Friday, 22nd November 2024

ಭಯೋತ್ಪಾದನೆ- ಆರೆಸ್ಸೆಸ್: ಹೋಲಿಕೆಯೇ ವಿಕೃತ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ವಿರೋಧ ಪಕ್ಷಗಳು ದೂಷಿಸುವಂತೆ ಕೇಂದ್ರ ಸರಕಾರವು ಸರ್ವಾಧಿಕಾರಿಯಂತೆ ನಡೆದುಕೊಂಡಿಲ್ಲ, ಪಿಎಫ್ಐ ಮೇಲೆ ಏಕಾಏಕಿ ದಾಳಿ ನಡೆಸಿಲ್ಲ. ದಾಳಿಗೂ ಮುನ್ನ ಪ್ರಮುಖ ಅದು ಮುಸ್ಲಿಂ ಸಂಘಟನೆಗಳೊಂದಿಗೆ ಸಭೆ ನಡೆಸಿ, ದೇಶದ್ರೋಹಿ ಸಂಘಟನೆ ಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಅಪರೂಪದ-ಅನಿರೀಕ್ಷಿತ-ಅನೂಹ್ಯ ಬೆಳವಣಿಗೆಗಳಾದವು. ದೇಶದಲ್ಲಿನ ಚೀತಾ ಸಂತತಿಯ ಕೊರತೆ ನೀಗಿಸ ಲೆಂದು ಪ್ರಧಾನಿ ಮೋದಿಯವರು ದೇಶಕ್ಕೆ ೮ ಚಿರತೆಗಳನ್ನು ತರಿಸಿ ಕಾಡಿನೊಳಗೆ ಬಿಡಿಸಿದ್ದು ಅಪರೂಪದ ಬೆಳವಣಿಗೆ. ಈ ಚೀತಾಗಳು ಸಹಜವಾಗಿ ತಮ್ಮ ಬೇಟೆಕಾರ್ಯಕ್ಕೆ ಇಳಿದವು.

ಇನ್ನು ಅನಿರೀಕ್ಷಿತ ಬೆಳವಣಿಗೆಯ ಕಡೆ ಗಮನ ಹರಿಸೋಣ. ದೇಶಾದ್ಯಂತದ ಪಿಎಫ್ಐ ಕಚೇರಿಗಳ ಮೇಲೆ ಎನ್‌ಐಎ ಮತ್ತು ಇತರ ತನಿಖಾಸಂಸ್ಥೆಗಳು ದಾಳಿ ನಡೆಸಿ ರಣಬೇಟೆಯಾಡಿದವು. ಇಂಥದನ್ನು ವಿರೋಧಿಸಿ ಪ್ರತಿಭಟಿ ಸುವ ಸಾಮಾಜಿಕ ಸ್ವಾತಂತ್ರ್ಯ ಮತ್ತು ಹಕ್ಕನ್ನು ನಮ್ಮ ಸಂವಿಧಾನ ಎಲ್ಲರಿಗೂ ನೀಡಿದೆ. ಅಂತೆಯೇ ಮಹಾರಾಷ್ಟ್ರದ ಪುಣೆಯಲ್ಲಿ ಪ್ರತಿಭಟಿಸಿದ ೪೦ ಮಂದಿ ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ಸಂಪ್ರದಾಯದಂತೆ ಬಂಧಿಸಿದಾಗ, ಆ ಕಾರ್ಯಕರ್ತರ ಬಾಯಲ್ಲಿ ಬಂದ
ಘೋಷಣೆಯೇನು ಗೊತ್ತೇ- ‘ಪಾಕಿಸ್ತಾನ್ ಜಿಂದಾಬಾದ್’. ಅಲ್ಲಿಗೆ ಅರ್ಥವಾಯಿತಲ್ಲಾ ಪಿಎಫ್ಐ ಕೂಟದ ಆಳ ಮತ್ತು ಅಗಲ!

