Friday, 22nd November 2024

ವಿದ್ಯುತ್‌ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು: ಭಾಸ್ಕರ್‌ ರಾವ್‌

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್‌ 1ರಿಂದ ವಿದ್ಯುತ್‌ ದರವನ್ನು ಏರಿಕೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಶೀಘ್ರವೇ ಹಿಂಪಡೆಯಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಆಗ್ರಹಿಸಿದ್ದಾರೆ.

ವಿದ್ಯುತ್ ದರ ಏರಿಕೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಭಾಸ್ಕರ್‌ ರಾವ್‌, ಕಲ್ಲಿದ್ದಲು ಬೆಲೆಯಲ್ಲಿ ಸಣ್ಣ ಏರಿಕೆಯಾಗಿದೆ. ಅದನ್ನೇ ನೆಪ ಮಾಡಿಕೊಂಡಿರುವ ಬಿಜೆಪಿ ಸರ್ಕಾರ ಜನರಿಗೆ ವಿದ್ಯುತ್‌ ಶಾಕ್‌ ನೀಡಲು ಮುಂದಾಗಿದೆ. ಸಾರ್ವಜನಿಕರಿಗೆ ತೊಂದರೆ ಯಾಗುವಂತಹ ಸರ್ಕಾರದ ಈ ನಿರ್ಧಾರ ಖಂಡನೀಯ ಎಂದರು.

ಕಲಿದ್ದಲು ಬೆಲೆ ಇಳಿಕೆಯಾದಾಗ ಸರ್ಕಾರವು ವಿದ್ಯುತ್‌ ದರವನ್ನು ಇಳಿಕೆ ಮಾಡುವು ದಿಲ್ಲ. ಹೀಗಿರುವಾಗ ಕಲ್ಲಿದ್ದಲು ಬೆಲೆ ಏರಿಕೆಯಾದಾಗ ವಿದ್ಯುತ್‌ ದರ ಏರಿಕೆ ಮಾಡುವುದು ಎಷ್ಟು ಸರಿ?. ಸರ್ಕಾರಿ ಕಚೇರಿಗಳು ಬಾಕಿ ಉಳಿಸಿಕೊಂಡಿರುವ ಸಾವಿರಾರು ಕೋಟಿ ರೂಪಾಯಿಯನ್ನು ವಸೂಲಿ ಮಾಡದ ಕಾರಣಕ್ಕೆ ವಿದ್ಯುತ್‌ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಆ ನಷ್ಟವನ್ನು ಜನರ ತಲೆಗೆ ಕಟ್ಟುವುದು ಸರ್ಕಾರದ ಅಸಮರ್ಥತೆ ಯನ್ನು ತೋರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ಆದರೂ ದೆಹಲಿಯ ಆಮ್‌ ಆದ್ಮಿ ಪಕ್ಷ ನೇತೃತ್ವದ ಸರ್ಕಾರವು ಅಲ್ಲಿ ಪ್ರತಿ ಕುಟುಂಬಕ್ಕೂ ತಿಂಗಳಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ಪೂರೈಸುತ್ತಿದೆ. ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ ಬಂದ ನಂತರ ಅಲ್ಲಿ ವಿದ್ಯುತ್‌ ದರವನ್ನು ಏರಿಕೆ ಮಾಡಿಲ್ಲ.