ಸಂದರ್ಶನ: ಅಪರ್ಣಾ ಎ.ಎಸ್
ಹಲವಾರು ಏಳು-ಬೀಳುಗಳನ್ನು ಕಂಡು, ಜೀವನದ ಸಂಧ್ಯಾಕಾಲದಲ್ಲಾದರೂ ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವುದು ಪ್ರತಿಯೊಬ್ಬರ ಆಶಯವಾಗಿರುತ್ತದೆ. ಈ ಆಸೆಯನ್ನು ಪೂರೈಸಲು ಸರಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರೂ, ಮಾಹಿತಿ ಕೊರತೆಯಿಂದ ಅನೇಕರು ಯೋಜನೆಗಳ ಉಪಯೋಗವನ್ನೇ ಪಡೆಯುವುದಿಲ್ಲ. ಮತ್ತೊಂದೆಡೆ ಇಂತಹ ವಿಚಾರಗಳಲ್ಲಿ ಜನರು ಸರಕಾರದತ್ತ ಬೊಟ್ಟು ಮಾಡುತ್ತಾರೆಯೇ ಹೊರತು ತಮ್ಮ ಜವಾಬ್ದಾರಿ ಗಳ ಬಗ್ಗೆ ಯೋಚಿಸುವುದಿಲ್ಲ. ಇದರಿಂದಾಗಿ ಹಿರಿಯ ನಾಗರಿಕರು ತಮ್ಮ ಜೀವನ ಸಂಧ್ಯಾಕಾಲದಲ್ಲಿ ಸಾಕಷ್ಟು ಸಮಸ್ಯೆಗಳ ಮಧ್ಯೆಯೇ ಬದುಕುವಂತಾಗಿದೆ.
ಅ.೧ ವಿಶ್ವ ಹಿರಿಯ ನಾಗರಿಕರ ದಿನ. ಈ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ ಜತೆ ಮಾತ ನಾಡಿದ ವಿಕಲಚೇತನ ಮತ್ತು ಹಿರಿಯ ನಾಗರಿಕ ಇಲಾಖೆಯ ನಿರ್ದೇಶಕಿ ಕೆ.ಎಸ್.ಲತಾ ಕುಮಾರಿ, ಹಿರಿಯ ನಾಗರಿಕರ ಅನುಕೂಲಕ್ಕೆ ಅನೇಕ ಕಾರ್ಯಕ್ರಮ ಗಳನ್ನು ಸರಕಾರ ಕೈಗೊಂಡಿದೆ. ಆದರೆ ಎಷ್ಟು ಜನ ಇದರ ಪ್ರಯೋಜನ ಪಡೆದ ಕೊಳ್ಳುತ್ತಿದ್ದಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದರು.
ಹಿರಿಯ ನಾಗರಿಕರಿಗೆ ಹೇಗೆ ಸಹಾಯ ಮಾಡುತ್ತೀರಿ?
ಈಗಾಗಲೇ ಸಹಾಯವಾಣಿಗಳನ್ನು ಆರಂಭಿಸಿದ್ದೇವೆ. ಆದರೆ, ಇವೆಲ್ಲವನ್ನು ಎಷ್ಟು ಜನ ಬಳಸುತ್ತಿದ್ದಾರೆ ಎಂಬುದೂ ಕೂಡಾ ಪ್ರಮುಖವಾದದ್ದು. ಅನೇಕ ಸೌಲಭ್ಯವಿದ್ದು, ಅವುಗಳನ್ನು ಪಡೆದುಕೊಳ್ಳಬೇಕು ಬಳಸಿ ಕೊಳ್ಳಬೇಕು. ಆದರೆ, ಹಿರಿಯರಿಗೆ ಅರಿವಿನ ಕೊರತೆಯಿದೆ. ನಮ್ಮ ಸಹಾಯವಾಣಿಯ ಅರಿವಿದ್ದವರು ಕರೆ ಮಾಡುತ್ತಾರೆ. ಮಾಹಿತಿ ಯಿಲ್ಲವಾದರೆ ಹೇಗೆ ಕರೆ ಮಾಡುತ್ತಾರೆ? ಆ ಪ್ರಯತ್ನ ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಆಗ ಮಾತ್ರ ಸರಕಾರದ ಯೋಜನೆಗಳು ಹಿರಿಯ ನಾಗರಿಕರಿಗೆ ತಲುಪಲು ಸಾಧ್ಯ.
ಹಿರಿಯ ನಾಗರಿಕರಿಗೆ ಯೋಜನೆ ಮುಟ್ಟಿಸಲು ಯಾವ ಕ್ರಮವಹಿಸಲಾಗಿದೆ?