ಇಂಥ ದೇಶದ್ರೋಹಿ ಸಂಘಟನೆಯನ್ನು ನಿಷೇಧಿಸಲು ಇದಕ್ಕಿಂತ ಸಾಕ್ಷಿ-ಪುರಾವೆ ಇನ್ನೇನು ಬೇಕು ಹೇಳಿ? ಆದರೂ ದೇಶ ದೊಳಗಿನ ಕಾಂಗ್ರೆಸ್ ಮುಖಂಡರಿಗೆ ಸಮಾಧಾನವಾಗುತ್ತಿಲ್ಲ. ಇಂಥ ಸಂಘಟನೆಯನ್ನು, ಉಗ್ರವಾದಿಗಳನ್ನು ಯಾವ ದಿಕ್ಕಿನಿಂದ ಸಮರ್ಥಿಸಿಕೊಳ್ಳಬೇಕು, ಎಂಥ ಜಾಣತನದ ಹೇಳಿಕೆಗಳನ್ನು ನೀಡಬೇಕು ಎಂಬುದಕ್ಕೆ ಅವರು ಯಾವ ‘ಮಹಾ ಕಾವ್ಯ’ವನ್ನು ಓದುತ್ತಿದ್ದಾರೆಂಬುದು ಕುತೂಹಲ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ದೇಶಾಭಿಮಾನಿ (?!) ನಾಯಕರು ಮಾಡಬೇಕಾದ್ದ ಕೆಲಸವನ್ನು ಇವರುಗಳ ಪಾಲಿನ ‘ಭಯೋತ್ಪಾದಕ’ ಎನಿಸಿರುವ ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ೨ ವಾರದ ಹಿಂದೆಯೇ ಮಾಡಿ ತೋರಿಸಿದ್ದಾರೆ.

ಮೋಹನ್ ಭಾಗವತ್ ಅವರು ಮುಸಲ್ಮಾನರಲ್ಲಿ ‘ನೈಜ’ ಬುದ್ಧಿಜೀವಿಗಳೆಂದು ಗುರುತಿಸಿಕೊಂಡಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಸಿಂಗ್, ಅಲಿಘರ್
ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೇರ್ವಾಣಿ ಮುಂತಾದವರನ್ನು ಕೂರಿಸಿಕೊಂಡು ‘ದುಂಡುಮೇಜಿನ ಸಭೆ’ ನಡೆಸಿದ್ದರು. ಇದರ ನಂತರ ದೆಹಲಿಯ ಇಮಾಮ್ ಮಸೀದಿ ಮತ್ತು ಮದರಸಾಗೆ ಭೇಟಿನೀಡಿ ಆಶ್ಚರ್ಯ ಮೂಡಿಸಿದ್ದರು.

ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲಿಯಾಸಿಯವರು ಭಾಗವತ್ ರನ್ನು ‘ರಾಷ್ಟ್ರಪಿತ’ ಮತ್ತು ‘ರಾಷ್ಟ್ರಋಷಿ’ ಎಂದು ಕರೆದು ಹೊಗಳಿದ್ದರು. ಅನೂಹ್ಯವಾದ ಈ ಬೆಳವಣಿಯಿಂದ ಸಂಘ ಪರಿವಾರದೊಳಗೆ ಆತಂಕ ಮತ್ತು ಗೊಂದಲ ಉಂಟಾಗಿದ್ದು ಸತ್ಯ. ಏಕೆಂದರೆ ಎಲ್ಲಿಯ ಇಮಾಮ್ ಸಾಬ್, ಎಲ್ಲಿಯ ಮೋಹನ್ ಭಾಗವತ್! ಆದರೆ ಭಾಗವತ್ ಅವರ ಈ ನಡೆಯ ಫಲಿತಾಂಶವನ್ನೀಗ ಇಡೀ ದೇಶ ನೋಡುತ್ತಿದೆ.

