ಪಟ್ಟು ಹೆಚ್ಚಾಗಿದೆ ಎನ್ನುವುದು ಸ್ಪಷ್ಟವಾಗಿದೆ.

೨೦೨೦ನೇ ಮಾರ್ಚ್‌ಗೆ ಸೀಮಿತಗೊಳಿಸಿ ಸಿಎಜಿ ಸಿದ್ಧಪಡಿಸಿರುವ ವರದಿಯಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ನಮೂದಿಸಿದೆ. ಒಂದೆಡೆ ಐಟಿ ಕಂಪನಿಗಳು ಬೆಂಗಳೂರಿನಿಂದ ಹೊರಹೋಗುವುದಾಗಿ ಬೆದರಿಕೆ ಹಾಕುತ್ತಿದ್ದರೂ, ಇನ್ನೊಂದೆಡೆ ರಫ್ತು  ವಿಷಯ ದಲ್ಲಿ ಇಡೀ ದೇಶದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎನ್ನುವುದು ಈ ವರದಿಯಿಂದ ತಿಳಿದುಬಂದಿದೆ. ಸಿಎಜಿ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ೨೦೧೪-೧೫ರಲ್ಲಿ ೨೫೬೦ ಐಟಿ ಸಂಸ್ಥೆಗಳಿದ್ದವು. ಆದರೆ ೨೦೨೦ನೇ ಸಾಲಿನ ವೇಳೆಗೆ ಈ ಸಂಖ್ಯೆ ೫೫೦೦ಕ್ಕೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಅಂಕಿ ಅಂಶಗಳ ಪ್ರಕಾರ, ಐಟಿ-ಐಟಿಇಎಸ್ ಸಂಸ್ಥೆಗಳಿಂದ ನೇರವಾಗಿ ಬೆಂಗಳೂರಿನಲ್ಲಿ ಸುಮಾರು ೧೦ ಲಕ್ಷ ಸಿಬ್ಬಂದಿಗೆ ಕೆಲಸ ಸಿಕ್ಕಿದ್ದು, ಪರೋಕ್ಷವಾಗಿ ಸುಮಾರು ೩೧ ಲಕ್ಷ ಮಂದಿ ಈ ಸಂಸ್ಥೆಗಳಿಂದ ಜೀವನ ಸಾಗಿಸುತ್ತಿದ್ದಾರೆ. ಇದರೊಂದಿಗೆ ರಾಜ್ಯದ ಜಿಡಿಪಿಗೂ ಐಟಿ ಸಂಸ್ಥೆಗಳು ಶೇ.೨೫ರಷ್ಟು ಪಾಲನ್ನು ನೀಡುತ್ತಿವೆ ಎಂದು ತಿಳಿದುಬಂದಿದೆ.

ಸ್ಟಾರ್ಟ್ ಅಪ್ ಕಂಪನಿಗಳೇ ಹೆಚ್ಚು: ಈ ರೀತಿ ಐದು ವರ್ಷದ ಅವಽಯಲ್ಲಿ ಭಾರಿ ಪ್ರಮಾಣದಲ್ಲಿ ಕಂಪನಿಗಳ ಸಂಖ್ಯೆ ಏರಿಕೆ ಯಾಗಿದ್ದರೂ, ಇದರಲ್ಲಿ ಬಹುತೇಕ ಸ್ಟಾರ್ಟ್ ಅಪ್ ಕಂಪನಿಗಳೇ ಹೆಚ್ಚಿವೆ ಎನ್ನಲಾಗಿದೆ. ಈ ರೀತಿ ಆರಂಭವಾಗಿರುವ ಸ್ಟಾರ್ಟ್ ಅಪ್‌ಗಳು, ಕೆಲವೊಂದು ನಿಯಮಬಾಹಿರವಾಗಿ ನಡೆಸಲಾಗುತ್ತಿದೆ ಎನ್ನುವ ಎಚ್ಚರಿಕೆಯನ್ನು ಇದೇ ವರದಿಯಲ್ಲಿ ನೀಡಲಾಗಿದೆ.

ತರಬೇತಿಯ ಹೆಸರಲ್ಲಿ ವಂಚನೆ; ಎಚ್ಚರಿಕೆ ಸಿಎಜಿ ತನ್ನ ವರದಿಯಲ್ಲಿ ಐಟಿ ಸಂಸ್ಥೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ,
ಕೆಲವೊಂದು ಲೋಪದೋಷಗಳಾಗಿವೆ ಎಂದು ಉಲ್ಲೇಖಿಸಿದೆ. ಪ್ರಮುಖವಾಗಿ ಸ್ಟಾರ್ಟ್ ಅಪ್ ಕಂಪನಿಗಳ ಕಾರ್ಯಕ್ಷಮತೆಗೆ
ಸಂಬಂಧಿಸಿದಂತೆ ಇಲಾಖೆಯ ಬಳಿ ಸಂಪೂರ್ಣ ಮತ್ತು ಸಮರ್ಪಕ ಮಾಹಿತಿ ಇಲ್ಲ ಎನ್ನುವುದನ್ನು ವರದಿಯಲ್ಲಿ ತಿಳಿಸಿದೆ.

ಇದರೊಂದಿಗೆ ಬೆಂಗಳೂರು ಐಟಿ ಧೈತ್ಯ ರಾಜಧಾನಿಯಾಗಿರುವುದರಿಂದ ಇಲ್ಲಿ ಕೆಲಸದ ಆಮಿಷ ನೀಡಿ ತರಬೇತಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಈ ರೀತಿ ಮಾನ್ಯತೆ ಇಲ್ಲದೇ ತರಬೇತಿ ಕೋರ್ಸ್‌ಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಮೌಲ್ಯಮಾಪನ ಮಾಡದೇ, ಸ್ಟಾರ್ಟ್ ಅಪ್‌ಗಳಿಗೆ ಅನುದಾನವನ್ನು ನಿಯಮಬಾಹಿರವಾಗಿ ಹಣ ಬಿಡುಗಡೆ ಮಾಡಿದರೆ, ಆ ಇಲಾಖೆಯನ್ನು ಹೊಣೆಗಾರಿಕೆಯನ್ನಾಗಿ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.