ಅನೇಕ ಕಡೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ವೃದ್ಧಾಶ್ರಮಗಳಿವೆ. ಅವುಗಳಿಗೆ ರಾಜ್ಯ ಸರಕಾರವೇ ಅನುದಾನ ನೀಡುತ್ತಿವೆ. ಹಿರಿಯ ನಾಗರಿಕರಿಕರಿಗಾಗಿ ಹಗಲು ಯೋಗಕ್ಷೇಮ ಕೇಂದ್ರಗಳು, ಹಿರಿಯ ನಾಗರಿಕರ ಸಹಾಯವಾಣಿ-೧೦೯೦, ಹಿರಿಯ ನಾಗರಿಕರಿಗಾಗಿ ಗುರುತಿನ ಚೀಟಿ, ರಿಯಾಯಿತಿ ದರದ ಬಸ್ ಪಾಸ್, ವೃದ್ಧಾಪ್ಯ ವೇತನ ,ಸಂಧ್ಯಾ ಸುರಕ್ಷಾ ಯೋಜನೆ ಹೀಗೆ.. ಅನೇಕ ಯೋಜನೆಗಳಿವೆ. ಆದರೆ ಎಷ್ಟು ಜನರು ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಅನ್ನುವುದು ಮಾತ್ರ ನಮಗಿರುವ ಮುಖ್ಯ ಪ್ರಶ್ನೆ. ಅವರು ಮುಂದೆ ಬಾರದಿದ್ದರೆ ಮುಟ್ಟಿಸುವುದು ಹೇಗೆ? ಈ ನಿಟ್ಟಿನಲ್ಲಿ ಜನರೇ ತಮ್ಮ ಮನೆಯ ಹಿರಿಯರಿಗೆ ಮಾಹಿತಿ ನೀಡಬೇಕಾಗಿದೆ.
ಅಧಿಕಾರಿಗಳು ಹಿರಿಯ ನಾಗರಿಕರಿಗೆ ಸೌಲಭ್ಯ ಒದಗಿಸುತ್ತಿಲ್ಲ ಎನ್ನುವ ಆರೋಪವಿದೆಯಲ್ಲಾ?
ಅನೇಕ ಯೋಜನೆಗಳು, ಹಾಗೂ ಸೌಲಭ್ಯಗಳ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಮನೆ ಬಾಗಿಲಿಗೇ ಪಿಂಚಣಿ ಯೋಜನೆ ಜಾರಿಯಾಗಿದೆ. ಆದರೆ, ಎಲ್ಲವನ್ನೂ ಅಧಿಕಾರಗಳು ಮನೆ ಬಾಗಿಲಿಗೆ ಹೋಗಿ ಮಾಡಿ ಕೊಡಲು ಸಾಧ್ಯವಿಲ್ಲ. ನಮ್ಮ ಜನತೆಗೆ ಮಾಹಿತಿ ಬೇಕು. ಹೆಚ್ಚಿನ ಮಾಹಿತಿ ಯನ್ನು ಅವರಿಗೆ ತಿಳಿಸಿಕೊಡಬೇಕು. ಅವರ ಹಕ್ಕುಗಳನ್ನು ಅವರೇ ಕೇಳಿ ಪಡೆದುಕೊಳ್ಳಬೇಕು. ಹಿರಿಯ ನಾಗರಿಕರ ವಿಚಾರದಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಏನೇ ಇದ್ದರೂ ಕೇಳದೇ ಕೊಡುವುದು ಕಷ್ಟಸಾಧ್ಯ. ಹೀಗಿರುವಾಗ ಅಧಿಕಾರಿಗಳ ಮೇಲೆ ವೃಥಾರೋಪ ಮಾಡುವುದು ಸಲ್ಲ. ಅಧಿಕಾರಿಗಳಿಂದ ಲೋಪ ಕಂಡುಬಂದಲ್ಲಿ ಮಾಹಿತಿ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಆದರೂ ಅಧಿಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆಯಲ್ಲ?
ಯಾವುದೇ ಒಂದು ವ್ಯವಸ್ಥೆಯಾಗಲಿ, ಪ್ರತಿಯೊಂದು ಸಮಸ್ಯೆಗಳಿಗೂ ಅಧಿಕಾರಿಗಳನ್ನು ಬೊಟ್ಟು ಮಾಡುವುದು ಸಾಮಾನ್ಯ ವಾಗಿದೆ. ಪ್ರಸ್ತುತ ಪಿಂಚಣಿ ಅಥವಾ ಇನ್ನಾವುದೇ ಸೌಲಭ್ಯಗಳಿರಬಹುದು, ಹಿರಿಯ ನಾಗರಿಕರಿಗೆ ತಲುಪಿಸುವುದು ಕೇವಲ ಅಽಕಾರಿಗಳ ಜವಾಬ್ದಾರಿಯಲ್ಲ. ಸಮಾಜಕ್ಕೂ ಹೊಣೆಗಾರಿಕೆಯಿದೆ. ಅಧಿಕಾರಿ ವರ್ಗವನ್ನು ದೂರುತ್ತಾ ಸಮಯ ಕಳೆಯುವ ಬದಲಾಗಿ ಪ್ರತಿಯೊಬ್ಬರ ಹೊಣೆ ಎಂದು ಭಾವಿಸಿದರೆ ಸಮಸ್ಯೆಯೇ ಉದ್ಭವವಾಗುವುದಿಲ್ಲ.
