Thursday, 12th December 2024

ಖ್ಯಾತನಾಮರ ಕೋಳಿಜಗಳ

ನಿಲುವುಗನ್ನಡಿ

ಯಗಟಿ ರಘು ನಾಡಿಗ್‌

ಬೆವರು-ರಕ್ತ ಬಸಿದು ತಂತಮ್ಮ ಕ್ಷೇತ್ರಗಳಲ್ಲಿ ಔನ್ನತ್ಯ ಸಾಧಿಸಿ ಖ್ಯಾತರಾ ದವರೂ ಯಾವುದೋ ಕಾಂಜಿ ಪಿಂಜಿ ಕಾರಣಕ್ಕೆ ಸಮಾನಸ್ಕಂದರೊಂದಿಗೆ ಮುನಿಸಿಕೊಂಡು, ಕೊನೆವರೆಗೂ ಅದನ್ನು ಸಾಧಿಸಿದ ನಿದರ್ಶನಗಳಿವೆ.

‘ವೈಯಕ್ತಿಕ’ ನೆಲೆಯ ಸಂಗತಿಗಳು ಇದಕ್ಕೆ ಕಾರಣವೋ ಅಥವಾ ಇದು ‘ವೃತ್ತಿ ಮಾತ್ಸರ್ಯ’ದ ಫಲಿತವೋ ಎಂದು ವಿಶ್ಲೇಷಿಸುವುದು ಕಷ್ಟ. ಕಾರ್ಯಕ್ಷೇತ್ರ ದಲ್ಲಿನ ಗುಣಮಟ್ಟದ ಸುಧಾರಣೆಗೋ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲೋ ಇಂಥ ‘ಕೋಳಿಜಗಳ’ ಪೂರಕವಾದರೆ ಒಂದು ಮಟ್ಟಿಗೆ ಅದು ಸ್ವಾಗತಾರ್ಹವೇ; ಆದರೆ ಪರಸ್ಪರ ಕೆಸರೆರಚಾಟಕ್ಕೆ ಮಾತ್ರ ಸೀಮಿತ ವಾದರೆ ಅದು ಅಪ್ರಯೋಜಕ.

ಪಿ.ಲಂಕೇಶ್ ಮತ್ತು ಬಿ.ವಿ. ವೈಕುಂಠರಾಜು ಯಾರಿಗೆ ತಾನೇ ಗೊತ್ತಿಲ್ಲ? ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇಬ್ಬರೂ ತಮ್ಮದೇ ಆದ ನೆಲೆ, ಅಸ್ಮಿತೆ, ಅಭಿಮಾನಿ ಬಳಗಗಳನ್ನು ಸಂಪಾದಿಸಿಕೊಂಡವರು. ಇಬ್ಬರೂ ಪ್ರತಿಭಾವಂತರು, ಹಠವಾದಿಗಳು! ಲಂಕೇಶರು ತಮ್ಮ ‘ಲಂಕೇಶ್ ಪತ್ರಿಕೆ’ ಮೂಲಕ, ವೈಕುಂಠರಾಜು ತಮ್ಮ ‘ವಾರಪತ್ರಿಕೆ’ ಮೂಲಕ ಓದುಗ- ಬಂಧುಗಳಿಗೆ ಅಕ್ಷರಲೋಕದ ಹುಚ್ಚು ಹಿಡಿಸಿದವರು ಎನ್ನಬೇಕು.