ತಮ್ಮದೇ ಸಮುದಾಯದ ಇಡೀ ಪಿಎಫ್ಐ ಕೂಟವನ್ನು ನಿಷೇಽಸಿದ್ದರೂ ಯಾವ ಪ್ರಜ್ಞಾವಂತ ಮುಸಲ್ಮಾನರೂ ಖಂಡಿಸದೆ ದೇಶದೊಳಗೆ ಶಾಂತಿಯಿಂದ ವರ್ತಿಸಿ ಪರೋಕ್ಷ ರಾಷ್ಟ್ರನಿಷ್ಠೆ ಪ್ರದರ್ಶಿಸಿದ್ದಾರೆ. ದೇಶದ ಮುಸಲ್ಮಾನರ ನೈತಿಕತೆಗೆ,
ಸಾಮಾಜಿಕ ಬದ್ಧತೆಗೆ ಹೊಳಪು ನೀಡಿಬಂದಿರುವ ಭಾಗವತ್ ಅವರು ಆರೆಸ್ಸೆಸ್ ಮೇಲಿರುವ ಉಹಾತ್ಮಕ ಮಡಿ-ಮೈಲಿಗೆ ಗಳನ್ನು ಪಕ್ಕಕ್ಕಿಟ್ಟು ಖುದ್ದು ಮಸೀದಿ-ಮದರಸಾಗಳಿಗೆ ತೆರಳಿ ಮುಸ್ಲಿಂ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಅವರನ್ನು
ದೇಶದ ಸೌಹಾರ್ದತೆಗೆ ಒಗ್ಗಿಸಲು ಯತ್ನಿಸಿದರಲ್ಲಾ, ಅಂಥ ಕೆಲಸವನ್ನು ಕಾಂಗ್ರೆಸ್‌ನವರು ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೇ ಮಾಡಿದ್ದಿದ್ದರೆ ಇಂದು ದೇಶಕ್ಕೆ ಭಯೋತ್ಪಾದನೆಯೆಂಬ ಶಾಪವೇ ತಟ್ಟುತ್ತಿರಲಿಲ್ಲ. ಆ ಶಾಪ ಮಾತ್ರ ಇಂದು ಕಾಂಗ್ರೆಸ್ ಗೆ ತಟ್ಟಿದೆಯಷ್ಟೇ.

ದೇಶದ ಮುಸಲ್ಮಾನರು ದಾರಿತಪ್ಪುವುದನ್ನು ಎಂದೂ ಖಂಡಿಸದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಅವರನ್ನು ಕೇವಲ ಮತಬ್ಯಾಂಕ್‌ನಂತೆ ಕಂಡಿದ್ದೇ ಹೆಚ್ಚು. ಮನೆಯ ಮಕ್ಕಳು ದಾರಿ ತಪ್ಪಿದಾಗ ಕಿವಿಹಿಂಡಿ ಸನ್ಮಾರ್ಗದಲ್ಲಿ ನಡೆಸುವುದು ತಂದೆಯ/ಗುರುವಿನ ಪರಮಕರ್ತವ್ಯ. ಆದರೆ ಎಂಜಿನಿಯರಿಂಗ್, ವೈದ್ಯಕೀಯ ಓದಿಕೊಂಡವರೂ ಉಗ್ರವಾದಿಗಳಾಗುವ ಯತ್ನದಲ್ಲಿ ಸಿಕ್ಕಿಬಿದ್ದರೂ ಯಾವ ಕಾಂಗ್ರೆಸ್ ನಾಯಕನೂ ಅಂಥವರ ಮನೆಗೆ ಹೋಗಿ ಬುದ್ದಿಹೇಳಿ ತಿದ್ದುವ ಕೆಲಸ ಮಾಡಲಿಲ್ಲ. ಹಿಂದೂ ಯುವಕರು ದಾರಿತಪ್ಪಿದರೆ ಮಾತ್ರ ಇವರು ಮುಲಾಜಿಲ್ಲದೆ ಖಂಡಿಸಿ ಅವರನ್ನು ತಿದ್ದುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆಯೇ ಹೊರತು ಮುಸ್ಲಿಂ ಮಂದಿ ಅದೆಂಥ ದೇಶದ್ರೋಹಿಗಳಾಗಿದ್ದರೂ ಸರಿ ಅವರನ್ನು ತಿದ್ದದೆ, ಅವರ ವೋಟು ಗಳತ್ತ ಮಾತ್ರ ಚಿತ್ತವಿರಿಸಿ ಮಮತೆ-ಮಮಕಾರ ತೋರಿಸುತ್ತಲೇ ಬಂದಿದ್ದಾರೆ.

