Saturday, 23rd November 2024

ರಾಜ್ಯ ಕಾಂಗ್ರೆಸ್ ಕಲ್ಯಾಣಕ್ಕೆ ದಲಿತ ನಾಯಕನ ಬಲ

ಅಹಿಂದ ಮತಗಳ ಕ್ರೋಡೀಕರಣ ಸಾಧ್ಯತೆ

ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಶಕ್ತಿಶಾಲಿ

ರಂಜಿತ್ ಅಶ್ವತ್ಥ್ ಬೆಂಗಳೂರು 

ದೇಶದಲ್ಲಿ ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿದ್ದರೂ, ಕಾಂಗ್ರೆಸ್‌ಗೆ ಈಗಲೂ ಭದ್ರಕೋಟೆ ಎನಿಸಿರುವುದು ಕರ್ನಾಟಕ. ಮುಂದಿನ ಆರೇಳು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಒಂದೆಡೆ ಭಾರತ್ ಜೋಡೋ ಯಾತ್ರೆ ಸಹಾಯ ವಾದರೆ, ಇದಕ್ಕೆ ಬೂಸ್ಟರ್ ನೀಡುವಂತೆ ಎಐಸಿಸಿ ಅಧ್ಯಕ್ಷ ಸ್ಥಾನ ಕರ್ನಾಟಕಕ್ಕೆ ಒಲಿಯುವುದು ಬಹುತೇಕ ನಿಶ್ಚಿತವಾಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಶೋಕ್ ಗೆಹ್ಲೋಥ್ ಬಿಟ್ಟುಕೊಡುತ್ತಿದ್ದಂತೆ, ಗಾಂಧಿ ಕುಟುಂಬದ ನಿಷ್ಠಾವಂತ, ಹಿರಿಯ ಮುತ್ಸದ್ದಿ ಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸ್ಥಾನ ಒಲಿಯುವುದು ಬಹುತೇಕ ನಿಶ್ಚಿತವಾಗಿದೆ. ಈ ಮೂಲಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದವ ರೊಬ್ಬರು ಎಐಸಿಸಿ ಅಧ್ಯಕ್ಷ ಪಟ್ಟವನ್ನು ಏರುವ ಸಾಧ್ಯತೆ ದಟ್ಟವಾಗಿದೆ. ಈ ಬೆಳವಣಿಗೆ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ಯಾವ ಮಟ್ಟದಲ್ಲಿ ಸಹಾಯವಾಗುತ್ತದೆ ಎನ್ನುವ ಸ್ಪಷ್ಟತೆ ಇಲ್ಲದಿದ್ದರೂ, ಕರ್ನಾಟಕದ ಮಟ್ಟಿಗೆ ‘ಬೂಸ್ಟರ್’ ನೀಡಲಿದೆ ಎನ್ನುವುದು ಸ್ಪಷ್ಟ.

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಎರಡರಲ್ಲೂ ಉತ್ತಮ ಅನುಭವವನ್ನು ಮಲ್ಲಿಕಾ ರ್ಜುನ ಖರ್ಗೆ ಅವರು ಹೊಂದಿದ್ದರೂ, ಕರ್ನಾಟಕದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಹಿಡಿತವನ್ನು ಹೊಂದಿ ದ್ದಾರೆ. ಇದೀಗ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಮತಗಳ ಕ್ರೋಢೀಕರಣಕ್ಕೆ ಇದು ಸಹಕಾರಿಯಾಗಲಿದೆ ಎನ್ನುವ ಮಾತು ಗಳು ಕೇಳಿಬಂದಿದೆ.