ಒಂದು ಕಾಲಕ್ಕೆ ಇಬ್ಬರೂ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದವರೇ. ಅದ್ಯಾವುದೋ ವಿಷಗಳಿಗೆಯಲ್ಲಿ ಇವರಿಬ್ಬರ ನಡುವೆ ಕಂದಕ ಏರ್ಪಟ್ಟಿತು. ಅದಕ್ಕೆ ಭೂಮಿಕೆಯಾಗಿದ್ದು ಈ ಬೆಳವಣಿಗೆ: ಲಂಕೇಶ್ ಪತ್ರಿಕೆಯಲ್ಲಿ ‘ಕಣ್ಣಾಮುಚ್ಚಾಲೆ’ ಎಂಬ ಅಂಕಣ ಪ್ರಕಟಗೊಳ್ಳುತ್ತಿತ್ತು. ಓದುಗರು ಕೇಳುವ ತುಂಟ-ತಮಾಷೆ ಪ್ರಶ್ನೆಗಳಿಗೆ ಸ್ವತಃ ಲಂಕೇಶರೇ ಉತ್ತರಿಸುತ್ತಿದ್ದುದು ಇದರ ವಿಶೇಷ. ಒಮ್ಮೆ ಓದುಗರೊಬ್ಬರು, “ಬೆಂಗಳೂರಿನ ಸಂಪಾದಕರೊಬ್ಬರು ಎಲ್ಲದಕ್ಕೂ ‘ಇದನ್ನು ನಾನು ಮೊದಲೇ ಹೇಳಿದ್ದೆ, ನಾನು ಹೇಳಿದಂತೆಯೇ ಆಯ್ತು’ ಎನ್ನುತ್ತಾರಲ್ಲಾ ಮೇಷ್ಟ್ರೇ?” ಎಂದು ಪ್ರಶ್ನಿಸಿದ್ದರು. ಅದಕ್ಕೆ ಲಂಕೇಶ್, ‘ಆತ ಬಿ.ವಿ. ರಾಮನ್ ರ ಅನಧಿಕೃತ ಪುತ್ರ!’ ಎಂದು ಉತ್ತರಿಸಿಬಿಟ್ಟರು. ಈ ಕಿತಾಪತಿ ಕಂಡು ಕೆರಳಿದ ವೈಕುಂಠರಾಜು ವಾರಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ, ‘ತಮ್ಮ ಜನ್ಮದ ಬಗ್ಗೆ ಅಧಿಕೃತವಾಗಿ ಗೊತ್ತಿಲ್ಲದವರು ಹೀಗೆ ಮತ್ತೊಬ್ಬರ ಜನ್ಮದ ಬಗ್ಗೆ ಮಾತಾಡು ತ್ತಾರೆ’ ಎಂಬರ್ಥದ ಸಾಲುಗಳನ್ನು ಬಳಸಿ ಕೊಂಚ ಖಾರವಾಗಿಯೇ ಲಂಕೇಶರಿಗೆ ಝಾಡಿಸಿಬಿಟ್ಟರು!

ಓದುಗರಿಂದ ಇಂಥ ತಮಾಷೆ ಪ್ರಶ್ನೆ, ಅದಕ್ಕೆ ಲಂಕೇಶರಿಂದ ಚಾಟೂಕ್ತಿಯಂಥ ಉತ್ತರ ಹೊಮ್ಮುವುದಕ್ಕೂ ಕಾರಣವಿತ್ತು.
ಆಗಿನ ಕಾಲಘಟ್ಟದಲ್ಲಿ (ಅಂದರೆ, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ
ಅವಽಗಳಲ್ಲಿ) ರಾಜಕೀಯ ಸಂಬಂಽತ ಮಸಾಲೆ ಸುದ್ದಿಗಳನ್ನು ನೀಡುವುದಕ್ಕೆ ಲಂಕೇಶ್ ಪತ್ರಿಕೆ ಮತ್ತು ವಾರಪತ್ರಿಕೆಯಲ್ಲಿ
ಪೈಪೋಟಿಯೂ, ಅವನ್ನು ಚಪ್ಪರಿಸುವುದಕ್ಕೆ ಓದುಗ ವಲಯದಲ್ಲಿ ತವಕವೂ ಕಾಣಬರುತ್ತಿದ್ದುದು ಸಾಮಾನ್ಯ ವಾಗಿತ್ತು.
ಏಕೆಂದರೆ ದಿನಪತ್ರಿಕೆಗಳಲ್ಲಿ ಕೇವಲ ‘ಸಚಿವರು ಹಾಗೆ ಹೇಳಿದರು, ಸಾರ್ವಜನಿಕರಿಗೆ ಹೀಗೆಂದು ಕರೆಕೊಟ್ಟರು’ ಶೈಲಿಯ
ಚರ್ವಿತಚರ್ವಣ ಸುದ್ದಿ-ಸರಕು ಬರುತ್ತಿದ್ದವೇ ವಿನಾ, ರಾಜಕಾರಣದ ನೇಪಥ್ಯದಲ್ಲಿ ನಡೆಯುವ ರಂಗ್‌ಬಿರಂಗಿ ಚಟುವಟಿಕೆಗಳ ಹೂರಣ ಅಪರೂಪವಾಗಿತ್ತು. ಈ ನಿರ್ವಾತವನ್ನು ಸಮರ್ಥವಾಗಿ ತುಂಬಿದ್ದು ಲಂಕೇಶ್ ಮತ್ತು ವೈಕುಂಠರಾಜು.