ಇವರಿಗೆ ಮುಸಲ್ಮಾನರ ಭಯೋತ್ಪಾದನೆಗಿಂತ ಆರೆಸ್ಸೆಸ್‌ನ ರಾಷ್ಟ್ರೀಯತೆಯೇ ಭಯೋತ್ಪಾದನೆಯಂತೆ ಕಂಡದ್ದು ವಿಸ್ಮಯ.
ಈಗ ನೋಡಿ, ಪಿಎಫ್ಐ ನಿಷೇಧದಿಂದ ಕಾಂಗ್ರೆಸ್ ಮುಖಂಡರು ಗೊಂದಲಕ್ಕೊಳಗಾದಂತಿದೆ. ಅದರ ಪರ ದನಿಯೆತ್ತಿದರೆ ದೇಶದ್ರೋಹವಾಗುತ್ತದೆ, ನಿಷೇಧವನ್ನು ಒಪ್ಪಿದರೆ ಮುಸಲ್ಮಾನರಿಗೆ ‘ದ್ರೋಹ’ ಎಸಗಿದಂತಾಗುತ್ತದೆ ಯಲ್ಲಾ ಎಂಬ ಚಿಂತೆ ಇವರಿಗೆ. ಹೀಗಾಗಿ ಇಂದು ಪಿಎಫ್ಐ ನಿಷೇಧವನ್ನು ದಿಢೀರ್ ಎಂದು ಒಪ್ಪಿಕೊಳ್ಳದೆ ಆರೆಸ್ಸೆಸ್ ಅನ್ನು ಸೇರಿಸಿ ಅಸಂಬದ್ಧ
ಹೇಳಿಕೆ ನೀಡುತ್ತಿದ್ದಾರೆ.

ಆದರೆ ಅದೆಂಥ ಅದ್ಭುತವೋ ನೋಡಿ, ಇವರಿಗಿಂತ ಕೇರಳದ ಕಟ್ಟರ್ ‘ಮುಸ್ಲಿಂ ಲೀಗ್’ ಪಕ್ಷವೇ ಮೇಲು. ‘ಪಿಎಫ್ಐ ಕುರಾನ್ ಅನ್ನು ತಪ್ಪಾಗಿ ಅರ್ಥೈಸಿ, ಹಿಂಸಾಚಾರ ಮಾರ್ಗ ಅಳವಡಿಸಿಕೊಳ್ಳಲು ಮುಸಲ್ಮಾನರ ಮನವೊಲಿಸಿತ್ತು. ಯುವಪೀಳಿಗೆಯ
ದಾರಿತಪ್ಪಿಸಿ ದೇಶದಲ್ಲಿ ಒಡಕು ಮತ್ತು ದ್ವೇಷವನ್ನು ಸೃಷ್ಟಿಸುತ್ತಿತ್ತು. ಈ ನಿಷೇಧವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಎದೆ ಮುಟ್ಟಿಕೊಂಡು ಹೇಳಿದೆ. ಇಂಥ ಸತ್ಯ ಹೇಳುವ ಗಂಡೆದೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲವಾಯಿತೇ? ಬೇಕಾದರೆ ಗಮನಿಸಿ ನೋಡಿ, ಈಗಾಗಲೇ ಕೇಂದ್ರದ ಈ ನಿಷೇಧ ಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಯಾವ್ಯಾವ ದೇಶಗೇಡಿಗಳು-ಮನೆಹಾಳರು ಒಳಗೊಳಗೇ ಲೆಕ್ಕಾಚಾರ ಹಾಕುತ್ತಿದ್ದಾರೆ, ಯಾವ್ಯಾವ ಪಕ್ಷಗಳ ವಕೀಲರು, ನಾಯಕರು ಅವರನ್ನು ಬೆಂಬಲಿ ಸಲು ಸಿದ್ಧರಾಗುತ್ತಿದ್ದಾರೆ ಎಂಬುದನ್ನು ಸದ್ಯದಲ್ಲಿಯೇ ತಿಳಿದುಕೊಳ್ಳಬಹುದು.