ಜವಾಬ್ದಾರಿ ಹೊರಲು ಸಿದ್ಧರಿಲ್ಲದವರು ಬೇರೊಬ್ಬರನ್ನು ದೂರಿ ಸುಮ್ಮನಾಗುತ್ತಾರೆ. ಎಲ್ಲವೂ ಸರಕಾರದ ಕರ್ತವ್ಯ ಎನ್ನುವ ಬದಲು ಪ್ರತಿಯೊಬ್ಬರೂ ನಮ್ಮ ಜವಾಬ್ದಾರಿಯೂ ಇದೆ ಎಂದು ತಿಳಿದು ಸರಕಾರದೊಂದಿಗೆ ಕೈಜೋಡಿಸಿದರೆ ಹಿರಿಯ ನಾಗರಿಕರಿಗೆ ನ್ಯಾಯ ಒದಗಿಸಲು ಸಾಧ್ಯ.
ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ಸಿಗುತ್ತಿದೆಯೇ?
ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯವಿದೆ. ಗ್ರಾಮೀಣ ಪ್ರದೇಶದ ಎಷ್ಟೋ ನಾಗರಿಕರಿಗೆ ಇದರ ಅರಿವಿಲ್ಲ. ಇತರರನ್ನು ಗಮನಿಸಿ ಮಾಹಿತಿ ಪಡೆದುಕೊಂಡರೆ ಮಾತ್ರ ಪಿಂಚಣಿ ಸೌಲಭ್ಯದ ಬಗ್ಗೆ ಅರಿವುಂಟಾಗುತ್ತದೆ. ಪಿಂಚಣಿಗಾಗಿ ಅಲೆದಾಟ ತಪ್ಪಿಸಲು ಪಿಂಚಣಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುವಂತಹ ವ್ಯವಸ್ಥೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರ ದಿನಾಚರಣೆಯಂದು
ಸರಕಾರದಿಂದ ನೀಡಲಾಗುವ ಸೌಲಭ್ಯಗಳ ಮಾಹಿತಿ ನೀಡಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷ್ಯ ಬೇಡ
ಕೋವಿಡ್ ಬಳಿಕವಂತೂ ಹಿರಿಯ ನಾಗರಿಕರು ತುಂಬಾ ಭಯದಿಂದ ಖಿನ್ನತೆಗೊಳಗಾಗುತ್ತಿದ್ದಾರೆ. ಮೊದಲೇ ವಯೋ ಸಹಜ
ಕಾಯಿಲೆಗಳಿಂದ ಬಳಲುತ್ತಿದ್ದು, ಮಾನಸಿಕವಾಗಿ ಬಳಲುತ್ತಿರುತ್ತಾರೆ. ಮನೆಯವರಿಂದ ಆಪ್ತ ಸಹಾಯ ಬಯಸುತ್ತಿರುತ್ತಾರೆ.
ಅಂತಹ ಸಂದರ್ಭದಲ್ಲಿ ಮಾನಸಿಕವಾಗಿ ಅವರಿಗೆ ಧೈರ್ಯ ತುಂಬುವ ಅಗತ್ಯವಿದೆ. ಮನೆಯವರಿಂದಲೇ ನಿರ್ಲಕ್ಷ್ಯಕ್ಕೊಳ ಗಾದವರಿಗಾಗಿ ಸಹಾಯವಾಣಿ ಆರಂಭಿಸಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿಯೂ ಇದು ಕಾರ್ಯನಿರ್ವಹಿಸುತ್ತಿದೆ.
ರಾಜ್ಯದಲ್ಲಿ ೧೦೯೦ ಮತ್ತು ಕೇಂದ್ರದಿಂದ ೧೪೫೬೭ ಸಹಾಯವಾಣಿ ಆರಂಭಿಸಲಾಗಿದ್ದು, ಆರೋಗ್ಯ ಸಮಸ್ಯೆಗಳು ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಈ ಸಹಾಯವಾಣಿ ಬಳಸಿಕೊಂಡು ಪರಿಹಾರ ಕಾಣಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಹಿರಿಯ ನಾಗರಿಕರಿಗೆ ಸಬ್ಸಿಡಿ ಮಾದರಿಯಲ್ಲಿ ಕೆಲಸಕ್ಕೆ ಸಂಬಳ ನೀಡುವಂತಹ ಕಾರ್ಯವನ್ನು ಮಾಡಲಾಗಿದೆ. ಒಂದು ವಾರದಲ್ಲಿ ಎಷ್ಟು ದಿನ ಕೆಲಸ ನಿರ್ವಹಿಸಿದ್ದಾರೆ ಎಂಬುದರ ಆಧಾರದಲ್ಲಿ ಸಂಬಳ ನೀಡಲಾಗುತ್ತದೆ ಎಂದು ಕೆ.ಎಸ್.ಲತಾ ಕುಮಾರಿ ಹೇಳಿದ್ದಾರೆ.