ರಾಜ್ಯ ಮತ್ತು ದೇಶದ ರಾಜಕಾರಣಕ್ಕೆ ಸಂಬಂಽಸಿ ವೈಕುಂಠರಾಜು ಪತ್ರಿಕೆಯ ಮಧ್ಯಪುಟದ ತಮ್ಮ ‘ಸಂಪಾದಕರ ಡೈರಿ’
ಅಂಕಣದಲ್ಲಿ ಒಂದಷ್ಟು ಸಾಧ್ಯಾಸಾಧ್ಯತೆಗಳನ್ನು ಬರೆಯುತ್ತಿದ್ದರು. ಕಾಕತಾಳೀಯವೆಂದರೆ ಬಹುತೇಕ ಸಂದರ್ಭಗಳಲ್ಲಿ ಅವು
ನಿಜವಾಗಿಬಿಡುತ್ತಿದ್ದವು! ಹೀಗಾಗಿ ವೈಕುಂಠರಾಜು ವಾರಪತ್ರಿಕೆಯ ತರುವಾಯದ ಸಂಚಿಕೆಗಳಲ್ಲಿ ಎಲ್ಲಾದರೊಂದು ಕಡೆ ‘ಈ ಬೆಳವಣಿಗೆಯ ಕುರಿತು ನಾವು ಮೊದಲೇ ಹೇಳಿದ್ದೆವು, ನಮ್ಮ ಎಣಿಕೆ ನಿಜವಾಯಿತು’ ಎಂದು ಪ್ರಾಸಂಗಿಕವಾಗಿ ಉಲ್ಲೇಖಿಸು ವುದು ಸಾಮಾನ್ಯವಾಗಿತ್ತು.

ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಲಂಕೇಶ್ ಪತ್ರಿಕೆಯ ಓದುಗರು ‘ಕಣ್ಣಾಮುಚ್ಚಾಲೆ’ ಅಂಕಣದಲ್ಲಿ ಆ ಪ್ರಶ್ನೆ ಕೇಳಿದ್ದಿರಬೇಕು. ಇದಕ್ಕೆ ಲಂಕೇಶರು, ‘ಪ್ರಾಯಶಃ ಆ ಸಂಪಾದಕರಿಗೆ ಭವಿಷ್ಯ ಹೇಳುವ ಕಲೆ ಸಿದ್ಧಿಸಿರಬೇಕು!’ ಎಂದೋ, ‘ಬಹುಶಃ ಆ ಸಂಪಾ ದಕರು ತ್ರಿಕಾಲಜ್ಞಾನಿಯಿರಬೇಕು!’ ಎಂದೋ ಕುಟುಕುತ್ತರ ನೀಡಿದ್ದರೆ ಪ್ರಮಾದವಾಗುತ್ತಿರಲಿಲ್ಲ ಮತ್ತು ವೈಕುಂಠರಾಜು ಅವರೂ ಪ್ರಾಯಶಃ ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.