ಇನ್ನು ರಾಜ್ಯದಲ್ಲಿ ಪಿಎಫ್ಐ ಮನಸ್ಥಿತಿಯ ವಾರ್ತಾಪತ್ರಿಕೆಗಳು, ಸಿಕ್ಕಸಿಕ್ಕ ಸುದ್ದಿವಾಹಿನಿಗಳಲ್ಲಿ ಕುಳಿತು ಅಂಗಿಯೊಳಗೆ
ಓತಿಕ್ಯಾತ ಬಿಟ್ಟುಕೊಂಡವರಂತೆ ವಾದಕ್ಕಿಳಿಯುವವರು ಇನ್ನೂ ಕಣ್ಣುಮುಚ್ಚಿಕೊಂಡು ಹಾಲನ್ನು ಕುಡಿಯುತ್ತಿದ್ದಾರೆ. ಅವರನ್ನೂ ಬಿಡದೆ ಹೆಡೆಮುರಿ ಕಟ್ಟಬೇಕಾದ ಗಂಡೆದೆಯನ್ನು ರಾಜ್ಯದ ಪೊಲೀಸರು ತೋರಬೇಕಿದೆ. ಇಂಥ ಮತಾಂಧರ ಉಪಟಳ, ಅಟ್ಟಹಾಸ ಹೆಚ್ಚಾದರೆ ಏನಾಗುತ್ತದೆ ಎಂಬುದಕ್ಕೆ ಕಾಶ್ಮೀರವೇ ನಿದರ್ಶನ.

ಆದ್ದರಿಂದ ದೇಶದ ಪ್ರತಿಯೊಬ್ಬ ಮತದಾರನೂ ಕೈಗೊಳ್ಳಬೇಕಾದ ಗಂಭೀರ ಕ್ರಮವೆಂದರೆ, ಯಾವ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಹಿಂದೂಗಳ ಅಸ್ತಿತ್ವದ ರಕ್ಷಣೆಗೆ ಆಧಾರವಾಗಿರುವ ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಲವ್ ಜಿಹಾದ್
ನಿಷೇಧದಂಥ ಕಾನೂನು-ಕಾಯ್ದೆಗಳನ್ನು ಕಿತ್ತು ಬಿಸಾಡುವುದಾಗಿ ಹೇಳಿಕೆ ನೀಡುತ್ತದೋ ಅಂಥ ಪಕ್ಷದ ಯಾವುದೇ ಅಭ್ಯರ್ಥಿಯ ಜಾತಿಪ್ರೀತಿ, ಹಣದ ಆಮಿಷವನ್ನು ತಿರಸ್ಕರಿಸಿ ಆತನ ಕರಪತ್ರವನ್ನು ಹರಿದು ಬಿಸಾಡಬೇಕು, ಸ್ವಾಭಿಮಾನ ಮೆರೆಯಬೇಕು. ರಾಷ್ಟ್ರಭಕ್ತಿಯೆಂದರೆ ಬರಿಯ ಬಿಜೆಪಿ, ಆರೆಸ್ಸೆಸ್ ಅಲ್ಲ; ಪ್ರತಿಯೊಬ್ಬ ನಾಗರಿಕನೂ ಸ್ವಯಂ ಜನಜಾಗೃತಿ ಅಭಿಯಾನ ಆರಂಭಿಸ
ಬೇಕಿದೆ. ಇಲ್ಲದಿದ್ದರೆ ಇಂಥವರ ಕೈಗೆ ಅಧಿಕಾರ ನೀಡಿದರೆ ಕಾಶ್ಮೀರಕ್ಕಾದ ದುರ್ಗತಿಯೇ ಇಡೀ ದೇಶಕ್ಕೆ ಒದಗುವುದು ಕಟ್ಟಿಟ್ಟಬುತ್ತಿ.

