Friday, 22nd November 2024

ಇಂದು ಎರಡನೇ ಟಿ20 ಪಂದ್ಯ: ಗೆದ್ದರೆ ಭಾರತಕ್ಕೆ ಸರಣಿ

ಗುವಾಹಟಿ: ದಕ್ಷಿಣ ಆಫ್ರಿಕಾ ಎದುರಿನ ತಿರುವನಂತಪುರ ಟಿ20 ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದ ಭಾರತ ಭಾನುವಾರ ರೋಹಿತ್‌ ಬಳಗ ಸರಣಿ ಗೆಲುವಿಗೆ ಸ್ಕೆಚ್‌ ಹಾಕಿದೆ.

ಎಡಗೈ ಪೇಸ್‌ ಬೌಲರ್‌ ಅರ್ಷದೀಪ್‌ ಒಂದೇ ಓವರ್‌ನಲ್ಲಿ 3 ವಿಕೆಟ್‌ ಕೆಡವಿದ್ದು ಸಾಮಾನ್ಯ ಸಂಗತಿಯಲ್ಲ. ಆ ವಿಕೆಟ್‌ಗಳೂ ಸಾಮಾನ್ಯವಲ್ಲ. ಡಿ ಕಾಕ್‌, ರೋಸ್ಯೂ ಮತ್ತು ಮಿಲ್ಲರ್‌ ಅವರಂಥ ಘಟಾನುಘಟಿಗಳದ್ದು.“ಕಿಲ್ಲರ್‌ ಮಿಲ್ಲರ್‌’ ತಮ್ಮ 105 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 91 ಇನ್ನಿಂಗ್ಸ್‌ಗಳಲ್ಲೇ ಮೊದಲ ಸಲ “ಗೋಲ್ಡನ್‌ ಡಕ್‌’ ಅವಮಾನಕ್ಕೆ ಸಿಲುಕಿದ್ದರು.

ದೀಪಕ್‌ ಚಹರ್‌ ಮೊದಲ ಓವರ್‌ನಲ್ಲೇ ನಾಯಕ ಟೆಂಬ ಬವುಮ ವಿಕೆಟ್‌ ಕಿತ್ತು ಹರಿಣ ಗಳ ಕುಸಿತಕ್ಕೆ ಚಾಲನೆ ನೀಡಿದರು. ಭುವನೇಶ್ವರ್‌ಗಿಂತ ಚಹರ್‌ ಬೌಲಿಂಗ್‌ ಅದೆಷ್ಟೋ ಉನ್ನತ ಮಟ್ಟ ದಲ್ಲಿತ್ತು. ಹರ್ಷಲ್‌ ಪಟೇಲ್‌ ಕೂಡ ಕ್ಲಿಕ್‌ ಆಗಿದ್ದರು. ಹೀಗಾಗಿ ಬುಮ್ರಾ ಬದಲು ಅವಕಾಶ ಪಡೆದ ಮೊಹಮ್ಮದ್‌ ಸಿರಾಜ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕೀತೇ ಎಂಬುದೊಂದು ಪ್ರಶ್ನೆ.

ಸ್ಪಿನ್‌ ವಿಭಾಗದಲ್ಲಿ ಅಕ್ಷರ್‌ ಪಟೇಲ್‌ ಮ್ಯಾಜಿಕ್‌ ಮುಂದುವರಿದಿದೆ. ಆರ್‌. ಅಶ್ವಿ‌ನ್‌ ವಿಕೆಟ್‌ ಕೀಳದಿದ್ದರೂ ರನ್‌ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಆಟಕ್ಕೆ ದಕ್ಷಿಣ ಆಫ್ರಿಕಾ ಬೌಲರ್ ಬಳಲಿ ಬೆಂಡಾದರು.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಕುಸಿತ ಆಕಸ್ಮಿಕ ಎಂದೇ ಭಾವಿಸಿ ಟೀಮ್‌ ಇಂಡಿಯಾ ಗುವಾಹಟಿ ಹೋರಾಟಕ್ಕೆ ಇಳಿಯಬೇಕಿದೆ.

ಗುವಾಹಟಿಯ “ಬರ್ಸಾಪಾರ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಭಾರತವಿನ್ನೂ ಗೆಲುವಿನ ಖಾತೆ ತೆರೆದಿಲ್ಲ. 2017ರಲ್ಲಿ ಆಸ್ಟ್ರೇಲಿಯ ವಿರುದ್ಧದ ಮುಖಾಮುಖೀಯಲ್ಲಿ ಭಾರತ 8 ವಿಕೆಟ್‌ ಸೋಲನುಭವಿಸಿತ್ತು. ಬಳಿಕ 2020ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡಿತು.

ಗುವಾಹಟಿ ಟಿ20 ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈ ಸುದ್ದಿಯಿಂದ ವೀಕ್ಷಕರು ಕಂಗಾಲಾಗಿದ್ದಾರೆ. 39 ಸಾವಿರ ವೀಕ್ಷಕರ ಸಾಮರ್ಥ್ಯದ ಈ ಸ್ಟೇಡಿಯಂ “ಹೌಸ್‌ ಫ‌ುಲ್‌’ ಆಗಲಿದೆ.