ವರ್ಕ್‌ಔಟ್ ಆಗುವ ದಲಿತ ಅಸ್ತ್ರ: ಕಾಂಗ್ರೆಸ್‌ನಿಂದ ಅಹಿಂದ ಮತಗಳು ದೂರ ಆಗುತ್ತಿವೆ ಎನ್ನುವ ಆತಂಕ ಹಲವು ದಿನ ಗಳಿಂದ ರಾಜ್ಯ ನಾಯಕರಲ್ಲಿದೆ. ಆದರೆ ಇದೀಗ ದಲಿತ(ಬಲಗೈ) ನಾಯಕನಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಖಚಿತವಾಗಿ ಈ ಮತಗಳು ಪುನಃ ಕಾಂಗ್ರೆಸ್‌ನತ್ತ ವಾಲಲಿದೆ ಎನ್ನುವ ವಿಶ್ವಾಸವಿದೆ. ಒಂದು ವೇಳೆ ಇದು ವರ್ಕ್‌ಔಟ್ ಆದರೆ, ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಅವಕಾಶವಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಗಾಂಧಿ ಪರಿವಾರದ ನಿಷ್ಠಾವಂತ: ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮನಸ್ಸು ಮಾಡಿರುವುದೇ,ಅವರ ನಿಷ್ಠೆಗೆ. ಇಂದಿರಾ ಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ ಖರ್ಗೆ ಅವರು, ಎಂದಿಗೂ ಪಕ್ಷದ ಅಥವಾ ಗಾಂಧಿ ಪರಿವಾರದ ವಿರುದ್ಧ ಮಾತನಾಡಿಲ್ಲ.

ಗಾಂಧಿ ಪರಿವಾರವನ್ನು ‘ಡಿಫೆಂಡ್’ ಮಾಡಿಕೊಳ್ಳುತ್ತಲೇ ಬಂದಿರುವ ಖರ್ಗೆ ಅವರು, ಎಂದಿಗೂ ಅವರ ವಿರುದ್ಧ ಹೋಗುವುದಿಲ್ಲ ಎನ್ನುವ ವಿಶ್ವಾಸ ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರಿಗೆ ಇದೆ. ಆದ್ದರಿಂದಲೇ ಅವರ ಆಯ್ಕೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಮುನಿಯಪ್ಪ ತಿರುಗಿಬಿದ್ದರೆ ಸಂಕಷ್ಟ
ದಲಿತ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ ರಾಜ್ಯದಲ್ಲಿ ಲಾಭವಾಗಲಿದೆ ಎನ್ನುವುದು ನಿಜ. ಆದರೆ ದಲಿತ (ಎಡಗೈ) ನಾಯಕರಾಗಿಯೇ ಗುರುತಿಸಿಕೊಂಡಿರುವ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಅವರು, ಪಕ್ಷದಲ್ಲಿ ಬಂಡಾಯವೆದ್ದಿದ್ದು ಅವರು ಒಂದು ವೇಳೆ ಬಿಜೆಪಿಗೆ ಹೋದರೆ ಆ ಸಮುದಾಯ ಪಕ್ಷದ ವಿರುದ್ಧ ತಿರುಗಿ ಬೀಳುವ ಆತಂಕವಿದೆ.

***

ರಾಜ್ಯ, ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಸುದೀರ್ಘ ಅನುಭವ
ಸುದೀರ್ಘ ಅವಧಿಗೆ ಸಂಸದೀಯ ವ್ಯವಸ್ಥೆಯಲ್ಲಿ ಪ್ರಾತಿನಿಧಿತ್ವ
ಕಾಂಗ್ರೆಸ್‌ನ ತಳಮಟ್ಟದಿಂದ ಸಂಘಟನೆಯ ಬಗ್ಗೆ ತಿಳಿವಳಿಕೆ
ರಾಜ್ಯಸಭೆ, ಲೋಕಸಭೆ ಪ್ರತಿಪಕ್ಷ ನಾಯಕನಾಗಿ ಕಾರ್ಯನಿರ್ವಹಣೆ
ರಾಷ್ಟ್ರಮಟ್ಟದಲ್ಲಿ ‘ಕ್ಲೀನ್ ಇಮೇಜ್’ ಹೊಂದಿರುವ ನಾಯಕ
ಉತ್ತಮ ಭಾಷಾ ಹಿಡಿತ, ಮುತ್ಸದಿತನ, ದಲಿತ ನಾಯಕನ ಇಮೇಜ್