ಹಾಗೆಯೇ, ಭಾರತದ ಮುಸಲ್ಮಾನರೂ ತಮ್ಮ ಮತ್ತು ಹೊರದೇಶದ ಮುಸಲ್ಮಾನರ ಬದುಕು, ಸ್ಥಿತಿಗತಿ, ವಾಸ್ತವ ಸನ್ನಿವೇಶ ಗಳನ್ನು ತುಲನೆ ಮಾಡಬೇಕು; ದೇಶದ್ರೋಹವನ್ನು ಪ್ರಚೋದಿಸುವ, ಮತಾಂಧತೆ ಯನ್ನು ಬೆಳೆಸುವ ಯಾವುದೇ ದೊಣ್ಣೆ ನಾಯಕರ ಮಾತಿಗೂ ಕಿವಿಗೊಡದಂತೆ ತಮ್ಮ ಸಮುದಾಯದ ಮಕ್ಕಳಿಗೆ, ಯುವಕರಿಗೆ ತಿಳಿಹೇಳಿ ಅವರನ್ನು ಕಾಪಾಡಿ ಕೊಳ್ಳುವ ಜವಾಬ್ದಾರಿಯನ್ನು ಹೊರಬೇಕು. ಅಂಥ ಸಂಭಾವಿತ ಮುಸಲ್ಮಾನರು ಖಂಡಿತ ಇದ್ದಾರೆ.

ಇನ್ನು, ಹಿಂದೂಗಳನ್ನು ‘ಕೇಸರಿ ಭಯೋತ್ಪಾದನೆಯ ಕೋಮುವಾದಿಗಳು’ ಎಂದು ಕರೆಯುವ ನಕಲಿ ಜಾತ್ಯತೀತ ಢೋಂಗಿ ಗಳು, ಲದ್ದಿಜೀವಿಗಳು, ವಿಚಾರವ್ಯಾಧಿಗಳ ಬಾಯಿಗಳಿಗೆ ಈಗ ಪಾರ್ಶ್ವವಾಯು ಬಡಿದಿದೆಯೇ? ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎನ್ನುವ ಕಾಲಜ್ಞಾನಿಗಳು, ಇತಿಹಾಸ-ವಾಸ್ತವ-ಭವಿಷ್ಯಗಳ ಪರಿಜ್ಞಾನವಿಲ್ಲದೆ ಮತ್ತು ಜನರಿಂದ ನೇರವಾಗಿ ಚುನಾಯಿತರಾಗುವ ಯೋಗ್ಯತೆಯಿಲ್ಲದೆ ಓಲೈಕೆಯ ರಾಜಕಾರಣಕ್ಕೆಂದು ಬಾಯಿಗೆ ಬಂದಂತೆ
ಹೇಳಿಕೆಗಳನ್ನು ನೀಡುವವರು ಭಯೋತ್ಪಾದಕರಿಗಿಂತಲೂ ಅಪಾಯಕಾರಿ.

ಇಂಥವರು ಈಗ ಮಾಡಬಹುದಾದ ಕೆಲಸವೆಂದರೆ, ಕನಿಷ್ಠಪಕ್ಷ ತಮ್ಮ ಮನೆಯ ಹತ್ತಿರವಿರುವ ಮಸೀದಿ-ಮದರಸಾಗಳಿಗೆ ತೆರಳಿ, ಅಲ್ಲಿನ ಮುಸಲ್ಮಾನ ಮುಖಂಡರನ್ನು ಭೇಟಿಯಾಗಿ ಅವರಲ್ಲಿ ದೇಶದ ಪರವಾದ ಚಿಂತನೆ ಮೂಡಿಸಿ, ಯಾವುದೋ
ಒಂದು ದೇಶದ್ರೋಹಿ ಸಂಘಟನೆಯಿಂದಾಗಿ ದೇಶದ ಸಮಸ್ತ ಮುಸಲ್ಮಾನರಿಗೆ ಅಂಟುತ್ತಿರುವ ಕಳಂಕ, ಅನುಮಾನ, ಅಸಮಾಧಾನ, ಅಸಹಿಷ್ಣುತೆಯನ್ನು ಹೋಗಲಾಡಿಸುವ ಯತ್ನವನ್ನು ಮಾಡಿ ತೋರಿಸುವುದು. ಅದೂ ಆಗದಿದ್ದರೆ, ಅವರು
ಕಣ್ಣು-ಕಿವಿ-ಬಾಯಿ ಮುಚ್ಚಿಕೊಂಡು ತಲೆಮರೆಸಿಕೊಂಡಿರಲಿ.