ಆದರೆ ಬಿ.ವಿ. ವೈಕುಂಠರಾಜು ಅವರ ‘ಬಿ.ವಿ.’ ಎಂಬ ಇನಿಷಿಯಲ್ಸ್ ಬಳಸಿಕೊಂಡು ಲಂಕೇಶ್ ಕಿತಾಪತಿ ಮಾಡಿದ್ದರು.
ಬಿ.ವಿ. ರಾಮನ್ ಎಂಬ ಪ್ರಸಿದ್ಧ ಜ್ಯೋತಿಷಿಯೊಬ್ಬರು ನಮ್ಮಲ್ಲಿದ್ದುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಇಬ್ಬರ
ಇನಿಷಿಯಲ್‌ಗಳೂ ‘ಬಿ.ವಿ.’ ಎಂದಿದ್ದುದರಿಂದ ಅವೆರಡನ್ನೂ ತಗಲ್ಹಾಕಿ ಲಂಕೇಶ್ ಹೀಗೆ ಕಿಚಾಯಿಸಿದ್ದರು. ಆದರೆ ಆ ಭರದಲ್ಲಿ
‘ಆತ ಬಿ.ವಿ. ರಾಮನ್‌ರ ಅನಽಕೃತ ಪುತ್ರ!’ ಎಂದು ಕಾಲೆಳೆದದ್ದು ಪ್ರಾಯಶಃ ವೈಕುಂಠರಾಜುರನ್ನು ಕೆರಳಿಸಿತ್ತು.

‘ಅನಧಿಕೃತ ಪುತ್ರ’ ಎಂದರೆ ಯಾರಾದರೂ ಕೆರಳುವುದು ಸಹಜವಲ್ಲವೇ? ಹೀಗೆ ಆ ಎರಡೂ ಪತ್ರಿಕೆಯ ಅಭಿಮಾನಿ ಬಳಗ ಗಳ ಅನುಭವಕ್ಕೆ ಬರುವಂತೆ ಈ ‘ಕೋಳಿಜಗಳ’ (ಹುಂಜಗಳ ಜಗಳ?!) ನಡೆಯಿತು. ತರುವಾಯದಲ್ಲಾದರೂ ಈ ಅತಿರಥ-ಮಹಾರಥರು ಖಾಸಗಿಯಾಗಿಯೋ ಯಾವುದಾದರೂ ವೇದಿಕೆಗಳಲ್ಲೋ ಭೇಟಿಯಾಗಿ ಮನಸ್ಸನ್ನು ತಿಳಿ ಮಾಡಿ ಕೊಂಡರೋ ಇಲ್ಲವೋ ಗೊತ್ತಿಲ್ಲ.