ಇಷ್ಟಕ್ಕೂ, ವಿರೋಧ ಪಕ್ಷಗಳು ದೂಷಿಸುವಂತೆ ಕೇಂದ್ರ ಸರಕಾರವು ಸರ್ವಾಧಿಕಾರಿಯಂತೆ ನಡೆದುಕೊಂಡಿಲ್ಲ, ಪಿಎಫ್ಐ
ಮೇಲೆ ಏಕಾಏಕಿ ದಾಳಿ ನಡೆಸಿಲ್ಲ. ದಾಳಿಗೂ ಮುನ್ನ ಪ್ರಮುಖ ಅದು ಮುಸ್ಲಿಂ ಸಂಘಟನೆಗಳೊಂದಿಗೆ ಸಭೆ ನಡೆಸಿ, ದೇಶ ದ್ರೋಹಿ ಸಂಘಟನೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದೆ. ಇದರಲ್ಲಿ ಆಲ್ ಇಂಡಿಯಾ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಸಂಘಟನೆ ಒಳಗೊಂಡಂತೆ ಅನೇಕವು ಸರಕಾರದ ಚಿಂತನೆಗೆ ಒತ್ತಾಸೆಯಾಗಿ ನಿಂತಿದ್ದು ಗಮನಾರ್ಹ.

‘ಭಾರತದಲ್ಲಿ ಉಗ್ರವಾದಕ್ಕೆ ಅವಕಾಶ ನೀಡಬಾರದು, ಅಂಥ ಸಂಘಟನೆಗಳನ್ನು ನಾಶಪಡಿಸಬೇಕು. ಹೀಗಾಗಿ ತನಿಖಾ ಸಂಸ್ಥೆಗಳ ದಾಳಿ ಮತ್ತು ಬಳಿಕ ತೆಗೆದುಕೊಳ್ಳುವ ಕಠಿಣ ಕ್ರಮಗಳನ್ನು ನಾವೆಲ್ಲ ಸ್ವಾಗತಿಸುತ್ತೇವೆ. ದೇಶಕ್ಕೆ ಧಕ್ಕೆ ತರುವ ಉಗ್ರವಾದ ಈ ಭೂಮಿಯಲ್ಲಿ ಇರಬಾರದು’ ಎಂದು ಅವು ಈ ವೇಳೆ ಕೇಂದ್ರ ಸರಕಾರವನ್ನು ಆಗ್ರಹಿಸಿದವು. ಆ ನಂತರವೇ ಎನ್ ಐಎ ಚೀತಾಗಳು ಬೇಟೆಗಿಳಿದದ್ದು.

ದೇಶದ ಮುಸಲ್ಮಾನರನ್ನು ಪ್ರೀತಿಸಿ ಗೌರವಿಸಿ, ಅವರ ಮೇಲಿರುವ ಕಳಂಕಗಳನ್ನು ತೊಡೆದು, ಹಿಂದೂಗಳೊಂದಿಗೆ ಅವರು ನೈಜ ಸೌಹಾರ್ದತೆ, ಸಹಬಾಳ್ವೆ, ಸೋದರತ್ವ ಹೊಮ್ಮಿಸಲು ಅನುವಾಗುವಂಥ ಬೀಜಬಿತ್ತುವ ಕೆಲಸ ಮಾಡಲು ಆರೆಸ್ಸೆಸ್
ಸಿದ್ಧವಿದೆ. ಮೋಹನ್ ಭಾಗವತ್‌ರಂಥ ಹಿರಿಯರು ಮಾಡಿ ತೋರಿಸಿರುವುದು ಅದನ್ನೇ.