ಖ್ಯಾತ ಸಾಹಿತಿಗಳಾದ ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಪಾಟೀಲ್ (ಚಂಪಾ) ನಡುವೆಯೂ ಇಂಥ ‘ಮುಸುಕಿ ನೊಳಗಿನ ಗುದ್ದಾಟ’ ಸಾಕಷ್ಟು ಕಾಲ ನಡೆದಿದ್ದುಂಟು. ಅದ್ಯಾವುದೋ ಸಂದರ್ಭದಲ್ಲಿ ಕಾರ್ನಾಡರು, ‘ಚಂಪಾ ತಿಪ್ಪರಲಾಗ ಹಾಕಿದರೂ ಚಂದ್ರಶೇಖರ ಕಂಬಾರ ಆಗಲಿಕ್ಕೆ ಸಾಧ್ಯವಿಲ್ಲ’ ಎಂದು ಹೇಳಿಕೆ ಕೊಟ್ಟುಬಿಟ್ಟರು. ಚಂದ್ರಶೇಖರ ಕಂಬಾರ ಮತ್ತು ಚಂದ್ರಶೇಖರ ಪಾಟೀಲ ಸಾಹಿತಿದ್ವಯರು ಗಂಡುಮೆಟ್ಟಿದ ನಾಡಿನ ಭಾಷೆಯಲ್ಲಿ ಸಾಹಿತ್ಯ ರಚಿಸುವುದರಲ್ಲಿ ಸಿದ್ಧಹಸ್ತರು ಎಂಬುದು ಜಗಜ್ಜಾಹೀರು. ಚಂಪಾ ಅವರ ‘ಅಪ್ಪ’, ‘ಕೊಡೆಗಳು’, ‘ಟಿಂಗರ ಬುಡ್ಡಣ್ಣ’, ಕಂಬಾರರ ‘ಸಂಗ್ಯಾಬಾಳ್ಯಾ’, ‘ಜೋ ಕುಮಾರಸ್ವಾಮಿ’ ನಾಟಕಗಳನ್ನು ಓದಿದವರಿಗೆ ಈ ಸೊಗಡು ಗ್ರಹಿಕೆಗೆ ದಕ್ಕಿರುತ್ತದೆ.

ಆದರೆ ಅದ್ಯಾವ ನೆಲೆಯಲ್ಲಿ ಚಂಪಾರಿಗೆ ಕಾರ್ನಾಡರು ಹೀಗೆ ಕುಟುಕಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಬ್ಬರ ನಡುವೆಯೂ
ಬಹಳ ಕಾಲದವರೆಗೆ ಸಣ್ಣಮುನಿಸು ಗುಪ್ತಗಾಮಿನಿಯಾಗಿತ್ತು. ಈ ಚಂಪಾ ಕೂಡ ಒಂಥರಾ ಕಿತಾಪತಿಯ ಮನುಷ್ಯನೇ
ಆಗಿದ್ದರು ಎನ್ನಿ. ಕನ್ನಡ ಸಾಹಿತ್ಯದ ಹಿರಿಯಜ್ಜ ಎನಿಸಿಕೊಂಡಿರುವ ದ.ರಾ.ಬೇಂದ್ರೆಯವರಿಗೂ ಚಂಪಾರಿಗೂ ಕಾಲಾನುಕಾಲಕ್ಕೆ ಕಿತ್ತಾಟ ನಡೆಯುತ್ತಲೇ ಇತ್ತು. ಕೆಲವೊಮ್ಮೆ ಅದು ಪರಸ್ಪರರ ಜಾತಿಯನ್ನು ಹಂಗಿಸುವವರೆಗೂ ಬಂದು ನಿಲ್ಲುತ್ತಿತ್ತು ಎನ್ನುತ್ತಾರೆ ಬಲ್ಲವರು. ಇಂಥದೇ ಸಂದರ್ಭವನ್ನುದ್ದೇಶಿಸಿ ತಮ್ಮೆಡೆಗೆ ತೂರಿಬಂದ ಪ್ರಶ್ನೆಯೊಂದಕ್ಕೆ ಚಂಪಾ, ‘ಬೇಂದ್ರೆ ದೊಡ್ಡಕವಿ, ಆದರೆ ಸಣ್ಣಮನುಷ್ಯ’ ಎಂದು ಉತ್ತರಿಸಿ ಕೈತೊಳೆದುಕೊಂಡಿದ್ದೂ ಇದೆ (ಖ್ಯಾತ ಹಾಸ್ಯಸಾಹಿತಿ ಬೀಚಿಯವರು ಒಮ್ಮೆ, ‘ಮಾಸ್ತಿ ವೆಂಕಟೇಶ ಅಯ್ಯಂಗಾರರು ತುಂಬಾ ಒಳ್ಳೇ ಮನುಷ್ಯ, ಆದರೆ ಅಷ್ಟೇ ಕೆಟ್ಟ ಕತೆಗಾರರು’ ಎಂದು ಕಿಚಾಯಿಸಿದ್ದು ಇಲ್ಲಿ ಕೆಲವ ರಿಗೆ ನೆನಪಾಗುತ್ತಿರಬಹುದು!). ಡಾ. ಯು.ಆರ್. ಅನಂತಮೂರ್ತಿಯವರ ಕುರಿತಾದ ಮತ್ತೊಂದು ಪ್ರಶ್ನೆಗೆ ಚಂಪಾ, ‘ಅನಂತ ಮೂರ್ತಿ ಒಬ್ಬ ಆಷಾಢಭೂತಿ’ ಎಂದು ವ್ಯಾಖ್ಯಾನಿಸಿದ್ದೂ ಇದೆ!

ದ.ರಾ. ಬೇಂದ್ರೆಯವರ ಹೆಸರೆತ್ತಿದರೆ ಸಾಕು ಮತ್ತೊಬ್ಬ ಸಾಹಿತಿ ಶಂ.ಬಾ. ಜೋಷಿ ಉರಿದು ಬೀಳುತ್ತಿದ್ದುದಕ್ಕೆ ಸಾರಸ್ವತ ಲೋಕದ ಸಾಕಷ್ಟು ಮಂದಿ ಸಾಕ್ಷಿ. ಧಾರವಾಡದಲ್ಲಿನ ತಮ್ಮ ಮನೆಗೆ ಯಾರಾದರೂ ನಿಗದಿತ ಸಮಯಕ್ಕಿಂತ ತಡವಾಗಿ
ಭೇಟಿಗೆ ಬಂದರೆ ಜೋಷಿಯವರು, ‘ಏನ್ರೀ ಯಪ್ಪಾ? ಆ ……ಮಗನ ಮನಿಗೆ ಹೋಗಿಬಂದ್ರೇನು?’ ಎಂದೇ ಕುಟುಕುತ್ತಿದ್ದರಂತೆ. ಈ ಇಬ್ಬರು ಸರಸ್ವತಿಪುತ್ರರ ನಡುವೆಯಿದ್ದ ಮುನಿಸಿಗೆ ಕಾರಣವೇನೋ ಗೊತ್ತಿಲ್ಲ.

ಇನ್ನು, ಹಾರುವ ತಟ್ಟೆಗಳ ಕುರಿತಾದ ಅದ್ಭುತ ಲೇಖನಮಾಲೆ ಸೇರಿದಂತೆ ಲಂಕೇಶ್ ಪತ್ರಿಕೆಯಲ್ಲಿ ಹತ್ತು ಹಲವು ರೋಚಕ ಬರಹಗಳನ್ನು ಓದುಗರಿಗೆ ಉಣಬಡಿಸುತ್ತಿದ್ದ, ತನ್ಮೂಲಕ ಪತ್ರಿಕೆಯ ಜನಪ್ರಿಯತೆಗೆ ವಿಶಿಷ್ಟ ಕೊಡುಗೆ ನೀಡಿದ್ದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರಿಗೂ ಲಂಕೇಶರಿಗೂ ಕೊನೆಕೊನೆಗೆ ಅದೇನೋ ಮನಸ್ತಾಪ ಉಂಟಾಗಿ ಅನುಬಂಧ ಕಡಿದು ಹೋಯಿತು. ಈ ಬೆಳವಣಿಗೆಯಿಂದಾಗಿ ಪರಸ್ಪರರಿಗೆ ಅದೇನು ಲಾಭವಾಯಿತೋ ಗೊತ್ತಿಲ್ಲ; ಆದರೆ ಬಹಳ ಕಾಲದವರೆಗೆ ರುಚಿಕಟ್ಟು ‘ಅಕ್ಷರಭೋಜನ’ ಸವಿಯುತ್ತಿದ್ದ ಓದುಗರಿಗೆ ರುಚಿನಷ್ಟ ಆಗಿದ್ದಂತೂ ಖರೆ!

ಹುಡುಕುತ್ತ ಹೋದರೆ, ತಡಕುತ್ತ ತೆರಳಿದರೆ ವಿವಿಧ ಕ್ಷೇತ್ರಗಳಲ್ಲಿ ಇಂಥ ಸಾವಿರಾರು ನಿದರ್ಶನಗಳು ಸಿಕ್ಕಾವು. ಅವನ್ನೆಲ್ಲ ಅವಲೋಕಿಸಿದಾಗ, ಖ್ಯಾತನಾಮರು ಎನಿಸಿಕೊಂಡವರೂ ದುಡುಕಿಗೋ, ಸಣ್ಣತನಕ್ಕೋ ಅರೆಕ್ಷಣ ಮೈ-ಮನಸ್ಸು ಒಡ್ಡಿ ಕೊಂಡು (ಎಷ್ಟೆಂದರೂ ಅವರೂ ಮನುಷ್ಯರೇ ತಾನೇ?!) ಸೌಹಾರ್ದ-ಸಂಬಂಧಕ್ಕೆ ಧಕ್ಕೆತಂದುಕೊಂಡಿದ್ದು ಅರಿವಾಗುತ್ತದೆ.

ಇಂಥವರು ಕಾಲಕ್ರಮೇಣ ‘ಛೇ, ಎಷ್ಟು ಬಾಲಿಶವಾಗಿ ವರ್ತಿಸಿಬಿಟ್ಟೆ’ ಎಂದು ಆತ್ಮಾವಲೋಕನ ಮಾಡಿಕೊಂಡು ಪರಸ್ಪರ ಕೈಕುಲುಕಿ ಪ್ರಬುದ್ಧತೆ ಮೆರೆದ ನಿದರ್ಶನಗಳೂ ಸಾಕಷ್ಟಿರಬಹುದು. ಆದರೆ ಆ ನಡುವಿನ ಅವಧಿಯಲ್ಲಿ ಹರಿದಾಡುವ ಕಹಿ ಇದೆಯಲ್ಲಾ, ಅದು ದೇಹ-ಮನಸ್ಸುಗಳ ಆರೋಗ್ಯಕ್ಕೆ ಖಂಡಿತ ಮಾರಕ. ಆದ್ದರಿಂದ, ಯಾರ ಬಗೆಗಾದರೂ ಯಾವುದೋ ವಿಷಗಳಿಗೆ ಯಲ್ಲಿ ಅಥವಾ ಪರಿಸ್ಥಿತಿಯ ಒತ್ತಡದಲ್ಲಿ ಅಥವಾ ನಮ್ಮದಲ್ಲದ ಕಾರಣಕ್ಕೆ ಹೀಗೆ ತಪ್ಪುಗ್ರಹಿಕೆಗೆ ಒಳಗಾಗಿ ಪರಸ್ಪರ
ಕತ್ತಿಮಸೆಯುವಂಥ ಚಿತ್ತಸ್ಥಿತಿ ರೂಪುಗೊಂಡಲ್ಲಿ ಅದನ್ನು ದೀರ್ಘಕಾಲದವರೆಗೆ ಬೆಳೆಸದೆ ಆ ಕ್ಷಣಕ್ಕೇ ಝಾಡಿಸಿ ಬಿಡೋಣ.

‘”Where is the time to HATE, when there is a little time to LOVE’ ಎನ್ನುತ್ತದೆ ಒಂದು ಜಾಣನುಡಿ. ಇದನ್ನು ಅರಗಿಸಿಕೊಂಡು ಜಾಣರಾಗೋಣ, ಸಂಬಂಧದಲ್ಲಿನ ಕಹಿ ಕಿತ್ತೊಗೆದು ಮಧುರಬಾಂಧವ್ಯಕ್ಕೆ ಮುನ್ನುಡಿ ಬರೆಯೋಣ.